Thursday, 14th November 2024

ಸೆಲೆಬ್ರಿಟಿಗಳ ಅನೈತಿಕ ವ್ಯಾಪಾರಗಳು

ಪ್ರಚಲಿತ

ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ

siddu.yapal@gmail.com

ಸೆಲೆಬ್ರಿಟಿಗಳೆಂದರೆ ಯಾರು? ವಿಪರೀತ ಜನರಿಂದ ಗುರುತಿಸಲ್ಪಡುವ ವ್ಯಕ್ತಿತ್ವ. ಕ್ರೀಡೆ, ಸಿನಿಮಾ, ರಾಜಕಾರಣ ಮತ್ತು ಬರಹಗಾರರು. ಇತ್ತೀಚೆಗೆ ಈ ಸೆಲೆಬ್ರಿಟಿ ಸ್ಟೇಟಸ್ ಕಿರುತೆರೆಗೂ ಲಭಿಸಿದೆ; ಸಾಲದ್ದಕ್ಕೆ ಸೋಷಿಯಲ್ ಮೀಡಿಯಾಗಳಾದ ಯ್ಯೂ ಟ್ಯೂಬ್, ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮೂಲಕವೂ  ಸಾಮಾನ್ಯರು ಅಸಾಮಾನ್ಯರಾಗುತ್ತಿದ್ದಾರೆ.

ಜನ ಮುಗಿಬಿದ್ದು ನೋಡಲಾರಂಭಿಸಿದ ಕೂಡಲೇ ಅವರಿಗೆ ಹೇರಳವಾಗಿ ಹಣ ಬರಲಾರಂಭಿಸುತ್ತದೆ. ಹಣ ಐಷಾರಾಮಿ ಮೂಲಗಳಾದ ಕಾಮ, ಮೋಜು ಮಸ್ತಿ, ಬೆಟ್ಟಿಂಗ್, ಕ್ಯಾಸಿನೊ ಪ್ರಪಂಚಕ್ಕೆ ಅವರನ್ನು ಕೊಂಡೊ ಯ್ಯುತ್ತದೆ. ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಕೆಲ ವಾರಗಳಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳ ಮೂಲಕ ಸದ್ದು ಮಾಡಿದ ‘ರಾಜ್ ಕುಂದ್ರಾ’ ಎಂಬ ಉದ್ಯಮಿ. ಮಾದಕ ಚಿತ್ರಗಳ ದಂಧೆ ಕಾರಣದಿಂದ ಬಂಧನಕ್ಕೆ ಒಳಗಾಗಿರು ವುದು. ಇವನ ಹೆಂಡತಿ ‘ಶಿಲ್ಪಾ ಶೆಟ್ಟಿ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸುಂದರ ನಟಿ, ಇವರು ಕೂಡ ತನ್ನ ಅಂತಸ್ತಿಗೆ ತಕ್ಕಂತೆ ಇರುವ ಉದ್ಯಮಿಯ ಕೈ ಹಿಡಿದದ್ದು ಸಹಜ.

ಇವರಿಬ್ಬರು ತಮ್ಮ ಜನಪ್ರಿಯತೆ ಬಳಸಿಕೊಂಡು ಆರೋಗ್ಯಕರ ವ್ಯಾಪಾರ ಮಾಡಿದ್ದರೆ ಬೇಕಾದಷ್ಟು ಹಣ ಗಳಿಸಬಹುದಿತ್ತು. ಹಾಗೆ ಹಣ ಗಳಿಸಿದ ಮೇಲೂ ಇಂತಹ ಕೆಲಸಕ್ಕೆ ಯಾಕೆ ಕೈ ಹಾಕಿದರು ಎಂಬ ಪ್ರಶ್ನೆ ಕಾಡು ವುದು ಸಹಜ. ಇಷ್ಟೆಲ್ಲ ಇದ್ದ ಮೇಲೂ ನೀಲಿ ಚಿತ್ರ ತಯಾರಿಕೆಯ ವ್ಯಾಪಾರ ಆರಂಭಿಸಲು ವಿಪರೀತ ಹಣ ಗಳಿಸುವ ದುರಾಸೆಯಲ್ಲದೆ ಮತ್ತೇನು? ಗಂಡ ರಾಜ್ ಕುಂದ್ರಾ ಬಂಧನಕ್ಕೊಳಗಾದ ಮೇಲೆ ಅವನ ಹೆಂಡತಿ ವಿಚಿತ್ರ ಹೇಳಿಕೆ ನೀಡಿದ್ದಾರೆ. ’ನನ್ನ ಗಂಡ ಕಾಮೋದ್ರೇಕಗೊಳಿಸುವ ಚಿತ್ರಗಳನ್ನು ತಯಾರು ಮಾಡುತ್ತಿದ್ದರು. ಆದರೆ ಅಶ್ಲೀಲ ಚಿತ್ರಗಳನ್ನು ಅಲ್ಲ’ ಎಂದಿದ್ದಾರೆ. ಹಾಗಾದರೆ ಉತ್ತೇಜನ, ಪ್ರೇರಣೆ, ಮಾದಕ ಮತ್ತು ಅಶ್ಲೀಲಕ್ಕೂ ಇರುವ ವ್ಯತ್ಯಾಸವನ್ನು ಅವರೇ ಬಿಡಿಸಿ ಹೇಳಬೇಕು.

