Saturday, 12th October 2024

ದೇಶದ ಕಾರ್ಮಿಕ ಕಾನೂನುಗಳಲ್ಲಿ ಮಹತ್ತರ ಬದಲಾವಣೆ

ಅವಲೋಕನ

ಚಂದ್ರಶೇಖರ ಬೇರಿಕೆ

ದೇಶದ ಕಾರ್ಮಿಕ ವರ್ಗ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಕಾರ್ಮಿಕ ಕಾನೂನುಗಳಿಗೆ ಸಂಬಂಧಪಟ್ಟ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ದೃಢ ಹೆಜ್ಜೆ ಇಡಲಾಗಿದ್ದು, ಕಾರ್ಮಿಕ ವಲಯದ ಸುಧಾರಣೆ ಮತ್ತು ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂದು ವಿಶ್ಲೇಸಲಾಗುತ್ತಿದೆ.

ಕೇಂದ್ರ ಸರಕಾರ ಬೇರೆ ಬೇರೆ ಕ್ಷೇತ್ರದ ಹಲವು ಅನುಪಯುಕ್ತ ಕಾನೂನುಗಳನ್ನು 2014ರಿಂದ ಹಂತ ಹಂತವಾಗಿ ರದ್ದುಪಡಿಸುತ್ತಾ ಬಂದಿದ್ದು, ಅವುಗಳಲ್ಲಿ 12 ಕಾರ್ಮಿಕ ಕಾನೂನುಗಳೂ ಒಳಗೊಂಡಿವೆ. ಹಾಗಾಗಿ ಪ್ರಸ್ತುತ ಜಾರಿಯಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಅದರ ಸ್ವರೂಪಕ್ಕೆ ಅನುಗುಣವಾಗಿ ವಿಂಗಡಿಸಿ ವೇತನ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ, ಕೆಲಸದ ಸ್ಥಿತಿಗತಿ ಸಂಹಿತೆ, ಸಾಮಾಜಿಕ ಸುರಕ್ಷತಾ ಸಂಹಿತೆ ಹಾಗೂ ಕೈಗಾರಿಕಾ ಸಂಬಂಧಗಳ ಸಂಹಿತೆ ಎಂಬ 4 ಸಂಹಿತೆಗಳಾಗಿ ಕ್ರೋಢೀ ಕರಿಸಲಾಗಿದೆ.

ಸಂಘಟಿತ, ಅಸಂಘಟಿತ ಮತ್ತು ಸ್ವಉದ್ಯೋಗ ವಲಯದ ಸುಮಾರು 50 ಕೋಟಿ ಕಾರ್ಮಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅವರನ್ನು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಒಳಪಡಿಸುವ ಪ್ರಯತ್ನ ಮಾಡಲಾಗಿದ್ದು, ಕಳೆದ 73 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾರ್ಮಿಕ ಕಾನೂನುಗಳ ಸುಧಾರಣೆಗೆ ಒತ್ತು ನೀಡಲಾಗಿದೆ ಎಂಬ ವಿಶ್ಲೇಷಣೆಯ ನಡುವೆ ಈ ಸಂಹಿತೆಗಳ ಬಗ್ಗೆ ಒಂದು ಅವಲೋಕನ.

ವೇತನ ಸಂಹಿತೆ (The Code On Wages)ಯಡಿ ವೇತನ ಪಾವತಿ ಕಾಯ್ದೆ, 1936, ಕನಿಷ್ಠ ವೇತನ ಕಾಯ್ದೆ, 1948, ಬೋನಸ್ ಪಾವತಿ ಕಾಯ್ದೆ, 1965, ಮತ್ತು ಸಮಾನ ವೇತನ ಕಾಯ್ದೆ, 1976 ಎಂಬ 4 ಕಾರ್ಮಿಕ ಕಾಯ್ದೆಗಳನ್ನು ಪರಿಗಣಿಸಲಾಗಿದ್ದು, ಕೈಗಾರಿಕಾ ಸಂಬಂಧಗಳ ಸಂಹಿತೆ (The Industrial Relations Code) ಯಡಿ ಕಾರ್ಮಿಕ ಸಂಘಗಳ ಕಾಯ್ದೆ, 1926, ಔದ್ಯೋಗಿಕ (ಸ್ಥಾಯಿ ಆದೇಶಗಳು) ಕಾಯ್ದೆ, 1946, ಕೈಗಾರಿಕಾ ವಾದ ಕಾಯ್ದೆ, 1947 ಎಂಬ 3 ಕಾರ್ಮಿಕ ಕಾಯ್ದೆಗಳನ್ನು ಪರಿಗಣಿಸಲಾಗಿದೆ.

