Thursday, 12th December 2024

ರಾಜವರ್ಮರ ಬಹುಬೆಳೆ, ಮಿತ ಖರ್ಚು, ರಾಸಾಯನಿಕ ಮುಕ್ತ ಕೃಷಿ

ಸುಪ್ತ ಸಾಗರ

rkbhadti@gmail.com

ಒಂದೇ ಬೆಳೆಗೆ ಜೋತುಬಿದ್ದು, ಮಿತಿ ಮೀರಿದ ಹೂಡಿಕೆ ಮಾಡಿ, ಸಾಲದಲ್ಲಿ ಮುಳುಗುತ್ತಿರುವುದರಿಂದಲೇ ಕೃಷಿಯ ನಷ್ಟಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಅರಿತ ಈ ಕೃಷಿಕ, ಸಾಂಪ್ರದಾಯಿಕ ಪದ್ಧತಿಗಳನ್ನು ಬಿಟ್ಟು ಪ್ರಗತಿಪರವಾಗಿ ಯೋಚಿಸುತ್ತಾ ಇಂದು ಬೇಸಾಯದಲ್ಲಿ ಗೆದ್ದಿದ್ದಾರೆ. ಕೀಟ, ರೋಗಬಾಧೆಗಳ ನಿಯಂತ್ರಣವಲ್ಲದೇ ಬೆಲೆ ಏರಿಳಿತಗಳಿಂದಲೂ ಪಾರಾಗಲು ಬಹು ಬೆಳೆ ಪದ್ಧತಿಯೇ ಸೂಕ್ತವೆನ್ನುವ ದರೆಗುಡ್ಡೆಯ ರಾಜವರ್ಮ ಬೈಲಂಗಡಿಯವರ ಕೃಷಿ ತಜ್ಞತೆ, ಇಂದು ಯಾವ ವಿಜ್ಞಾನಿಗೂ ಕಡಿಮೆ ಇಲ್ಲ.

ಹೌದು, ಮಂಗಳೂರು ತಾಲೂಕು, ಮೂಡಬಿದ್ರೆಯಿಂದ ೧೭ ಕಿಲೋ ಮೀಟರ್ ದೂರದ ಹುಳಿ ಯಾರು ರಸ್ತೆಯಲ್ಲಿರುವ ದರೆಗುಡ್ಡೆ ಗ್ರಾಮದ ರಾಜವರ್ಮರ ತೋಟವೆಂದರೆ ಒಂದು ರೀತಿಯಲ್ಲಿ ಪುಟ್ಟ ಕೃಷಿ ಪ್ರಯೋಗ ಶಾಲೆಯೇ. ಮೊದಲಿಂದಲೂ ಕೃಷಿಯಲ್ಲಿ ಅಪಾರ ಸಕ್ತಿ ಹೊಂದಿದ್ದ ಅವರು, ಬ್ಯಾಂಕ್ ನೌಕರಿಯಿಂದ ನಿವೃತ್ತಿಯ ಬಳಿಕ ಸಂಪೂರ್ಣ ತಮ್ಮನ್ನು ತಾವು ಕೃಷಿ-ಗ್ರಾಮೀಣಾ ಭಿವೃದ್ಧಿಗೆ ತೊಡಗಿಸಿಕೊಂಡವರು.

ನೌಕರಿಯಲ್ಲಿದ್ದಾಗಲೇ ಹಳ್ಳಿಗಳ ಸಮಸ್ಯೆ, ಕೃಷಿಯ ಆಗು-ಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಲೇ ಬಂದಿದ್ದರು. ಯಾವತ್ತಿಗೂ ರಾಜವರ್ಮರು ತಮ್ಮ ತೋಟದಲ್ಲಿ ತಂತಾನೆ ಬೆಳೆಯುವ ಸಸ್ಯಗಳನ್ನು ವ್ಯರ್ಥ ಕಳೆಯೆಂದು ನಿರ್ಲಕ್ಷಿಸಿಲ್ಲ. ಅದರ ನಿರ್ಮೂಲನೆಗಾಗಿ ರಾಸಾ ಯನಿಕ ಗಳನ್ನಾಗಲೀ, ಆಧುನಿಕ ಕಳೆನಾಶಕ ಸಿಂಪಡಿಸುವ ಗೋಜಿಗೇ ಹೋದವರಲ್ಲ. ಅವರ ಪ್ರಕಾರ, ಕಳೆನಾಶಕದ ಹಾನಿಕಾರಕ ಅಂಶ ಭೂಮಿಗೆ ಸೇರುವುದರಿಂದಲೇ ಮಣ್ಣಿನ ಸೂಕ್ಷ್ಮಾಣಿ ಜೀವಿಗಳು ನಾಶವಾಗುತ್ತವಲ್ಲದೇ, ಹೆಚ್ಚಿನ ನೀರನ್ನು ಬೆಳೆಗಳು ಬೇಡುವಂತಾಗುತ್ತದೆ.