ವಿದೇಶಗಳಲ್ಲಿ ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ವೀಕ್ಷಣೆ ಅಪರಾಧವಲ್ಲ. ಅಲ್ಲಿನ ಹವಾಮಾನ, ಸಂಸ್ಕಾರ ಮತ್ತು ಮನಸ್ಥಿತಿಗೆ ಉತ್ತೇಜಿಸುವ ಚಿತ್ರಗಳ ವೀಕ್ಷಣೆ ಸಹಜ. ಆದರೆ ಭಾರತದಂತಹ ದೇಶದಲ್ಲಿ ಮೈ ಮಾರುವುದು ನೈತಿಕವಾಗಿ ಅಪರಾಧ, ಕಾನೂನು ಅನುಮತಿ ಪಡೆದು ದೇಹ ವ್ಯಾಪಾರ ಮಾಡಲು ಅನುಮತಿ
ಪಡೆಯುವುದು ಕೊಂಚ ನಿರ್ಲಜ್ಜ ಕಾರ್ಯವೆನಿಸುತ್ತದೆ. ಆದರೂ ಕದ್ದು ಮುಚ್ಚಿ ಇಂತಹ ವ್ಯವಹಾರಗಳು ನಿರಂತರವಾಗಿ ರಕ್ಷಕರ ರಕ್ಷಣೆಯಲ್ಲಿ ನಡೆಯುತ್ತವೆ. ಯಾರನ್ನಾದರೂ ಸುಳಿಗೆ ಸಿಕ್ಕಿಸುವ ಹುನ್ನಾರ ಮಾಡಿದಾಗ ಮಾತ್ರ ಬಯಲಾಗುತ್ತವೆ.

ಕಾಮ ಮನುಷ್ಯನ ಮೂಲ ದ್ರವ್ಯ. ಅದು ಅನೇಕ ಮೂಲಗಳಿಂದ ವ್ಯಕ್ತಿಯ ಮೇಲೆ ತನ್ನ ಪ್ರಭಾವ ಬೀರುತ್ತದೆ. ಅನಾದಿ ಕಾಲದಿಂದಲೂ ಕಾಮವನ್ನು ಬೇರೆ ಬೇರೆ ಆಯಾಮಗಳಲ್ಲಿ ಬಳಸುತ್ತ ಬೆಳೆಸಲಾಗಿದೆ. ಮನುಷ್ಯನ ದೌರ್ಬಲ್ಯವನ್ನು ಬಳಸಿಕೊಂಡು ಅಧಿಕಾರದಿಂದ ಕೆಳಗಿಳಿಸಲು ಬಳಸಿದ್ದನ್ನು ಇತಿಹಾಸದಲ್ಲಿ ಓದಿದ್ದೇವೆ. ವರ್ತಮಾನದ ತಂತ್ರಜ್ಞಾನ ಬೆಳೆದ ಮೇಲೆ ಸಿ.ಡಿ. ಹಗರಣಗಳ ಮೂಲಕ ಅಧಿಕಾರ ಪಡೆಯುವ ಮತ್ತು ಕಳೆದುಕೊಳ್ಳುವ ಹೊಸ ಸಂಪ್ರದಾಯ ರಾಜಕೀಯ ಮತ್ತು ಸಾರ್ವಜನಿಕ ಜೀವನದ ಹೊಸ ತಂತ್ರವಾಗಿದೆ. ಇದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ.

