ತನ್ನಿಮಿತ್ತ
ಡಾ.ಪ್ರಕಾಶ ಗ.ಖಾಡೆ
ಪ್ರೊ ಚಂದ್ರಶೇಖರ ಪಾಟೀಲ ಅವರದು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವಿಶಿಷ್ಟ ವ್ಯಕ್ತಿತ್ವದ ನಡೆ. ಪಂಡಿತ ವಲಯದ ಪ್ರಕಾಂಡ ನೆಲೆವೆನಿಸಿದ ವಿಶ್ವವಿದ್ಯಾಲಯದ ಅದರಲ್ಲೂ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಪ್ರೊ.ಚಂಪಾ ಅವರು ಸಾಮಾನ್ಯ ಹಳ್ಳಿಗ ರೊಂದಿಗೂ ಆತ್ಮೀಯವಾದ ಒಡನಾಟವಿಟ್ಟುಕೊಂಡ ಅಪರೂಪದ ಸಮಾಜಮುಖಿ ವ್ಯಕ್ತಿತ್ವ ಅವರದು.
ಎಲ್ಲರೊಂದಿಗೆ ನಗುಮೊಗದಿಂದ ಬೆರೆವ ಅವರ ಗುಣ ಮತ್ತು ಸ್ವಭಾವ ಮ್ಯಾಗ್ನೆಟ್ ರೀತಿಯಲ್ಲಿ ಆಕರ್ಷಿಸುವಂಥದು. ಅವರಲ್ಲಿ ಹಮ್ಮು ಬಿಮ್ಮುಗಳಿಗೆ ಆಸ್ಪದವಿರಲಿಲ್ಲ. ಆದರೆ ಕಪಟತನದ ರಾಜಕಾರಣಿ, ವಿದ್ವಾಂಸರು, ಸ್ವಾಮೀಜಿಗಳು ಹಾಗೂ ಸಾಹಿತಿ ಗಳನ್ನು ಅವರೆಂದು ಹತ್ತಿರ ಸುಳಿವಗೊಡುತ್ತಿರಲಿಲ್ಲ. ಜಗಳಕ್ಕೆ ನಿಲ್ಲುವ ಸ್ವಭಾವ ಅವರದ್ದಾದರೂ ಒಂದು ಅರ್ಥಪೂರ್ಣವಾದ ಹಾಗೂ ಭವಿಷ್ಯತ್ತಿನಲ್ಲಿ ನಾಲ್ಕು ಜನಕ್ಕೆ ಪ್ರಯೋಜನಕಾರಿಯಾದ ವಾಗ್ವಾದ ಅವರದ್ದಾಗಿರುತ್ತಿತ್ತು.
ನಾನು ಈಗ ಮೂವತ್ತು ವರುಷಗಳ ಹಿಂದೆ 1988-90ರ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎಂ.ಎ. ತರಗತಿ ಓದುತ್ತಿರುವಾಗ ಪ್ರೊ.ಚಂಪಾ ಅವರೊಂದಿಗೆ ಹೆಚ್ಚು ಒಡನಾಟದ ಅವಕಾಶ ದೊರೆಯಿತು. ನಾನು ಓದುತ್ತಿರುವಾಗ ವಿ.ವಿ.ಯಲ್ಲಿ ಒಂದು ವಿದ್ವಾಂಸರ ಪಡೆಯೇ ಇತ್ತು. ಆ ಹೊತ್ತಿಗೆ ಬಂಡಾಯದ ಕಾವು ರಾಜ್ಯದಲ್ಲಿ ತುಂಬಾ ಪ್ರಖರ ವಾಗಿತ್ತು.
ಮೈಸೂರು ಕರ್ನಾಟಕ ಭಾಗದಲ್ಲಿ ಬರಗೂರು ರಾಮಚಂದ್ರಪ್ಪನವರು, ಹೈದರಾಬಾದ ಕರ್ನಾಟಕ ಭಾಗದಲ್ಲಿ ಚೆನ್ನಣ್ಣ ವಾಲೀಕಾರ ಅವರು, ನಮ್ಮ ಧಾರವಾಡ ಭಾಗದಲ್ಲಿ ಉತ್ತರ ಕರ್ನಾಟಕದ ಲೇಖಕರಿಗೆ ಪ್ರೊ.ಚಂಪಾ ಅವರು ಒಂದು ಮಾಡೆಲ್ ಆಗಿದ್ದರು. ಮುಂಚೂಣಿಯಲ್ಲಿ ನಿಂತು ಅವರು ಸಂಘಟಿಸುತ್ತಿದ್ದ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ನಾನೂ ಭಾಗಿಯಾಗುವ ಅವಕಾಶ ಸಿಕ್ಕಿದ್ದು ಈ ಹೊತ್ತಿಗೂ ನನ್ನೊಳಗೆ ಧೈರ್ಯ ಮತ್ತು ಅತ್ಮಾಭಿಮಾನದ ಮನೋಭಾವವನ್ನು ಗಟ್ಟಿಗೊಳಿಸಿದೆ.
