Sunday, 13th October 2024

ವಂಚನೆಯ ಅರಿವಿರಲಿ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಜಗತ್ತು ವೇಗವಾಗಿ ಸಾಗುತ್ತಿದೆ. ಸಮಯವು ಕೂಡ ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾಗದ ಸಾಧನವಾಗಿರುವುದರಿಂದ ಚಲಿಸುತ್ತಲೇ ಇದೆ. ಸಮಾಜ ದಿನನಿತ್ಯ ನಾನಾ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದು, ಪರೋಪಕಾರದ ಕೆಲಸದ ಮಧ್ಯೆ ವಂಚನೆಗೊಳಗಾದ ಮಂದಿಯ, ನಯವಂಚಕರ ಸುದ್ದಿ
ಗಳನ್ನು ಕೂಡ ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ.

ಸ್ವಾರ್ಥ, ಆಮಿಷಗಳು ಎಂಥ ವ್ಯಕ್ತಿಯನ್ನೂ ಇಂದು ಖೆಡ್ಡಾಕ್ಕೆ ಬೀಳಿಸುತ್ತಿವೆ. ಮೋಸ ಹೋಗುವವರ, ಮೋಸ ಮಾಡುವವರ ಸಂಖ್ಯೆ ಸಮಾಜದಲ್ಲಿ ದಿನೇದಿನೆ ಹೆಚ್ಚುತ್ತಿದೆ. ಜನಸಾಮಾನ್ಯರು ಎಷ್ಟೇ ಬುದ್ಧಿವಂತಿಕೆ ಪ್ರದರ್ಶಿಸಿದರೂ ನಯವಂಚಕರು ರಂಗೋಲಿ ಕೆಳಗೆ ತೂರುವಷ್ಟು ಚಾಕಚಕ್ಯತೆ ಯನ್ನು ಹೊಂದಿರುವ ಕಾರಣಕ್ಕೆ ದಿನಗಳೆದಂತೆ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿ ಈ ಹಿಂದೆ ನಡೆದ ಕೆಪಿಎಸ್‌ಸಿ ಮತ್ತು ಪಿಎಸ್‌ಐ ನೇಮಕಾತಿ ಹಗರಣ, ಕೆಪಿಟಿಸಿಎಲ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವಾರು ವಂಚನೆಗಳು ಬಹಳ ಕಾಲದಿಂದ ನಡೆಯುತ್ತಾ ಬಂದಿವೆ.

ಒಂದು ಇಲಾಖೆಯಲ್ಲಿ ರಾಜ್ಯವ್ಯಾಪಿ ೩೦೦-೪೦೦ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಕೆಲವೇ ತಿಂಗಳಲ್ಲಿ ಲಿಖಿತ ಪರೀಕ್ಷೆಗಳನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸ ಲಾಗುತ್ತದೆ. ಇಲ್ಲಿಂದಲೇ ಕೆಲವು ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಇಂತಿಷ್ಟು ಹಣ ಪಡೆದು ಪ್ರಶ್ನೆಪತ್ರಿಕೆಯನ್ನೇ ಸೋರಿಕೆ ಮಾಡುವ, ಬ್ಲೂ ಟೂಥ್ ಮುಂತಾದ ಸಾಧನಗಳನ್ನು ಬಳಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ, ಲಕ್ಷಗಟ್ಟಲೆ ಹಣ ನೀಡಿದ ಅಭ್ಯರ್ಥಿಗಳಿಗೆ ತಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಮುಂಚಿತವಾಗಿಯೇ ಸೂಚನೆ ನೀಡಿ ಉಳಿದ ಪ್ರಶ್ನೆಗಳಿಗೆ ತಾವೇ ಉತ್ತರ ಭರ್ತಿ ಮಾಡಿ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಮಾಡಿ ಕೊಡುವ ವ್ಯವಸ್ಥೆಗಳನ್ನು ಮಾಡಿದ್ದೂ ಇದೆ.

