Sunday, 15th December 2024

ಈ ಕಥೆಗಳ ಪಾತ್ರಧಾರಿಗಳೂ ಯಾರೋ?…ನಾನೋ…ನೀವೋ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಮೊನ್ನೆ ನಾನು ಹಳೆಯ ಆಲ್ಬಂ ನೋಡುತ್ತಿದ್ದೆ. ನಾನು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಬಿಟ್ಟು ಬರುವಾಗ, ಅದರ ಗೋಡೆಯ ಮೇಲೆ ನನ್ನ ಮಗ ಬಿಡಿಸಿದ ಚಿತ್ರಗಳ ಫೋಟೋಗಳನ್ನು ಕ್ಲಿಕ್ಕಿಸಿ ಇಟ್ಟುಕೊಂಡಿದ್ದೆ. ಆ ಫೋಟೋಗಳನ್ನು ನೋಡು ವಾಗ, ಆತನ ಬಾಲ್ಯದ ದಿನಗಳ ನೆನಪುಗಳು ಉಮ್ಮಳಿಸಿ ಬಂದವು. ಹೊಸ ಬಾಡಿಗೆ ಮನೆಗೆ ಬಂದ ತರುವಾಯದಲ್ಲಿ, ಮನೆ ಮಾಲೀಕ ಇಡೀ ಮನೆಗೆ ಪೇಯಿಂಟ್ ಮಾಡಿಸಿದ್ದ.

ಮನೆಗೆ ಬಂದು ಒಂದು ವಾರವಾಗಿರಲಿಲ್ಲ, ಮಗ ಅಲ್ಲಿನ ಗೋಡೆಗಳ ಮೇಲೆ ಸ್ಕೆಚ್ ಪೆನ್ನಿನಿಂದ ಗೀಚಿದ್ದ. ನಾನು ಗದರಬಹುದು ಎಂದು ನಿರೀಕ್ಷಿಸಿರಲಿಲ್ಲ. ಆಫೀಸಿನಿಂದ ರಾತ್ರಿ ಮನೆಗೆ ಬರುತ್ತಿದ್ದಂತೆ, ಆತ ಮಲಗದೇ ನನ್ನ ದಾರಿ ಕಾಯುತ್ತಿದ್ದ. ನಾನು ಬರುತ್ತಿದ್ದಂತೆ, ನನ್ನ ಕೈ ಹಿಡಿದು, ಒಳಮನೆಗೆ ಹೋಗಿ, ತಾನು ಬಿಡಿಸಿದ ಚಿತ್ರಗಳನ್ನು ತೋರಿಸಿದ. ಆತ ನನ್ನಿಂದ ಒಂದು ಒಳ್ಳೆಯ
ಪ್ರಶಂಸೆಯನ್ನು ನಿರೀಕ್ಷಿಸಿದ್ದ. ಆದರೆ ನಾನು ಅದೇನು ಬಳಲಿಕೆಯೋ, ಬಣ್ಣ ಬಳಿದ ಹೊಸ ಗೋಡೆಯ ಮೇಲಿನ ಮೋಹವೋ, ಅವನನ್ನು ಪ್ರಶಂಸಿಸದೇ ಗದರಿದೆ. ಆತನಿಗೆ ಅದೆಷ್ಟು ಬೇಸರವಾಯಿತೆಂದರೆ, ಆ ರಾತ್ರಿ ಊಟ ಮಾಡದೇ ಮಲಗಿಬಿಟ್ಟ. ಆ ಸಂಕಟ ನನ್ನನ್ನು ಅದೆಷ್ಟು ಗಾಢವಾಗಿ ತಟ್ಟಿತೆಂದರೆ, ಇಡೀ ರಾತ್ರಿ ನಿದ್ದೆಯೇ ಸುಳಿಯಲಿಲ್ಲ.

ಅದಾದ ಬಳಿಕ ಆತ ಎಂದೂ ತಾನು ಬಿಡಿಸಿದ ಚಿತ್ರಗಳನ್ನು ನನಗೆ ತೋರಿಸಲಿಲ್ಲ. ನಾನು ಆ ಮನೆಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ವಾಸವಿದ್ದೆ. ಆದರೂ ಆತನ ಚಿತ್ರಗಳನ್ನು ಹಾಗೆಯೇ ಉಳಿಸಿಕೊಂಡಿದ್ದೆ. ಆ ಚಿತ್ರಗಳನ್ನು ನೋಡಿದಾಗಲೆ ನನ್ನ ಸಣ್ಣತನದ ಪ್ರತಿಬಿಂಬ ನೋಡಿದಂತಾಗುತ್ತಿತ್ತು. ಆ ಮನೆಯ ಮುಂದೆ ಹೋಗುವಾಗಲೆ ಅಯಾಚಿತವಾಗಿ ಆ ಚಿತ್ರಗಳ ಅಲೆಗಳಲ್ಲಿ ತೇಲಿ ಹೋಗುತ್ತಿದ್ದೆ.