ಹಾಗೆಯೇ, ಔದ್ಯೋಗಿಕ ಸುರಕ್ಷತೆ, ಆರೋಗ್ಯ, ಕೆಲಸದ ಸ್ಥಿತಿಗತಿ ಸಂಹಿತೆ (The Occupational Safety, Health And Working Conditions Code) ಯಡಿ ಕಾರ್ಖಾನೆಗಳ ಕಾಯ್ದೆ, 1948, ಪ್ಲಾಂಟೇಶನ್ಸ್‌ ಲೇಬರ್ ಆಕ್ಟ್‌, 1951, ಗಣಿ ಕಾಯ್ದೆ, 1952, ಕಾರ್ಯನಿರತ ಪತ್ರಕರ್ತರು ಮತ್ತು ಇತರ ಪತ್ರಿಕೆ ನೌಕರರು (ಸೇವಾ ಷರತ್ತುಗಳು) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1955, ವರ್ಕಿಂಗ್ ಜರ್ನಲಿಸ್ಟ್ಸ್ (ವೇತನ ದರಗಳ ಸ್ಥಿರೀಕರಣ) ಕಾಯ್ದೆ, 1958, ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ, 1961, ಬೀಡಿ ಮತ್ತು ಸಿಗಾರ್ ವರ್ಕರ್ಸ್ (ಉದ್ಯೋಗದ ಷರತ್ತುಗಳು) ಕಾಯ್ದೆ, 1966, ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ, 1970, ಮಾರಾಟ ಪ್ರಚಾರ ನೌಕರರ (ಸೇವಾ ಷರತ್ತುಗಳು) ಕಾಯ್ದೆ, 1976, ಅಂತರ – ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಷರತ್ತುಗಳ ನಿಯಂತ್ರಣ) ಕಾಯ್ದೆ, 1979, ಸಿನಿ ವರ್ಕರ್ಸ್ ಮತ್ತು ಸಿನಿಮಾ ಥಿಯೇಟರ್ ವರ್ಕರ್ಸ್ (ಉದ್ಯೋಗ ನಿಯಂತ್ರಣ) ಆಕ್ಟ್ ‌, 1981, ಡಾಕ್ ವರ್ಕರ್ಸ್ (ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ) ಆಕ್ಟ್‌, 1986, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವಾ ಷರತ್ತುಗಳ ನಿಯಂತ್ರಣ) ಕಾಯ್ದೆ, 1996 ಎಂಬ 13 ಕಾರ್ಮಿಕ ಕಾಯ್ದೆಗಳನ್ನು ಪರಿಗಣಿಸಲಾಗಿದ್ದು, ಸಾಮಾಜಿಕ ಸುರಕ್ಷತಾ ಸಂಹಿತೆ (The Code On Social Security)ಯಡಿ ನೌಕರರ ಪರಿಹಾರ ಕಾಯ್ದೆ, 1923, ನೌಕರರ ರಾಜ್ಯ ವಿಮಾ ಕಾಯ್ದೆ, 1948, ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ, 1952, ಉದ್ಯೋಗ ವಿನಿಮಯ ಕೇಂದ್ರಗಳು (ಖಾಲಿ ಹುದ್ದೆೆಗಳ ಕಡ್ಡಾಯ ಅಧಿಸೂಚನೆ) ಕಾಯ್ದೆ, 1959, ಹೆರಿಗೆ ಸೌಲಭ್ಯಗಳ ಕಾಯ್ದೆ, 1961, ಉಪಧನ ಪಾವತಿ ಕಾಯ್ದೆ, 1972, ಸಿನಿ ವರ್ಕರ್ಸ್ ವೆಲ್ಫೇರ್ ಫಂಡ್ ಆಕ್ಟ್‌, 1981, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ, 1996, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ, 2008 ಎಂಬ 9 ಕಾರ್ಮಿಕ ಕಾಯ್ದೆಗಳನ್ನು ಪರಿಗಣಿಸಲಾಗಿದೆ. ವೇತನ ಸಂಹಿತೆಯು ಎಲ್ಲ ಕಾರ್ಖಾನೆಗಳು, ಸಂಸ್ಥೆಗಳು, ಉದ್ಯೋಗಿಗಳು, ಮಾಲೀಕರು, ಸಂಘಟಿತ ಹಾಗೂ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೂ ಅನ್ವಹಿಸುತ್ತದೆ.

