ಅಶ್ವತ್ಥಕಟ್ಟೆ
ranjith.hoskere@gmail.com
ಜಾತ್ಯತೀತ ರಾಷ್ಟ್ರದಲ್ಲಿದ್ದರೂ, ಇಡೀ ವ್ಯವಸ್ಥೆಯನ್ನು ಭಾರತದಲ್ಲಿ ರಾಜಕೀಯ ಪಕ್ಷಗಳು ಆಳುವುದು ಅದೇ ಜಾತಿಯ ಆಧಾರದಲ್ಲಿ! ಅದರಲ್ಲಿಯೂ ಕರ್ನಾಟಕ ದಾದ್ಯಂತ ಧರ್ಮಕ್ಕಿಂತ ಹೆಚ್ಚಾಗಿ ಜಾತಿ ಆಧಾರದಲ್ಲಿಯೇ ಬಹುತೇಕ ರಾಜಕೀಯ ಲೆಕ್ಕಾಚಾರಗಳು ನಡೆಯುವುದರಿಂದ, ಜಾತಿಯ ವಿಷಯದಲ್ಲಿ ಒಂದೊಂದು ಹೆಜ್ಜೆಯೂ ಅಳೆದು ತೂಗಿ ಇಡಬೇಕಾಗುತ್ತದೆ ಎನ್ನುವುದು ಸ್ಪಷ್ಟ. ಇಂತಹ ಸೂಕ್ಷ್ಮ ವಿಷಯಗಳಲ್ಲಿನ ಒಂದೊಂದು ಸಣ್ಣ ನಿರ್ಧಾರವೂ ಪಕ್ಷಗಳ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಅಥವಾ ಒಮದಿಡೀ ತಲೆಮಾರಿನ ನಿರ್ಧಾರವನ್ನೇ ‘ಡ್ಯಾಮೇಜ್’ ಮಾಡುವಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.
ಇದೀಗ ಕರ್ನಾಟಕದಲ್ಲಿ ಇದೇ ರೀತಿಯ ಎಡವಟ್ಟನ್ನು ಮಾಡಿಕೊಳ್ಳಲು ಕಾಂಗ್ರೆಸ್‌ನ ಎರಡನೇ ಹಂತದ ನಾಯಕರು ಮುಂದಾಗಿದ್ದಾರೆಯೇ ಎನ್ನುವ ಅನುಮಾನಗಳು ಶುರುವಾಗಿವೆ. ಗ್ಯಾರಂಟಿಗಳಿಂದಲೇ ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಸರಕಾರ, ಗ್ಯಾರಂಟಿಗಳ ಅನುಷ್ಠಾನಕ್ಕೆ ಆದ್ಯತೆ ನೀಡುವ ಮೂಲಕ ‘ನುಡಿದಂತೆ ನಡೆವ’ ಪಾಸಿಟಿವ್ ಕಾಮೆಂಟ್ ಗಳನ್ನು ಪಡೆಯುತ್ತಿದೆ. ರಾಜ್ಯದ ಶೇ.೯೦ಕ್ಕೂ ಹೆಚ್ಚು ಜನರನ್ನು ಒಂದಿಲ್ಲೊಂದು ಗ್ಯಾರಂಟಿ ಯೋಜನೆ ತಲುಪುವ ಮೂಲಕ ಕಾಂಗ್ರೆಸ್ ಪರವಾಗಿ ಗ್ರಾಮೀಣ ಭಾಗ ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ‘ವೇವ್’ ಸೃಷ್ಟಿಯಾಗುತ್ತಿತ್ತು.
ಇದೇ ಹವಾವನ್ನು ಮುಂದುವರಿಸಿಕೊಂಡು ಹೋದರೆ, ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೂರಕ್ಕೆ ನೂರರಷ್ಟು ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್ ಹಾಗೂ ಮೊದಲ ಹಂತದ ನಾಯಕರಿದ್ದರು. ಆದರೆ, ಪಕ್ಷದ ಕೆಲ ನಾಯಕರು ಹರಿಬಿಟ್ಟಿರುವ ‘ಹೇಳಿಕೆ’ಗಳ ಸರಮಾಲೆ ಪಕ್ಷಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧ ಸೃಷ್ಟಿಸಿದ ವಿವಾದಗಳಿಗಿಂತ ಸ್ವಪಕ್ಷೀಯರು ಸೃಷ್ಟಿಸುತ್ತಿರುವ ವಿವಾದಗಳನ್ನು ಹ್ಯಾಂಡಲ್ ಮಾಡುವುದೇ ಕಾಂಗ್ರೆಸಿಗರಿಗೆ ಸವಾಲಾಗಿದೆ. ಇಂತಹ ವಿವಾದಗಳಿಗೆ ಮತ್ತೊಂದು ಸೇರ್ಪಡೆ ಕಾಂಗ್ರೆಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಾಡಿದ ‘ಲಿಂಗಾಯತ ಅಧಿಕಾರಿಗಳ ಮೂಲೆಗುಂಪು’ ಹೇಳಿಕೆ.
