ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ದಾಸರು ಬರುವುದು ತಡವಾಗಿ ರಾಮೋತ್ಸವದಲ್ಲಿ ನಡೆಯಬೇಕಿದ್ದ ಹರಿಕಥೆ ವಿಳಂಬವಾಗಿತ್ತು. ನೆರೆದಿದ್ದ ಸಭಿಕರ ನಡುವೆ
ನಡೆಯುತ್ತಿದ್ದ ಮಾತು ಜೋರಾಗೇ ಇತ್ತು. ಅವರನ್ನು ಶಾಂತವಾಗಿಸಲು ಕೋರಿಕೆ ಸಲ್ಲಿಸುವ ಕೆಲಸ ಹತ್ತಿರದ ಸಂಬಂಧಿಯೊಬ್ಬರ ಮೇಲೆ ಬಿತ್ತು.
ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿ ಅಭ್ಯಾಸವಿರದ ಅವರು, ‘ಕಾರ್ಯಕ್ರಮ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗುತ್ತೆ.
ದಯವಿಟ್ಟು ಎಲ್ಲರೂ ಗಲಾಟೆ ಮಾಡಬೇಕು’ ಎಂದು ಕೋರಿದರು. ಈ ಪ್ರಸಂಗ ನಡೆದಿದ್ದು ನನ್ನ ಬಾಲ್ಯದಲ್ಲಿ, ಬೆಂಗಳೂರಿನ ಶಂಕರಪುರದಲ್ಲಿ. ಬಾಯ್ತಪ್ಪಿ ನಿಂದ ಮೈಕ್ ಮೂಲಕ ಮಾಡಿದ ಆ ಕೋರಿಕೆಯನ್ನು ಇಡೀ ದೇಶವೇ ಮನ್ನಿಸಿ ಇಂದು ನಮ್ಮನ್ನು ಆವರಿಸಿರುವ ಸದ್ದು-ಗದ್ದಲಕ್ಕೆ ಕಾರಣವಾಗಿದೆಯೇನೊ ಅನ್ನಿಸುತ್ತೆ.
ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮನ್ನು ತೆಪ್ಪಗಾಗಿಸಲು ಟೀಚರ್ ಸದ್ದು ಎನ್ನುತ್ತಿದ್ದರು. ಗಪ್‌ಚುಪ್ ಆಗುತ್ತಿದ್ದೆವು. ಇಂದಿನ ಮಕ್ಕಳು ಅದನ್ನು ಸದ್ದು ಮಾಡಿ ಎಂದು ಅರ್ಥಮಾಡಿಕೊಂಡರೆ ಆಶ್ಚರ್ಯವಿಲ್ಲ. ಮಗು ತೊದಲು ನುಡಿಗಳನ್ನಾಡುವಾಗ ಸಂಭ್ರಮಿಸುವ ನಾವು ಅದನ್ನು ಮುದ್ದು ಮಾಡಿದ್ದೇನು, ಅದೇ ತಪ್ಪು ಉಚ್ಚಾರಣೆಯನ್ನು ಮತ್ತೆ ಮತ್ತೆ ಹೇಳಿಸಿ ಚಪ್ಪಾಳೆ ತಟ್ಟಿದ್ದೇನು.
