Thursday, 21st November 2024

ಬ್ರಿಟಿಷ್ ಸಾಮ್ರಾಜ್ಯಕ್ಕೆ ನಾಗರಿಕತೆಯನ್ನು ಕಲಿಸಿದ ಚಾಡ್ವಿಕ್

ಹಿಂದಿರುಗಿ ನೋಡಿದಾಗ

Dolly died of dysentery, Polly got the pox Kevin caught cholera, Harry, whooping cough Maisie died of measles, Hugh died of ague
Toby was taken by typhoid, And Dot was too Rats lice and fleas, My only company Since you’ve all gone, I’m left on my own With these rats lice and fleas Friedrich Engels (1820-1895) (The Condition of the Working Class in England from 1887)

ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ) ವಿಶ್ವದ ಅತಿಮುಖ್ಯ ವೈದ್ಯಕೀಯ ನಿಯತಕಾಲಿಕಗಳಲ್ಲಿ ಒಂದು. ಈ ನಿಯತಕಾಲಿಕದ ಸದಸ್ಯರು ಸಾಮಾನ್ಯವಾಗಿ ವೈದ್ಯರು ಇಲ್ಲವೇ ವಿಜ್ಞಾನಿಗಳು ಆಗಿರುವ ಸಾಧ್ಯತೆಯೇ ಹೆಚ್ಚು. ೨೦೦೭ರಲ್ಲಿ ಬಿಎಂಜೆ ಒಂದು ಸಮೀಕ್ಷೆಯನ್ನು ಕೈಗೊಂಡಿತು. ಕ್ರಿ.ಶ.೧೯೦೦ರ ಆರಂಭದಲ್ಲಿ ಮನುಷ್ಯನ ಜೀವಿತಾವಧಿಯು ಸರಾಸರಿ ೩೨ ವರ್ಷಗಳಾಗಿತ್ತು. ಇದು ೨೦೦೦ನೇ ವರ್ಷದ ವೇಳೆಗೆ ಸರಾಸರಿ ೬೬.೮ ವರ್ಷಗಳಷ್ಟಕ್ಕೆ ಹೆಚ್ಚಿತು. ಮನುಷ್ಯನ ಜೀವಿತಾವಽಯ ಈ ಹೆಚ್ಚಳಕ್ಕೆ ಕಾರಣಗಳೇನು ಎಂದು ಅದು ಹುಡುಕಿತು, ೭೦ ಪ್ರಮುಖ ಸಂಶೋಧನೆಗಳನ್ನು ಪಟ್ಟಿ ಮಾಡಿತು. ಆನಂತರ ಸಂಪಾದಕೀಯ ಮಂಡಳಿಯು ೭೦ ಸಂಶೋಧನೆಗಳಲ್ಲಿ ೧೫ ಪ್ರಮುಖ ಸಂಶೋಧನೆಗಳ ಆಯ್ಕೆ ಮಾಡಿ ಒಂದು ಪಟ್ಟಿಯನ್ನು ಸಿದ್ಧ ಪಡಿಸಿತು. ಆ ಪಟ್ಟಿಯನ್ನು ಬಿಎಂಜೆಯಲ್ಲಿ ಪ್ರಕಟಿಸಿತು. ಈ ೧೫ ಸಂಶೋಧನೆಗಳಲ್ಲಿ ಮನುಕುಲದ ಆರೋಗ್ಯವನ್ನು ಕಾಪಾಡುವ ಪ್ರಯತ್ನದಲ್ಲಿ ಮಹಾ ತಿರುವನ್ನು ಕೊಟ್ಟ ಸಂಶೋಧನೆಯು ಯಾವುದೆಂಬುದನ್ನು ಸೂಚಿಸುವಂತೆ ಕೇಳಿಕೊಂಡಿತು.

೧೧,೩೦೦ ಓದುಗರು ಪ್ರತಿಕ್ರಿಯೆಯನ್ನು ನೀಡಿದರು. ಅವುಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯು ಪ್ರಥಮ ಸ್ಥಾನವನ್ನು ಗಳಿಸಿತು. ನಂತರದ ಸ್ಥಾನಗಳಲ್ಲಿ
ಪ್ರತಿಜೈವಿಕ ಔಷಧಗಳು, ಅರಿವಳಿಕೆ, ಲಸಿಕೆ ಇತ್ಯಾದಿಗಳು ಆಯ್ಕೆಯಾದವು. ಈ ಹಿನ್ನೆಲೆಯಲ್ಲಿ, ವೈಯುಕ್ತಿಕ ಸ್ವಚ್ಛತೆ, ಕುಡಿಯಲು ಶುದ್ಧ ನೀರು ಹಾಗೂ ಉತ್ತಮ ಒಳಚರಂಡಿ ವ್ಯವಸ್ಥೆಯು ಒಂದು ಸಮಾಜ/ದೇಶದ ಆರೋಗ್ಯವನ್ನು ನಿರ್ಧರಿಸುತ್ತದೆ ಎನ್ನುವ ಸತ್ಯವು ವೇದ್ಯವಾಗುತ್ತದೆ. ಫ್ರೆಡ್ರಿಕ್ ಎಂಗೆಲ್ಸ್ ಜರ್ಮನ್ ದಾರ್ಶನಿಕ, ಇತಿಹಾಸಕಾರ, ಸೈದ್ಧಾಂತಿಕ ರಾಜಕೀಯ ತಜ್ಞ, ಪತ್ರಕರ್ತ ಹಾಗೂ ಸಮಾಜವಾದಿ ಕ್ರಾಂತೀಕಾರ. ಈತ ಕಾರ್ಲ್ ಮಾರ್ಕ್ಸ್‌ನ ಗೆಳೆಯ ಹಾಗೂ ಮಾರ್ಕ್ಸ್‌ವಾದದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವನಾಗಿದ್ದ.

ಈತನು ಲಂಡನ್ನಿನ ಮ್ಯಾಂಚೆಸ್ಟರಿನಲ್ಲಿ ವಾಸವಾಗಿದ್ದ. ಅಲ್ಲಿನ ಕಾರ್ಮಿಕರ ಮಕ್ಕಳ ಆರೋಗ್ಯವನ್ನು ಕುರಿತು ಮೇಲಿನ ಕವನವನ್ನು ಒಳಗೊಂಡ ಒಂದು ಪುಸ್ತಕವನ್ನು ಬರೆದ. ಮ್ಯಾಂಚೆಸ್ಟರಿನ ಬಡ ಕಾರ್ಮಿಕರ ಮಕ್ಕಳಲ್ಲಿ, ಶೇ.೫೩ರಷ್ಟು ಮಕ್ಕಳು ೫ ವರ್ಷಗಳಾಗುವ ಮೊದಲೇ ತೀರಿಕೊಂಡರೆ, ಗ್ರಾಮಾಂತರ ಪ್ರದೇಶಗಳಲ್ಲಿ ಶೇ.೩೨ರಷ್ಟು ಬಡಮಕ್ಕಳು ಸಾಯುತ್ತಿದ್ದುದನ್ನು ದಾಖಲಿಸಿದ. ಚಾರ್ಲ್ಸ್ ಡಿಕನ್ಸ್ ತನ್ನ ಕಾದಂಬರಿಗಳಲ್ಲಿ ಲಂಡನ್ ನಗರದ ಕೊಳಕನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾನೆ. ಬಡತನ- ಕೊಳಕು- ಅನಾರೋಗ್ಯ-ಸಾವುಗಳ ನಡುವೆ ನಿಕಟ ಸಂಪರ್ಕವಿರುವುದನ್ನು ಮೊದಲ ಬಾರಿಗೆ ಗಮನಿಸಿದವನು ಲಂಡನ್ನಿನ ವಕೀಲ ಹಾಗೂ ಸಮಾಜ ಸುಧಾರಕ ಎಡ್ವಿನ್ ಚಾಡ್ವಿಕ್.