ಬಹು ದೀರ್ಘಕಾಲ ವರೆಗೆ ಮಣ್ಣಿನಲ್ಲಿ ತೇವಾಂಶವನ್ನು ರಕ್ಷಿಸುವ, ಕೀಟಗಳಿಂದ ಬೆಳೆಯನ್ನು ರಕ್ಷಿಸುವ ಕೆಲಸವನ್ನು ಕಳೆಗಳು ಮಾಡುತ್ತವೆ. ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಂಡು ಅಂತರ್ಜಲಕ್ಕೆ ಸೇರಿಸುವ ಮಹದುಕಾರವನ್ನು ಮಾಡುವ ಕಳೆಗಳ ಮೌಲ್ಯ ಅರಿಯದೇ ಅವನ್ನು ನಾಶಗೊಳಿಸಿ ಸಾಕಷ್ಟು ಲಾಭಗಳನ್ನು ಬಹುತೇಕ ರೈತರು ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ.

ಇನ್ನೊಂದು ಗಮನಿಸಲೇಬೇಕಾದ ಮಹತ್ವಪೂರ್ಣ ಅಂಶವೆಂದರೆ ಕಲುಷಿತ ನೀರನ್ನು ಶುದ್ಧಗೊಳಿಸಿ, ಅಂತರ್ಜಲಕ್ಕೆ ಬಸಿದು ಸೇರುವಂತೆ ಮಾಡುವಲ್ಲಿ ಕಳೆ ಗಿಡಗಳ ಪಾತ್ರ ಹಿರಿದು. ಮಳೆ ಬಂದಾಗ ಮೇಲ್ಮಣ್ಣು ಕೊಚ್ಚಿ ಹೋಗಿ ಕೆರೆಕುಂಟೆಗಳಿಗೆ ಸೇರಿ ಹೂಳು ತುಂಬುವಂತಾಗುತ್ತದೆ. ಇದನ್ನು ತಪ್ಪಿಸುವ ಕೆಲಸವನ್ನು ಮಾಡುವುದೇ ಕಳೆಗಳು. ಅದರ ಬೇರುಗಳು ಬಹು ಆಳದವರೆಗೆ ಭೂಮಿಯಲ್ಲಿ ಹರಡಿಕೊಂಡಿರುವುದರಿಂದ
ಮಣ್ಣಿನ ಸವಕಳಿ ತಪ್ಪುತ್ತದೆ. ಜತೆಗೆ ಮಣ್ಣಿನಲ್ಲಿ ಸಾರಜನಕ ಆಂಶವನ್ನು ರಕ್ಷಿಸುವಲ್ಲಿಯೂ ಸಹ ಕಳೆಗಳ ಪಾತ್ರ ದೊಡ್ಡದು ಎಂದು ಪ್ರತಿಪಾದಿಸುತ್ತಾರೆ ರಾಜವರ್ಮರು.

ಹೀಗಾಗಿ ಅವರ ತೋಟದಲ್ಲಿ ಬೆಳೆಗಳಿಗೆ ಧಕ್ಕೆ ತರುವ ಕಳೆಗಳ ನಿಯಂತ್ರಣವನ್ನು ಮಾಡುತ್ತಾರೆಯೇ ಹೊರತೂ, ಎಂದಿಗೂ ಕಳೆ ಕೀಳುವ, ಅದನ್ನು ನಾಶಗೊಳಿಸುವ ಪ್ರಕ್ರಿಯೆಗೆ ಎಂದಿಗೂ ಒಂದು ನಯಾಪೈಸೆ ಯನ್ನೂ ಖರ್ಚು ಮಾಡಿಯೇ ಇಲ್ಲ. ತೋಟದಲ್ಲಿ ತಂತಾನೆ ಸಮೃದ್ಧವಾಗಿ ಬೆಳೆಯುವ
ಸಸ್ಯಗಳೂ ಕೃಷಿ ಹಾಗೂ ಪರಿಸರಕ್ಕೆ ವರದಾನ. ಎಲ್ಲ ಸಸ್ಯಗಳ ನಿರ್ವಹಿಸುವ ಕಾರ್ವನ್ನೇ ಅವೂ ನಿರ್ವಹಿಸುವುದರಿಂದ ಶುದ್ಧ ಆಮ್ಲಜನಕವನ್ನು ವಾತಾವರಣಕ್ಕೆ ಸೇರಿಸಿ, ನೀರು-ನೆಲ ಹಾಗೂ ಗಾಳಿಯನ್ನು ಮಾಲಿನ್ಯ ರಹಿತವಾಗಿಡುವಲ್ಲಿ ಕಳೆಗಳ ಕಾರ್ಯ ಮಹತ್ವಪೂರ್ಣವಾದುದು. ಮಾತ್ರವಲ್ಲ, ಅವುಗಳನ್ನು ಆಗಾಗ ಕತ್ತರಿಸಿ ಜಾನುವಾರುಗಳಿಗೆ ಮೇವಾಗಿ, ಕೊಟ್ಟಿಗೆಯ ನೆಲ ಹಾಸಾಗಿಯೂ ಉಪಯೀಗಿಸಬಹುದು.

