Thursday, 12th December 2024

ಸಮಾಜದಲ್ಲಿ ಅಸಹ್ಯ ಹುಟ್ಟಿಸುತ್ತಿದೆ ಸೀಡಿ ಲೇಡಿ ಪ್ರಕರಣ

ಹಂಪಿ ಎಕ್ಸ್‌’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ಅಮೆರಿಕದ ನಾಸಾ ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ಮಹಿಳೆಯೊಬ್ಬಳು ನಡೆದುಕೊಂಡು ಹೋಗುತ್ತಿರುವುದನ್ನು
ಗುರುತಿಸಿದ ವಿಸ್ಮಯಕಾರಿ ಚಿತ್ರವನ್ನು ತೋರಿಸುವಂತೆ ನಮ್ಮ ಕನ್ನಡ ಸುದ್ದಿವಾಹಿನಿಗಳು ಸೀಡಿಲೇಡಿಯ ಅಸ್ಪಷ್ಟ ಆಕೃತಿಯನ್ನು ಆಕೆ ಕಾರು ಹತ್ತುವುದನ್ನು ಇಳಿಯುವುದನ್ನು ಗುರುತುಮಾಡಿ ಭಯಾನಕ ಕುತೂಹಲ ದೊಂದಿಗೆ ತೋರಿಸುತ್ತಿರುವುದನ್ನು ನೋಡಿದರೆ ಈ ಸುದ್ದಿವಾಹಿನಿಗಳು ಇನ್ನೂ ಯಾವುದೋ ಜಮಾನ ದಲ್ಲಿರುವಂತೆ ಕಾಣುತ್ತಿದೆ.

ಹೀಗೆ ಸುದ್ದಿವಾಹಿನಿಗಳು ಪೈಪೋಟಿಗೆ ಬಿದ್ದು ದಿನವಿಡೀ ತೋರಿಸುತ್ತಿದ್ದರೆ ಜನ ಎಲ್ಲಾ ಕೆಲಸವನ್ನು ಬಿಟ್ಟು ಇದನ್ನೇ ನೋಡಿಕೊಂಡು ಕೂರುವಷ್ಟು ದಡ್ಡರಲ್ಲ ಎಂಬುದು ಯಾವ ವಾಹಿನಿಗಳಿಗೂ ಇನ್ನೂ ಅನಿಸುತ್ತಿಲ್ಲ. ಟಿ.ವಿ.ಯಲ್ಲಿ ಇಂಥ
ಅಶ್ಲೀಲತೆಗೆ ಸಂಬಂಧಿಸಿದ ಸುದ್ದಿಗಳನ್ನು ಹೀಗೆ ನಿರಂತರ ತೋರಿಸುತ್ತಿದ್ದರೆ ಮನೆಗಳಲ್ಲಿ ಮುಗ್ಧಮಕ್ಕಳು ‘ಯಾಕೆ ಹೀಗೆ ಆಕೆಯನ್ನು ತೋರಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರೆ ಹೆತ್ತವರಿಗೆ ಉತ್ತರಕೊಡುವುದಕ್ಕಿಂತ ಟಿ.ವಿ. ಆರಿಸುವುದೇ ಸರಿ ಎನಿಸುತ್ತದೆ.

ನಾಲ್ಕು ಗೋಡೆಗಳ ಮಧ್ಯೆ ಕದ್ದುಮುಚ್ಚಿ ಅನೈತಿಕ ರಾಸಲೀಲೆ ನಡೆಯುವುದೇ ಅಪರಾಧ. ಆದರೆ ಅದನ್ನು ಸುದ್ದಿವಾಹಿನಿಗಳು ಹೀಗೆ ಎಡಬಿಡದೆ ತೋರಿಸುವುದಿದೆಯಲ್ಲಾ ಅದು ರಾಸಲೀಲೆಗಿಂತಲೂ ಅಸಹ್ಯಕರವಾದ ಪ್ರತಿಕ್ರಿಯೆಯಾಗಿರುತ್ತದೆ. ಜನ ಈಗ ಮೊದಲಿನಂತಿಲ್ಲ. ರಾಜಕಾರಣಿಗಳ ಯೋಗ್ಯತೆ ತಂತ್ರ ಕುತಂತ್ರಗಳು ಎಲ್ಲವನ್ನೂ ನೋಡಿ ಎಲ್ಲರ ಅಯೋಗ್ಯತೆ ಗಳನ್ನು
ಕಂಡುಕೊಂಡಿದ್ದಾನೆ. ಹೀಗಾಗಿ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

