Saturday, 14th December 2024

ಜಾಣರ ಹಾದಿಯೇ ಚದುರಂಗ ಮಾರ್ಗ !

ಕ್ರೀಡಾ ಕೌಶಲ

ಬಸವರಾಜ ಎಂ.ಯರಗುಪ್ಪಿ

‘ಚದುರಂಗವು ಜನರನ್ನು ಹುಚ್ಚರನ್ನಾಗಿ ಮಾಡುವುದಿಲ್ಲ, ಹುಚ್ಚು ಜನರನ್ನು ವಿವೇಕವಂತರನ್ನಾಗಿಸುತ್ತದೆ’ ಎಂದು ಹೇಳಿದ್ದಾರೆ ಬಿಲ್ ಹಾರ್ಟ್‌ಸ್ಟನ್. ಅಂತೆಯೇ, ಈ ಆಟವು ಚತುರರನ್ನು ಹುಟ್ಟುಹಾಕಿ, ಚಿಂತನಾಕ್ರಮದಲ್ಲಿ ಅವರನ್ನು ನಿಷ್ಣಾತರನ್ನಾಗಿ ಮಾಡುತ್ತದೆ. ಇದು ಚದುರಂಗದಾಟದ ಮರ್ಮ.

ಯಾವುದೋ ಒಂದು ಮೂಲೆಯಲ್ಲಿ ಇಬ್ಬರೇ ಕುಳಿತು ಆಡುವ ಆಟವೇ ‘ಚೆಸ್’ ಅಥವಾ ‘ಚದುರಂಗ’, ಇದು ಪುರುಷರ ಆಟ ಎಂದೆಲ್ಲಾ ಕೆಲವರು ತಮಾಷೆಗೆ ಹೇಳುವುದುಂಟು. ಆದರೆ ಚೆಸ್ ನಿಜಕ್ಕೂ ಒಂದು ಅದ್ಭುತ ವಾದ ಆಟ. ಯಾವುದೇ ಸಮಯ ದಲ್ಲಿ, ಎಲ್ಲಿ ಬೇಕಾದರೂ ಆಡಬಹುದಾದ ಆಟವಿದು. ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಇದಕ್ಕೆ ಗಣ್ಯತೆಯಿದೆ, ಮಾನ್ಯತೆಯಿದೆ, ಗೌರವವಿದೆ. ಹೀಗಾಗಿ ಈ ಆಟದ ಜನಪ್ರಿಯತೆ ಯನ್ನು ಮಾತ್ರವಲ್ಲದೆ ಮಹತ್ವವನ್ನೂ ಸಾರುವ ನಿಟ್ಟಿನಲ್ಲಿ ಪ್ರತಿವರ್ಷದ ಜುಲೈ ೨೦ ರಂದು ಜಾಗತಿಕವಾಗಿ ‘ಅಂತಾರಾಷ್ಟ್ರೀಯ ಚದುರಂಗ ದಿನ’ವನ್ನು ಆಚರಿಸಲಾಗುತ್ತದೆ.

