ವರ್ತಮಾನ
maapala@gmail.com
ಜಾತಿ ಗಣತಿ ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಆಡಳಿತ ಪಕ್ಷದಲ್ಲೇ ಈ ಕುರಿತಾಗಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಗಮನಿಸ ಬೇಕಾದ ಸಂಗತಿ ಎಂದರೆ ಒಂದೆಡೆ ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇನ್ನೊಂದೆಡೆ ಆ ವರದಿಯನ್ನು ಅಂಗೀಕರಿಸಬೇಕು ಎನ್ನುತ್ತಿವೆ.
ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಮೂಲಕ ಮಾಡಿಸಿದ ಸಾಮಾಜಿಕ, ಶೈಕ್ಷಣಿಕ ಗಣತಿ ಇದೀಗ ಜಾತಿ ಗಣತಿ ಹೆಸರಿನಲ್ಲಿ ರಾಜ್ಯರಾಜಕೀಯದಲ್ಲಿ ಸಂಚಲನವುಂಟು ಮಾಡುತ್ತಿದೆ.
ಇದೀಗ ಆ ಜಾತಿ ಗಣತಿಯನ್ನು ಅಂತಿಮಗೊಳಿಸಿ ನೀಡುವಂತೆ ಮತ್ತೆ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಗದ ಹಾಲಿ
ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಸೂಚಿಸಿದ್ದಾರೆ. ಅದಕ್ಕಾಗಿ ಅವರ ಅಧಿಕಾರಾವಧಿಯನ್ನು ಜ.೩೧ರವರೆಗೆ ವಿಸ್ತರಿಸಲಾಗಿದೆ. ಅಂದರೆ, ಜಾತಿ ಗಣತಿ
ಜನವರಿ ಅಂತ್ಯದೊಳಗೆ ಸರಕಾರದ ಕೈಸೇರುವುದು ಖಚಿತ. ಈ ವರದಿಗೆ ಆಡಳಿತ ಪಕ್ಷದಲ್ಲೇ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದರೂ ವರದಿ ಅಂಗೀಕರಿಸು
ವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾತಿ ಗಣತಿ ಪರವಾಗಿ ರುವುದರಿಂದ ವರದಿ ಸ್ವೀಕರಿಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಬೇಕಾಗಿರುವುದು ಕೂಡ ಇದೇ. ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಬಿಜೆಪಿ
ಪಾಲಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಮುಂಬರುವ ಲೋಕಸಭೆ ಚುನಾವಣೆ ವೇಳೆ ಮತ್ತೆ ತಲೆ ಎತ್ತಿ ನಿಲ್ಲಲು ಅಗತ್ಯವೂ ಆಗಿದೆ. ಇದಕ್ಕೆ ಕಾರಣ ರಾಜಕೀಯ ವಾಗಿ ಪ್ರಬಲವಾಗಿರುವ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದವರು ಜಾತಿ ಗಣತಿ ವಿರೋಧಿಸುತ್ತಿರುವುದು. ಜಾತಿ ಗಣತಿ ಅವೈಜ್ಞಾನಿಕ ವಾಗಿದೆ. ಅದನ್ನು ಅಂಗೀಕರಿಸಬಾರದು ಎಂದು ಎರಡೂ ಸಮುದಾಯಗಳು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದು, ಒಕ್ಕಲಿಗ ಸಮುದಾಯದವರು ವರದಿ ವಿರುದ್ಧ ಈಗಾಗಲೇ ಸಹಿ ಸಂಗ್ರಹ ಕಾರ್ಯಆರಂಭಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯವೂ ಸದ್ಯದಲ್ಲೇ ಸಹಿ ಸಂಗ್ರಹ ಕಾರ್ಯಕ್ಕೆ ಇಳಿಯಲಿದೆ. ಜಾತಿ ಗಣತಿ ವರದಿ ಪ್ರಕಟವಾದರೆ ಈ ಎರಡೂ ಸಮುದಾಯಗಳ ಸ್ಪಷ್ಟ ಜನಸಂಖ್ಯೆ ಬಹಿರಂಗವಾಗಲಿದ್ದು, ಒಂದೊಮ್ಮೆ ನಿಖರ ಜನಸಂಖ್ಯೆ ಸಿಕ್ಕಲ್ಲಿ, ಉಳಿದ ಸಮುದಾಯಗಳು ಜನಸಂಖ್ಯೆಗೆ ಅನುಗುಣವಾಗಿ ಸಹಜವಾಗಿ ತಮಗೂ ರಾಜಕೀಯ ಅವಕಾಶಗಳನ್ನು ಕೇಳುತ್ತವೆ. ಹಾಗಾದಾಗ ಎರಡೂ ಸಮುದಾಯಗಳಿಗೆ ಹಿನ್ನಡೆಯಾಗುವುದು ಖಚಿತ. ಇದರಿಂದ ರಾಜಕೀಯ ಪ್ರಾಬಲ್ಯ
ಕುಸಿಯುತ್ತದೆ. ಪ್ರಮುಖ ಹುದ್ದೆಗಳು ಕೈತಪ್ಪಿ ಹೋಗುತ್ತವೆ ಎಂಬುದು ಅವರ ಆತಂಕ. ಆ ಕಾರಣಕ್ಕಾಗಿಯೇ ಇಬ್ಬರೂ ಸರಕಾರದ ವಿರುದ್ಧ ತಿರುಗಿ ಬೀಳಲು ಸಜ್ಜಾಗಿದ್ದು, ಅಗತ್ಯ ಬಿದ್ದರೆ ಸಂಘಟಿತ ಹೋರಾಟಕ್ಕೂ ಮುಂದಾಗಿದ್ದಾರೆ.
ಇದು ಒಂದೆಡೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಖುಷಿ ತಂದಿದೆ. ಹೀಗಾಗಿ ಆದಷ್ಟು ಬೇಗ ಜಾತಿ ಗಣತಿ ವರದಿಯನ್ನು ಸರಕಾರ ಸ್ವೀಕರಿಸಲಿ ಎಂದು ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಕಾಂತರಾಜು ಅವರು ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದಾಗ ಸಿದ್ಧಪಡಿಸಿದ ವರದಿ ಅವೈಜ್ಞಾನಿಕ, ಲಕ್ಷಾಂತರ ಕುಟುಂಬಗಳವರ ಮನೆಗೆ ಗಣತಿ ನಡೆಸಿದವರು ತೆರಳಿಲ್ಲ, ಹೀಗಾಗಿ ವರದಿ ಸಮರ್ಪಕವಾಗಿಲ್ಲ ಎಂಬೆಲ್ಲ ಆರೋಪಗಳಿರಬಹುದು. ಆದರೆ, ಒಮ್ಮೆ ವರದಿ ಸ್ವೀಕೃತವಾದರೆ ಅದರಲ್ಲಿರುವ ಅಂಕಿ ಅಂಶಗಳು ಅಧಿಕೃತ ಎಂದು ದಾಖಲಾಗುತ್ತವೆ. ಈ ಹಿಂದೆ ಸೋರಿಕೆ ಯಾಗಿದ್ದ ಈ ವರದಿ ಪ್ರಕಾರ ಆಗ ರಾಜ್ಯದ ಒಟ್ಟಾರೆ ಜನಸಂಖ್ಯೆ ೫.೯೮ ಕೋಟಿ ಇತ್ತು. ಈ ಪೈಕಿ ಅಹಿಂದ ಸಮುದಾಯದ ಜನಸಂಖ್ಯೆ ೩.೯೬ ಕೋಟಿ
ಯಾದರೆ, ಪ್ರಬಲ ಸಮುದಾಯಗಳ ಜನಸಂಖ್ಯೆ ೧.೮೭ ಕೋಟಿ. ಅದಕ್ಕಿಂತಲೂ ಮುಖ್ಯ ಅಂಶವೆಂದರೆ, ವರದಿಯಲ್ಲಿ ಸೋರಿಕೆಯಾದಂತೆ ಒಟ್ಟು ಜನಸಂಖ್ಯೆ ಯಲ್ಲಿ ಶೇ. ೧೯.೫ರಷ್ಟು ಪರಿಶಿಷ್ಟ ಜಾತಿ, ಶೇ. ೭ರಷ್ಟು ಪರಿಶಿಷ್ಟ ಪಂಗಡ, ಶೇ. ೧೬ರಷ್ಟು ಮುಸ್ಲಿಮರು, ಶೇ. ೧೪ರಷ್ಟು ಲಿಂಗಾಯತರು, ಶೇ.೧೧ರಷ್ಟು ಒಕ್ಕಲಿಗರು, ಶೇ. ೭ರಷ್ಟು ಕುರುಬರು, ಶೇ. ೨೦ರಷ್ಟು ಅತಿ ಹಿಂದುಳಿದ ವರ್ಗದವರು ಮತ್ತು ಉಳಿದ ಪ್ರಮಾಣ ಮೇಲ್ಜಾತಿಯವರದ್ದು ಎಂಬುದು.
