Wednesday, 11th December 2024

ಅಂತೂ ಇಂತೂ ಕುಂತೀಪುತ್ರರಿಗೆ ವನವಾಸವೇ ಗತಿ !

ಭಾಸ್ಕರಾಯಣ

ಎಂ.ಕೆ.ಭಾಸ್ಕರ ರಾವ್

ಕಾವೇರಿ ನದಿನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ತಾಳಿರುವ ಧೋರಣೆ ಗಮನಿಸಿದರೆ ಭವಿಷ್ಯ ಒಡ್ಡಲಿರುವ ಭಯಾನಕ ಸ್ಥಿತಿಯ ತಣ್ಣನೆಯ ಕ್ರೌರ್ಯ
ಕರುಳು ಹಿಂಡುತ್ತದೆ. ಇಂಥ ಸನ್ನಿವೇಶದಲ್ಲಿ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ವೈಶಾಲಿಯಲ್ಲಿ ನಿರ್ಮಿಸುತ್ತಿರುವ ಅಣೆಕಟ್ಟೆಯನ್ನು ನೋಡಬೇಕಿದೆ.

ಮಹಾರಾಷ್ಟ್ರ ಸರಕಾರ ಆ ರಾಜ್ಯದ ವೈಶಾಲಿ ಎಂಬಲ್ಲಿ ಕೃಷ್ಣಾ ನದಿಗೆ ಕಟ್ಟುತ್ತಿರುವ ಅಣೆಕಟ್ಟೆಯೊಂದರ ನಿರ್ಮಾಣದ ಆತಂಕಕಾರಿ ಸುದ್ದಿ ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪ ಆಯಿತಾದರೂ ತಣ್ಣನೆಯ ಪ್ರತಿಭಟನೆಯೂ ಇಲ್ಲದಂತೆ ಕರಗಿ ಹೋಗಿದ್ದು ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದದಲ್ಲಿ ನಮ್ಮ ಶಾಸಕಾಂಗಕ್ಕೆ ಇರುವ ನಿಷ್ಕಾಳಜಿಯನ್ನೂ ಸರಕಾರದ ಬೇಜವಾಬ್ದಾರಿಯನ್ನೂ ಏಕಕಾಲಕ್ಕೆ
ಬಹಿರಂಗಗೊಳಿಸಿತು.

ಮಹಾರಾಷ್ಟ್ರದಲ್ಲಿ ಕೊಯ್ನಾ ಎಂದು ಕರೆಯಲಾಗುವ ಕೃಷ್ಣಾ ನದಿ ನಮ್ಮ ರಾಜ್ಯಕ್ಕೆ ಹೇಗೋ ಆ ರಾಜ್ಯಕ್ಕೂ ಬಹು ಮಹತ್ವದ ಜಲಸಂಪನ್ಮೂಲ. ನದಿಯಲ್ಲಿ ಹರಿಯುವ ಒಂದೊಂದು ಹನಿ ನೀರೂ ಎರಡೂ ರಾಜ್ಯಗಳಿಗೆ ಬಂಗಾರ. ಕರ್ನಾಟಕದಿಂದ ಮುಂದಕ್ಕೆ ತೆಲಂಗಾಣ, ಆಂಧ್ರಪ್ರದೇಶಗಳಿಗೆ ನೀರುಣಿಸಿ
ಬಂಗಾಳ ಕೊಲ್ಲಿ ಮಹಾಸಾಗರದಲ್ಲಿ ಐಕ್ಯವಾಗುವ ಕೃಷ್ಣೆಯಲ್ಲಿ ವಾರ್ಷಿಕ ನಿಶ್ಚಿತ ಮುಹೂರ್ತದಲ್ಲಿ ಗಂಗೆಯೂ ಪ್ರವಹಿಸುತ್ತದೆಂಬ ನಂಬಿಕೆ ಆಸ್ತಿಕ ಸಮುದಾಯದಲ್ಲಿದೆ. ಸಹಸ್ರಾರು ಹಳ್ಳಿ, ಗ್ರಾಮ, ನಗರ, ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ನೀರಿನ ಮೂಲ ಕೃಷ್ಣಾ ನದಿ. ಜಾನುವಾರು, ಪಕ್ಷಿ, ಸಾಧು-ಕ್ರೂರ
ಪ್ರಾಣಿಸಂಕುಲಕ್ಕೆ ಜೀವಾಮೃತ. ಈ ಮಾತಿಗೆ ನಮ್ಮ ದೇಶದ ಎಲ್ಲ ನದಿಗಳು, ಜಗತ್ತಿನ ಎಲ್ಲ ದೇಶದ ನದಿಗಳೂ ಪಕ್ಕಾ ಮತ್ತು ಜೀವಂತ ಉದಾಹರಣೆಗಳೇ ಹೌದು.

