ಅವಲೋಕನ
ಸುನೀಲ್ ಬಾರ್ಕೂರ್
ಕಳೆದ ಚಂದ್ರಯಾನದ ಕೊನೆ ಘಳಿಗೆಯಲ್ಲಿ ಎಡವಟ್ಟಾಗಿದ್ದ ಸಮಯವದು. ಮಹಾಶಯನೊಬ್ಬ ಈ ತಾಂತ್ರಿಕ ತೊಂದರೆಯನ್ನು ಅದರ ಉಡಾವಣೆಯ ಸಮಯದೊಡನೆ ತಾಳೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು ಭಾರೀ ಚರ್ಚೆಗೆ ಕಾರಣ ವಾಗಿತ್ತು. ಹಲವರು ಇದನ್ನು ಖಂಡಿಸಿದರೆ ಅದರ ಪರ ವಕಾಲತ್ತು ವಹಿಸಿಕೊಂಡವರ ಸಂಖ್ಯೆಯೇನೂ ಕಮ್ಮಿಯಿರಲಿಲ್ಲ.
ಹಾಗೆ ನೋಡಿದರೆ ಜ್ಞಾನದ ಪರೀಕ್ಷೆಗೆ ಹೋಗುವ ನಾವುಗಳು ಬರೆಯಲು ನಮ್ಮ ಅದೃಷ್ಟದ ಪೆನ್ ಹುಡುಕುವುದೂ ಇಂತಹುದೇ ಒಂದು ಮಿಥ್ಯೆಯೇ. ನೀವು ನಂಬುವುದೆಲ್ಲ ಸತ್ಯವೆಂಬುದು ಸತ್ಯ. ಅದು ಸುಳ್ಳಾದರೂ ಸಹ. ಖ್ಯಾತ ಚಿಂತಕ , ಲೇಖಕ ಸಾಜಿಜಿಯೇಮಿ ಹೇಳಿದಂತೆ ನಂಬಿಕೆ ಮತ್ತು ಸತ್ಯದ ನಡುವಿನ ತಾಕಲಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಮೆಚ್ಚಿದವರಿಗೆ ಮರಣ ಸುಖ ಅಂತಾರಲ್ಲ ಹಾಗೆ ಈ ನಂಬಿಕೆಗಳು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ ಅವುಗಳು ನಮ್ಮಂತ ಜನಸಾಮಾನ್ಯರಿಗಷ್ಟೇ
ಮೀಸಲಾಗಿರದೇ ದೊಡ್ಡ ದೊಡ್ಡ ಘಟಾನುಘಟಿಗಳನ್ನೂ ಆವರಿಸಿಕೊಂಡಿವೆ. ನಮ್ಮ ಬಾಲಿವುಡ್‌ನ ಬಾದಷಾ ಶಾರುಖ್ ಖಾನನ್ನೇ ನೋಡಿ ಆತ ಓಡಿಸುವ ಕಾರುಗಳ ನಂಬರ್ ಪ್ಲೇಟ್‌ನಲ್ಲಿ 555ರ ಸಂಖ್ಯೆ ಇರಲೇಬೇಕು. ಈ ಸಂಖ್ಯೆಯ ಹುಚ್ಚು ಆತನಿ ಗೆಷ್ಟಿದೆಯೆಂದರೆ ಆತನ ಚಿತ್ರಗಳಲ್ಲಿ ಓಡಿಸುವ ವಾಹನ ಗಳಲ್ಲೂ ಅವುಗಳೇ ಇರಬೇಕೆಂದು ಅಪೇಕ್ಷಿಸುತ್ತಾನೆ.
ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಈ ಕಾರಣಕ್ಕೇನೇ ಆತ ಚಿತ್ರೀಕರಣವನ್ನೇ ತಡೆಹಿಡಿದಿದ್ದ ಎಂಬುದು ಒಂದು ಸುದ್ದಿ. ಇಂತಹುದೇ ನಂಬರ್ ಖಯಾಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ಇದೆ. ಇವರ ಬಳಿ ಇರುವ ವಾಹನಗಳೆಲ್ಲವುಗಳ
ಸಂಖ್ಯೆಯಲ್ಲಿ 171 ಇರಲೇಬೇಕು. ನಟ ಹೃತಿಕ್ ರೋಷನ್ ಕೈಯಲ್ಲಿ ಆರು ಬೆರಳಿರುವುದು ಅದೃಷ್ಟದ ಸಂಕೇತವೆಂದುಕೊಂಡಿದ್ದು ಈ ಹಿಂದೆ ಹಲವು ಬಾರಿ ಗೆಳೆಯರು, ಕುಟುಂಬದವರು ಅದನ್ನು ಆಪರೇಷನ್ ಮೂಲಕ ತೆಗೆಯಲು ಕೊಟ್ಟಿದ್ದ ಸಲಹೆಗಳೆಲ್ಲ ವನ್ನೂ ಆತ ತಿರಸ್ಕರಿಸಿದ್ದಾನೆ.