ಲಿಂಗಾಯತರು, ಒಕ್ಕಲಿಗರ ಆತಂಕಕ್ಕೆ ಕಾರಣವಾಗಿರುವುದು ಕೂಡ ಇದೇ ಅಂಶ. ಈವರೆಗೆ ಪರಿಶಿಷ್ಟ ಜಾತಿ ಬಳಿಕ ಅತಿ ಹೆಚ್ಚು ಜನಸಂಖ್ಯೆ ಇರುವುದು ಲಿಂಗಾಯತರದ್ದು, ನಂತರ ಒಕ್ಕಲಿಗರದ್ದು ಎಂದು ಹೇಳಲಾಗುತ್ತಿತ್ತು. ಆದರೆ, ಜಾತಿ ಗಣತಿಯಲ್ಲಿ ಈ ಎರಡೂ ಸಮುದಾಯಗಳಿಗಿಂತ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಉಳಿದ ಜಾತಿ, ಸಮುದಾಯಗಳ ಜನಸಂಖ್ಯೆಯೂ ಅಂದುಕೊಂಡಿರುವುದಕ್ಕಿಂತ ಹೆಚ್ಚಾಗಿದೆ. ಜನಸಂಖ್ಯೆ ಆಧರಿಸಿ ಜಾತಿ, ಸಮುದಾಯ ಗಳಿಗೆ ಸೌಲಭ್ಯಗಳನ್ನು ಒದಗಿಸಲು ಈ ಜಾತಿ ಗಣತಿ ನಡೆಸಿದ್ದರೂ ಅದಕ್ಕಿಂತ ಮುಖ್ಯವಾಗಿ ರಾಜಕೀಯ ಮೀಸಲು ಈಗ ಪ್ರಧಾನವಾಗಿರುವುದೇ ಲಿಂಗಾಯತರು, ಒಕ್ಕಲಿಗರು ತಿರುಗಿಬೀಳಲು ಕಾರಣವಾಗಿದೆ.