ಇವೆಲ್ಲ ಸರಿಯೇ, ಆದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿಯವರು ಪ್ರಸ್ತಾಪಿಸಿರುವ ವೈಶಾಲಿ ಅಣೆಕಟ್ಟೆ ಪ್ರಸ್ತಾಪ ಬಗ್ಗಡ ಏಳಿಸಿದೆ. ಕೃಷ್ಣಾ ಹುಟ್ಟುವುದು ಮಹಾರಾಷ್ಟ್ರದಲ್ಲಿ, ಅದರ ಜಲಾನಯನ ಪ್ರದೇಶದ ಬಹುಭಾಗ ಅದೇ ರಾಜ್ಯದಲ್ಲಿರುವ ಪಶ್ಚಿಮ ಘಟ್ಟದ ಸಾಲು. ಬೀಳುವ ಮಳೆ ನೀರೆಲ್ಲವೂ ಕೃಷ್ಣಾ ಪಾತ್ರಕ್ಕೆ ಬಂದು ನದಿಗೆ ಸರ್ವಋತು ನದಿಯೆಂಬ ಪಟ್ಟ ಕಟ್ಟಿದೆ. ವರ್ಷದ ೩೬೫ ದಿವಸವೂ ಹರಿಯುವ ದಕ್ಷಿಣ ಭಾರತದ ಅಪರೂಪದ ನದಿಗಳಲ್ಲಿ ಕೃಷ್ಣೆಯೂ
ಒಂದು. ನಾವು ಮನುಷ್ಯರು ನಾಲಗೆ ತುದಿಯಲ್ಲಿ ಮಣಮಣಿಸುವ ‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವುದು ಈ ನದಿಗಳ ಹರಿಯುವಿಕೆಯ ಅಸಲಿ ಅಂತರಮರ್ಮ. ಹೆತ್ತ ತಾಯಿ ಮಕ್ಕಳಿಗೆ ಮೊಲೆಯೂಡಿಸಿ ಸುಖಿಸುವ ಪರಿಗೆ ಇದು ಪರ್ಯಾಯ.

ನದಿಗಳ ನೀರು ಕುಡಿಯುವ ಸಕಲ ಜೀವಜಂತುಗಳೂ ಈ ಸುಖವನ್ನು ಅನುಭವಿಸುವುದು ಕೋಟ್ಯಂತರ ವರ್ಷದಿಂದ ಅನೂಚಾನವಾಗಿ ನಡೆದುಬಂದಿರುವ ಜಾಗತಿಕ ಪರಂಪರೆ. ಎಂದೇ ನೀರು ಎಲ್ಲರ ಆಸ್ತಿ. ಅದರ ಮೇಲೆ ವ್ಯಕ್ತಿಗತವಾಗಿ ಯಾರದೇ ಯಾವುದೇ ರಾಜ್ಯ, ದೇಶದ ಸ್ವಾಮ್ಯ ಸಲ್ಲ. ಇವತ್ತಿನ ಜಾಗತಿಕ ಹವಾಮಾನ ಪರಿಸ್ಥಿತಿ ಬದಲಾಗಿದೆ. ಮಳೆಗಾಲ ಎನ್ನುವುದು ಪಂಚಾಂಗ, ಕ್ಯಾಲೆಂಡರ್‌ನಲ್ಲಿರುತ್ತದೆಯೇ ವಿನಾ ಮೋಡ ಬಲಿತು ಮಳೆ ಸುರಿಸುವುದರಲ್ಲಿ
ಕಾಣಿಸುತ್ತಿಲ್ಲ. ಮಳೆ ಆಶ್ರಯದ ಜಗತ್ತು ಕಂಗಾಲಾಗುತ್ತಿರುವ ಸನ್ನಿವೇಶವನ್ನು ಜಗತ್ತಿನ ಅನೇಕ ದೇಶಗಳು ಅನುಭವಿಸುತ್ತಿವೆ.