ಇನ್ನು ಶಿಲ್ಪಾ ಶೆಟ್ಟಿ ಈ ಹಿಂದೆ ಐಪಿಎಲ್ ತಂಡವೊಂದರ ಮಾಲಿಕಳಾಗಿದ್ದುದು ಗೊತ್ತಿರಬೇಕಲ್ಲ. ತನ್ನ ತಂಡದ ಪಂದ್ಯಗಳನ್ನು ವೀಕ್ಷಿಸಲು ಹೋಗುವಾಗೆಲ್ಲ ಆಕೆ ತನ್ನ ಎರಡೂ ಕೈಗಳಿಗೆ ವಾಚ್ ಕಟ್ಟಿಕೊಳ್ಳು ತ್ತಿದ್ದಳು. ಇದು ತನ್ನ ತಂಡಕ್ಕೆ ಶುಭ ತರುತ್ತದೆ ಎಂಬುದು ಆಕೆಯ ನಂಬಿಕೆಯಾಗಿತ್ತು. ಆದರೆ ಬಹುಷಃ ಆಕೆಯ ಟೈಂ ಸರಿಯಿರಲಿಲ್ಲವೆಂದೇನೋ ಆ ತಂಡ ಅವಳ ಮಾಲಿಕತ್ವ ದಲ್ಲಿ ಎಂದೂ ಐಪಿಎಲ್ ಜಯಿಸಲಿಲ್ಲವೆಂಬುದು ಬೇರೆ ಮಾತು. ಇಂತಹುದೇ ನಂಬಿಕೆಯನ್ನು ಕಬಡ್ಡಿ ತಂಡವೊಂದರ ಮಾಲಿಕ
ಜೂನಿಯರ್ ಅಭಿಷೇಕ್ ಬಚ್ಚನ್ ಹೊಂದಿದ್ದಾರೆ.
ತನ್ನ ತಂಡದ ಪಂದ್ಯವನ್ನು ವೀಕ್ಷಿಸುವ ವೇಳೆಗೆ ಆತ ಒಮ್ಮೆ ಖುರ್ಚಿಯ ಮೇಲೆ ಕುಳಿತನೆಂದರೆ ಎದ್ದೇಳುವುದು ಅದು ಮುಗಿದ ಮೇಲೆಯೇ . ನಡುವೆ ಖುರ್ಚಿ ಬಿಟ್ಟರೆ ಅದು ತನ್ನ ತಂಡದ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತದೆಯೆಂಬುದನ್ನು ಜೂ.ಬಚ್ಚನ್ ನಂಬುತ್ತಾನೆ. ಇನ್ನು ಬಾಲಿವುಡ್ ಬೆಡಗಿ ಬಿಪಾಶಾಬಸು ಸಹ ಚಿತ್ರ ನಂಬಿಕೆಯನ್ನು ಹೊಂದಿದ್ದಾಳೆ. ಪ್ರತಿ ಶನಿವಾರ ತನ್ನ ಕಾರಿಗೆ ಕಟ್ಟುವ ಲಿಂಬು, ಮೆಣಸಿನ ಸರವನ್ನು ಬದಲಿಸುವುದು ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬುತ್ತಾಳೆ.
ಇಂತಹ ನಂಬಿಕೆಗಳಿಂದ ನಮ್ಮ ಕ್ರೀಡಾತಾರೆಗಳೂ ಹೊರತಲ್ಲ. ಧೋನಿ, ಯುವರಾಜ, ಸಚಿನ್ ನಂಥವರು ಕ್ರಮವಾಗಿ ಏಳು. ಹನ್ನೆರಡು ಮತ್ತು ಹತ್ತರ ಅದೃಷ್ಟ ಸಂಖ್ಯೆಯ ಹಿಂದೆ ಬಿದ್ದು ತಮ್ಮ ಬೆನ್ನಿಗಂಟಿಸಿಕೊಂಡಿದ್ದರೆ ತನ್ನ ಕ್ರೀಡಾಜೀವನದ ಕೊನೆ ಯಲ್ಲಿ ಸರಣಿ ವೈಫಲ್ಯಗಳನ್ನು ಕಂಡಕೂಡಲೇ ವೀರೇಂದ್ರ ಸೇಹ್ವಾಗ್ ಜರ್ಸಿ ಮೇಲಿದ್ದ ನಲವತ್ತನಾಲ್ಕರ ಸಂಖ್ಯೆಯನ್ನು ಅಳಿಸಿ ಖಾಲಿ ಜರ್ಸಿಯನ್ನು ತೊಡಲಾರಂಭಿಸಿದ. ಈ ನಂಬರ್ ಗೇಮ್ ಹೊರತಾಗಿ ಕೆಲವು ಚಿತ್ರ ಪದ್ಧತಿಗಳನ್ನು ಕ್ರಿಕೆಟಿಗರು ಅಳವಡಿಸಿ ಕೊಂಡಿದ್ದಾರೆ.