ಹೀಗಾಗಿ ಪಕ್ಷಾತೀತವಾಗಿ ಈ ಎರಡೂ ಸಮುದಾಯಗಳಿಂದ ಜಾತಿ ಗಣತಿಗೆ ವಿರೋಧ ವ್ಯಕ್ತವಾಗುತ್ತಿದೆ. ಉಪಮುಖ್ಯಮಂತ್ರಿ, ಸಚಿವರು, ಹಿರಿಯ ಶಾಸಕರು ಸೇರಿದಂತೆ ಕಾಂಗ್ರೆಸ್‌ನವರೇ ವರದಿಯನ್ನು ವಿರೋಽಸುತ್ತಿದ್ದರೂ ಹೈಕಮಾಂಡ್ ಆಕಾಂಕ್ಷೆಯಂತೆ ಜಾತಿ ಗಣತಿ ಸ್ವೀಕರಿಸಿದರೆ ಸಹಜವಾಗಿಯೇ ಎರಡೂ ಸಮುದಾಯದ ಜನರು ಕಾಂಗ್ರೆಸ್ ವಿರುದ್ಧ ತಿರುಗಿಬೀಳುತ್ತಾರೆ. ತಮ್ಮದೇ ಸಮುದಾಯದವರು ವಿರೋಽಸಿದ್ದರೂ ಅದಕ್ಕೆ ಬೆಲೆ ನೀಡಲಿಲ್ಲ ಎಂಬ ಸಿಟ್ಟು ಜನರಲ್ಲಿ ಹೆಚ್ಚಾಗುತ್ತದೆ. ಕಾಂಗ್ರೆಸ್ ನೆಚ್ಚಿಕೊಂಡರೆ ನಮಗೆ ಇನ್ನಷ್ಟು ಅನ್ಯಾಯ ವಾಗುತ್ತದೆ ಎಂಬ ಆತಂಕ ಅವರಲ್ಲಿ ಮೂಡುತ್ತದೆ.
ಕಾಂಗ್ರೆಸನ್ನು ವಿರೋಽಸಲೆಂದು ಅನಿವಾರ್ಯವಾಗಿ ಇತರೆ ಪಕ್ಷಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಸಹಜವಾಗಿ ರಾಜ್ಯದಲ್ಲಿರುವ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನತ್ತ ಮುಖ ಮಾಡಬೇಕಾಗುತ್ತದೆ. ಇತರೆ ಸಮುದಾಯಗಳ ಮತಗಳು ಈ ಎರಡಕ್ಕಿಂತ ಹೆಚ್ಚಿವೆಯಾದರೂ ಮುಸ್ಲಿಮರನ್ನು ಹೊರತು ಪಡಿಸಿ ಉಳಿದ ಜಾತಿಗಳಲ್ಲಿ ಸಂಘಟನೆ ಅಷ್ಟೊಂದು ಪ್ರಬಲವಾಗಿಲ್ಲ. ಹೀಗಾಗಿ ಅವರ ಮತ ಗಳು ಎಲ್ಲ ಪಕ್ಷಗಳಿಗೂ ಹಂಚಿಹೋಗುತ್ತವೆ. ಬಿಜೆಪಿ ಕಾಯುತ್ತಿರು ವುದೂ ಇದನ್ನೇ. ಜಾತಿ ಗಣತಿಯನ್ನು ಸರಕಾರ ಸ್ವೀಕರಿಸಿ ಲಿಂಗಾಯತ, ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರೆ ಅದರ ಲಾಭ ಬಿಜೆಪಿಗೆ ಆಗುತ್ತದೆ. ಏಕೆಂದರೆ, ಕಳೆದೆರಡು ದಶಕ ಗಳಿಂದ ಲಿಂಗಾಯತರು ಬಿಜೆಪಿ ಪಾಲಿಗೆ ಮತ ಬ್ಯಾಂಕ್ ಆಗಿದ್ದರೆ, ಒಕ್ಕಲಿಗರು ಜೆಡಿಎಸ್ ಮತ ಬ್ಯಾಂಕ್ ಆಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಈ ಮತಗಳು ಹಂಚಿಹೋಗಿದ್ದು ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲೂ ಅವರು ಬಿಜೆಪಿ ಮತ್ತು ಜೆಡಿಎಸ್ ಜತೆ ನಿಂತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿಯಿಂದ ದೂರ ಸರಿಯಲು ಕಾರಣ ಪಕ್ಷವೇ ಆಗಿತ್ತು. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೇ ಇದ್ದುದರಿಂದ ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂಬಂತೆ ಕಾಂಗ್ರೆಸ್ ಪ್ರತಿಬಿಂಬಿಸಿತ್ತು. ಇನ್ನು ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಮತ್ತು ಅವರು ಮುಖ್ಯಮಂತ್ರಿಯಾಗಬಹುದು ಎಂಬ ಆಸೆಯಿಂದ ಆ ಸಮುದಾಯದವರು ಜೆಡಿಎಸ್‌ನಿಂದ ಕಾಂಗ್ರೆಸ್ ನತ್ತ ತೆರಳಿದರು. ಆದರೆ, ಈಗ ವರದಿಯನ್ನು ಸರಕಾರ ಸ್ವೀಕರಿಸಿದರೆ ಚುನಾವಣೆ ಗೆಲುವಿಗಾಗಿ ಮಾತ್ರ ಕಾಂಗ್ರೆಸ್ ನಮ್ಮನ್ನು ನೆಚ್ಚಿಕೊಳ್ಳುತ್ತದೆ ಎಂಬ
ಭಾವನೆ ಅವರಲ್ಲಿ ಬರುತ್ತದೆ.