ಸಿಡಿಲೇಡಿ ಯಾರು, ಆಕೆ ವಿಡಿಯೋದಲ್ಲಿ ಮಾತನಾಡಿರುವ ಸರಸ ಸಲ್ಲಾಪದ ಮಾತುಗಳು, ಆಕೆ ಸಂತ್ರಸ್ತೆಯೋ ಅಥವಾ ಸಂತೋಷ ಪಟ್ಟವಳೋ, ರಮೇಶ್ ಜಾರಕಿಹೊಳಿ ರಸಿಕತನವೇನು, ಇದನ್ನೆಲ್ಲಾ ಮಾಡಿಸಿದ್ದಾರೆನ್ನಲಾಗುತ್ತಿರುವ ಡಿಕೆಶಿ ಯಾರು, ಅವರ ಹಿಂದಿನ ಅಸಲಿ ಕಸುಬುಗಳೇನು, ಇದನ್ನೆಲ್ಲಾ ಆರೋಪಿಸುತ್ತಿರುವ ಸೀಡಿಲೇಡಿ ಪೋಷಕರ ನೈತಿಕತೆಯೇನು, ಲೇಡಿಯ ಪರ ವಾದಿಸುತ್ತಿರುವ ವಕೀಲರ ಅರ್ಹತೆಗಳೇನು, ಆಕೆಗೆ ಈಗ ನೆರವು ನೀಡುತ್ತಿರುವವರು ಯಾರು ಎಂಬುದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗಿ ಸಿಕ್ಕಾಪಟ್ಟೆ ಟ್ರೋಲ್‌ಗಳಾಗಿ ಎಲ್ಲರ ನಿಜವಾದ ಬಣ್ಣ ಬಯಲಾಗುತ್ತಿದೆ.

ಮತ್ತು ಇಡೀ ಪ್ರಕರಣ ಹೇಗೆ ಹಳ್ಳ ಹಿಡಿದು ಮುಂಡಮೋಚಿಕೊಂಡು ಹೋಗುತ್ತದೆ ಎಂಬುದನ್ನೂ ಗ್ರಹಿಸಿಕೊಂಡಿರುವ ಜನ
‘ಥೂ ನಿಮ್ಮ ಜನ್ಮಕ್ಕೆ’ ಎಂದು ಶಪಿಸಿ ಸುಮ್ಮನಾಗುತ್ತಾರಷ್ಟೆ. ಆದರೆ ಸುದ್ದಿವಾಹಿನಿಗಳು ಮಾತ್ರ ಇನ್ನೂ ‘ನಾಗವಲ್ಲಿ’ ಸಮ್ಮೋಹನ ದಿಂದ ಹೊರಬರುತ್ತಿಲ್ಲ. ಒಂದೂರಲ್ಲಿ ಇಬ್ಬರು ರಾಜಕೀಯ ಕಡುವೈರಿ ಗಳಿರುತ್ತಾರೆ. ಒಬ್ಬನ ತೆವಲಿಗೆ ಯುವತಿ ಯೊಬ್ಬಳು
ಬಲಿಯಾಗುತ್ತಾಳೆ ಅಥವಾ ಬಲೆ ಬೀಸುತ್ತಾಳೆ. ಅದು ಬಹಿರಂಗವಾಗುತ್ತದೆ. ಆಗ ಆಕೆಯೊಂದಿಗೆ ಆತನ ಕಡುವೈರಿ ಜತೆಯಾಗು ತ್ತಾನೆ. ಅಥವಾ ಕಡುವೈರಿಯೇ ಯುವತಿಯ ಪಾತ್ರವನ್ನು ಸೃಷ್ಟಿಸಿ ವ್ಯವಸ್ಥಿತಿವಾಗಿ ತಂತ್ರ ರೂಪಿಸುತ್ತಾನೆ.

