Wednesday, 11th December 2024

ಚುನಾವಣೆ: ಜಾತಿಗಳ ಮೇಲಾಟದಲ್ಲಿ ಪ್ರಜಾಪ್ರಭುತ್ವದ ಹಬ್ಬ !

ಬುಲೆಟ್ ಪ್ರೂಫ್

ವಿನಯ್ ಖಾನ್

vnaykhan078@gmail.com

ವರ್ಣ ವ್ಯವಸ್ಥೆಯಲ್ಲಿ ಆಯಾ ಕೆಲಸಗಳಿಗೆ ಒಂದೊಂದು ಸಮುದಾಯ ಸೀಮಿತವಾಗಿದ್ದರೂ, ಎಷ್ಟೋ ಸಲ ಒಂದು ವರ್ಣದಲ್ಲಿ ಹುಟ್ಟಿದ್ದವರು, ಬೇರೆ ವರ್ಣದ ಕೆಲಸಗಳನ್ನು ಮಾಡುತ್ತಿದ್ದರು. ಶೂದ್ರರಲ್ಲಿ ಹುಟ್ಟಿದ್ದ ವಾಲ್ಮೀಕಿ ರಾಮಾಯಣವನ್ನು ಬರೆದಿದ್ದು, ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದ್ದ ಹಲವರು
ರಾಜ್ಯವನ್ನಾಳಿದ್ದು, ಕ್ಷತ್ರಿಯನಾದ ಕೌಶಿಕ ಬ್ರಹ್ಮರ್ಷಿ ಆದದ್ದು, ಕ್ಷತ್ರೀರಲ್ಲದವರೇ ಎಷ್ಟೋ ಜನ ರಾಜರಾಗಿ, ತಮ್ಮ ಆಳ್ವಿಕೆಯನ್ನು ಕೊಟ್ಟ ಅದೆಷ್ಟೋ ಉದಾಹರಣೆಗಳು ಪುರಾಣೇತಿಹಾಸದಲ್ಲಿದೆ.

ವರ್ಣ ವ್ಯವಸ್ಥೆ ಜಾರಿಗೆ ಬಂದ ಸರಿಯಾದ ಕಾಲಮಿತಿ ಯಾರಿಗೆ ಗೊತ್ತು? ಆದರೂ, ಸಾವಿರಾರು ವರ್ಷಗಳಿಂದ ಚಾತುವರ್ಣವನ್ನು ಭಾರತೀಯರೆಲ್ಲರೂ ಆಚರಿಸಲಿಲ್ಲವೇ? ಕೆಲವು ಮಾಹಿತಿಗಳ ಪ್ರಕಾರ, ಇಡೀ ಭಾರತವನ್ನು ಬ್ರಿಟಿಷರು ಆಕ್ರಮಣ ಮಾಡುವ ಸನ್ನಿವೇಶದಲ್ಲಿ, ‘ತಮ್ಮ ಕೆಲಸವನ್ನು ಸರಳಗೊಳಿಸಲು’ ಆಯಾ ಉದ್ಯೋಗದ ಮೇಲೆ ಗುರುತಿಸಲಾಗಿದ್ದ ಜಾತಿಯನ್ನು ಇನ್ನಷ್ಟು ಢಾಳಾಗಿ ಕಾಣುವಂತೆ ಸಮಾಜದಲ್ಲಿ ಅಚ್ಚೊತ್ತಿದರು. ಅದೇ ಮುಂದುವರಿದುಕೊಂಡು ಬಂದಿದೆ.

ಭಾರತೀಯರೆಲ್ಲರೂ ಪ್ರಗತಿಪರರೆಂಬ ಕೋಡುಗಳನ್ನು ಹೊತ್ತವರಿದ್ದರೂ, ಜಾತಿಯ ಪ್ರಭಾವ ವಿಲ್ಲದೇ ಯಾವೊಂದೂ ಕೆಲಸಗಳು ನಡೆಯುವುದಿಲ್ಲ ಎಂಬುದು ಸತ್ಯ. ಮಗುವಿನ ಶಾಲೆಗೆ ದಾಖಲಾತಿಯಿಂದ ಹಿಡಿದು ಹೆಣದ ಮರಣೋತ್ತರ ಪರೀಕ್ಷೆವರೆಗೆ ಜಾತಿ ಬೆಂಬಿದ್ದಿರುವುದು ‘ನಗ್ನಸತ್ಯ’. ಕೊನೆಗೆ ಯಾವುದಕ್ಕೂ ಜಾತಿಯ ನೆರಳು ಬೀಳದಿದ್ದರೂ, ಅದ ಕಾವು ಇದೆ, ಅದು ಸಾಮಾನ್ಯವಾಗಿ ರಾಜಕಾರಣದಲ್ಲಿ!