ಈವರೆಗೆ ವೇತನ ಪಾವತಿ ಕಾಯಿದೆಯು ಮಾಸಿಕ 24000 ರುಪಾಯಿ ಮತ್ತು ಅದಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿ ಗಳಿಗೆ ಮತ್ತು ಕನಿಷ್ಠ ವೇತನ ಕಾಯಿದೆಯು ಅನುಸೂಚಿತ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತಿತ್ತು. ಈ ಹೊಸ ವೇತನ ಸಂಹಿತೆಯ ಜಾರಿಯಿಂದ ಈ ಎಲ್ಲಾ ಮಿತಿಗಳು ಕೊನೆಗೊಂಡಿದೆ. ವೇತನವನ್ನು ಪ್ರತಿ ತಿಂಗಳ 7ನೇ ತಾರೀಕಿನ ಒಳಗೆ ಪಾವತಿ ಮಾಡಬೇಕಾಗುತ್ತದೆ. ಯಾವುದೇ ವಿಧವಾದ ಕಾರ್ಮಿಕ ಇಲ್ಲವೆ ನೌಕರನನ್ನು ಕೆಲಸದಿಂದ ವಜಾ ಮಾಡಿದಲ್ಲಿ ಅಥವಾ ಉದ್ಯೋಗಿಯೇ ರಾಜೀನಾಮೆ ನೀಡಿದಲ್ಲಿ ಬಾಕಿ ಇರುವ ವೇತನ ಹಾಗೂ ಇತರೆ ಬಾಕಿಗಳನ್ನು ಎರಡು ಕೆಲಸದ ದಿನಗಳೊಳಗಾಗಿ ಪಾವತಿಸಬೇಕಾಗುತ್ತದೆ.

ಕನಿಷ್ಠ ವೇತನವನ್ನು ಇನ್ನು ಮುಂದೆ ಕೇಂದ್ರ ಸರಕಾರವು ಕೆಲವು ಮಾನದಂಡಗಳಡಿ ನಿಗದಿಪಡಿಸಿ ರಾಷ್ಟ್ರೀಯ ಕನಿಷ್ಠ ವೇತನವನ್ನು ನಿರ್ಧರಿಸಲಿದ್ದು, ರಾಜ್ಯ ಸರಕಾರಗಳು ಕನಿಷ್ಠ ವೇತನವನ್ನು ರಾಷ್ಟ್ರೀಯ ಕನಿಷ್ಠ ವೇತನಕ್ಕಿಂತ ಕಡಿಮೆ ನಿಗದಿ ಪಡಿಸುವಂತಿಲ್ಲ. ಅಲ್ಲದೇ ಯಾವುದೇ ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಿರುವ ಕನಿಷ್ಠ ವೇತನವು ರಾಷ್ಟ್ರೀಯ ಕನಿಷ್ಠ ವೇತನಕ್ಕಿಂತ ಹೆಚ್ಚಾಗಿದ್ದರೆ ಅದನ್ನೇ ಮುಂದುವರಿಸಬೇಕಾಗುತ್ತದೆ. ಐದು ವರ್ಷಗಳನ್ನು ಮೀರದಂತೆ ರಾಷ್ಟ್ರೀಯ ಕನಿಷ್ಠ ವೇತನದ ಪರಿಷ್ಕರಣೆ ಮಾಡಲಾಗುತ್ತದೆ. ಕಾರ್ಮಿಕರು ಭೌತಿಕವಾಗಿ ಕೆಲಸ ಮಾಡಿದ ಪ್ರತಿ 20 ದಿನಗಳಿಗೊಂದರಂತೆ ಗಳಿಕೆ ರಜೆ ಸೌಲಭ್ಯವನ್ನು ಪಡೆಯಲು ನಿಗದಿಪಡಿಸಲಾಗಿದ್ದ 240 ದಿನಗಳ ಸೇವಾವಧಿಯ ಅರ್ಹತೆಯನ್ನು 180 ದಿನಗಳಿಗೆ ನಿಗದಿಗೊಳಿಸ ಲಾಗಿದೆ.

