Sunday, 15th December 2024

ಹಸುರು ಹೊದ್ದ ಚಂದ್ರನ ಸ್ನಾನಗೃಹ ’ಚಂದ್ರತಾಲ್’

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehendale100@gmail.com

ಹಿಮಾಚಲ ಕಣಿವೆಯಲ್ಲಿ ಚಾರಣಿಗರು ಮತ್ತು ಪ್ರವಾಸಿಗರ ಪ್ರೀತಿಯ ಪ್ರದೇಶ ಚಂದ್ರತಾಲ್. ತಾಣ ಯಾವತ್ತೂ ಖಾಲಿಯಾದದ್ದಿಲ್ಲ. ತಿಳಿನೀರ ಸೊಬಗು, ನೀಲಿಹಸಿರ ಮೇಲ್ಮೈ, ಪಕ್ಕದಲ್ಲೇ ಎದ್ದು ನಿಂತ ಅಗಾಧ ಪರ್ವತ ಶ್ರೇಣಿ ನಿಜಕ್ಕೂ ಚಂದ್ರನ ಖಾಸಗಿ ಸೊತ್ತು.

ತೀರ ಶುದ್ಧಾನು ಶುದ್ಧ ನೀರಿದ್ದರೂ ಇದನ್ನು ಕುಡಿಯುವಂತಿಲ್ಲ, ಕೈ ಹಾಕಿ ಕಲಕುವಂತಿಲ್ಲ, ನೀರಿಗಿಳಿಯುವುದು ಮೊದಲೇ ನಿಷಿದ್ಧ. ಕಾರಣ ಹುಣ್ಣಿಮೆಗೊಮ್ಮೆ ಇಲ್ಲಿ ಚಂದ್ರನೇ ಮೀಯಲು ಬರುತ್ತಾನೆ ಮತ್ತು ಜಗತ್ತಿನ ಅತ್ಯಂತ ಎತ್ತರದ ಸಿಹಿನೀರ ಕೊಳ ಇದು. ಇಲ್ಲಿಗೆ ಪ್ಲಾಸ್ಟಿಕ್ಕು, ಬ್ಯಾಗು, ಪರ್ಸು, ಯಾವುದೇ ಪದಾರ್ಥ,
ತಿಂಡಿ-ತಿನಿಸು ಇತ್ಯಾದಿ ಏನನ್ನೂ ಒಯ್ಯುವಂತಿಲ್ಲ. ನಿಮ್ಮ ವಾಹನ ಕೂಡ ಎರಡು ಕಿ.ಮೀ. ದೂರವೇ ಬಿಟ್ಟು ಕಾಲ್ನಡಿಗೆಯಲ್ಲೆ ಬೆಟ್ಟವೇರಬೇಕು ಮತ್ತು ತಲುಪ ಬೇಕು. ಪೌರಾಣಿಕ ಪ್ರಸಿದ್ಧ ಹಿರಿಯ ಪಾಂಡವ ಯುಽಷ್ಠಿರನನ್ನು ಇಂದ್ರ ಸ್ವರ್ಗಕ್ಕೆ ಕರೆದೊಯ್ದದ್ದು ಇದೇ ಸರೋವರದ ದಂಡೆ ಮೇಲಂತೆ.