ಇಷ್ಟು ಒನ್‌ಲೈನ್ ಸ್ಟೋರಿ. ಇದನ್ನು ಬಿಟ್ಟು ಇನ್ನೇನು ನಡೆದಿರಲು ಸಾಧ್ಯವೆಂದು ತಲೆಕೆಡಿಸಿಕೊಂಡು ಕೂರುವುದಕ್ಕೆ ಇದೇನು ಉಪೇಂದ್ರ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಲ್ಲ. ಅಸಲಿಗೆ ಉಪೇಂದ್ರ ಅವರ ಚಿತ್ರಗಳಲ್ಲೇ ಇಂಥದ್ದೆಲ್ಲ ವನ್ನು ಜನ ಹಸಿಹಸಿಯಾಗಿ ನೋಡಿ ರಾಜಕಾರಣಿಗಳ ನೀಚತನವನ್ನು ಕಂಡಿದ್ದಾರೆ. ಕಾಂಗ್ರೆಸ್‌ನ ಎಚ್.ವೈ. ಮೇಟಿ ಕಥೆ ಏನಾಯ್ತು? ಅವರೇನು ಪಶ್ಚಾತಾಪಪಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡರೇ? ನರ್ಸ್‌ಜಯಲಕ್ಷ್ಮಿ ಮತ್ತು ರೇಣುಕಾಚಾರ್ಯ ಕೇಸು ಏನಾಯ್ತು?. ಜಯಲಲ್ಷ್ಮಿ ಟಿ.ವಿ. ಶೋನಲ್ಲಿ ಭಾಗವಹಿಸಿ ಅಲ್ಲಿಂದ ಆಕೆ ಜನಪ್ರಿಯಗೊಂಡು ಒಬ್ಬ ನಟಿಯಾಗಿ ಬದಲಾದರು. ಇನ್ನು ರೇಣುಕಾಚಾರ್ಯ ಮತ್ತೇ ಗೆದ್ದು ಬಂದರು, ಈಗ ಮುಖ್ಯಮಂತ್ರಿಗಳಿಗೆ ಕಾರ್ಯದರ್ಶಿಗಳಾಗಿದ್ದಾರೆ.

ನಾಳೆ ಮಂತ್ರಿಯೂ ಆಗುತ್ತಾರೆ. ಸೀಡಿಲೇಡಿಯ ಪೋಷಕರ ವರ್ಶನ್‌ನಲ್ಲಿ ಡಿಕೆಶಿ ಖಳನಾಯಕರಾಗಿದ್ದರೆ, ಯುವತಿಯ ವರ್ಶನ್ನು
ರಮೇಶ್ ಜಾರಕಿಹೊಳಿ ವಿಲನ್ ಆಗಿದ್ದಾರೆ. ಇಬ್ಬರೂ ಈಗ ಪತ್ರಕರ್ತರಿಗೆ ಪಾತ್ರಗಳು, ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುವ ಪಾತ್ರಗಳೆಲ್ಲಾ ಪೋಷಕ ಪಾತ್ರಗಳಾಗಿವೆ. ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಗಳ ೨೪ ಗಂಟೆಗಳ ಚಿತ್ರೀಕರಣ ನಡೆದಿದ್ದರೂ ಕೇವಲ ಒಂದೂವರೆ ಗಂಟೆ ತೋರಿಸುವಂತೆ ಈ ಪ್ರಕರಣದಲ್ಲಿ ಅನೇಕ ಪ್ರಭಾವಿಗಳ ರಹಸ್ಯ ‘ಟಾಸ್ಕ್ ಗಳು’ ನಡೆದಿರುವುದು ಗೋಚರಿಸುತ್ತಿದ್ದು ‘ಅನ್  ಸೀನ್’ ದೃಶ್ಯಗಳು ಬಹಳಷ್ಟಿದೆ ಎನ್ನಲಾಗುತ್ತಿದೆ.

ಆದರೆ ಎಲ್ಲರೂ ಸತ್ಯಹರಿಶ್ಚಂದ್ರರಂತೆ ಆಡುತ್ತಿದ್ದಾರೆ. ಇನ್ನು ‘ಹೀರೋ’ ಇಲ್ಲದ ಈ ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ವಿಚಾರಣೆ ನಡೆಸಿ ಎಲ್ಲಾ ಪಾತ್ರಗಳ ಅಸಲಿಯತ್ತನ್ನು ಬೆತ್ತಲುಮಾಡಿ ಪೊಲೀಸರೇ ಹೀರೋ ಆಗುವುದು ಸಾಧ್ಯವೇ ಎಂಬುದೇ ಸಾರ್ವಜನಿಕರಲ್ಲಿ ಒಂದು ಹರಕೆಯಂತಾಗಿದೆ. ಪೊಲೀಸರೇನೋ ತನಿಖೆ ಮಾಡಿ ಪ್ರಕರಣವನ್ನು ಒಂದು ದಿಕ್ಕಿನಲ್ಲಿ ತಂದು ನಿಲ್ಲಿಸಿಬಿಡಬಹುದು. ಆದರೆ ಈ ಪ್ರಕರಣದಲ್ಲಿ ಅತ್ಯಾಚಾರ – ಸಂತ್ರಸ್ತೆ – ಅಪರಾಧಿ ಈ ಮೂರನ್ನೂ ಮೀರಿ ಇನ್ನೂ ಅನೇಕ ಆಯಾಮಗಳನ್ನು ಪಡೆದುಕೊಂಡು, ‘ರಾಜಕೀಯ ಕುತಂತ್ರದ’ ದೊಡ್ಡ ಹುತ್ತ ಕಟ್ಟಿಕೊಂಡಿರುವುದರಿಂದ ಇದು ಪಕ್ಷಗಳ
ನಾಯಕರ ಪ್ರತಿಷ್ಠೆಯ ವಿಚಾರವಾಗಿದೆ.

