Wednesday, 11th December 2024

ಎತ್ತ ಸಾಗುತ್ತಿವೆ ಶ್ರದ್ಧಾಭಕ್ತಿಯ ಕೇಂದ್ರಗಳು !

ಅಭಿವ್ಯಕ್ತಿ

ಚಂದ್ರಶೇಖರ ಬೇರಿಕೆ

ಮನುಷ್ಯ ಸಾಧ್ಯತೆಯನ್ನುಮೀರಿದ ಶಕ್ತಿಯೊಂದು ಮಾನವ ಬದುಕಿನ ಅನುಭವಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆ ಮತ್ತು ವೇದಕಾಲದ ಶ್ರೇಷ್ಠ ತತ್ತ್ವಗಳ ತಳಹದಿಯಲ್ಲಿ ಭರತ ಭೂಮಿ ನೆಲೆ ನಿಂತಿದೆ.

ಅಗೋಚರ ಶಕ್ತಿಯ ಕಲ್ಪನೆಗಳು ಮತ್ತು ಆರಾಧನೆಯ ಸಾಂಸ್ಕೃತಿಕ ವಿಧಿವಿಧಾನಗಳು ಪೂರ್ವ ಪರಂಪರೆಯಿಂದ ನಡೆದು ಕೊಂಡು ಬಂದವುಗಳಾಗಿದ್ದು, ವೇದಕಾಲದ ವಿಶಿಷ್ಟ ಧಾರ್ಮಿಕ ಪರಂಪರೆಯ ಆದರ್ಶಗಳು, ಆಚರಣೆಗಳು, ಪದ್ಧತಿಗಳು ಹಾಗೂ ಸಂಪ್ರದಾಯಗಳು ಅತಿ ಶ್ರೇಷ್ಠವಾದುದು. ಸನಾತನ ಕಾಲದ ಸಂತರು, ಋಷಿಮುನಿಗಳು ಮಾಡಿದ ತಪಸ್ಸಿನ ಫಲದಿಂದ ಪಡೆದ ಅಧ್ಯಾತ್ಮ ಜ್ಞಾನ ಉದಾತ್ತವಾದುದಾಗಿದ್ದು, ಅವರು ರಚಿಸಿದ ಅಧ್ಯಾತ್ಮಿಕ ಧರ್ಮಶಾಸ್ತ್ರ ಗ್ರಂಥಗಳು ನಮಗೆ ಮಾರ್ಗದರ್ಶಕ ಆಕರಗಳು. ಅಂತೆಯೇ ಈ ದೇಶವನ್ನು ಒಂದುಗೂಡಿಸಿರು ವುದು ಅಧ್ಯಾತ್ಮ ಮತ್ತು ಧರ್ಮದ ಸಾರಗಳು.

ಧಾರ್ಮಿಕ ಹಿನ್ನೆಲೆಯ ನಮ್ಮ ದೇಶದಲ್ಲಿ ಶ್ರದ್ಧಾಾ ಕೇಂದ್ರ ಗಳಾದ ದೇಗುಲಗಳು, ಧಾರ್ಮಿಕ ಕೇಂದ್ರಗಳು ಮತ್ತು ಮಠ, ಮಂದಿರ ಗಳು ಜನರ ಆಸ್ಮಿತೆಯ ಕೇಂದ್ರಗಳು. ಭಕ್ತರು ತನ್ನ ಸಂಕಷ್ಟಗಳ ಪರಿಹಾರಕ್ಕಾಗಿ ದೇವರನ್ನು ಕಾಣಲು ದೇಗುಲ, ಮಠ ಮಂದಿರ ಗಳಿಗೆ ಭೇಟಿ ಕೊಡುತ್ತಾರೆ. ಹಾಗೆಯೇ ಧಾರ್ಮಿಕ ಕೇಂದ್ರಗಳು ಮತ್ತು ಆಸ್ತಿಕರ ನಡುವಿನ ಸಂಬಂಧ ಗಳಿಂದಲೇ ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಮಾನವೀಯತೆ, ಧರ್ಮ ಉಳಿದುಕೊಂಡಿದೆ.