ಒಬ್ಬ ವ್ಯಕ್ತಿಯ ಬದುಕಿನ ಸಾರ್ವಜನಿಕ ಮತ್ತು ಖಾಸಗಿ ಬದುಕಿನ ವ್ಯವಹಾರಗಳನ್ನು ಭಿನ್ನ ಆಯಾಮದಲ್ಲಿ ನೋಡಬೇಕು. ’ಮದ್ಯ, ಮಾನಿನಿ ನನ್ನ ವೈಯಕ್ತಿಕ ವಿಷಯ ಅದನ್ನು ರಾಜಕೀಯ ಕಾರಣಕ್ಕಾಗಿ ಬಳಸಬೇಡಿ’ ಎಂದು ಬಹಿರಂಗ ಹೇಳಿಕೆ ನೀಡಿದ್ದ ಜೆ.ಎಚ್.ಪಟೇಲ್ ಹೊಸ ಬಗೆಯ ಸಂಚಲನ ಉಂಟು ಮಾಡಿ
ವಿರೋಽಗಳ ಬಾಯಿ ಮುಚ್ಚಿಸಿದ್ದರು. ಆದರೆ ಅವರಿಗಿದ್ದ ಧೈರ್ಯ ಇರದ ಇಂದಿನ ನಾಯಕರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದಾರೆ. ಹನಿ ಟ್ರ್ಯಾಪ್‌ ನಂತಹ ಕೀಳು ತಂತ್ರ ಬಳಸಿ ಸಾರ್ವಜನಿಕ ವ್ಯಕ್ತಿಗಳ ಮಾನ ಹರಾಜು ಹಾಕಲಾಗುತ್ತದೆ. ಕಾಮುಕ ಚಟುವಟಿಕೆಗಳನ್ನು ಸಂಪೂರ್ಣ ಖಾಸಗಿ ದೌರ್ಬಲ್ಯ ಎಂದು ಪರಿಗಣಿಸಲಾಗದ ಹೊರತು ಈ ವಿಷ ವರ್ತುಲ ಹರಡುತ್ತಲೇ ಇರುತ್ತದೆ.

ಕೆಲವು ರಾಷ್ಟ್ರಗಳಲ್ಲಿ ಕಾಮ ಕ್ರೀಡೆಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ, ಅದಕ್ಕೆ ವ್ಯಾಪಾರೋದ್ಯಮದ ಸ್ವರೂಪ ನೀಡಲಾಗಿದೆ. ನೇರವಾಗಿ ನೂರಾರು ಜನರ ಮಧ್ಯೆ ಕುಳಿತುಕೊಂಡು ಕಾಮ ಕ್ರೀಡೆಯನ್ನು ವೀಕ್ಷಣೆ ಮಾಡಿದ್ದನ್ನು ಹಲವರು ಖಾಸಗಿಯಾಗಿ ಹೇಳಿಕೊಂಡು ಸಂಭ್ರಮಿಸಿದ್ದನ್ನು ನೋಡಿದ್ದೇನೆ. ಆದರೆ ಯಾರೂ ಇದನ್ನು ತಮ್ಮ ಪ್ರವಾಸಾನುಭದಲ್ಲಿ ದಾಖಲಿಸಿಲ್ಲ. ಈಗ ರಾಜ್ ಕುಂದ್ರಾ ಭಾರತದ ನೆಲದ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ.

ಇಂತಹ ಚಟುವಟಿಕೆಗಳಿಗೆ ಕಾನೂನಾತ್ಮಕ ಅವಕಾಶ ಇರುವ ದೇಶಗಳಲ್ಲಿ ಈ ವ್ಯವಹಾರ ಮಾಡಬಹುದಿತ್ತು. ಸೆಲೆಬ್ರಿಟಿಗಳು ಆದರ್ಶವಾದ ಕೆಲಸ ಮಾಡಲಿ ಎಂದು ಅವರ ಅಭಿಮಾನಿಗಳು ಬಯಸುತ್ತಾರೆ. ಆದರೆ ಈ ಸೆಲೆಬ್ರಿಟಿಗಳು ವೈಯಕ್ತಿಕ ಬದುಕಿನಲ್ಲಿ ಖಳನಾಯಕರಂತೆ ನಡೆದುಕೊಳ್ಳುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಇರುವ ಮುಖ, ವೈಯಕ್ತಿಕ ಬದುಕಿನಲ್ಲಿ ಇರುವುದಿಲ್ಲ. ಕುಡಿದು ಗಾಡಿ ಓಡಿಸಿ ಜನರನ್ನು ಬಲಿ ತೆಗೆದು ಕೊಂಡವರು, ಕಾಡು ಪ್ರಾಣಿಗಳನ್ನು ಕೊಂದವರು, ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ ಮಾಡಿದ ಹೀರೋಗಳು, ಕಾನೂನು ಶಿಕ್ಷೆಗೆ ಗುರಿಯಾದಾಗ ಅವರ ಅಭಿಮಾನಿಗಳು ಹೆಚ್ಚು ಅವಮಾನ ಅನುಭವಿಸುತ್ತಾರೆ. ಆದ್ದರಿಂದ ಅಂಧ ಅಭಿಮಾನಿಗಳು, ಅಂಧ ಆರಾಧನೆಯನ್ನು ನಿಲ್ಲಿಸಬೇಕು.