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ ಅಂತ ಬಸವಣ್ಣ, ಅಂತೆಯೇ ಶಂಕಾರಾಚಾರ್ಯರು, ಅಸೃಶ್ಯತೆ ತೊಲಗಿಸಲು ಅಂಬೇಡ್ಕರ್… ಹೀಗೆ ಇತಿಹಾಸದುದ್ದಕ್ಕೂ ಹಲವು ದಾರ್ಶನಿಕರು ಅವರವರ ಕಾಲದಲ್ಲಿ ಸಾಕಷ್ಟು ಹೋರಾಡಿದರೂ, ಅದರಿಂದಾದ ಪ್ರಗತಿ(?) ನಮ್ಮ ಕಣ್ಮುಂದೆಯೇ ಕಾಣುತ್ತಲೇ ಇದೆ. ಈಗ ಜಾತಿಯ ಬಗ್ಗೆ ಅಷ್ಟೊಂದು ಚರ್ಚೆ ಗಳಿಲ್ಲದಿದ್ದರೂ, ಚುನಾವಣೆ ಬಂದ ಸಮಯದಲ್ಲಂತೂ ಜಾತಿ ಹೆಸರಿಲ್ಲದೇ ಯಾವ ಪಕ್ಷದ ಪ್ರಚಾರವೂ ನಡೆಯುವುದಿಲ್ಲ.

ಎಲೆಕ್ಷನ್; ಗಣತಂತ್ರದ ಹಬ್ಬವಾಗದೇ, ಜಾತಿಗಳ ಮೇಲಾಟದ ಮೆರವಣಿಗೆ. ಅದು ಈಗಂತೂ ಜಾತಿಗಳ ಸ್ತುತಿಯನ್ನು ಪಠಿಸುತ್ತಲೇ  ಆರಂಭವಾಗುತ್ತದೆ. ಗಮನಿಸಿ, ಚುನಾವಣಾ ಸಮಯದಲ್ಲಿ ರಾಜಕೀಯ ವಿಶ್ಲೇಷಣಾಕಾರರು, ಟಿವಿ- ಪತ್ರಿಕೆಯವರು, ಚುನಾವಣಾ ತಂತ್ರಗಾರರು ಅವರ ಜತೆಗೆ ಮತದಾರರೂ ಜಾತಿ ಸಮೀಕರಣ, ಜಾತಿ ಲೆಕ್ಕಾಚಾರವನ್ನು ಮಾಡುತ್ತಲೇ ಹೋಗುತ್ತಾರೆ. ನೀವು ಯಾವ ಪಕ್ಷದ ಉದಾಹರಣೆಯನ್ನು ತೆಗೆದುಕೊಂಡರೂ, ಎಲ್ಲ ಪಕ್ಷಕ್ಕೂ ತಮ್ಮದೇ ಆದ ವೋಟ್ ಬ್ಯಾಂಕ್, ಜಾತಿಯ ನಾಯಕ, ಕೆಲವು ಜಾತಿಗಳ ‘ಅತ್ಯುನ್ನತ’ ಬೆಂಬಲ ಇದ್ದೇ ಇದೆ. ಹಿಂದುತ್ವದ ಆಧಾರದ ಮೇಲೆ ಸ್ಥಾಪಿತವಾದ ಬಿಜೆಪಿ.