ಅದು ಅಷ್ಟಕ್ಕೆ ನಿಲ್ಲದೇ, ಅವರ ಹೇಳಿಕೆಯನ್ನು ವಿರೋಧಿಸುವ ಕಾರಣಕ್ಕಾಗಿ ಇತರ ಕಾಂಗ್ರೆಸ್ ನಾಯಕರು ಸೃಷ್ಟಿಸುತ್ತಿರುವ ಮರು ಹೇಳಿಕೆಗಳ ವಿವಾದ, ಇದೀಗ ಕಾಂಗ್ರೆಸ್‌ನೊಂದಿಗೆ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿದ್ದ ಲಿಂಗಾಯತ ಸಮುದಾಯ ಮತ್ತೆ ಮುಖ ತಿರುಗಿಸುವ ಆತಂಕಕ್ಕೆ ಕಾರಣವಾಗಿದೆ. ಶಾಮನೂರು ಹೇಳಿಕೆ ಸಹಜವಾಗಿಯೇ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಯಿತು. ಈ ವಿವಾದ ದೊಡ್ಡದಾಡುವ ಲಕ್ಷಣ ಕಾಣುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾ ಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ‘ಡ್ಯಾಮೇಜ್ ಕಂಟ್ರೋಲ್’ ಮಾಡಿ, ಶಾಮನೂರು ಅಸಮಾಧಾನ ತಣಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ಹಂತದಲ್ಲಿ ಕೆಲ ಮುಖಂಡರು ಆಡಿದ ಮಾತುಗಳು, ಡ್ಯಾಮೇಜ್ ಕಂಟ್ರೋಲ್ ಆಗುವುದಕ್ಕಿಂತ ಇನ್ನಷ್ಟು ದೊಡ್ಡದಾಗಿ ಮಾಡಿವೆ ಎನ್ನುವುದು ಸ್ಪಷ್ಟ.
ಇನ್ನಾರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆ, ಡಿಸೆಂಬರ್ ವೇಳೆಗೆ ಎದುರಾಗುವ ಸಾಧ್ಯತೆಯಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ
ಹೊಸ್ತಿಲಿನಲ್ಲಿ ‘ಲಿಂಗಾಯತ ವಿರೋಽ ’ ಸಂದೇಶ ರವಾನೆ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾದಾಗಿ ನಿಂದಲೂ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಿಕೊಂಡರು. ಇದು ಸಹ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಐತಿಹಾಸಿಕ ಗೆಲುವಿಗೆ ನಾಂದಿ ಹಾಡಿತ್ತು. ಇದಕ್ಕೆ ಪೂರಕವಾಗಿ ಪಕ್ಷ ನೀಡಿದ್ದ ಗ್ಯಾರಂಟಿ ಕಾರ್ಡ್‌ಗಳು ಬಹುದೊಡ್ಡ ಪ್ರಮಾಣದಲ್ಲಿ ವರ್ಕ್‌ಔಟ್ ಆಯಿತು ಎನ್ನುವುದು ಎರಡನೇ ವಿಷಯ.
ವಿಧಾನಸಭಾ ಚುನಾವಣೆಯಲ್ಲಿ ಮೂರೂವರೆ ದಶಕಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲು, ಕಾಂಗ್ರೆಸ್‌ನೊಂದಿಗೆ ಸಾಂಪ್ರದಾಯಿಕವಾಗಿರುವ ಅಹಿಂದ ಮತಗಳೊಂದಿಗೆ ಲಿಂಗಾಯತ ಸಮುದಾಯದ ಮತಗಳ ಕೊಡುಗೆಯೂ ಬಹುದೊಡ್ಡ ಪ್ರಮಾಣದಲ್ಲಿದೆ. ಲಿಂಗಾಯತ ಸಮುದಾಯದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುತ್ತಿದ್ದಂತೆ, ಬಿಜೆಪಿಯಿಂದ ಲಿಂಗಾಯತ ಮತಗಳು ವಿಮುಖವಾಗುತ್ತ ಸಾಗಿತ್ತು. ಆ ಮತದಾರರಿಗೆ ಪರ್ಯಾಯವಾಗಿ ಕಂಡಿದ್ದು ಕಾಂಗ್ರೆಸ್. ಆದ್ದರಿಂದ ಉತ್ತರ ಕರ್ನಾಟಕ, ಮಧ್ಯಕರ್ನಾಟಕದಲ್ಲಿ ಲಿಂಗಾಯತರು ಗಟ್ಟಿಯಾಗಿ ಕಾಂಗ್ರೆಸ್‌ನತ್ತ ವಾಲಿದ್ದರು.
