Friday, 20th September 2024

ಹೈಕಮಾಂಡೇ ಸಿಎಂ ಅವಧಿ ಸ್ಪಷ್ಟಪಡಿಸಲಿ !

ವರ್ತಮಾನ

maapala@gmail.com

ಬಹುಮತ ಇದ್ದೆಡೆ ಭಿನ್ನಮತವೂ ಸಾಮಾನ್ಯ. ಆದರೆ, ಕಾಂಗ್ರೆಸ್‌ನಲ್ಲಿ ಅಂತಹ ಭಿನ್ನಮತ ಎದುರಾದಾಗಲೆಲ್ಲ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಗಳು ಭಿನ್ನಮತವನ್ನು ಮುಚ್ಚಿಹಾಕುತ್ತದೆ. ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಬದಲಾವಣೆಯಂಥ ಕಠಿಣ ನಿರ್ಧಾರಗಳನ್ನು ಕೈಗೊಂಡ ಉದಾಹರಣೆಯೂ ಇದೆ. ಆದರೆ….

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಸರಕಾರ ರಚನೆ ಅಷ್ಟು ಸುಲಭವಾಗಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಶಕ್ತಿ ಕೇಂದ್ರಗಳಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿ ಸರಕಾರ ರಚನೆಯನ್ನು ಕಗ್ಗಂಟಾಗಿಸಿತ್ತು. ಕೊನೆಗೆ ಹೈಕಮಾಂಡ್ ಮಧ್ಯೆ ಪ್ರವೇಶದಿಂದಾಗಿ ಸರಕಾರ ರಚನೆಯಾಯಿತಾದರೂ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಆ ಸಂದರ್ಭದಲ್ಲಿ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ, ನಂತರದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು.

ಅದೇ ರೀತಿ ಮುಖ್ಯಮಂತ್ರಿ ಜತೆಗೆ ಸಚಿವ ಸಂಪುಟ, ನಿಗಮ-ಮಂಡಳಿಗಳ ಪ್ರಮುಖರ ಸ್ಥಾನವೂ ಬದಲಾಗಬೇಕು ಎಂಬ ತೀರ್ಮಾನ ಹೈಕಮಾಂಡ್ ಕೈಗೊಂಡಿತ್ತು ಎನ್ನಲಾಗಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ‘ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ’ ಎಂಬ ಅವರ ಬೆಂಬಲಿಗರ ಹೇಳಿಕೆ, ಅದಕ್ಕೆ ಬಂದ ಪ್ರತಿಕ್ರಿಯೆಗಳು ಆರಂಭದಲ್ಲೇ ಗೊಂದಲ ಮೂಡಿಸಿವೆ.