ಸಮಾಜವಾದ- ಸೆಕ್ಯುಲರ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಜಾತ್ಯತೀತತೆಯ ಹೆಸರಲ್ಲಿರುವ ಜೆಡಿಎಸ್. ಎಲ್ಲರೂ ತಮ್ಮ ಪಕ್ಷದ ಸಣ್ಣ ಸಣ್ಣ ನಡೆ
ಯಲ್ಲೂ ಜಾತಿ ಲೆಕ್ಕಾಚಾರ ಹಾಕುವುದು, ಜಾತಿಯ ಆಧಾರ ಮೇಲೇ ಸ್ಥಾನ-ಮಾನ-ಪದವಿಯ ನಿರ್ಧಾರ ಮಾಡುವುದು. ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ ಗಳಿಗೂ ಜಾತಿ ಆಧಾರ ಬೇಕೆ ಬೇಕು. ಕೊನೆಗೆ ಯಾವುದೇ ಜಾತಿಯಿಂದ ಗುರುತಿಸಿಕೊಳ್ಳದವರಿಗೆ ಯಾವುದೇ ಪಕ್ಷದ ಕಾರ್ಯಕರ್ತ ನಾಗುವ ಅರ್ಹತೆಯೂ ಕಡಿಮೆ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ.

ಕೆಲ ತಿಂಗಳಗಳ ಹಿಂದೆ ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿ ಆಗುತ್ತಾರೆ. ಅದಕ್ಕೂ ಕೆಲ ವರ್ಷಗಳ ಹಿಂದೆ ಭಾರತದ್ದೇ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆ ಆಗುತ್ತಾರೆ. ತುಮಕೂರು ಮೂಲದ ಚಂದ್ರ ಆರ್ಯ ಕೆನಡಾದ ಎಂಪಿ ಆಗುತ್ತಾರೆ. ಅವರಿಗೇನಾದರೂ ಭಾರತೀಯ ರಾಜಕಾರಣಿಗಳಿಗೆ ಇರುವಂತಹ ಅಳತೆಗೋಲು ಇದೆಯಾ? ಊಹುಂ, ಅವರೆಲ್ಲ ಆಗಿದ್ದು ತಮ್ಮದೇ ಆದ ವರ್ಚಸ್ಸಿನಿಂದ, ಶಕ್ತಿ, ಪ್ರತಿಭೆ, ಜಾಣತನ ಎಲ್ಲವೂ ಅವರನ್ನು ಬೇರೆ ಬೇರೆ ದೇಶಗಳಲ್ಲೂ ಅವರನ್ನು ರಾಜಕೀಯ ಪಟುವನ್ನಾಗಿ ಸಿದ್ಧ ಮಾಡಿತು.

ಹಾಗಿದ್ದರೆ ಭಾರತದಲ್ಲಿ?
ರಾಜಕೀಯ ಪಿತ್ರಾರ್ಜಿತ ಆಸ್ತಿ! ಎಂಎಲ್‌ಎ, ಎಂಪಿ, ಮಿನಿಸ್ಟರ್‌ನಿಂದ ಹಿಡಿದು, ಪ್ರತಿಯೊಬ್ಬ ರಾಜಕಾರಣಿಯ ಮಗ ಆಗಲೇ ಅವರ ಅಪ್ಪನ ಸೀಟಿನ ಮೇಲೆ ಕರ್ಚೀಫ್ ಹಾಸಿದ್ದು ಎಲ್ಲರ ಕಣ್ಣಿಗೆ ಕಾಣಿಸುತ್ತಲೇ ಇದೆ. ಇದು ಹೆಚ್ಚೂ ಕಡಿಮೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಣಬಹುದು. ಇನ್ನು ನೋಟಿನ ಕಂತನ್ನು ಕಾರಲ್ಲಿಟ್ಟು, ಹಿರಿಯ ರಾಜಕೀಯ ನಾಯಕನ(!?) ಮನೆಯ ಮುಂದೆ ಕಾಯುವ, ದೊಡ್ಡ ಸಂಖ್ಯೆಯ ಜಾತಿಯಲ್ಲಿ ಹುಟ್ಟಿದ ಕೆಲವು ಜನಗಳೂ
ರಾಜಕಾರಣಿಗಳಾಗಲು ಕಾಯುತ್ತಿರುವುದೂ ಇದೆ.