ಯುವತಿಯ ಮನೆಯವರು ಡಿ.ಕೆ.ಶಿವಕುಮಾರ್ ಅವರೇ ಸೂತ್ರಧಾರ ಎಂದು ಆರೋಪಿಸುತ್ತಾರೆ. ಆದರೆ ಅವರ ಪರ ನಿಲ್ಲುವ ಪಕ್ಷದ ನಾಯಕರು, ಅಭಿಮಾನಿಗಳ ದೊಡ್ಡ ಸೈನ್ಯವೇ ಸೆಟೆದು ನಿಂತಿದೆ. ಎಲ್ಲವನ್ನೂ ವಿರೋಧಿಸುವ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯನವರು ಸದ್ಯಕ್ಕೆ ತಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನ ವಿರುದ್ಧವೂ ದನಿಯೆತ್ತುವುದನ್ನು ನಿರೀಕ್ಷಿಸುವಂತಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದಾಗ ಪೊಲೀಸ್ ಅಧಿಕಾರಿ ಗಣಪತಿಯವರು ‘ಇಂಥ ಮಂತ್ರಿಯೇ ನನ್ನ ಆತ್ಮಹತ್ಯೆಗೆ ಕಾರಣ’ ಎಂದು
ವಿಡಿಯೋ ಮಾಡಿ ಗೋಳಿಟ್ಟರೂ ಗಂಭೀರ ಕ್ರಮ ಕೈಗೊಳ್ಳದೇ ಇದ್ದು, ಈಗ ಸೀಡಿಲೇಡಿಗೆ ಏನಾದರು ಆದರೆ ಅದಕ್ಕೆ ಬಿಜೆಪಿ ಸರಕಾರವೇ ಹೊಣೆ ಎಂದು ಎಚ್ಚರಿಸುತ್ತಾರೆ.

ಮೇಲ್ನೋಟಕ್ಕೆ ಸೀಡಿಲೇಡಿಯ ಪರವಾಗಿ ವಾದಿಸುತ್ತಿರುವ ವಕೀಲ, ಆಕೆಗೆ ನೆರವು ಮತ್ತು ಕಾವಲುಪಡೆಯಾಗಿರುವ ವ್ಯಕ್ತಿಗಳೆಲ್ಲಾ
ಕಾಂಗ್ರೆಸ್ ಪಕ್ಷದವರೆಂಬ ಆರೋಪ ಕೇಳಿಬರುತ್ತಿದೆ. ಆದ್ದರಿಂದ ಇದು ಷಡ್ಯಂತ್ರವೋ ಹನಿಟ್ರ್ಯಾಪೋ, ಅತ್ಯಾಚಾರವೋ ಎಂಬ ಗೊಂದಲಕ್ಕೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಆ ಯುವತಿ ಯಾರೆಂದೇ ತಿಳಿದಿಲ್ಲ ಎಂಬ ಹೇಳಿಕೆ ನೀಡುತ್ತಾರೆ. ಆದರೆ ಯುವತಿ ತನ್ನೊಂದಿಗೆ ಮಂತ್ರಿಯೊಂದಿಗಿನ ಒಡನಾಟವನ್ನು ಸಾಕ್ಷಿ ಸಮೇತ ತನಿಖಾಧಿಕಾರಿಗಳಿಗೆ ನೀಡುತ್ತಾಳೆ.

ಒಟ್ಟಾರೆಯಾಗಿ ಇವರೆಲ್ಲಾ ಸಾರ್ವಜನಿಕರನ್ನು ಗೂಬೆಗಳೆಂದು ಭಾವಿಸಿದಂತಿದೆ. ಮಹಾಪ್ರಜೆಗಳು ಇಂಥ ನವರಂಗಿ ಗಳನ್ನು ನೋಡುವುದಕ್ಕಿಂತ ಗುಬ್ಬಿವೀರಣ್ಣ ರಂಗಮಂದಿರಕ್ಕೆ ಹೋಗಿ ಒಳ್ಳೆಯ ನಾಟಕವನ್ನು ನೋಡಿಬರಬಹುದಷ್ಟೆ ! ಇದೆಲ್ಲಕ್ಕಿಂತ ಅಪಾಯಕಾರಿ ಬೆಳವಣೆಗೆ ಏನೆಂದರೆ ಈ ಪ್ರಕರಣದಲ್ಲಿ ನೈತಿಕತೆ ಪ್ರಾಮಾಣಿಕತೆ ಮಾನವೀಯತೆ ಆತ್ಮಸಾಕ್ಷಿ ಇವುಗಳನ್ನು ಮೀರಿ
ಕಾನೂನಿನ ಅಂಶಗಳನ್ನೇ ಪ್ರತ್ಯಸಪಟ್ಟುಗಳನ್ನಾಗಿ ಬಳಸಿಕೊಂಡು ಇಡೀ ಪ್ರಕರಣ ತಂತ್ರಗಾರಿಕೆಯಿಂದ ಯಾಂತ್ರಿಕವಾಗಿ ಎಳೆದುಕೊಂಡು ಹೋಗುತ್ತದೆಂಬುದನ್ನು ಅಲ್ಲಗಳೆಯುವಂತಿಲ್ಲ.

