Saturday, 14th December 2024

ಜಾತಿಗಣತೆಯೆಂಬ ಎರಡು ಅಲಗಿನ ಕತ್ತಿ

ಅಶ್ವತ್ಥಕಟ್ಟೆ

ranjith.hoskere@gmail.com

ಈಗಷ್ಟೇ ಬಿಜೆಪಿಯಿಂದ ಕೊಂಚ ಪ್ರಮಾಣದ ಲಿಂಗಾಯತರು ಕಾಂಗ್ರೆಸಿನತ್ತ ವಾಲುತ್ತಿದ್ದಾರೆ. ಈ ಹಂತದಲ್ಲಿ ಜಾತಿಗಣತಿಯ ವಿವಾದ ಮತ್ತೆ ಈ ಸಮುದಾಯ ವನ್ನು ಬಿಜೆಪಿಯತ್ತ ವಾಲುವಂತೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ.

ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಮಾದರಿಯಲ್ಲಿ ಸರಕಾರ ಸ್ಥಾಪನೆ ಗೊಳ್ಳುತ್ತದೆ. ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರಜೆಗಳಿಂದಲೇ ಪ್ರಜಾಪಾಲಕರ ನೇಮಕ ವಾದರೂ, ಒಂದೊಂದು ದೇಶದಲ್ಲಿ ಒಂದೊಂದು ವಿಷಯದ ಆಧಾರ ದಲ್ಲಿ ಆ ನೇಮಕವಾಗುತ್ತದೆ. ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಯ ಮತದಾನದ ಸಮಯದಲ್ಲಿ ನೂರಾರು ವಿಷಯಗಳು ‘ಪರಿಣಾಮ’ ಬೀರಿದರೂ, ಈ ಎಲ್ಲವನ್ನೂ ಮೀರಿ ಜಾತಿ ಲೆಕ್ಕಾಚಾರ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಗ್ರಾಮ ಪಂಚಾಯಿತಿಯಿಂದ ಮೊದಲ್ಗೊಂಡು ಲೋಕಸಭಾ ಚುನಾವಣೆ ತನಕ ಜಾತಿ ಲೆಕ್ಕಾಚಾರದಲ್ಲಿಯೇ ನಮ್ಮಲ್ಲಿ ಚುನಾವಣೆ ನಡೆಯುವುದು. ಉತ್ತರ ಭಾರತದ ಕೆಲ ರಾಜ್ಯ ಗಳಲ್ಲಿ ಧರ್ಮದ ಆಧಾರದಲ್ಲಿ ಚುನಾವಣೆ ನಡೆದಿರುವ ಉದಾಹರಣೆಗಳಿವೆ. ಆದರೆ ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಜಾತಿ, ಉಪಜಾತಿಯ ಲೆಕ್ಕಾಚಾರಗಳೇ ಚುನಾವಣೆಯ ಸೋಲು-ಗೆಲುವಿನ ಚಿತ್ರಣವನ್ನು ಬರೆಯುತ್ತವೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಅದರಲ್ಲಿಯೂ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಬಹುಪಾಲು ಕ್ಷೇತ್ರಗಳಲ್ಲಿ ‘ನಿರ್ಣಾಯಕ’ ಪಾತ್ರ ವಹಿಸುತ್ತವೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ನಿರ್ಣಾಯಕ ಎನಿಸಿದರೆ, ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಲಿಂಗಾಯತರು ಪ್ರಾಬಲ್ಯ ಮೆರೆಯುತ್ತಾರೆ. ಈ ಎರಡರೊಂದಿಗೆ ಮುಸ್ಲಿಂ, ದಲಿತ, ಕುರುಬ ಸಮುದಾಯಗಳು ಕೆಲ ಕ್ಷೇತ್ರಗಳಲ್ಲಿ ಪ್ರಮುಖ ಎನಿಸಿವೆ. ಈ ಕಾರಣಕ್ಕಾಗಿಯೇ ಯಾವುದೇ ಸರಕಾರಗಳಿರಲಿ ಜಾತಿ,
ಧರ್ಮದ ವಿಷಯದಲ್ಲಿ ಸಣ್ಣ ತೀರ್ಮಾನ ಕೈಗೊಳ್ಳುವ ಮೊದಲು ಹತ್ತು ಹಲವು ಬಾರಿ ಯೋಚಿಸುತ್ತವೆ. ಜಾತಿ ಲೆಕ್ಕ ತಪ್ಪಿ ಯಾವುದೇ ತೀರ್ಮಾನ ಕೈಗೊಂಡರೂ, ಮುಂದಿನ ಚುನಾವಣೆಯಲ್ಲಿಯೇ ಹೊಡೆತ ತಿಂದಿರುವ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ವೀರೇಂದ್ರ ಪಾಟೀಲ್ ಅವರನ್ನು ಸರಿಯಾಗಿ ನಡೆಸಿಕೊಳ್ಳ ಲಿಲ್ಲವೆಂದು ಕಾಂಗ್ರೆಸ್‌ನಿಂದ ಲಿಂಗಾಯತರು ದೂರವಾದದ್ದಿರಬಹುದು, ಜಾತ್ಯತೀತವೆಂದರೂ ಮುಸ್ಲಿಮರಿಗೆ ಬಲ ಕೊಡದ ಕಾರಣಕ್ಕೆ ಜೆಡಿಎಸ್ ನಿಂದ ಮುಸ್ಲಿಮರು ದೂರವಾದದ್ದಿರಬಹುದು ಅಥವಾ ೨೦೧೮ರ ಚುನಾವಣೆ ಸಮೀಪವಿರುವಾಗ ಪ್ರತ್ಯೇಕ ಧರ್ಮ, ಪರಿಶಿಷ್ಟ ಪಂಗಡದಲ್ಲಿ ಒಳಮೀಸಲು ನೀಡಲು ಮುಂದಾದ ಕಾಂಗ್ರೆಸ್ ಅನ್ನು ಮತದಾರರು ತಿರಸ್ಕರಿಸಿದ್ದಿರಬಹುದು ಇವೆಲ್ಲ ಇದಕ್ಕೆ ನಿದರ್ಶನಗಳಾಗುತ್ತವೆ.

