Thursday, 19th September 2024

ಎಪಿಎಂಸಿ ಕಾಯಿದೆ ಟೀಕೆ ಹಿಂದಿನ ಚಿದಂಬರ ರಹಸ್ಯವೇನು?

ಪ್ರತಿಕ್ರಿಯೆ

ಡಾ.ಸಮೀರ್‌ ಕಾಗಲ್ಕರ್‌

ಇತ್ತೀಚೆಗೆ ವಿಶ್ವವಾಣಿ ಪತ್ರಿಕೆಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಬರೆದ ಅಂಕಣದ ವಿಮರ್ಶೆಗೆ ಪ್ರತಿಕ್ರಿಯೆ ಯಾಗಿ ಈ ಲೇಖನ ಬರೆದಿದ್ದೇನೆ. ಚಿದಂಬರಂ ಅವರು ತಮ್ಮ ಲೇಖನದಲ್ಲಿ ನಾಲ್ಕೈದು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ ದ್ದಾರೆ. ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿ, ಅವರ ಸಚಿವ ಸಂಪುಟದ ಸದಸ್ಯರು ಹಾಗೂ ಬಿಜೆಪಿ ವಕ್ತಾರರು ಸಮರ್ಪಕ ಅಂಕಿ ಅಂಶಗಳನ್ನು ನೀಡದೆ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ಅತ್ಯಂತ ಪ್ರಯೋಜನಕರ ಎಂದು ಹೇಳುತ್ತಿರು ವುದಾಗಿ ಕುಹಕವಾಡಿದ್ದಾರೆ.

ಎರಡನೆಯದಾಗಿ, ಎಲ್ಲರೊಡನೆ ಸಂವಾದ, ವಿಚಾರ ವಿನಿಮಯ ಮಾಡಿ ಈ ತಿದ್ದುಪಡಿ ಮಸೂದೆಗಳನ್ನು ಅನುಷ್ಠಾನಕ್ಕೆ ತರ ಬೇಕಿತ್ತು, ತರಾತುರಿಯಲ್ಲಿ ಜಾರಿಗೊಳಿಸಿದ್ದು ಸರಿಯಲ್ಲ ಎಂದು ಆಕ್ಷೇಪವೆತ್ತಿದ್ದಾರೆ. ಮೂರನೆಯದಾಗಿ ಈ ಮಸೂದೆ ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ, ಇದೇನಿದ್ದರೂ ರಾಜ್ಯಗಳ ವ್ಯಾಪ್ತಿಗೆ ಬರುವಂಥದ್ದು ಎಂದು ಕುಚೋದ್ಯದ ಮಾತನ್ನಾಡಿದ್ದಾರೆ.

ನಾಲ್ಕನೆಯದಾಗಿ ಅವರು ಈ ಮಸೂದೆ ಕುರಿತು ಕಾಂಗ್ರೆಸ್ ಚಿಂತನೆ ಏನಿತ್ತು ಎಂಬ ಕುರಿತು ವಿವರ ನೀಡಿದ್ದಾರೆ. ಈ ನಾಲ್ಕೂ
ವಿಚಾರಗಳ ಕುರಿತು ಒಂದೊಂದಾಗಿ ವಿಮರ್ಶಿಸಿ ಇದರ ಸಾರಾಂಶದ ಕುರಿತು ಚರ್ಚಿಸಬಹುದು. ಮೊದಲನೆಯ ಅನಿಸಿಕೆಯಲ್ಲಿ ಕುಹಕ ಬೇಕಿರಲಿಲ್ಲ. 1985ನೇ ಇಸವಿಯಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಒಂದು ಮಾತು ಹೇಳಿದರು. ರಾಜೀವ್ ಅವರು
ಪ್ರಧಾನಿಯಾಗುವ ಮೊದಲು ಅವರ ತಾಯಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ಅಭಿವೃದ್ಧಿಗೆ ಸಂಬಂಧಿಸಿ ದೆಹಲಿಯಿಂದ ಒಂದು ರುಪಾಯಿ ಕಳುಹಿಸಿದರೆ ಅದು ಅಂತಿಮ ಫಲಾನುಭವಿ ಅಥವಾ ತಲುಪಬೇಕಿದ್ದಲ್ಲಿಗೆ ತಲುಪುವ ವೇಳೆ ಹದಿನೈದು ಪೈಸೆ ಅಗಿರುತ್ತಿತ್ತು ಎಂಬುದೇ ಅವರ ಮಾತಿನ ಸಾರವಾಗಿತ್ತು. ಈ ವಿಚಾರ ಬಳಿಕ ಕಾಂಗ್ರೆಸ್ ಪಕ್ಷದೊಳಗೆ ಬಹುಚರ್ಚೆಗೆ ಎಡೆ ಮಾಡಿ ಕೊಟ್ಟಿತು. ಆದರೆ, ಅಂತಿಮವಾಗಿ ಅದರಿಂದ ಪ್ರಯೋಜನ ವೇನೂ ಆಗಲಿಲ್ಲ. ರಾಜೀವ್ ಗಾಂಧಿ ಅವರ ಇದೇ ಅಂಕಿ ಅಂಶವನ್ನು ಆಧಾರವಾಗಿ ಇಟ್ಟುಕೊಂಡ ಈಗಿನ ಪ್ರಧಾನಿ ಮೋದಿಯವರು ಜಾಮ್ ಟ್ರಿನಿಟಿ (ಜನಧನ್, ಆಧಾರ್, ಮೊಬೈಲ್) ಆಧಾರದಿಂದ ನೇರ ಫಲಾನುಭವಿಗೇ ಹಣ ವರ್ಗಾವಣೆಗೆ (ಡೈರೆಕ್ಟ್‌ ಬೆನಿಫಿಟ್ ಟ್ರಾನ್ಸ್‌‌ಫರ್) ಮುಂದಾಗಿದ್ದಾರೆ.