ಇನ್ನು ಈ ಪ್ರಕರಣದಲ್ಲಿ ಇವನೇ ಆರೋಪಿ ಇವನೇ ಜೈಲುಶಿಕ್ಷೆ ಅನುಭವಿಸುತ್ತಾನೆ ಎಂದು ನಂಬಿಕೆಯಿಡುವುದು ಅಷ್ಟು ಸುಲಭವಲ್ಲದಂತಾಗಿದೆ. ಅಷ್ಟರ ಮಟ್ಟಿಗೆ ಈ ಸೀಡಿ ಕೇಸು ರಾಜಕೀಯದ ಸುರುಳಿಯಲ್ಲಿ ಸಿಲುಕಿಕೊಂಡಿರುವುದು ಸ್ಪಷ್ಟ. ಕಾನೂನಾತ್ಮಕವಾಗಿ ಸೀಡಿಲೇಡಿ ‘ಸಂತ್ರಸ್ತೆ’ ಎಂದು ಎನಿಸಿಕೊಂಡರೂ ಸಾಮಾನ್ಯ ಜನರ ದೃಷ್ಟಿಯಲ್ಲಿ ಅತ್ಯಾಚಾರವೆಂದರೆ
ಚಲನಚಿತ್ರದಲ್ಲಿ ವಜ್ರಮುನಿ ಯವರು ಮಾಡುತ್ತಿದ್ದ ಖಳನಾಯಕನ ಪಾತ್ರದಂಥ ಕಲ್ಪನೆಯಿದೆ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆ ಎಂದು ಕರೆಸಿಕೊಂಡಿರುವ ಯುವತಿ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಒಡನಾಟ, ಕುಚೋದ್ಯ ಮಾತುಗಳು, ತುಂಟಾಟದ ಲೀಲೆಗಳು, ಪರಸ್ಪರ ದೈಹಿಕ ವರ್ಣನೆಗಳು, ಸರಸ ಸಲ್ಲಾಪಗಳನ್ನು ಗಮನಿಸಿದ ಕಾನೂನು ತಜ್ಞರು ಆಕೆಯನ್ನು ಸಂತ್ರಸ್ತೆ ಎಂದು ಕರೆಯುವುದೋ ಅಥವಾ ಹನಿಟ್ರ್ಯಾಪ್ ಅಪರಾಧಿಯನ್ನಾಗಿ ಪರಿಗಣಿಸಬಹುದೋ ಎಂಬುದನ್ನು ಮುಂದಿನ
ತನಿಖೆಯ ಆಧಾರದಲ್ಲಿ ತೀರ್ಮಾನಿಸ ಬಹುದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನು ಮೀರಿ ಆಕೆ ಪರಿಸ್ಥಿತಿಯ ‘ಕೈ’ ಗೊಂಬೆಯಾಗಿ ಅಸಹಾಯಕಳಾಗಿ ಪ್ರಭಾವಿಯ ‘ಅತ್ಯಾಚಾರಕ್ಕೆ’ ಒಳಗಾಗಿದ್ದರೆ ಆಕೆ
ಖಂಡಿತಾ ನ್ಯಾಯಕ್ಕೆ ಅನುಕಂಪಕ್ಕೆ ಅರ್ಹಳಾಗುತ್ತಾಳೆ. ಆದಕ್ಕಾಗಿ ಆಕೆ ‘ಅತ್ಯಾಚಾರ’ ಸಂತ್ರಸ್ತೆಯನ್ನಾಗಿ ಮಾರ್ಪಡಿಸಬೇಕಾದರೆ ಸಾಕಷ್ಟು ಪ್ರಯೋಗಗಳನ್ನು ತಂತ್ರ ಪವಾಡಗಳನ್ನು ಮಾಡಬೇಕಾದೀತು.