ಆರಾಧನೆ ಕೇವಲ ಅವರ ಪ್ರತಿಭೆ ಮತ್ತು ಸಾರ್ವಜನಿಕ ಮುಖಕ್ಕೆ ಸೀಮಿತವಾಗಿರಬೇಕು. ಅವರೆಲ್ಲ ವೈಯಕ್ತಿಕ ದೌರ್ಬಲ್ಯ ಇರದ ಮಹಾನ್ ಸಂತರು ಎಂಬ ಭ್ರಮೆ ಇಟ್ಟುಕೊಳ್ಳಬಾರದು. ಅವರ ವೈಯಕ್ತಿಕ ಅವಘಡಗಳು ಬಯಲಾದಾಗ ಕಾನೂನು ಶಿಕ್ಷೆ ಅನಿವಾರ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸೆಲೆಬ್ರಿಟಿಗಳು ಕೂಡ ತಮ್ಮ ಇತಿಮಿತಿಗಳನ್ನು ಗ್ರಹಿಸಿಕೊಂಡು ವರ್ತಿಸಿ ಸಾರ್ವಜನಿಕ ಮುಜುಗರ ತಪ್ಪಿಸಿಕೊಳ್ಳಬೇಕು. ಕಾಮ ಮತ್ತು ಐಷಾರಾಮಿ ಲೋಲುಪತೆ ಹೆಚ್ಚಾಗಲು ಹೇರಳವಾಗಿ ಸಿಗುವ ಹಣವೇ ಮೂಲ ಕಾರಣ. ಬಡವರು, ಜನ ಸಾಮಾನ್ಯರು ಇಂತಹ ಬದುಕನ್ನು ಊಹಿಸಿಕೊಳ್ಳಲು ಅಸಮರ್ಥರಿರುತ್ತಾರೆ.

ಉಳ್ಳವರ ಐಷಾರಾಮಿ ಬದುಕಿನ ಘಟನೆಗಳನ್ನು ಮಾಧ್ಯಮಗಳು ಕಾನೂನು ಚೌಕಟ್ಟಿನಲ್ಲಿ ಆಲೋಚನೆ ಮಾಡಿ ಸುದ್ದಿ ಬಿತ್ತರಿಸಬೇಕು ಮತ್ತು ಅದಕ್ಕೆ ತಕ್ಕ ಶಿಕ್ಷೆ
ಆಗುವಂತೆ ನೋಡಿಕೊಳ್ಳಬೇಕು. ರಸವತ್ತಾದ ಸುದ್ದಿ ಪ್ರಸಾರ ಮಾಡಿ ನೋಡುಗರನ್ನು ಕೆರಳಿಸಬಾರದು. ವೀಕ್ಷಕರ ಮೂಲಕ ಹೆಚ್ಚಾಗುವ ಟಿ.ಆರ್.ಪಿ. ಕೇವಲ
ಹಣ ತಂದು ಕೊಡಬಹುದು ಆದರೆ ಸಾಮಾಜಿಕ ಸ್ವಾಸ್ಥ್ಯವನ್ನು ಅಲ್ಲ.

ಪದೇ ಪದೇ ವೈಯಕ್ತಿಕ ಬದುಕಿನ ಕಾಮ ಕೇಂದ್ರಿತ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿ ಇತರ ಜನಪರ ವಿಷಯಗಳನ್ನು ಕತ್ತಲೆಯಲ್ಲಿ ಇಡಬಾರದು. ಹಣ ಗಳಿಸುವ ಕಾರಣಕ್ಕೆ ಹೀರೋಗಳಾದವರು ನಮ್ಮ ರೋಲ್ ಮಾಡೆಲ್ ಆಗಬಾರದು. ಹಣ, ಅಂತಸ್ತು ಮತ್ತು ಐಷಾರಾಮಿ ಬಯಸದೇ ಜನರ ಕಷ್ಟ ಪರಿಹರಿಸುವ ವ್ಯಕ್ತಿಗಳು ನಮಗೆ ಆದರ್ಶ ನಾಯಕರಾಗಬೇಕು. ಯಾವುದೇ ವ್ಯಕ್ತಿಯ ದೌರ್ಬಲ್ಯ ನಮಗೆ ಮಹತ್ವದ ಸಂಗತಿಯಾಗಿ ಕಾಡಲೇಬಾರದು.