Saturday, 14th December 2024

ಚಾರಿತ್ರ್ಯ ಹಾಳಾದರೆ ಎಲ್ಲವೂ ಹಾಳಾದಂತೆ

ಹಿತೋಪದೇಶ

ನಿತ್ಯಾನಂದ ಹೆಗಡೆ, ಮೂರೂರು

ಒಬ್ಬ ಶಿಕ್ಷಕನಿರಲಿ, ಬ್ಯಾಂಕ್ ಅಧಿಕಾರಿಯಿರಲಿ, ಗುತ್ತಿಗೆದಾರನಿರಲಿ, ಮಠಾಧೀಶನಿರಲಿ, ರಾಜಕಾರಣಿ- ವೈದ್ಯ-ಪತ್ರಕರ್ತನೇ ಆಗಿರಲಿ, ಅವಿರತ ಶ್ರಮ ಹಾಗೂ ಮೇರುಸಾಧನೆಗಳ ನಂತರವೂ ತನ್ನ ಖಾಸಗಿ ವ್ಯಕ್ತಿತ್ವದಲ್ಲಿ ಸಣ್ಣ ಕಪ್ಪುಚುಕ್ಕೆಯನ್ನೂ ಹೊಂದಿರಬಾರದು. ಅದರಲ್ಲೂ, ಹೆಣ್ಣಿನ ಮೋಹದ ಅನೈತಿಕತೆ ಹೊಂದಿದಲ್ಲಿ ಅವನ ಸಕಲಗುಣವನ್ನೂ ಮಸಿ ನುಂಗಿಬಿಡುತ್ತದೆ. ಇದು ಭಾರತದ ಕೆಲವು ಸಿದ್ಧ-ಪ್ರಸಿದ್ಧರನ್ನಷ್ಟೇ ಅಲ್ಲ, ಅಮೆರಿಕದ ಡೊನಾಲ್ಡ್ ಟ್ರಂಪ್‌ರನ್ನೂ ಕಾಡದೇ ಬಿಟ್ಟಿಲ್ಲ, ಪಾಕಿಸ್ತಾನದ ಖಾನ್‌ಗಳನ್ನೂ ಬಿಟ್ಟಿಲ್ಲ.

ಸಾರ್ವಜನಿಕ ರಂಗದಲ್ಲಿ ಇರುವಾತ ತನ್ನ ವಿಕ್ಷಿಪ್ತ ನಡವಳಿಕೆಯಿಂದಾಗಿ ಮಾಡಿಕೊಂಡ ಹಗರಣಗಳಲ್ಲಿ ಹಣ-ಹೆಂಡಕ್ಕೆ ಸಂಬಂಧಿಸಿದ್ದನ್ನು ಜನ ಮರೆತಾರು; ಆದರೆ ಹೆಣ್ಣುಬಾಕತನವನ್ನು ಕ್ಷಮಿಸಲಾರರು. ಇದು ಗೊತ್ತಿದ್ದರೂ, ಕಾಮದ ಸೆಳೆತಕ್ಕೆ ಸಿಲುಕಿದ ಕೆಲವರಿಗೆ ಸಮಾಜ ಏನೇ ಅನ್ನಲಿ ಅವೆಲ್ಲಾ ನಗಣ್ಯವಾಗಿಬಿಡುತ್ತವೆ. ಆಮೇಲೆ, ಕಳೆದುಕೊಂಡ ಮಾನವನ್ನು ಹಿಂಪಡೆಯಲು ಎಂದೆಂದಿಗೂ ಸಾಧ್ಯವಾಗದೆ ಜೀವನಪೂರ್ತಿ ಮರುಕಪಡ ಬೇಕಾಗು ತ್ತದೆ. ಕಾನೂನು ಕುಣಿಕೆಯಿಂದ ಪಾರಾಗಿ ಬಂದರೂ ಸಾಮಾಜಿಕವಾಗಿ ಆತ ಪಾರಾಗಲಾರದ ಕೂಪದಲ್ಲಿ ಸಿಲುಕಿಬಿಡುತ್ತಾನೆ.

ಇಂಥ ಅವಗುಣ ಎಲ್ಲಿ ಸರ್ವನಿಷಿದ್ಧವೋ ಇತ್ತೀಚೆಗೆ ಅಲ್ಲೇ ಕಾಣಬರುತ್ತಿರುವುದು ವಿಪರ್ಯಾಸ. ಸರ್ವಸಂಗ ಪರಿತ್ಯಾಗಿಗಳೆನಿಸಿಕೊಂಡ ಕೆಲ ಸನ್ಯಾಸಿ ಗಳೂ ಅದೇನೋ ಆಕರ್ಷಣೆಗೆ ಒಳಗಾಗಿ, ತಾವು ಕುಳಿತ ಪೀಠದ ಘನತೆಯನ್ನೂ ಮರೆತು, ಹೆಸರನ್ನು ಕೆಡಿಸಿಕೊಂಡಿದ್ದನ್ನು ಕಂಡಿದ್ದೇವೆ. ನಂತರ ಅವರು ಜೈಲು ಪಾಲಾದುದೋ, ದೇಶ ಬಿಟ್ಟು ಓಡಿಹೋದುದೋ ಇವೆ. ಇವರೆಲ್ಲ ತಮ್ಮಂಥ ಬೇರೆ ಮನುಷ್ಯರು ಮೌಲ್ಯ ಕಳೆದುಕೊಂಡಿದ್ದನ್ನು ನೋಡಿಯೂ ಪಾಠ ಕಲಿಯದಿರುವುದು ದುರ್ದೈವ ಅಂತಲೇ ಹೇಳಬೇಕು.