ಉಳಿದ ಜನ ತಲುಪಲಾಗದ ಈ ಎತ್ತರದಲ್ಲಿ ಸ್ವರ್ಗಾಧಿಪತಿ ಬೀಡುಬಿಟ್ಟು ಕಾಯ್ದಿದ್ದನಂತೆ. ಕೈಯಿಟ್ಟರೆ ಶಾಕ್ ಹೊಡೆದಂತೆ ಅನುಭವವಾಗುವಷ್ಟು ತಣ್ಣ ಗಿನ ನೀರ ಆಳದವರೆಗಿನ ಕಲ್ಲುಗಳೆಲ್ಲ ಕಾಣುವಷ್ಟು ಪಾರ ದರ್ಶಕ ಸರೋವರ ಚಂದ್ರಭಾಗಾ ನದಿಗೆ ಸೇರಿದ್ದರಿಂದ ‘ಚಂದ್ರತಾಲ್..’ ಎಂದೇ ಪ್ರಚಲಿತ. ಇಲ್ಲಿ ಹುಟ್ಟಿ ಮುಂದೆ ಬೇರೆ ಬೇರೆ ಕವಲುಗಳನ್ನು ಸೇರಿಸಿ ಅಗಾಧವಾದ ನದಿಯಾಗಿ ಹರಿಯುವ ಚಂದ್ರಭಾಗಾ ಅಲ್ಲಿಂದ ಚಿನಾಬ್ ಸೇರು ವುದರೊಂದಿಗೆ ಪಾಕಿಸ್ತಾನಕ್ಕೆ ಪ್ರವೇಶಿಸುತ್ತದೆ. ಚಾರಣ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣವಾದರೆ ಸಾಹಸಿಗರಿಗೆ ಮತ್ತು ಪ್ರವಾಸಿಗರಿಗೆ ಚೆಂದದ ಫೋಟೊಗ್ರಫಿ ಪಾಯಿಂಟು. ನಿಂತಲ್ಲಿ ಕೂತಲ್ಲಿ ಸೆಲ್ಫಿ..

ಮೌಲ್ಕೀಲಾ ಮತ್ತು ಚಂದ್ರಭಾಗಾ ಪರ್ವತ ಪ್ರದೇಶಗಳ ಕುತ್ತಿಗೆಯ ಭಾಗದಲ್ಲಿ ಉದ್ಭವಿಸಿರುವ ಚಂದ್ರತಾಲ್, ಅದರ ಪಕ್ಕದಲ್ಲೇ ಇರುವ ಅನಾಮತ್ತು ಹದಿನೆಂಟು ಸಾವಿರ ಅಡಿಯ ಪರ್ವತ ತುದಿಗಳು ನೇರವಾಗಿ ನಿಂತಿದ್ದು ಚಾರಣಿಗರಿಗೆ ತಮ್ಮ ಎತ್ತರ ಅಳೆಯುವಂತೆ ಸವಾಲೆಸೆಯುತ್ತವೆ. ಮೇಲಕ್ಕೆ ಹೋದಷ್ಟೂ ಸರೋವರದ ಅದ್ಭುತ ದೃಶ್ಯಕಾವ್ಯ ಎದ್ದು ಕಾಣುತ್ತದೆ. ಅದಕ್ಕಾಗೇ ಇಲ್ಲಿನ ಸುತ್ತಮುತ್ತಲ ಎಲ್ಲ ಪರ್ವತಕ್ಕೂ ಚಾರಣಿಗರು ಲಗ್ಗೆ ಇಡಲು ಯತ್ನಿಸುತ್ತಾರೆ. ತೀರ 14300 ಅಡಿ ಎತ್ತರ ದಲ್ಲಿರುವ ಚಂದ್ರತಾಲ್, ಇವತ್ತು ಜಗತ್ತಿನ ಕೆಲವೇ ಕೆಲವು ಎತ್ತರದ ಸಿಹಿನೀರ ಸರೋವರಗಳಲ್ಲಿ ಒಂದು.

ಹಿಮಾಚಲ ಪ್ರದೇಶದ ಲಾಹುಲ್-ಸ್ಪಿಟಿ ಕಣಿವೆಯ ಅಂಚಿನ ಸೆರಗಿನಲ್ಲಿರುವ ಚಂದ್ರತಾಲ್ ಸ್ಪಿಟಿ ಕಣಿವೆ ವ್ಯಾಪ್ತಿಗೆ ಸೇರಿದ ಪ್ರದೇಶ. ಅಸಕ್ತಿದಾಯಕ ಎಂದರೆ ಜಗತ್ತಿನ ಅತಿ ಎತ್ತರದ ಕೆಲವೇ ವಾಹನ ಸಂಚಾರಿ ರಸ್ತೆಗಳಲ್ಲಿ ಒಂದಾದ ‘ಬಾರಲಾಚಾ ಲಾ’ ಈ ಭಾಗದ ಚಾರಣದ ಪ್ರಮುಖ ಆಕರ್ಷಣೆ. ಕುಲು ಮತ್ತು ಮನಾಲಿ ಹಾಗು ಲಢಾಕ್ ಮತ್ತು ಟಿಬೇಟ್‌ಗಳ ನಟ್ಟ ನಡುವೆ ಪವಡಿಸಿರುವ ಚಂದ್ರತಾಲ್ ತ್ರಿವೇಣಿ ಸಂಗಮ. ಇಲ್ಲಿ ತಂಗು ವವರೂ ಅಧಿಕ. ಇತಿಹಾಸದ ಕಾಲದಲ್ಲಿ ಟಿಬೇಟಿಯನ್ನರು ಮನಾಲಿ ತಲುಪುವ ಮುನ್ನ ಇಲ್ಲಿ ತಂಗುತ್ತಿದ್ದುದೂ ಅಲ್ಲದೆ ಇಲ್ಲಿಂದ ಮುಂದೆ ವ್ಯಾಪಾರ ನಿಮಿತ್ತ ತಂಡಗಳು ನಿಯೋಜನೆಗೊಂಡು ಹೊರಡು ತ್ತಿದ್ದವು. ಚಂದ್ರತಾಲ್ ತಲುಪುವವರೆಗಿನ ಚಾರಣವೇ ಅದ್ಭುತ ನಿಸರ್ಗಕ್ಕೆ ಸಾಕ್ಷಿಯಾಗಿರುತ್ತದೆ.