ತೀರಾ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಒಳಮೀಸಲು ನೀಡಲು ಒಪ್ಪಿಗೆ ನೀಡಿದ್ದಕ್ಕೆ ಹಾಗೂ ತಮ್ಮ ಜಾತಿಯವರಿಗೆ ಟಿಕೆಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ೪೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತ ಬಿದ್ದಿದ್ದನ್ನು ನಾಯಕರು ಮರೆತಿಲ್ಲ. ಹೀಗೆ ಜಾತಿ ವಿಷಯದಲ್ಲಿನ ಸಣ್ಣಸಣ್ಣ ತೀರ್ಮಾನಗಳು ಸಮುದಾಯಗಳ ಮೇಲೆ ಗಾಢ ಪರಿಣಾಮ ಬೀರಿರುವ ಹತ್ತಾರು ಉದಾಹರಣೆಗಳಿವೆ. ಇಂಥ ಸಮಯದಲ್ಲಿಯೇ ಕರ್ನಾಟಕದಲ್ಲಿ ಮತ್ತೆ ಜಾತಿ ಗಣತಿಯ ವಿಷಯದಲ್ಲಿ ಗೊಂದಲಗಳು ಮುನ್ನೆಲೆಗೆ ಬಂದಿವೆ. ಈ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಿದ್ದಾಗ ಸಿದ್ದರಾಮಯ್ಯ ಅವರು, ಕಾಂತಾರಾಜು ನೇತೃತ್ವದಲ್ಲಿ ನಡೆಸಿದ್ದ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಗಣತಿ (ಜಾತಿಗಣತಿ) ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಳುವಾಗಿದ್ದು ಖಚಿತ ವಾದ ಬಳಿಕ ಕಳೆದ ೫ ವರ್ಷದ ಅವಽಯಲ್ಲಿ ಬದಲಾದ ಮೂವರು ಮುಖ್ಯಮಂತ್ರಿಗಳು ಈ ವರದಿಯನ್ನು ಸ್ವೀಕರಿ ಸುವ ಕೆಲಸ ಮಾಡಲಿಲ್ಲ. ಆದರೀಗ ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರ ಜಾತಿಗಣತಿಯನ್ನು ಒಪ್ಪಿಕೊಂಡು ಬಹಿರಂಗ ಗೊಳಿಸು ತ್ತಿದ್ದಂತೆ ಕಾಂಗ್ರೆಸ್‌ನ ದೆಹಲಿ ನಾಯಕರೂ ‘ನಮ್ಮ ಸರಕಾರವಿರುವ ರಾಜ್ಯಗಳಲ್ಲಿ ಜಾತಿಗಣತಿ ನಡೆಸಿ ಬಹಿರಂಗಗೊಳಿಸುತ್ತೇವೆ’ ಎನ್ನುವ ಘೋಷಣೆಯನ್ನು ಮಾಡಿದರು.