ಏಕೆಂದರೆ, ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಪ್ರಯತ್ನಿಸಿ ವೀರಶೈವ ಲಿಂಗಾಯತರನ್ನು ವಿಭಜನೆ ಮಾಡಲು ಕಾಂಗ್ರೆಸ್ ಪ್ರಯತ್ನಿಸಿದ ಆರೋಪವಿದೆ. ಇದೀಗ ಜಾತಿ ಗಣತಿಯಲ್ಲಿ ಕಡಿಮೆ ಜನಸಂಖ್ಯೆ ತೋರಿಸಿದರೆ ಸಹಜವಾಗಿ ಅವರು ತಿರುಗಿಬೀಳುತ್ತಾರೆ. ಆಗ ಮತ್ತೆ ಕಾಣಿಸುವುದು ಬಿಜೆಪಿ. ಇನ್ನು ಒಕ್ಕಲಿಗರ ವಿಚಾರ ಬಂದರೆ, ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದರೂ ಜಾತಿ ಗಣತಿ ಸ್ವೀಕರಿಸದಂತೆ ನೋಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಆಕ್ರೋಶ ಕಾಣಿಸಿಕೊಳ್ಳುತ್ತದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಯಾಗುತ್ತಾರೆ ಎಂಬ ನಿರೀಕ್ಷೆಯೂ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಅವರು ಕಾಂಗ್ರೆಸ್‌ನಿಂದ ದೂರವಾಗುವ ಸಾಧ್ಯತೆ ಇದ್ದು, ಸಹಜವಾಗಿಯೇ ಈ ಹಿಂದೆ ಬೆಂಬಲಿಸುತ್ತಿದ್ದ ಜೆಡಿಎಸ್ ಪರ ವಾಲುತ್ತಾರೆ. ಈ ಕಾರಣಗಳಿಗಾಗಿಯೇ ಬಿಜೆಪಿ ಮತ್ತು ಜೆಡಿಎಸ್ ಜಾತಿ ಗಣತಿಯನ್ನು ಕಾಂಗ್ರೆಸ್ ಸರಕಾರ ಸ್ವೀಕರಿಸಬೇಕು ಎಂದು ಕಾಯುತ್ತಿರುವುದು.
ಲಿಂಗಾಯತ ಸಮುದಾಯಕ ನಾಯಕ ಎನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಪ್ರಸ್ತುತ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಭಾವನೆ ಕ್ರಮೇಣ ದೂರವಾಗುತ್ತಿದೆ. ಬಿಜೆಪಿಯಲ್ಲಿ ಈ ಹಿಂದೆ ಆಗಿದ್ದ ಬೆಳವಣಿಗೆಗಳಿಂದ ಬೇಸತ್ತು ಪಕ್ಷ ತೊರೆದಿರುವವರು ಮತ್ತೆ ವಾಪಸಾಗಬಹುದು. ಇನ್ನೊಂದೆಡೆ ಪಕ್ಷ ಬಿಡಲು ಯೋಚಿಸುತ್ತಿರುವವರು ತಮ್ಮ ಯೋಚನೆ ಕೈಬಿಟ್ಟು ಉಳಿದುಕೊಳ್ಳಬಹುದು. ಇದೇ ಪರಿಸ್ಥಿತಿ ಜೆಡಿಎಸ್ ನಲ್ಲೂ ಇದೆ. ಒಕ್ಕಲಿಗ ಸಮುದಾಯದವರ ಕಾರಣ ದಿಂದಲೇ ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಂಡಿದ್ದ ಜೆಡಿಎಸ್, ಕಳೆದು ಕೊಂಡದ್ದ ಪ್ರಾಬಲ್ಯ ಮತ್ತೆ ಹೆಚ್ಚಿಸಿಕೊಳ್ಳಲು ಅವಕಾಶವಾಗಲಿದೆ.