ಹಿರಿಯ ಕ್ರಿಕೆಟಿಗ ಮೊಹಿಂದರ್ ಅಮರನಾಥ್‌ಗೆ ಒಂದು ಸ್ವಭಾವವಿತ್ತು. ಮೈದಾನದಲ್ಲಿದ್ದಾಗ ಆತ ಯಾವತ್ತೂ ತನ್ನ ಜೇಬಿನಿಂದ ಇಣುಕುವಂತೆ ಕೆಂಪು ಕರವಸ್ತ್ರವೊಂದನ್ನಿಟ್ಟುಕೊಳ್ಳುತ್ತಿದ್ದ ವೇಗಿ ಜಮೀರ್ ಖಾನ್ ಕೂಡ ಇಂತಹುದೇ ಪದ್ಧತಿಯನ್ನು ಪಾಲಿಸು ತ್ತಿದ್ದ. ಆದರೆ ಆತನ ಕೇಸ್‌ನಲ್ಲಿ ಕರವಸ್ತ್ರದ ಬಣ್ಣ ಮಾತ್ರ ಹಳದಿ. ಭಾರತದ ಮಾಜಿ ನಾಯಕ ಸೌರವ ಗಂಗೂಲಿ ಕೂಡ ಇದಕ್ಕೆ ಹೊರತಲ್ಲ. ಮೈದಾನದಲ್ಲಿದ್ದಾಗಲೆಲ್ಲ ತನ್ನ ಜೇಬಿನಲ್ಲಿ ತನ್ನ ಕ್ರೀಡಾಗುರುವಿನ ಭಾವಚಿತ್ರವನ್ನಿಟ್ಟುಕೊಳ್ಳುತ್ತಿದ್ದ. ದಾದಾ ಮರೆತು ಬಂದಾಗ ವಾಪಸ್ ಪೆವಿಲಿಯನ್‌ಗೆ ಹೋಗಿ ಬಂದಿದ್ದೂ ಉಂಟು. ಲಿಟ್ಲ್ ಮಾಸ್ಟರ್ ಸಚಿನ್ ಬ್ಯಾಟಿಂಗ್‌ಗಾಗಿ ಪ್ಯಾಡ್ ಕಟ್ಟುವಾಗಲೆಲ್ಲ ಎಡಗಾಲಿಗೆ ಮೊದಲು ಕಟ್ಟಿಕೊಳ್ಳುತ್ತಿದ್ದನಂತೆ.
ಇಂತಹ ನಂಬಿಕೆಗಳು ಕೇವಲ ಭಾರತೀಯರಿಗಷ್ಟೇ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು. ಟೆನಿಸ್‌ನ ಮಹಾತಾರೆ ಸೆರೆನಾ ವಿಲಿಯಮ್ಸ್ ಗೊತ್ತಲ್ಲ. ಆಕೆ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾಗ ಚಿತ್ರ ಪದ್ಧತಿಯೊಂದನ್ನು ಅನುಸರಿಸುತ್ತಾಳೆ. ಮೊದಲ
ಪಂದ್ಯವನ್ನು ಗೆದ್ದ ನಂತರ ಆ ಪಂದ್ಯಾವಳಿ ಪೂರ್ತಿ ಅವೇ ಸಾಕ್ಸ್ ಮತ್ತು ಶೂಗಳನ್ನು ಬಳಸುವ ಸೆರೆನಾ ಮೊದಲ ಪಂದ್ಯಕ್ಕೆ ಲೇಸ್ ಕಟ್ಟಿಕೊಂಡ ರೀತಿಯನ್ನೇ ಎಲ್ಲ ಪಂದ್ಯಗಳಿಗೂ ಅನುಸರಿಸುವ ಜತೆಗೆ ಆ ಪಂದ್ಯಾವಳಿ ಮುಗಿಯುವವರೆಗೂ ತನ್ನ ಸಾಕ್ಸ್
ಗಳನ್ನು ತೊಳೆಯುವುದಿಲ್ಲ. ಇದೇ ಕ್ರೀಡೆಯ ದಿಗ್ಗಜ ಫೆಡರರ್‌ಗೆ ಎಂಟರ ನಂಟು. ಆ ಸಂಖ್ಯೆಯ ಬಗ್ಗೆ ಆತನಿಗೆ ಅದೆಷ್ಟು ಒಲವಿದೆ ಯೆಂದರೆ ಪಂದ್ಯಕ್ಕೆ ಹೋಗುವಾಗ ಆತ ಎಂಟು ರ್ಯಾಕೇಟ್‌ಗಳನ್ನು ಬ್ಯಾಗ್ ನಲ್ಲಿಟ್ಟಿರುತ್ತಾನೆ.