ಇದರ ಬೆನ್ನಲ್ಲೇ, ಕರ್ನಾಟಕದಲ್ಲಿ ಈಗಾಗಲೇ ಸಜ್ಜಾಗಿರುವ ಜಾತಿಗಣತಿ ವರದಿಯನ್ನು ಸ್ವೀಕರಿಸಬೇಕು ಎನ್ನುವ ಒತ್ತಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
ಹೆಗಲೇರಿದ್ದು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಬೆಂಬಲವೂ ಇದಕ್ಕೆ ಇರುವುದರಿಂದ ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ. ಇಲ್ಲಿಯವರೆಗೆ, ಕಾಂತರಾಜು ಅವರು ಸಿದ್ಧಪಡಿಸಿರುವ ವರದಿಯಲ್ಲಿ ಏನಿದೆ ಎನ್ನುವ ಸ್ಪಷ್ಟತೆಯಿಲ್ಲದಿದ್ದರೂ, ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗರಿಗಿಂತ ಅಹಿಂದ ಜನಸಂಖ್ಯೆ ಹೆಚ್ಚಿದೆ ಎನ್ನುವ ಅಂಕಿ-ಅಂಶವು ವರದಿಯಲ್ಲಿದೆ ಎನ್ನುವ ಮಾಹಿತಿ ಸೋರಿಕೆಯಾಗಿದೆ. ೨೦೧೮ರ ಚುನಾವಣೆ ವೇಳೆಯೇ
ಈ ಮಾಹಿತಿ ಸೋರಿಕೆಯಾಗಿದ್ದರಿಂದ, ರಾಜಕೀಯ ಅಸ್ತಿತ್ವ ಕ್ಕಾಗಿ ಈ ವರದಿಯನ್ನು ಜಾರಿಗೊಳಿಸಬಾರದು ಎಂಬ ಆಗ್ರಹ ವನ್ನು ಗಟ್ಟಿ ಧ್ವನಿಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರು ಸರಕಾರದ ಮೇಲೆ ಹೇರಿದ್ದರು. ಈಗಲೂ ಈ ವರದಿ ಜಾರಿಯಿಂದ ಈ ಎರಡು ಸಮುದಾಯಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಬಹುಪಾಲು ಶಾಸಕರು, ಸಚಿವರು ಈ ವರದಿ ಬಿಡುಗಡೆಯಾಗಬಾರದು
ಎನ್ನುವ ಆಗ್ರಹವನ್ನು ಪಕ್ಷಾತೀತವಾಗಿ ಸರಕಾರದ ಮೇಲೆ ಹಾಕುತ್ತಿದ್ದಾರೆ.