ಇಂಥ ಅವ್ಯವಹಾರಗಳ ಪೈಕಿ ಕೆಲವಷ್ಟೇ ಬೆಳಕಿಗೆ ಬರುವುದು ಬಿಟ್ಟರೆ, ಬಾಕಿ ಉಳಿದವು ಭ್ರಷ್ಟಾಚಾರಿಗಳ ಮೂಗಿನ ನೇರಕ್ಕೆ ತಕ್ಕಂತೆ ನಡೆಯುತ್ತವೆ.
ಇದರಿಂದಾಗಿ, ಹಣ ಉಳ್ಳವರು, ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷ ಹೊಂದಿರುವವರು ಸರಕಾರಿ ಉದ್ಯೋಗ ಪಡೆಯಲು ಶಕ್ತರಾಗುತ್ತಾರೆ; ಮತ್ತೊಂದೆಡೆ ಉದ್ಯೋಗ ಪಡೆಯಲೆಂದು ಪ್ರಾಮಾಣಿಕವಾಗಿ ವರ್ಷಾನುಗಟ್ಟಲೆ ತಯಾರಿ ನಡೆಸಿ, ವಿಶೇಷ ತರಬೇತಿ ಪಡೆದು, ಶುಲ್ಕ ಪಾವತಿಸಿದ
ಪರಿಶ್ರಮಿ ಅಭ್ಯರ್ಥಿಗಳ ಭವಿಷ್ಯಕ್ಕೆ ಕಲ್ಲು ಬಿದ್ದಂತಾಗುತ್ತದೆ. ಇನ್ನು ಯಾವುದೇ ಒಂದೆರಡು ಜಿಲ್ಲೆಗಳಲ್ಲಿ ಇಂಥ ಅಕ್ರಮಗಳು ಕಂಡುಬಂದಾಗ ಅಭ್ಯರ್ಥಿಗಳು ಕೋರ್ಟ್ ಮೊರೆಹೋಗಿ ತಡೆಯಾe ಬಂದರಂತೂ ಮರುನೇಮಕಾತಿ ನಡೆಯಬೇಕಾಗುತ್ತದೆ.

ಮೊದಲೆಲ್ಲಾ ಒಂದು ಇಲಾಖೆಯ ನೇಮಕಾತಿ ಪ್ರಕ್ರಿಯೆಗಳು, ಲಿಖಿತ ಪರೀಕ್ಷೆ, ಸಂದರ್ಶನ ಎಂದೆಲ್ಲಾ ೬ ತಿಂಗಳೊಳಗಾಗಿ ಪೂರ್ಣಗೊಳ್ಳುತ್ತಿದ್ದವು. ಈಗ ಕನಿಷ್ಠ ೧ ವರ್ಷವಾದರೂ ಪೂರ್ಣಗೊಳ್ಳುವುದು ಅನುಮಾನ. ಈ ತಡೆಯಾಜ್ಞೆ, ನೇಮಕಾತಿ ವಿಳಂಬದಂಥ ಸಮಸ್ಯೆಗಳು ಪ್ರಮುಖವಾಗಿ ವಯಸ್ಸು ಮೀರುತ್ತಿರುವ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುವ ಸಾಧ್ಯತೆಗಳೇ ಹೆಚ್ಚು.

ಸರಕಾರಿ ಉದ್ಯೋಗದ ನೇಮಕಾತಿಯಲ್ಲಿನ ವ್ಯಾಪಕ ಭ್ರಷ್ಟಾಚಾರ, ಕರ್ಮಕಾಂಡಗಳಿಗೆ ಕೆಲ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳೇ ಕಾರಣರಾಗಿ ರುವ ಉದಾಹರಣೆಗಳಿವೆ. ಇತ್ತೀಚಿನ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಒಂದೆರಡು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅನೇಕ ಉನ್ನತಾಧಿಕಾರಿಗಳ ತಲೆದಂಡ ವಾಗಿದ್ದರ ಜತೆಗೆ, ಕೆಲವು ಪರೀಕ್ಷಾ ಕೇಂದ್ರಗಳಲ್ಲೇ ಅಕ್ರಮಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿರುವುದು, ಕೆಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೇ ಇದಕ್ಕೆ ಸಾಥ್ ನೀಡಿರುವುದು ಬೆಳಕಿಗೆ ಬಂದಿತ್ತು.

