Thursday, 12th December 2024

ಕ್ಯಾಥೋಲಿಕ್ ಚರ್ಚಿನ ಕಪ್ಪು ಇತಿಹಾಸ

ಶಿಶಿರ ಕಾಲ

ಶಿಶಿರ ಹೆಗಡೆ

shishirh@gmail.com

ಅವರು ಕೆನಡಾದ ಮೂಲನಿವಾಸಿಗಳು. ಅದೆಷ್ಟು ಸಾವಿರ ವರ್ಷದಿಂದ ಅಲ್ಲಿದ್ದರು, ಎಲ್ಲಿಂದ ಅಲ್ಲಿಗೆ ಬಂದವರು ಅದೆಲ್ಲ ಅಪ್ರಸ್ತುತ. ಮೂಲನಿವಾಸಿಗಳು- ಅಷ್ಟೆ. ಅದು ಅವರ ನೆಲವಾಗಿತ್ತು. ಅಲ್ಲಿ ಹೊರಗಿಂದ ಬಂದು ವಕ್ಕರಿಸಿಕೊಂಡವರು ಯುರೋ ಪಿಯನ್ನರು- ಮೊದಲು ಫ್ರೆಂಚರು. ಕೆನಡಾ ವಿಸ್ತೀರ್ಣದಲ್ಲಿ ರಷ್ಯಾ ಬಿಟ್ಟರೆ ಎರಡನೇ ವಿಶಾಲ ದೇಶ. ಆದರೆ ಅಲ್ಲಿ ವಾಸಯೋಗ್ಯ ಸ್ಥಳ ತೀರಾ ಕಡಿಮೆ, ಚಿಕ್ಕದು. ಇಂದಿಗೂ ಕೆನಡಾದ ಜನಸಂಖ್ಯೆಯೆಲ್ಲ ಬದುಕುವುದು ಅಮೆರಿಕಕ್ಕೆ ತಾಕಿಕೊಂಡ ತೀರಾ ಚಿಕ್ಕ ಭೂಭಾಗದಲ್ಲಿ.

ರಷ್ಯಾದಂತೆ ಇಲ್ಲಿಯೂ ಜನರೇ ಇರದ ನೆಲವೇ ದೊಡ್ಡದು- ಏಕೆಂದರೆ ಅಲ್ಲ ಹಿಮ, ಚಳಿ. ಹದಿನೇಳನೆ ಶತಮಾನದವರೆಗೆ ಅಲ್ಲಿದ್ದ ವರೆಲ್ಲ ಮೂಲನಿವಾಸಿಗಳೇ. ನಂತರ ಬಂದು ಅಲ್ಲಿನ ನೆಲವನ್ನೇ ಹೊಸ ಫ್ರಾನ್ಸ್ ಎಂದು ಕರೆದವರು ಫ್ರೆಂಚರು. ಫ್ರೆಂಚರು ಮೊದಲು ಒತ್ತುವರಿ ಮಾಡಿಕೊಂಡದ್ದು ಕೆನಡಾದ ದಕ್ಷಿಣದ ಸ್ವಲ್ಪ ಬೆಚ್ಚಗಿರುವ ಪ್ರದೇಶವನ್ನು. ಒತ್ತುವರಿಯ ಸಮಯದಲ್ಲಿ ಹೊಡೆದಾಟ, ದೌರ್ಜನ್ಯಗಳೆಲ್ಲ ನಡೆದವು. ಇದರಿಂದಾಗಿ ಅಲ್ಲಿನ ಮೂಲ ನಿವಾಸಿಗಳು ಊರಾಚೆ, ಉತ್ತರಕ್ಕೆ ಕಾಡಿನಲ್ಲಿ ದೂರ ದಲ್ಲಿ ತಮ್ಮಷ್ಟಕ್ಕೆ ತಾವು ಬದುಕತೊಡಗಿದರು.