ಇದರಿಂದ ಜಾನುವಾರುಗಳು ಅದನ್ನು ತುಳಿದು, ಸಗಣಿ- ಗಂಜಲಗಳು ಬೆರೆತು ಚೆನ್ನಾಗಿ ಕಳಿಯುತ್ತವೆ. ಪ್ರತಿ ಎರಡು ದಿನಕ್ಕೊಮ್ಮೆ ಕೊಟ್ಟಿಗೆಯಲ್ಲಿ ಮೇಲಿಂದ ಮೇಲೆ ಹೊಸ ಕಳೆ ಸೊಪ್ಪನ್ನು ಹಾಕುತ್ತಾ ಬಂದು, ವಾರಾಂತ್ಯಕ್ಕೆ ತೆಗೆದು ಗೊಬ್ಬರದ ಗುಂಡಿಗೆ ಸೇರಿಸುವುದರಿಂದ ಹೆಚ್ಚು ಪ್ರಮಾಣದಲ್ಲಿ ಅತ್ಯುತ್ತಮ ಗುಣಮಟ್ಟದ ಕಾಂಪೋಸ್ಟ ತಯಾರಾಗುತ್ತದೆ. ಹೀಗೆ ಕಳಿತ ಸಾವಯವ ಗೊಬ್ಬರದಿಂದ ಬೆಳೆಗಳಿಗೆ ಉತ್ತಮ ಪೋಷಕಾಂಶ ದೊರೆಯು ತ್ತದೆ. ಕಳೆಗಳನ್ನುಸಂಪೂರ್ಣ ಕಿತ್ತು ನಾಶ ಮಾಡುವ ಬದಲು ಯಂತ್ರಗಳ ಸಹಾಯದಿಂದ ಬುಡಮಟ್ಟಕ್ಕೆ ಕತ್ತರಿಸಿ ಅಡಕೆ, ತೆಂಗು, ಹಣ್ಣಿನ ಮರಗಳ ಬುಡಕ್ಕೆ ಮುಚ್ಚಿಗೆ ಮಾಡುವುದರಿಂದ, ತೇವಾಂಶ ಹಾಗೂ ಸಾರದ ಸಂರಕ್ಷಣೆಯೂ ಆಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಕೇವಲ ಹಾಲಿಗಾಗಿ ಹಸು ಸಾಕುವ ಬದಲು, ಗೊಬ್ಬರ ಹಾಗೂ ಕೃಷಿಗೆ ಪೂರಕ ಸಂಗತಿಗಾಳಿಗಾಗಿ ಜಾನುವಾರುಗಳು ಇರಬೇಕು ಎಂಬ ಸತ್ಯವನ್ನು ಮನಗಂಡಿದ್ದಾರೆ. ವಿದೇಶದ ತಳಿಗಳು ಹೆಚ್ಚಿನ ಖರ್ಚಿಗೆ ದಾರಿ. ಅದರ ಬದಲು ರೋಗ ನಿರೋಧಕ ಶಕ್ತಿ ಹೊಂದಿರುವ ಸ್ಥಳೀಯ ಗಿಡ್ಡ ತಳಿಗಳಂಥವೇ ಉಪಯುಕ್ತವೆನ್ನುತ್ತಾರೆ. ಇಲ್ಲಿ ರೈತರು ವಹಿಸಬೇಕಾದ ಮುನ್ನೆಚ್ಚರಿಕೆಯೆಂದರೆ ಅನಗತ್ಯ ಹೊರೆಯಾಗುವಷ್ಟು ಸಂಖ್ಯೆಯ ಜಾನುವಾರು ಸಾಕಣೆಯೂ ಸಲ್ಲ. ರೈತ ತನ್ನ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ, ಪೂರಕ ಆದಾಯ ತರುವಷ್ಟು ಹಸುಗಳನ್ನು ಸಾಕಬೇಕು ಎಂದು ಪ್ರತಿಪಾದಿಸುತ್ತಾರೆ.