ಜಗತ್ತಿ ನಲ್ಲಿ ಅತಿಹೆಚ್ಚು ಬಂಜರು ಪ್ರದೇಶವಿರುವ ದೇಶಗಳಲ್ಲಿ ಭಾರತವೂ ಒಂದು. ನೀರಾವರಿಗೆ ಒಳಪಟ್ಟಿರುವ ನಮ್ಮ ದೇಶದ ಪ್ರದೇಶ, ಭಾರತದ ಭೌಗೋಳಿಕ ವಿಸ್ತಾರಕ್ಕೆ ಹೋಲಿಸಿ ನೋಡಿದರೆ ತೀರಾ ಕಡಿಮೆ. ಇದು ಎಲ್ಲ ದೇಶ ಕಾಲದ ಗತಿ ಎನಿಸಿದೆ. ಪರಿಸ್ಥಿತಿ ಈಗಲೇ ಹೀಗಿರುವಾಗ ಮುಂದೊಂದು ಕಾಲದಲ್ಲಿ ಹನಿಹನಿ ನೀರಿಗಾಗಿ ಜನ ಬಡಿದಾಡುವ, ರಾಜ್ಯ ರಾಜ್ಯಗಳು ನದಿನೀರಿನ ಮೇಲಿನ ಹಕ್ಕು ಸ್ವಾಮ್ಯಕ್ಕಾಗಿ ಮನುಷ್ಯತ್ವ ಮರೆಯುವ, ದೇಶದೇಶಗಳ ನಡುವೆ ಯುದ್ಧವೇ ನಡೆಯುವ ಅಪಾಯದ ಮುನ್ಸೂಚನೆ ಸಿಗುತ್ತಿದೆ. ಕಾವೇರಿ ನದಿನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ತಾಳಿರುವ ಧೋರಣೆ ಗಮನಿಸಿದರೆ ಭವಿಷ್ಯ
ಒಡ್ಡಲಿರುವ ಭಯಾನಕ ಸ್ಥಿತಿಯ ತಣ್ಣನೆಯ ಕ್ರೌರ್ಯ ಕರುಳು ಹಿಂಡುತ್ತದೆ.

ಇಂಥ ಸನ್ನಿವೇಶದಲ್ಲಿ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ವೈಶಾಲಿಯಲ್ಲಿ ನಿರ್ಮಿಸುತ್ತಿರುವ ಅಣೆಕಟ್ಟೆಯನ್ನು ನೋಡಬೇಕಿದೆ. ವಿಧಾನಸಭಾ ಕಲಾಪದ ಪತ್ರಿಕಾ
ವರದಿಯನ್ನು ಒಮ್ಮೆ ಅವಲೋಕಿಸೋಣ.‘ಮಹಾರಾಷ್ಟ್ರ ಸರಕಾರ ವೈಶಾಲಿ ಎಂಬಲ್ಲಿ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಅಣೆಕಟ್ಟು ನಿರ್ಮಾಣಕಾರ್ಯ ಇನ್ನೊಂದು ವರ್ಷದಲ್ಲಿ ಪೂರ್ಣವಾಗಲಿದೆ. ಇದರಿಂದಾಗಿ ರಾಜ್ಯಕ್ಕೆ ಕೃಷ್ಣಾ ನೀರಿನ ಹರಿವು ಅಕ್ಟೋಬರ್‌ನಿಂದಲೇ ನಿಲ್ಲುತ್ತದೆ…. ‘ಈ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾದರೆ
ನೀರಿನ ಕೆಳಮುಖ ಹರಿವು ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ನಮ್ಮ ರಾಜ್ಯದ ಸುಮಾರು ಏಳು ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಅಜಮಾಸು ೬೦ ಲಕ್ಷ ಎಕರೆ ಕೃಷಿ ನೀರಿಲ್ಲದೆ ಕುಂಠಿತವಾಗಲಿದೆ….’.

ಸವದಿಯವರು, ಬೆಳಗಾವಿ ಜಿಲ್ಲೆ ಕೃಷ್ಣಾ ಪಾತ್ರದ ಅಥಣಿ ಶಾಸಕರು. ಈ ಹಿಂದೆಯೂ ಶಾಸಕರಾಗಿ ಸಚಿವರಾಗಿ, ಉಪ ಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ತಮ್ಮ ಮತಕ್ಷೇತ್ರ ಒಳಗೊಂಡಂತೆ ನದಿ ದಂಡೆಯ ಜನರ ಸಮಸ್ಯೆ ಅವರ ಮಾತುಗಳಲ್ಲಿ ಕಾಣಿಸಿಕೊಂಡಿದೆ. ಈ ವಿಚಾರದತ್ತ ಜಲ ಸಂಪನ್ಮೂಲ ಸಚಿವರು ಗಮನ ಹರಿಸಬೇಕು ಎಂಬುದು ಅವರು ಮಾಡಿಕೊಂಡ ಮನವಿ. ಮುಕ್ತಾಯಗೊಂಡ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಕುರಿತಂತೆ ತೌಡು ಕುಟ್ಟುವ ರೀತಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸವದಿ ಮಾಡಿರುವ ಪ್ರಸ್ತಾಪವನ್ನು ಬದಿಗೆ ತಳ್ಳಿದ್ದು
ಸ್ಪಷ್ಟ. ಜಲ ಸಂಪನ್ಮೂಲ ಸಚಿವರು ಏನಾದರೂ ಹೇಳಿಯಾರೆಂಬ ನಿರೀಕ್ಷೆ ಹುಸಿಯಾಗಿದ್ದು ಕೂಡಾ ಆಡಳಿತ ಪಕ್ಷದ ತಾತ್ಸಾರ ಮನೋಭಾವಕ್ಕೆ ಕನ್ನಡಿ ಹಿಡಿಯಿತು. ಮೇಕೆದಾಟು ಸೇರಿದಂತೆ ಕಾವೇರಿ ಕೊಳ್ಳದ ಯೋಜನೆಗಳತ್ತ ಈಗ ಗಮನ ಹರಿಸೋಣ.