ಅಷ್ಟರಲ್ಲಿ ಗ್ಯಾರಂಟಿ ಘೋಷಣೆ, ಬಜೆಟ್ ಮಂಡನೆಯಿಂದಾಗಿ ಈ ವಿಚಾರ ಮೂಲೆಗೆ ಸರಿಯಿತಾದರೂ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ
ಉರಿಯುತ್ತಿತ್ತು. ಇದೀಗ ಆ ಕೆಂಡ ಮತ್ತೆ ಬೆಂಕಿಯಾಗಿ ‘ಕೈ’ ಸುಡಲಾರಂಭಿಸಿದೆ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯೊಂದಿಗೆ ಆರಂಭವಾದ
ಅಸಮಾಧಾನದ ಕಿಡಿ ಹೊತ್ತಿಕೊಂಡು ಮುಖ್ಯಮಂತ್ರಿ ಬದಲಾವಣೆವರೆಗೆ ಬಂದು ತಲುಪಿದೆ. ಎಲ್ಲವೂ ಹೈಕಮಾಂಡ್ ಹೇಳಿದಂತೆ ಎಂದುಕೊಂಡೇ
ಶಾಸಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. ಹೈಕಮಾಂಡ್‌ನ ಇಬ್ಬರು ನಾಯಕರು ಬಂದು ಯಾರೂ ಬಹಿರಂಗವಾಗಿ ಮಾತನಾಡಬಾರದು. ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಹೋಗಿದ್ದಾರೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೈಕಮಾಂಡ್ ನಾಯಕರ ಸೂಚನೆ ಉಲ್ಲಂಘಿಸಿ ‘ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿ
ರುತ್ತೇನೆ’ ಎಂದಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡುವವರು ಕೆಲಸಕ್ಕೆ ಬಾರದೇ ಇರುವವರು ಎಂದು ಹರಿಹಾಯ್ದಿದ್ದಾರೆ. ಯಾರೂ ಬಹಿರಂಗವಾಗಿ ಮಾತನಾಡಬಾರದೆಂಬ ಹೈಕಮಾಂಡ್ ನಿರ್ದೇಶನವನ್ನು ಮುಖ್ಯಮಂತ್ರಿಯವರೇ ಉಲ್ಲಂ
ಸಿದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಪರಿಸ್ಥಿತಿಯಲ್ಲಿ ನಾಯಕರು ಇಲ್ಲ. ಮತ್ತೊಂದೆಡೆ ಸಿದ್ದರಾಮಯ್ಯ ಅವರನ್ನು ನೇರಾನೇರ ಎದುರು
ಹಾಕಿಕೊಂಡು ರಾಜಕೀಯ ಮಾಡುವ ತಾಕತ್ತು ಯಾರಿಗೂ ಇಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರು,
ಕೆಪಿಸಿಸಿ ಅಧ್ಯಕ್ಷರಿಗಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಮೇಲಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಪ್ತ ವಲಯದವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದರಲ್ಲಿ ಅರ್ಥವಿಲ್ಲ.
ತಮ್ಮ ನಾಯಕ ಅಧಿಕಾರದಲ್ಲಿ ಮುಂದುವರಿಯಬೇಕು, ತಮಗೂ ಅಧಿಕಾರ ಸಿಗಬೇಕು ಎಂದು ಜತೆಗಿದ್ದವರು ಬಯಸುವುದು ತಪ್ಪೂ ಅಲ್ಲ.
ಹೀಗಿರುವಾಗ ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರು ಇದುವರೆಗೆ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸದೇ ಇರುವುದೇ ಈ ಎಲ್ಲ
ಗೊಂದಲಗಳಿಗೆ ಕಾರಣ. ಸರಕಾರ ರಚನೆಯಾದಾಗಲೇ ಅಽಕಾರ ಹಂಚಿಕೆ ಬಗ್ಗೆ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನು
ಸ್ಪಷ್ಟಪಡಿಸಿದ್ದರೆ ಅವರಿಬ್ಬರ ಆಪ್ತ ಶಾಸಕರು, ಸಚಿವರು ಬಹಿರಂಗ ಹೇಳಿಕೆ ನೀಡುವುದು ತಪ್ಪುತ್ತಿತ್ತು.

ಯಾರು, ಯಾರ ಬಾಯನ್ನೂ ಮುಚ್ಚಿಸುವ ಅಗತ್ಯವಿಲ್ಲ. ಆದರೆ, ಅಂದು ಸಮಸ್ಯೆ ಬಗೆಹರಿದರೆ ಸಾಕು ಎಂಬ ಕಾರಣಕ್ಕೆ ಅಧಿಕಾರ ಹಂಚಿಕೆ ವಿಚಾರದಲ್ಲಿ ನಿರ್ಧಾರ ಕೈಗೊಂಡು ಅದನ್ನು ಬಹಿರಂಗಪಡಿಸದೇ ತಲೆಗೊಬ್ಬರಂತೆ ಒಂದೊಂದು ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದೇ ಹೈಕಮಾಂಡ್. ಬಹುಶಃ ಪಕ್ಷದ ಹೈಕಮಾಂಡ್ ಈ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿತ್ತು. ತಾನೇನೇ ನಿರ್ಧಾರ ಕೈಗೊಂಡರೂ ಅದನ್ನು ಉಳಿದವರು ಚಾಚೂತಪ್ಪದೆ ಪಾಲಿಸುತ್ತಾರೆ ಎಂದು ಭಾವಿಸಿದಂತಿದೆ. ಏಕೆಂದರೆ, ಈ ಹಿಂದೆಲ್ಲ ಹೈಕಮಾಂಡ್ ನಿರ್ಧಾರವನ್ನು ಯಾರೂ ಪ್ರಶ್ನೆ ಮಾಡದೆ ಪಾಲಿಸುತ್ತಿದ್ದರು.

