ವಿಶ್ಲೇಷಣೆ
ಪಿ.ಡಿ.ಮೇದಪ್ಪ
‘ಕೋಟೆ ಸೂರೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಅಂತ ಒಂದು ಗಾದೆಯಿದೆ. ಇದು ಕಾವೇರಿ ನದಿನೀರು ಸಂಕಷ್ಟಕ್ಕೆ ಸಂಬಂಧಿಸಿ ಆಯಾ ಕಾಲ
ಘಟ್ಟದ ಆಳುಗರಿಂದ ಹೊಮ್ಮುತ್ತಿರುವ ಆಲಾಪಕ್ಕೆ ಅಕ್ಷರಶಃ ಹಿಡಿದ ಕನ್ನಡಿ. ಚರಿತ್ರೆಯಿಂದ ಪಾಠ ಕಲಿಯದವನಿಗೆ ಯಾವುದೇ ಭವಿಷ್ಯವಿಲ್ಲ ಎನ್ನು ವುದು ತಿಳಿವಳಿಕೆ ಉಳ್ಳವರ ಮಾತು. ನಾವು ತಿಳಿದಂತೆ ಭೀಷ್ಮ, ವಿದುರ ಇಬ್ಬರು ದ್ವಾಪರಯುಗದಲ್ಲಿ ರಾಜನೀತಿಯನ್ನು ಬೋಧಿಸಿದವರು.
ಚಾಣಕ್ಯ ಓರ್ವ ಅಪ್ರತಿಮ ರಾಜನೀತಿಜ್ಞನಾಗಿದ್ದ ಎನ್ನುತ್ತದೆ ಇತಿಹಾಸ. ಇವರೆಲ್ಲರ ಅಭಿಪ್ರಾಯದಂತೆ, ಆಳುಗರು ತಮ್ಮ ರಾಜ್ಯದ ಮತ್ತು ಜನರ ಒಳಿತಿಗೆ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು, ಕೈಗೊಳ್ಳಬೇಕಾದ ಕಾರ್ಯಗಳನ್ನು ಮೊದಲೇ ಮಂಥನ ಮಾಡಿ ನಂತರ ಕಾರ್ಯರೂಪಕ್ಕೆ ತರಬೇಕು. ಆದರೆ ನಮ್ಮ ರಾಜಕಾರಣಿಗಳಿಗೆ ರಾಜಕಾರಣ ಮಾಡಲಿಕ್ಕೇ ಪುರುಸೊತ್ತಿಲ್ಲ. ಅಂದ ಮೇಲೆ ರಾಜ್ಯವನ್ನೇ ಸುಡುತ್ತಿರುವ ಇಂಥ ವಿಚಾರದ ಬಗ್ಗೆ ಚಿಂತನೆ ನಡೆಸಲು ಮತ್ತು ಬೇಕಾದ ಕ್ರಮ ಕೈಗೊಳ್ಳಲು ಅವರಿಗೆ ಸಮಯವಿರುವುದಾದರೂ ಎಲ್ಲಿ? ಈಗ ವಸ್ತು-ವಿಷಯಕ್ಕೆ ಬರೋಣ. ೧೯೨೪ನೇ ಇಸವಿಯಲ್ಲಿ ಕಾವೇರಿ ನೀರಿನ ಹಂಚಿಕೆ ಬಗ್ಗೆ ಒಂದು ಒಪ್ಪಂದವಾಯಿತು.
ಗಮನಿಸತಕ್ಕ ವಿಷಯವೇನೆಂದರೆ ಆ ಕಾಲಕ್ಕೆ ಈಗಿನ ಕೊಡಗು ಆಂಗ್ಲರ ಕೈಕೆಳಗೆ ಮದ್ರಾಸ್ ಪ್ರೆಸಿಡೆನ್ಸಿಯ (ಅಧಿಪತ್ಯದ) ನೇರ ಆಡಳಿತಕ್ಕೊಳಪಟ್ಟಿತ್ತು. ಮೈಸೂರು ಆಶ್ರಿತ ಸಂಸ್ಥಾನವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಕೊಡಗು ಸೇರಿದಂತೆ ಮದ್ರಾಸ್ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಇಂತಿಷ್ಟು ನೀರು, ಮೈಸೂರು ಆಶ್ರಿತ ಸಂಸ್ಥಾನಕ್ಕೆ ಇಂತಿಷ್ಟು ನೀರು ಎಂದು ಬರೆಯಲಾಯಿತು.