ಆದರೆ ಕಾಲ ಕಳೆದಂತೆ ಫ್ರೆಂಚರಿಗೆ ಈ ಮೂಲನಿವಾಸಿಗಳ ಕಾಡಿನ ಮೇಲೆ ಕಣ್ಣು ಬಿತ್ತು. ಕಾಡಿನ ಮರ, ಅರಣ್ಯ ಸಂಪತ್ತು, ಅಲ್ಲಿನ ಖನಿಜ, ನೀರು, ನೆಲ ಎಲ್ಲವೂ ಪಡೆಯುವ ಹುನ್ನಾರ ಆಗ ಶುರುವಾಯ್ತು. ಅಂದು ಅಲ್ಲಿನ ಮೂಲನಿವಾಸಿಗಳು ಅಂದಿನ ಭಾರತ ದಂತೆ ಮುಂದುವರಿದವರು, ರಾಜ್ಯಕಟ್ಟಿಕೊಂಡವರಲ್ಲ. ಅವರದು ಬುಡಕಟ್ಟು ಜೀವನ. ಪ್ರಕೃತಿಯಲ್ಲಿ ಒಂದಾಗಿ ಬದುಕುತ್ತಿದ್ದ ವರು. ಹಕ್ಕಿಪುಕ್ಕಗಳನ್ನು ತಲೆಗೆ ಸಿಕ್ಕಿಸಿಕೊಂಡು, ಮೈ ಕೈಗೆ ಮಚ್ಛೆ ಹಾಕಿಕೊಂಡು, ತಮ್ಮಷ್ಟಕ್ಕೆ ಹಾಡುಕಟ್ಟಿಕೊಂಡು, ಎಲೆ ಚಿಗುರುವಾಗ ಹಬ್ಬ ಮಾಡಿಕೊಂಡು, ಕುಣಿಯುತ್ತ, ಹೀಗೆ. ಕಾಡು ಮೃಗಗಳನ್ನು ತಿನ್ನಲಿಕ್ಕೆ ಬೇಟೆಯಾಡಿದರೂ ಅದನ್ನು ಪೂಜಿಸಿ, ದೈವಕ್ಕೊಂದು ಪಾಲು ಬಿಟ್ಟು, ಕೊಂದ ಪ್ರಾಣಿಯ ಕ್ಷಮೆಯಾಚಿಸುವ ಮುಗ್ಧತೆಯುಳ್ಳವರು ಅವರು.

ಅವರಿಗೆ ಅಸೂಯೆ, ದ್ವೇಷಗಳ ಅಂದಾಜೇ ಇರದ ಬದುಕೇ ಧರ್ಮ, ಸತ್ಯ ಎಲ್ಲವೂ. ಅವರದು ಕೂಡ ಒಂದು ರೀತಿಯಲ್ಲಿ ಸನಾತನ ಧರ್ಮವೇ. ಅವರ ಧರ್ಮವೆಂದರೆ ಪರಿಸರದ ಜತೆ ಪ್ರೀತಿಯಿಂದ, ಪರಸ್ಪರ ಗೌರವಿಸಿಕೊಂಡು ಬದುಕುತ್ತಿದ್ದ ಬದುಕು. ಭಾರತದಂತೆ ಅಬ್ಬ ರಾಜ- ಆಸ್ಥಾನ- ಸೈನ್ಯವಿದ್ದರೆ ಫ್ರೆಂಚರು ಯುದ್ಧಕ್ಕೆ ಹೋಗಬಹುದಿತ್ತು. ಹಾಗೆ ಐಶ್ವರ್ಯ ಕೊಳ್ಳೆ ಹೊಡೆಯ ಬಹುದಿತ್ತು. ಆದರೆ ಈ ಮೂಲನಿವಾಸಿಗಳಲ್ಲಿ ಆ ರೀತಿಯ ಯಾವುದೇ ಸಂಪತ್ತಿರಲಿಲ್ಲ. ಇವರ ಬಳಿ ಇದ್ದದ್ದು ಅವರ ಸುತ್ತಲಿನ
ಪರಿಸರವೆಂಬ ಅನನ್ಯ ಸಂಪತ್ತು ಮಾತ್ರ.