ಅದೇ ಮಗು ತೊದಲು ನುಡಿಯಿಂದ ಮೇಲ್ಮಟ್ಟಕ್ಕೇರಿ ನಿಮಗೆ ನೆಮ್ಮದಿಯಾಗಿರಲು ಬಿಡದೆ, ನಿಮಗೆ ನಿಮ್ಮ ಕೆಲಸ ಮಾಡಲೂ ಬಿಡದೆ ವಟವಟ ಮಾತನಾಡುವಾಗ ಅದನ್ನು ಬಾಯಿ ಮುಚ್ಚೆಂದು ಗದರುವವರೂ ನೀವೆ. ಅನ್‌ಲಿಮಿಟೆಡ್ ಟಾಕ್ ಟೈಮ್ ತಂದೊಡ್ಡಿರುವ ಸಮಸ್ಯೆಯೂ ಅಂತಹದ್ದೇ. ಮೊಬೈಲ್ ಫೋನ್ ಬರುವ ಮುಂಚೆ ಕಡಿಮೆ ಮಾತನಾಡುತ್ತಿzವೇ? ಮಾತನಾಡುವು
ದಂತೂ ಇತ್ತು. ಮಾತನಾಡುವದಕ್ಕೂ ಇತ್ತು. ಮಾತನಾಡುವ ತವಕವೂ ಇತ್ತು. ಆದರೆ, ಮಾತನಾಡಲು ಬೇಕಾದ ಮುಖ್ಯ
ಸಾಧನವಾದ ಟೆಲಿಫೋನ್ ಸೌಲಭ್ಯ ಸುಲಭವಾಗಿ ದೊರಕುತ್ತಿರಲಿಲ್ಲ.
ದುಬಾರಿ ಅನ್ನುವುದು ಒಂದು ಕಾರಣವಾದರೆ ಸರಕಾರೀ ಏಕಸ್ವಾಮ್ಯದಲ್ಲಿದ್ದ ಅಂಚೆ ಮತ್ತು ಟೆಲಿಗ್ರಾಫ್ ನೀವು ನಿಮ್ಮ ಗುರುತಿನ ಪುರಾವೆ ಒದಗಿಸುತ್ತಿದ್ದಂತೆ ಟೆಲಿಫೋನ್ ಸಂಪರ್ಕ ಒದಗಿಸುತ್ತಿರಲಿಲ್ಲ. ಟೆಲಿಫೋನ್ ಸಾಧನವನ್ನು ತಯಾರಿಕೆಯೂ ಐಟಿಐ
ಸ್ವಾಮ್ಯದಲ್ಲಿತ್ತು. ಸ್ಯಾಮ್ ಪಿತ್ರೋಡರಿಂದ ದೇಶಾದ್ಯಂತ ಗಲ್ಲಿಗಲ್ಲಿಯಲ್ಲಿ ಟೆಲಿಫೋನ್ ಬೂತ್‌ಗಳು ಬಂದವು. ಆಗಲೂ, ಒಂದು ರುಪಾಯಿಗೆ ಸೀಮಿತವಾಗಷ್ಟೆ ಮಾತನಾಡ ಬಹುದಿತ್ತು. ಹತ್ತು ನಿಮಿಷ ಮಾತನಾಡಬೇಕಿದ್ದಲ್ಲಿ, ಕೈತುಂಬ (ಹೊಸ) ಒಂದು
ರುಪಾಯಿಯ ನಾಣ್ಯಗಳನ್ನು ರೆಡಿ ಇಟ್ಟುಕೊಂಡು ಡಯಲ್ ಮಾಡಬೇಕಿತ್ತು.
ಅವಧಿ ಮುಗಿಯಿತೆಂದು ಬೀಪ್ ಬರುತ್ತಿದ್ದಂತೆ ಮತ್ತೊಂದು ಕಾಯಿನನ್ನು ಹುಂಡಿಯ ಕಿಂಡಿಗೆ ಅರ್ಪಿಸಬೇಕಿತ್ತು. ಫೋನ್ ಮಾಡುತ್ತಿರುವಾಗಲೇ, ಅದರ ಬರವಿಗಾಗಿ ಮುಕ್ಕಾಲು ಗಂಟೆ ಕಾದ ಬಸ್ ಬಂದರೆ ಕಾಲನ್ನು ಅಷ್ಟಕ್ಕೇ ಕಟ್ ಮಾಡಿ ದೌಡಾಯಿಸಿ ಬಸ್ ಹಿಡಿಯಬೇಕಿತ್ತು. ಬಸ್‌ನಲ್ಲಿ ಪ್ರಯಾಣಿಸುತ್ತಿರುವಾಗಲೇ ಯಾರಿಗೋ ಫೋನ್ ಮಾಡಿ ಅರ್ಧ ಗಂಟೆಯಲ್ಲಿ ಬಂದುಬಿಡುತ್ತೇ ನೆಂದು ತಿಳಿಸುವ ಅವಕಾಶವಿರಲಿಲ್ಲ.