ನಂತರದ ಬೆಳವಣಿಗೆಗಳನ್ನು ನೋಡೋಣ. ೧೯೫೬ನೇ ಇಸವಿಯಲ್ಲಿ ಆಗಿನ ಕೊಡಗು ವಿಶಾಲ ಮೈಸೂರಿನೊಂದಿಗೆ ಸೇರಿ ನಂತರದಲ್ಲಿ ಕರ್ನಾಟಕದ ಭಾಗವಾಯಿತು. ಕಾವೇರಿ ನದಿ ಕೊಡಗಿನಲ್ಲಿ ಹುಟ್ಟಿ ಅದರ ಎಲ್ಲೆಯ ತನಕ ಹರಿದು ನಂತರ ಅಂದಿನ ಮೈಸೂರು ಸಂಸ್ಥಾನವನ್ನು ಸೇರುತ್ತಿತ್ತು. ಅಂದ ಮೇಲೆ, ೧೯೨೪ರ ಒಪ್ಪಂದದಂತೆ ಅಂದಿನ ಕೊಡಗು ಸೇರಿ ಮದ್ರಾಸ್ ಅಧಿ ಪತ್ಯಕ್ಕೆ ಇಂತಿಷ್ಟು ಕಾವೇರಿ ನೀರನ್ನು ಉಪಯೋಗಿಸುವ ಹಕ್ಕು ಇದೆ ಎಂದು ತೀರ್ಮಾನವಾದುದು ನಿಜ ತಾನೆ? ಆದರೆ ಸ್ವಾತಂತ್ರ್ಯಾನಂತರ ೧೯೫೬ರಲ್ಲಿ ರಾಜ್ಯಗಳ ಪುನರ್‌ವಿಂಗಡಣೆ ಆದ ಮೇಲೆ ಹಿಂದಿನ ಮದ್ರಾಸ್ ಅಧಿಪತ್ಯದ ಭಾಗವಾಗಿದ್ದ ಕೊಡಗು ನಂತರದ ತಮಿಳುನಾಡು ರಾಜ್ಯದಿಂದ ಪ್ರತ್ಯೇಕ ಗೊಂಡಿತು.
ನಂತರದಲ್ಲಿ ಆಗಿದ್ದ ವಿಶಾಲ ಮೈಸೂರು ರಾಜ್ಯ ೧೯೨೪ರ ಒಪ್ಪಂದದ ಅಸ್ತಿತ್ವವನ್ನೇ ಪ್ರಶ್ನಿಸ ಬೇಕಾಗಿತ್ತು. ಆದರೆ ಅಂದಿದ್ದ ಎಲ್ಲಾ ಸರಕಾರಗಳು ಈ ಬಗ್ಗೆ ಪ್ರಶ್ನಿಸಲೇ ಇಲ್ಲ. ಒಬ್ಬರಾದ ಮೇಲೊಬ್ಬರಂತೆ ರಾಜಕಾರಣಿ ಗಳು ತಮ್ಮ ದಿವ್ಯಮೌನವನ್ನು ಮುಂದುವರಿಸಿಕೊಂಡು ಬಂದರು. ೧೯೨೪ರ ಒಪ್ಪಂದ ಕೇವಲ ಕನ್ನಂಬಾಡಿ ಕಟ್ಟೆ ಮತ್ತು ಮೆಟ್ಟೂರು ಕಟ್ಟೆಯಲ್ಲಿನ ನೀರು ಹಂಚಿಕೆಗಷ್ಟೇ ಸಂಬಂಧ ಪಟ್ಟಿರಲಿಲ್ಲ; ಬದಲಾಗಿ ಅದು ಎರಡೂ ಪ್ರಾಂತ್ಯಗಳ ಕುರಿತಾದುದಾಗಿತ್ತು. ಬದಲಾದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ವಿಶಾಲ ಮೈಸೂರು ಸರಕಾರವಾಗಲೀ, ನಂತರದ ಕರ್ನಾಟಕ ಸರಕಾರವಾಗಲೀ ಸ್ಪಂದಿಸಲೇ ಇಲ್ಲ.