ಮೊನ್ನೆ ಆ ಮನೆಯ ಮುಂದೆ ಹೋಗುವಾಗ, ಬಣ್ಣ ಬಳಿಯುತ್ತಿದ್ದುದು ಕಾಣಿಸಿತು. ಆ ಚಿತ್ರಗಳನ್ನೆ ಬಣ್ಣ ನುಂಗಿ ಹಾಕಿತ್ತು. ಮಗ
ಬಿಡಿಸಿದ ಚಿತ್ರಗಳನ್ನೆ ನೆನಪಿಸಿಕೊಂಡೆ. ಮನಸ್ಸು ಯಾಕೋ ಭಾರವಾಯಿತು. ಆ ಚಿತ್ರಗಳಿಗಾಗಿ ಫೋಟೋ ಆಲ್ಬಂ ತಡಕಾಡಿದೆ. ಅದನ್ನು ನೋಡುತ್ತಾ ನೋಡುತ್ತಾ ಅನಿಸಿತು… ಮಗ ಈಗ ದೊಡ್ಡವನಾಗಿದ್ದಾನೆ, ಆದರೆ ನಾನು ಇನ್ನೂ ಕುಬ್ಜನಾಗಿಯೇ ಇದ್ದೇನೆ.

***

ಇಂಗ್ಲೆಂಡಿನ ರಾಣಿ ಬೆಂಗಳೂರಿಗೆ ಬಂದಿದ್ದಳು. ಅವಳನ್ನು ಭೇಟಿ ಮಾಡಿದವರೆಲ್ಲ ಆಕೆಗೆ ಹೂಗುಚ್ಛ ಕೊಟ್ಟಿದ್ದರು. ಅವನ್ನೆ ರಾಣಿ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಕಳಿಸಿಕೊಟ್ಟಿದ್ದಳು. ಅಂದು ವಿಕ್ಟೋರಿಯಾ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ ಅವಳಿದ್ದಳು. ರಾಣಿ ಕಳಿಸಿದ ಗುಲಾಬಿ ಹೂವನ್ನು ಇತರ ರೋಗಿಗಳ ಜತೆಗೆ ಅವಳಿಗೂ ಕೊಟ್ಟಿದ್ದರು. ಅದಾಗಿ ಎರಡು ದಿನಗಳ ನಂತರ ಆಕೆ ಗಂಡು ಮಗುವಿಗೆ ಜನ್ಮ ನೀಡಿದಳು.

ಅದಾಗಿ ಮೂವತ್ತು ವರ್ಷಗಳ ನಂತರ…
ಆಕೆ ತನ್ನ ಮಗನ ಜನ್ಮದಿನದಂದು ಅವನಿಗೆ ಕೊಡಲೆಂದು ಗಿಫ್ಟ್’ಗಳನ್ನು ಪ್ಯಾಕ್ ಮಾಡಿಸಿಕೊಂಡು, ಅವನ ಮನೆಗೆ ಹೋಗಲು ಟ್ಯಾಕ್ಸಿಗಾಗಿ ಕಾಯುತ್ತಿದ್ದಳು. ಸುಮಾರು ಮೂವತ್ತು ವರ್ಷ ವಯಸ್ಸಿನ ಟ್ಯಾಕ್ಸಿ ಡ್ರೈವರ್ ಜೋರಾಗಿ ಬಂದು ನಿಲ್ಲಿಸಿದ. ಆಕೆ ಹೇಳಿದ ವಿಳಾಸಕ್ಕೆ ಬರಲು ಒಪ್ಪಿದ. ಆಕೆ ಟ್ಯಾಕ್ಸಿಯೊಳಗೆ ಹತ್ತಿ ಕುಳಿತುಕೊಂಡಳು. ಆತ ಬಹಳ ವೇಗವಾಗಿ ಟ್ಯಾಕ್ಸಿ ಓಡಿಸುತ್ತಿದ್ದ. ಅದರಿಂದ ಗಾಬರಿಯಾದ ಅವಳು, ‘ಸ್ವಲ್ಪ ನಿಧಾನಕ್ಕೆ ಓಡಿಸಬಾರದೇ? ಇಂದು ನನ್ನ ಮಗನ ಜನ್ಮದಿನ.