ಫ್ರೆಂಚರಿಗೆ ಅದರ ಮೇಲೆಯೇ ಕಣ್ಣು- ಆದರೆ ಪಡೆಯುವುದು ಹೇಗೆ? ಅದಕ್ಕೆ ಅವರು ಅಂದು ಆರಿಸಿಕೊಂಡದ್ದು ಹೊಸ ಮಾರ್ಗ. ಇಲ್ಲಿ ಫ್ರೆಂಚರು ಎಂದರೆ ಫ್ರೆಂಚ್ ಆಡಳಿತ ಮತ್ತು ಕ್ಯಾಥೋಲಿಕ್ ಚರ್ಚ್ ಎಂದು ಓದಿಕೊಳ್ಳಬೇಕು. ಸರಕಾರಕ್ಕೆ ಅವರ ಸಂಪತ್ತು
ಬೇಕು- ಚರ್ಚಿಗೆ ಮತಾಂತರ- ಅವರೆಲ್ಲ ಕ್ರಿಶ್ಚನ್ನರಾಗಬೇಕು. ಇವರಿಬ್ಬರು ಸೇರಿಕೊಂಡು ಒಂದು ಖತರ್ನಾಕ್ ಪ್ಲಾನ್ ಮಾಡಿದರು. ಅದುವೇ ಮೂಲನಿವಾಸಿ ಮಕ್ಕಳಿಗೆ ವಸತಿ ಶಾಲೆ. ಇದೇನಪ್ಪಾ ಎಂದರೆ, ಮೂಲ ನಿವಾಸಿಗಳ ಮಕ್ಕಳನ್ನು ಚರ್ಚ್‌ನ ಪ್ರತ್ಯೇಕ ವಸತಿ ಶಾಲೆಗೆ ಸೇರಿಸಿಕೊಳ್ಳುವುದು, ಅವರನ್ನು ಆ ಮೂಲಕ ಯುರೋಪಿಯನ್ನರಾಗಿ, ಅವರಂತೆ ಬಟ್ಟೆ, ಮಾತು, ನಡೆ, ಎಲ್ಲ ವನ್ನು ಕಲಿಸುವುದು, ಕ್ರಿಶ್ಚಿಯನ್ನರ ನ್ನಾಗಿಸಿಬಿಡುವುದು. ಇದು ಒಂದೆರಡು ತಲೆಮಾರು ಮಾಡಿ ಬಿಟ್ಟರೆ ಅವರ ಕ್ಯಾಥೋಲಿಕ್ ರೆಲಿಜಿಯನ್ ಹರಡಿದಂತೆ ಮತ್ತು ಅದರ ಜೊತೆ ನೆಲದಿಂದ ಅವರನ್ನು ಬೇರ್ಪಡಿಸಿ, ನೆಲದ ಜೊತೆ ಬದುಕುವವರ ಸಂಖ್ಯೆ ಕ್ಷೀಣಿಸು ವಂತೆ ಮಾಡಿದಂತಾಗುತ್ತದೆ. ಇದರಿಂದ ಅವರನ್ನವರಿಸಿದ ಅರಣ್ಯ ಸಂಪತ್ತು ಇವರದ್ದಾಗುತ್ತದೆ. ಇದೊಂದು ತೀರಾ ಲೆಕ್ಕಾಚಾರದ Ethnic Cleansing.

ಅವರನ್ನು ಫ್ರೆಂಚರು ಕರೆಯುತ್ತಿದ್ದುದು ಇಂಡಿಯನ್ಸ್ ಎಂದು. ಅದೇನು ಅವರ ಹೆಸರಲ್ಲ. ಅವರಿಗೆ ಫ್ರೆಂಚರಿಟ್ಟ ಹೆಸರು. ಅವರಿಗೆ ಹೆಸರಿರಲಿಲ್ಲ- ಅವಶ್ಯಕತೆಯೂ ಇರಲಿಲ್ಲ. ಈ ಇಂಡಿಯನ್ನರ / ಮೂಲನಿವಾಸಿಗಳ ಜನಾಂಗವನ್ನು ತೊಳೆಯಲು ಅಲ್ಲಿನ ಸರಕಾರ – ಚರ್ಚನ್ನು ಒಡಗೂಡಿ ಕೆನಡಿಯನ್ ಡಿಪಾರ್ಟ್ಮೆಂಟ್ ಆಫ್ ಇಂಡಿಯನ್ ಅಫೇರ್ಸ್ ಎನ್ನುವ ಒಂದು ಸರಕಾರಿ ಅಂಗ ವನ್ನು 1870ರಲ್ಲಿ ತೆರೆಯಿತು.