ಈ ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ನಿಂದ ವಿಮುಖವಾಗಿದ್ದ ಲಿಂಗಾಯತ ಸಮುದಾಯವನ್ನು
ಪುನಃ ಕಾಂಗ್ರೆಸ್‌ನತ್ತ ತಿರುಗಿಸಿಕೊಳ್ಳುವುದಕ್ಕೆ ಸರಿಸುಮಾರು ೨೫ರಿಂದ ೩೦ ವರ್ಷ ಹಿಡಿದಿತ್ತು. ಈಗಲೂ ಪೂರ್ಣ ಪ್ರಮಾಣದಲ್ಲಿ ಲಿಂಗಾಯಿತರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳದಿದ್ದರೂ, ಹಂತ-ಹಂತವಾಗಿ ಪಕ್ಷದತ್ತ ಮುಖಮಾಡುತ್ತಿದ್ದಾರೆ ಎಂಬ ಸಂಗತಿ ಕಾಂಗ್ರೆಸ್ ರಾಜ್ಯ ನಾಯಕರು ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಇಂಥ ಸನ್ನಿವೇಶದಲ್ಲಿ ಶಾಮನೂರು ಹೇಳಿಕೆ ನಂತರದ ಪ್ರತಿ ಹೇಳಿಕೆಗಳು ಸಮುದಾಯದೊಳಗೆ ಮತ್ತೆ ಸಣ್ಣ ಪ್ರಮಾಣದ ಅಸಮಾಧಾನ ಸೃಷ್ಟಿಸಿರುವುದು ಸುಳ್ಳಲ್ಲ. ಇದಕ್ಕೆ ತುಪ್ಪ ಸುರಿಯುವ ರೀತಿಯಲ್ಲಿ ಹಲವು ನಾಯಕರು, ‘ಲಿಂಗಾಯತರೊಬ್ಬರೇ ನಮಗೆ ಮತ ನೀಡಿಲ್ಲ’ ಎನ್ನುವ ದಾಷ್ಟ್ಯದ ಮಾತುಗಳನ್ನು ಆಡಿದ್ದಾರೆ. ಅದರಲ್ಲಿಯೂ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್, ಶೇ.೮೮ರಷ್ಟು ಮತ ಕೊಟ್ಟಿರುವ ಮುಸ್ಲಿಮರಿಗೆ ಎರಡು ಸೀಟು, ಶೇ.೮೦ರಷ್ಟು ಮತ ನೀಡಿರುವ ಲಂಬಾಣಿಗಳಿಗೆ ಸಚಿವ ಸ್ಥಾನ ನೀಡದಿರುವಾಗ ಕೇವಲ ಶೇ.೨೨ರಷ್ಟು ಮತ ಕೊಟ್ಟಿರುವ ಲಿಂಗಾಯತರಿಗೆ ಏಳು ಸಚಿವ ಸ್ಥಾನ ಕೊಟ್ಟಿಲ್ಲವೇ? ಎನ್ನುವ
ಮಾತನ್ನು ಹೇಳಿದ್ದು, ವಿವಾದದ ಕಿಡಿ ಇನ್ನಷ್ಟು ಹೆಚ್ಚಲು ಪ್ರಮುಖ ಕಾರಣವಾಗಿದೆ ಎನ್ನುವುದು ಸ್ಪಷ್ಟ.
ಶಾಮನೂರು ಅವರನ್ನು ಪ್ರಶ್ನಿಸುವ ಉತ್ಸಾಹದಲ್ಲಿ ಕೆಲ ಕಾಂಗ್ರೆಸ್ ನಾಯಕರು, ಇಡೀ ಸಮುದಾಯವನ್ನೇ ಟೀಕಿಸುವ ಅಥವಾ ಪ್ರಶ್ನಿಸುವ ರೀತಿಯಲ್ಲಿ
ಮಾತನಾಡಿರುವುದು ಇದೀಗ ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ. ಅಽಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ‘ಜನಪರ ಸರಕಾರ’ ಎನ್ನುವ ಇಮೇಜ್ ಸೃಷ್ಟಿಸಿಕೊಂಡಿರುವ ಕಾಂಗ್ರೆಸಿಗೆ, ನಾಯಕರ ‘ಆಂತರಿಕ ಕಿತ್ತಾಟ’ ಇದೀಗ ಬಹುದೊಡ್ಡ ತಲೆನೋವಾಗಿದೆ. ಇದೇ ರೀತಿಯ ಸಂದೇಶ ಮುಂದುವರಿಯುತ್ತ ಸಾಗಿದರೆ, ಮುಂದಿನ ದಿನದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆದರೂ ಅಚ್ಚರಿಯಿಲ್ಲ.