ಅವನಿಗಾಗಿ ಕೆಲವು ಉಡುಗೊರೆಗಳನ್ನು ತೆಗೆದುಕೊಂಡಿದ್ದೇನೆ. ಅವುಗಳಲ್ಲಿ ಕೆಲವು ಗಾಜಿನ ಐಟಮ್ಮುಗಳಿವೆ. ನೀವು ಜೋರಾಗಿ ಟ್ಯಾಕ್ಸಿ ಓಡಿಸಿದರೆ ಒಡೆದು ಹೋಗಬಹುದು’ ಎಂದಳು. ‘ಇಂದು ನನ್ನ ಜನ್ಮದಿನವೂ ಹೌದು. ಆದರೆ ಏನು ಮಾಡೋದು? ನನಗೆ ಯಾರೂ ಗಿಫ್ಟ್ ಕೊಡುತ್ತಿಲ್ಲ ನೋಡಿ’ ಎಂದ ಡ್ರೈವರ್. ಅವನ ಮಾತಿನಲ್ಲಿ ಬೇಸರ ಮತ್ತು ಅಸಹನೆಯಿತ್ತು.

ಅವಳು ಅವನ ಜತೆ ಮಾತಾಡಲಾರಂಭಿಸಿದಾಗ, ಆತ ಜೀವನದಲ್ಲಿ ಅನೇಕ ಕಹಿ ಘಟನೆಗಳನ್ನು ಅನುಭವಿಸಿದ್ದು ಗೊತ್ತಾಯಿತು. ಆತನ ಹೆಂಡತಿ ಅವನ್ನು ಬಿಟ್ಟು ಹೋಗಿದ್ದಳು. ಆತ ಜೀವನದಲ್ಲಿ ಜುಗುಪ್ಸೆಗೊಂಡಿದ್ದ. ಅವಳು ಅವನ ವಯಸ್ಸನ್ನು ಕೇಳಿದಳು. ಆತ ಹೇಳಿದ. ‘ಅರೇ, ನೀನು ನನ್ನ ಮಗನ ವಯಸ್ಸಿನವನೇ. ಕಾಕತಾಳೀಯವೆಂಬಂತೆ, ನೀವಿಬ್ಬರೂ ಒಂದೇ ದಿನ ಹುಟ್ಟಿದ್ದೀರಿ ಬೇರೆ. ಅದೆ ಸರಿ, ನೀನು ಹುಟ್ಟಿದ್ದು ಎಲ್ಲಿ?’ ಎಂದು ಕೇಳಿದಳು.

‘ಇನ್ನೆಲ್ಲಿ, ಬೆಂಗಳೂರಿನ’ ಎಂದ. ‘ಯಾವ ಆಸ್ಪತ್ರೆಯಲ್ಲಿ ಎಂಬುದು ಗೊತ್ತಾ?’ ಎಂದು ಕೇಳಿದಳು. ‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ’ ಎಂದ. ಅದಕ್ಕೆ ಅವಳು ಉದ್ವೇಗದಲ್ಲಿ ಹೇಳಿದಳು – ‘ಹಾಗಾದರೆ ನಾನು ಮತ್ತು ನಿನ್ನ ಅಮ್ಮ ಅದೇ ಆಸ್ಪತ್ರೆಯಲ್ಲಿ ಅಕ್ಕಪಕ್ಕದಲ್ಲಿ ದ್ದೆವು.

ಮೂವತ್ತು ವರ್ಷಗಳ ಹಿಂದೆ ಒಂದೇ ದಿನ ನನಗೆ ಮತ್ತು ನಿನ್ನ ಅಮ್ಮನಿಗೆ ಹೆರಿಗೆಯಾಯಿತು. ನನ್ನ ಮಗನ ಜತೆಗೆ ನೀನೂ ಅಂದೇ ಹುಟ್ಟಿರಬೇಕು. ಈ ವಿಷಯವನ್ನು ನಿನ್ನ ಅಮ್ಮ ನಿನಗೆ ಹೇಳಿರಬೇಕಲ್ಲ?’ ಡ್ರೈವರ್ ಟ್ಯಾಕ್ಸಿ ನಿಲ್ಲಿಸಿ, ಆಕೆಯನ್ನೇ ದುರುಗುಟ್ಟಿ
ನೋಡಿದ. ಆತನಿಗೆ ಉಮ್ಮಳಿಸಿ ಬಂದಂತಾಯಿತು. ‘ನಾನು ಹುಟ್ಟಿದ ಕೆಲ ದಿನಗಳಲ್ಲಿ ನನ್ನ ತಾಯಿ ಸತ್ತು ಹೋದಳು’ ಎಂದ.