ಅದು ಮೇಲ್ನೋಟಕ್ಕೆ, ಉಳಿದ ಫ್ರೆಂಚ್ ಸಾಮಾನ್ಯರಿಗೆ ಈ ಅನಾಗರೀಕ (!) ಬುಡಕಟ್ಟಿನವರನ್ನು ಶಿಕ್ಷಿತರನ್ನಾಗಿಸಿ, ತಮ್ಮ
ಜತೆಯಬ್ಬರಂತೆ ಬದುಕುವಂತೆ ಮಾಡುವುದು, ಅವರನ್ನು ಕಷ್ಟ ಕಾರ್ಪಣ್ಯದಿಂದ ಮೇಲಕ್ಕೆತ್ತುವುದು. ಎಲ್ಲ ಪ್ಲಾನ್ ತಯಾರಾ ಯಿತು. ಚರ್ಚ್ ಒಂದು ರೆಸಿಡೆನ್ಷಿಯಲ್ ಶಾಲೆ ಮಾಡಿ, ಅಲ್ಲಿ ಅವರನ್ನೆಲ್ಲ ಸುಶಿಕ್ಷಿತರನ್ನಾಗಿಸುವುದಾಗಿ ಪ್ರಚಾರವಾಯಿತು. ಇದಕ್ಕಾಗಿ ಫ್ರೆಂಚ್ ಶ್ರೀಮಂತ ವ್ಯಾಪಾರಿಗಳು ಚರ್ಚಿನ ಮಾತಾಗಿದ್ದರಿಂದ, ನಂಬಿಕೊಂಡು ಈ ಒಂದು ಅನನ್ಯ ಪುಣ್ಯ ಕಾರ್ಯಕ್ಕೆ ಯೆಥೇಚ್ಛ ಹಣವನ್ನೂ ಕೊಟ್ಟರು. ವಸತಿ ಶಾಲೆ ಏನೋ ತಯಾರಾಯಿತು, ಆದರೆ ಈ ಮೂಲನಿವಾಸಿಗಳಿಗೆ ಇದೆಲ್ಲ ಬೇಡವಿತ್ತು, ಅವರು ಒಪ್ಪಲಿಲ್ಲ.

ಅವರಿಗೆ ಅವರ ಬದುಕೇ ಚೆನ್ನಾಗಿತ್ತು- ಅದರನೂ ಕೊರತೆಯಿರಲಿಲ್ಲ. ಯಾವುದೇ ಆಮಿಷಕ್ಕೆ ಒಳಗಾಗಿ ಮಕ್ಕಳನ್ನು ಈ ವಸತಿ ಶಾಲೆಗೆ ಸೇರಿಸಲಿಲ್ಲ. ಅವರಿಗೇಕೆ ಬೇಕಿತ್ತು ಇವೆಲ್ಲ, ಸುಖವಾಗಿಯೇ ಇದ್ದರು. ಆಗ ಫ್ರೆಂಚ್ ಸರಕಾರ ಮತ್ತು ಕ್ಯಾಥೋಲಿಕ್ ಚರ್ಚ್
ನಿಧಾನಕ್ಕೆ ಫೀಲ್ಡಿಗಿಳಿಯಿತು. ಗಾಡಿಗಳ ಮೇಲೆ ಈ ಮೂಲನಿವಾಸಿಗಳಿರುವ ಸುತ್ತಮುತ್ತಲು ಹೋಗುವುದು ಮತ್ತು ಅಲ್ಲಿ ಆಡಿ ಕೊಂಡಿದ್ದ ಮಕ್ಕಳನ್ನು ಚಾಕಲೇಟು ಕೊಟ್ಟು, ಐಸ್ ಕ್ರೀಮ್ ಕೊಡಿಸುತ್ತೇನೆಂದು ಗಾಡಿಯಲ್ಲಿ ಹತ್ತಿಸಿಕೊಳ್ಳುವುದು. ಸ್ವಲ್ಪ ದೂರಕ್ಕೆ ಹೋಗಿ ಅಂಗಡಿಯಲ್ಲಿ ಇನ್ನೊಂದು ಐಸ್ಕ್ರೀಮ್ ಕೊಡಿಸುವುದು. ಅಲ್ಲಿಂದ ವಾಪಾಸ್ ಅವರ ಮನೆ- ನೆಲಕ್ಕೆ ಬಿಡುತ್ತಾ ರೆಂದು ಮಕ್ಕಳು ಅಂದುಕೊಳ್ಳುತ್ತಿದ್ದರು. ಗಾಡಿ ಇನ್ನೊಂದು ದಿಕ್ಕಿನಲ್ಲಿ ಹೊರಡುತ್ತಿತ್ತು.