ಜಾಗತೀಕರಣ ತಂದ ವ್ಯಾಪಕ ಪರಿವರ್ತನೆಯಿಂದ ಆ ಸನ್ನಿವೇಶ ಬದಲಾಗಿದೆ. ಬದಲಾವಣೆ ತಂದ ಪ್ರಯೋಜನಗಳ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ. ಅವುಗಳು ತಂದೊಡ್ಡಿರುವ ತಲೆನೋವೂ ಮೈಗ್ರೇನ್ ಹಿಂಸೆಯನ್ನು ಮೀರಿಸುತ್ತದೆ. ಸಂಪರ್ಕ ಸಾಧಿಸಬೇಕಾದ ವ್ಯಕ್ತಿ ಸಂಪರ್ಕಕ್ಕೆ ಸಿಗದಂತಾಗುವ ಸೌಕರ್ಯವನ್ನು ಮೊಬೈಲ್ ಒದಗಿಸಿದೆ. ಟವರ್ ಮೂಲಕ ಪೊಲೀಸರು ಅಪಹರಣಕಾರರನ್ನು ಬೇಕಾದರೆ ಪತ್ತೆ ಮಾಡಬಹುದು (ಆದರೆ ಆಯ್ದ ಕೆಲವು ಪ್ರಕರಣಗಳಲ್ಲಿ, ಯಾವುದೇ ಆಧುನಿಕ ತಂತ್ರಜ್ಞಾನವೂ ಅವರ ನೆರವಿಗೆ ಬರಲಾರವು!). ತುರ್ತಾಗಿ ಸಂಪರ್ಕಿಸಬೇಕಾದ ಅಧಿಕಾರಿಯೋ, ಗೆಳೆಯನೋ ಸಂಪರ್ಕಕ್ಕೆ ಸಿಗುವುದಿಲ್ಲ. ಸಿಗದುದಕ್ಕಾಗಿ ಕೊಡುವ (ಕೊಟ್ಟರೆ) ಸಬೂಬುಗಳು ವರ್ಣಮಯವೂ ಹೌದು, ವರ್ಣನಾತೀತವೂ ಹೌದು.
ಈ ಅನ್ ಲಿಮಿಟೆಡ್ ಟಾಕ್ ಟೈಮ್ ಸೌಲಭ್ಯ – ಅದನ್ನು ಸೌಲಭ್ಯವೇ ಎನ್ನುವುದಾದರೆ – ಒಂದು ರೀತಿ ಫುಲ್ ಮೀಲ್ಸ್ ಥರವೇ. ಬುಫೆ ಲಂಚ್ (buffet lunch) ಎಂದರೂ ನಡೆದೀತು. ಹೇಗಿದ್ದರೂ ದುಡ್ಡು ತೆತ್ತಾಗಿದೆ, ಅದಕ್ಕೆ ನ್ಯಾಯ ಒದಗಿಸಬೇಕಲ್ಲ, ಬೇಕೊ, ಬೇಡವೊ, ಮುಕ್ಕಿದ್ದೇ ಬಂತು. ಹೊಟ್ಟೆ ಕಸದ ತೊಟ್ಟಿಯಾದರೂ ಅಡ್ಡಿ ಇಲ್ಲ. ನನ್ನ ಹತ್ತಿರದ ಸಂಬಂಧಿಯೊಬ್ಬ ಅವನ ಚಿಕ್ಕಂದಿನಲ್ಲಿ ಕಣ್ಣು ಕತ್ತಲೆ ಬರುವವರೆಗೂ ಉಂಡಿದ್ದ. ಉಣ್ಣುವಾಗಾದರೊ ತಿಂದದ್ದು ಹೆಚ್ಚಾಯಿತೆಂದು ದೇಹ ವಿವಿಧ ರೀತಿಯಲ್ಲಿ ನೆನಪಿಸುತ್ತದೆ. ಮೊಬೈಲ್ ಬಳಸುವಾಗ ಅಂತಹ ಸೂಚನೆಗಳು ಸಿಗುವ ಖಾತರಿಯಿಲ್ಲ.