ಸಮಾನತೆ ಕಾಪಾಡುವ ದೃಷ್ಟಿಯಿಂದ ನೇಮಕಾತಿಯ ಸಂದರ್ಭದಲ್ಲಿಯೂ ಲಿಂಗ ತಾರತಮ್ಯವನ್ನು ಕಾಯ್ದೆಯು ನಿಷೇಧಿಸಿದೆ. ಯಾವುದೇ ಒಬ್ಬ ನೌಕರನು ಲೈಂಗಿಕ ಕಿರುಕುಳದ ಅಪರಾಧಕ್ಕೆ ಗುರಿಯಾಗಿದ್ದರೆ ಅಂತಹ ನೌಕರನು ಬೋನಸ್ ಪಾವತಿಗೆ ಅನರ್ಹನಾಗುತ್ತಾನೆ ಎನ್ನುವ ನಿಯಮವನ್ನು ಸೇರಿಸಲಾಗಿದೆ. ಕೈಗಾರಿಕಾ ಸಂಬಂಧಗಳ ಸಂತೆಯಡಿ ಕಾರ್ಮಿಕರ ವಾದಗಳನ್ನು ತ್ವರಿತವಾಗಿ ಪರಿಹರಿಸಲು ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಒಬ್ಬ ಸದಸ್ಯರ ಬದಲು ಇಬ್ಬರು ಸದಸ್ಯರಿಗೆ ಅವಕಾಶ ಕಲ್ಪಿಸ ಲಾಗಿದ್ದು, ಒಬ್ಬ ಸದಸ್ಯರ ಅನುಪಸ್ಥಿತಿಯಲ್ಲಿ ಇನ್ನೊಬ್ಬರು ಪ್ರಕ್ರಿಯೆಯನ್ನು ಮುಂದುವರಿಸಬಹುದು. ರಾಜಿ ಸಂಧಾನ ಹಂತದಲ್ಲಿ ವಾದ ಬಗೆಹರಿಯದಿದ್ದಲ್ಲಿ ವಾದವನ್ನು ನೇರವಾಗಿ ನ್ಯಾಯಮಂಡಳಿಗೆ ಕೊಂಡೊಯ್ಯಬಹುದಾಗಿದ್ದು, ನ್ಯಾಯ ಮಂಡಳಿಯ ತೀರ್ಪಿನ 30 ದಿನಗಳಲ್ಲಿ ತೀರ್ಪನ್ನು ಅನುಷ್ಠಾನ ಮಾಡಬೇಕಾಗುತ್ತದೆ.

ಪ್ರಸ್ತುತ ಈ ಪ್ರಕರಣವನ್ನು ಸಂಬಂಧಪಟ್ಟ ಸರಕಾರವು ನ್ಯಾಯಮಂಡಳಿಗೆ ಶಿಫಾರಸ್ಸು ಮಾಡುತ್ತಿದೆ. ಕಾರ್ಮಿಕರು ಗುತ್ತಿಗೆ ಕಾರ್ಮಿಕರಾಗಿರುವ ಬದಲು ಒಪ್ಪಂದದ ಮೇಲೆ ನಿಗದಿತ ಅವಧಿಗೆ ಕೆಲಸ ಮಾಡುವ ನಿಗದಿತ ಅವಧಿಯ ಉದ್ಯೋಗದ ಆಯ್ಕೆ ಯನ್ನು ಪಡೆಯಬಹುದಾಗಿದ್ದು, ಇದರಡಿಯಲ್ಲಿ ಕಾರ್ಮಿಕರು ಕೆಲಸದ ಸಮಯ, ವೇತನ, ಸಾಮಾಜಿಕ ಭದ್ರತೆ, ರಜೆ ಮತ್ತು ನಿಯುತ ನೌಕರರಂತೆ ಇತರೆ ಕಲ್ಯಾಣ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುವ ಹಕ್ಕನ್ನು ಮೊದಲ ಬಾರಿಗೆ ಕಲ್ಪಿಸಲಾಗಿದೆ. ನಿಗದಿತ ಅವಧಿಯ ಕಾರ್ಮಿಕರ ಸೇವೆಯನ್ನು ಅವಧಿ ಮುಗಿದ ಆಧಾರದಲ್ಲಿ ಕೊನೆಗೊಳಿಸಿದರೆ ಅದು ಕೆಲಸ ದಿಂದ ತೆಗೆದು ಹಾಕಿದಂತಲ್ಲ.