ಅಲ್ಲಿಂದ ದಿನವಿಡೀ ಅವರ ಪ್ರಯಾಣ. ಮಕ್ಕಳು ಮಾರ್ಗದಲ್ಲಿ ನಿದ್ರೆಗೆ ಜಾರುತ್ತಿದ್ದರು. ಸಂಜೆಯಾಗುವಾಗ ಎದ್ದು ನೋಡಿದರೆ ಅವರು ಈ ವಸತಿಶಾಲೆಯಲ್ಲಿರುತ್ತಿದ್ದರು. ನಿನ್ನೆಯವರೆಗೆ ಸ್ವಚ್ಛಂದ ಹಕ್ಕಿಯಂತೆ, ಕಾಡಿನಲ್ಲಿ – ಅಪ್ಪ ಅಮ್ಮನ ಜತೆ ಬದುಕಿ ಕೊಂಡಿದ್ದ ಮಕ್ಕಳು ಒಮ್ಮೆಲೇ ವಸತಿ ಶಾಲೆಯೆಂಬ ಜೈಲಿನಲ್ಲಿ. ಈ ವಸತಿ ಶಾಲೆ ಅವರ ಪಾಲಿಗೆ ಮತ್ತು ಅಕ್ಷರಶಃ ನರಕವಾಗಿತ್ತು. ಅಲ್ಲಿ ಅವರ ಮೇಲಾಗುವ ಸಾಂಸ್ಕೃತಿಕ ದೌರ್ಜನ್ಯ ಒಂದು ಕಡೆಯಾದರೆ ದೈಹಿಕ ದೌರ್ಜನ್ಯ, ಅತ್ಯಾಚಾರಗಳು ಇನ್ನೊಂದು ಕಡೆ. ಓಡಿ ಹೋಗಲು ಪ್ರಯತ್ನಪಟ್ಟವರೆಲ್ಲ ಬಡಿತಕ್ಕೆ ಹೆಣವಾಗುತ್ತಿದ್ದರು.

ತಪ್ಪು ಮಾಡಿ ಶಿಕ್ಷೆಯಿಂದಲೇ, ಅತ್ಯಾಚಾರಕ್ಕೆ ಸಹಕರಿಸದಿದ್ದಲ್ಲಿ ಹೆಣವಾದವರು ಇನ್ನೆಷ್ಟೋ! ಅವರ ತಂದೆತಾಯಿಗಳು ಕಾಣೆಯಾದ ಮಗ- ಮಗಳ ಬಗ್ಗೆ ಪುಕಾರೆತ್ತಿದಲ್ಲಿ ಅವರ ಮೇಲೆ ಕೇಸು ಜಡಿದು ಶಿಕ್ಷೆಗೊಳಪಡಿಸಲಾಗುತ್ತಿತ್ತು. ಈ ರೀತಿಯ ಕ್ರೂರ ವಸತಿ ಶಾಲೆಗಳು ಶುರುವಾದದ್ದು 1874ರಲ್ಲಿ. ಇದೆಲ್ಲ ಯಾವುದೋ ತಾತನ ಕಾಲದ ಕಥೆಯೆಂದು ಅಂದುಕೊಳ್ಳಬೇಡಿ. ಇಂತಹ ಕೊನೆಯ ವಸತಿ ಶಾಲೆ ಕೆನಡಾದಲ್ಲಿ ಮುಚ್ಚಿದ್ದು ತೀರಾ ಇತ್ತೀಚಿಗೆ- 1995ರಲ್ಲಿ. ಈ ಸಮಯದಲ್ಲಿ ಅಲ್ಲಿ ಸುಮಾರು 130 ಇಂತಹ ವಸತಿ ಶಾಲೆಗಳಿದ್ದವು. ಇದೆಲ್ಲ ಗುಪ್ತವಾಗಿಯೇ ಸಾಗಿದ್ದು.