ಇನ್ನು ತಮ್ಮ ಹೊಲ, ಆಸ್ತಿ, ಮನೆಮಂದಿಯ ಚಿನ್ನಾಭರಣ ಮಾರಿದ್ದು ಸೇರಿದಂತೆ, ಬ್ಯಾಂಕ್ ಸಾಲ ಎಂದೆಲ್ಲಾ ಉದ್ಯೋಗಕ್ಕೆ ಹಣ ನೀಡಿದವರ ಕಥೆ ಬೇರೆಯೇ ಇದೆ. ಯಾವುದೇ ಹೈಪ್ರೊ-ಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ರದ್ದು ಗೊಂಡರೆ ಹೀಗೆ ನೀಡಿದ ಹಣವನ್ನು ಅಭ್ಯರ್ಥಿ ಕಳೆದು ಕೊಂಡಂತೆಯೇ ಸರಿ. ದಿನಪತ್ರಿಕೆಗಳನ್ನು ತಿರುವಿಹಾಕಿದಾಗ ‘ಉದ್ಯೋಗ ಕೊಡಿಸುವುದಾಗಿ ವಂಚನೆ’, ‘ಉದ್ಯೋಗಕ್ಕಾಗಿ ಹಣ ಪಡೆದು
ಮೋಸ’ ಮುಂತಾದ ತಲೆಬರಹಗಳನ್ನು ಕಾಣುತ್ತವೆ. ಉದ್ಯೋಗಾಕಾಂಕ್ಷಿಗಳನ್ನು ವಂಚಕರು ಯಾವ ಮಟ್ಟದಲ್ಲಿ ಯಾಮಾರಿಸುತ್ತಾರೆಂದರೆ ಒಂದು ಇಲಾಖೆಯ ಮುಖ್ಯಸ್ಥರ ನಕಲಿ ಸಹಿ, ಮುದ್ರೆ, ಐಡಿ, ಆದೇಶ ಪತ್ರದವರೆಗೂ ಅಸಲಿಯೆಂದು ನಂಬಿಸಿ ಮುಂಗಡ ಹಣ ಪಡೆದು ತರಬೇತಿ ನೆಪದಲ್ಲಿ ಎಲ್ಲೆಲ್ಲೋ ಸುತ್ತಾಡಿಸಿ ದಿನಭತ್ಯೆ, ಪ್ರಯಾಣ ಭತ್ಯೆ ಎಂದೆಲ್ಲಾ ನೀಡಿ ನಂಬಿಸಿ ಕತ್ತುಕೊಯ್ಯುವಷ್ಟರ ಮಟ್ಟಿಗೆ!

ಇಂಥ ಬೆಳವಣಿಗೆಗಳಿಗೆ ಅತಿಯಾದ ನಂಬಿಕೆ ಒಂದು ಕಾರಣವಾದರೆ, ಹಣ-ಅಽಕಾರದ ವಿಚಾರದಲ್ಲಿ ಯಾರಲ್ಲೂ ಅತಿಯಾದ ವಿಶ್ವಾಸವಿಡಬಾರದು ಎಂಬ ಅರಿವಿಲ್ಲದಿರುವುದು ಮತ್ತೊಂದು ಕಾರಣವಾಗಿದೆ. ಪ್ರತಿ ಇಲಾಖೆಯ ನೇಮಕಾತಿ ಸಂದರ್ಭದಲ್ಲೂ ರಾಜಕಾರಣಿಗಳ, ಉನ್ನತಾಽಕಾರಿಗಳ ಆಪ್ತರ ಹೆಸರಿನಲ್ಲಿ ಮಧ್ಯವರ್ತಿಗಳು ಉದ್ಯೋಗಾಕಾಂಕ್ಷಿಗಳನ್ನು ಯಾಮಾರಿಸುತ್ತಿರುವ ಪರಿಪಾಠವು ಕಾನ್ಸ್‌ಟೇಬಲ್ ಹುದ್ದೆಯಿಂದ ಹಿಡಿದು ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಯವರೆಗೂ ನಡೆಯುತ್ತಿರುವುದು ಜಗಜ್ಜಾಹೀರಾಗಿದ್ದರೂ, ಉದ್ಯೋಗಾಕಾಂಕ್ಷಿಗಳು ಇಂಥ ವ್ಯಕ್ತಿಗಳನ್ನೇ ನಂಬಿ ಇದ್ದ ಬದ್ದ ದುಡ್ಡನ್ನೆಲ್ಲ ಕೊಟ್ಟು ಪದೇಪದೆ ಮೋಸಹೋಗು ತ್ತಿರುವುದೇಕೆ? ‘ನಮ್ಮಲ್ಲಿ ಯಾವುದೇ ಮಧ್ಯವರ್ತಿಗಳ, ಏಜೆಂಟುಗಳ ಅಥವಾ ಹಣದ, ಪತ್ರವ್ಯವಹಾರದ ವ್ಯವಸ್ಥೆ ಯಿಲ್ಲ; ಈ ಬಗ್ಗೆ ಎಚ್ಚರಿಕೆಯಿಂದಿದ್ದು ಇಂಥ ವ್ಯಕ್ತಿಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ’ ಎಂಬುದಾಗಿ ಸರಕಾರಗಳು
ಹೊರಡಿಸುವ ಅಧಿಸೂಚನೆ ಪತ್ರದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಹೀಗೆ ಹಣ ಕಳೆದುಕೊಳ್ಳುವವರನ್ನು ಏನನ್ನಬೇಕು? ಉದ್ಯೋಗಾಕಾಂಕ್ಷಿಗಳು ಅಂಧನಂಬಿಕೆಯಿಂದ ಹೊರಬರ ಬೇಕಿದೆ. ಯುವಸಮಾಜವು ಪಾರದರ್ಶಕ ವ್ಯವಸ್ಥೆಗೆ ಭದ್ರಬುನಾದಿ ಹಾಕಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ
ಕಟ್ಟುವವರಾರು?