ಆದರೆ ಇತ್ತೀಚೆಗಿನ ಕೆಲವಾರು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದಾಗ ಭಕ್ತಿ ಭಾವದಿಂದ ಪೂಜಿಸುವ ಧಾರ್ಮಿಕ ಕೇಂದ್ರಗಳು
ಶಕ್ತಿ ಕೇಂದ್ರಗಳಾಗಿ ಮಾರ್ಪಾಡಾಗುತ್ತಿದ್ದು, ಸ್ವಹಿತಾಸಕ್ತಿ ಸಂಘರ್ಷಗಳು, ಲಾಭದ ಮನಸ್ಥಿತಿ, ರಾಜಕೀಯ, ಅನಾಚಾರ, ಅಪ ಚಾರ, ಅನೈತಿಕತೆ, ಕೊಲೆ, ಕಳ್ಳತನ, ಅಕ್ರಮ ಮುಂತಾದ ಅಧರ್ಮಗಳು ನಡೆಯುತ್ತಿದೆ. ಇದು ತಲ ತಲಾಂತರಗಳಿಂದ ಪಾಲಿಸಿ ಕೊಂಡು ಬಂದಿರುವ ಶ್ರೇಷ್ಠ ಪರಂಪರೆಗಳ ಅಣಕವೇ ಸರಿ.

ಪುಣ್ಯಕ್ಷೇತ್ರಗಳಾದ ಸಿಗಂದೂರು ಚೌಡೇಶ್ವರಿ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ, ಕುಕ್ಕೆ ಸುಬ್ರಮಣ್ಯ, ಗೋಕರ್ಣ
ಮಹಾಬಲೇಶ್ವರ ಮುಂತಾದ ಪ್ರಸಿದ್ಧ ದೇವಾಲಯಗಳ ವಾದಗಳು ಧಾರ್ಮಿಕ ಸ್ಥಳಗಳಲ್ಲಿ ಜನಬಲ, ತೋಳುಬಲ ಪ್ರದರ್ಶನ ಗಳಿಗೆ ನಿದರ್ಶನಗಳಷ್ಟೇ. ಇಂತಹ ಸ್ಥಳಗಳಲ್ಲಿ ನಡೆಯುವ ಸಂಘರ್ಷಗಳ ಪೈಕಿ ಕೆಲವು ವ್ಯಕ್ತಿಗತ ಹಿತಾಸಕ್ತಿ ಸಾಧನೆಯ ಹಿನ್ನೆಲೆ ಯವುಗಳಾಗಿದ್ದು, ಜನರು ಭಕ್ತಿಭಾವದಿಂದ ಸಲ್ಲಿಸುವ ಕಾಣಿಕೆಯ ಹಣಕ್ಕೆ ಸಂಬಂಧಪಟ್ಟಿದ್ದೂ ಇದೆ. ಅಲ್ಲದೇ ದೇವಸ್ಥಾನಗಳ ಆದಾಯದ ಮೇಲಿನ ಅಧಿಕಾರ ಮತ್ತು ಅದರಿಂದ ಪಡೆಯಬಹುದಾದ ಪಾಲಿನ ಭಾಗಕ್ಕಾಗಿಯೂ ಆಗಿರುತ್ತದೆ. ಇದಕ್ಕೆಲ್ಲಾ ಕಾರಣ ಈಗಿನ ಸಮಾಜದ ಮಾನಸಿಕತೆಯಲ್ಲಿ ಸಂಪತ್ತು ಗಳಿಕೆ ಮೊದಲ ಪ್ರಾಶಸ್ತ್ಯ ಪಡೆದುಕೊಂಡಿರುವುದು.

