ಜೀವನಾಡಿ
ನಂ.ಶ್ರೀಕಂಠ ಕುಮಾರ್
ಜೀವನದಿ ಕಾವೇರಿಯು ಕೊಡಗಿನಲ್ಲಿ ಉದ್ಭವಿಸಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸುಮಾರು ೭೫೬ ಕಿ.ಮೀ.ನಷ್ಟು ಹರಿದು ಅಲ್ಲಿನ ಜನರ ಬದುಕನ್ನು ಹಸನಾಗಿಸಿದ್ದಾಳೆ.
ಈ ತಿಂಗಳ ೧೭ರಂದು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಆಗಲಿದೆ. ಈ ಹಿನ್ನೆಲೆಯಲ್ಲಿ ಕನ್ನಡನಾಡಿನ ಈ ಜೀವನದಿಯ ಆಸುಪಾಸಿನ ಸಂಗತಿಗಳನ್ನು ಅವಲೋಕಿಸೋಣ. ಶ್ರೀ ಸ್ಕಾಂದ ಪುರಾಣದ ಪ್ರಕಾರ ಮತ್ಸ್ಯದೇಶ ವೆಂದು ಹೆಸರಾಗಿದ್ದ ಕೊಡಗು ಪ್ರದೇಶವನ್ನು ರಾಜ ಚಂದ್ರವರ್ಮ ಆಳುತ್ತಿದ್ದ. ಸಹ್ಯಾದ್ರಿ ಪರ್ವತಶ್ರೇಣಿಯ ನಾಲ್ಕೂ ದಿಕ್ಕುಗಳಲ್ಲಿ ಬ್ರಹ್ಮಗಿರಿ, ಗಜರಾಜಗಿರಿ, ವಾಯುಗಿರಿ ಮತ್ತು ಅಗ್ನಿಗಿರಿಗಳು ಸುತ್ತುವರಿದು ರಮ್ಯತಾ ಣವಾಗಿದೆ.
ಅದರಲ್ಲಿ ಪ್ರಮುಖವಾದ ಬ್ರಹ್ಮಗಿರಿಯಲ್ಲಿ ಕವೇರನೆಂಬ ಮುನಿ ಬಹಳ ವರ್ಷಗಳಿಂದ ತಪೋನಿರತನಾಗಿದ್ದ. ಒಂದು ಐತಿಹ್ಯದಂತೆ, ಪೂರ್ವಕಾಲದಲ್ಲಿ ವಿಂಧ್ಯ-ಮೇರು ಪರ್ವತಗಳಿಗೆ ಕಲಹವಾಗಲು ವಿಂಧ್ಯವು ಭೂಮ್ಯಾ ಕಾಶಗಳ ಅಂತರವೆಲ್ಲವನ್ನೂ ವ್ಯಾಪಿಸಿ, ಸಮಸ್ತ ಜೀವರಾಶಿಗಳು ಉಸಿರಾಡಲಾಗ ದಂಥ ಪರಿಸ್ಥಿತಿ ನಿರ್ಮಾಣವಾ ಯಿತು. ಆತಂಕಿತರಾದ ದೇವತೆಗಳು ಪರಮೇಶ್ವರನಲ್ಲಿ ಪ್ರಾರ್ಥಿಸಲಾಗಿ, ವಿಂಧ್ಯಪರ್ವತ ಶ್ರೇಣಿಯನ್ನು ದಮನಿಸುವಂತೆ ಅಗಸ್ತ್ಯ ಮಹರ್ಷಿಗಳಿಗೆ ಪರಮೇಶ್ವರ ಆದೇಶಿಸಿದ. ಆಗ ಅಗಸ್ತ್ಯರು ಉತ್ತರದಿಂದ ದಕ್ಷಿಣ ದೇಶಕ್ಕೆ ಯಾತ್ರೆ ಕೈಗೊಂಡು ವಿಂಧ್ಯಪರ್ವತರಾಜನನ್ನು ಸಂಽಸಿದಾಗ ಆತ ‘ನನ್ನಿಂದೇನಾಗಬೇಕು?’ ಎಂದು ಕೇಳಿದನಂತೆ.