ಆಕೆ ಸೀಟಿನಿಂದ ಮುಂದೆ ಬಂದು ಅವನ ಭುಜವನ್ನು ಗಟ್ಟಿಯಾಗಿ ಹಿಡಿದುಕೊಂಡಳು. ‘ನೀನು ಹುಟ್ಟಿದ ದಿನ ಆಸ್ಪತ್ರೆಯಲ್ಲಿ ಎಂಥ ವಾತಾವರಣವಿತ್ತು ಎಂಬುದನ್ನು ತಿಳಿದುಕೊಳ್ಳಲು ನಿನಗೆ ಆಸಕ್ತಿಯಿದೆಯಾ? ನನ್ನ ಮಗ ಕೂಡ ಅದನ್ನು ತಿಳಿದು ಕೊಳ್ಳಲು ಇಷ್ಟಪಡಬಹುದು’ ಎಂದಳು. ಆತ ನಿಧಾನವಾಗಿ ಸಾವರಿಸಿಕೊಂಡು ಆಯಿತು ಎಂದ. ಆಕೆ ಹೇಳಿದಳು – ‘ಅಂದು ರಸ್ತೆ ಜನಜಂಗುಳಿಯಿಂದ ತುಂಬಿತ್ತು. ಇಂಗ್ಲೆಂಡ್ ರಾಣಿಯ ಆಗಮನಕ್ಕಾಗಿ ಕಾಯುತ್ತಿದ್ದ ಜನ ಉತ್ಸಾಹಭರಿತರಾಗಿದ್ದರು.

ಡ್ಯೂಟಿಗೆ ಬರಬೇಕಿದ್ದ ವೈದ್ಯರು ಜನಜಂಗುಳಿಯಲ್ಲಿ ಸಿಕ್ಕಿಹಾಕಿಕೊಂಡು ಆಸ್ಪತ್ರೆಗೆ ಬರಲು ಆಗದೇ ತೊಂದರೆಯಾಯಿತು ಎಂದು
ನಾನು ಅಂದು ಕೇಳಿz. ಪ್ರಾಯಶಃ ಇದರಿಂದ ನಿನ್ನ ತಾಯಿಗೆ ಸಮಸ್ಯೆಯಾಗಿರಬೇಕು.’ ಆತ ಗಕ್ಕನೆ ಕಾರನ್ನು ನಿಲ್ಲಿಸಿ, ಹಿಂತಿರುಗಿ ನೋಡಿದ. ಆಕೆಯ ಕಂಗಳಲ್ಲಿ ನೀರು ತುಂಬಿದ್ದನ್ನು ಗಮನಿಸಿದ ಆತ ಹೇಳಿದ – ‘ನನ್ನ ತಾಯಿ ಸದಾ ವಿಷ್ಣು ಸಹಸ್ರನಾಮ ಮತ್ತು
ಭಗವದ್ಗೀತೆ ಪುಸ್ತಕಗಳನ್ನು ಇಟ್ಟುಕೊಂಡಿರುತ್ತಿದ್ದಳು. ಆದರೆ ಅವೆರಡು ಪುಸ್ತಕಗಳಲ್ಲಿ ಬಾಡಿದ ಗುಲಾಬಿಯ ಪಕಳೆಗಳು
ಯಾಕೆ ಇವೆ ಎಂಬುದು ಗೊತ್ತಾಗಿರಲಿಲ್ಲ.’

ಇಬ್ಬರ ಕಣ್ಣಾಲಿಗಳು ತೇವಗೊಂಡಿದ್ದವು. ‘ನನ್ನ ಪಾಲಿಗೆ ನೀವೇ ಅಮ್ಮ. ನಾನು ನನ್ನ ಅಮ್ಮನನ್ನು ನೋಡಿಲ್ಲ. ನೀವು ಆಕೆಯನ್ನು ನೋಡಿದ್ದೀರಿ. ದಯವಿಟ್ಟು ಹೇಳಿ, ನನ್ನ ಅಮ್ಮ ಹೇಗಿದ್ದಳು ? ನೀವು ಅವಳ ಜತೆ ಮಾತಾಡಿದೀರಾ? ಏನೆಂದಳು? ನಾನು ಅವಳಂತೆ ಇದ್ದೇನಾ? ಪ್ಲೀಸ್ ಹೇಳಿ..ಹೇಳಿ..!’ ಆಕೆ ಬಿಕ್ಕುತ್ತಿದ್ದಳು.