ಕಳೆದೊಂದು ವಾರದಿಂದ ಸರಕಾರ ಮಾಧ್ಯಮಗಳು ಈ ಪ್ರಕರಣದಲ್ಲೇ ಮುಳುಗಿಹೋಗಿದ್ದು ಸಾರ್ವಜನಿಕರಲ್ಲಿ ಅಸಹ್ಯ ಹುಟ್ಟಿಸಿದೆ. ಆದರೆ ನಿತ್ಯ ದುಡಿದು ತಿನ್ನುವ ಶ್ರಮಜೀಗಳು ಸ್ವಾಭಿಮಾನಿ ಶ್ರೀಸಾಮಾನ್ಯರು ‘ಇಂಥ ಪಾಪಿಗಳಿಗೆ ಮತನೀಡಿ ಗೆಲ್ಲಲು ಕಾರಣವಾದೆವಲ್ಲಾ’ ಎಂದು ಶಪಿಸಿ ಅಸಹಾಯಕ ರಾಗುತ್ತಾರಷ್ಟೆ.

ಇನ್ನೊಂದಷ್ಟು ಗುಲಾಮ ಮನಸ್ಥಿತಿಗಳು ಸೋಂಬೇರಿಗಳು ಮೈಗಳ್ಳರು ತಮ್ಮ ನಾಯಕ ಪರಮಪವಿತ್ರ ಎಂದು ಯಥಾಪ್ರಕಾರ ಸತ್ತೆಣಕ್ಕೆ ಸಿಂಗಾರ ಮಾಡಿ ಸಂಭ್ರಮಿಸುತ್ತಾರಷ್ಟೆ. ಇನ್ನು ಬಿಜೆಪಿ ವಿಷಯಕ್ಕೆ ಬಂದರೆ ಒಂದೊಮ್ಮೆ ರಮೇಶ್‌ಜಾರಕಿಹೊಳಿ ಅಪರಾಧಿಯೆಂದು ಸಾಬೀತಾದರೆ ಬಿಜೆಪಿಯ ಮರ್ಯಾದೆಗೇನೂ ದಕ್ಕೆಯಾಗುವುದಿಲ್ಲ. ಆದರೆ ‘ರೆಬಲ್’ ಶಾಸಕರ ಗುಂಪಿನ ಬಲ ಕುಗ್ಗುವುದು ಆ ಪಕ್ಷದಲ್ಲಿನ ಮೂಲ ನಾಯಕರಿಗೆ ಹರ್ಷದಾಯಕ ಸಂಗತಿಯೇ.

ರಾಜಕೀಯ ಪಕ್ಷಗಳ ನಾಯಕರಿಗೆ ಈ ಪ್ರಕರಣವನ್ನು ಹೇಗೆಲ್ಲಾ ಸದುಪಯೋಗ ದುರುಪಯೋಗಪಡಿಸಿಕೊಳ್ಳ ಬಹುದೆಂಬ ಲೆಕ್ಕಾಚಾರ ವಿರುತ್ತದೆ. ಜತೆಗೆ ಇಡೀ ಪ್ರಕರಣ ರಾಜಕೀಯದ ಕೆಸರೆರಚಾಟಕ್ಕೆ ಪರಸ್ಪರ ಕಾಲೆಳೆಯುವುದಕ್ಕೆ ಕೆಲಸಕ್ಕೆ ಬರುತ್ತದೆಯೇ ಹೊರತು ಸಮಾಜದಲ್ಲಿ ಅಂಥ ಘನಂದಾರಿ ಬದಲಾವಣೆಗಳೇನೂ ಸಂಭವಿಸುವುದಿಲ್ಲ ಮತ್ತು ಆದರ್ಶಪ್ರಾಯ ಆಕೃತಿಗಳೇನು ಉದ್ಭಸುವುದಿಲ್ಲ.