ಮನುಷ್ಯರಿಗೆ ಧನ ಸಂಗ್ರಹವೇ ಕಟ್ಟಕಡೆಯ ಗುರಿ. ಆದರೆ ಪುಣ್ಯಕ್ಷೇತ್ರಗಳಲ್ಲಿ ಬಣಗಳನ್ನು ಸೃಷ್ಟಿಸಿಕೊಂಡು ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿರುವುದು ಅಕ್ಷಮ್ಯ. ದೈವ, ದೇವರು ಎಂಬುದು ಅಗೋಚರ ಶಕ್ತಿಯಾದರೂ ಅಂತಹ ಶಕ್ತಿ ಸ್ಥಳಗಳ ವಿವಾದಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗ ಬೇಕಾದ ಸನ್ನಿವೇಶ ಸೃಷ್ಟಿಸಿಕೊಂಡಿದ್ದು ಪುಣ್ಯಕ್ಷೇತ್ರಗಳ ಪೌರಾಣಿಕ ಹಿನ್ನೆಲೆಯನ್ನು ಅಣಕಿಸಿದಂತಲ್ಲವೇ? ಧಾರ್ಮಿಕ ಮುಖಂಡರನ್ನು ಪ್ರಶ್ನೆ ಮಾಡುವುದು ತಪ್ಪು ಎಂಬ ಭಯದಿಂದ ಭಕ್ತರು ಧಾರ್ಮಿಕ ಮುಖಂಡ ರನ್ನು ಪ್ರಶ್ನೆ ಮಾಡುವುದು ಬಹಳ ವಿರಳ. ಭಕ್ತರ ಈ ದೌರ್ಬಲ್ಯವನ್ನು ತಿಳಿದುಕೊಂಡಿರುವ ಧಾರ್ಮಿಕ ಮುಖಂಡರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕೆಲವೊಂದು ದೇವಸ್ಥಾನಗಳಲ್ಲಿ ಭಕ್ತಿ ಕಾಣಿಕೆಯು ಮರೆಯಾಗಿ ವಸೂಲಿ ಪ್ರವೃತ್ತಿ ಬೆಳೆಯುತ್ತಿದೆ. ಸೇವೆಗಳ ಹೆಸರಲ್ಲಿ ಮಾಡುವ ವಸೂಲಿ ಅಪರಿಮಿತ.