***

ನಾನು ಚಿಕ್ಕವಳಿದ್ದಾಗ, ನನ್ನ ಅಪ್ಪ ಏನಾದರೂ ಕೆಲಸ ಮಾಡುವಾಗ ನನ್ನನ್ನು ಕರೆಯುತ್ತಿದ್ದ. ನಾನು ಸುತ್ತಿಗೆ (ಹ್ಯಾಮರ್), ಮೊಳೆ .. ಹೀಗೆ ಏನನ್ನಾದರೂ ಹಿಡಿದುಕೊಳ್ಳಬೇಕಿತ್ತು. ಆ ಸಂದರ್ಭದಲ್ಲಿ ಇಬ್ಬರೂ ಮಾತಾಡುತ್ತಿದ್ದೆವು. ನನ್ನ ಜತೆ ಅಪ್ಪ ಹೆಚ್ಚು
ಮಾತಾಡುತ್ತಿದ್ದುದೇ ಆ ಸಂದರ್ಭದಲ್ಲಿ. ಆತನ ಪ್ರತಿ ಕೆಲಸದಲ್ಲೂ ಆತ ಸಾಧ್ಯವಾದಷ್ಟು ನನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ನನಗೆ ಲೇಸ್, ಟೈ ಕಟ್ಟಲು ಕಲಿಸಿದ್ದೇ ಆತ. ಆತನೇ ನನ್ನ ಕೂದಲು ಬಾಚುತ್ತಿದ್ದ. ಸಾಕ್ಸನ್ನು ಸುಲಭವಾಗಿ ಹೇಗೆ ಧರಿಸಬೇಕು ಎಂದು ಕಲಿಸಿದವನೂ ಅವನೇ.

ನಾನು ದೊಡ್ಡವಳಾದಂತೆ, ಊರು ಬಿಟ್ಟೆ. ಹಾಸ್ಟೆಲ್ ಸೇರಿದೆ. ಪ್ರತಿ ಭಾನುವಾರ ಅಪ್ಪ ನನಗೆ ಫೋನ್ ಮಾಡುತ್ತಿದ್ದ. ಆತನಿಗೆ ಮಾತಾಡಲು ಆಸೆ. ಆದರೆ ನನಗೆ ಸಮಯ ಇರುತ್ತಿರಲಿಲ್ಲ. ನನಗೆ ಮದುವೆಯಾಯಿತು. ಒಳ್ಳೆಯ ಕೆಲಸ ಸಿಕ್ಕಿತು. ನಾನು ಮನೆ ಖರೀದಿಸಿದೆ. ಅಪ್ಪನೇ ಬಂದು ಮನೆಯ ಪೇಯಿಂಟ್ ಮಾಡಿದ. ನನ್ನ ಮತ್ತು ಅವನ ಫೋಟೋ ನೇತು ಹಾಕಲು ಗೋಡೆಗೆ ಮೊಳೆ ಹೊಡೆದ. ಆಗ ಸುತ್ತಿಗೆ (ಹ್ಯಾಮರ್) ಹಿಡಿದುಕೊಳ್ಳಲು ಕರೆದ.

ಆದರೆ ನನಗೋ, ವಿಪರೀತ ಕೆಲಸ. ನಾನು ಯಾವುದೋ ಮುಖ್ಯವಾದ ಟೆಲಿಫೋನ್ ಕಾಲ್‌ನಲ್ಲಿ ಇರುತ್ತಿ. ‘ಸಾರಿ ಅಪ್ಪ, ನನಗೆ
ಬೇರೆ ಕೆಲಸವಿದೆ’ ಎಂದು ಹೇಳುತ್ತಿದ್ದೆ. ಎರಡು ವರ್ಷಗಳ ಹಿಂದೆ ಅಪ್ಪ ನನ್ನ ಮನೆಗೆ ಬಂದಿದ್ದ. ಆತನೇ ನನ್ನ ಮಗಳಿಗೆ ಜೋಕಾಲಿಯನ್ನು ಕಟ್ಟಿದ್ದ. ನನ್ನ ಮಗಳಿಗೆ ಅದು ಬಹಳ ಇಷ್ಟವಾಗಿತ್ತು. ಅವರಿಬ್ಬರೂ ಆಡುವುದನ್ನು ನಾನು ಮಹಡಿಯಿಂದ ನೋಡಿ ಆನಂದಿಸುತ್ತಿದ್ದೆ. ಆದರೆ ನನಗೆ ಅವರಿಬ್ಬರನ್ನು ಸೇರಿಕೊಳ್ಳಲು ಆಗುತ್ತಿರಲಿಲ್ಲ. ಆಫೀಸಿನ ಕೆಲಸದಲ್ಲಿ, ಪರ್ವ ಪಾಯಿಂಟ್
ಪ್ರಸೆಂಟೇಷನ್ ಸಿದ್ಧತೆಯಲ್ಲಿ ತಲ್ಲೀನನಾಗಿರುತ್ತಿದ್ದೆ. ಅಪ್ಪ ಪದೇ ಪದೆ ಕರೆಯುತ್ತಿದ್ದ.