ಇಷ್ಟು ಬಿಟ್ಟರೆ ಇಂಥ ನೂರು ಪ್ರಕರಣಗಳು ನಡೆದರೂ ‘ಸದ್ದು’ ವಾಹಿನಿಗಳಲ್ಲಿ ಹೊರತುಪಡಿಸಿ ಯಾವ ಅಲ್ಲೋಲ ಕಲ್ಲೋಲ
ಭೂಕಂಪವೂ ಸಂಭವಿಸುವುದಿಲ್ಲ. ಆದರೂ ಇಂಥ ನಿರಾಶಾವಾದವನ್ನು ಮೀರಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದು ನ್ಯಾಯ ಕಾನೂನು ಗೆದ್ದು ಅಪರಾಧಿಗಳಿಗೆ ಶಿಕ್ಷೆಯಾಗಿ ಜೈಲು ಸೇರಿದರೆನ್ನಿ. ರಾಜಕೀಯದ ‘ಸಂತ್ರಸ್ತರು’ ಸ್ವಜಾತಿ ಅಂಧಾಭಿಮಾನಿ
ಗಳು ಆತ ಜೈಲಿನಿಂದ ಬಿಡುಗಡೆ ಆಗವುದನ್ನೇ ಕಾದು ಆತ ಹೊರಗೆ ಬಂದಕೂಡಲೇ ಜೆಸಿಬಿ ಮೂಲಕ ಹೆಣಬಾರದ ಹಣ್ಣುಗಳ ಹಾರವನ್ನು ಹಾಕಿ ಪಕ್ಷದ ಕಚೇರಿಯವರೆಗೂ ತೆರೆದ ವಾಹನದಲ್ಲಿ ಶವಯಾತ್ರೆ ನಡೆಸಿ ಪುಷ್ಪವೃಷ್ಠಿ ಮಾಡಿ ಪಟಾಕಿ ಹೊಡೆದು ಸಂಭ್ರಮಿಸುವುದನ್ನು ಇದೇ ಸುದ್ದಿವಾಹಿನಿಗಳಲ್ಲಿ ದಿನಪೂರ್ತಿ ನೋಡಬೇಕಾದ ಕರ್ಮ ತಪ್ಪುವುದಿಲ್ಲ.

ನಂತರ ಪಕ್ಷಗಳೂ ಅಂಥ ಅಯೋಗ್ಯರಿಗೆ ದೊಡ್ಡ ಸ್ಥಾನಮಾನ ನೀಡಿ ಚುನಾವಣೆಗೆ ಅವಕಾಶ ನೀಡುತ್ತದೆ. ಅದರಂತೆ ಆತನ ಜಾತಿಯ ಅಭಿಮಾನಿಗಳು ಆತನ ಜಾತಿಯ ಮಠಾಽಶರುಗಳೂ ಬೆಂಬಲಿಸಿ ಆತನನ್ನು ಗೆಲ್ಲಿಸಿ ಪುನಃ ವಿಧಾನಸೌಧದೊಳಗೆ ಪ್ರತಿಷ್ಠಾಪಿಸುತ್ತಾರೆ. ಕುರುಡು ಜಾತಿವಾದಗಳು, ಬರಡು ಮಠಾಧಿಪತಿಗಳು ಇರುವವರೆಗೂ ರಾಜಕೀಯದಲ್ಲಿ ಎಂಥ ಪರಮ
ಪಾಪಿಯೂ ನೀಚನೂ ಸಹ ಮಹಾನಾಯಕನಾಗಿ ಕಂಗೊಳಿಸುತ್ತಾನೆ. ಇರುವವರಲ್ಲಿ ಹಿರಿಯ ಸಚಿವ ಈಶ್ವರಪ್ಪನವರೇ ನೈಜ ರಾಜಕಾರಣಿ ಯಂತೆ ಕಾಣುತ್ತಿದ್ದಾರೆ.

ತಮ್ಮ ಆಪ್ತ ಗೆಳೆಯರಾದ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೇ ಇಲಾಖೆಯ ಅಭಿವೃದ್ಧಿ ಕಾರ್ಯಗಳ ವಿಚಾರವಾಗಿ
ರಾಜ್ಯಪಾಲರಿಗೆ ಪಕ್ಷದ ವರಿಷ್ಠರಿಗೆ ದೂರು ನೀಡುತ್ತಾರೆ. ಯಾವ ಮುಲಾಜೂ ಇಲ್ಲದೆ ಇದ್ದದ್ದು ಇದ್ದಹಾಗೇ ಮಾತನಾಡಿ ನಿಷ್ಠೂರ ಕಟ್ಟಿಕೊಳ್ಳುತ್ತಾರೆ. ಇಂಥ ನೈತಿಕ ಮನೋಭಾವವನ್ನು ಎಲ್ಲಾ ಪಕ್ಷದ ನಾಯಕರೂ ರೂಢಿಸಿಕೊಂಡರೆ ಸಮಾಜದಲ್ಲಿ
ರಾಜಕಾರಣಿಗಳಿಗೆ ಗೌರವ ಘನತೆ ಹೆಚ್ಚಾಗುತ್ತದೆ.