ಕಾವೇರಿ ನದಿಯಲ್ಲಿ ಹರಿಯುವ ನೀರು ಕೊಡಗಿನಲ್ಲಿದ್ದು ಹಾಗಾದರೆ ಅದು ಕರ್ನಾಟಕದ್ದು ಎಂದು ತಾನೆ ಅರ್ಥ? ಅಂದ ಮೇಲೆ, ಸದರಿ ಹರಿಯುವ ನೀರಿಗೆ ಸಂಬಂಧಿಸಿದಂತೆ ತಮಿಳುನಾಡು ೧೯೨೪ರಲ್ಲಿ ತನಗಿದ್ದ ಹಕ್ಕನ್ನು ಆ ಮಟ್ಟಿಗೆ ಕಳೆದುಕೊಂಡಿತು ಎಂಬುದು ತಾನೆ ಇದರ ಅರ್ಥ? ಈ ಹಿನ್ನೆಲೆ ಯಲ್ಲಿ ಕರ್ನಾಟಕ ಸರಕಾರವು ೧೯೨೪ರ ಒಪ್ಪಂದವು, ವಿಶೇಷವಾಗಿ ೧೯೫೬ರ ನಂತರ ಅನುಷ್ಠಾನಗೊಳ್ಳಲು ಸಾಧ್ಯವೇ ಇಲ್ಲ ಎಂದು ಅದರ
ಸಿಂಧುತ್ವವನ್ನು ಪ್ರಶ್ನಿಸಬೇಕಾಗಿತ್ತು. ಆದರೆ ಸರಕಾರ ಎಚ್ಚೆತ್ತುಕೊಳ್ಳಲೇ ಇಲ್ಲ. ಚೆನ್ನಾಗಿ ಮಳೆಯಾದರೆ ಏನೂ ತೊಂದರೆಯಿಲ್ಲ; ಆದರೆ ಪ್ರಕೃತಿ
ಮುನಿದರೆ ಹುಲುಮಾನವ ಏನು ಮಾಡಿಯಾನು? ಮಳೆ ಕೈಕೊಟ್ಟರೆ ತನ್ನ ಪ್ರಜೆಗಳಿಗೆ ಏನು ಮಾಡಬೇಕು ಎಂದು ಸರಕಾರ ಯೋಚಿಸಲೇ ಇಲ್ಲ.
ನಾವು ಚಿಕ್ಕವರಿದ್ದಾಗ ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಎಂಬ ಎರಡು ಘಟ್ಟಸಾಲುಗಳ ಕುರಿತು ಓದುತ್ತಿದ್ದೆವು. ಆದರೀಗ ಪೂರ್ವ ಘಟ್ಟಗಳು ಅಸ್ತಿತ್ವದಲ್ಲೇ ಇಲ್ಲ. ಪಶ್ಚಿಮ ಘಟ್ಟಗಳ ವನರಾಶಿ ಇನ್ನೇನು ಮಾಯವಾಗುವ ಹಂತಕ್ಕೆ ಬಂದು ತಲುಪಿದೆ. ಎಲ್ಲ ಸರಕಾರಗಳು ಅನುಸರಿಸಿದ ಸೂತ್ರ ಹೀಗಿದೆ. ಅದೇನೆಂದರೆ, ಮಲೆನಾಡಿನ ಕಾಡು, ನೀರು ಮತ್ತು ಮರಳು ಎಂಬ ಪ್ರಕೃತಿ ಸಂಪತ್ತುಗಳು ಸರಕಾರಗಳಿಗೆ ಹಣ ತರುವ ದಂಧೆಗಳಾಗಿಬಿಟ್ಟಿವೆ. ಸಾಗುವ ಮುಂಗಾರು ಮಾರುತಗಳನ್ನು ತಡೆದುಕೊಳ್ಳುವ ಶಕ್ತಿ ಮರಗಿಡಗಳಿಗೆ ಇದ್ದಂತೆ ಇನ್ನಾವುದಕ್ಕೂ ಇಲ್ಲ. ಬೋಳುಗುಡ್ಡಗಳು