ನಾವು ವಿ.ವಿ.ಯಲ್ಲಿ ಓದುತ್ತಿರುವಾಗ ಪ್ರೊ. ಚಂಪಾ ಅವರ ಹಿರಿತನದಲ್ಲಿ ರಾಣಿಬೆನ್ನೂರಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯಮಟ್ಟದ ಸಮ್ಮೇಳನ ಜರುಗಿತು. ಈ ಸಮ್ಮೇಳನಕ್ಕಾಗಿ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ ಕುರಿತು ಪ್ರಬಂಧ ರಚಿಸಿಕೊಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ನಾನೂ ಈ ಪ್ರಬಂಧವನ್ನು ಬರೆದುಕೊಟ್ಟೆ, ಆಶ್ಚರ್ಯದ ಸಂಗತಿ ಎಂದರೆ ನಾನು ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ, ಮುಂದೆ ಈ ಲೇಖನವನ್ನು ಪ್ರೊ.ಚಂಪಾ ಅವರು ತಮ್ಮ ಸಂಕ್ರಮಣದಲ್ಲೂ ಪ್ರಕಟಿಸಿದರು.
ರಾಣೆಬೆನ್ನೂರಿನಲ್ಲಿ ನಡೆದ ಸಮ್ಮೇಳನದ ಸಂದರ್ಭದಲ್ಲಿ ರವಿ ಬೆಳೆಗೆರೆ ಅವರು (ಆಗಿನ್ನು ಹಾಯ್ ಬೆಂಗಳೂರು ಚಾಲೂ ಆಗಿರಲಿಲ್ಲ.) ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹದ ಮಾತನಾಡಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏನು ಬಹುಮಾನ
ಕೊಟ್ಟರು, ಎಷ್ಟು ಮೊತ್ತ ಕೊಟ್ಟರು , ಈಗ ನೆನಪಿಲ್ಲ, ಆದರೆ ಈಗಲೂ ನೆನಪಿರುವ ಒಂದು ಸಂದರ್ಭ ಹೇಳಲೇಬೇಕು.
ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿರುವ ಅಂಚೆ ಕಚೇರಿಗೆ ನನ್ನ ಮನಿಯಾರ್ಡರ್ ಪಡೆಯಲು ಹೋಗಿದ್ದೆ.
ಅಲ್ಲಿ ಚಂಪಾ ಅವರೂ ಬಂದಿದ್ದರು. ವಿಶ್ವವಿದ್ಯಾಲಯದಲ್ಲಿ ನಾನು ಕಂಡಂತೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದ
ಪ್ರಾಧ್ಯಾಪಕರಲ್ಲಿ ಪ್ರೊ.ಚಂಪಾ ಹಾಗೂ ಡಾ.ಎಂ.ಎಂ.ಕಲಬುರ್ಗಿ ಅವರು ಮೇಲಸ್ತರದವರು. ಆಗಿನ್ನೂ ಪತ್ರ ವ್ಯವಹಾರವೇ ಪ್ರಧಾನವಾಗಿದ್ದ ಕಾಲ. ಸ್ವತಃ ಅಂಚೆ ಕಚೇರಿಗೆ ಬಂದು ಪೋಸ್ಟ್ ಮಾಡುವ ತಮ್ಮ ಕೆಲಸ ತಾವೇ ಮಾಡುವ ದೊಡ್ಡತನ ಅವರದ್ದಾಗಿತ್ತು. ಇನ್ನೊಬ್ಬರಿಗಾಗಿ ಕಾಯದೇ ಸ್ವತಃ ನಡೆದು ಬಂದು ಡಾ.ಕಲಬುರ್ಗಿಯವರು ಪೋಸ್ಟ್ ಬಾಕ್ಸಿನಲ್ಲಿ ಪತ್ರ ಹಾಕಿ ಮತ್ತೆ ತಮ್ಮ ಕೋಣೆಗೆ ತೆರಳುತ್ತಿದ್ದುದನ್ನು ನಾನು ಹಲವಾರು ಬಾರಿ ಕಂಡಿದ್ದೇನೆ.