ಆಗ ಅಗಸ್ತ್ಯರು ‘ನಾನು ದಕ್ಷಿಣ ಪ್ರದೇಶಕ್ಕೆ ಹೋಗಿಬರುವವರೆಗೂ ನೀನು ಹೀಗೆಯೇ ನಮ್ರನಾಗಿರಬೇಕು’ ಎಂದು ಹೇಳಿ ಯಾತ್ರೆಯನ್ನು ಮುಂದು ವರಿಸುತ್ತಾರೆ. ಅಗಸ್ತ್ಯರು ಇಂದೋ ನಾಳೆಯೋ ಬಂದೇ ಬರುತ್ತಾರೆ ಎಂದು ವಿಂಧ್ಯಪರ್ವತವು ಚಿಂತಿಸುತ್ತಲೇ ಅಡಗಿದ್ದು, ಅಡಗಿದಂತೆಯೇ ಕಾಯುತ್ತಲಿದೆ ಎಂಬುದು ಪ್ರತೀತಿ. ಹೀಗೆ ಲೋಕಕಲ್ಯಾಣಕ್ಕೆಂದು ದಕ್ಷಿಣಕ್ಕೆ ಬಂದ ಅಗಸ್ತ್ಯರು ಬ್ರಹ್ಮಗಿರಿ ಬೆಟ್ಟದ ಶ್ರೇಣಿಯಲ್ಲಿ ತಪೋನಿರತರಾಗುತ್ತಾರೆ.
ಅದೇ ವೇಳೆಗೆ ಅಲ್ಲಿ ಕವೇರ ಎಂಬ ಋಷಿಯೂ ತಪೋನಿರತರಾಗಿದ್ದು, ಬ್ರಹ್ಮದೇವರ ಮಾನಸಪುತ್ರಿ ಹಾಗೂ ತಮ್ಮ ಸಾಕುಮಗಳು ಲೋಪಾಮುದ್ರೆಯ ಜತೆ ನೆಲೆಸಿರುತ್ತಾರೆ. ಅಗಸ್ತ್ಯರನ್ನು ಸಂಧಿಸಿದ ಕವೇರಮುನಿ, ಲೋಪಾಮುದ್ರೆಯನ್ನು ಮದುವೆಯಾಗುವಂತೆ ಕೋರುತ್ತಾರೆ. ಆದರೆ, ಮದುವೆಯಾದ ನಂತರ ಯಾವ ಕಾರಣಕ್ಕೂ ತನ್ನನ್ನು ಅಗಲಬಾರದೆಂದು ಲೋಪಾಮುದ್ರೆ ಅಗಸ್ತ್ಯರಿಗೆ ತಿಳಿಸುತ್ತಾಳೆ.
ಆದರೆ ಒಮ್ಮೆ ಅಗಸ್ತ್ಯರು ಅನಿವಾರ್ಯವಾಗಿ ಶಿಷ್ಯರೊಂದಿಗೆ ಹೊರಗೆ ಹೋಗಬೇಕಾಗಿ ಬಂದಾಗ ಲೋಪಾಮುದ್ರೆಯನ್ನು ತಮ್ಮ ಕಮಂಡಲದಲ್ಲಿ ಜಲರೂಪದಲ್ಲಿ ನಿಕ್ಷೇಪಿಸುತ್ತಾರೆ. ಆದರೆ ಕಮಂಡಲವು ಉರುಳಿ ಜಲವು ಬ್ರಹ್ಮಗಿರಿ ಶ್ರೇಣಿಯಲ್ಲಿ ಅಂತರ್ಗಾಮಿಯಾಗಿ ಹರಿದು, ತುಲಾಮಾಸದಲ್ಲಿ ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುವ ಪುಣ್ಯಮುಹೂರ್ತದಲ್ಲಿ ತಲಕಾವೇರಿಯಲ್ಲಿ ದಿವ್ಯಶಕ್ತಿ ಕಾವೇರಿಯಾಗಿ ಉದ್ಭವಿಸುತ್ತಾಳೆ. ಆ ಶುಭ ಮುಹೂರ್ತದಲ್ಲಿ ರಾಜರ ಕಾಲದಿಂದಲೂ ಕೊಡವರು ಮಾತೆ ಕಾವೇರಿಯ ಸಾಂಪ್ರದಾಯಿಕ ಪೂಜೆಯನ್ನು ನೆರವೇರಿಸುತ್ತ ಬಂದಿದ್ದಾರೆ.