ಇತಿಹಾಸ: ಗುಪ್ತರ ಆಳ್ವಿಕೆಯ ಅವಧಿಯಲ್ಲಿ ಉತ್ತರ ಭಾರತದ ಭಾಗದಲ್ಲಿ ಚದುರಂಗ ಚಾಲ್ತಿಗೆ ಬಂತು ಎನ್ನಲಾಗುತ್ತದೆ. ಮೂಲತಃ ‘ಚತುರಂಗ’ ಎಂದು ಕರೆಯಲ್ಪಡುತ್ತಿದ್ದ ಈ ಆಟ ಬಹುಶಃ ಈ ಯುಗದ ಅತ್ಯಂತ ಹಳೆಯ ಆಟಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಂತರದ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಚದುರಂಗ, ಕಾಲಕ್ರಮೇಣ ಪರ್ಷಿಯಾ ದೇಶಕ್ಕೆ ಹರಡಿತು. ೧೯೨೪ರ ಜುಲೈ ೨೦ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಎಂಟನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ‘ವಿಶ್ವ ಚೆಸ್ ಫೆಡರೇಷನ್’ ಅನ್ನು ಸ್ಥಾಪಿಸ ಲಾಯಿತು. ೨೦೧೯ರ ಡಿಸೆಂಬರ್ ೧೨ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ ೨೦ನ್ನು ‘ವಿಶ್ವ ಚದುರಂಗ ದಿನ’ ಎಂದು ಘೋಷಿಸಿತು. ಅಂದಿನಿಂದ ಇಂದಿನವರೆಗೂ ಈ ದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಜಾಣ್ಮೆಯೇ ಮೂಲವಸ್ತು
ಚದುರಂಗ ಒಂದು ಮೈಂಡ್‌ಗೇಮ್. ಇದು ತಂತ್ರಗಾರಿಕೆ, ಬುದ್ಧಿವಂತಿಕೆ ಮತ್ತು ಜಾಣ್ಮೆಯೆಂಬ ಮೂಲವಸ್ತುಗಳನ್ನು ಬಳಸಿ ಆಡುವ ಆಟ. ನಿರ್ದಿಷ್ಟ ಗುರಿಯತ್ತ ಗಮನವನ್ನು ಕೇಂದ್ರೀಕರಿಸಿ ನಡೆ ನಡೆಸುವ ನಿಟ್ಟಿನಲ್ಲಿ ಇದು ಆಟಗಾರರನ್ನು ಸಜ್ಜು ಗೊಳಿಸುತ್ತದೆ. ಹೀಗಾಗಿ ಚೆಸ್ ಆಟಗಾರರು ಆಟದ ಕೌಶಲದ ಜತೆಜತೆಗೆ ತಮ್ಮ ಆಲೋಚನಾ ವಿಧಾನ ಮತ್ತು ತಾಳ್ಮೆಯನ್ನೂ ಉನ್ನತ ಮಟ್ಟಕ್ಕೇರಿಸಿಕೊಳ್ಳುತ್ತಾರೆ ಎಂಬುದು ನಿರ್ವಿವಾದದ ಸಂಗತಿ. ಸಾಮಾನ್ಯವಾಗಿ ಬಹುತೇಕರು ಜೀವನದಲ್ಲೊಮ್ಮೆ ಚದುರಂಗದ ಆಟವನ್ನು ಒಮ್ಮೆ ಯತ್ನಿಸಿರುತ್ತಾರಾದರೂ, ಕೆಲವರು ಮಾತ್ರ ಇದನ್ನು ಪಟ್ಟುಹಿಡಿದು ಮುಂದುವರಿಸಿಕೊಂಡು ಹೋಗಿ ಜೀವನ ನಿರ್ವಹಣೆಗೆ ಇದನ್ನೇ ಮೂಲಾಧಾರವಾಗಿ ಬಳಸಿಕೊಳ್ಳುತ್ತಾರೆ.

ಈ ಆಟದ ನೆರವಿನಿಂದ ತಮ್ಮನ್ನು ಇತರರು ಗುರುತಿಸುವಂತೆ ಮಾಡುವುದರ ಜತೆಗೆ ದೇಶದ ಹೆಸರನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತಂದವರೂ ಸಾಕಷ್ಟು ಮಂದಿ ಇದ್ದಾರೆ. ಚದುರಂಗದಾಟದ ವಲಯದಲ್ಲಿ ಜಗತ್ತೇ ನೆನಪಿಟ್ಟುಕೊಳ್ಳುವ ಹೆಸರೆಂದರೆ ಭಾರತದ ಹಿರಿಯ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ರಷ್ಯಾದ ಚೆಸ್ ಮಾಸ್ಟರ್ ಗ್ಯಾರಿ ಕ್ಯಾಸ್ಪರೋವ್.

ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಏಕಾಗ್ರತೆ, ಮುಂದಾಲೋಚನೆ, ಎದುರಾಳಿಯ ಆಲೋಚನಾ ಶಕ್ತಿಯನ್ನು ಗ್ರಹಿಸುವ ಬುದ್ಧಿವಂತಿಕೆ ಇರಬೇಕಾಗುತ್ತದೆ ಮತ್ತು ಆಟದಲ್ಲಿ ಅಂತರ್ಗತವಾಗಿರುವ ಅಮೂಲ್ಯ ರಹಸ್ಯಗಳನ್ನು ಅವರು ಅರಿತಿರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಪಳಗಿದರೆ ಚೆಸ್ ತರಬೇತುದಾರರಾಗಿ, ತೀರ್ಪುಗಾರರಾಗಿ ಭಾಗವಹಿಸಲು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಅವಕಾಶಗಳು ಸಿಗುತ್ತವೆ. ಜೀವನ ನಿರ್ವಹಣೆಗೆ ‘ಚದುರಂಗ’ವನ್ನೇ ಅವಲಂಬಿಸಬಹುದು ಅಥವಾ ಹವ್ಯಾಸವನ್ನಾಗಿ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ದುಡಿಯುವ ಮೂಲಕ ಈ ಕ್ಷೇತ್ರದಲ್ಲಿ
ಮುಂದುವರಿಯಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಚೆಸ್ ಒಂದು ವಿಶಿಷ್ಟ ಆಟ. ದೈಹಿಕ ಶ್ರಮವನ್ನು ಅವಲಂಬಿಸಿ ಆಡುವ ಕ್ರೀಡೆಗಳ ನಡುವೆ, ಮನಸ್ಸಿನ ಕಸರತ್ತನ್ನು ಹೆಚ್ಚಿಸಿ ಆಟಗಾರರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುವ ಆಟವಿದು. ಶಾಲಾ-ಕಾಲೇಜು ದಿನಗಳಲ್ಲೇ ಈ ಆಟದ ಬಗ್ಗೆ ಆಸಕ್ತಿ ತೋರಿಸಿ, ಮುಂದೆಯೂ ಮುಂದುವರಿಸಿದರೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶಗಳನ್ನು ಪಡೆಯಬಹುದು. ಸಾಮಾನ್ಯ ಜ್ಞಾನದ ಜತೆಗೆ ಆಟದ ನಿಯಮ, ಪರಿಣತರ ಸಲಹೆ-ಮಾರ್ಗದರ್ಶನಗಳನ್ನು
ಸಮರ್ಥವಾಗಿ ಜೀರ್ಣಿಸಿಕೊಂಡರೆ ಉತ್ತಮ ಚೆಸ್ಆಟಗಾರರಾಗಬಹುದು. ಚೆಸ್ ಆಟದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ/ಕಿರಿಯ ಮುಖಗಳು ಸಾಧನೆ ಮಾಡುತ್ತ ಇತರರಿಗೂ ಸೂರ್ತಿಯಾಗುತ್ತಿರುವುದು ಸಂತಸದ ವಿಷಯ.