ದೆಹಲಿಯಿಂದ ಫಲಾನುಭವಿಗೆ ಕಳುಹಿಸಿದ ಒಂದು ರುಪಾಯಿ ಪೂರ್ಣವಾಗಿ ಸಂಬಂಧಿತರಿಗೆ ತಲುಪುವ ವ್ಯವಸ್ಥೆಯನ್ನು ಮೋದಿ ಯವರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಅಂಕಿ ಅಂಶವನ್ನಷ್ಟೇ ನೀಡಿ ಮಾತಿಗಷ್ಟೇ ತನ್ನ ಕೆಲಸವನ್ನು ಸೀಮಿತ ಗೊಳಿಸಿತು. ಆದರೆ, ಕೇಂದ್ರದ ಬಿಜೆಪಿ ಸರಕಾರ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಿದೆ. ಎಪಿಎಂಸಿ ವ್ಯವಸ್ಥೆ ಸರಿಯಾಗಿಲ್ಲ. ಅದನ್ನು ಬದಲಾವಣೆ ಮಾಡಬೇಕು. ಮಾದರಿ ಎಪಿಎಂಸಿ ಕಾಯಿದೆ ಅನುಷ್ಠಾನ ಅಗತ್ಯ ಎಂಬ ಚಿಂತನೆ 2005ರಲ್ಲೇ ನಡೆದಿತ್ತು. ಅದರ ಕುರಿತು ಚರ್ಚೆಗಳೂ ನಡೆದವು.

ದಲ್ಲಾಳಿಗಳು ಶೇ.20ರಿಂದ 30ರಷ್ಟು ಮೊತ್ತವನ್ನು ತಮ್ಮ ಜೇಬಿಗಿಳಿಸುತ್ತಾರೆ, ಇದರಿಂದ ಕೃಷಿಕ – ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರದ ಪರವಾಗಿ ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್‌ನ ಕಪಿಲ್ ಸಿಬಲ್ ಅವರು ಪ್ರಸ್ತಾಪಿಸಿದ್ದರು. 2013ನೇ ಇಸವಿ ಯಲ್ಲಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಡೆದ ಪತ್ರಿಕಾ ಸಂದರ್ಶನದಲ್ಲಿ ತರಕಾರಿ, ಹಣ್ಣು, ದವಸ ಧಾನ್ಯ ಮೊದಲಾದವು ಗಳನ್ನು ಎಪಿಎಂಸಿ ಕಪಿಮುುಷ್ಟಿಯಿಂದ ಬಿಡುಗಡೆ ಮಾಡಬೇಕು ಎಂದು ಅಂಕಿ ಅಂಶಗಳ ಜತೆ ತಿಳಿಸಿದ್ದರು.

