Sunday, 15th December 2024

ಬದಲಾವಣೆಯ ಯುಗದಲ್ಲೂ ಅವರು ಅಂಥವರಲ್ಲ ಎಂಬ ಬದಲಾಗದ ಬದಲಾದ ನಂಬಿಕೆಯ ನಡುವೆ…

ಯಶೋ ಬೆಳಗು

ಯಶೋಮತಿ ಬೆಳಗೆರೆ

ಸಾವಿರ ಸಾವಿರ ಮೋಸ ಹೋದ ಕತೆಗಳನ್ನು ಕೇಳಿದ್ದರೂ ಸಹ ನಾವು-ನೀವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಮೋಸ ಹೋಗಿರುತ್ತೇವೆ. ಕಾರಣ ಅವರು ಅಂಥವರಲ್ಲ ಬಿಡು ಅನ್ನುವ ಅದೇ ಕುರುಡು ನಂಬಿಕೆ.ಯಾರೊಬ್ಬರೂ ತಾವು ಇಂಥವರು ಎಂಬ ಮೊಹರನ್ನು ಹಣೆಯ ಮೇಲೆ ಮುದ್ರಿಸಿಕೊಂಡು ಬರುವುದಿಲ್ಲ. ಅಥವಾ ನೋಡಿದ ಕೂಡಲೆ ಒಳ್ಳೆಯವರು ಅಥವಾ ಕೆಟ್ಟವರು ಎಂದು ಹೇಳಲೂ ಬರುವುದಿಲ್ಲ.

ಅಮ್ಮಾ, ನೋಡು ನಮ್ಮ ಮೋದಿ ಜೀನೇ ಹೇಳ್ತಿದ್ದಾರೆ… India should tap the huge potential market in digital gaming…ಅಂತ. So, to
fulfill that dream u must get me the GAMING PC ಅಂತ ಮಗ ಒಂದೇ ಸಮನೆ ಹಟ ಮಾಡೋಕೆ ಶುರು ಮಾಡಿದಾಗ, ಮನದಲ್ಲೇ ಮಗನ ಚಾಣಾಕ್ಷತೆಯನ್ನು ಮೆಚ್ಚಿದರೂ, ಗೇಮಿಂಗ್ PC ಯಾಕೆ? Normal PC ಯಲ್ಲೇ ಆಡಿಕೋ ಸಾಕು.

ಮೋದಿ ಹೇಳಿರೋದು encourage digital gaming ಅಂತ ಅಷ್ಟೇ. ಗೇಮಿಂಗ್ PC ಬಗ್ಗೆ ಏನೂ ಹೇಳಿಲ್ಲ ಎಂದು ನಟಿಸುತ್ತಾ, ಸುಮ್ಮನೆ ದುಡ್ಡು ಹಾಳು ಮಾಡಬೇಡ ಎಂದು ಬೈದರೂ, ಅದಕ್ಕಾಗಿ ಪ್ರತೀ ತಿಂಗಳು ಅವನಿಗೆ ತಿಳಿಯದಂತೆ ಒಂದಷ್ಟು ಹಣ ಎತ್ತಿಡುತ್ತಾ ಅವನ birthdayಗೆ surprise gif ಕೊಡೋಣ ಎಂದುಕೊಂಡಿರುವ ಹೊತ್ತಿನಲ್ಲೇ ನಿಮಗೊಂದು ಫೋನ್ ಕಾಲ್ ಬರುತ್ತದೆ. ಇದ್ದಬದ್ದ ಹಣವೆಲ್ಲ ಹಾಕಿ ಪ್ಲೇ ಹೋಮ್ ಶುರು ಮಾಡಿದೆ. ನೋಡಿದರೆ ಕರೋನ ಬಂದು ಮಕ್ಕಳೇ ಬರದಂತಾಗಿ ಹೋಗಿ ಬಹಳ ತೊಂದರೆಯಲ್ಲಿದೀನಿ.