ಇಷ್ಟೇ ಅಲ್ಲದೇ, ಕೆಲ ವರ್ಷಗಳ ಹಿಂದೆ ಹರಿಹರದ ಪಂಚಮಸಾಲಿ ಸಮಾಜದ ಒಂದು ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮಿಜಿಗಳು ಆಗಿನ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರೆದುರು ‘ಮುರುಗೇಶ್ ನಿರಾಣೀ ಅವರಿಗೆ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗದಿದ್ದರೆ, ಪಂಚಮಸಾಲಿಗಳು ಬೆಂಬಲ ಸಿಗುವುದಿಲ್ಲ’ ಎಂದು ಅವಾಜ್ ಹಾಕಿದ್ದು ಒಂದು ಉದಾಹರಣೆಯಷ್ಟೇ. ಅದೇ ರೀತಿ ಈಗಿನ ದಿನಗಳಲ್ಲಿ ನಡೆಯುತ್ತಿರುವ ಹಲವಾರು ‘ಮಠ/ಸಮಾಜ’ದ ಸಭೆ ಸಮಾರಂಭಗಳು ರಾಜಕೀಯ ಸಮಾರಂಭಗಳಾಗಿ ಪರಿವರ್ತನೆಗೊಳ್ಳುವುದು ಸಹಜ. ಕುರುಬ ಸಮಾಜ
ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ, ಈಶ್ವರಪ್ಪರ ಪರ ಘೋಷಣೆ. ಪಂಚಮಸಾಲಿ ಸಮಾವೇಶಗಳು ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಪರ. ನಾಯಕ ಸಮಾಜದ ಕಾರ್ಯಕ್ರಮಗಳಲ್ಲಿ ಶ್ರೀರಾಮುಲು, ರಾಜುಗೌಡ ಪರ ಅಲ್ಲಿನ
ಸ್ವಾಮೀಜಿಗಳು ಮಾತನಾಡುವುದು… ಇದೆಲ್ಲ ಇತ್ತೀಚೆಗೆ ತುಂಬಾ ಕಾಮನ್ ಆಗಿ ನಡೆಯುತ್ತಲೇ ಇದೆ.

ಜಾತಿಗಳನ್ನು ಓಲೈಸಲು ಜಾತಿಗಳಿಗೊಂದು ಅಭಿವೃದ್ಧಿ ಪ್ರಾಽಕಾರಗಳನ್ನು ಕೊಡುವುದು. ಬಜೆಟ್‌ನಲ್ಲಿ ಹಲವಾರು ಜಾತಿಗಳಿಗೆ ಅಥವಾ ಆ ಸಮು
ದಾಯದ ಮಠಗಳಿಗೆ ಕೋಟ್ಯಂತರ ರುಪಾಯಿ ಹಣಗಳನ್ನು ದೇಣಿಗೆ ನೀಡುವುದು. ಆ ಕೆಲವು ಜಾತಿಗಳ ವೋಟುಗಳನ್ನು ಪುಸಲಾಯಿಸಲು
ಕಾರ್ಯಕ್ರಮಗಳಿಗೆ ಹೋಗುವುದು. ಅದಕ್ಕೂ ಕೆಳಮಟ್ಟಕ್ಕೆ ಹೋಗಿ, ಯಾವುದೋ ಕುಕೃತ್ಯದ ಬಲಿಪಶುಗಳ ಜಾತಿ ಲೆಕ್ಕಾಚಾರ ಹಾಕುವುದೂ ಹಾಡ ಹಗಲಲ್ಲೇ ನಡೆಯುತ್ತಿದೆ.

ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ನ ಪ್ರಕಾರ, ಗಣನೀಯ ಸಂಖ್ಯೆಯ ಮತದಾರರೆಲ್ಲರೂ ಮತ ಹಾಕುವ ಮುನ್ನ ಜಾತಿ ಆಧಾರವನ್ನೂ ಪರಿಗಣನೆಗೆ ತಗೆದುಕೊಳ್ಳುತ್ತಾರೆ. ಇದು ಉತ್ತರ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೂ ಈ ಸಂಪ್ರದಾಯವಿದೆ. ಕೆಲವೊಂ
ದಿಷ್ಟು ಜನರ ಪ್ರಕಾರ ಹಳ್ಳಿಗರಷ್ಟೇ ಜಾತಿ ಆಧಾರಿತವಾಗಿ ಮತ ಹಾಕುವ ಮಾತುಗಳಿದ್ದರೂ, ನಗರ ಪ್ರದೇಶದಲ್ಲಿರುವ ಜನರೂ ಜಾತಿ ಆಧಾರವನ್ನು ನೋಡುವವರೇ! ದೇಶದ ಕೆಲವು ರಾಜಕೀಯ ಪಕ್ಷಗಳು ಸೀಮಿತ ಜಾತಿಯನ್ನೇ ಪ್ರತಿನಿಧಿಸಲು ಹುಟ್ಟಿಕೊಂಡಿದೆ, ಆಂಧ್ರ ಪ್ರದೇಶದ ‘ಕಮ್ಮ’
ಸಮಾಜಕ್ಕೆ ತೆಲುಗು ದೇಶಂ ಪಾರ್ಟಿ, ರೆಡ್ಡಿಗಳಿಗೆ ವೈಎಸ್ ಆರ್ ಕಾಂಗ್ರೆಸ್, ಅಸ್ಸಾಮಿನ ಮುಸಲ್ಮಾನರಿಗಾಗಿ ಎಯುಡಿಎಫ್. ಬಿಹಾರ್‌ನಲ್ಲಂತೂ ಪ್ರತಿಯೊಂದು ಪಕ್ಷಕ್ಕೂ ಒಂದೊಂದು ಜಾತಿಗಳಿವೆ, ರಾಮ್ ವಿಲಾಸ್ ಪಾಸ್ವಾನ್‌ರ ಲೋಕ್ ಜನಶಕ್ತಿ ಪಾರ್ಟಿಗಾಗಿ ಅವರದ್ದೇ ಆದ ಜಾತಿಯ ಬೆಂಬಲ. ಸಿಖ್ಖರ ಅಸ್ಮಿತೆಗಾಗಿ ಅಕಾಲಿ ದಳ್, ಎಸ್ಸಿಗಾಗಿ ಬಿಎಸ್‌ಪಿ, ಮರಾಠರಿಗಾಗಿ ಶಿವಸೇನಾ, ಜಾಟ್ ಗಾಗಿ ರಾಷ್ಟ್ರೀಯ ಲೋಕ್ ದಳ್. ಹಾಗೆ ಕರ್ನಾಟಕದಲ್ಲೂ ವೊಕ್ಕಲಿಗರಿಗಾಗಿ ಜೆಡಿಎಸ್. ಇನ್ನೂ ಹಲವಾರು ಸಮುದಾಯವನ್ನು ಪ್ರತಿನಿಽಸಲು ಕೆಲವು ನಾಯಕರು, ಅವರೆಲ್ಲರೂ ರಾಜಕೀಯ ನಾಯಕರು!

ನೀವೇ ನೋಡಿ, ಮಂಗಳೂರಿನ ಜಾರ್ಜ್ ಫೆರ್ನಾಂಡಿಸ್, ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಹುಟ್ಟಿದ್ದ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಪ್ರವೇಶ ಮಾಡಿದ್ದೇ ಉತ್ತರ ಪ್ರದೇಶದಿಂದ. ಅಷ್ಟೇ ಏಕೆ, ರಜಪೂತ್ ಸಿಖ್ ಸಮಾಜದ ಧರಂ ಸಿಂಗ್ ಅವರೂ ಕರ್ನಾಟಕದ ಸಿಎಂ ಆದರು. ಆದರೆ ಇವತ್ತಿನ ದಿನಮಾನಗಳಲ್ಲಿ? ಹೇಳಬೇಕೆಂದೇ, ಭಾರತದ ರಾಜಕೀಯದಲ್ಲಿ ಯಾವತ್ತೂ ಅಭಿವೃದ್ಧಿ ಮಾನದಂಡವಾಗಿಯೇ ಉಳಿದಿಲ್ಲ. ಅಭಿವೃದ್ಧಿ
ಮಾನದಂಡವಾಗಿದ್ದೀತೆಂದರೆ, ಯಾರೂ ಚುನಾವಣಾ ಪ್ರರದ ಗೋಜಿಗೂ ಹೋಗುತ್ತಿರಲಿಲ್ಲ.