ಅಂದು ವಿಶೇಷವಾಗಿ ಕಾವೇರಿ ತೀರ್ಥೋದ್ಭವವನ್ನು ‘ತುಲಾ ಸಂಕ್ರಮಣ’ ಎಂಬ ಹೆಸರಿನಲ್ಲಿ ಧಾರ್ಮಿಕವಾಗಿ ಆಚರಿಸಲಾಗುವುದು. ನಂತರ ಕೊಡವರು ಅವರವರ ಮನೆಗಳಲ್ಲಿ ಕಣಿಪೂಜೆ ಮಾಡುತ್ತಾರೆ. ಕಾವೇರಿ ಮಾತೆಯು ತಲಕಾವೇರಿಯಲ್ಲಿ ಪ್ರಥಮವಾಗಿ ಉಗಮಿಸಿದ ದಿನವನ್ನು ನಿಖರವಾಗಿ ಉಲ್ಲೇಖಿ ಸಲು ಸಾಧ್ಯವಿಲ್ಲದಿದ್ದರೂ ಸುಮಾರು ತ್ರೇತಾಯುಗದ ಮುಂಚಿನ ಕಾಲಘಟ್ಟದಲ್ಲಿ ಸಂಭವಿಸಿರಬಹುದು ಎಂದು ಅಂದಾಜಿಸಬಹುದು. ಕೆಲದಿನಗಳ ನಂತರ ಅಗಸ್ತ್ಯರು ಲೋಪಮುದ್ರೆ ಯನ್ನು ಹುಡುಕಿಕೊಂಡು ತಲಕಾವೇರಿಗೆ ಬಂದು ಅಲ್ಲಿ ಮರಳಿನ ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ. ಈ ಸನ್ನಿಧಿಗೆ
‘ಶ್ರೀ ಅಗಸ್ತ್ಯೇಶ್ವರ’ ಎಂದೇ ಕರೆಯಲಾಗುತ್ತದೆ.
ನಂತರ ಅಗಸ್ತ್ಯರು ಲೋಪಮದ್ರೆಯನ್ನು ಹುಡುಕುವ ಸಲುವಾಗಿ ಭಾಗಮಂಡಲಕ್ಕೆ ಬಂದಾಗ, ಆಕೆ ಅಂತರ್ಗಾಮಿಯಾಗಿ ತ್ರಿವೇಣಿ ಸಂಗಮದಲ್ಲಿ ಕಾಣಿಸಿಕೊಳ್ಳುತ್ತಾಳೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಮತ್ತು ಕನ್ನಿಕೆ ನದಿಗಳನ್ನು ಸುಜ್ಯೋತಿ ಎಂಬ ನದಿಯು ಗುಪ್ತಗಾಮಿನಿಯಾಗಿ ಸೇರಿಕೊಂಡು ಅದನ್ನು ಪವಿತ್ರ ತೀರ್ಥಸ್ಥಳವನ್ನಾಗಿಸಿದೆ. ಅಲ್ಲಿ ಭಗಂಡ ಋಷಿಯು ಹಲವಾರು ವರ್ಷಗಳಿಂದ ತಪೋನಿರತರಾಗಿದ್ದು ಶಿವಲಿಂಗವನ್ನು
ಪ್ರತಿಷ್ಠಾಪಿಸುತ್ತಾರೆ. ಅದು ಇಂದಿಗೂ ‘ಶ್ರೀ ಭಗಂಡೇಶ್ವರ’ ಎಂದು ಪೂಜಿಸಲ್ಪಡುತ್ತಿದೆ. ಈ ದೇವಸ್ಥಾನದ ಆವರಣದಲ್ಲಿ ಮಹಾವಿಷ್ಣು ಮತ್ತು ಸುಬ್ರಹ್ಮಣ್ಯೇಶ್ವರ ದೇಗುಲಗಳಿದ್ದು, ಕೊಡಗಿನ ದೊರೆ ದೊಡ್ಡವೀರ ರಾಜೇಂದ್ರ ಇದನ್ನು ಕಟ್ಟಿಸಿದ ಎನ್ನುತ್ತದೆ ಸ್ಥಳಪುರಾಣ.