ದರ್ಶನದ ಸರತಿ ಸಾಲಿನಲ್ಲಿ ಆರ್ಥಿಕವಾಗಿ ಸಬಲರಿಗೆ ಮತ್ತು ದುರ್ಬಲರಿಗೆ ಎಂಬ ಪ್ರತ್ಯೇಕ ಸರತಿ ಸಾಲುಗಳು. ಅದನ್ನು ಶೀಘ್ರ
ದರ್ಶನ, ಸಾಮಾನ್ಯ ದರ್ಶನ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಕಾಸಿದ್ದವನಿಗೆ ಮೊದಲನೇ ಪ್ರಾಶಸ್ತ್ಯ ಎಂಬ
ಪದ್ಧತಿ ಜಾರಿಯಲ್ಲಿದೆ. ಈ ಪದ್ಧತಿ ಈಗ ಪ್ರತಿಷ್ಠೆಯಾಗಿ ಬದಲಾಗಿದೆ. ದೇವಸ್ಥಾನಗಳಲ್ಲಿ ಯಾವುದೇ ಸಂದರ್ಭದಲ್ಲೂ ಅಸಮಾನತೆ
ಯಾಗಲೀ ಅಥವಾ ತಾರತಮ್ಯವಾಗಲೀ ಇರಕೂಡದು. ಆದರೆ ಇಂದು ಶ್ರೀಮಂತ ದೇವಸ್ಥಾನಗಳಲ್ಲಿ ಮಾತ್ರವಲ್ಲದೇ ಸಾಮಾನ್ಯ
ದೇವಸ್ಥಾನಗಳಲ್ಲೂ ಪ್ರತ್ಯೇಕ ಸರತಿ ಸಾಲಿನ ಪದ್ಧತಿಗಳು ಕಾಣಸಿಗುತ್ತಿದ್ದು, ವಿಐಪಿ ಸಂಸ್ಕೃತಿ ಪೋಷಿಸಲ್ಪಡುತ್ತಿದೆ. ಹಣ
ಉಳ್ಳವರು ಎಷ್ಟಾದರೂ ತೆತ್ತು ತಾವು ಬಯಸಿದಂತೆ ದೇವರ ದರ್ಶನ ಪಡೆಯುತ್ತಾರೆ. ಆದರೆ ಬಡವರಿಗೆ ಸಾಮಾನ್ಯ ಸರತಿ ಸಾಲೇ
ಗತಿಯೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಇನ್ನು ಮಠಗಳು ಮತ್ತು ಮಠಾಧೀಶರ ಬಗ್ಗೆ ಚರ್ಚಿಸುವುದಾದರೆ, ವೇದಗಳ ಕಾಲದಲ್ಲಿ ವನವಾಸಿಗಳಾಗಿದ್ದ ಋಷಿಮುನಿಗಳು ತಮ್ಮ ಆಶ್ರಮದಲ್ಲಿ ಶಿಷ್ಯರ ವಿದ್ಯಾದಾನಕ್ಕಾಗಿ ಒಂದು ಕೇಂದ್ರವನ್ನು ನಿರ್ಮಿಸಿಕೊಂಡಿದ್ದರು. ಅದನ್ನು ಗುರುಕುಲ ಎಂದು ಕರೆಯಲಾಗುತ್ತಿತ್ತು ಮತ್ತು ಅದು ಮೂಲತಃ ಋಷಿಮುನಿಗಳ ವಾಸಸ್ಥಾನವೂ ಆಗಿತ್ತು. ಇಂತಹ ಗುರುಕುಲಗಳನ್ನು ಮಠ ಎಂಬುದಾಗಿಯೂ ಹಾಗೂ ಇದನ್ನು ಧಾರ್ಮಿಕ ಪಾಠಶಾಲೆ, ಕುಟೀರ, ತಪೋಭೂಮಿ, ಜ್ಞಾನಾರ್ಜನ ಕೇಂದ್ರ, ಆಶ್ರಮ
ಮುಂತಾದ ಶಿಷ್ಟ ಹೆಸರುಗಳಿಂದ ಕರೆಯಲಾಗುತ್ತಿತ್ತು. ಹಾಗೆಯೇ ಆ ಗುರುಕುಲದ ಅಧಿಪತಿಗಳು ಮಠಾಧಿಪತಿ ಎಂಬ
ನಾಮಾಂಕಿತದಿಂದ ಕರೆಯಲ್ಪಡುತ್ತಿದ್ದರು. ಇಂತಹ ಮಠಗಳು ಸಾಂಸ್ಕೃತಿಕ, ಭಾವೈಕ್ಯ ಸಂಗಮ, ಅಧ್ಯಾತ್ಮ ಕೇಂದ್ರಗಳಾಗಿ
ಕಾರ್ಯನಿರ್ವಹಿಸುತ್ತಿದ್ದವು. ಮಠಗಳು ಸಮಾಜವನ್ನು ಸಂಘಟಿಸಿ ಜೀವನ ಧರ್ಮದ ಸಾಮರಸ್ಯಕ್ಕೆ ಮೂಲ ಆಕರ ಗಳನ್ನು ಒದಗಿಸುವ ಸಾಧನಗಳಾಗಿದ್ದವು. ಹಿಂದೂ ಧರ್ಮಕ್ಕೆ ಸಂಘಟಿತ ರೂಪ ನೀಡಲು ಮಠಗಳ ಸ್ಥಾಪನೆಯಾಗಿತ್ತು. ಇಲ್ಲಿ ಜಾತಿ, ವರ್ಣಗಳಿಗಿಂತ ಧರ್ಮ ಸ್ಥಾಪನೆ, ರಕ್ಷಣೆಯೇ ಆದ್ಯತೆಯಾಗಿತ್ತು. ಮಠಾಧಿಪತಿಗಳು ಸರ್ವಸ್ವವನ್ನೂ ತ್ಯಾಗ ಮಾಡಿ ಲೋಕ ಕಲ್ಯಾಣಕ್ಕಾಗಿ ಅಧ್ಯಾತ್ಮದ ಕಡೆಗೆ ಮುಖ ಮಾಡಿದವರು.