ಅಂಕಿ ಅಂಶಗಳ ಜತೆ ಮಾತನಾಡುವುದು ಕಾಂಗ್ರೆಸ್‌ನವರಿಗೆ ಅಭ್ಯಸವಾಗಿದೆ. ಆದರೆ, ಅದರ ಅನುಷ್ಠಾನದತ್ತ, ಸಮಸ್ಯೆಗಳ ಪರಿ ಹಾರದತ್ತ ಕಾಂಗ್ರೆಸ್ ಗಮನ ಕೊಟ್ಟಿಲ್ಲ ಎಂಬುದೂ ಅಷ್ಟೇ ಸತ್ಯ. ಆದರೆ, ಅದೇ ಅಂಕಿ ಅಂಶಗಳನ್ನು ಆಧರಿಸಿ ರೈತರ ಸಮಸ್ಯೆ
ಪರಿಹಾರಕ್ಕೆ ಮೋದಿ ಅವರ ಸರಕಾರ ಕಳೆದ ಆರು ವರ್ಷಗಳಿಂದ ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯ ಪ್ರವೃತ್ತವಾಗಿದೆ. ಆದ್ದರಿಂದ ಅಂಕಿ ಅಂಶದ ವಿಚಾರದಲ್ಲಿ ಕುಹಕ ಸಲ್ಲದು.

ಸಂವಾದ, ಚರ್ಚೆಯ ಬಳಿಕ ಈ ಮಸೂದೆ ಜಾರಿಗೊಳಿಸಬೇಕಿತ್ತು, ತರಾತುರಿ ಬೇಕಿರಲಿಲ್ಲ ಎಂಬ ಎರಡನೇ ಅಂಶ. 2018-19ರಲ್ಲಿ ಕೃಷಿ ಸ್ಥಾಯಿ ಸಮಿತಿ ಕೊಟ್ಟ ವರದಿಯನ್ನಾಧರಿಸಿಯೇ ಈ ಕಾಯಿದೆ ಜಾರಿಗೊಳಿಸಲಾಗಿದೆ. ಆ ವರದಿಯಲ್ಲಿ ಕೊಟ್ಟಿದ್ದ ಅಂಕಿ
ಅಂಶ, ಶಿಫಾರಸ್ಸುಗಳನ್ನು ಆಧಾರವಾಗಿ ಇಟ್ಟುಕೊಂಡೇ ಕಾಯಿದೆ ಜಾರಿಗೊಳಿಸಲಾಗಿದೆ. ಕಾಂಗ್ರೆಸ್‌ನ ಮಧ್ಯ ಪ್ರದೇಶದ ಅಂದಿನ ಮುಖ್ಯಮಂತ್ರಿ ಕಮಲ್‌ನಾಥ್ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳಿದ್ದ ಉನ್ನತಾಧಿಕಾರ ಸಮಿತಿಯು ಶಿಫಾರಸ್ಸುಗಳನ್ನು
ನೀಡಿತ್ತು. ಅದರ ಆಧಾರದಲ್ಲೇ ಮೇ 5ರಂದು ಆತ್ಮನಿರ್ಭರ ಭಾರತದ ಪ್ರಸ್ತಾಪವನ್ನು ಪ್ರಧಾನಿ ಮೋದಿ ಅವರು ದೇಶದ ಮುಂದಿ ಟ್ಟಿದ್ದರು. ಅದಾಗಿ ಒಂದು ತಿಂಗಳೊಳಗೆ ಎಪಿಎಂಸಿ ವಿಚಾರವಾಗಿ ಸುಗ್ರೀವಾಜ್ಞೆಯೂ ಹೊರಬಂದಿತ್ತು.