ಅಂಥ ಹಾದು ಹೋಗುವ ಮಾರುತಗಳನ್ನು ಹೇಗೆ ತಡೆದಾವು? ಸರಕಾರಗಳು ಬೇವು ಬಿತ್ತಿ ಮಾವಿನ ಬೆಳೆಯನ್ನು ನಿರೀಕ್ಷಿಸಿದರೆ ಅದು ಹೇಗೆ ಸಾಧ್ಯ? ‘ದೇವತೆಗಳು ಕಾಲಿಡಲೂ ಹೆದರುವ ಪ್ರಕೃತಿಯ ದಿವ್ಯ ಸನ್ನಿಧಾನದಲ್ಲಿ ಮೂರ್ಖರು ದಾಪುಗಾಲು ಹಾಕಿದರು’ ಎಂದು ಹಿಂದೊಮ್ಮೆ ಪತ್ರಿಕೆಯೊಂದರಲ್ಲಿ ಬರೆದಿದ್ದೆ.
ಮಲೆನಾಡಿನಲ್ಲಿ ಅರಣ್ಯಗಳ ಲೂಟಿ ಹೇಗೆ ನಡೆದಿದೆ ಎಂಬುದು ಅದನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದವರಿಗೆ ಗೊತ್ತು. ಅದು ಒತ್ತಟ್ಟಿಗಿರಲಿ. ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದ ಮುಂದೆ ಹೊಡೆದಾಡಿ ಏನೂ ಪ್ರಯೋಜನವಿಲ್ಲ. ಬದಲಾಗಿ ೧೯೨೪ರ ಒಪ್ಪಂದದ ಸಿಂಧುತ್ವ
ವನ್ನೇ ಸಂವಿಧಾನದ ೩೨ನೇ ಅನುಚ್ಛೇದದಲ್ಲಿ ರಿಟ್ ಅರ್ಜಿಯ ಮೂಲಕ ಪ್ರಶ್ನಿಸಬೇಕೇ ಹೊರತು ಇನ್ನೆಲ್ಲೂ ಆ ಕಾರ್ಯ ಸಾಕಾರಗೊಳ್ಳುವುದಿಲ್ಲ. ಅದರೊಟ್ಟಿಗೆ ರಿಟ್ ಅರ್ಜಿಯಲ್ಲಿ ಸದರಿ ಅರ್ಜಿ ತೀರ್ಮಾನವಾಗುವ ತನಕ, ಅದರ ಅನುಷ್ಠಾನವನ್ನು ತಡೆಹಿಡಿಯಬೇಕು ಎಂಬ ಮಧ್ಯಂತರ ಅರ್ಜಿ ಯನ್ನು ಹಾಕಬೇಕು.
ಹಾಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕಾಲಕ್ಕೆ ಕೆಳಕಂಡ ಅಂಶಗಳನ್ನು ಪರಿಶೀಲಿಸಬೇಕು ಎಂದು ದನಿಯೆತ್ತಬೇಕು:
? ೧೯೨೪ನೇ ಒಪ್ಪಂದದಲ್ಲಿ ಸಂಕಷ್ಟ ಸೂತ್ರವಿಲ್ಲ. ಒಂದು ವೇಳೆ ನೀರಿನ ಹರಿವು ಕಡಮೆಯಾದರೆ, ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ನಮೂದು ಇಲ್ಲ.