ಧರ್ಮಗ್ರಂಥಗಳ ಸಾರವನ್ನು ಸಮಾಜಕ್ಕೆ ಮುಟ್ಟಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕಾದ ಮಹತ್ಕಾರ್ಯ ಅವರ ಮೇಲಿದೆ. ಅವರು ಸಮಾಜ ಸುಧಾರಕರೂ, ಸಮಾಜಕ್ಕೆ ಮಾರ್ಗದರ್ಶಕರೂ ಹೌದು. ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗಳ ಬೋಧಕರು ಮಠಾಧಿಪತಿಗಳು. ಕೆಲವು ಮಠಗಳಲ್ಲಿ ಈಗ ಆಗುತ್ತಿರುವುದಾದರೂ ಏನು? ಮಠಾಧಿಪತಿಗಳು ಮೂಲ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣಾ ಕೈಂಕರ್ಯಗಳಿಂದ ವಿಮುಖರಾಗುತ್ತಿದ್ದಾರೆಯೇ? ಅದಕ್ಕೆ ನಿದರ್ಶನಗಳೇನು? ಜಾತಿ ಆಧಾರಿತ ಮಠಾಧಿಪತಿಗಳು ಜಾತಿ ನಾಯಕರ ಪರ ವಕಾಲತ್ತು ವಹಿಸುವುದು, ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು, ಅಸಂಬದ್ಧ ಪದ ಬಳಕೆಯ ಹೇಳಿಕೆಗಳು, ಬೆದರಿಕೆ ಒಡ್ಡುವುದು, ಸಮುದಾಯದ ನಾಯಕರ ರಕ್ಷಣೆಗೆ ನಿಲ್ಲುವುದು, ರಾಜಕೀಯ ನಾಯಕರ ಪರವಾಗಿ ಕೆಲಸ ಮಾಡುವುದು, ಸಮರ್ಥನೆ ಮಾಡಿಕೊಳ್ಳುವುದು, ಮುಖ್ಯಮಂತ್ರಿಗಳು, ಮಂತ್ರಿಗಳನ್ನು ನಿರ್ಧರಿಸುವುದು,
ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸುವುದರಲ್ಲೂ ನಿರ್ಣಾಯಕ ಪಾತ್ರ ವಹಿಸುವುದನ್ನು ಗಮನಿಸುತ್ತಿದ್ದೇವೆ. ಇನ್ನೂ
ಒಂದು ಹೆಜ್ಜೆ ಮುಂದೆ ಹೋಗಿ ಭ್ರಷ್ಟಾಚಾರದಲ್ಲಿ ಭಾಗಿಯಾದ ನಾಯಕರ ಪರವಾಗಿ ಧ್ವನಿ ಎತ್ತುವುದು ಮತ್ತು ರಕ್ಷಣೆಗೆ
ಧಾವಿಸುವುದನ್ನು ನೋಡುತ್ತಿದ್ದೇವೆ. ಈ ಮೊದಲು ರಾಜಕೀಯ ನಾಯಕರು ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆಶೀರ್ವಾದ
ಪಡೆದುಕೊಳ್ಳುವ ಸಂಪ್ರದಾಯವಿತ್ತು. ಈಗ ಮಠಾಧಿಪತಿಗಳೇ ರಾಜಕೀಯ ನಾಯಕರ ಮನೆಗೆ ಭೇಟಿ ನೀಡಿ ಅವರನ್ನು
ಸನ್ಮಾನಿಸುವುದು, ಆಶೀರ್ವಾದ ಮಾಡುವುದು ಹೊಸ ಸಂಪ್ರದಾಯವಾಗಿದೆ. ಕೆಲವು ಮಠಾಧಿಪತಿಗಳು ರಾಜಕೀಯ ನಾಯಕರ ಪರ ವಕಾಲತ್ತು ವಸುವುದರ ಮೂಲ ಉದ್ದೇಶ ದೇಣಿಗೆ ಸಂಗ್ರಹವೇ ಆಗಿರುತ್ತದೆ.

ಮಠಗಳ ಆಂತರಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಉಡುಪಿಯ ಪುತ್ತಿಗೆ ಶ್ರೀಗಳ ಪರ್ಯಾಯ ವಿವಾದ, ಹುಬ್ಬಳ್ಳಿಯ ಮೂರು
ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಗಳು ಭಕ್ತರನ್ನು ಗೊಂದಲದಲ್ಲಿ ಸಿಲುಕಿಸಿದ್ದು ಸುಳ್ಳಲ್ಲ. ಇವೆಲ್ಲವೂ ಸ್ವತಾಸಕ್ತಿ
ಸಂಘರ್ಷಗಳೇ ಹೊರತು ಸಾಮಾಜಿಕ ಹಿತಾಸಕ್ತಿಗಾಗಿನ ಸಂಘರ್ಷಗಳಲ್ಲ. ಮಠದ ಉತ್ತರಾಧಿಕಾರಿಗೆ ಸಂಬಂಧಪಟ್ಟಕೆಲವೊಂದು ವಾದಗಳು ನ್ಯಾಯಾಲಯದ ಮೂಲಕ ಇತ್ಯರ್ಥವಾದ ನಿದರ್ಶನಗಳೂ ಇವೆ. ಕೆಲವು ಸ್ವಾಮೀಜಿಗಳು ಈಗಾಗಲೇ ಅಕ್ರಮ
ಸಂಪತ್ತು, ಅನೈತಿಕ ಪ್ರಕರಣಗಳು, ಕೊಲೆಗಳು ಮುಂತಾದ ವಿಚಾರಗಳಲ್ಲಿ ಕಾನೂನಿನಡಿ ಶಿಕ್ಷೆಗೆ ಗುರಿಯಾಗಿರುವ ಉದಾಹರಣೆ ಗಳಿವೆ.