ಇಲ್ಲಿ ಕರ್ನಾಟಕದಲ್ಲಿ ಸಣ್ಣದೊಂದು ಕೆರೆ ಹೂಳನ್ನು ಎತ್ತಿದರೂ ತಮಿಳುನಾಡು ಕ್ಯಾತೆ ತೆಗೆಯುತ್ತದೆ. ಗಾಳಿಗೆ ಅಲ್ಲಾಡಿಯೋ, ಭೂಮಿ ಸಡಿಲಗೊಂಡೋ ಬಂಡೆಯೊಂದು ಮೇಕೆದಾಟು ಯೋಜನಾ ಪ್ರದೇಶದಲ್ಲಿ ಬಿದ್ದರೆ ಕಿವಿ ನಿಮಿರುವ ತಮಿಳುನಾಡು ಸರಕಾರ ಮತ್ತು ಎಲ್ಲ ಪಕ್ಷಗಳು ಕರ್ನಾಟಕ ಹೇಳದೇ ಕೇಳದೇ ಅನುಮತಿಯೇ ಇಲ್ಲದೆ ಮೇಕೆದಾಟು ಯೋಜನಾ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ಗಂಟಲು ಹರಿಯುವಂತೆ ಬೊಬ್ಬೆ ಹಾಕುತ್ತವೆ. ಕೋರ್ಟ್‌ಗೆ ದೂರು ಸಲ್ಲಿಸುತ್ತದೆ, ಸುಪ್ರೀಂ ಕೋರ್ಟ್‌ನ ಕದ ತಟ್ಟುತ್ತವೆ, ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಿ ತಮಿಳುನಾಡಿನ ಕಥೆ ಮುಗಿದೇ ಹೋಯಿತೆಂದು ಕಥೆ ಕಟ್ಟುತ್ತವೆ.
ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಎಲ್ಲ ಕಾಯ್ದೆಶೀರ ವೇದಿಕೆಗಳಲ್ಲೂ ದೂರು ದಾಖಲಿಸಿ ನ್ಯಾಯ ಬೇಡುತ್ತವೆ.

ತಮಿಳುನಾಡು ವಿಧಾನಸಭೆಯಲ್ಲಿ ಸರ್ವಪಕ್ಷ ಬೆಂಬಲಿತ ಸರ್ವಾನುಮತದ ಠರಾವು ಅಂಗೀಕಾರಗೊಂಡು ಕರ್ನಾಟಕದ ವಿರುದ್ಧ ಏನೆಲ್ಲ ಅನ್ನಬೇಕೋ ಅದನ್ನೆಲ್ಲವನ್ನೂ ಕಾರಿಕೊಳ್ಳುತ್ತವೆ. ಸಂಸತ್ತಿನಲ್ಲಿ ತಮಿಳುನಾಡು ಸಂಸದರು ಪಕ್ಷ ಭೇದ ಮರೆತು ತಮಗೆ ಆಗಿರುವ ಅನ್ಯಾಯದತ್ತ ದೇಶದ ಗಮನ ಸೆಳೆಯುವ ಕೆಲಸ ಮಾಡಿ ಧಮಕಿ ಹಾಕಿ ಯಶಸ್ವಿಯೂ ಆಗುತ್ತಾರೆ. ಮೇಕೆದಾಟು ಯೋಜನಾ ಪ್ರದೇಶದಲ್ಲಿ ತನ್ನಿಂತಾನೇ ಉರುಳಿಬಿದ್ದ ಬಂಡೆಗಲ್ಲಿನ ಶೋಧದಲ್ಲಿ ಕರ್ನಾಟಕ ಸರಕಾರ ಭವಿಷ್ಯ ಕಂಡುಕೊಳ್ಳುವಂಥ ಪರಿಸ್ಥಿತಿ ನಿರ್ಮಿಸಿ ತಮಿಳುನಾಡು ವಿಶ್ರಾಂತಿ ಪಡೆಯುತ್ತದೆ.