ಮಾತೆ ಕಾವೇರಿಯು ಭಾಗಮಂಡಲದಿಂದ ಮೂರ್ನಾಡು ಸಮೀಪದ ಬಲಮುರಿ ಎಂಬಲ್ಲಿ ರಭಸವಾಗಿ ಹರಿಯುವಾಗ ಅಗಸ್ತ್ಯರು ಅದನ್ನು ತಡೆಯಲು ಯತ್ನಿಸಿ ವಿಫಲರಾಗುತ್ತಾರೆ. ಬಲಮುರಿಯಲ್ಲಿ ಕಾವೇರಿಯು ಹರಿವ ರಭಸಕ್ಕೆ ನದಿಯಲ್ಲಿ ಸ್ನಾನದಲ್ಲಿದ್ದ ಹೆಂಗಸರ ಸೀರೆಯ ಮುಂದಿನ ನೆರಿಗೆಯು
ಹಿಂದುಗಡೆಗೆ ಜರುಗುತ್ತದೆ. ಅಂದಿನಿಂದ ಕೊಡವ ಮಹಿಳೆಯರಲ್ಲಿ ಸೀರೆ ಉಡುವ ಶೈಲಿ ಬದಲಾಯಿತು ಎನ್ನಲಾಗುತ್ತದೆ. ಬಲಮುರಿಯಲ್ಲೂ ಅಗಸ್ತ್ಯೇಶ್ವರ ದೇಗುಲವಿದ್ದು ಅದು ಪವಿತ್ರ ಯಾತ್ರಾಸ್ಥಳವೆನಿಸಿದೆ.
ನಂತರ ಕಾವೇರಿಯು ಶಾಂತಳಾಗಿ ಗುಯ್ಯಾ ಸಿದ್ದಾಪುರ, ಚುಂಚನಕಟ್ಟೆ, ಬಲಮುರಿ, ಕನ್ನಂಬಾಡಿ ಕಟ್ಟೆ, ಶ್ರೀರಂಗ ಪಟ್ಟಣ, ಪಶ್ಚಿಮವಾಹಿನಿ, ತಿರುಮಕೂಡಲು, ತಲಕಾಡು, ಮಾಲಂಗಿ, ಕೊಳ್ಳೆಗಾಲ, ಶಿವನಸಮುದ್ರ, ಮೇಕೆದಾಟು, ತಮಿಳುನಾಡಿನ ಭವಾನಿ, ತಿರುಚಿನಾಪಳ್ಳಿ, ಕುಂಭಕೋಣಂ,
ಮಾಯಾವರಂ ಮಾರ್ಗವಾಗಿ ಹರಿದು ಪೂಂಪುಹಾರ್ ಎಂಬಲ್ಲಿ ಬಂಗಾಳಕೊಲ್ಲಿಯಲ್ಲಿ ಲೀನವಾಗುತ್ತಾಳೆ. ಮಾತೆ ಕಾವೇರಿಯ ಉಗಮ ಮತ್ತು ಹರಿಯುವಿಕೆಯಲ್ಲಿ ಅನೇಕ ವಿಶೇಷತೆಗಳಿವೆ. ಬೆಡಗಿನ ನಾಡು ಕೊಡಗು, ಕೊಡಗಿನ ಬೆಡಗನ್ನು ನೋಡಬೇಕಾದರೆ ನಡೆದೇ ಹೋಗಬೇಕು ಎಂಬ ಮಾತಿದೆ. ಕಾವೇರಿಯು ಉಗಮ ಸ್ಥಳದಿಂದ ಕೊಡಗಿನ ಎಲ್ಲೆಯನ್ನು ಬಿಡುವವರೆಗೆ ಸುಮಾರು ೮೦ ಕಿ. ಮೀ. ಹರಿದು ಮೈಸೂರು ಪ್ರಾಂತ್ಯವನ್ನು ಪ್ರವೇಶಿಸುತ್ತಾಳೆ.