ಲಂಡನ್ ನಗರವನ್ನು ಒಳಗೊಂಡಂತೆ ಸಮಸ್ತ ಬ್ರಿಟನ್ನಿಗೆ ಸ್ವಸ್ಥ ಸಮಾಜದ ಮೂಲ ಪಾಠಗಳನ್ನು ಕಲಿಸಿಕೊಟ್ಟು, ಅವರನ್ನು ನಾಗರಿಕರನ್ನಾಗಿ ಮಾಡಿದವನು ಚಾಡ್ವಿಕ್. ಈತ ಲಂಡನ್ ನಗರದ ಲಂಕಾಷೈರ್ ಪ್ರದೇಶದ ಲಾಂಗ್‌ಸೈಟ್ ಎಂಬಲ್ಲಿ ಜನವರಿ ೨೪, ೧೮೦೦ರಲ್ಲಿ ಜನಿಸಿದ. ಎಡ್ವಿನ್ ಚಾಡ್ವಿಕ್ ಬಾಲಕ ನಾಗಿದ್ದಾಗಲೇ ಅವನ ತಾಯಿ ತೀರಿಹೋದಳು. ಹಾಗಾಗಿ ತಂದೆಯು ಲಾಂಗ್‌ಸೈಟ್ ಬಿಟ್ಟು ಲಂಡನ್ ನಗರಕ್ಕೆ ಬಂದು ನೆಲೆಸಿದ. ಚಾಡ್ವಿಕ್ ವಕೀಲಿಕೆಯನ್ನು ಕಲಿಯಲಾರಂಭಿಸಿದ. ಜತೆಯಲ್ಲಿ ತನ್ನ ದೈನಂದಿನ ಖರ್ಚಿಗಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದ. ಅವನ ಲೇಖನಗಳ ಪ್ರಮುಖ ವಿಷಯವು ಸಮಾಜದ ಆಗುಹೋಗುಗಳಾಗಿದ್ದವು. ಲಂಡನ್ ನಗರದಲ್ಲಿ ಅಪಘಾತಗಳನ್ನು ತಡೆಗಟ್ಟುವುದು ಹೇಗೆ ಎನ್ನುವ ಇವನ ಬರಹವು ಸಂಶೋಧನಾತ್ಮಕ ಲೇಖನವಾಗಿ ದೊಡ್ಡ ಹೆಸರನ್ನು ತಂದುಕೊಟ್ಟಿತು. ಆನಂತರ ಅವನು ಆರೋಗ್ಯವನ್ನು ಕುರಿತು ಲೇಖನಗಳನ್ನು ಬರೆದ. ಇವನ ಲೇಖನಗಳು ಜೆರೇಮಿ ಬೆಂಥಮ್ ಗಮನಕ್ಕೆ ಬಂದವು.