ಕಾರ್ಮಿಕರ ಮರುಕೌಶಲ್ಯ ನಿಧಿಗೆ ಅವಕಾಶ ಕಲ್ಪಿಸಲಾಗಿದ್ದು, ಉದ್ಯೋಗದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರನ್ನು ಪುನಃ ಕೌಶಲ್ಯ ಗೊಳಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಉದ್ಯೋಗದಾತರು ಕಾರ್ಮಿಕನಿಗೆ ಆತ ಪಡೆಯುತ್ತಿದ್ದ ವೇತನದ 15 ದಿನಗಳ ಸಮನಾದ ವೇತನವನ್ನು ವಜಾಗೊಳಿಸಿದ 45 ದಿನಗಳ ಒಳಗಾಗಿ ನೀಡಬೇಕಾಗುತ್ತದೆ. 300ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳು ಸರಕಾರದ ಅನುಮತಿ ಪಡೆಯದೇ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಬಹುದು ಇಲ್ಲವೇ ಸಂಸ್ಥೆ ಯನ್ನು ಮುಚ್ಚಬಹುದು. ಇಲ್ಲಿಯವರೆಗೆ ಈ ನಿಯಮ 100 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಅನ್ವಯವಾಗುತ್ತಿತ್ತು. ಉದ್ಯೋಗದಾತರ ವಿರುದ್ಧ ಕೈಗಾರಿಕಾ ವಾದವಿದ್ದಲ್ಲಿ ಯಾವುದೇ ಕಾರ್ಮಿಕ 2 ವರ್ಷಗಳ ಒಳಗೆ ವಾದವನ್ನು ಹೂಡಬೇಕಾಗಿದ್ದು, ಈವರೆಗಿದ್ದ 3 ವರ್ಷಗಳ ಅವಧಿ ಹಿಂಪಡೆಯಲಾಗುತ್ತದೆ. ಕಾರ್ಮಿಕ ಸಂಘಟನೆಗಳು ಯಾವುದೇ ವಾದದ ಬಗ್ಗೆ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಲು ನೆಗೋಯೇಟಿಂಗ್ ಯೂನಿಯನ್ ಮತ್ತು ನೆಗೋಯೇಟಿಂಗ್ ಕೌನ್ಸಿಲ್‌ಗೆ ಅವಕಾಶ ಕಲ್ಪಿಸಲಾಗಿದೆ.

ಕೈಗಾರಿಕೆ ಅಥವಾ ಉದ್ದಿಮೆಗಳಲ್ಲಿ ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಜೊತೆ ಒಂದು ಕಾರ್ಮಿಕ ಸಂಘಟನೆ ಮಾತ್ರವೇ ಮಾತುಕತೆ ನಡೆಸುವ ಅರ್ಹತೆ ಪಡೆಯುತ್ತದೆ. ಒಂದೇ ಉದ್ದಿಮೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಮಿಕ ಸಂಘಟನೆಗಳು ಇದ್ದರೆ ಒಟ್ಟು ಕಾರ್ಮಿಕರಲ್ಲಿ ಶೇ.51 ಅಥವಾ ಅದಕ್ಕಿಂತಲೂ ಹೆಚ್ಚು ಜನರ ಸದಸ್ಯತ್ವ ಹೊಂದಿರುವ ಸಂಘಟನೆ ಮಾತ್ರವೇ ಅರ್ಹತೆ ಪಡೆಯುವುದಾಗಿದ್ದು, ಈ ಕಾರ್ಮಿಕ ಸಂಘಟನೆ ಮಾತ್ರವೇ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸುವ ಏಕೈಕ ಏಜೆಂಟ್ ಆಗಿರುತ್ತದೆ. ಆದರೆ ಅದೇ ಉದ್ದಿಮೆಯಲ್ಲಿ ಕಡಿಮೆ ಪ್ರಮಾಣದ ಕಾರ್ಮಿಕ ಸದಸ್ಯತ್ವ ಹೊಂದಿ ಅಸ್ತಿತ್ವದಲ್ಲಿರುವ ಯಾವುದೇ ಕಾರ್ಮಿಕ ಸಂಘಟನೆಗೆ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸುವ ಹಕ್ಕು ದೊರೆಯುವುದಿಲ್ಲ.