ಚಾರ್ಜ್ ಕರಗಿಹೋಗಬೇಕಷ್ಟೆ. (ಅದಿಲ್ಲವೆಂದರೆ, ಪ್ರೀ-ಪೇಡ್ ಕರೆನ್ಸಿ ಬರಿದಾಗಿರಬೇಕು ಅಥವಾ ಸಂಚಾರಿ ಪೊಲೀಸ್ ಅಡ್ಡಗಟ್ಟ ಬೇಕು.) ರೀಚಾರ್ಜ್ ಮಾಡುವವರೆಗಷ್ಟೆ ಬಿಡುವು. ಇದನ್ನು ಬರೆಯುವಾಗ, ಒಂದು ಅಳುಕು ಕಾಡುತ್ತಿದೆ. ಆಗಿನ್ನೂ ಸ್ನೇಹಿತೆ ಯಾಗಿದ್ದು ಬೇರೆ ಊರಿನಲ್ಲಿದ್ದ ಹೆಂಡತಿ ಯೊಂದಿಗೆ ನಿತ್ಯ ನಡೆಸುತ್ತಿದ್ದ ದೂರವಾಣಿ ಸಂಭಾಷಣೆಯನ್ನು ಅರ್ಧದಷ್ಟು ಕಡಿತ ಗೊಳಿಸಿದ್ದರೂ ನಾನೂ ಇಂದು ಅನುಕೂಲವಾಗಿರುತ್ತಿದ್ದೆ! ಸ್ವಸಮಾಧಾನದ ವಿಷಯವೆಂದರೆ, ಕೆಲಸದ ವೇಳೆಯಲ್ಲಿ ನಾವು ಸಂಭಾಷಣೆ ನಡೆಸುತ್ತಿರಲಿಲ್ಲ!
ಬಫೆ ಮೀಲ್ ಪ್ರಸ್ತಾಪಿಸಿದೆ. ಹೊಟ್ಟೆ ಕೆಡೆಸಿಕೊಳ್ಳದೆ ಊಟ ಮಾಡುವುದು ಹೇಗೆ ಎಂಬುದು ಪ್ರಶ್ನೆ. ಸರ್ ಎಂ ವಿಶ್ವೇಶ್ವರಯ್ಯರಂತೆ ಹಿತಮಿತವಾಗಿ ಉಣ್ಣುವ ಅಭ್ಯಾಸ ವಿಲ್ಲದಿದ್ದರೂ ಪರವಾಗಿಲ್ಲ, ಆರೋಗ್ಯದ ಬಗ್ಗೆ ತುಸುವೇ ಕಾಳಜಿ ಇದ್ದರೂ ಮಿತಿ ಮೀರಿ ತಿನ್ನುವುದನ್ನು ತಪ್ಪಿಸಬಹುದು. ಯಾವ ತಿನಿಸು ನಿಮಗೆ ಆಗಿ ಬರುತ್ತೆ/ ಬರುವುದಿಲ್ಲ ಎಂಬುದರ ಅರಿವೂ ಒಳ್ಳೆಯದು. ಕಟ್ಟಿದ
ದುಡ್ಡಿಗೆ ನ್ಯಾಯ ಒದಗಿಸದಿದ್ದರೆ ರೆಸ್ಟೋರೆಂಟ್ ಮಾಲೀಕ ಸುಮ್ಮನೆ ಲಾಭ ಗಳಿಸುತ್ತಾನಲ್ಲ ಎಂಬ ಲೆಕ್ಕಾಚಾರ ನಿಮ್ಮ
ಹೊಟ್ಟೆಯನ್ನು ಖಾತರಿಯಾಗಿ ಕೆಡಿಸುತ್ತದೆ ಎಂಬ ಅರಿವಿರಲಿ.