? ನೀರಿನ ಹಂಚುವಿಕೆಯ ವಿಷಯ ಬಂದಾಗ, ಕುಡಿಯುವ ಮತ್ತು ದಿನನಿತ್ಯಬಳಸುವ ನೀರು ಎಂಬ ಒಂದು ಭಾಗ ಹಾಗೂ ಬೆಳೆಗಳಿಗಾಗಿನ ನೀರು ಎಂಬ ಇನ್ನೊಂದು ಭಾಗದ ಪರಿಶೀಲನೆ ಆಗಬೇಕು.
? ಪ್ರಕೃತಿ ವರ ನೀಡಿ ಸಮೃದ್ಧವಾಗಿ ಮಳೆ ಬಂದಲ್ಲಿ, ಸದರಿ ಹೆಚ್ಚುವರಿ ನೀರನ್ನು ಅಂತರ್ಜಲ ರೂಪವಾಗಿ ಭೂಮಿಯ ಒಳಕ್ಕೆ ಬಿಡುವ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸುವ ಅವಕಾಶ.
ಈ ಎಲ್ಲ ಅಂಶಗಳನ್ನು ಸಮರ್ಪಕವಾಗಿ ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟರೆ ಆಗ ಪರಿಹಾರ ಸಿಗುವುದು ಖಂಡಿತ. ಬದಲಾಗಿ ಇಂಥ ವಿಷಮ ಸನ್ನಿವೇಶದಲ್ಲಿ ಇಡಿಯ ರಾಜ್ಯವನ್ನು ಅಲ್ಲದೆ, ರಾಜ್ಯದ ಜನತೆಯನ್ನು ದುರ್ಭರ ಪರಿಸ್ಥಿತಿಗೆ ಈಡುಮಾಡುವ ಸಂಘ-ಸಂಸ್ಥೆಗಳ ಯಾವುದೇ ಕ್ರಮವು ಅವುಗಳ ಆಕ್ರೋಶವನ್ನು ಹೊರಹಾಕಬಹುದೇ ಹೊರತು ಅದರಿಂದ ಪರಿಹಾರ ಸಾಧ್ಯವಿಲ್ಲ. ರಾಷ್ಟ್ರದ ಜನತೆ ಒಪ್ಪಿಕೊಂಡ ಸಂವಿಧಾನಕ್ಕೇ ತಿದ್ದುಪಡಿ ಗಳನ್ನು ತರಲು ಅವಕಾಶವಿದ್ದು ಅಂಥ ತಿದ್ದುಪಡಿಗಳನ್ನು ತರಲಾಗಿದೆ.
ಹಾಗಿದ್ದ ಮೇಲೆ ನೂರು ವರ್ಷಗಳಿಗೆ ಹಿಂದಿನ, ಅಂದಿದ್ದ ಪರಿಸ್ಥಿತಿಯಲ್ಲಿ ತರಲಾದ, ಈಗಿನ ಸನ್ನಿವೇಶದಲ್ಲಿ ಕಿತ್ತುಹೋದ ಒಪ್ಪಂದವನ್ನು ಈಗ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಮಂಡಿಸಲು ಸಾಧ್ಯವಿಲ್ಲವೇ? ಅದೂ ಅಲ್ಲದೆ, ಮೇಲೆ ಹೇಳಿದ ಪುನರ್‌ವಿಂಗಡಣೆಯ ನಂತರವೂ ಹಿಂದಿನ ಒಪ್ಪಂದವನ್ನು ಅನುಷ್ಠಾನಗೊಳಿಸಬೇಕೆಂದು ಹೇಳುವುದು ಅಸಾಂವಿಧಾನಿಕ ವಲ್ಲವೇ? ಇದರ ಬಗ್ಗೆ ಪ್ರಾಜ್ಞಚಿಂತನೆ ನಡೆದು ತಕ್ಷಣ ಕ್ರಮ
ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ತೊಂದರೆಗೆ ಒಳಗಾಗುವ ವರು ನಾಡಿನ ಸಾಮಾನ್ಯ ಜನತೆ.
(ಲೇಖಕರು ನ್ಯಾಯವಾದಿ ಮತ್ತು ಪರಿಸರವಾದಿ)