ದೇಗುಲಗಳಲ್ಲಿನ ಸಂಘರ್ಷ, ಮಠಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಅವಲೋಕಿಸಿದಾಗ ನಮಗೆ ಕಾಡುವ ಪ್ರಶ್ನೆಯೆಂದರೆ
ಇವರೆಲ್ಲ ಸಮಾಜಕ್ಕೆ ಸಾರುವ ಸಂದೇಶವಾದರೂ ಏನು? ಮಠಾಧಿಪತಿಗಳಿಗೆ ಧರ್ಮ ಹಿತ ಮುಖ್ಯವಾಗಬೇಕೇ ಹೊರತು ಸ್ವಹಿತ ಮುಖ್ಯವಾಗಬಾರದು. ಅಲ್ಲದೇ ಜಾತಿ ನೆಲೆಗಟ್ಟಿನಿಂದ ಹೊರತಾದ ಸಮಾಜದ ಒಳಿತು ಅವರ ಧ್ಯೇಯ, ಆಶಯವಾಗಿರಬೇಕು. ಸಮಾಜ ಸುಧಾರಣೆಯಲ್ಲಿ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಧರ್ಮ ಬೋಧಕರು ತಪ್ಪು ದಾರಿಯಲ್ಲಿ ನಡೆದರೆ ಭಕ್ತರೆನಿಸಿಕೊಂಡ ಜನತೆಯೂ ದಾರಿ ತಪ್ಪುವುದು ಸಹಜ. ಅಲ್ಲದೇ ಮಠಾಧೀಶರು ಸಮಾಜೋಧಾರ್ಮಿಕ ಕೈಂಕರ್ಯಗಳಿಂದ ಹೊರತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗುತ್ತಿರುವುದು ಬೇಸರದ ಸಂಗತಿ.

ಮಠಾಧಿಪತಿಗಳ ಇಂತಹ ನಡವಳಿಕೆಗಳಿಂದ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತೆಗಳಿಕೆಗೆ ಗುರಿಯಾಗುತ್ತಿರುವುದು ಮತ್ತು ಗೌರವವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಇಂತಹ ಅಪಸವ್ಯಗಳಿಂದ ಕಾವಿಧಾರಿಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತಿದ್ದು, ಇದು ಖಂಡಿತ ಶೋಭೆಯಲ್ಲ. ಮಠಗಳು ಮತ್ತು ಮಠಾಧಿಪತಿಗಳು ರಾಜಕೀಯದಿಂದ ಹೊರತಾಗಿದ್ದರೆ ಮಾತ್ರ ಅವರಿಗೆ ಸಮಾಜದಲ್ಲಿ ಉನ್ನತ ಗೌರವ, ಘನತೆ ಮತ್ತು ಭಕ್ತಿಭಾವ ದೊರೆಯುತ್ತದೆ. ವಿಪರ್ಯಾಸವೆಂದರೆ ಈಗ ದೇಗುಲದ ಸಿಬ್ಬಂದಿಗಳು, ಮಠಾಧೀಶರುಗಳನ್ನು ಭಕ್ತರೇ ತಿದ್ದಿ ಸರಿ ದಾರಿಗೆ ತರಬೇಕಾದ ಸನ್ನಿವೇಶ ಎದುರಾಗಿದೆ.

ಇನ್ನು ಭಕ್ತ ಗಣದ ವಿಷಯಕ್ಕೆ ಬರುವುದಾದರೆ, ಧಾರ್ಮಿಕ ಕ್ಷೇತ್ರಗಳು ಭಕ್ತರ ಆಸ್ಮಿತೆ ಮತ್ತು ಶ್ರದ್ಧಾಭಕ್ತಿಯ ಕೇಂದ್ರ ಎಂಬುದನ್ನು
ಮರೆತು ಧಾರ್ಮಿಕ ಸ್ಥಳಗಳನ್ನು ಮನೋರಂಜನಾ ಸ್ಥಳಗಳು ಎಂದು ಭಾವಿಸುವವರೂ ಇದ್ದಾರೆ. ದಿನಗಳುರುಳಿದಂತೆ ಮೂಲ ಶಾಸ್ತ್ರಗಳು ಮರೆಯಾಗಿ ಅನುಕೂಲ ಶಾಸ್ತ್ರಗಳು ಹುಟ್ಟಿಕೊಳ್ಳುತ್ತಿವೆ. ಭಕ್ತಿ ಆಚರಣೆಗಳು, ಶಾಸ್ತ್ರಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಆಡಂಬರದ ಮತ್ತು ತೋರಿಕೆಯ ಭಕ್ತಿ ಮೇಳೈಸುತ್ತಿದೆ. ಧಾರ್ಮಿಕ ಸ್ಥಳಗಳ ಘನತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ರೂಪಿಸಲಾಗುವ ಸಾಂಪ್ರದಾಯಿಕ ವಸ್ತ್ರಸಂಹಿತೆಗೂ ತಕರಾರು ತೆಗೆಯುವವರು ಇದ್ದಾರೆ.