ಊಟ ನಿಮ್ಮಿಚ್ಛೆ, ಹಾಗಾಗಿ ಯಾರ ಜತೆಯೂ ಸ್ಪರ್ಧೆಗಿಳಿಯದಿದ್ದರೆ ಒಳಿತು. ಕೊನೇ ಪಕ್ಷ, ಅಕ್ಕಪಕ್ಕದವರು ಏನೆಂದು ಕೊಳ್ಳು ತ್ತಾರೊ ಎಂಬ ಸೂಕ್ಷ್ಮತೆಯೂ ಹೊಟ್ಟೆಬಾಕತನಕ್ಕೆ ಕಡಿವಾಣ ಹಾಕಬಲ್ಲದು. ಅನ್‌ಲಿಮಿಟೆಡ್ ಟಾಕ್ ಟೈಮ್ ವಿಷಯದಲ್ಲಿ ಯಾವ ರೀತಿಯ ಸಂಯಮ ಕಾಯ್ದುಕೊಳ್ಳಬೇಕೊ, ನಾನರಿಯೆ. ಧಾರಾಳವಾಗಿ ಸಿಗುತ್ತಿದ್ದ ಟಾಕ್ ಟೈಮ್‌ಗೆ ವಾಟ್ಸ್ ಆಪ್ ಕರೆಗಳೂ, ಉಚಿತ ಸಂದೇಶಗಳೂ ಸೇರಿಕೊಂಡು, ಅವುಗಳ ಪೂರ್ಣ ಪ್ರಯೋಜನವನ್ನು ಪಡೆಯಲು ನೀವು ನಿರುದ್ಯೋಗಿ ಯಾಗಿರಬೇಕು ಅಥವಾ ಜಾರಕಿಹೊಳಿ ಆಗಿರಬೇಕು.
300 ಪುಟಗಳಷ್ಟು ವಾಟ್ಸ್ ಆಪ್ ಮೆಸೇಜ್ ಮಾಡ್ತಾರೆ, ಅದೂ ಸಚಿವರಾಗಿ, ಅದೂ ಕರೋನಾ ಕಾಲದಲ್ಲಿ! ಅಷ್ಟೆಲ್ಲ ಮಾಡಿಯೂ ಅವರಿನ್ನೂ ಸಾಹುಕಾರ್ ಆಗಿಯೇ ಮುಂದುವರೆದಿzರೆ ಅಂದರೆ ಒಂದೊ, ಅವರು ಹೆಣ್ಣುಬಾಕರಲ್ಲ (ಅವರ ಸಂಬಂಧ/ಸಂಪರ್ಕ ಒಂದು ಹೆಂಗಸಿನ ಜತೆಗೆ ಸೀಮಿತವಾಗಿದ್ದಿರಬೇಕು) ಅಥವಾ ಈ ಮುಂಚೆ ಅವರೇ ಘೋಷಿಸಿರುವಂತೆ ಆ ಸಿಡಿಯಲ್ಲಿರುವುದು
ಅವರಲ್ಲ.
ಕರೋನಾದ ಮೊದಲ ಅಲೆ ಬೀಸಿದಾಗ ಜಾರಕಿಹೊಳಿ ಉಚಿತ ಕರೆಗಳ ಪೂರ್ಣ -ಯಿದೆ ಪಡೆಯುತ್ತಿದ್ದರೆಂಬುದು ಸರಿ. ಅದರ ಎರಡನೇ ಅಲೆ ಮೇಲೇಳುತ್ತಿರುವಾಗ ಕರ್ನಾಟಕ ರಾಜ್ಯದ ಜನತೆ ಕೈ ಎಟುಕಿನಲ್ಲಿರುವ ಸಾಮಾಜಿಕ ಜಾಲತಾಣದಲ್ಲಿ ಜಾರಕಿ ಹೊಳಿಯ ವಿರುದ್ಧ ಸುನಾಮಿಯೋಪಾದಿಯಲ್ಲಿ ದನಿ ಎತ್ತಿzರೆ. ಸಿಡಿ ಹೊರಬಿದ್ದ ನಂತರದಲ್ಲಿ ತಮ್ಮ ಗಂಡಸ್ತನದ ಮತ್ತೊಂದು ಮುಖವನ್ನು ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಜಾರಕಿಹೊಳಿ ದನಿ ಏರಿಸಿ ಮಾತಾಡಿದ್ದರು.