ಒಂದೆಡೆ ನಸು ಕಂದು ಬೆಟ್ಟಗಳ ಪರ್ವತ ಶ್ರೇಣಿ ಇದ್ದರೆ ಅದರ ವಿರುದ್ಧ ದಿಕ್ಕಿನಲ್ಲಿ ಅಷ್ಟೇ ಎತ್ತರಕ್ಕೆ ಹಸಿರು ಹೊದ್ದ ನಿಂತ ಶಿಖರಾಗ್ರಗಳು ಎಣೆ ಇಲ್ಲದ ಮುದ ನೀಡುತ್ತವೆ. ಮನಾಲಿಯಿಂದ ಹೊರಡ ಬಯಸುವವರು ರೋಹತಾಂಗ್ ಮಾರ್ಗವಾಗಿ ‘ಗ್ರಾಂ-’ ಜಂಕ್ಷನ್ ತಲುಪಿಕೊಳ್ಳಬೇಕು. ಇಲ್ಲಿಗೆ ತಲುಪುವ ಹೊತ್ತಿಗೆ ಒಂದಿಡೀ ದಿನ ಕಳೆದು ಹೋಗುತ್ತದೆ. ಗ್ರಾಂಫುವಿನಿಂದ ಬಟಾಲ್‌ವರೆಗೆ ಮುಖ್ಯ ರಸ್ತೆ ಯಿದ್ದು, ಎಡಕ್ಕೆ ಕಚ್ಚಾ ರಸ್ತೆಯಲ್ಲಿ ತಿರುಗಿ ಸರಿ ಸುಮಾರು 15 ಕಿ.ಮೀ. ದೂರ ಕ್ರಮಿಸಿದರೆ ದಕ್ಕುವುದೇ ಚಂದ್ರತಾಲ್.

ಅಕ್ಕ ಪಕ್ಕದಲ್ಲಿ ವಾಸ್ತವ್ಯಕ್ಕೆ ಟೆಂಟ್‌ಗಳ ವಸತಿ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನವರು ಇದರ ದಂಡೆಯಲ್ಲಿ ಅಂದರೆ ಈ ಪರಿಸರದಲ್ಲಿ ಹತ್ತಿರಕ್ಕೆ ಮಾಡಲಾಗಿರುವ ವ್ಯವಸ್ಥೆಯಲ್ಲಿ ಒಂದು ದಿನ ಕಳೆಯುತ್ತಾರೆ. ಇದರಿಂದಾಗಿ ಚಂದ್ರ ತಾಲ್ ಸರೋವರ್ ಪ್ರದಕ್ಷಿಣೆ ಸೇರಿದಂತೆ ಅಕ್ಕ ಪಕ್ಕದಲ್ಲೂ ಹಲವು ಪರ್ವತ ತುದಿಗಳ ಚಾರಣ ಮಾಡಲು ಇದು ಅನುಕೂಲ ಕೂಡ. ರಾತ್ರಿಯ ಹೊತ್ತಿನಲ್ಲಿ ಅದರಲ್ಲೂ ನಕ್ಷತ್ರ ವೀಕ್ಷಕರಿಗೆ ಇದೊಂದು ಹೇಳಿ ಮಾಡಿಸಿದ ಸ್ಥಳ. ಬಹುಶಃ ಹಳೆಯ ಕಾಲಕ್ಕೆ ಮುಗಿದು ಹೋದ ನಕ್ಷತ್ರ ವೀಕ್ಷಣೆಯ ವೈಭವವನ್ನು ಇಲ್ಲಿ ಮತ್ತೆ ಮೈದುಂಬಿಕೊಳ್ಳಬಹುದು. ಕೃತಕ ಬೆಳಕಿನ ಹಾವಳಿ ಇಲ್ಲದ ಕಾರಣ ಆಗಸದ ತುಂಬ ನಕ್ಷತ್ರಗಳ ಸರಮಾಲೆ ಬರಿಗಣ್ಣಿಗೆ ಕಾಣುವಷ್ಟು ಸ್ವಚ್ಛ ಸ್ವಚ್ಛ.