ಒಂದು ಸಲವಂತೂ, ‘ಮಗಳೇ, ಕಾಫಿ ಮಾಡಿಕೊಂಡು ಬಾರಮ್ಮ, ಇಬ್ಬರೂ ಕಾಫಿ ಕುಡಿಯುತ್ತಾ ಹರಟೆ ಹೊಡೆಯೋಣ’ ಎಂದು ಹೇಳಿದ್ದ. ಅವನ ಜತೆ ಅಷ್ಟು ಸಮಯವನ್ನೂ ಕೊಡಲು ಆಗುತ್ತಿರಲಿಲ್ಲ. ‘ಹಾಗಾದರೆ ನೀನೇ ನನ್ನನ್ನು ಏರ್ ಪೋರ್ಟಿಗೆ ಡ್ರಾಪ್
ಮಾಡಬೇಕು. ಆಗಲಾದರೂ ನಾನು ನಿನ್ನ ಜತೆಗೆ ಒಂದು ಗಂಟೆ ಮಾತಾಡುತ್ತಾ ಹೋಗಬಹುದು’ ಎಂದು ಹೇಳಿದಾಗ ಇಲ್ಲವೆನ್ನ ಲಾಗಲಿಲ್ಲ. ಆದರೆ ಕಾರನ್ನು ಏರುತ್ತಿದ್ದಂತೆ, ಆಫೀಸಿನಿಂದ ಬಾಸ್ ಕರೆ ಬಂತು. ಬಾಸ್ ಹತ್ತಾರು ಕೆಲಸ ಒಪ್ಪಿಸಿದ. ಏರ್ ಪೋರ್ಟ್ ತಲುಪುವ ತನಕವೂ ಅಪ್ಪನ ಜತೆಗೆ ಮಾತಾಡಲು ಆಗಲೇ ಇಲ್ಲ.

ನಾಲ್ಕು ಗಂಟೆ ಬಳಿಕ, ಅಪ್ಪ ಮನೆ ತಲುಪಿರಬಹುದಾ ಎಂದು ತಿಳಿಯಲು ಎಂದು ಫೋನ್ ಮಾಡಿದೆ. ಫೋನ್ ಎತ್ತಲಿಲ್ಲ. ಹತ್ತಾರು ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮನೆಯಲ್ಲಿದ್ದ ಕೆಲಸದವಳಿಗೆ ಫೋನ್ ಮಾಡಿದೆ. ಅವಳ ಫೋನ್ ಸ್ವಿಚ್ ಆಫ್  ಆಗಿತ್ತು. ಒಂದು ಗಂಟೆಯ ನಂತರ, ಪಕ್ಕದ ಮನೆಯವರು ಫೋನ್ ಮಾಡಿ, ಅಪ್ಪ ಹೃದಯಾಘಾತದಿಂದ ಸತ್ತ ಸುದ್ದಿ ಹೇಳಿದರು. ನನ್ನ ಬಗ್ಗೆ ನನಗೆ ಅತೀವ ಅಸಹ್ಯ ಎನಿಸಿತು.