ದೊಡ್ಡ ಮಗಳಿಗೆ ಇನ್ನೂ ಸ್ಕೂಲ್ ಫೀಸು ಕಟ್ಟಿಲ್ಲ. ಶಾಲೆಯಿಂದ ಒಂದೇ ಸಮನೆ ನೋಟಿಸ್ ಕಳಿಸ್ತಿದ್ದಾರೆ. ಎರಡನೇ ಮಗುವಿನ ಹಾಲಿಗೂ ದುಡ್ಡಿಲ್ಲ, ಅಂತೆಲ್ಲ ಹೇಳಿ ಒಂದಷ್ಟು ಹಣ ಸಾಲವಾಗಿ ಕೇಳುತ್ತಾರೆ. ನೀವು ಬಹಳ ಮೃದು ಮನಸ್ಸಿನವರು. ಅಯ್ಯೋ ಪಾಪ ಮಗುವಿಗೆ ಹಾಲಿಗೂ ಕಷ್ಟವಂತೆ ಅನ್ನಿಸಿದ ಕೂಡಲೇ ನಿಮ್ಮ ಮಗನಿಗಾಗಿ ಕೂಡಿಟ್ಟ ಹಣವನ್ನು ಎತ್ತಿಕೊಟ್ಟುಬಿಡುತ್ತೀರಿ. ತಿಂಗಳು ಕಳೆದು ವರ್ಷಗಳಾದರೂ ಆ ಹಣ ನಿಮಗೆ ಮರಳಿ ಬರೋದೇ ಇಲ್ಲ. ಫೋನು ಮಾಡಿದರೆ ರಿಸೀವ್ ಮಾಡಲ್ಲ. ಮೆಸೇಜಿಗೆ ಉತ್ತರ ಕೊಡಲ್ಲ. ಮೊಬೈಲು ರಿಪೇರಿಗೆ ಹೋಗಿತ್ತು ಅಂತ ಕಣ್ಣೊರೆಸುವಂತೆ ಯಾವಾಗಲೋ ಒಂದು ಉತ್ತರ ಬಂದು ಬಿದ್ದಿರುತ್ತೆ ಮೆಸೇಜ್ ಬಾಕ್ಸಲ್ಲಿ. ಹೋಗ್ಲಿಬಿಡು. ಸಮಯ ಎಲ್ಲರಿಗೂ ಒಂದೇ ಸಮನೆ ಇರೋದಿಲ್ಲ ಅಂತ ಮತ್ತೆ ಸಮಾಧಾನ ಮಾಡಿಕೊಳ್ಳುತ್ತೀರಿ. ಆದರೆ ಕೆಲವು ತಿಂಗಳ ನಂತರ ಅವರು ಭರ್ಜರಿಯಾಗಿ ಹೊಸ ಆಫೀಸು ಮಾಡಿಕೊಂಡು ಕಾರಿನಲ್ಲಿ ಓಡಾಡು ತ್ತಾರೆ.

ಹಬ್ಬಗಳೆಲ್ಲ ಬಹಳ ವೈಭವದಿಂದಲೇ ಆಚರಿಸುತ್ತ, ಮದುವೆ, ಪಾರ್ಟಿ ಅಂತ ಆಭರಣ ಹೇರಿಕೊಂಡು ನಮ್ಮ ಕಣ್ಣೆದುರೇ ನಡೆದು ಹೋದರೂ ನಮ್ಮನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಒಂಥರಾ ನಮಗೇ ಅಪರಾಧಿ ಭಾವ ಮೂಡುವಂತೆ ಮಾಡಿಬಿಡುತ್ತಾರೆ. ಅವರ ಮರ್ಯಾದೆ ಕಳೆಯಬಾರದು ಎಂದು ನಾವು ಅವರನ್ನು ರಕ್ಷಿಸಲು ವಿಷಯವನ್ನು ಗೌಪ್ಯವಾಗಿಡಲು ಹೋಗಿ ನಾವೇ ಸರಿಯಾಗಿ ಹಳ್ಳಕ್ಕೆ ಬಿದ್ದಿರುತ್ತೇವೆ. ಎದುರು ನಿಲ್ಲಿಸಿ ಕೇಳಿದರೆ ಎಲ್ಲರ ಬಳಿ ನಮ್ಮ ಮೇಲೆ ಇಲ್ಲಸಲ್ಲದ ಮಾತು ಗಳನ್ನು ಹೇಳಿ ಕೆಟ್ಟವರನ್ನಾಗಿ ನಿರೂಪಿಸಿಬಿಡುತ್ತಾರೆ.