ಒಂದು ರೀತಿಯಲ್ಲಿ ಈ ಮಾರ್ಗದ ಕೇಂದ್ರ ಭಾಗವನ್ನು ಆಕ್ರಮಿಸಿದಂತಿರುವ ಚಂದ್ರತಾಲ್, ಕೆಳಗಿನಿಂದ ಕ್ರಮಿಸಬಹುದಾದರೆ ಶಿಮ್ಲಾ ಕಡೆಯಿಂದಲೂ ತಲುಪ ಬಹುದಾಗಿದ್ದು ಚೈಲಾ, ರಾಮಪುರ್, ಕಾಝಾ ಮಾರ್ಗವಾಗಿ ಮೊದಲು ‘ಸ್ಪಿಟಿ’ಯನ್ನು ತಲುಪಿಕೊಳ್ಳಬೇಕು. ಈ ದಾರಿಯ ರಾಮಪುರ್ ಮತ್ತು ಕಾಝಾ ಮಾರ್ಗದ ಮಧ್ಯದಲ್ಲಿನ ಪ್ರಪಾತದ ಅಂಚಿನ ರಸ್ತೆ ರಮಣೀಯ ಸೌಂದರ್ಯ ಆಸ್ವಾದಿಸಲೇ ಒಂದಿನ ಪೂರ್ತಿ ಬೇಕು. ಹಾಗಾಗಿ ಬೆಳಗ್ಗೆ ಎದ್ದು ಸಂಜೆ ಹೊತ್ತಿಗೆ ಚಂದ್ರ ತಾಲ್ ಸರೋವರ ತಲುಪಿಬಿಡುತ್ತೇನೆ ಎನ್ನುವ ಯೋಜನೆ ಬೇಡವೇ ಬೇಡ. ಇದರ ಜತೆಗೆ ಕ್ರಮಿಸಬೇಕಾದ ರುದ್ರ ರಮಣೀಯ ‘ಕುಂಜುಮ್ ಪಾಸ್’ ಮೂಲಕ ಬಟಾಲ್ ತಲುಪಿ ಬಲಕ್ಕೆ ತಿರುಗಿಕೊಂಡರೆ ಸೀದಾ ಚಂದ್ರತಾಲ್. ಇವೆರಡನ್ನೂ ಹೊರತು ಪಡಿಸಿ ರೋಚಕ ಡ್ರೈವಿಂಗ್ ಅನುಭವ ಕೊಡುವ ರಸ್ತೆಯೊಂದಿದ್ದು ಎಸ್‌ಯುವಿಗಳ ಮೂಲಕ ಹೋಗುವವರು ಹಾಗೂ ಚಾರಣಪಥ ಸಾಹಸಿಗರು ಇಲ್ಲಿ ಸಂಚರಿಸುತ್ತಾರೆ.