ಇಡೀ ದೇಶದಲ್ಲಿ ಬಿಜೆಪಿ ಪ್ರಭಾವದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಂಬಿನೇಷನ್‌ನಲ್ಲಿ ಕರ್ನಾಟಕದಲ್ಲಿ ಸಡ್ಡು ಹೊಡೆಯುವ ಹಾಗೂ ಲೋಕಸಭಾ ಚುನಾವಣೆಯಲ್ಲಿ ೧೫ರಿಂದ ೧೭ ಸೀಟುಗಳನ್ನು ಪಡೆಯುವ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್ ಇದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಪ್ರಭಾವ ಬೀರುವ ಲಿಂಗಾಯತ ಮತಬ್ಯಾಂಕ್ ತಟಸ್ಥವಾಗಿ ನಿಂತರೆ ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆ.
ಈಗಾಗಲೇ ಒಕ್ಕಲಿಗ ಮತಗಳನ್ನು ಕಾಂಗ್ರೆಸ್‌ನಿಂದ ಒಡೆಯಬೇಕು ಎನ್ನುವ ಕಾರಣಕ್ಕೆ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
ಇದೀಗ ಲಿಂಗಾಯತರ ಬಗ್ಗೆಯೂ ಸಾಲು ಸಾಲು ಹೇಳಿಕೆಗಳನ್ನು ನೀಡುತ್ತಾ ಹೋದರೆ, ರಾಜ್ಯದ ಎರಡು ಪ್ರಬಲ ಸಮುದಾಯದ ಮತಗಳನ್ನು ಕಳೆದುಕೊಳ್ಳ ಬೇಕಾದ ಇಕ್ಕಟ್ಟಿಗೆ ಪಕ್ಷ ಸಿಲುಕಲಿದೆ. ಮತ್ತೊಂದು ಅಂಶವೆಂದರೆ, ಕಾಂಗ್ರೆಸ್‌ನೊಂದಿಗಿರುವ ಅಹಿಂದ ಮತಗಳು ಮೊದಲಿನಿಂದಲೂ ಇವೆ. ಆದರೆ ಹೆಚ್ಚುವರಿ ಮತಗಳಿಕೆಗೆ ಲಿಂಗಾಯತ ಸಮುದಾಯದಂತಹ ಪ್ರಬಲ ಸಮುದಾಯಗಳ ಮತಗಳನ್ನು ಬಿಜೆಪಿಯಿಂದ ಒಡೆದು ತರಬೇಕು. ಇದೀಗ ಈ ರೀತಿಯ ಹೇಳಿಕೆಗಳಿಂದ ಪಕ್ಷ ಇಕ್ಕಟ್ಟಿಗೆ ಸಿಲುಕುವುದು ಸ್ಪಷ್ಟ. ಇನ್ನು ಸೂಕ್ಷ್ಮ ಸಂಗತಿಯೆಂದರೆ ಪ್ರಕಾಶ್ ರಾಥೋಡ್ ಹೇಳಿದಂತೆ ಶೇ.೮೦ರಷ್ಟು ಲಂಬಾಣಿಗಳು ಕಾಂಗ್ರೆಸ್‌ನೊಂದಿಗೆ ಇದ್ದರೂ, ಸಚಿವ ಸ್ಥಾನ ಸಿಕ್ಕಿಲ್ಲ.