ಜಾತಿಗಣತಿ ಮಾಡಿರುವುದೇ ಅವೈಜ್ಞಾನಿಕ ರೀತಿಯಲ್ಲಿ. ಆದ್ದರಿಂದ ಈ ವರದಿಯನ್ನು ಸರಕಾರ ಸ್ವೀಕರಿಸ ಬಾರದು ಎನ್ನುವ ಆಗ್ರಹವನ್ನು ಒಕ್ಕಲಿಗರ ಸಂಘದವರು ಹೇರಿದ್ದು, ಇದಕ್ಕಾಗಿ ಸಹಿ ಸಂಗ್ರಹವನ್ನು ಆರಂಭಿಸಿದ್ದಾರೆ. ಈ ಸಹಿ ಸಂಗ್ರಹದಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವರು ಸಹಿಹಾಕಿದ್ದಾರೆ. ಸಚಿವರು ಮಾತ್ರವಲ್ಲದೇ, ಸಂಪುಟ ದಲ್ಲಿ ‘ಪವರ್ ಫುಲ್’ ಆಗಿರುವ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೂ ಈ ಅಭಿಯಾನ
ದಲ್ಲಿ ಸಹಿ ಹಾಕಿದ್ದಾರೆ. ಇವರೊಂದಿಗೆ ಸಚಿವರಾದ ಚಲುವರಾಯಸ್ವಾಮಿ, ಎಂ.ಸಿ. ಸುಧಾಕರ್ ಸೇರಿದಂತೆ ಒಕ್ಕಲಿಗರ ಶಾಸಕರು, ಸಚಿವರೂ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ‘ಕಾಂಗ್ರೆಸ್ ಹೈಕಮಾಂಡ್’ ರಾಹುಲ್ ಗಾಂಧಿ ಅವರು ಯಾವುದನ್ನು ಜಾರಿಗೊಳಿಸುತ್ತೇವೆ ಎನ್ನುವ ಮಾತನ್ನು ಆಡಿದ್ದರೋ ಅದಕ್ಕೆ ವಿರುದ್ಧವಾಗಿ ಸ್ವಪಕ್ಷೀಯ ಸಚಿವರೇ ನಡೆದುಕೊಳ್ಳುತ್ತಿದ್ದಾರೆ. ಕೇವಲ ಒಕ್ಕಲಿಗರು ಮಾತ್ರ ವಲ್ಲದೇ, ಲಿಂಗಾಯತ ನಾಯಕರೂ ಜಾತಿಗಣತಿಯನ್ನು
ವಿರೋಧಿಸಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ಶಾಸಕ ರಾಗಿರುವ ಶಾಮನೂರು ಶಿವಶಂಕರಪ್ಪ ಅವರೂ ‘ಜಾತಿಗಣತಿ ಜಾರಿಯಾದರೆ ಸರಿಯಿರುವುದಿಲ್ಲ’ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಇನ್ನು ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ ಈ ವಿಷಯವಾಗಿ ನೇರವಾಗಿ ವಿರೋಧಿಸದಿದ್ದರೂ, ಪರೋಕ್ಷ
ವಾಗಿಯಾದರೂ ಜಾತಿಗಣತಿ ವಿರುದ್ಧ ನಿಲ್ಲುವುದು ನಿಶ್ಚಿತ. ಸಾಮಾನ್ಯವಾಗಿ ಪಕ್ಷದ ಹೈಕಮಾಂಡ್ ಹೇಳಿದ ಮಾತನ್ನು ಡಿ.ಕೆ.ಶಿವಕುಮಾರ್ ಅವರಾಗಲೀ, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ ಅವರಾಗಲೀ ಮೀರುವುದಿಲ್ಲ. ಆದರೆ ಈ ವಿಷಯದಲ್ಲಿ ಮಾತ್ರ ಈ ರೀತಿ ಬಹಿರಂಗವಾಗಿಯೇ ವಿರೋಧಿಸುವುದಕ್ಕೆ ಕಾರಣವೇನು ಎನ್ನುವುದನ್ನು ಸೂಕ್ಷ್ಮ ವಾಗಿ ಗಮನಿಸಿದಾಗ, ಮತ್ತೆ ಮುನ್ನಲೆಗೆ ಬರುವುದು ಜಾತಿ ರಾಜಕೀಯ. ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ಅವರೆಲ್ಲರೂ ತಮ್ಮ ತಮ್ಮ ‘ಸಮುದಾಯದ ನಾಯಕ’ರಾಗಬೇಕು ಎನ್ನುವ ನಿಟ್ಟಿನಲ್ಲಿ ಹೋರಾಡುತ್ತಿದ್ದಾರೆ.