ಯಾರೇ ಎಷ್ಟೇ ಅಭಿವೃದ್ಧಿ ಮಾಡಿದ್ದರೂ, ಸೇಫ್ ಜೋನ್ ಆಗಿ ನೋಡುವುದು ಜಾತಿಯನ್ನೇ! ಇಷ್ಟೊಂದನ್ನೆಲ್ಲ ಹೇಳಲು ಕಾರಣವೂ ಇದೆ. ಅದು,
ಮೊನ್ನೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಯವರು, ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿಯ ಬಗ್ಗೆ ಮಾತನಾಡುತ್ತ, ‘ಪ್ರಹ್ಲಾದ್ ಜೋಶಿ ಕರ್ನಾಟಕದ ಬ್ರಾಹ್ಮಣನಲ್ಲ, ಶೃಂಗೇರಿಯ ಮಠವನ್ನು ಧ್ವಂಸ ಮಾಡಿದ, ಮಹಾತ್ಮ ಗಾಂಧಿಯವರನ್ನು ಕೊಂದ ಚಿತ್ಪಾವನ ಬ್ರಾಹ್ಮಣ, ಅಂಥವರನ್ನು ಬಿಜೆಪಿ, ಆರೆಸ್ಸೆಸ್‌ನವರು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ’ ಅಂತ ಪುಂಖಾನು ಪುಂಖವಾಗಿ ಪುಂಗಿದ್ದಾರೆ. ಆಮೇಲೆ ತೇಪೆ ಹಚ್ಚುವ ಕೆಲಸವನ್ನೂ ಮಾಡಿದ್ದಾರೆ.

ಆದರೆ, ಇಲ್ಲಿ ಕುಮಾರಸ್ವಾಮಿ ಮತ್ತೆಲ್ಲ ರಾಜಕೀಯ ನಾಯಕರಿಗೆ ಸಾರ್ವಜನಿಕರೆಲ್ಲ ಕೇಳಬೇಕಾದ ಮೊದಲನೇ ಪ್ರಶ್ನೆ; ಸ್ವಾಮಿ ರಾಜಕೀಯಕ್ಕೆ ಬರಲು ಜಾತಿಯ ಬೆಂಬಲ ಬೇಕೆಬೇಕಾ? ಸಿದ್ಧಾಂತ, ಹೋರಾಟ, ಟ್ಯಾಲೆಂಟ್‌ಗಳಿಲ್ಲದಿದ್ದರೇ ಅವನು ರಾಜಕಾರಣಿ ಆಗಲು ಅರ್ಹತೆಯೇ ಇಲ್ಲವೇ? ಜಾತಿಯ ಮಾಣದಂಡದ ಮೇಲೆ ಚುನಾವಣಾ ಸ್ಪರ್ಧೆಗೆ ಆಸ್ಪದ ನೀಡುತ್ತಿದ್ದಾರೆಂದರೆ, ಪ್ರಚಾರದಲ್ಲಿ ಅಭ್ಯರ್ಥಿ ಹೆಸರನ್ನಾದರೂ ಏಕೆ ಬೇಕು?
ಅವರ ಜಾತಿಯನ್ನು ಹಾಕಿದರೆ ಸಾಕಾಗುತ್ತಲ್ಲವಾ? ಚುನಾವಣಾ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅಂತಹ ಅಮೆರಿಕ ಉದ್ಯಮಿಯೂ ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಪೈಪೋಟಿ ನೀಡಲು ಸಿದ್ಧವಾಗುತ್ತಿದ್ದರೆ, ಭಾರತದಲ್ಲಿರುವ ಎಲ್ಲರೂ ಜಾತಿ-ಮತಗಳ ಲೆಕ್ಕಾಚಾರದಲ್ಲೇ ಮುಳುಗಿ ದ್ದಾರೆ.

‘ಜಾತಿ ನಾ ಪೂಚೋ ಸಾಧೂ ಕೀ, ಪೂಚ್ ಲೀಜಿಯೇ ಗ್ಯಾನ್’ ಅಂತ ಸಂತ ಕಬೀರರು ಹೇಳಿದರು. ಹಾಗೇ ಜನರೂ ಅಭ್ಯರ್ಥಿಗಳ ಜಾತಿಯನ್ನು
ನೋಡದೆ ಅವರ ಅಭಿವೃದ್ಧಿಯ ಬಗ್ಗೆಯೂ ಕೇಳಬೇಕು! ಎಲ್ಲಕ್ಕೂ ಮೊದಲು ನಮ್ಮನ್ನು ನಾವೇ ಕೇಳಬೇಕು, ನಮ್ಮ ಮತ ಯಾವುದಕ್ಕೆ ಅಂತ!