ಚರ್ಚ್ ನಡೆಸುತ್ತಿದ್ದ ಘೋರ ಕೃತ್ಯ ಸಾಮಾನ್ಯ ಜನರಿಗೆ ತಿಳಿದೇ ಇರಲಿಲ್ಲ. ಇದೆಲ್ಲ ಸಮಾಜದ ನಟ್ಟ ನಡುವೆ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿತ್ತು. ಇದಕ್ಕೆಲ್ಲ ಹಣ ಕೊಡುವ ಶ್ರೀಮಂತರನ್ನು ವರ್ಷಕ್ಕೊಮ್ಮೆ ಕರೆಸಿ ಈ ಮಕ್ಕಳಿಗೆ ಒಳ್ಳೆಯ ಬಟ್ಟೆ ತೊಡಿಸಿ, ಇವರನ್ನು ಮಧ್ಯೆ ಕೂರಿಸಿ ಫೋಟೋ ತೆಗೆಯಲಾಗುತ್ತಿತ್ತು. ಅವರಿಗೆಲ್ಲ ಇದೊಂದು ದೈವಿಕ ಕೆಲಸ, ಮಹಾದಾನ. ಯಾರಿಗೂ ಇಲ್ಲಿ ನಡೆಯುತ್ತಿದ್ದ ದೌರ್ಜನ್ಯ, ಮುಗ್ಧ ಮಕ್ಕಳ ಆಕ್ರಂದನ, ಕೊಲೆ, ಅತ್ಯಾಚಾರ ಇದೆಲ್ಲ ಅನಾಚಾರಗಳ ಸುಳಿವು ಕೂಡ ಹತ್ತುತ್ತಿರ ಲಿಲ್ಲ. ಈ ಸಮಯದಲ್ಲಿ ಸುಮಾರು ಒಂದೂವರೆ ಲಕ್ಷ ಮಕ್ಕಳನ್ನು ಈ ರೀತಿ ಅನಾಮತ್ತು ಎತ್ತಿ ತಂದು, ಹಿಂಸಿಸಿ, Ethnic Cleansing ಮಾಡಲಾಗಿದೆ ಎನ್ನುವುದು ಕೆನಡಾ ಕೊಟ್ಟ ಲೆಕ್ಕ.

ಆದರೆ ಈ ಲೆಕ್ಕ ಇಂದು ಈ ಚರ್ಚ್‌ಗಳ ವಸತಿ ಶಾಲೆಗಳ ಮೈದಾನಗಳಲ್ಲಿ ಸಿಕ್ಕ 42 ಮಕ್ಕಳ ಸಾಮೂಹಿಕ ಸ್ಮಶಾನಕ್ಕೆ, ಅದರಲ್ಲಿ ದಶಸಾವಿರದ ಅಂದಾಜಿನ ಮಕ್ಕಳ ಹೆಣಗಳ ಅಂದಾಜು ಲೆಕ್ಕಕ್ಕೆ, ಈ ಶಾಲೆಗಳು ಅಸ್ತಿತ್ವದಲ್ಲಿದ್ದ 121 ವರ್ಷಕ್ಕೆ ತಾಳೆಯಾಗುವು ದಿಲ್ಲ. 42 ಕೂಡ ಸಿಕ್ಕ ಸ್ಮಶಾನದ ಲೆಕ್ಕ. ಅಗೆದಷ್ಟು ಅಸ್ಥಿಪಂಜರಗಳು. ಅಗೆಯದೇ ಉಳಿದ ನೆಲವೇ ಅದೆಷ್ಟೋ ಸಾವಿರ ಎಕರೆ.
ಅಲ್ಲಿನ್ನೆಷ್ಟು ಚಿಕ್ಕ, ಮುಗ್ಧ ಮೂಳೆಗಳು ಮಲಗಿವೆಯೋ? ಅವರೆಲ್ಲ ಅನುಭವಿಸಿದ ಹಿಂಸೆಯನ್ನು ಅಳೆಯುವ ಮಾಪಕವಾದರೂ ಯಾವುದು? ಇನ್ನು ನೂರುಗಟ್ಟಲೆ ಶಾಶ್ವತವಾಗಿ ಕಲ್ಲು ಕಟ್ಟಿ ಮುಚ್ಚಿದ ಚರ್ಚ್‌ನ ನೆಲಮಾಳಿಗೆಗಳಿವೆ.