ಅದಾದ ಮೂರೂವರೆ ತಿಂಗಳ ಬಳಿಕ ಸೆಪ್ಟೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಇದನ್ನು ಮಸೂದೆ ರೂಪದಲ್ಲಿ ತರಲಾಯಿತು. ಸೂಕ್ತ ಬದಲಾವಣೆಗೆ ಸಿದ್ಧರಿದ್ದೇವೆ ಎಂದು ಸಚಿವರು, ಪ್ರಧಾನಿ ಹೇಳಿದರೂ ವಿರೋಧ ಪಕ್ಷದವರು ಗಲಾಟೆ ಮಾಡಿದರು. ಇದು ಬಳಿಕ ಧ್ವನಿಮತದಿಂದ ಅಧಿವೇಶನದಲ್ಲಿ ಅಂಗೀಕಾರಗೊಂಡಿತು. ಆದ್ದರಿಂದ ತರಾತುರಿಯಲ್ಲಿ ಇದು ಅಂಗೀಕಾರವಾಗಿಲ್ಲ ಎಂಬುದೂ ಸುಸ್ಪಷ್ಟ. ಚಿಂತನ, ಮಂಥನದ ಜತೆಗೆ ರಾಜ್ಯಗಳ ಸಲಹೆ – ಶಿಫಾರಸ್ಸುಗಳನ್ನು ಒಳಗೊಂಡ ಮಸೂದೆ ಇದೆಂಬುದೂ ಈ ಮೂಲಕ ಸ್ಪಷ್ಟವಾಗುತ್ತದೆ.

ಮೂರನೆಯ ಅಂಶ. ರಾಜ್ಯ ಸರಕಾರಗಳು ರೂಪಿಸಿದ ಒಂದು ಉತ್ತಮ ಮಸೂದೆಯನ್ನು ಇನ್ನೊಂದು ರಾಜ್ಯ ಅನುಷ್ಠಾನಕ್ಕೆ ತರಬೇಕಿತ್ತು. ಇದು ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಆಕ್ಷೇಪದ ವಿಚಾರ. ಕೇಂದ್ರ ಸರಕಾರ ನಿರಂತರವಾಗಿ ಸಂವಿಧಾನ ದ ಚೌಕಟ್ಟಿನಡಿಯೇ ಕರ್ತವ್ಯ ನಿರ್ವಹಿಸುತ್ತಾ ಬಂದಿದೆ. ರಾಜ್ಯ ಸರಕಾರದ ಹಿತಾಸಕ್ತಿ ಕಡೆಗಣಿಸಿ ಕೇಂದ್ರ ಸರಕಾರ ಕಾರ್ಯ ನಿರ್ವ ಹಿಸಿಲ್ಲ. ತನಗಿರುವ ಅಧಿಕಾರವನ್ನು ಗಮನದಲ್ಲಿ ಇಟ್ಟುಕೊಂಡೇ ಅದು ಕೆಲಸ ಮಾಡಿದೆ.

ಆಹಾರೋತ್ಪನ್ನದ ವ್ಯಾಪಾರಕ್ಕೆ ಸಂಬಂಧಿಸಿ ಮಾರುಕಟ್ಟೆ ಸುಧಾರಣೆಗಷ್ಟೇ ಕೇಂದ್ರ ಸರಕಾರ ಮುಂದಾಗಿದೆ. ಕೃಷಿ ಮಾರುಕಟ್ಟೆ ಸುಧಾರಣಾ ಮಸೂದೆಯ ಸಂದರ್ಭದಲ್ಲೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಸುಧಾರಣಾ ಮಸೂದೆಗೆ ತಿದ್ದುಪಡಿ ತಂದರು. ಭೂಸುಧಾರಣೆಗೆ ಸಂಬಂಧಿಸಿ ಬದಲಾವಣೆಯನ್ನು ರಾಜ್ಯ ಸರಕಾರವಷ್ಟೇ ಮಾಡಬಹುದಿತ್ತು. ಅದನ್ನು ಗಮನಿಸಿ ಕೇಂದ್ರ ಸರಕಾರ ಅದರ ಕುರಿತು ಯಾವುದೇ ಬದಲಾವಣೆ ಮಾಡಿಲ್ಲ ಎಂಬುದೂ ಇಲ್ಲಿ ಗಮನಿಸಬೇಕಾದ ಅಂಶ. ಕೇಂದ್ರ ಸರಕಾರ ಈ ವಿಷಯದಲ್ಲಿ ತನ್ನ ಸರಹದ್ದನ್ನು ಮೀರಿಲ್ಲ ಎಂಬುದೂ ಗಮನಾರ್ಹ.