ರಾಜವರ್ಮರು ನೌಕರಿಯಲ್ಲಿದ್ದಾಗ ಹಳ್ಳಿಗಳಲ್ಲಿ ಓಡಾಡುವಾಗ ಅಲ್ಲಿನ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾಡುತ್ತಿರುವ ತಪ್ಪುಗಳನ್ನು ನೋಡುತ್ತಲೇ ಬರುತ್ತಿದ್ದರು. ಹೀಗಾಗಿ ಕೃಷಿಯ ಸಂಕಷ್ಟಕ್ಕೆ ಮೂಲ ಕಾರಣಗಳನ್ನು ಅರಿತಿದ್ದರು. ಹೀಗಾ ತಾವು ಕೃಷಿಗೆ ಇಳಿಯುವ ಮುನ್ನ ಅಂಥವನ್ನೆಲ್ಲ ಗಮನಕ್ಕೆ ತಂದುಕೊಂಡು, ಸಂಪೂರ್ಣ ಸಿದ್ಧತೆ ಮಾಡಿಕೊಂಡರು. ಯಾವುದೇ ಕಾರಣಕ್ಕೂ ಒಂದೇ ಬೆಳೆಗೆ ಜೋತು ಬೀಳದೇ ಬಹುಬೆಳೆ ಪದ್ಧತಿಯನ್ನೇ ಅನುಸರಿಸಬೇಕೆಂದು ನಿರ್ಧರಿಸಿದರು. ಈ ನಿಟ್ಟಿ ಮತ್ತೊಮ್ಮೆಓಡಾಡಿ ಸಿದ್ಧತೆ ಮಾಡಿದರು. ಯಾವ್ಯಾವ ಬೆಳೆಗಳ ಜತೆಗೆ ಯಾವ್ಯಾವ ಬೆಳೆ ಸಂಯೋಜನೆ ಮಾಡಿದರೆ ಒಳಿತು ಎಂಬುದರ ಯೋಜನೆ ರೂಪಿಸಿದರು.

ಪ್ರವಾಸ ಸಂದರ್ಭದಲ್ಲಿ ಕಂಡ ಬೇರೆಬೇರೆ ರೀತಿಯ ಹಣ್ಣುಗಳ ತಳಿಗಳನ್ನು, ಬೀಜಗಳನ್ನೂ ತಂದು ಸಂಗ್ರಹಿಸಿ, ವೈವಿಧ್ಯಮಯ ಸಸ್ಯಗಳನ್ನು ತೋಟದಲ್ಲಿ ಬೆಳೆಸಲಾರಂಭಿಸಿದರು. ಪರಿಣಾಮ ಇಂದು ಅವರ ತೋಟದಲ್ಲಿ ಅಡಕೆ, ತೆಂಗಿನ ಜತೆಗೆ, ಹತ್ತಕ್ಕೂ ಹೆಚ್ಚು ತಳಿಯ ಮಾವು, ಸಪೋಟಾ, ರಾಮ-ಲಕ್ಷ್ಮಣ ಫಲ, ಜಂಬೆ, ಡ್ರಾಗನ್ ಫ್ರೂಟ್, ಮ್ಯಾಂಗೋಸ್ಟ, ಬಾಳೆ, ಮಣಸು, ಕೋಕ್ಕೋ, ಏಲಕ್ಕಿ, ಜಾಯಿಕಾಯಿ ಹೀಗೆ ಬೆಳೆ ಸಾಮ್ರಾಜ್ಯವೇ ಇದೆ.

ಇನ್ನು ಕರಾವಳಿ ಪ್ರದೇಶವೆಂದರೆ ಗೇರುಕೃಷಿಗೆ ಹೆಸರುವಾಸಿ, ಆಧುನಿಕ-ಸಾಂಪ್ರದಾಯಿಕ ಗೇರು ತಳಿಗಳು ಇವರಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ, ಅತ್ಯಂತ ಲಾಭದಾಯಕ ಒಣಭೂಮಿ ಗೇರು ಕೃಷಿಗೆ ಪ್ರಾಮುಖ್ಯ ನೀಡಿರುವ ರಾಜವರ್ಮರು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಭತ್ತದ ಕೃಷಿಯಲ್ಲಿಯೂ ಹಿಂದೆ ಬೀಳದ ಅವರು, ಗದ್ದೆಯಲ್ಲೂ ಶುಂಠಿ, ಅನಾನಸು, ಅರಿಷಿನ, ತರಕಾರಿಗಳ ಮಿಶ್ರ ಬೆಳೆಗಳ ಮೂಲಕ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಸುಮಾರು ೧೨ ಎಕರೆ ವಿಸ್ತೀರ್ಣದ ಜಮೀನಿನ ಒಂದಿಂಚು ಜಾಗವನ್ನೂ ಇವರು ವ್ಯರ್ಥ ಮಾಡಿಲ್ಲ. ಪ್ರತಿ
ಯೊಂದು ಬೆಳೆಯನ್ನು ಯೋಜಿಸಿ ಅಳವಡಿಸಿದ್ದಾರೆ.