ಜತೆಗೆ ಎಂಟು ನೀರಿನ ಬಾಟಲಿಗಳನ್ನು ತನ್ನೊಂದಿಗೊಯ್ದು ಅವುಗಳನ್ನು ತಾನೇ ಜೋಡಿಸಿಟ್ಟಿರುತ್ತಾನೆ. ಇಷ್ಟು ಸಾಲದೆಂಬಂತೆ
ವಿರಾಮದ ಸಮಯದಲ್ಲಿ ಆತ ಎಂಟು ಬಾರಿ ಮುಖವನ್ನು ಒರೆಸಿಕೊಳ್ಳುತ್ತಾನಂತೆ. ಫುಟ್‌ಬಾಲ್ ಧ್ರುವತಾರೆ ರೋನಾಲ್ಡೊ ಸಹ ಈ ಸಾಲಿಗೆ ಸೇರುವವನೇ. ಪಂದ್ಯಕ್ಕೆ ಪ್ರಯಾಣಿಸುವಾಗ ಬಸ್ ನಲ್ಲಿ ಆತ ಕುಳಿತುಕೊಳ್ಳುವುದು ಕೊನೆಯ ಸೀಟಿನಲ್ಲಿ. ಅಲ್ಲಿಂದ ಇಳಿಯುವಾಗಲೂ ಅಷ್ಟೇ. ಆತನೇ ಕೊನೆಯವನೆಂಬುದನ್ನು ಆತ ದೃಢೀಕರಿಸಿಕೊಳ್ಳುತ್ತಾನೆ. ಪೋರ್ಚುಗೀಸ್ ತಂಡಕ್ಕೆ ಆಡುವ
ಆಟಗಾರರಲ್ಲಿ ಈತನೊಬ್ಬನೇ ಉದ್ದ ತೋಳಿನ ಜರ್ಸಿ ತೊಡುವ ಹಿಂದೆ ಆತನ ಇಂತಹುದೇ ನಂಬಿಕೆಯ ಕೈವಾಡವಿದೆ.
ಇವನ್ನೆಲ್ಲ ಅವರವರ ಭಾವಕ್ಕೆ ಎಂಬಂತೆ ಉಪೇಕ್ಷಿಸಬಹುದಾದರೂ ಇಂತಹ ನಂಬಿಕೆಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆಯೆಂಬುದೂ ನಿಜ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಫುಟ್ ಬಾಲ್ ದಂತಕಥೆ ಪೀಲೆ. ತನ್ನ ಆಟದ ಉತ್ತುಂಗದಲ್ಲಿದ್ದಾಗ ಆತ ಒಮ್ಮೆ ಇದ್ದಕ್ಕಿದ್ದಂತೆಯೆ ಫಾರ್ಮ್ ಕಳೆದುಕೊಂಡ. ವಾಪಸಾತಿಗೆ ಹರಸಾಹಸ ಮಾಡುತ್ತಿದ್ದ ಆತನಿಗೆ ಅನಿಸಿದ್ದು, ಇದಕ್ಕೆಲ್ಲ ತನ್ನ ನೆಚ್ಚಿನ ಜರ್ಸಿಯೊಂದನ್ನು ತನ್ನ ಅಭಿಮಾನಿಯೊಬ್ಬನಿಗೆ ನೀಡಿದ್ದೇ ಕಾರಣವೆಂದು. ಅಷ್ಟೇ ಆತನ ಬಾಲಬಡುಕರು ಅವನನ್ನು ಹುಡುಕಿ ಆ ಜರ್ಸಿಯನ್ನು ವಾಪಸ್ ತರಲು ಯಶಸ್ವಿಯಾದರು.
ಆಶ್ಚರ್ಯವೆಂಬಂತೆ ಅದನ್ನು ತೊಟ್ಟು ಆಡಲಾರಂಭಿಸಿದ ಪೀಲೆ ಮತ್ತೆ ತನ್ನ ಲಯಕ್ಕೆ ಮರಳಿದ. ಈ ನಡುವೆ ಆ ಅಭಿಮಾನಿ ಪೀಲೆಗೆ ವಾಪಸ್ಸು ಮಾಡಿದ್ದುದು ಅಂಗಡಿಯಿಂದ ಕೊಂಡು ತಂದ ಅಂತಹುದೇ ಇನ್ನೊಂದು ಜರ್ಸಿಯೆಂಬುದು ಯಾರಿಗೂ ಗೊತ್ತಾಗಲಿಲ್ಲ.