ಅಲ್ಲಿ ಮಹಾರಾಷ್ಟ್ರ ಸರಕಾರ ವೈಶಾಲಿ ಯೋಜನಾ ಕಾಮಗಾರಿಯನ್ನು ಸವದಿ ಹೇಳಿದಂತೆ ಮುಕ್ತಾಯಗೊಳಿಸುವ ಹಂತಕ್ಕೆ ಬಂದಿದ್ದರೂ ಕರ್ನಾಟಕ ಸರಕಾರ, ಇಲ್ಲಿಯ ಎಲ್ಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಮತ್ತು ಕರ್ನಾಟಕದ ನೆಲ ಜಲಕ್ಕಾಗಿ ‘ಪ್ರಾಣಕೊಡುವ’ ಪಣ ತೊಟ್ಟಿರುವ ಕನ್ನಡ ಸಂಘಟನೆಗಳು ಉಸಿರನ್ನೇ ಎತ್ತಿಲ್ಲ ಎಂದರೆ ಎಲ್ಲೋ ಏನೋ ಎಡವಟ್ಟು ಆಗಿದೆ ಎಂದೇ ಅರ್ಥ. ಸವದಿಯವರನ್ನು ಬೆಂಬಲಿಸಿ ಅವರದೇ ಪಕ್ಷದ ಶಾಸಕರು ಧ್ವನಿ ಏರಿಸಿ ಸರಕಾರ ಉತ್ತರ ಕೊಡುವಂತೆ ಮಾಡಬಹುದಾಗಿತ್ತು.

ಸರಕಾರವನ್ನು ಕಟ್ಟಿ ಹಾಕುವ ಛಲದಲ್ಲಿ ಅಽವೇಶನಕ್ಕೆ ಬಂದಿದ್ದ ವಿರೋಧ ಪಕ್ಷಗಳಿಗೆ ಇದು ಆನೆಬಲ ತರುವ ವಿಚಾರವಾಗಿತ್ತು. ಆದರೆ ಅವರಲ್ಲಿ ಯಾರೊಬ್ಬರೂ ತಪ್ಪಿಕೂಡಾ ಕಮಕ್-ಕಿಮಕ್ ಅನ್ನಲಿಲ್ಲ. ಸವದಿ ಮಾತಿಗೆ ಬೆಂಬಲ ನೀಡಿದಂತಾಗಬಹುದೆಂಬ ರಾಜಕೀಯವನ್ನು ಬಿಜೆಪಿ ಮಾಡಿದ್ದರೆ, ಅದನ್ನು ಮೂರನೇ ದರ್ಜೆ ರಾಜಕೀಯ ಎಂದೇ ಹೇಳಬೇಕಾಗುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಹಿತ ಕಾಯುವುದು ಸಾಧ್ಯವಿಲ್ಲ ಎನ್ನುವುದು ಜೆಡಿಎಸ್‌ನ ಘೋಷವಾಕ್ಯ. ಆದರೆ ಈ ವಿಚಾರದಲ್ಲಿ ಅದು ಕೂಡಾ ನಾಲಗೆ ಬಿದ್ದಂತೆ ವರ್ತಿಸಿತು ಎನ್ನುವುದು ಕರ್ನಾಟಕದ ಪಾಲಿನ ದುರಂತ.

ನಮ್ಮ ರಾಜಕೀಯ ಪಕ್ಷಗಳ ಹೊಂದಾಣಿಕೆ ರಾಜಕೀಯಕ್ಕೆ ಇದನ್ನೊಂದು ನಿದರ್ಶನವಾಗಿ ತೆಗೆದುಕೊಳ್ಳಬಹುದೇ? ಅದನ್ನು ಕಾಲ ನಿರ್ಣಯಿಸಲಿದೆ. ಒಂದಂತೂ ಸತ್ಯ. ‘ಅಂತೂ ಇಂತೂ ಕುಂತೀಪುತ್ರರಿಗೆ ವನವಾಸವೇ ಗತಿ’ ಎನ್ನುತ್ತಾರಲ್ಲ ಹಾಗಾಗಿದೆ ಕೃಷ್ಣಾ ನದಿದಂಡೆ ನಿವಾಸಿಗಳ ಕಷ್ಟದ ಕಥೆ, ನಿಟ್ಟುಸಿರಿನ ವ್ಯಥೆ.