ನನ್ನ ಸರ್ವಸ್ವವೇ ಆಗಿದ್ದ ಅಪ್ಪನ ಬಗ್ಗೆ ನಾನು ತಿಳಿದುಕೊಂಡಿದ್ದು ಎಷ್ಟು ಕಡಿಮೆ ಎಂದು ಈಗಲೂ ಅನಿಸುತ್ತಿದೆ. ಆತನ ನಿಧನದ ನಂತರವೇ ಅವನ ಬಗ್ಗೆ ನಾನು ಹೆಚ್ಚು ಹೆಚ್ಚು ತಿಳಿದುಕೊಂಡಿದ್ದು. ಅವನಿಗೆ ನಾನು ಪಕ್ಕದಲ್ಲಿಯೇ ಇರಬೇಕಿತ್ತು. ಆತ ಅಷ್ಟಕ್ಕೂ ಕೇಳಿದ್ದು ನನ್ನ ಕೆಲವು ಸಮಯವನ್ನು. ಈಗ ನಾನು ನನ್ನ ಸಮಯವನ್ನೆ ಅವನ ನೆನಪಿನಲ್ಲಿ ಕಳೆಯುತ್ತಿದ್ದೇನೆ. ಆದರೆ ನಾನು ಕಳೆದುಕೊಂಡಿದ್ದು ಏನು ಎಂಬುದು ಅರ್ಥವಾಗುತ್ತಿದೆ. ಬೇರೆಯವರ ಅಭಿಪ್ರಾಯವನ್ನೆ ಸಂಗ್ರಹಿಸಿ ಅಪ್ಪನ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ, ಒಂದು ವರ್ಷ ರಜಾ ಹಾಕಿ!

***
ಆತ ಕಾರನ್ನು ಓಡಿಸಿಕೊಂಡು ಹೋಗುತ್ತಿದ್ದ. ರಸ್ತೆಯ ಪಕ್ಕದಲ್ಲಿ ಒಬ್ಬ ಯುವತಿ ಬೆಂಜ್ ಕಾರನ್ನು ನಿಲ್ಲಿಸಿಕೊಂಡು ಕೈ
ಬೀಸುತ್ತಿದ್ದಳು. ಯಾರೂ ಅವಳ ಕಡೆಗೆ ಗಮನಹರಿಸದೇ ವೇಗವಾಗಿ ವಾಹನದಲ್ಲಿ ಹೋಗುತ್ತಿದ್ದರು. ಆತ ಹೋಗಿ ಕಾರನ್ನು ನಿಲ್ಲಿಸಿದ. ಆತನ ವೇಷ, ರೂಪ ನೋಡಿ, ಯುವತಿಗೆ ಹೆದರಿಕೆಯಾಯಿತು.

‘ಗಾಬರಿಯಾಗಬೇಡಿ, ನಾನು ನಿಮ್ಮ ಸಹಾಯಕ್ಕಾಗಿ ಬಂದಿದ್ದೇನೆ’ ಎಂದ. ಆಕೆ ಅನುಮಾನದಿಂದಲೇ, ‘ನನ್ನ ಕಾರು ಪಂಕ್ಚರ್ ಆಗಿದೆ. ಸಹಾಯ ಮಾಡುತ್ತೀರಾ?’ ಎಂದಳು. ಆತ ಅವಳ ಕಾರಿನ ಟೈರನ್ನು ತೆಗೆದು ಹೊಸ ಟೈರ್ ಹಾಕಿದ. ಅವನ ಕೈ ಕೊಳೆಯಾಗಿತ್ತು. ಆಕೆಗೆ ಬಹಳ ಖುಷಿಯಾಯಿತು. ‘ನಿಮ್ಮ ಸಹಾಯಕ್ಕೆ ಧನ್ಯವಾದಗಳು. ಇದಕ್ಕಾಗಿ ನಾನು ಎಷ್ಟು ಹಣ
ಕೊಡಬೇಕು?’ ಎಂದು ಕೇಳಿದಳು.

ಅದಕ್ಕೆ ಆತ, ‘ನಿಮಗೆ ನಿಜಕ್ಕೂ ನನಗೆ ಹಣ ಕೊಡಲೇಬೇಕು ಎಂದು ಅನಿಸಿದರೆ, ಯಾರಾದರೂ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿ. ಆಗ ನನ್ನನು ನೆನಪು ಮಾಡಿಕೊಳ್ಳಿ. ಅಂದ ಹಾಗೆ ನನ್ನ ಹೆಸರು ಪಿ.ಜನಾರ್ಧನ್ ಅರ್ಥಾತ್ ಪ್ರೀತಿಯ ಜನಾರ್ಧನ್’ ಎಂದು ಹೇಳಿ, ಕೈ ಬೀಸುತ್ತಾ ಕಾರನ್ನೇರಿ ಹೊರಟು ಹೋದ.