ಹಣವನ್ನು ಕೊಟ್ಟಿದ್ದೂ ಅಲ್ಲದೆ ಎಲ್ಲರ ದೃಷ್ಟಿಯಲ್ಲಿ ಕೆಟ್ಟವರಾಗಿ ನಿಲ್ಲುವ ಪ್ರಸಂಗ ಎದುರಾದರೆ ಸಿಟ್ಟು ಬರದೇ ಇರುತ್ತದಾ? ಅದೇ ಸಿಟ್ಟಿನಲ್ಲಿ ಒಂದೆರಡು ಮಾತಾಡಿ ದರೆ ಮುಗಿಯಿತು. ಇರುವ ಸಂಬಂಧವೂ ಮುರಿದು ಬೀಳುತ್ತದೆ. ಇತ್ತ ಮಗನೂ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾನೆ. ಉಗಿಯಲೂ ಆಗದೆ, ನುಂಗಲೂ ಆಗದೆ ಬಾಯಲ್ಲಿರುವ ಬಿಸಿತುಪ್ಪದಂತಾಗಿರುತ್ತದೆ ನಿಮ್ಮ ಪರಿಸ್ಥಿತಿ. ದುಡ್ಡು, ಮರ್ಯಾದೆ, ಸಂಬಂಧ ಎಲ್ಲವನ್ನೂ ಕಳೆದುಕೊಂಡದ್ದು ಸಾಲದೆಂಬಂತೆ ಚಿಂತೆಯಿಂದ ಬಿಪಿ, ಬ್ಲಡ್ ಶುಗರ್ ಹೆಚ್ಚಾಗಿ ಆರೋಗ್ಯವನ್ನೂ ಕಳೆದುಕೊಂಡದ್ದು ಯಾಕೆ? ಮತ್ತು ಯಾರಿಗೋಸ್ಕರ? ಎಂದು ಯೋಚಿಸಿದಾಗ, ಅವರು ಅಂಥವರಲ್ಲ ಅನ್ನುವ ಕುರುಡು ನಂಬಿಕೆಯೇ ಇಷ್ಟಕ್ಕೆಲ್ಲ ಕಾರಣ ಎನ್ನುವುದು ತಿಳಿಯುತ್ತದೆ.

ಕೇಳುತ್ತಾ ಹೋದರೆ ಪ್ರತೀ ಮನೆಯಲ್ಲೂ ಇಂಥಾ ಅದೆಷ್ಟೋ ಘಟನೆಗಳು ಸದ್ದಿಲ್ಲದೇ ಸಮಾಧಿಯಾಗಿ ಹೋಗಿರುತ್ತದೆ. ಇದನ್ನೆಲ್ಲ ನೋಡಿಯೇ ಹುಟ್ಟಿರಬೇಕು ಕೊಟ್ಟೋನು ಕೋಡಂಗಿ ಇಸ್ಕಂಡೋನು ಈರಭದ್ರ ಅನ್ನುವ ಗಾದೆಮಾತು. ಇನ್ನು, ದಿನಗಳೆದಂತೆಲ್ಲ ನಮಗೆ ವಯಸ್ಸಾಗುವುದಕ್ಕಿಂತಲೂ ಹೆಚ್ಚಾಗಿ
ವಯಸ್ಸಾಗುತ್ತಿದೆ ಅನ್ನುವ ಫೀಲಿಂಗೇ ನಮ್ಮನ್ನು ಅರ್ಧ ಮುದುಕರನ್ನಾಗಿಸಿಬಿಡುತ್ತದೆ. ವಯಸ್ಸು ನಲವತ್ತರ ಅಂಚಿಗೆ ಬರುವಷ್ಟರಲ್ಲಾಗಲೇ ನಾಲ್ಕು ಹೆಜ್ಜೆ ನಡೆದರೆ ಏದುಸಿರು ಬಂದಂತಾಗುವ ಈ ದಿನಗಳಲ್ಲಿ ಅದೊಂದು ದಿನ, You look back at history, 40 was an old age at one time. Now people say that Life starts at 40. 60 is the new 40, But 80 forget it, its just a number if you want it to be….….ಅನ್ನುವ ಸಾಲುಗಳು ಕಣ್ಣಿಗೆ ಬಿದ್ದಾಗ, ಹೌದಲ್ಲ, ಈಗಿನ  generation ಮದುವೆ, ಮಕ್ಕಳು ಅನ್ನುವುದಕ್ಕಿಂತಲೂ ಹೆಚ್ಚಾಗಿ carrier oriented. ಹೀಗಾಗಿ ವಿದ್ಯಾಭ್ಯಾಸ ಮುಗಿಸಿ, ಕೆಲಸದಲ್ಲಿ ಸ್ಥಿರತೆ, ಪ್ರಮೋಷನ್ನು ಅಂತೆಲ್ಲ ಸಿಕ್ಕು, ದೇಶ-ವಿದೇಶಗಳೆಲ್ಲ ತಿರುಗಾಡಿ, ಚೆಂದದ ಒಡವೆ, ಕಾರು, ಮನೆ, ಕೊಂಡು ನಂತರ ಮದುವೆಯ ಬಗ್ಗೆ ಆಲೋಚಿಸು ವಷ್ಟರಲ್ಲಿ ವಯಸ್ಸು ಮೂವತ್ತು ದಾಟಿ ಹೋಗಿರುತ್ತದೆ.