ಆದರೆ ಇಂದು ತಮ್ಮ ಪಕ್ಷದ ನಾಯಕರು ಎಂಥ ಹೇಸಿಗೆ ತಿಂದರೂ, ನೀಚ ಭ್ರಷ್ಟ ಅವಿವೇಕಿಯಾದರೂ ಅವರ ವಿರುದ್ಧ ಮಾತನಾಡದೆ ಸಮರ್ಥಿಸಿಕೊಳ್ಳುವ ಅಯೋಗ್ಯ ನಾಯಕರೇ ಹೆಚ್ಚಾಗಿರುವುದು ದುರಂತ. ಪರಿಸ್ಥಿತಿ ಹೀಗಿರುವಾಗ ನಮ್ಮ ಸುದ್ದಿವಾಹಿನಿಗಳು ಜಾತ್ರೆ, ಸಂತೆಯಲ್ಲಿನ ವ್ಯಾಪಾರಿಗಳಂತೆ ಪೈಪೋಟಿಗೆ ಬಿದ್ದಿರುವುದು ಮಾಧ್ಯಮ ಕ್ಷೇತ್ರದ ದುರ್ದೈವ. ಸೀಡಿ
ಪ್ರಕರಣದ ಯುವತಿ ಚಿತ್ರಾನ್ನ ಸೇವಿಸಿದ್ದನ್ನೇ ದೊಡ್ಡ ಸುದ್ದಿಯಾಗಿ ತೋರಿಸುವುದು, ಒಂದೊಮ್ಮೆ ಆಕೆ ಚಿತ್ರಾನ್ನ ಬೇಡವೆಂದಿದ್ದರೆ ಚಿತ್ರಾನ್ನದಲ್ಲಿ ನಿಂಬೆಹುಳಿ ಕಡಿಮೆ ಇತ್ತಾ? ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿರಬಹುದಾ? ತೆಂಗಿನತುರಿ ಕಡಿಮೆ ಇತ್ತಾ? ಚಿತ್ರಾನ್ನದಲ್ಲಿ ಕಡಲೆಕಾಯಿ ಬೀಜ ಹಸಿಮೆಣಸಿನಕಾಯಿ ಹೆಚ್ಚಾಗಿತ್ತಾ? ಅಥವಾ ಚಿತ್ರಾನ್ನಕ್ಕೆ ಸೋನಾ ಮಸೂರಿ ಅಕ್ಕಿ ಬಳಸದೇ
ಇರಬಹುದಾ? ಇದೆಲ್ಲಾ ವಿಚಾರಗಳನ್ನು ನಾವು ನಿಮಗೆ ಹೇಳ್ತೀವಿ! ಎಂದು ರೀರೆಕಾರ್ಡಿಂಗ್ ಮಿಕ್ಸಿಂಗ್ ಗ್ರಾಫಿಕ್ಸ್ ಸಮೇತ ಹೇಳುತ್ತಿದ್ದರೇನೋ?.

ಹಾಗೆ ನೋಡಿದರೆ ಸಾಮಾಜಿಕ ಜಾಲತಾಣಗಳೇ ಪ್ರಬುದ್ಧತೆಯಿಂದ ವರ್ತಿಸುತ್ತಿವೆ. ಸೀಡಿಲೇಡಿಯ ಆಗಮನಕ್ಕಾಗಿ ಅಗತ್ಯ
ಕ್ಕಿಂತಲೂ ಹೆಚ್ಚಾಗಿ ಭದ್ರತೆಯನ್ನು ನೀಡಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದು ಎಷ್ಟು ಸರಿ ಎಂದು ಜನಗಳು ಪ್ರಶ್ನಿಸುತ್ತಿದ್ದಾರೆ. ಮೊನ್ನೆ ನರಗುಂದದಲ್ಲಿ ದಲಿತ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿ ಹತ್ಯೆ ಮಾಡಿದ್ದಾನೆ. ಆಕೆಯೂ ಅಮಾಯಕ ಯುವತಿ ಯಲ್ಲವೇ? ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕ ಪ್ರತಿಭಟನೆಯಲ್ಲಿ ಬೆಂಕಿಹಚ್ಚಿಕೊಂಡು
ಸತ್ತಿದ್ದಾನೆ. ರಾಜ್ಯದಲ್ಲಿ ದಿನೇ ದಿನೇ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ವಿದ್ಯಾರ್ಥಿಗಳಿಗೆ ಈ ವರ್ಷವು ಶಾಲೆಗಳು ತಪ್ಪುವ ಸಾಧ್ಯತೆ ಇದೆ. ಹೀಗೆ ಪ್ರತಿನಿತ್ಯ ಇಂಥ ಅನೇಕ ಸಾಮಾಜಿಕ ಕಳಕಳಿಯ ಸುದ್ದಿಗಳಿಗೆ ಮಹತ್ವ ನೀಡಿ ಸರಕಾರವನ್ನು ಸಮಾಜ ವನ್ನು ಜಾಗೃತಿಗೊಳಿಸುವ ಕೆಲಸವಾಗಬೇಕಿದೆ.