ದೀರ್ಘಾವಧಿಯಲ್ಲಿ ಎಪಿಎಂಸಿ ರದ್ದು ಮಾಡುವುದು ಉತ್ತಮ ಎಂಬ ಸಲಹೆ ಅವರದು. ಮಾರಾಟಗಾರರು ಒಬ್ಬರಲ್ಲ, ಹತ್ತಾರು ಜನ ಇರಬೇಕು. ಈಗ ನೀವು ಮಾಡಿರುವ ರೀತಿ ಸರಿಯಿಲ್ಲ. ಹಳ್ಳಿ, ತಾಲೂಕು, ಜಿಲ್ಲೆಗಳಲ್ಲಿ ಪರ್ಯಾಯ ಮಾರುಕಟ್ಟೆ ಸೃಷ್ಟಿಸಿದ
ಬಳಿಕವಷ್ಟೇ ಎಪಿಎಂಸಿಗಳ ಏಕಸ್ವಾಮ್ಯ ಮುರಿಯುವ ಕೆಲಸ ಮಾಡಬೇಕಿತ್ತು. ರೈತರಿಗೆ ಪರ್ಯಾಯ ಮಾರ್ಗ ತೋರದೆ ಹೊಸ ತಿದ್ದುಪಡಿ ತರಲಾಗಿದೆ ಎಂಬ ವಾದವನ್ನು ಅವರು ಮಂಡಿಸಿದ್ದಾರೆ. ಈ ಮಂಡನೆ ಅತ್ಯಂತ ದುರದೃಷ್ಟಕರ ಎಂದೇ ಹೇಳಬೇಕು.
ಭೌಗೋಳಿಕವಾಗಿ ಒಂದು ಮಾರುಕಟ್ಟೆಗೆ ಇರಬೇಕಾದ ವ್ಯಾಪ್ತಿ, ಖರೀದಿದಾರರು ಎಷ್ಟು ಜನ ಇರಬೇಕು ಎಂಬ ಅಂಶವನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ.

ದೇಶದಾದ್ಯಂತ ಸಹಸ್ರಾರು ಮಾರುಕಟ್ಟೆ ತೆರೆಯಿರಿ, ಅದು ರೈತರಿಗೆ ಅನುಕೂಲಕರ ಎಂಬ ವಾದ ಕಾಂಗ್ರೆಸ್ ನವರದು. ಇದು ಮೇಲ್ನೋಟಕ್ಕೆ ಸತ್ಯ ಎನಿಸಿದರೂ ಆಳವಾಗಿ ಅಧ್ಯಯನ ಮಾಡಿದರೆ ಇದರಲ್ಲಿ ಹುರುಳಿಲ್ಲ ಎಂಬುದು ಗೋಚರಿಸುತ್ತದೆ. ಒಂದು ದೇಶ ಒಂದು ಮಾರುಕಟ್ಟೆ (ಒನ್ ನೇಷನ್ ಒನ್ ಮಾರ್ಕೆಟ್) ಎಂಬ ಪರಿಕಲ್ಪನೆ ಬಿಜೆಪಿಯದು. ಆ ನಿಟ್ಟಿನಲ್ಲಿ ಇದು ಮಹತ್ವದ
ಹೆಜ್ಜೆಯಾಗಿದೆ. ಸಂಪೂರ್ಣ ದೇಶವನ್ನು ಏಕ ಮಾರುಕಟ್ಟೆಯನ್ನಾಗಿ ಮಾಡುವುದರಿಂದ ರೈತರೊಬ್ಬರು ಉತ್ಪನ್ನವನ್ನು ಕೇವಲ ಎಪಿಎಂಸಿ ಅಥವಾ ತಾಲೂಕು, ಜಿಲ್ಲೆಯ ವ್ಯಾಪ್ತಿಯಲ್ಲಷ್ಟೇ ಮಾರಾಟ ಮಾಡಬೇಕೆಂಬ ಪರಿಮಿತಿ ಇರುವುದಿಲ್ಲ. ದೇಶದ ಯಾವುದೇ ಪ್ರದೇಶದಲ್ಲಿ ಮಾರಾಟ ಮಾಡಲು ಅವಕಾಶ ಲಭಿಸುತ್ತದೆ. ಕಾಂಗ್ರೆಸ್ ವಾದ ಮಾಡಿದ ರೀತಿಯಲ್ಲಿ ಹಳ್ಳಿ, ತಾಲೂಕು ಅಥವಾ ಜಿಲ್ಲೆಗಳಲ್ಲಿ ಪರ್ಯಾಯ ಮಾರುಕಟ್ಟೆ ರೂಪಿಸಿದರೆ ಎಪಿಎಂಸಿ ಬದಲು ಮತ್ತೊಂದು ಮಾರುಕಟ್ಟೆ ಬಂದಂತಾಗಲಿದೆ.