ಉತ್ತಮ ವೈದ್ಯಕೀಯ ಸೌಲಭ್ಯದ ನೆರವಿನೊಂದಿಗೆ ಮಕ್ಕಳನ್ನೂ ಹಡೆದು ಇನ್ನೂ ಬಳುಕುವ ಸುಂದರಿಯರಂತೆ ಚೆಂದಗೆ ನಗುತ್ತಿರುವ ನಮ್ಮ ಕನ್ನಡದ ನೆಲದಲ್ಲಿ ಹುಟ್ಟಿ ಬಾಲಿವುಡ್ಡಿನಲ್ಲಿ ಮಿಂಚುತ್ತಿರುವ ಕರಾವಳಿಯ ಚೆಲುವೆಯರಾದ ಐಶ್ವರ್ಯ ರೈ ಬಚ್ಚನ್, ಹಾಗೂ ಶಿಲ್ಪಾ ಶೆಟ್ಟಿಯರಿಗಿಂತಲೂ ಸಾಕ್ಷಿ ಬೇಕಾ? ಹೀಗೆ ನಮ್ಮನ್ನು ನಾವು motivate ಮಾಡಿಕೊಳ್ಳುತ್ತಾ, ಯಾರಿಗೂ ಹೊರೆಯಾಗದೆ ಉತ್ತಮ ಆರೋಗ್ಯದಿಂದಿರುವುದು ಬಹಳ ಮುಖ್ಯ. ಅನಗತ್ಯ ಟೆನ್ಷನ್ನುಗಳಿಗೆ ಬ್ರೇಕು ಹಾಕಿ, ಬೆಳಗ್ಗೆ ಸೂರ್ಯ ಮೂಡುವುದಕ್ಕೂ ಮೊದಲೇ ಎದ್ದು, ಇನ್ನೂ ಅರೆಬರೆ ನಿದ್ರೆಯಲ್ಲಿರುವ ತಣ್ಣನೆಯ ಖಾಲಿ ಖಾಲಿ ಹೂಹಾಸಿನ ರಸ್ತೆಯಲ್ಲಿ ನಡೆಯುತ್ತಾ, ರಂಗೇರುವ ಬಾನಂಗಳ ದಿಟ್ಟಿಸುತ್ತಾ, ಹಕ್ಕಿಗಳ ಚಿಲಿಪಿಲಿಗಳ ನಡುವೆ ಬಿಚ್ಚಿಕೊಳ್ಳುವ ಬೆಳಗಿನ ಜಾವದ ನಡಿಗೆಯಿಂದ ಇಡೀ ದಿನ ಮನಸ್ಸು ಪ್ರಫುಲ್ಲವಾಗಿರುವಂತೆ ಮಾಡುತ್ತದೆ.