ಒಂದು ಬಿಜೆಪಿ ನಾಯಕರು ಈ ಸಮುದಾಯಗಳ ಮತಗಳನ್ನು ಸೆಳೆಯಲು ಈ ಹೇಳಿಕೆಯನ್ನೇ ಅಸ್ತ್ರವಾಗಿಟ್ಟುಕೊಂಡರೂ ಅಚ್ಚರಿಯಿಲ್ಲ. ಲಿಂಗಾಯತ ವಿವಾದದ ನಡುವೆ ಕಾಂಗ್ರೆಸ್‌ಗೆ ಕಾಡುತ್ತಿರುವ ಮತ್ತೊಂದು ಆತಂಕವೆಂದರೆ ‘ಜಾತಿ ಗಣತಿ’. ಬಿಹಾರ ಸರಕಾರ ಬಿಡುಗಡೆಗೊಳಿಸಿರುವ ಜಾತಿ ಗಣತಿಯನ್ನು ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ವಾಗತಿಸುವುದರಿಂದ ಇಡೀ ದೇಶಕ್ಕೆ ವಿಸ್ತರಿಸಬೇಕು ಎನ್ನುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಇದು ಪ್ರಾಯೋಗಿಕವಾಗಿ ಜಾರಿಗೊಳಿಸಲು ಮುಂದಾದರೆ, ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಬಹಿರಂಗಪಡಿಸಬೇಕಾದ ಅನಿವಾರ್ಯಕ್ಕೆ ಕರ್ನಾಟಕ ಸಿಲುಕಲಿದೆ. ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು, ಜಾತಿ ಗಣತಿಯನ್ನು ಬಹಿರಂಗಪಡಿಸಲು ಮುಂದಾದರೆ, ಪ್ರಬಲ ಸಮುದಾಯದ ನಾಯಕರೇ ಪಕ್ಷದ
ವಿರುದ್ಧ ತಿರುಗಿ ಬೀಳುವುದು ಖಚಿತ.
ಅಷ್ಟಕ್ಕೂ ಜಾತಿ ಗಣತಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ವಿರೋಽಸುತ್ತಿರುವುದು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ. ಕರ್ನಾಟಕದ ಈ ಎರಡು
ಸಮುದಾಯದಿಂದ ವಿರೋಧ ವ್ಯಕ್ತವಾಗಳು ಕಾರಣವಿದೆ. ಅದೇನೆಂದರೆ, ಅತಿಹೆಚ್ಚು ಮತದಾರರನ್ನು ಹೊಂದಿರುವ ಸಮುದಾಯಗಳೆಂದರೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ. ಈ ಎರಡು ಸಮುದಾಯಗಳು ರಾಜ್ಯ ನೂರಾರು ಕ್ಷೇತ್ರಗಳಲ್ಲಿ ಗೆಲುವಿನ ಫ್ಯಾಕ್ಟರ್‌ನಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತವೆ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಈಗಲೂ, ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ರಾಜಕೀಯ ನಾಯಕರಿಗೆ ವಿಶಿಷ್ಟ ಸ್ಥಾನ ಎಲ್ಲ ಪಕ್ಷದಲ್ಲಿಯೂ ಖಾಯಂ ಆಗಿದೆ. ಆದರೀಗ ಒಂದು ವೇಳೆ ಜಾತಿಗಣತಿ ಬಹಿರಂಗವಾದರೆ, ಈ ಎರಡು ಸಮುದಾಯದ ಜನಸಂಖ್ಯೆ ನಾಲ್ಕು ಹಾಗೂ ಐದನೇ ಸ್ಥಾನ ಕುಸಿಯುವ ಸಾಧ್ಯತೆಯಿದೆ. ಬದಲಿಗೆ ದಲಿತರು, ಮುಸ್ಲಿಮರು ಅತಿಹೆಚ್ಚು ಮತದಾರರನ್ನು ಹೊಂದಿರುವ ಸಮುದಾಯ ಗಳಾಗಲಿವೆ.
ಇದರಿಂದ ಸಂಪೂರ್ಣ ರಾಜಕೀಯ ಚಿತ್ರಣವೇ ಬದಲಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ, ಈ ವರದಿ ಬಹಿರಂಗಬಾರದು ಎನ್ನುವುದು ಪ್ರಬಲ ಸಮು
ದಾಯಗಳ ಮುಖಂಡರ ಆಗ್ರಹವಾಗಿದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ವಿವಾದಕ್ಕೆ ಕೈಹಾಕಿ, ಅದನ್ನು ಅರಗಿಸಿಕೊಳ್ಳುವಷ್ಟು ಸಮಯ ಕಾಂಗ್ರೆಸ್ ಬಳಿಯಿಲ್ಲ ಎನ್ನುವುದು ಬಹುತೇಕ ಅಭಿಪ್ರಾಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ‘ಸ್ಟ್ರಾಟಜಿ’ ಮೂಲಕ ಐತಿಹಾಸಿಕ ಗೆಲುವು ಕಂಡಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೋಡಿ ಜಾತಿ ಲೆಕ್ಕಾಚಾರದ ಈ ಚಕ್ರವ್ಯೂಹವನ್ನು ಯಾವ ರೀತಿ ಯಲ್ಲಿ ಬೇಧಿಸಲಿದ್ದಾರೆ ಎನ್ನುವುದೇ ಈಗಿರುವ ಕುತೂಹಲ.