ಈತನು ಇಂಗ್ಲೆಂಡಿನ ನ್ಯಾಯಾಧೀ, ದಾರ್ಶನಿಕ ಹಾಗೂ ಸಮಾಜ ಸುಧಾರಕನಾಗಿದ್ದ. ಚಾಡ್ವಿಕ್ ಬರಹಗಳಿಂದ ಪ್ರೇರಿತನಾಗಿ ಅವನನ್ನು ತನ್ನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡ.
ಚಾಡ್ವಿಕ್ ಒಮ್ಮೆಲೆ ಲಂಡನ್ನಿನ ವಿದ್ವತ್ ಹಾಗೂ ಅಧಿಕಾರಿ ವಲಯದೊಳಗೆ ಪ್ರವೇಶವನ್ನು ಪಡೆದ. ೧೬೦೧ರಲ್ಲಿ ಲಂಡನ್ನಿನಲ್ಲಿ ಬಡವರ ಕಾನೂನು ಅಥವಾ ‘ಪೂರ್ ಲಾ’ ಎಂಬ ಒಂದು
ಕಾನೂನು ಜಾರಿಗೆ ಬಂದಿತ್ತು. ಇದು ಬ್ರಿಟನ್ ಇತಿಹಾಸದಲ್ಲಿ ಬಡಜನರ ಹಿತಕ್ಕಾಗಿ ರೂಪುಗೊಂಡ ಪ್ರಥಮ ಕಾನೂನಾಗಿತ್ತು. ೧೮೩೨ರಲ್ಲಿ ಈ ಕಾನೂನಿಗೆ ತಿದ್ದುಪಡಿಯನ್ನು ತರಲು ಒಂದು ರಾಯಲ್ ಕಮಿಷನ್ ಆಯೋಗವನ್ನು ರಚಿಸಿದರು. ಈ ಆಯೋಗದಲ್ಲಿ ಆಸಿಸ್ಟೆಂಟ್ ಕಮಿಷನರ್ ಆಗಿ ಚಾಡ್ವಿಕ್ ಸ್ಥಾನವನ್ನು ಪಡೆದ. ಬಡವರಿಗಾಗಿ ಹಣವು ವಿಪರೀತ ಖರ್ಚಾಗುತ್ತಿತ್ತು. ಬೊಕ್ಕಸದ ಮೇಲೆ ವಿಪರೀತ ಹೊರೆ ಬೀಳುತ್ತಿತ್ತು. ಅದನ್ನು ಕಡಿಮೆ ಮಾಡುವುದು ಆಯೋಗ ರಚನೆಯ ಮೂಲ ಉದ್ದೇಶವಾಗಿತ್ತು.

ದಣಿವರಿಯದ ಚಾಡ್ವಿಕ್ ಹಗಲು-ರಾತ್ರಿ ವಿಕ್ಟೋರಿಯನ್ ಲಂಡನ್ನಿನಾದ್ಯಂತ ಸುತ್ತಾಡಿ, ತನ್ನ ವರದಿಯನ್ನು ಸಿದ್ಧಪಡಿಸಿದ. ಅದರ ಮುಖ್ಯಾಂಶಗಳು ಹೀಗಿದ್ದವು: ಬಡಜನರ ನಾನಾ ಸಮಸ್ಯೆ ಗಳಿಗೆ ಹಣವು ಕಾರಣವಲ್ಲ; ಅವರ ಅನಾರೋಗ್ಯವೇ ಮುಖ್ಯ ಕಾರಣ. ಲಂಡನ್ನಿನ ೧/೮ ಭಾಗದಲ್ಲಿರುವ ಶ್ರೀಮಂತರಿಗೆ ಮಾತ್ರ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ. ಬಡವರು
ವಾಸಿಸುವ ಕಡೆ ಕುಡಿಯಲು ಶುದ್ಧ ನೀರು ದೊರೆಯುತ್ತಿಲ್ಲ ಹಾಗೂ ಒಳಚರಂಡಿಯ ವ್ಯವಸ್ಥೆಯಿಲ್ಲ. ಅನಾರೋಗ್ಯಕ್ಕೆ ಮುಖ್ಯ ಕಾರಣ ರಸ್ತೆಯಲ್ಲಿ ಯಾವಾಗಲೂ ಹರಿಯುತ್ತಿರುವ ಕೊಳಕು.
ಬಡವರು ಕೊಳಕಿನ ನಡುವೆಯೇ ಜೀವಿಸಬೇಕಾಗಿರುವ ಹಾಗೂ ಬಡವರ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಕಾರಣ, ಸಾವಿನ ಪ್ರಮಾಣ ಬಡ ಮಕ್ಕಳಲ್ಲೇ ಅಧಿಕ.