ಇತ್ತೀಚೆಗೆ ಬುಲೆಟ್ ರೈಡರ್ಸ್‌ಗಳ ತಂಡಗಳು ಈ ದಾರಿಯನ್ನು ಆಯ್ದುಕೊಳ್ಳುತ್ತಿದ್ದು ಬೆಳಗಾಗುವ ಮೊದಲೇ ರಸ್ತೆಗಿಳಿದು ಆರಂಭಿಸುವ ರೈಡು ದೂರದ ಇನ್ನೊಂದು ಪರ್ವತದ ತುದಿಯಿಂದ ನೋಡುವಾಗ ಚಲಚಿತ್ರಗಳ ದೃಶ್ಯಗಳು ನೆನಪಾದರೆ ಅಚ್ಚರಿಯಿಲ್ಲ. ಲಢಾಕ್‌ನ ಕಡೆಯಿಂದ ಬರುವಾಗ ‘ಸರ್ಚು’ ಎನ್ನುವ
ಅಗಾಧ ಸಮಪಾತಳಿಯ ಸರಹದ್ದು ದಾಟುತ್ತೇವಲ್ಲ. ಅಲ್ಲಿಂದ ಮುಂದೆ ಹತ್ತಿಕೊಳ್ಳುವುದೇ ‘ಬಾರಲಾಚಾ ಲಾ’. ಅತಿ ಎತ್ತರದ ಮತ್ತು ದೊಡ್ಡ ಪರ್ವತ ಪಾತಳಿಯ ಸರಣಿ ತಿರುವುಗಳ ಪ್ರದೇಶ ಇದು. ಇಲ್ಲಿಂದ ಮಧ್ಯದಲ್ಲೇ ಎಡಕ್ಕೆ ಚಲಿಸುವ ಚಿಕ್ಕ ರಸ್ತೆಯೊಂದು ‘ಟೊಪ್ಕೊ ಗೋಂಗ್ಮಾ’ ಮತ್ತು ‘ಟೋಪ್ಕೊ ಯೋಗ್ಮಾ’ ಎನ್ನುವ ಎರಡು ಬೌದ್ಧರ ಸ್ಥಳೀಯ ಪ್ರದೇಶಗಳ ಮೂಲಕ ನೇರ ಚಂದ್ರತಾಲ್ ತಲುಪಿಸುತ್ತದೆ.

ಆದರೆ, ಇದನ್ನು ಸಾಹಸಿಗಳು ಮತ್ತು ಮೋಟಾರ್ ರೇಸ್‌ನವರು ಬಳಸುತ್ತಿದ್ದು ಕೆಲವೊಮ್ಮೆ ಚಾರಣಿಗರು, ಸೈಕಲ್ ಸವಾರರೂ ಕೂಡ ಇದನ್ನೆ ಅನುಸರಿಸುತ್ತಾರೆ. ಅಪ್ಪಟ ಚಾರಣ ಮಾಡುವವರು ಮನಾಲಿಯಿಂದ ಹೊರಟು 6 ತಾಸು ರಸ್ತೆ ಪಯಣ ಬೇಡುವ ಜಿಸ್ಪಾ (12 ಸಾರ ಅಡಿ ಎತ್ತರ) ಪ್ರದೇಶ ತಲುಪಿಕೊಳ್ಳುತ್ತಾರೆ. ಇಲ್ಲಿ ಮೊದಲ ಮತ್ತು ದೇಹ ಸುಸ್ಥಿರಗೊಳಿಸಿಕೊಳ್ಳಲು (ಅಕ್ಲಮಟೈಸ್) ಅನುಕೂಲವಾಗಲು ತಂಗಲೇಬೇಕಾದ ಸ್ಥಳ. 140ಕ್ಕೂ ಹೆಚ್ಚು ಕಿ.ಮೀ. ದೂರ ಕ್ರಮಿಸಲು ರೋಹತಾಂಗ್ ಪಾಸ್ ಮೂಲಕ 8 ತಾಸಿನ ದೀರ್ಘ ಪಯಣ ಅವಶ್ಯ.