ಮಹಾ ಉದ್ದಿಮೆದಾರ ವಿಜಯ್ ಮಲ್ಯ ಒಂದು ಕಾಲಕ್ಕೆ ಭಾರತ ದಲ್ಲಿ ಶುರುಮಾಡಿದ ತಮ್ಮ ವ್ಯವಹಾರ-ವಹಿವಾಟಿನ ಕಬಂಧ ಬಾಹುವನ್ನು ಮತ್ತಷ್ಟು ಚಾಚಿ ಸಾಕಷ್ಟು ಕಡೆ ಆವರಿಸಿಕೊಂಡರು; ಆದರೆ ಹೆಣ್ಣಿನ ಶೋಕಿಯಲ್ಲಿ ಸಿಲುಕಿ ಎಲ್ಲವನ್ನೂ ಕಳೆದುಕೊಂಡು ವಿದೇಶಕ್ಕೆ ಪರಾರಿಯಾದರು. ಇದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಇಂತಿಪ್ಪ ಹಂಗಾಮಿನಲ್ಲೇ ನಮ್ಮ ಕರ್ನಾಟಕದ ಕೆಲ ರಾಜಕಾರಣಿಗಳಿಗೆ ಮತ್ತೆ ಅದೇಕೆ ಇಂಥ ದುರ್ವರ್ತನೆಗಳು ಕೈಬೀಸಿ ಕರೆದವೋ ಹೇಳಲಾಗುತ್ತಿಲ್ಲ. ಕೆಲ ವರ್ಷಗಳ ಹಿಂದೆ ಕನ್ನಡದ ಮೇರು ಪತ್ರಕರ್ತರೊಬ್ಬರು ಅಂಥದ್ದೇ ಹಾದಿ ತುಳಿದು, ನಂತರ ಅದನ್ನು ಸಮರ್ಥಿಸಹೋಗಿ ನಗೆಪಾಟಲಿಗೆ ಈಡಾದುದನ್ನು ಮತ್ತು ತಮ್ಮ ದುಷ್ಕರ್ಮಗಳಿಂದಾಗಿ ತಾವೇ ತಮ್ಮ ಚಟ್ಟ ಕಟ್ಟಿಕೊಂಡುದನ್ನೂ ಜನರು ಮರೆತಿಲ್ಲ.

ಪರಸ್ಪರ ಒಪ್ಪಿಗೆಯಲ್ಲಿ ನಡೆವ ಇಂಥ ಕಾಮದಾಟಗಳನ್ನು ಕಾನೂನು ಕೊನೆಗೆ ಕ್ಷಮಿಸಿ ಕಳುಹಿಸಿಬಿಡಬಹುದಾದರೂ, ಸತ್ಪ್ರಜೆಗಳು ಎಂದಿಗೂ ಕ್ಷಮಿಸಿ ಮರೆಯಲಾರರು. ಕಾಲ ಬದಲಾಗಿರಬಹುದು, ಆದರೆ ಮೌಲ್ಯಗಳು ಬದಲಾಗಲಾರವು. ಇಂದಿಗೂ ಜಗತ್ತಿನಲ್ಲಿ ಅನೈತಿಕತೆಯನ್ನು ಸಾರ್ವಜನಿಕವಾಗಿ ಒಪ್ಪುವ ಮನಸ್ಥಿತಿ ಬಾರದಿರುವುದು ದೊಡ್ಡ ಪುಣ್ಯವೆಂತಲೇ ಹೇಳಬೇಕು.

“When Wealth is lost, nothing is lost. When Health is lost, something is lost. When Character is lost, everything is lost ‘’ ಎಂಬುದೊಂದು ಸಾರ್ವಕಾಲಿಕ ಉಕ್ತಿಯಿದೆ. ಈ ಮಾತನ್ನು ಅದ್ಯಾರೋ ಪ್ರಾಜ್ಞನೇ ಹೇಳಿರಬೇಕು. ವಿಶ್ವಾಮಿತ್ರನಂಥ ಸನ್ಯಾಸಿಯು ಮೇನಕೆಯ ಸಂಗ ಮಾಡಿ, ತನ್ನ ಸಾವಿರಾರು ವರ್ಷಗಳ ತಪಸ್ಸನ್ನು ಹಾಳುಮಾಡಿಕೊಂಡ, ವಸಿಷ್ಠರಂಥವರಿಂದ ಗೇಲಿಗೊಳಗಾದ. ಆಮೇಲೆ ಅದೇನೆಲ್ಲಾ ಸಾಧನೆ ಮಾಡಿದನಾದರೂ ಕಪ್ಪುಚುಕ್ಕೆ ಅವನನ್ನು ಬಿಡಲಿಲ್ಲ.

ಜನನಾಯಕರೆನಿಸಿಕೊಂಡವರು, ಉನ್ನತ ಆಧ್ಯಾತ್ಮಿಕ ಸಾಧಕರೆನಿಸಿಕೊಂಡವರೇ ಈ ಸತ್ಯವನ್ನು ಅಲಕ್ಷಿಸಿದರೆ, ಭಗವಂತನೇ ಬಂದರೂ ಅವರನ್ನು ಮೇಲೆತ್ತಲಾಗದು. ಇದು ಸಂಬಂಧಪಟ್ಟವರ ಗಮನದಲ್ಲಿರಲಿ.

(ಲೇಖಕರು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಚಾರ್ಯರು)