ತೋಟ ಹಾಗೂ ಹೊಲಕ್ಕೆ ಬೇಕಾದ ಎಲೆ ಗೊಬ್ಬರಕ್ಕಾಗಿಯೇ ಪ್ರತ್ಯೇಕ ಸುಮಾರು ೬ ಎಕರೆಯಲ್ಲಿ ಮರಗಳನ್ನು ಬೆಳೆಸಿ ಖಾಸಗಿ ಸೊಪ್ಪಿನ ಬೆಟ್ಟವನ್ನು ರೂಪಿಸಿಕೊಂಡಿದ್ದಾರೆ. ಮನೆಯಲ್ಲಿ ಸಾಕಿರುವ ಜಾನುವಾರುಗಳನ್ನೂ ಇಲ್ಲಿಯೇ ಸ್ವಚ್ಛಂದವಾಗಿ ಅಡ್ಡಾಡಿ ಹಸಿರು ಹುಲ್ಲು ಮೇಯಲು ಬಿಡುತ್ತಾರೆ. ಹೀಗಾಗಿ ಮಳೆಗಾಲದ ಎಡ-ಬಲ ವರ್ಷದ ಸುಮಾರು ೬ ತಿಂಗಳು ಹಸಿರು ಮೇವಿಗೆ ಕೊರತೆಯೆಂಬುದೇ ಇಲ್ಲ. ಇದರಿಂದ ಉತ್ತಮ ಗುಣಮಟ್ಟದ ಹೈನು ಸಹ ದಕ್ಕುತ್ತದೆ. ತೀರಾ ನಡು ಮಳೆಗಾಲದಲ್ಲಿ ಅಡಕೆ ತೋಟದಲ್ಲಿ ಬೆಳೆಯುವ ಹುಲ್ಲನ್ನು ಮೇಯಲು ಸಹ ಹಸುಗಳನ್ನು ಬಿಡುವುದಿದೆ.
ಹೆಚ್ಚು ಎತ್ತರಕ್ಕೆ ಹುಲ್ಲು-ಕಳೆಗಳು ಬೆಳೆದರೆ ಆಗಾಗ ಕತ್ತರಿಸಿ ಮರದ ಬುಡಕ್ಕೇ ಹಾಕುತ್ತಾರೆ. ಇದರಿಂದ ಸದಾ ತೋಟ ತಂಪಿನಿಂದ ಕೋಡಿರುತ್ತದೆ ಎಂಬುದು ಅವರ ಅಭಿಪ್ರಾಯ.

ಪೋಷಕಾಂಶ, ಗೊಬ್ಬರದ ಹೆಸರಿನಲ್ಲಿ ಅನಗತ್ಯ ಹಣ ಖರ್ಚು ಮಾಡುವುದರಿಂದಲೇ ಬಹುತೇಕ ರೈತರು ಹೈರಾಣಾಗುತ್ತಾರೆ. ಇದಲ್ಲದೇ ಕಳೆ ಕೀಳುವುದು, ನೀರು ಹರಿಸುವುದು ಹೀಗೆ ವಿವಿಧ ಕೆಲಸಗಳ ಹೊರೆಯನ್ನು ರೈತರು ತಮ್ಮ ಮೇಲೆ ತಾವುಹೇರಿಕೊಳ್ಳುತ್ತಾರೆ. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿದರೆ ರೈತ ತನ್ನ ಕೆಲಸ ಹಾಗೂ ಖರ್ಚು ಎರಡನ್ನೂ ಕಡಿಮೆ ಮಾಡಿಕೊಳ್ಳಬಹುದು. ಒಮ್ಮೆ ಯೋಚಿಸಿ, ಕೃಷಿ ಕಾರ್ಮಿಕರಿಗೆ
ನೀಡುವ ಕೂಲಿಯ ಹಣ ಯಾವತ್ತಿಗೂ ಹಿಂತಿರುಗಿ ಬರಲು ಸಾಧ್ಯವೇ ಇಲ್ಲ ಎನ್ನುವ ರಾಜವರ್ಮರು, ತಮ್ಮ ತೋಟದಲ್ಲಿ ಖರ್ಚನ್ನು ಮಿತಿಗೊಳಿಸಿದ ಪರಿಯನ್ನು ವಿರಿಸುತ್ತಾರೆ.

ಬೆಳೆಗಳ ನಡುವೆಯೇ ಇನ್ನೊಂದು ಬೆಳೆಯನ್ನು ಹಾಕುವುದರಿಂದ ಒಂದೇ ಪೋಷಕಾಂಶದಲ್ಲಿ ಎರಡು ಲಾಭ ಸಿಕ್ಕಂತಾಗುತ್ತದೆ. ಹಾಗೆಯೇ ಒಂದರ
ಸಮಸ್ಯೆಯನ್ನು ಇನ್ನೊಂದು ಹೊಡೆದೋಡಿಸುವ ಅಥವಾ ತಾಳಿಕೊಳ್ಳುವ ಸಾಮರ್ಥ್ಯವನ್ನು ತೋರುತ್ತವೆ. ಉದಾಹರಣೆಗೆ ಗೇರು ಗಿಡಗಳನ್ನು ಮಾವಿನ ಗಿಡಗಳ ಜತೆಜತೆಗೇ ಹಾಕಿದ್ದೇನೆ. ಅದರ ಜತೆಗೆ ಬೇರೆ ಹಣ್ಣಿನ ಗಿಡಗಳೂ ಇವೆ. ಹೀಗಾಗಿ ಆಯಾ ಸೀಸನ್ ನಲ್ಲಿ ಆಯಾ ಬೆಳೆಗಳು ಪರ್ಯಾಯವಾಗಿ ಫಸಲು ಕೊಟ್ಟು ಆದಾಯದ ಸಮತೋಲನ ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅವರು.