ಅದೇ ದಿನ ಆ ಯುವತಿ ಒಂದು ಕೆಫೆಗೆ ಹೋದಳು. ಅಲ್ಲಿ ವಿಪರೀತ ಜನಜಂಗುಳಿ. ಆಕೆಗೆ ವಿಪರೀತ ಹಸಿವಾಗಿತ್ತು. ಮಧ್ಯಾಹ್ನ ಬೇರೆ ಕಾರು ಪಂಕ್ಚರ್ ಆಗಿ ತಲೆಕೆಟ್ಟು ಬಳಲಿದ್ದಳು. ಅಬ್ಬಳು ಎಂಟು ತಿಂಗಳು ತುಂಬಿದ ವೆಟ್ರೆಸ್ ಬೆವರು ಒರೆಸಿಕೊಳ್ಳುತ್ತ ಸರ್ವ್ ಮಾಡುತ್ತಿದ್ದಳು. ಅವಳು ಬಳಲಿದ್ದರೂ, ನಗುಮೊಗದಿಂದ ಮಾತಾಡಿಸುತ್ತಿದ್ದಳು. ಆ ಬಸುರಿ ವೆಟ್ರೆಸ್ ಈ ಯುವತಿಗೆ ಪ್ರೀತಿಯಿಂದ ಬಡಿಸಿದಳು. ಅವಳ ವರ್ತನೆ ನೋಡಿ ಯುವತಿಗೆ ಖುಷಿಯಾಯಿತು.

ಊಟವಾದ ನಂತರ ಬಿಲ್ ತಂದಿಟ್ಟಳು. ಒಂದು ಸಾವಿರ ರುಪಾಯಿ ಆಗಿತ್ತು. ಆಗ ಅವಳಿಗೆ ಯಾಕೋ ಪ್ರೀತಿಯ ಜನಾರ್ಧನ್ ನೆನಪಾಯಿತು. ಆ ಯುವತಿ ಟಿಶ್ಯೂ ಕಾಗದ ಮೇಲೆ ‘ನನಗೆ ಇಂದು ಯಾರೋ ಸಹಾಯ ಮಾಡಿದರು. ಆ ಪುಣ್ಯಾತ್ಮ ಹಣ
ತೆಗೆದುಕೊಳ್ಳಲಿಲ್ಲ. ನೀನು ಯಾರೋ ಗೊತ್ತಿಲ್ಲ, ತುಂಬು ಗರ್ಭಿಣಿಯಾದರೂ, ಪ್ರೀತಿಯಿಂದ ಬಡಿಸಿದೆ. ಆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನೀನು ಬಡಿಸುವಾಗ ತೀರಿಹೋದ ನನ್ನ ಅಮ್ಮನ ನೆನಪಾಯಿತು’ ಎಂದು ಬರೆದು, ಒಂದು ಸಾವಿರ ಬಿಲ್ ಹಣ ಮತ್ತು ಐದು ಸಾವಿರ ರುಪಾಯಿ ಟಿಪ್ಸ್ ಇಟ್ಟು ಹೊರಟು ಹೋದಳು.

ಆ ದಿನ ಆ ವೆಟ್ರೆಸ್ ತುಸು ಬೇಗ ಮನೆಗೆ ಬಂದಳು. ಆ ಯುವತಿಯ ಬಗ್ಗೆ ಮತ್ತು ಅವಳು ಬರೆದ ಕಾಗದದ ಬಗ್ಗೆ ಯೋಚಿಸುತ್ತಿದ್ದಳು. ನನಗೆ ಹಣದ ಅಗತ್ಯವಿದೆ ಎಂದು ಆ ಯುವತಿಗೆ ಹೇಗೆ ಗೊತ್ತಾಯಿತು, ಇಂದು ಡಾಕ್ಟರರ ಹತ್ತಿರ ಹೋಗಬೇಕಿದೆ, ಹಣ ಹೇಗೆ
ಹೊಂದಿಸುವುದು ಎಂದು ಯೋಚಿಸುತ್ತಿದ್ದೆ, ಈ ಯುವತಿ ದೇವರ ಹಾಗೆ ಬಂದಳಲ್ಲ ಎಂದು ಅಂದುಕೊಳ್ಳುತ್ತಿರುವಾಗ, ಅವಳ ಗಂಡ ಬರುತ್ತಿರುವುದು ಕಾಣಿಸಿತು. ‘ನಿಮಗೊಂದು ಗುಡ್ ನ್ಯೂಸ್. ಇಂದಿನ ಡಾಕ್ಟರ್ ಫೀಸಿಗೆ ಹಣ ವ್ಯವಸ್ಥೆಯಾಗಿದೆ, ದೇವರು ದೊಡ್ಡವನು ಮಿಸ್ಟರ್ ಜನಾರ್ಧನ್, ಮೈ ಲವ್’ ಎಂದಳು.