ಒಂದು ಉದ್ದಿಮೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಮಿಕ ಸಂಘಟನೆಗಳು ಇದ್ದು, ಯಾವ ಸಂಘಟನೆಗೂ ಶೇ.51ರಷ್ಟು ಕಾರ್ಮಿಕರ ಸದಸ್ಯತ್ವದ ಬಲ ಇಲ್ಲದಿದ್ದರೆ ಯಾವ ಸಂಘಟನೆಗೂ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸುವ ಹಕ್ಕು ದೊರೆಯುವುದಿಲ್ಲ. ಕಾರ್ಮಿಕ ಸಂಘಟನೆಗಳಿಗೆ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸುವ ಏಕೈಕ ಏಜೆಂಟ್ ಸ್ಥಾನ ದೊರೆಯದೇ ಇದ್ದರೆ ಮಾತುಕತೆ ಮಂಡಳಿಯನ್ನು ರಚಿಸಲಾಗುತ್ತದೆ. ಸರಕಾರದ ಸಂಬಂಧಿತ ಪ್ರಾಧಿಕಾರದ ಅಧಿಕಾರಿಯು ಈ ಮಾತುಕತೆ ಮಂಡಳಿ ಯನ್ನು ರಚಿಸುವ ಅಧಿಕಾರ ಹೊಂದಿರುತ್ತಾರೆ. ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಶೇ 20ಕ್ಕಿಂತಲೂ ಕಡಿಮೆ ಜನರ ಸದಸ್ಯತ್ವ ಹೊಂದಿರುವ ಕಾರ್ಮಿಕ ಸಂಘಟನೆಗೆ ಮಾತುಕತೆ ಮಂಡಳಿಯಲ್ಲಿ ಪ್ರಾತಿನಿಧ್ಯ ಇರುವುದಿಲ್ಲ.

ಮಾತುಕತೆ ಮಂಡಳಿಯಲ್ಲಿ ಆಡಳಿತ ಮಂಡಳಿ ಸದಸ್ಯರ ಸಂಖ್ಯೆ ಮತ್ತು ಕಾರ್ಮಿಕರ ಪ್ರತಿನಿಧಿಗಳ ಸಂಖ್ಯೆ ಸಮನಾಗಿರತಕ್ಕದ್ದು. ಕಾರ್ಮಿಕ ಸಂಘಟನೆಗಳ ಪ್ರತಿ ಶೇ 20ರಷ್ಟು ಸದಸ್ಯರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಮಾತುಕತೆ ವೇಳೆ ಕಾರ್ಮಿಕರ ಪ್ರತಿನಿಧಿಗಳ ಬಹುಮತದ ಅಭಿಪ್ರಾಯ ಅಂತಿಮವಾಗಿರುತ್ತದೆ. ಈ ಮಂಡಳಿಯ ಅಧಿಕಾರಾವಧಿ 3 ವರ್ಷ ಗಳಾಗಿದ್ದು, 5 ವರ್ಷಗಳ ವರೆಗೆ ಇದನ್ನು ವಿಸ್ತರಿಸಲೂ ಅವಕಾಶವಿದೆ. ಕಾರ್ಮಿಕ ಸಂಘಟನೆಗಳ ಸದಸ್ಯತ್ವ ಶುಲ್ಕವನ್ನು ಸರಕಾರ ನಿರ್ಧರಿಸಬಹುದಾಗಿದೆ. ಕಾರ್ಮಿಕರು ಪ್ರತಿಭಟನೆ ಅಥವಾ ಮುಷ್ಕರ ನಡೆಸುವ ಮುನ್ನ ಸಂಸ್ಥೆೆಗೆ 14 ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕು. ಈ ಅವಧಿಯಲ್ಲಿಯೇ ಸಂಸ್ಥೆ ಮತ್ತು ಕಾರ್ಮಿಕರು ಸಂವಿಧಾನದ ಮೂಲಕ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಬಹುದು ಎಂಬುದು ಉಲ್ಲೇಖಾರ್ಹ.