ಕ್ರಮೇಣ ಅವರ ದನಿ ಕ್ಷೀಣಿಸುತ್ತಿದ್ದಂತೆ ಅವರ ಬೆಂಬಲಿಗರು ದನಿ ಏರಿಸುವುದರ ಜತೆಗೆ ಸಿಡಿ ದಿಗ್ದರ್ಶಕರೆನ್ನಲಾದ ಡಿಕೆ ಶಿವಕುಮಾರ್ ಅವರ ಮೇಲೆ ಪೌರುಷ ತೋರಿಸಿದ್ದಾರೆ. ಸುಮಾರು ಸಿನಿಮಾಗಳಲ್ಲಿ ಬಳಕೆಯಾಗಿ ಸವೆದಿರುವ ಒಂದು ದೃಶ್ಯವನ್ನು ನೀವು ನೆನಪಿಸಿಕೊಳ್ಳಿ. ಪಾರ್ಟಿಯಲ್ಲಿ ಗಲಾಟೆ ಶುರುವಾಗಿ ಅಲ್ಲಿ ನೆರೆದವರು ಕೈಗೆ ಸಿಕ್ಕದ್ದನ್ನು ಆಯುಧವನ್ನಾಗಿ ಬಳಸಲು ಶುರುವಿಕ್ಕುತ್ತಾರೆ. ಕೊನೆಗೆ ಟೇಬಲ್ ಮೇಲಿನ ಪೇಸ್ಟ್ರಿ ಕೂಡ ಎರಚಾಡಲ್ಪಡುತ್ತದೆ.
ಯಾರೊಬ್ಬರೂ ಮತ್ತೊಬ್ಬನ ಮುಖಕ್ಕೆ ಪೇಸ್ಟ್ರಿ ತೋರಿ ಮೆರೆಯುವಂತಿಲ್ಲ, ಮೆರೆಯುವವನ ಮುಖಕ್ಕೇ ಮತ್ಯಾರೊ ಎಸೆದ ಪೇಸ್ಟ್ರಿ ಬಂದು ಅಪ್ಪಳಿಸುತ್ತದೆ. ರಾಜ್ಯದಲ್ಲಿಂದು ನಡೆಯುತ್ತಿರುವುದೂ ಅದಷ್ಟೆ. ಇಲ್ಲಿ ಯಾವೊಬ್ಬನೂ ಸಭ್ಯನೆಂದು ಬೀಗದ ಸ್ಥಿತಿಯಲ್ಲಿ ಎಲ್ಲ ಪಕ್ಷಗಳ ಮುಖ್ಯಸ್ಥರೂ ಇzರೆ. ಬೀಗಿದರೆ ಸಿಡಿ ಸ್ಫೋಟಗೊಳ್ಳುತ್ತದೆ, ಇಡಿ ಬೇಹುಗಾರರು ಬಾಗಿಲು ಬಡಿಯುತ್ತಾರೆ.
ದಂಡ ಪ್ರಯೋಗಕ್ಕೆ ಮೊದಲು ಆಮಿಷ ಒಡ್ಡುವುದೂ ಉಂಟು. ಆಮಿಷಕ್ಕೆ ಒಳಗಾಗದವರು ಸಾಚಾ ಎನ್ನಲಿಕ್ಕೆ ಬರುವುದಿಲ್ಲ. ದಂಡದಿಂದ ಬಚಾವಾಗಲು, ಈಗ ಅಬ್ಬರಿಸಿದವನು ಮರುಕ್ಷಣ ತಣ್ಣಗಾಗುತ್ತಾನೆ. ಯಾರ ಜೇಬಿನಲ್ಲಿ ಯಾರಿದ್ದಾರೊ ಎಂಬಂತಹ ಸನ್ನಿವೇಶ. ಯಾರೊಬ್ಬನ ಯಾವುದೇ ಭಾವನೆಯೂ ಸಹಜವಲ್ಲ, ಪ್ರಾಮಾಣಿಕವಂತೂ ಅಲ್ಲವೇ ಅಲ್ಲ ಎಂಬಂತಹ ವಿಲಕ್ಷಣ
ಸನ್ನಿವೇಶ. ವಾಸ್ತವವೇ ದುಃಸ್ವಪ್ನವಾಗಿ ಪರಿಣಮಿಸಿದೆ.