ಇಂಥ ಒಂದು ಶುಭ್ರ ಮುಂಜಾವಿನಲ್ಲಿ ಪರಿಚಯವಾದ ಪಾರಿಜಾತದಂತ ಸುಂದರ ಹುಡುಗಿ ಸುನೈನಾ. ಹೆಸರಿಗೆ ತಕ್ಕಂತೆ ಆಕರ್ಷಕ ಕಂಗಳ ಒಡತಿ. ಆದರೆ
ಅವತ್ಯಾಕೋ ಮನಸಿಲ್ಲದ ಮನಸಲ್ಲೇ ಭಾರದ ಹೆಜ್ಜೆಗಳನ್ನಿಡುತ್ತಿದ್ದ, ಅರೆಮನಸ್ಕಳಾಗಿ ತನ್ನದೇ ಆಲೋಚನೆಗಳಲ್ಲಿ ಮುಳುಗಿಹೋಗಿದ್ದವಳಿಗೆ, ಏನಾಯ್ತು? ಯಾಕೆ ಹೀಗಿದ್ದೀಯ? ಎಂದು ಕೇಳಿದ ಕೂಡಲೇ ಮುತ್ತಿನ ಹನಿಗಳಂತೆ ದಳದಳನೆ ಉದುರಿದ ಕಣ್ಣೀರು ಕಂಡು, ನಾನೇನಾದರೂ ತಪ್ಪು ಮಾತನಾಡಿಬಿಟ್ಟೆನಾ? ಅನ್ನುವ ಗಾಬರಿಯಾಯ್ತು.

ವಿಷಯ ಮತ್ತೇನಲ್ಲ, ಪ್ರೀತಿ! ಜೀವಕ್ಕಿಂತ ಮಿಗಿಲಾಗಿ ನಂಬಿ ಪ್ರೀತಿಸಿದ ಹುಡುಗ, ಅನ್ಯಧರ್ಮೀಯಳಾದ ಈ ಹುಡುಗಿಗೆ ತಿಳಿಯದಂತೆ, ಸ್ವಧರ್ಮೀಯಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಾಗಿದೆ. ಯಾಕೆ ಹೀಗೆ ಮಾಡಿದೆ? ಎಂದು ಕೇಳೋಣವೆಂದರೆ ಹುಡುಗನ ಫೋನು switch off… ಜೀವನವೆನ್ನುವ ದೀರ್ಘ ಪಯಣದಲ್ಲಿ ಅನುರೂಪದ ಸಹಯಾತ್ರಿಯ ಅಗತ್ಯ ಅತ್ಯವಶ್ಯ. ಕಾಮನಬಿಲ್ಲಿನ ವರ್ಣರಂಜಿತ ಲೋಕದ ಮಾಯೆ ಥವರನ್ನೂ ಕಾಡದೆ ಬಿಟ್ಟಿಲ್ಲ. ಪ್ಯಾರ್ ಕಿಯಾ ತೊ ಡರ್ ನಾ ಕ್ಯಾ ಎನ್ನುತ್ತ ಪ್ರೀತಿಯೆಂಬ ಮಾಯಾಮೃಗದ ಹಿಂದೆ ಓಡುವಾಗ ಜನ್ಮಕೊಟ್ಟವರು, ಒಡಹುಟ್ಟಿದವರು, ಜಾತಿ, ಧರ್ಮ, ದೇಶ, ಭಾಷೆ ಯಾವುದೂ ಲೆಕ್ಕಕ್ಕಿರುವು ದಿಲ್ಲ.