ಫಸಲು ದೊರಕಿದ ಆರಂಭಿಕ ವರ್ಷಗಳಲ್ಲಿಯೇ ಲಾಭದಾಯಕ ಎನಿಸಿದೆ. ಇದಕ್ಕೆ ಕಾರಣಗಳು ಹಲವಾರು. ಈ ತೋಟದಲ್ಲಿ ಮಾವಿನ ಗಿಡಗಳೂ ಇವೆ. ಸಾಮಾನ್ಯವಾಗಿ ರೈತರು ಹೆಚ್ಚಿನ ಖರ್ಚು ಮಾಡುವುದೇ ಪೋಷಕಾಂಶಗಳಿಗಾಗಿ. ರಾಸಾಯನಿಕ ಗೊಬ್ಬರಕ್ಕಾಗಿ ವ್ಯಯಿಸುವುದರಿಂದ ಲಾಭ ಕಡಿಮೆ ಯಾಗುತ್ತದೆ. ಮಾತ್ರವಲ್ಲ, ವರ್ಷದಿಂದ ವರ್ಷಕ್ಕೆ ರಾಸಾಯನಿಕಗಳ ಬಳಕೆಯನ್ನೂ ಅನಿವಾರ್ಯವಾಗಿ ಹೆಚ್ಚಿಸ ಬೇಕಾಗುತ್ತದೆ. ಇದರಿಂದ ಹೊರಬಂದು ಸ್ವಾವಲಂಬಿಯಾಗಬೇಕು ಎಂದು ಚಿಂತಿಸಿದ ರಾಜವರ್ಮರು ಮಣ್ಣಿಗೆ ಬೇಕಾದ ಎಲ್ಲ ಪೋಷಕಾಂಶಗಳನ್ನು ತೋಟದ ವಾತಾವರಣದ ಪೂರೈಸಿಕೊಳ್ಳುತ್ತಾರೆ.

ಪ್ರಗತಿಪರ ಕೃಷಿಕ ಎನಿಸಿಕೊಂಡಿರುವ ರಾಜವರ್ಮರು ಕೃಷಿಯ ಜತೆಜತೆಯಲ್ಲಿಯೇ ಬೇರೆ ಏನೆಲ್ಲ ಮಾಡಬಹುದೋ ಅದೆಲ್ಲ ಸಾಧ್ಯತೆಗಳನ್ನೂ ಪ್ರಯೋಗಕ್ಕಿಳಿಸಿದ್ದಾರೆ. ನಷ್ಟಕ್ಕೆ ಕಾರಣವೇನು ಎಂಬುದರ ಬಗ್ಗೆ ಯೋಚಿಸುವುದರ ಜತೆ ಜತೆಗೇ ಏನು ಮಾಡಿದರೆ ಲಾಭದಾಯಕ ಎಂಬುದನ್ನೂ ಚಿಂತಿಸಿ ಅನುಷ್ಠಾನಗೊಳಿಸಿದ್ದಾರೆ. ಅದರಲ್ಲಿ ನರ್ಸರಿಯೂ ಒಂದು. ಗುಣಮಟ್ಟದ ಅಡಕೆ, ತೆಂಗು, ಮಾವು, ಗೇರು ಹೀಗೆ ವಿವಿಧ ಸಸಿಗಳನ್ನು
ಬೆಳೆಸಿ ಮಾರುತ್ತಾರೆ. ಸ್ವತಃ ನರ್ಸರಿ ಅನುಭವ ಗಳಿಸುವುದರಿಂದ ಸಸಿಗಳ ಆರೈಕೆ ಸುಲಭವಾಗುತ್ತದೆ ಎಂಬುದು ಅವರ ಅಭಿಮತ. ವೈವಿಧ್ಯಮಯ
ಸಸ್ಯಗಳನ್ನು ಮಾರಾಟ ಮಾಡುವ ವೈಜ್ಞಾನಿಕ ಮಾದರಿ ನರ್ಸರಿ ನಡೆಸುವ ಇವರು, ಗಿಡಗಳನ್ನು ಕೊಳ್ಳುವವರಿಗೆ ಅದರ ಆರೈಕೆಯ ಕ್ರಮವನ್ನೂ ತಿಳಿಸುತ್ತಾರೆ. ಯಾವುದೇ ಹೊಸ ಸಸಿಯನ್ನು ತಂದು ತಕ್ಷಣವೇ ನೆಟ್ಟುಬಿಡಬಾರದು.