ವಿಕೃತಿ ವಿಜೃಂಭಿಸಿದಾಗ ವಿಶ್ಲೇಷಣೆ ಅರ್ಥ ಕಳೆದುಕೊಳ್ಳುತ್ತದೆ. ವಿಶ್ಲೇಷಿಸುವ ಹೊಣೆ ಹೊತ್ತ ಮಾಧ್ಯಮ ಕೊಚ್ಚೆರಾಡಿಯ ಒಂದು ಭಾಗವೇ ಆಗಿಹೋಗುತ್ತದೆ. ರಾಜಕಾರಣಿಗಳಿಗೆ ಅದಕ್ಕಿಂತ ಸುಯೋಗ ಬೇಕೇ? ರಾಜಕಾರಣಿಗಳ ಮಾತು ಬಿಡಿ. ಮೈ ಮಾರಿ
ಕೊಂಡವಳೊಬ್ಬಳು ಮಾಧ್ಯಮದ ಕೇಂದ್ರ ಬಿಂದುವಾಗುತ್ತಾಳೆ. ಆಕೆಯ ಮೈ ಮಾರಿದವನೂ, ಅದರ ಗ್ರಾಹಕನೂ ತಮ್ಮ ನಿತ್ಯಕರ್ಮದಲ್ಲಿ ತೊಡಗುತ್ತಾರೆ. ಚುನಾವಣೆಯ ಸದ್ದು ಸದ್ಯದ ಮಿಕ್ಕೆಲ್ಲ ಸದ್ದುಗಳನ್ನು ಸದ್ದಿಲ್ಲವಾಗಿಸುತ್ತದೆ. ಮತ್ತಾವುದೋ ಸಿಡಿಯ ಬಿಡುಗಡೆಗಾಗಿ ಮಾಧ್ಯಮ ಕಾದು ನಿಲ್ಲುತ್ತದೆ.
ಇದಾವುದರ ಗೋಜೂ ಬೇಡವೆನ್ನುವ ನಾಗರಿಕರಿಗೆ ಬೇರೆ ಆಕರ್ಷಣೆಗಳಿವೆ. ಕರೋನಾ ಕಾರಣದಿಂದ ಸದ್ಯದ ಬರಲಿರುವ ರಾಮನವಮಿ ಪ್ರಯುಕ್ತ ನಡೆಸುವ ಹರಿಕಥೆಗಳಿಗೆ ತಡೆ ಒಡ್ಡಲಾಗುತ್ತದೆ. ಅಮೆಜಾನ್ ಪ್ರೈಮ್ ನಲ್ಲಿ ಏಳು ಕೋಟಿ ಹಾಡುಗಳು ಲಭ್ಯವಿದೆ. ಆಯುಸ್ಸುಳ್ಳವರು, ಬದುಕಲು ಇನ್ನೂ ಇಚ್ಛೆ ಉಳ್ಳವರು, ಸಿಡಿಯಲ್ಲಿ ಆಸಕ್ತಿ ಇಲ್ಲದವರು ಕೇಳಿ ಪಾವನರಾಗಬಹುದು.
ಆ ಏಳು ಕೋಟಿಯಲ್ಲಿ ಎಪ್ಪತ್ತು ಸಾವಿರವಾದರೂ ಸದ್ದುಗದ್ದಲವಿಲ್ಲದ ಹಾಡುಗಳು ದೊರಕುತ್ತವೆ.