ಕಾರ್ಮಿಕ ಸಂಘಗಳ ನಡುವೆ ಉದ್ಭವಿಸುವ ವಾದಗಳನ್ನು ಪರಿಹರಿಸಲು ನ್ಯಾಾಯಮಂಡಳಿಗೆ ಹೋಗಲು ವ್ಯವಸ್ಥೆ ಕಲ್ಪಿಸ ಲಾಗಿದ್ದು, ಅವರು ತ್ವರಿತವಾಗಿ ವಾದಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಲು ಕಾರ್ಮಿಕ ಕಾನೂನುಗಳಲ್ಲಿ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. 20 ಅಥವಾ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಯಲ್ಲಿ ಕುಂದುಕೊರತೆ ಪರಿಹಾರ ಸಮಿತಿಯಲ್ಲಿ ಗರಿಷ್ಠ ಸಂಖ್ಯೆಯ ಸದಸ್ಯರನ್ನು 6 ರಿಂದ 10ಕ್ಕೆೆ ಹೆಚ್ಚಿಸಲಾಗಿದೆ. ಔದ್ಯೋಗಿಕ ಸುರಕ್ಷತೆ, ಅರೋಗ್ಯ, ಕೆಲಸದ ಸ್ಥಿತಿಗತಿ ಸಂಹಿತೆಯಡಿ ಒಂದು ನಿರ್ದಿಷ್ಟ ವಯಸ್ಸಿ ಗಿಂತ ಮೇಲ್ಪಟ್ಟ ಕಾರ್ಮಿಕರಿಗಾಗಿ ಉದ್ಯೋಗದಾತರು ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ನಡೆಸಬೇಕಾಗುತ್ತದೆ.

ನೇಮಕಾತಿ ಪತ್ರವನ್ನು ಪಡೆಯುವ ಕಾನೂನು ಬದ್ಧ ಹಕ್ಕನ್ನು ಕಾರ್ಮಿಕರಿಗೆ ಮೊದಲ ಬಾರಿಗೆ ಕಲ್ಪಿಸಲಾಗಿದೆ. ಸಿನಿ ವರ್ಕರ್‌ ಗಳನ್ನು ಆಡಿಯೋ ವಿಷುಯಲ್ ವರ್ಕರ್ ಎಂದು ಗೊತ್ತುಪಡಿಸಲಾಗಿದ್ದು, ಇದರಿಂದಾಗಿ ಹೆಚ್ಚು ಹೆಚ್ಚು ಕಾರ್ಮಿಕರು ಔದ್ಯೋಗಿಕ ಸುರಕ್ಷತೆ, ಆರೋಗ್ಯ, ಕೆಲಸದ ಸ್ಥಿತಿಗತಿ ಸಂಹಿತೆಯ ವ್ಯಾಪ್ತಿಗೆ ಒಳಪಡುತ್ತಾರೆ. ಈ ಮೊದಲು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಕಲಾವಿದರಿಗೆ ಮಾತ್ರ ಈ ಭದ್ರತೆಯನ್ನು ನೀಡಲಾಗುತ್ತಿತ್ತು. ಪ್ರತಿಯೊಂದು ವಲಯದಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಮಹಿಳಾ ಕಾರ್ಮಿಕರ ಒಪ್ಪಿಗೆ ಅಗತ್ಯವಾಗಿರುತ್ತದೆ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿ ಉದ್ಯೋಗದಾತರದ್ದಾಗಿರುತ್ತದೆ.

ಕೆಲಸದ ಸ್ಥಳದಲ್ಲಿ ಅಪಘಾತ ದಿಂದಾಗಿ ಕೆಲಸಗಾರನ ಸಾವು ಅಥವಾ ಕಾರ್ಮಿಕನಿಗೆ ಗಾಯ ವಾದಾಗ ದಂಡದ ಕನಿಷ್ಠ ಶೇ.50 ರಷ್ಟು ಪಾಲನ್ನು ನೌಕರರ ಪರಿಹಾರ ಮೊತ್ತದ ಜೊತೆಗೆ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಸುರಕ್ಷತಾ ವಾತಾವರಣ ವನ್ನು ಒದಗಿಸಲು ರಾಷ್ಟ್ರೀಯ ಔದ್ಯೋೋಗಿಕ ಸುರಕ್ಷತೆ ಮತ್ತು ಆರೋಗ್ಯ ಮಂಡಳಿ ಅನ್ನು ಸ್ಥಾಪಿಸಲಾಗುತ್ತದೆ.