ಒಟ್ಟಾರೆ ಪ್ರಸ್ತುತ ಹಿಮಾಚಲ ಪ್ರದೇಶ ಕಣಿವೆಯಲ್ಲಿ ಅತ್ಯಂತ ಚಾಲ್ತಿಯಲ್ಲಿರುವ ಚಾರಣ ಮತ್ತು ಪ್ರವಾಸಿಗರ ಪ್ರೀತಿಯ ಪ್ರದೇಶವೆಂದರೆ ಚಂದ್ರತಾಲ್ ಎನ್ನು ವಂತಾಗಿದ್ದು, ಹೆಚ್ಚಿನ ಟೂರ್ ಮತ್ತು ಟ್ರಾವೆಲ್ಸ್‌ನವರು ಕೂಡ ಪ್ರವಾಸಿಗರ, ಚಾರಣಿಗರ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಡಲು ತುಂಬ ಪ್ರಶಸ್ತವೂ ಆಗಿರುವುದರಿಂದ ಚಂದ್ರತಾಲ್ ಖಾಲಿಯಾದದ್ದೇ ಇಲ್ಲ. ಜತೆಗೆ ಅದರ ತಿಳಿನೀರ ಸೊಬಗು, ಆ ನೀಲಿಹಸಿರ ಮೇಲ್ಮೈ, ಪಕ್ಕದಲ್ಲೇ ಎದ್ದು ನಿಂತ ಅಗಾಧ ಪರ್ವತ
ಶ್ರೇಣಿಯ ಬುಡದಲ್ಲಿ ಚೆಂದಗೆ ಹಾರುತ್ತ ಅಂದ ಹೆಚ್ಚಿಸುವ ಬೌದ್ಧ ಭಿಕ್ಕುಗಳ ಮಂತ್ರದ ಪತಾಕೆಗಳ ಮಧ್ಯೆ ಚಂದ್ರತಾಲ್ ನಿಜಕೂ ಚಂದ್ರನ ಖಾಸಗಿ ಸೊತ್ತು ಎನ್ನಿಸದಿರುವುದಿಲ್ಲ.

ಅತ್ಯಂತ ಖುಷಿಯ ಮತ್ತು ಎಲ್ಲರೂ ಅನುಸರಿಸಬೇಕಾದ ವಿಷಯವೆಂದರೆ ಸುಮಾರು 2-3 ಕಿ.ಮೀ. ದೂರಕ್ಕೆ ನಮ್ಮೆಲ್ಲ ಲಗೇಜು ಕೆಡವಿಕೊಂಡು ಕಳುಸುವ ಮೂಲಕ ಚಂದ್ರತಾಲ್ ಪ್ಲಾಸ್ಟಿಕ್ ಹಾಗೂ ಕಚಡಾ ಮುಕ್ತ ಮಾಡುವ ಸ್ಥಳೀಯರ ಯೋಜನೆ ಅತ್ಯಂತ ಯಶಸ್ವಿ ಯೋಜನೆ. ಪಾರ್ಕಿಂಗ್ ನೆಪದಲ್ಲಿ ದಾರಿಯನ್ನು ಕೊನೆಗೊಳಿಸಲಾದ ಭಾಗದಲ್ಲಿ ಕಟ್ಟು ನಿಟ್ಟಾಗಿ ಮೊಬೈಲ್ ಮತ್ತು ಕ್ಯಾಮೆರಾ ಹೊರತುಪಡಿಸಿ ಇನ್ನಾವುದೇ ವಸ್ತುಗಳನ್ನು ಒಯ್ಯಲು ಪರವಾನಗಿ ಇಲ್ಲದಂತೆ
ಮಾಡಿದ್ದು, ಬೆಳಗಿನಿಂದ ಸಂಜೆಯವರೆಗೂ ಗಡಿ ಗುರುತಿನಲ್ಲಿ ಕಾವಲು ಕಾಯುತ್ತಾರೆ. ಇದರಿಂದ ಒಂದೇ ಒಂದು ಚಾಕೊಲೇಟ್, ಪ್ಲಾಸ್ಟಿಕ್ ಬಾಟಲ್ ಇತ್ಯಾದಿ ಕವರ್‌ಗಳ ಸಂತೆಯಿಂದ ಚಂದ್ರ ತಾಲ್ ಮುಕ್ತ ಮುಕ್ತ. ಆ ಮಟ್ಟಿಗೆ ಇದು ಮಾತ್ರ ಜಾಗತಿಕವಾಗಿ ಅನುಕರಣೀಯ ನಡೆ. ಒಮ್ಮೆ ಚಂದ್ರನ ಆವಾಸಕ್ಕೆ ಕಾಲಿಟ್ಟು ಬಿಡಿ. ಬದುಕಿನ ಬಣ್ಣ ಬದಲಾಗುವುದರಲ್ಲಿ ಸಂಶಯವಿಲ್ಲ.