ಯಡಿಯೂರಪ್ಪ ಅವರ ಬಳಿಕ ಲಿಂಗಾಯತ ನಾಯಕನಾಗಲು ‘ಎಂಬಿಪಿ’ ಪ್ರಯತ್ನಿಸುತ್ತಿರುವುದು ಸ್ಪಷ್ಟ. ಇದೇ ರೀತಿ ಮಾಜಿ ಪ್ರಧಾನಿ ದೇವೇಗೌಡರ ಬಳಿಕ ಒಕ್ಕಲಿಗರ ನಾಯಕನಾಗಬೇಕು ಎನ್ನುವ ಉತ್ಸಾಹದಲ್ಲಿ ಡಿ.ಕೆ.ಶಿವಕುಮಾರ್ ಅವರಿದ್ದಾರೆ. ಆದ್ದರಿಂದ ಜಾತಿಗಣತಿಯ ವಿಷಯ ದಲ್ಲಿ ಈ ಎಲ್ಲ ನಾಯಕರು ಪಕ್ಷ ಮೀರಿ ಯೋಚಿಸುತ್ತಿದ್ದಾರೆ. ಒಂದೊಮ್ಮೆ ತಾವು ಸಚಿವರಾಗಿದ್ದ ವೇಳೆ ತಮ್ಮ ಸಂಪುಟದಿಂದಲೇ ತಮ್ಮ ಸಮುದಾಯದ ವಿರುದ್ಧದ ವರದಿಯು ಅನುಷ್ಠಾನಗೊಂಡರೆ ಸಮುದಾಯದಿಂದ ನಿರೀಕ್ಷಿತ ‘ಬೆಂಬಲ’ ಸಿಗುವುದಿಲ್ಲ ಎನ್ನುವುದು ಈ ಎಲ್ಲ ನಾಯಕರಿಗೂ ತಿಳಿದಿದೆ. ಈ ಕಾರಣಕ್ಕಾಗಿಯೇ ಪಕ್ಷದ
ವರಿಷ್ಠರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಅನುಷ್ಠಾನಗೊಳಿಸಿಯೇ ಸಿದ್ಧ ಎನ್ನುವ ಸ್ಪಷ್ಟ ಮಾತುಗಳನ್ನು ಹೇಳುತ್ತಿದ್ದರೂ, ಅದಕ್ಕೆ ಒಪ್ಪಿಗೆ ನೀಡುತ್ತಿಲ್ಲ.

ಜಾತಿಗಣತಿಯ ವಿಷಯದಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ, ಬಿಜೆಪಿ-ಜೆಡಿಎಸ್‌ನಲ್ಲಿಯೂ ಇದೇ ಪರಿಸ್ಥಿತಿಯಿದೆ. ಏಕೆಂದರೆ ರಾಜ್ಯದಲ್ಲಿರುವ ೨೨೪ ಶಾಸಕರ ಪೈಕಿ ೬೦ಕ್ಕೂ ಹೆಚ್ಚು ಲಿಂಗಾಯತ ಹಾಗೂ ೪೦ಕ್ಕೂ ಹೆಚ್ಚು ಒಕ್ಕಲಿಗ ಶಾಸಕರಿದ್ದಾರೆ. ಒಂದು ವೇಳೆ ಜಾತಿಗಣತಿ ವರದಿಯಲ್ಲಿ ಈಗಿರುವ ಮಾಹಿತಿಯಂತೆ ಒಕ್ಕಲಿಗ-ಲಿಂಗಾಯತ ಸಮುದಾಯಕ್ಕಿಂತ ಇತರೆ ಸಮುದಾಯದ ಸಂಖ್ಯೆ ಹೆಚ್ಚಿದೆ ಎನ್ನುವ ಅಂಶ ಹೊರಬಿದ್ದರೆ, ಈ ಎಲ್ಲರಿಗೂ ರಾಜಕೀಯವಾಗಿ ಬಹುದೊಡ್ಡ
ಹಿನ್ನಡೆಯಾಗುವುದು ನಿಶ್ಚಿತ. ಆ ಕಾರಣಕ್ಕಾಗಿಯೇ, ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ನಲ್ಲಿರುವ ನಾಯಕಗಣವು ಜಾತಿಗಣತಿ ವರದಿ ಮಂಡನೆಯಾದರೆ, ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧದ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು ಎನ್ನುವ ಲೆಕ್ಕಾಚಾರದಲ್ಲಿದೆ.

ಈಗಷ್ಟೇ ಬಿಜೆಪಿಯಿಂದ ಕೊಂಚ ಪ್ರಮಾಣದ ಲಿಂಗಾಯತರು ಕಾಂಗ್ರೆಸಿನತ್ತ ವಾಲುತ್ತಿದ್ದಾರೆ. ಈ ಹಂತದಲ್ಲಿ ಜಾತಿಗಣತಿಯ ವಿವಾದ ಮತ್ತೆ ಈ ಸಮುದಾಯ ವನ್ನು ಬಿಜೆಪಿಯತ್ತ ವಾಲುವಂತೆ ಮಾಡಿದರೆ ಮುಂದಿನ ಚುನಾವಣೆ ಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಈ ಕಾರಣಕ್ಕಾಗಿಯೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ಜಾತಿಗಣತಿ ಎನ್ನುವುದು ಬಿಸಿತುಪ್ಪವಾಗಿ ಪರಿಣಮಿಸಿದೆ. ಒಂದು ವೇಳೆ ಒಪ್ಪಿಕೊಂಡರೆ ಲಿಂಗಾಯತ-ಒಕ್ಕಲಿಗರು ದೂರಾಗುತ್ತಾರೆ. ಒಪ್ಪಿಕೊಳ್ಳದೇ ಮುಂದೂಡಿದರೆ, ಕಾಂಗ್ರೆಸ್‌ನ ಮತಬ್ಯಾಂಕ್ ಆಗಿರುವ ‘ಅಹಿಂದ’ ಡೈಲ್ಯೂಟ್ ಆಗುವ ಸಾಧ್ಯತೆಯೇ ಹೆಚ್ಚಿದೆ.