ಅದನ್ನೆಲ್ಲ ಅಗೆಯಲು, ಅಡಗಿದ ಕರಾಳ ಇತಿಹಾಸವನ್ನು ಹೊರತೆಗೆಯಲು ಅಲ್ಲಿನ ಸರಕಾರಕ್ಕೆ ಧೈರ್ಯ ಅಥವಾ ಮನಸ್ಸು ಇಲ್ಲ.
ಅಲ್ಲಿನ ಸರಕಾರ ಮತ್ತು ಕ್ಯಾಥೋಲಿಕ್ ಚರ್ಚ್ ಇದೆಲ್ಲವನ್ನು ಮೊದಲು ಸತ್ಯವೆಂದು ಒಪ್ಪಿಕೊಂಡಿರಲೇ ಇಲ್ಲ. ತೀರಾ ಇತ್ತೀಚಿಗೆ, 2007ರಲ್ಲಿ ಮೊದಲ ಬಾರಿಗೆ ಇದನ್ನು ಸಾಂಸ್ಕೃತಿಕ ನರಮೇಧ ಎಂದು ಒಪ್ಪಿಕೊಂಡು, ಅಂದಿನ ಪ್ರಧಾನಿ ಮೂಲನಿವಾಸಿಗಳಲ್ಲಿ ಕ್ಷಮೆಯಾಚಿಸಿದ. ಆದರೆ ಇದೆಲ್ಲದಕ್ಕೆ ಮೂಲ ಕಾರಣ ಕ್ಯಾಥೋಲಿಕ್ ಚರ್ಚ್. ಅದರ ಮುಖ್ಯಸ್ಥ ಪೋಪ್, ಜಗತ್ತಿಗೇ ಶಾಂತಿ ಎಂದೆಲ್ಲ ಮಣ್ಣಂಗಟ್ಟಿ ಉಪದೇಶಿಸುವ ವ್ಯಾಟಿಕನ್ ಅಂತೂ ಇಂತೂ ಕೊನೆಯಲ್ಲಿ, ಈ ವರ್ಷ- 2022ರಲ್ಲಿ, ಇದು ಶೋಚನೀಯ ನಡವಳಿಕೆ ಎಂದು ಹೇಳಿ ತೇಪೆ ಹಚ್ಚಿದೆ.

ಇದನ್ನು ವಾಹಿನಿಗಳು ಕ್ಷಮೆಯಾಚಿಸುವುದು ಎಷ್ಟು ಶ್ರೇಷ್ಠ ಎಂದಿವೆ. ಕ್ಷಮೆ ಸರಿ- ಆದರೆ ಇಂಥದ್ದೊಂದು ನರಮೇಧ, ಒಂದಿಡೀ ಜನಾಂಗವನ್ನೇ ನಿರ್ನಾಮ ಮಾಡಿದ ಕ್ಯಾಥೋಲಿಕ್ ಚರ್ಚಿನ ಕ್ಷಮೆಯಿಂದ ಆಗುವುದಾದರೂ ಏನು?

ಇನ್ನು ಜಸ್ಟಿನ್ ಟ್ರುಡೊ – ಕೆನಡಾದ ಪ್ರಧಾನಿ: ಭಾರತದ ದೆಹಲಿಯಲ್ಲಿ -ಕ್ ರೈತರ ಹೋರಾಟ ಕಂಡು ಇವನಿಗೆ ಕಣ್ಣೀರು ಬರುತ್ತದೆ. ಕೆನಡಾದ ಅಲ್ಲಿನ ಸಿಖ್ಖರ ವೋಟಿಗಾಗಿ, ಸಿಖ್ ಮಂತ್ರಿಗಳ ಅಣತಿಯಂತೆ ಭಾರತದಲ್ಲಿ ನಡೆಯುತ್ತಿರುವುದು ರೈತರ ಮೇಲಿನ ಹಿಂಸೆ ಎಂದೆಲ್ಲ ಕಣ್ಣೀರಿ ಡುವ, ನಾಟಕವಾಡುವ, ಹೇಳಿಕೆ ಕೊಡುವ ಈ ಪುಣ್ಯಾತ್ಮ ತಮ್ಮದೇ ನೆಲದಲ್ಲಿ ನಡೆದ ನರಮೇ ಧದ ಬಗ್ಗೆ ತೇಪೆ ಹಚ್ಚುವ ಮಾತು ಬಿಟ್ಟರೆ ಇನ್ನೇನನ್ನೂ ಮಾಡಿಲ್ಲ.