ಮಾಂಸಾಹಾರ ಸೇವಿಸಿ ದೇಗುಲಗಳ ಪ್ರವೇಶ ಮಾಡುವುದನ್ನು ಪ್ರಶ್ನಿಸಿದರೆ ’ಮಾಂಸಾಹಾರ ಸೇವಿಸಿ ದೇವಸ್ಥಾನಗಳಿಗೆ ಬರಬೇಡಿ ಎಂದು ದೇವರು ಹೇಳಿದ್ದಾನಾ?’ ಎಂದು ಕೇಳುವವರಿದ್ದು, ಇದು ನೈಜ ಭಕ್ತರ ನಂಬಿಕೆಯನ್ನೇ ಪ್ರಶ್ನಿಸಿದಂತೆ. ದೇಗುಲಗಳ ಹುಂಡಿ ಹಣದ ಕಳ್ಳತನದ ವರದಿಗಳು ಸಾಮಾನ್ಯವಾಗಿದ್ದವು. ಈಗ ಅದರ ಮುಂದುವರಿದ ಭಾಗವಾಗಿ ಮಂಡ್ಯದ ಅರಕೇಶ್ವರ ದೇಗುಲದ ಆವರಣದಲ್ಲಿ ಮಲಗಿದ್ದ ಅರ್ಚಕರನ್ನೇ ಕೊಂದು ಹುಂಡಿ ಕಳ್ಳತನ ಮಾಡುತ್ತಾರೆಂದರೆ ಅವರದ್ದು ಎಂಥಾ ಕೃತಿ ಮನಸ್ಥಿತಿ?
ಮೂಢನಂಬಿಕೆಗಳಿಂದ ಹೊರತಾದ ಶ್ರೇಷ್ಠ ಆಚಾರ, ವಿಚಾರ, ಸಂಪ್ರದಾಯ, ಪದ್ಧತಿಗಳು, ಸಂಸ್ಕೃತಿ, ಸಂಸ್ಕಾರ, ನಂಬಿಕೆಗಳಿಗೆ
ಆಧುನಿಕ ಸ್ಪರ್ಶ ನೀಡುವುದು, ಕೊನೆಯಾಗಿ ಅದು ಮೂಲ ಸ್ವರೂಪದಲ್ಲಿಯೇ ಮುಂದುವರಿಯುವಂತಾಗಬೇಕು.

ಈ ಎಲ್ಲಾ ಅಪಸವ್ಯಗಳ ಮಧ್ಯೆ ಕೆಲವು ಧಾರ್ಮಿಕ ಕ್ಷೇತ್ರಗಳು, ಮಠಗಳು ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸುತ್ತಾ ಸಮಾಜಕ್ಕೆ ಮಾದರಿಯಾಗಿದ್ದುಕೊಂಡು ಶಿಕ್ಷಣ ಸಂಸ್ಥೆಗಳು, ಆಶ್ರಮಗಳನ್ನು ನಡೆಸುತ್ತಿವೆ. ಅಂತಹ ಸಮಾಜೋಧಾರ್ಮಿಕ ಕಾರ್ಯದಲ್ಲಿ ಗುರುತಿಸಿಕೊಂಡಿರುವ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ, ಧಾರ್ಮಿಕ ಮುಖಂಡರುಗಳಿಗೆ ಹಾಗೂ ಮಠಗಳು ಮತ್ತು ಮಠಾಧೀಶರಿಗೆ ನಮನಗಳನ್ನು ಸಲ್ಲಿಸೋಣ.