ಎಲ್ಲವನ್ನೂ ತಿರಸ್ಕರಿಸಿ ತಾವಿಬ್ಬರೂ ಸೇರಿ, ತಮ್ಮದೇ ಆದ ಹೊಸ ಬದುಕು ಕಟ್ಟಿಕೊಳ್ಳಬೇಕೆಂದರೆ ಅದಕ್ಕೆ ಸಾಕಷ್ಟು ಆತ್ಮಸ್ಥೈರ್ಯದ ಅಗತ್ಯವಿರುತ್ತದೆ. ಆದರಲ್ಲಿ ಒಬ್ಬರು ಹಿಂಜರಿದರೆಂದರೆ ಉಳಿದುಹೋದವರಿಗೆ ನರಕ ಯಾತನೆ. ಜಗತ್ತೇ ಶೂನ್ಯವೆನಿಸತೊಡಗಿ, ಯಾರಿಗೆ ಬೇಕು ಈ ಲೋಕ….? ಎಂದೆನಿಸುತ್ತಾ, ಎಲ್ಲದ ರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತಾರೆ. ಹೇಳಲೂ ಆಗದೆ, ಅನುಭವಿಸಲೂ ಆಗದೆ ತಲೆತುಂಬ ಅದೇ ವಿಷಯಗಳು ಕೊರೆಯತೊಡಗಿ ಬದುಕನ್ನೇ
ಮುಗಿಸಿಕೊಂಡು ಬಿಡುವ ನಿರ್ಧಾರದವರೆಗೂ ತಲುಪಿಬಿಡುತ್ತಾರೆ. ತಪ್ಪಿದ್ದೆಲ್ಲಿ? ಅನ್ನುವ ಪ್ರಶ್ನೆ ಎದ್ದಾಗ ಕಂಡಿದ್ದು, ಅವರು ಅಂಥವರಲ್ಲ ಅನ್ನುವ ಮತ್ತದೇ ಬಲವಾದ ಕುರುಡು ನಂಬಿಕೆ. ಇನ್ನು ನಿಮಗೆಲ್ಲ ರಾಮಾಯಣದ ಕತೆ ಗೊತ್ತೇ ಇದೆ.

ಎಂದೂ ಏನೂ ಕೇಳದ ಸೀತೆಯ ಇಚ್ಛೆಯನ್ನು ಪೂರೈಸಲು ಒಲ್ಲದ ಮನಸ್ಸಿನಿಂದಲೇ ಮಯಾಮೃಗದ ಬೆನ್ನತ್ತಿ ಹೋದ ರಾಮ, ಇತ್ತ ಕಾವಲಿಗಿದ್ದ ಲಕ್ಷ್ಮಣನನ್ನೂ ಮೃಗರೂಪಿ ಮಾರೀಚನ ಹೇ ಸೀತಾ, ಹೇ ಲಕ್ಷ್ಮಣಾ ಅನ್ನುವ ಆರ್ತನಾದದ ದನಿ ಕೇಳಿ ಆತಂಕಗೊಂಡು, ಅಣ್ಣನ ರಕ್ಷಣೆಗೆ ಹೋಗೆಂದು ಆಜ್ಞಾಪಿಸಿ ಕುಟೀರದಲ್ಲಿ ಏಕಾಂಗಿಯಾಗಿ ಉಳಿದು ಹೋದ ಸೀತೆ. ಇದೇ ಸಮಯನ್ನು ಕಾಯುತ್ತಿದ್ದ ವೇಷಧಾರಿ ರಾವಣ ಸನ್ಯಾಸಿಯ ರೂಪದಲ್ಲಿ ಬಂದು ಭಿಕ್ಷೆ ಬೇಡಿದಾಗ ಹಾಕಿದ್ದ ಲಕ್ಷ್ಮಣ
ರೇಖೆಯನ್ನೂ ದಾಟಿ ಸಂಕಷ್ಟಕ್ಕೆ ಸಿಲುಕಲು ಕಾರಣ ಮುಗ್ಧತೆ ಮತ್ತು ಅವರಂಥವರಲ್ಲ ಅನ್ನುವ ಬಲವಾದ ನಂಬಿಕೆ. ಪಾಪ ಸನ್ಯಾಸಿಯದ್ದು ಕೇವಲ ವೇಷ ಮಾತ್ರ
ಎಂದು ಆಕೆಗೆ ತಿಳಿಯದೇ ರಾವಣ ಹೆಣೆದ ಮಾಯಾಜಾಲದೊಳಗೆ ಸಿಲುಕಿ ನಲುಗಿದ್ದು, ಮಾಡದ ತಪ್ಪಿಗೆ ನಿಂದನೆಗೆ ಒಳಗಾಗಿದ್ದು, ಹಾಗೂ ಮತ್ತೆ ರಾಮನ ನಿಷ್ಕರುಣೆಗೆ ಗುರಿಯಾಗಿ ಅರಣ್ಯದ ಪಾಲಾಗಿದ್ದು ಎಲ್ಲಕ್ಕೂ ಕಾರಣವಾಗಿ ಹೋಯಿತು.