ಇನ್ನು ಆರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಎದ್ದಿರುವ ಈ ಜಾತಿಕಿಡಿಯನ್ನು ಆರಿಸುವುದು ಹೇಗೆ ಎನ್ನುವ ಗೊಂದಲದಲ್ಲಿ ರಾಜ್ಯ ನಾಯಕರಿರುವುದು ಸ್ಪಷ್ಟ. ಏಕೆಂದರೆ, ೨೦೧೩ರಿಂದ ೧೮ರ ವರೆಗೆ ಉತ್ತಮ ಆಡಳಿತ ನೀಡಿದ್ದರೂ, ಪ್ರತ್ಯೇಕ ಲಿಂಗಾಯತ ಧರ್ಮ, ಜಾತಿಗಣತಿ, ಒಳಮೀಸಲಿನ ಹೊಡೆತ ದಿಂದ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಈಗ ಎದ್ದಿರುವ ಜಾತಿಗಣತಿಯ ಬಿಸಿಯ ಸ್ಪಷ್ಟ ಚಿತ್ರಣವಿದೆ.
ಲೋಕಸಭಾ ಚುನಾವಣೆಗೆ ಮೊದಲು, ಜಾತಿಗಣತಿಯ ಅಸ್ತ್ರವನ್ನು ಪ್ರಯೋಗಿಸುವ ಮೂಲಕ ಮತ್ತೊಮ್ಮೆ ಅಂಥ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳಲು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೂ ಇಷ್ಟವಿಲ್ಲ. ಆ ಕಾರಣ ಕ್ಕಾಗಿಯೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಮಯವನ್ನು ಜ.೩೧ರವರೆಗೆ ವಿಸ್ತರಣೆ ಮಾಡುವ ಮೂಲಕ ಎರಡು ತಿಂಗಳು ‘ಸಮಯ’ ತೆಗೆದು ಕೊಂಡಿದ್ದಾರೆ. ಜನವರಿ ವೇಳೆಗೆ ವರದಿ ಸಿದ್ಧಪಡಿಸಿ, ಸರಕಾರದ ಮುಂದೆ ಮಂಡಿಸಿ
ದರೂ, ಲೋಕಸಭಾ ಚುನಾ ವಣೆಯ ನೆಪದಲ್ಲಿ ಈ ವರದಿ ಯನ್ನು ಸುಪ್ತಾವಸ್ತೆಯಲ್ಲಿ ಇಡುವುದು ಬಹುತೇಕ ನಿಶ್ಚಿತ. ಲೋಕಸಭಾ ಚುನಾವಣೆಯಲ್ಲಿನ ಫಲಿತಾಂಶದ ಆಧಾರದ ಮೇಲೆ ಜಾತಿಗಣತಿ ವಿಷಯದಲ್ಲಿ ಯಾವ ನಡೆ ಅನುಸರಿಸಬೇ  ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಬರಲಿದೆ ಎನ್ನುವುದುಸ್ಪಷ್ಟ. ಜಾತಿ ಗಣತಿ ಎನ್ನುವುದೇ ಸೆರಗಿನಲ್ಲಿರುವ ಕೆಂಡ ಎನ್ನುವ ಸ್ಪಷ್ಟತೆ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದಿರುವುದರಿಂದ ಈ ವಿಷಯದಲ್ಲಿ ಇನ್ನಷ್ಟು ಎಚ್ಚರಿಕೆಯ
ಹೆಜ್ಜೆಯಿಡುವುದಂತೂ ಖಚಿತ.