ಬಡವರ ಜೀವನಶೈಲಿಯಲ್ಲಿ ಸಾಕಷ್ಟು ಸುಧಾರಣೆ ಯನ್ನು ತಂದರೆ, ಅವರು ಆರೋಗ್ಯವಂತರಾಗುತ್ತಾರೆ. ೧೮೩೪ರಲ್ಲಿ ಚಾಡ್ವಿಕ್ ವರದಿಯನ್ನಾಧರಿಸಿ, ಬಡವರ ಕಾನೂನಿಗೆ ತಿದ್ದುಪಡಿಯನ್ನು ತರಲಾಯಿತು. ಒಂದು ಕೇಂದ್ರ ಮಂಡಲಿಯನ್ನು ರಚಿಸಿದರು. ಎಲ್ಲರಿಗೂ ಪರಿಹಾರವು ಸಮಾನವಾಗಿ ದೊರೆಯಬೇಕೆಂದು ಮೂವರು ಕಮಿಷನರುಗಳನ್ನೊಳಗೊಂಡ ‘ಎ ಸೆಂಟ್ರಲ್ ಪೂರ್ ಲಾ ಬೋರ್ಡ್’ ಸ್ಥಾಪಿಸಿದರು. ಚಾಡ್ವಿಕ್ ಕಾರ್ಯದರ್ಶಿಯಾದ. ಚಾಡ್ವಿಕ್ ತಂದ ಬದಲಾವಣೆಗಳು ಕೆಲವರಿಗೆ ಹಿಡಿಸಲಿಲ್ಲ. ಬಡವರಿಗಾಗಿ ಜಾರಿಯಲ್ಲಿದ್ದ ಕಾನೂನನ್ನು ದುರುಪಯೋಗಪಡಿಸಿ ಕೊಂಡವರು ಸಾಕಷ್ಟು ಜನರಿದ್ದರು. ಚಾಡ್ವಿಕ್ ಬಡವರಾಗಿರುವ ಎಲ್ಲರಿಗೂ ಉಚಿತ ಸಹಾಯವನ್ನು ನೀಡಲಿಲ್ಲ. ಗಟ್ಟಿಮುಟ್ಟಾಗಿರುವ ಬಡಜನರಿಗೆ ಬಿಟ್ಟಿ ಹಣವನ್ನು ನೀಡಲಿಲ್ಲ. ದುಡಿಯಲು ಕೆಲಸವನ್ನು ನೀಡಿದ. ದುಡಿದು ತಿನ್ನಿರೆಂದ.

೧೮೩೮ರಲ್ಲಿ ಟೈ-ಸ್ ಸೋಂಕು ಲಂಡನ್ನಿನಲ್ಲಿ ಹರಡಿತು. ಬಡತನಕ್ಕೂ ಟೈ-ಸ್ ಸೋಂಕು ಹರಡುವುದಕ್ಕೂ ಸಂಬಂಧವಿರುವುದನ್ನು ಗಮನಿಸಿದ ಚಾಡ್ವಿಕ್, ಇದನ್ನು ನಿರೂಪಿಸಲು ಆರ್ನಾಟ್ ಸ್ಮಿತ್, ಸೌತ್ ವುಡ್ ಸ್ಮಿತ್ ಮತ್ತು ಜೇಮ್ಸ್ ಕೇ ಶಟಲವರ್ತ್ ಎಂಬ ವೈದ್ಯರ ಸಹಾಯವನ್ನು ಪಡೆದ. ಬಡತನಕ್ಕೂ, ಲಂಡನ್ನಿನ ಕೊಳಕಿಗೂ ಹಾಗೂ ಸೋಂಕು ರೋಗಗಳಿಗೂ ಸಂಬಂಧ ಇರುವುದನ್ನು ನಿರೂಪಿಸಲು ಇಂಥ ಒಂದು ಅಧ್ಯಯನವು ಬ್ರಿಟನ್ನಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿತ್ತು. ಚಾಡ್ವಿಕ್ ಒಂದು ಪ್ರಶ್ನೋತ್ತರ ಸಿದ್ಧಪಡಿಸಿದ. ಲಂಡನ್ ನಗರದ ಎಲ್ಲ ಸ್ತರದ ಜನರಿಗೆ ಈ ಪ್ರಶ್ನೋತ್ತರವನ್ನು ಕಳುಹಿಸಿಕೊಟ್ಟ. ಎಲ್ಲರಿಂದ ಸಂಗ್ರಹಿಸಿದ ಮಾಹಿತಿಯನ್ನು ತಾನೇ ಸ್ವಯಂ ವಿಶ್ಲೇಷಿಸಿದ.