ಇಂಥಾ ಸಾವಿರ ಸಾವಿರ ಮೋಸ ಹೋದ ಕತೆಗಳನ್ನು ಕೇಳಿದ್ದರೂ ಸಹ ನಾವು-ನೀವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಮೋಸ ಹೋಗಿರುತ್ತೇವೆ. ಕಾರಣ ಅವರು ಅಂಥವರಲ್ಲ ಬಿಡು ಅನ್ನುವ ಅದೇ ಕುರುಡು ನಂಬಿಕೆ. ಹೀಗಾಗಿ ವೇಷಧಾರಿ ರಾವಣರು ನಮ್ಮ ಸುತ್ತಮುತ್ತ ತಿರುಗುತ್ತಲೇ ಇದ್ದರೂ ನಾವು ಅವರನ್ನು ಗುರುತಿಸು ವಲ್ಲಿ ಸೋಲುತ್ತೇವೆ. ಸೀತೆಯ ಮುಗ್ಧತೆ ಗಂಡುಮಕ್ಕಳಲ್ಲೂ, ವೇಷಧಾರಿ ರಾವಣನ ವಂಚನೆ ಹೆಣ್ಣುಮಕ್ಕಳಲ್ಲೂ ಕಂಡರೆ ಆಶ್ಚರ್ಯವೇನಿಲ್ಲ. ಯಾರೊಬ್ಬರೂ ತಾವು ಇಂಥವರು ಎಂಬ ಮೊಹರನ್ನು ಹಣೆಯ ಮೇಲೆ ಮುದ್ರಿಸಿಕೊಂಡು ಬರುವುದಿಲ್ಲ. ಅಥವಾ ನೋಡಿದ ಕೂಡಲೆ ಒಳ್ಳೆಯವರು ಅಥವಾ ಕೆಟ್ಟವರು ಎಂದು ಹೇಳಲೂ
ಬರುವುದಿಲ್ಲ. ಬಹಳ ಕೆಟ್ಟವರು ಎಂದು ದೂರವಿಟ್ಟವರೇ ಎಷ್ಟೋ ಸಲ ಮಾನವೀಯತೆಯಿಂದ ನಡೆದುಕೊಂಡಿರುತ್ತಾರೆ.

ಒಳ್ಳೆಯವರು ಎಂದು ಬಹಳ ಹತ್ತಿರವಾದವರು ಧೂರ್ತರಂತೆ ನಡೆದುಕೊಂಡಿರುತ್ತಾರೆ. ಇದೆಲ್ಲದರ ಪರಿಣಾಮವಾಗಿ ಒಮ್ಮೊಮ್ಮೆ ಸತ್ಯ ಹಾಗೂ ಪ್ರಾಮಾಣಿಕತೆ ಗಳು ಸರಿಯಾದ ನೆಲೆ-ನೆರವು ಸಿಗದೆ ಪರದಾಡುವಂತಾಗಿರುವುದು ಮಾತ್ರ ವಿಪಯರ್ಯಾಸ. ಹೀಗಾಗಿ ಬದಲಾಗುತ್ತಿರುವ ಯುಗದಲ್ಲಿರುವ ನಾವು, ಅವರು ಅಂಥವರಲ್ಲ ಎಂದು ಬಲವಾಗಿ ನಂಬಿ ಮೋಸ ಹೋಗುವ ಮೊದಲು ಒಂದಲ್ಲ, ನೂರು ಬಾರಿ ಯೋಚಿಸಿ ನಂತರ ನಿರ್ಧಾರಕ್ಕೆ ಬರುವುದು ಎಲ್ಲ ರೀತಿಯಿಂದಲೂ ಒಳ್ಳೆಯದು.

ನಮ್ಮ ನಂಬಿಕೆಯ ಬೀಗದ ಕೈಯನ್ನು ಮತ್ತೊಬ್ಬರ ಕೈಗೆ ಕೊಟ್ಟು ನಾವೇ ನಮ್ಮ ಮನೆಯಿಂದ ಹೊರಗೆ ನಿಲ್ಲುವ ಪ್ರಸಂಗ ಎಂದಿಗೂ ಬಾರದಿರಲಿ.