‘ಚದುರಂಗದ ಆಟದಲ್ಲಿ ನೀವು ಪ್ರಬಲ ಎದುರಾಳಿಯನ್ನು ಹೊಂದಿದ್ದರೆ, ಸ್ಪರ್ಧೆಯು ಉತ್ತೇಜನಕಾರಿಯಾಗಿರುತ್ತದೆ. ನಾನು ಕೆಟ್ಟ ಫಲಿತಾಂಶವನ್ನು ಪಡೆದಾಗ, ಆಲೋಚನೆಗಳಿಗೆ ಹೆಚ್ಚು ಮುಕ್ತವಾಗಿ ತೆರೆದುಕೊಳ್ಳುತ್ತೇನೆ’ ಎಂದಿದ್ದಾರೆ ಈ ಆಟದಲ್ಲಿ ವಿಶ್ವಖ್ಯಾತಿ ಪಡೆದಿರುವ ಭಾರತದ ವಿಶ್ವನಾಥನ್ ಆನಂದ್. ಇದು ಚದುರಂಗಕ್ಕೆ ಮಾತ್ರವಲ್ಲದೆ ನಮ್ಮ ವೈಯಕ್ತಿಕ ಬದುಕಿಗೂ, ಕಾರ್ಯಕ್ಷೇತ್ರ ಕ್ಕೂ ಅನ್ವಯವಾಗುವಂಥ ಮಾತು ಎಂಬುದರಲ್ಲಿ ಎರಡು ಮಾತಿಲ್ಲ.

ಒಂದಿಷ್ಟು ಸ್ವಾರಸ್ಯಕರ ಸಂಗತಿಗಳು ಚದುರಂಗವನ್ನು ರಾಜರ ಆಟ ಎಂದೂ ಕರೆಯುತ್ತಾರೆ. ಮಡಿಸಬಹುದಾದ ಚದುರಂಗ ಫಲಕ ವನ್ನು ೧೧೨೫ರಲ್ಲಿ ಕಂಡುಹಿಡಿಯಲಾಯಿತು. ಮೊದಲ ಆಧುನಿಕ ಚೆಸ್ ಪಂದ್ಯಾವಳಿಯನ್ನು ೧೮೫೧ರಲ್ಲಿ ಲಂಡನ್‌ ನಲ್ಲಿ ನಡೆಸಲಾಯಿತು. ಜರ್ಮನಿಯ ಅಡಾಲ್ ಆಂಡರ್ಸನ್ ಇದರಲ್ಲಿ ಗೆದ್ದರು. ಚೆಸ್ ಆಡಲು ಮೊದಲ ಕಂಪ್ಯೂಟರ್ ಪ್ರೋಗ್ರ್ಯಾಂ ಅನ್ನು ಅಲನ್ ಟ್ಯೂರಿಂಗ್ ೧೯೫೧ರಲ್ಲಿ ಅಭಿವೃದ್ಧಿಪಡಿಸಿದರು.

ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ಎಲ್ಲರನ್ನೂ ತನ್ನತ್ತ ನೋಡುವಂತೆ ಮಾಡಿದ ಭಾರತದ ಬಾಲಕನ ಹೆಸರು ಪರಿಮಾರ್ಜನ್ ನೇಗಿ; ಈತ ೧೩ನೇ ವಯಸ್ಸಿನಲ್ಲೇ ಈ ಹೆಗ್ಗಳಿಕೆಯನ್ನು ದಕ್ಕಿಸಿಕೊಂಡ. ಭಾರತದಲ್ಲಿ ೨೦೧೮ರಲ್ಲಿ ರಮೇಶ್ ಬಾಬು ಪ್ರಜ್ಞಾನಂದ ಅವರು ಕಿರಿಯ ಆಟಗಾರರ ಸಾಲಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.