ಟ್ರುಡೋ, ವ್ಯಾಟಿಕನ್ ಇವರೆಲ್ಲ ಶಾಂತಿಯಪಾಠ ಜಗತ್ತಿಗೆ ಹೇಳುವಾಗಲೆಲ್ಲ ಆ ನರಮೇಧ, ಮಕ್ಕಳ ಅಸ್ತಿಪಂಜರ, ಅವರು ಅನುಭವಿಸಿದ ಯಾತನೆ, ವೇದನೆ, ನೋವು ಇವೆಲ್ಲ ಅದು ಹೇಗೆ ಇವರಿಗೆ ಕಾಡುವುದಿಲ್ಲ ಎನ್ನುವ ಪ್ರಶ್ನೆ ಏಳುತ್ತದೆ. ಜನ ಸಾಮಾನ್ಯ ರಿಗೇ ತಿಳಿಯದಂತೆ ರೆಲಿಜಿಯನ್ ಒಂದು ಸಮಾನಾಂತರವಾಗಿ, ಅಗೋಚರವಾಗಿ ಕ್ರೌರ್ಯಕ್ಕಿಳಿಯುವುದು, ಸರಕಾರ ಅದನ್ನು ಸಮಾಜದ ಅರಿವಿಗೆ ಬಾರದಂತೆ ಪೋಷಿಸುವುದು ಇವೆಲ್ಲ ಅದೆಷ್ಟು ಘೋರವಲ್ಲವೇ? ಇದೆಲ್ಲವನ್ನು ಅಲ್ ಜಝೀರಾ ಟಿವಿ ವಾಹಿನಿ ಡಾಕ್ಯುಮೆಂಟರಿ ಮಾಡಿ ದಾಖಲಿಸಿದೆ – ಯೌಟ್ಯೂಬಿನಲ್ಲಿದೆ.

Canada’s Dark Secret ಎಂದು ಹುಡುಕಿದರೆ ಸಿಗುತ್ತದೆ. ನೀವು ನೋಡಬೇಕು. ಅಂದಹಾಗೆ ಕೆನಡಾದ ಸ್ಥಳೀಯವಾಹಿನಿಗಳು ಇಂಥದ್ದನ್ನೆಲ್ಲ ಒಂದಿಷ್ಟು ಅನುಕೂಲಕ್ಕೆ ಸುದ್ಧಿ ಮಾಡಿವೆ ಅಷ್ಟೆ. ಒಂದು ಕಾಲದಲ್ಲಿ ಮೂಲ ನಿವಾಸಿಗಳಾದ ಇವರದೇ ನೆಲದಲ್ಲಿ ಇಂದು ಅವರ ಸಂಖ್ಯೆ 5% ಕ್ಕಿಂತ ಕಡಿಮೆ. ಅವರು ಇಂದು ಅವರಾಗಿ ಉಳಿದಿಲ್ಲ. ಕೇವಲ ರೆಲಿಜಿಯನ್ ಪ್ರಚಾರ ಮತ್ತು ಲಾಲಸೆಗೆ ಅದೆಂತಹ ಕ್ರೌರ್ಯಕ್ಕೂ ಇಳಿದುಬಿಡುವ ವ್ಯವಸ್ಥೆಯನ್ನು ರೆಲಿಜಿಯನ್ ಎನ್ನದೇ ಧರ್ಮ ಎಂದು ಕರೆಯಲು ನನಗಂತೂ ಒಪ್ಪಿಗೆ ಯಿಲ್ಲ. ಸಹಬಾಳ್ವೆ ಎಂದರೇನು ಎನ್ನುವುದನ್ನು ಇಂದಿಗೂ ಧರ್ಮದಿಂದ ಕಲಿಯಬೇಕೆಂದರೆ ಅದು ನಮ್ಮದು ಮಾತ್ರ. ಅದುವೇ ಸತ್ಯ.