ಅವರಂತೆ ಪ್ರೊ.ಚಂಪಾ ಅವರು ಕೂಡ. ಒಮ್ಮೆ ಹೀಗೆ ಪೋಸ್ಟ್ ಆಫೀಸಿನಲ್ಲಿ ಸಿಕ್ಕಾಗ ಪ್ರಕಾಶ್, ಡಿಪಾರ್ಟ್‌ಮೆಂಟ್ ಕಡೆಗೆ ಬನ್ನಿ ಎಂದು ಹೇಳಿ ಹೋದರು. ನಾನು ಕ್ಲಾಸು ಮುಗಿಸಿ ವಿಶ್ವ ಚೇತನದಲ್ಲಿದ್ದ ಅವರ ಕೋಣೆಗೆ ಹೋದೆ. ಪ್ರೀತಿಯಿಂದ ಬರಮಾಡಿ ಕೊಂಡರು. ಅಲ್ಲಿ ತುಂಬಾ ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದರು. ನಾನು ಹೋದಾಗ ತುಂಬಾ ಆತ್ಮೀಯತೆಯಿಂದ ಕಂಡು ಪ್ರಕಾಶ್, ನೀವು 2 ಪ್ರಶಸ್ತಿಗಳಿಗೆ ಭಾಜನರಾಗಿದ್ದೀರಿ. ಬಂಡಾಯ ಸಂಘಟನೆಯ ರಾಜ್ಯ ಮಟ್ಟದ ಪ್ರಶಸ್ತಿ, ಇದನ್ನು ಈಗಾಗಲೇ ಪ್ರದಾನ ಮಾಡಿದ್ದೇವೆ, ಜತೆಗೆ ಸಂಕ್ರಮಣ ಕಾವ್ಯ ಪ್ರಶಸ್ತಿಯಲ್ಲಿ ನಿಮ್ಮ ನಸುಕಿನ ಚಿತ್ರಗಳು ಕವಿತೆಗೆ ಪ್ರಶಸ್ತಿ ಬಂದಿದೆ. ಕಾರಣ ಇಲ್ಲಿ ಒಳ್ಳೊಳ್ಳೆಯ ಪುಸ್ತಕಗಳಿವೆ, ಇದರಲ್ಲಿ ನಿಮಗೆ ಯಾವ ಪುಸ್ತಕ ಬೇಕೊ ಒಟ್ಟು ಐದು ನೂರು ಮೊತ್ತ ಆಗುವಷ್ಟು ಪುಸ್ತಕಗಳನ್ನು ತೆಗೆದುಕೊಳ್ಳಿ, ಎಂದರು.
ಕಾವ್ಯ, ಕಥೆ. ವೈಚಾರಿಕ ಚಿಂತನೆ, ಈ ಬಗೆಯಲ್ಲಿದ್ದ ಸುಮಾರು ಹತ್ತರಷ್ಟು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡಾಗ ಅವೆಲ್ಲವನ್ನೂ ತುಂಬಾ ಪ್ರೀತಿಯಿಂದ ಕೊಟ್ಟು ಬೆನ್ನು ತಟ್ಟಿದರು. ಅವರು ಅಂದು ಕೊಟ್ಟ ಪುಸ್ತಕಗಳು, ಅವುಗಳ ಓದಿನ ಜ್ಞಾನ ಇಂದೂ ನನ್ನೊಂದಿಗೆ ಇವೆ, ಜತೆಗೆ ಅವರ ಪುಸ್ತಕ ಪ್ರೀತಿಯ ಅಮೂಲ್ಯವಾದ ನೆನಪೂ ಮರೆಯಲಾದೀತೇ? ಪ್ರಖರ ಚಿಂತನೆಗೆ ನಾಡಿನ ಬರಹಗಾರರನ್ನು ಸಜ್ಜುಗೊಳಿಸಿದ ಪ್ರೊ.ಚಂಪಾ ಗುರುಗಳಿಗೆ 83ನೇ ಜನುಮ ದಿನಕೆ ಶುಭ ಹಾರೈಕೆಗಳು.