ಏಕೆಂದರೆ ಒಂದು ವಾತಾವರಣದಿಂದ ಮತ್ತೊಂದಕ್ಕೆ ಹೊಂದಿಕೊಳ್ಳಲು ಐದಾರು ದಿನಗಳಾದರೂ ಬೇಕು. ಅಲ್ಲಿಯವರೆಗೆ ಗುಂಡಿಯ ಇಟ್ಟು ಆನಂತರ
ನೆಡಬೇಕು. ಇಂಥ ಸೂಕ್ಷ್ಮ ಅನುಭವಗಳನ್ನು ಅವರು ಹಂಚಿಕೊಳ್ಳುತ್ತಾರೆ. ಸಾವಯವ, ನೈಸರ್ಗಿಕ ಪದ್ಧತಿಗಳಿಂದ ಮಾತ್ರವೇ ನಾವು ಕೃಷಿ ಸ್ವಾವಲಂಬನೆ ಸಾಽಸಲು ಸಾಧ್ಯೆಂಬುದನ್ನರಿತು ತೀರಾ ಅಗತ್ಯವೆನ್ನಿಸಿದ ರಾಸಾಯನಿಕಗಳನ್ನು ಮಾತ್ರವೇ ಬಳಸುತ್ತಾರೆ. ಎಲ್ಲ ಬೆಳೆಗಳಿಗೂ ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಪೋಷಕಾಂಶ ನೀಡುವ ಅಗತ್ಯವಿಲ್ಲ. ಅದನ್ನು ಕಡಿಮೆ ಮಾಡಿಕೊಂಡು ಒಂದು ಬಾರಿ ಮಾತ್ರ ನೀಡಬೇಕು. ಹಾಗೆಯೇ ಅನಗತ್ಯ ನೀರೊದಗಿಸುವುದನ್ನು ನಿಲ್ಲಿಸಬೇಕು ಎನ್ನುತ್ತಾರೆ.

ಇನ್ನೂ ಮುಖ್ಯ ವಿಚಾರವೆಂದರೆ ರೈತರು ಬೇಳೆ, ಮಾರ್ಜಕಗಳಂಥವನ್ನು ಬಿಟ್ಟು ತಮ್ಮ ನಿತ್ಯದ ಅಗತ್ಯವನ್ನು ಸ್ಥಳೀಯವಾಗೇ ಒದಗಿಸಿಕೊಳ್ಳಬೇಕು. ಯಾವ ಕಾರಣಕ್ಕೂ ಹಾಲು, ತರಕಾರಿ ಮತ್ತು ಹಣ್ಣುಗಳನ್ನು ಹೊರಗಿನಿಂದ ಖರೀದಿಸಿ ತರುವಂತಾಗಬಾರದು. ಕೃಷಿ ಆದಾಯವನ್ನೂ ಮನಬಂದಂತೆ ಖರ್ಚು ಮಾಡದೇ ಉಳಿತಾಯಕ್ಕೂ ಆದ್ಯತೆ ನೀಡಬೇಕು. ವರ್ಷದ ನಿರೀಕ್ಷಿತ ಆದಾಯಕ್ಕನುಗುಣವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಮುಖ್ಯ ಬೆಳೆಯ ನಡುವೆ ತರಕಾರಿ ಕೃಷಿ ಕಂಡಿತಾ ರೈತನನ್ನು ಸ್ವಾವಲಂಬಿಯಾಗಿಸುವ ಜತೆಗೆ, ಕೈಯಲ್ಲಿ ಸದಾ ಹಣ ಓಡಾಡುವಂತೆ ಮಾಡುತ್ತದೆ ಎನ್ನುವ ರಾಜವರ್ಮರು ತಾವು ಬೆಳೆದ ತರಕಾರಿಯನ್ನು ಬಳಸಿ ಉಳಿದದ್ದನ್ನು ಕೃಷಿಕಾರ್ಮಿಕರು, ಬಂಧುಮಿತ್ರರು, ಮತ್ತು ಆತ್ಮೀಯರಿಗೆ ಉಚಿತವಾಗಿ ಹಂಚುತ್ತಾರೆ.

ಭತ್ತದ ಕೃಷಿಯಲ್ಲಿ ವೈಜ್ಞಾನಿಕ ಮಾದರಿ ಅಳವಡಿಸಿಕೊಂಡಿದ್ದು ಶ್ರೀ ಅಥವಾ ಮಡಗಾಸ್ಕರ್ ಪದ್ಧತಿಯಲ್ಲಿ ಕೃಷಿ ಕೈಗೊಂಡು ನೀರು ಉಳಿಸುತ್ತಿದ್ದಾರೆ. ಈ ಪದ್ಧತಿಯಲ್ಲಿ ಮೂರು ಎಕರೆಯ ಇಳುವರಿ ಯನ್ನು ಒಂದೇ ಎಕರೆಯಲ್ಲಿ ಪಡೆಯಬಹುದು ಎನ್ನುತ್ತಾರೆ. ಭೂಮಿಯಲ್ಲಿ ನೀರಿಂಗಿಸುವ ಯೋಜನೆಗಳನ್ನು ಕೈಗೊಂಡಿದ್ದಾರೆ. ಜಲ ಸಂರಕ್ಷಣೆಗೆ ಪೂರಕವಾಗಿ ತೋಟಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ.