ಒಂದು ವರದಿಯನ್ನು ಸಿದ್ಧಪಡಿಸಿದ. ೧೮೩೮ರಲ್ಲಿ ಆರಂಭವಾದ ಈ ಅಧ್ಯಯನವು ೧೮೪೨ರಲ್ಲಿ ಗ್ರೇಟ್ ಬ್ರಿಟನ್ನಿನ ಕಾರ್ಮಿಕ ಜನರ ನೈರ್ಮಲ್ಯ ಸ್ಥಿತಿ-ಗತಿಯನ್ನು ಕುರಿತ ವರದಿಯಾಗಿ (ದಿ
ರಿಪೋರ್ಟ್ ಆನ್ ದಿ ಸ್ಯಾನಿಟರಿ ಕಂಡಿಷನ್ಸ್ ಆಫ್ ದಿ ಲೇಬರಿಂಗ್ ಪಾಪ್ಯುಲೇಷನ್ ಆಫ್ ಗ್ರೇಟ್ ಬ್ರಿಟನ್) ಬಿಡುಗಡೆಯಾಯಿತು. ಈ ಅಧ್ಯಯನ ಹಾಗೂ ವರದಿಯ ಪ್ರಕಟಣೆಗೆ ತಗುಲಿದ ಎಲ್ಲ ಖರ್ಚು ವೆಚ್ಚವನ್ನು ಚಾಡ್ವಿಕ್ ತನ್ನ ಕಿಸೆಯಿಂದ ಭರಿಸಿದ. ಜಾನ್ ರೋ ಎನ್ನುವವನು ಲಂಡನ್ನಿಗೆ ಮಾದರಿಯಾಗಬಹುದಾದ ಒಳಚರಂಡಿಯನ್ನು ರೂಪಿಸಿದ್ದ. ಚಾಡ್ವಿಕ್ ಅದನ್ನು ಶಿಫಾರಸು ಮಾಡಿದ. ಡಾ.ಡೈಸ್ ಗುತ್ರಿಯು ಶಿ-ರಸು ಮಾಡಿದ ಹಾಗೆ ಪ್ರತಿಯೊಂದು ಮನೆಗೂ ಕುಡಿಯುವ ಶುದ್ಧ ನೀರಿನ ಶಾಶ್ವತ ಸಂಪರ್ಕವನ್ನು ಒದಗಿಸಬೇಕೆಂದು ಹೇಳಿದ.

ಅದೂ ಚಾಡ್ವಿಕ್‌ನ ವರದಿಯಲ್ಲಿತ್ತು. ಈ ವರದಿಯು ಸಾರ್ವಜನಿಕರ ಗಮನವನ್ನು ಒಮ್ಮೆಲೆ ಸೆಳೆಯಿತು. ಆಗ ಅರಸೊತ್ತಿಗೆಯೂ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಂಡು, ಅದನ್ನು
ಜಾರಿಗೆ ತರುವ ಬಗ್ಗೆ ಒಂದು ರಾಯಲ್ ಕಮಿಷನ್ ಅನ್ನು ಆಯೋಜಿಸಿತು. ಈ ಆಯೋಗದ ಅನಧಿಕೃತ ಕಾರ್ಯದರ್ಶಿಯಾಗಿ ಚಾಡ್ವಿಕ್ ಲಂಡನ್ನಿನ ನಿಜದರ್ಶನವನ್ನು ಮಾಡಿಸಿದ. ಇದರ ಫಲವಾಗಿ ಲಂಡನ್ನಿನ ಬಡವ- ಬಲ್ಲಿದರೆನ್ನದೆ ಎಲ್ಲರಿಗೂ ಕುಡಿಯಲು ಶುದ್ಧ ನೀರು ದೊರೆಯಿತು. ಅತ್ಯುತ್ತಮ ಚರಂಡಿ ವ್ಯವಸ್ಥೆಯು ರೂಪುಗೊಂಡ ಕಾರಣ ರಸ್ತೆಗಳು ಕೊಳಚೆಮುಕ್ತವಾದವು. ಚರಂಡಿಯ ನೀರೆಲ್ಲವೂ ನಗರದ ಹೊರಗಿದ್ದ ಹೊಲ-ಗದ್ದೆಗಳಿಗೆ ಹರಿಯಲಾರಂಭಿಸಿತು.