ಒಕ್ಕಲಿಗ ಸಮುದಾಯದವರೇ ಆಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವುದು ಕೂಡ ಇದಕ್ಕೆ ಇನ್ನೊಂದು
ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಬಿಜೆಪಿ ಶಾಸಕಾಂಗ ಪಕ್ಷದ
ನಾಯಕ ಆರ್.ಅಶೋಕ್ ಕೂಡ ಒಕ್ಕಲಿಗರೇ ಆಗಿರುವುದರಿಂದ ರಾಜಕೀಯವಾಗಿ ಪ್ರಬಲ ಮತ್ತು ಸಂಘಟಿತ ಎರಡು ಸಮುದಾಯಗಳು ಈ ಎರಡೂ
ಪಕ್ಷಗಳ ಜತೆಗೆ ನಿಂತರೆ ಸಹಜ ವಾಗಿಯೇ ಚುನಾವಣೆ ಗಳಲ್ಲಿ ಅನುಕೂಲ ಮಾಡಿ ಕೊಡುತ್ತದೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಜಾತಿ ಗಣತಿ ವರದಿ ಬಿಜೆಪಿ ಮತ್ತು ಜೆಡಿಎಸ್‌ಗೆ ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಕಳೆದುಕೊಂಡಿದ್ದನ್ನು ಈ ಚುನಾವಣೆಯಲ್ಲಿ ಮತ್ತೆ ಗಿಟ್ಟಿಸಿಕೊಳ್ಳಲು ದಾರಿ ಮಾಡಿಕೊಡಲಿದೆ ಎಂಬ ಆಶಾಭಾವನೆ ಮೂಡಿದೆ. ಒಂದೊಮ್ಮೆ ಚುನಾವಣೆ
ಯಲ್ಲಿ ಈ ಮೈತ್ರಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕ ಬಿಜೆಪಿ ಬಗ್ಗೆ ಮುನಿಸಿಕೊಂಡಿರುವ ಬಿಜೆಪಿ ವರಿಷ್ಠರ‍್ಕು ಮತ್ತೆ
ಆದ್ಯತೆ ನೀಡುತ್ತಾರೆ. ಇದರಿಂದ ಪಕ್ಷ ಸಂಘಟನೆಗೂ ನೆರವಾಗುತ್ತದೆ. ಅಷ್ಟೇ ಅಲ್ಲ, ಬಿ.ವೈ.ವಿಜಯೇಂದ್ರ – ಆರ್.ಅಶೋಕ-ಎಚ್.ಡಿ. ಕುಮಾರಸ್ವಾಮಿ
ಜೋಡಿಗೂ ಶಕ್ತಿ ಬಂದಂತಾಗುತ್ತದೆ. ಅದಕ್ಕಾಗಿಯೇ ಸರಕಾರ ಜಾತಿ ಗಣತಿ ವರದಿ ಸ್ವೀಕರಿಸಲಿ ಎಂದು ಎರಡೂ ಪಕ್ಷಗಳ ನಾಯಕರು ಕಾಯುತ್ತಿದ್ದಾರೆ.
ಲಾಸ್ಟ್ ಸಿಪ್: ಸಹಜವಾಗಿ ಲಾಭ ಬಾರದಿದ್ದರೆ ಇನ್ನೊಬ್ಬರ ನಷ್ಟದಲ್ಲಿ ಲಾಭ ಕಂಡುಕೊಳ್ಳುವವನೇ ನಿಜವಾದ ರಾಜಕಾರಣಿ.