ದ್ರವಗೊಬ್ಬರವನ್ನೂ ಹನಿ ನೀರಾವರಿ ಮುಖಾಂತರವೇ ನೀಡುತ್ತಾರೆ. ತೋಟಗಾರಿಕೆಯಲ್ಲೂ ಪ್ರಗತಿ ಸಾಧಿಸಿ ತೋಟದ ಸುತ್ತಲೂ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಹಲಸಿನ ಗಿಡಗಳನ್ನು ಹಾಕಿ ಮೌಲ್ಯವರ್ಧನೆಗೆ ಯತ್ನಿಸಿದ್ದಾರೆ. ದರೆಗುಡ್ಡೆಯ ತೋಟದಲ್ಲಿ ಅನಾನಸ್ ಕೂಡ
ಪ್ರಮುಖ ಬೆಳೆ. ಇತ್ತೀಚಿನ ವರ್ಷಗಳಲ್ಲಿ ಅನಾನಸ್ ಹಣ್ಣಿನ ಮೌಲ್ಯವರ್ಧನೆಗೂ ಅಪಾರ ಆಸಕ್ತಿ ತೋರಿದ್ದು, ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಅಡಕೆ ಹಾಗೂ ಭತ್ತದಲ್ಲಿ ಸಸಿಗಳ ನಡುವೆ ಅಂತರ ಹೆಚ್ಚಿಸುವುದರಿಂದ ಹೆಚ್ಚಿನ ಇಳುವರಿ ಸಾಧ್ಯ ಎಂಬುದನ್ನು ಪ್ರಯೋಗಾತ್ಮಕವಾಗಿ ತೋರಿಸಿದ್ದಾರೆ.

ಅಡಕೆಯಲ್ಲಿ ಗಿಡದಿಂದ ಗಿಡಕ್ಕೆ ೯ ಅಡಿ ಅಂತರ ನೀಡಿದ್ದಾರೆ. ಒಂದು ಎಕರೆಯಲ್ಲಿ ೫೦೦ ಸಸಿಗಳನ್ನು ಕೂರಿಸಲು ಸಾಧ್ಯವಾಗಿದ್ದು ಪೋಷಕಾಂಶಗಳ
ಸಮಾನ ಹಂಚಿಕೆ ಆಗುತ್ತಿದೆ ಎನ್ನುತ್ತಾರೆ. ವೈಜ್ಞಾನಿಕ ಮಾದರಿ ಕೃಷಿಯ ಬಗ್ಗೆ ಆಕಾಶವಾಣಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜತೆಗೆ ಕೃಷಿ ಸಮುದಾಯಕ್ಕೆ ಕಾರ್ಯಾಗಾರ ಮತ್ತಿತರ ಕಾರ್ಯಕ್ರಮಗಳ ಮೂಲಕ ಮಾಹಿತಿ ತಲುಪಿಸುತ್ತಿದ್ದಾರೆ. ಖ್ಯಾತ ಆಳ್ವಾಸ್ ನುಡಿ ಸಿರಿಯ ಭಾಗ ವಾದ ಕೃಷಿಸಿರಿ ಕಾರ್ಯಕ್ರಮದ ಸಾರಥ್ಯ ವಹಿಸಿ ಮೂರು ವರ್ಷಗಳಿಂದ ನಿರ್ವಹಿಸುತ್ತಿzರೆ. ಕೃಷಿಬೆಲೆ ಆಯೋಗದ ಸದಸ್ಯರಾಗಿ, ಅದರ ಯೋಜನೆ ಯಡಿ, ತಮ್ಮ ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆ ಮಾಡಿ, ಅಭಿವೃದ್ಧಿಗೆ ನೆರವಾಗಿದ್ದಾರೆ.

ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ವೈಜ್ಞಾನಿಕ ಸಲಹಾ ಸಮಿತಿ ಸದಸ್ಯರಾಗಿ ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಒಟ್ಟಾರೆ ತಮ್ಮ ಅನುಭವ ಹಾಗೂ ಯಶಸ್ಸಿನ ಹಿಂದಿನ ರಹಸ್ಯವನ್ನು ಎಲ್ಲರಿಗೂ ಹಂಚುತ್ತಾ ಸುತ್ತಮುತ್ತಲ ರೈತರ ಪಾಲಿಗೆ ತಜ್ಞರೆನಿಸಿಕೊಂಡಿದ್ದಾರೆ ರಾಜವರ್ಮರು.