ಒಂದು ಕಾನೂನನ್ನು ರೂಪಿಸುವುದು ದೊಡ್ಡದಲ್ಲ. ಆ ಕಾನೂನನ್ನು ಅಕ್ಷರಶಃ ಜಾರಿಗೆ ತರುವುದು ಹಾಗೂ ಅದು ನಿರಂತರವಾಗಿ ಮುಂದುವರೆಯುವಂತೆ ನೋಡಿಕೊಳ್ಳುವುದು
ಸವಾಲಿನ ಕೆಲಸವಾಗುತ್ತದೆ. ೧೮೩೧ರಲ್ಲಿ ಲಂಡನ್ನಿನಲ್ಲಿ ಕಾಲರಾ ಕಾಣಿಸಿಕೊಂಡು ೧೬,೦೦೦ ಜನರ ಸಾವಿಗೆ ಕಾರಣವಾಗಿತ್ತು. ೧೮೪೨ರ ತನ್ನ ವರದಿಯಲ್ಲಿ, ‘ಕಾಲರಾ ಸೋಂಕು
ಹರಡಬೇಕಾದರೆ ಚರಂಡಿ ನೀರು ಕುಡಿಯುವ ನೀರಿನ ಸಂಪರ್ಕಕ್ಕೆ ಬರಬಾರದು’ ಎಂದು ಚಾಡ್ವಿಕ್ ಸೂಚಿಸಿದ್ದ. ಆದರೆ ಅಧಿಕಾರಿಗಳ ಅಜಾಗರೂಕತೆಯಿಂದ ಮತ್ತೆ ಕಾಲರಾ ಕಾಣಿಸಿಕೊಂಡಿತು. ಹಾಗಾಗಿ ೧೯೪೮ರಲ್ಲಿ ಸಾರ್ವಜನಿಕ ಆರೋಗ್ಯ ಕಾಯಿದೆ ಜಾರಿಗೆ ಬಂದಿತು. ಇದರಲ್ಲಿ ಕುಡಿಯುವ ನೀರು ಮತ್ತು ಚರಂಡಿ ನೀರು ಪ್ರತ್ಯೇಕವಾಗಿ ಹರಿಯುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು.

ಸರಕಾರವೇ ಎಲ್ಲವನ್ನೂ ಮಾಡಲಿ ಎಂದು ನಿರೀಕ್ಷಿಸುವ ಬದಲು, ಸ್ಥಳೀಯರು ತಮ್ಮ ತಮ್ಮ ಬಡಾವಣೆಯ ನೈರ್ಮಲ್ಯದ ಬಗ್ಗೆ ಆಸಕ್ತಿಯನ್ನು ವಹಿಸಬೇಕು ಎಂದು ಚಾಡ್ವಿಕ್ ಶಿಫಾರಸು ಮಾಡಿದ. ೧೮೪೮-೧೮೫೪ರವರೆಗೆ ಜನರಲ್ ಬೋರ್ಡ್ ಆಫ್ ಹೆಲ್ತ್ ಕಮಿಷನರ್ ಆಗಿ ಚಾಡ್ವಿಕ್ ಕೆಲಸವನ್ನು ಮಾಡಿದ. ಲಂಡನ್ನಿನ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿದ್ದರು. ಅವರ ಸ್ಥಿತಿ-ಗತಿಗಳನ್ನು ಅಧ್ಯಯನ ಮಾಡಿದ ಚಾಡ್ವಿಕ್, ‘ಮಕ್ಕಳು ಶಾಲೆಗೆ ಹೋಗಿ ವಿದ್ಯೆಯನ್ನು ಕಲಿಯಬೇಕು. ಅದಕ್ಕೆ ಅಗತ್ಯ ಸಮಯವನ್ನು ಮೀಸಲಿಡಬೇಕು. ಆನಂತರ ಅವರು ಕಾರ್ಖಾನೆಗಳಲ್ಲಿ ದುಡಿಯಬಹುದು’ ಎಂದ. ಈತನ ಅಧ್ಯಯನದ ಫಲವಾಗಿ ಕಾರ್ಖಾನೆಗಳ ಅಽನಿಯಮ, ೧೯೩೩ ಜಾರಿಗೆ ಬಂದಿತು.