ಅಲ್ಲಿ ನಾಲ್ಕೆದು ವರ್ತಕರು ಇರುತ್ತಾರೆ. ಹಳ್ಳಿಯಲ್ಲಿ ಹೊಸ ಮಾರುಕಟ್ಟೆ ಬಂದರೆ ಅದು ಮತ್ತೊಂದು ಕಪಿಮುಷ್ಟಿ ಹೊಂದಿದ ವ್ಯವಸ್ಥೆ ಆಗಲಿದೆ. ಬಿಜೆಪಿ ಚಿಂತನೆಯಂತೆ ಹೊಸ ವ್ಯವಸ್ಥೆ ಬರುವುದರಿಂದ ಸಾವಿರಾರು ವರ್ತಕರ ಜಾಲದಡಿ ಯಾರಿಗಾದರೂ ಒಬ್ಬರಿಗೆ ಉತ್ಪನ್ನ ಮಾರಾಟ ಮಾಡಲು ರೈತರಿಗೆ ಅವಕಾಶ ಲಭಿಸಲಿದೆ. ಖರೀದಿದಾರರು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಇದ್ದಾಗ ಸಹಜವಾಗಿಯೇ ಸ್ಪರ್ಧೆ ಹೆಚ್ಚಾಗಿ ಅತ್ಯುತ್ತಮ ದರ ಲಭಿಸುತ್ತದೆ. ಆದ್ದರಿಂದ ಕಾಂಗ್ರೆಸ್‌ನ ಚಿಂತನೆ, ಪ್ರಣಾಳಿಕೆಯಲ್ಲಿ ಇದೆ ಎನ್ನಲಾದ ಅಂಶಗಳು ತೀರಾ ಅಪ್ರಾಯೋಗಿಕವಾಗಿವೆ.

ಕೊನೆಯದಾಗಿ ಒಂದು ವಿಚಾರ ಹೇಳಲೇಬೇಕು. ಷೆರ್ಲಾಕ್ ಹೋಮ್‌ಸ್‌‌ಗೆ ಸಂಬಂಧಿಸಿದ ಕಥೆ ಇದು. ಮನೆಯಲ್ಲಿ ಒಂದು ಕಳ್ಳತನ ಆದ ಸಂದರ್ಭ ಇದಾಗಿದೆ. ಆ ಮನೆಯಲ್ಲಿ ನಾಯಿ ಇದ್ದರೂ ಅದು ಬೊಗಳಲಿಲ್ಲ ಯಾಕೆ? ಆ ನಾಯಿಗೆ ಗೊತ್ತಿರುವ ಮನೆಯ ಯಾರೋ ಒಬ್ಬರು ಇರುವ ಕಾರಣ ನಾಯಿ ಬೊಗಳಲಿಲ್ಲ ಎಂದು ಷೆರ್ಲಾಕ್ ಹೋಮ್ಸ್ ಅವರು ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಕೇಂದ್ರದ ಮಾಜಿ ಹಣಕಾಸು ಸಚಿವರು ಕೇ ಎಪಿಎಂಸಿ ತಿದ್ದುಪಡಿ ಕಾಯ್ದೆ ಕುರಿತು ಮಾತ್ರ ಮಾತನಾಡಿದ್ದಾರೆ.