ಕೊಡಗು-ಮೈಸೂರು ನಡುವೆ ಸಂಪರ್ಕ ಸಾಧಿಸುವ ಕುಶಾಲನಗರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ೧೮೪೮ರಲ್ಲಿ ಮೊದಲ ಸೇತುವೆಯನ್ನು ನಿರ್ಮಿಸ ಲಾಯಿತು. ಟಿಪ್ಪು ಸುಲ್ತಾನನ ಕಾಲದಲ್ಲಿ ತಲಕಾವೇರಿಯಲ್ಲಿ ನಿಂತುಹೋಗಿದ್ದ ಪೂಜಾಕಾರ್ಯಗಳನ್ನು ಕೊಡಗಿನ ದೊಡ್ಡವೀರ ರಾಜೇಂದ್ರ
ಮತ್ತೆ ಆರಂಭಿಸಿದ ಎನ್ನಲಾಗುತ್ತದೆ. ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ತಲಕಾವೇರಿಗೆ ಆಗಮಿಸಿ ಕಾವೇರಿ ಮಾತೆಗೆ ಸುವರ್ಣ ಪುಷ್ಪದಿಂದ ಪೂಜೆ ಸಲ್ಲಿಸಿರುವುದು ಐತಿಹಾಸಿಕ ಧಾರ್ಮಿಕ ಆಚರಣೆಯಾಗಿ ದಾಖಲಾಗಿದ್ದರೆ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರು ತೀರ್ಥಕುಂಡದ ಹಿಂಭಾಗದಲ್ಲಿ ಅಶ್ವತ್ಥವೃಕ್ಷವನ್ನು ನೆಟ್ಟಿರುವುದು ಈ ಧಾರ್ಮಿಕ ಕೇಂದ್ರಕ್ಕೆ ಪೂರಕವಾಗಿದೆ.
ಭಾಗಮಂಡಲದಲ್ಲಿ ಕಾಶಿಮೂಲದ ಕಾಶಿಮಠ, ಸೋಮವಾರಪೇಟೆಯಲ್ಲಿ ವಿರಕ್ತಮಠ, ಕೂಡ್ಲಿಪೇಟೆಯಲ್ಲಿ ಕೂಡ್ಲಿಕಲ್ಲು ಮಠಗಳು ಶ್ರದ್ಧಾಕೇಂದ್ರ ಗಳಾಗಿವೆ. ಚಿರಂಜೀವಿ ಮಹರ್ಷಿ ಪರಶುರಾಮರು ಎಸೆದ ಕೊಡಲಿಯು ಕೂಡ್ಲಿಪೇಟೆ ಎಂಬಲ್ಲಿ ಬಿದ್ದಿತೆಂಬುದು ಪ್ರತೀತಿ. ಕೊಡಗಿನ ವಿವಿಧ ದೇವಸ್ಥಾನ ಗಳಲ್ಲಿ ಪೂಜಾ ಕೈಂಕರ್ಯಗಳನ್ನು ಶಿವಳ್ಳಿ ಬ್ರಾಹ್ಮಣರು ಸಹ ನೆರವೇರಿಸುತ್ತಾರೆ. ಕುಶಾಲನಗರದ ಕೊಪ್ಪ ಸೇತುವೆ ಬಳಿ ಕಾವೇರಿ ಮಾತೆಯ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕಾವೇರಿಯು ಬಲಮುರಿಯಲ್ಲಿ ಹರಿಯುವಾಗ ರಾಜ ದೇವಕಾಂತನು ಎದುರುಗೊಂಡು ಪೂಜಿಸಿದನಂತೆ.
ವಿರಾಜಪೇಟೆ ತಾಲೂಕು ಸಿದ್ದಾಪುರ ಬಳಿಯಲ್ಲಿರುವ ಗುಹೆಯಲ್ಲಿನ ಅಗಸ್ತ್ಯೇಶ್ವರ ಸನ್ನಿಽಯು ಪ್ರಸಿದ್ದ ಕ್ಷೇತ್ರವಾಗಿದೆ. ಕೂಡಿಗೆ ಎಂಬ ಸ್ಥಳದಲ್ಲಿ ಕಾವೇರಿ ನದಿಯನ್ನು ಹಾರಂಗಿ ನದಿಯು ಸಂಗಮಿಸುವುದು ಇಲ್ಲಿನ ವಿಶೇಷತೆ. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ‘ಅಖಂಡ ಕಾವೇರಿ ಮಹಾತ್ಮೆ’ ಎಂಬ ಕೃತಿ ರಚಿಸಿ ಕಾವೇರಿ ಮಾತೆಯನ್ನು ಸ್ಮರಿಸಿದ್ದಾರೆ.