ಅಂದಿನ ಲಂಡನ್ನಿನಲ್ಲಿ ಮರಣ ಪ್ರಮಾಣ ಪತ್ರವನ್ನು (ಡೆತ್ ಸರ್ಟಿಫಿಕೇಟ್) ನೀಡುವಾಗ, ಸತ್ತ ದಿನಾಂಕವನ್ನು ಮಾತ್ರ ನಮೂದಿಸುತ್ತಿದ್ದರು. ಮರಣಕ್ಕೆ ಕಾರಣವನ್ನೂ ನಮೂದಿಸಬೇಕೆಂದು ಆಗ್ರಹಿಸಿ, ಅದನ್ನು ಚಾಡ್ವಿಕ್ ಜಾರಿಗೆ ತಂದ (೧೮೩೬). ೧೮೩೮ರಲ್ಲಿ ಲಂಡನ್ನಿನ ಪೊಲೀಸ್ ಕಮಿಷನರ್ ತನ್ನ ಅಧ್ಯಯನದ ಸಾರಾಂಶವನ್ನು ಬರೆದ. ಅಪರಾಧವು ಘಟಿಸಿದ ಮೇಲೆ, ಅಪರಾಧಿಯನ್ನು ಹಿಡಿದು, ಶಿಕ್ಷೆಯನ್ನು ಕೊಡುವುದು ಪೊಲೀಸರ ಮುಖ್ಯ ಕೆಲಸವಲ್ಲ. ಅಪರಾಧವು ನಡೆಯದ ಹಾಗೆ ಜನಜಾಗೃತಿಯನ್ನು ಉಂಟು ಮಾಡುವುದು ಪೊಲೀಸರ ಹೊಣೆ ಎಂದ. ಎಡ್ವಿನ್ ಚಾಡ್ವಿಕ್, ಬ್ರಿಟನ್ನಿನ ಶತ ಶತಮಾನಗಳ ಅಜ್ಞಾನವನ್ನು ತೊಡೆದು ನಾಗರಿಕತೆಯ ನಿಜ ದರ್ಶನವನ್ನು ಮಾಡಿಸಿದ ಪುಣ್ಯಾತ್ಮ. ಹಾಗಾಗಿ ಈತನಿಗೆ ೧೮೮೯ರಲ್ಲಿ ಬ್ರಿಟನ್ ಆಳರಸರು ‘ನೈಟ್ ಹುಡ್’ ಗೌರವವನ್ನು ದಯಪಾಲಿಸಿದರು. ಈಗ ಚಾಡ್ವಿಕ್, ಸರ್ ಎಡ್ವಿನ್ ಚಾಡ್ವಿಕ್ ಎಂಬ ಗೌರವಕ್ಕೆ ಪಾತ್ರನಾದ. ಜುಲೈ ೬, ೧೮೯೦ರಂದು ಇಂಗ್ಲೆಂಡಿನ ಸರ್ರೆಯಲ್ಲಿ ಚಾಡ್ವಿಕ್ ಮರಣಿಸಿದ.