ಮಿಕ್ಕಿದ ಎರಡು ಮಸೂದೆಗಳ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಮೊದಲನೆಯದಾಗಿ ಅಗತ್ಯ ವಸ್ತುಗಳ ಕಾಯಿದೆಗೆ
(ಇಸಿಎ) ಮಾಡಿದ ತಿದ್ದುಪಡಿಯಿಂದ ಬೇಕಾದಷ್ಟು ಉತ್ಪನ್ನ ಶೇಖರಣೆ ಮಾಡಿ ಸಂಸ್ಕರಣೆ ನಡೆಸಿ ಮಾರಾಟ ಮಾಡಲು ಅವಕಾಶ ವಾಗಲಿದೆ. ಸ್ಥಳೀಯವಾಗಿ ಶೇಖರಣೆ, ಸಂಸ್ಕರಣಾ ಘಟಕಗಳು, ಕೃಷಿ ಉತ್ಪನ್ನಗಳ ಪೂರಕ ಘಟಕಗಳೂ ಸ್ಥಾಪನೆ ಯಾಗಲಿವೆ.
ಸ್ಥಳೀಯವಾಗಿ ಉದ್ಯಮೀಕರಣ ಆದಾಗ ಆಯಾ ಪ್ರದೇಶದ ಜನರಿಗೆ ಉದ್ಯೋಗ ಲಭಿಸಲಿದೆ. ಇವನ್ನು ತಿಳಿಯದೆ ಷೆರ್ಲಾಕ್ ಹೋಮ್ಸ್‌ ಕಥೆಯ ಮಾದರಿಯಲ್ಲಿ ಚಿದಂಬರಂ ಅವರು ಮೊದಲನೇ ಕಾಯಿದೆ ಕುರಿತಷ್ಟೇ ಪ್ರಸ್ತಾಪಿಸಿದ್ದಾರೆ.

ಅಲ್ಲದೆ ಗುತ್ತಿಗೆ ಆಧಾರಿತ ಕೃಷಿಯೂ ಬಂದಾಗ ರೈತರಿಗೆ ಇನ್ನೂ ಲಾಭ ದೊರಕಲಿದೆ. ಹಿಂದೆ ಉತ್ಪನ್ನ ಮಾರಾಟ ಮಾಡಿದ
ರೈತರಿಗೆ ಒಟ್ಟು ದರದ ಶೇ.30 ಮಾತ್ರ ಸಿಗುತ್ತಿತ್ತು. ಉಳಿದ ಶೇ.70 ದಲ್ಲಾಳಿಗಳ ಪಾಲಾಗುತ್ತಿತ್ತು. ಹೊಸ ಕಾಯಿದೆಯಿಂದ ಈ ಚಿತ್ರಣ ಸಂಪೂರ್ಣ ಬದಲಾಗಿ ರೈತರಿಗೆ ಪೂರ್ಣ ದರ ಸಿಗಲಿದೆ. ಕೇವಲ ಎಪಿಎಂಸಿಯನ್ನು ತೆಗೆದು ಮತ್ತೊಂದು ಪರ್ಯಾಯ ಮಾರುಕಟ್ಟೆ ಮಾಡಿದಾಗ ರೈತರಿಗೆ ಲಾಭ ಆಗಲಾರದು. ದೇಶಾದ್ಯಂತ ಏಕ ಮಾರುಕಟ್ಟೆ ಮಾಡಿ ಅಲ್ಲಿರುವ ಲಕ್ಷಾಂತರ ಜನ ಖರೀದಿದಾರ ರಾದಾಗ, ತಂತ್ರಜ್ಞಾನ ಬಳಸಿ ಎಲ್ಲಿಂದ ಬೇಕಾದರೂ ಮಾರಾಟ ಮತ್ತು ಖರೀದಿ ಮಾಡಬಹುದು ಎಂಬ ಕಾಯಿದೆಯಿಂದ ರೈತರಿಗೆ ಧಾರಣೆಯಲ್ಲಿ ಖಚಿತತೆ ಲಭಿಸಲಿದೆ. ಗುತ್ತಿಗೆ ಆಧಾರಿತ ಕೃಷಿ ಮೂಲಕ ಕೃಷಿಕರಿಗೆ ತಂತ್ರಜ್ಞಾನದಲ್ಲಿ ಸಹಾಯಹಸ್ತವೂ ಲಭಿಸು ತ್ತದೆ. ಈ ಲೇಖನದಲ್ಲಿ ಚಿದಂಬರಂ ಅವರು ತಮ್ಮ ಅಪ್ರತಿಮ ಬುದ್ಧಿಮತ್ತೆಗೆ ಸರಿಯಾಗಿ ವ್ಯಾಖ್ಯಾನ ಮಾಡಿಲ್ಲ, ಬದಲಾಗಿ ಕೇವಲ ರಾಜಕೀಯ ಉದ್ದೇಶದ ವ್ಯಾಖ್ಯಾನ ಮಾಡಿದ್ದಾರೆ ಎಂಬುದೂ ಎದ್ದು ಕಾಣುವ ವಿಚಾರ.