ಪ್ರಶ್ನೆ ಮಾಡಿದವರು ಅಥವಾ ತಿರುಗಿ ಬಿದ್ದವರನ್ನು ಬದಿಗೆ ತಳ್ಳಿ ತನಗೆ ಬೇಕಾದ್ದನ್ನು ಮಾಡಿದ ಉದಾಹರಣೆಗಳಿವೆ. ಎಸ್ ನಿಜಲಿಂಗಪ್ಪ,
ದೇವರಾಜ ಅರಸು, ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪರಂಥವರನ್ನೇ ಕಾಂಗ್ರೆಸ್ ಮೂಲೆಗುಂಪು ಮಾಡಿತ್ತು. ಹಿಂದುಳಿದ ವರ್ಗಗಳ ಹರಿಕಾರ
ಎಂದೆನಿಸಿಕೊಂಡಿದ್ದ ದೇವರಾಜ ಅರಸು ಅವರನ್ನೂ ಪಕ್ಷದಿಂದ ಉಚ್ಛಾಟಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಲಾಗಿತ್ತು.
ವೀರೇಂದ್ರ ಪಾಟೀರ ವಿರುದ್ಧ ಅನಾರೋಗ್ಯದ ನೆಪ ವೊಡ್ಡಿ ಆದೇಶ ಹೊರಡಿಸಿ ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿತ್ತು. ಎಸ್.ಬಂಗಾರಪ್ಪ ಅವರನ್ನೂ ಅಧಿಕಾರದಿಂದ ಇಳಿಸಿ ಬೇರೆಯವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ, ಅದರಿಂದ ಕಾಂಗ್ರೆಸ್ ಗಾಗಲೀ, ಸರಕಾರಕ್ಕಾಗಲೀ ಯಾವುದೇ ಧಕ್ಕೆ ಆಗಿರಲಿಲ್ಲ.

ಅಷ್ಟರ ಮಟ್ಟಿಗೆ ಪಕ್ಷದ ಹೈಕಮಾಂಡ್ ಬಲಾಢ್ಯವಾಗಿತ್ತು. ಜನ ಆ ಪಕ್ಷದ ಜತೆ ನಿಂತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್
ಹೈಕಮಾಂಡ್ ಮಾತ್ರ ಹಳೆಯ ಮನಃಸ್ಥಿತಿಯಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.
ಶಿವಕುಮಾರ್ ಇಬ್ಬರೂ ಪಕ್ಷಕ್ಕೆ ಅನಿವಾರ್ಯ. ಹೀಗಾಗಿ ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಅನಿವಾರ್ಯವೂ ಇದೆ. ಆದ ಕಾರಣ ಅತ್ತ ಹಳೆಯ ಮನಃಸ್ಥಿತಿಯಿಂದ ಹೊರಬ ರಲೂ ಆಗದೇ, ಇತ್ತ ಏನೂ ಮಾಡಲಾಗದ ಸ್ಥಿತಿಯಲ್ಲಿ ಹೈಕಮಾಂಡ್ ಇದೆ; ಮತು ಕೇವಲ ಮಾತಾಡುತ್ತಿದೆ. ಇದಕ್ಕೆ ಮತ್ತೂ ಒಂದು ಕಾರಣ, ಹೈಕಮಾಂಡ್‌ನಲ್ಲೇ ನಾಯಕರ ಮಧ್ಯೆ ಒಮ್ಮತ ಇಲ್ಲದಿರುವುದು.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರೂ ಪಕ್ಷದ ಹಿಡಿತ ರಾಹುಲ್ ಗಾಂಧಿ ಕೈಯ್ಯಲ್ಲಿದೆ. ಖರ್ಗೆ ಅವರ ಎಲ್ಲ ನಿರ್ಧಾರಗಳಲ್ಲೂ ರಾಹುಲ್ ಗಾಂಧಿ ಜತೆಗೆ ನಿಲ್ಲುತ್ತಿಲ್ಲ. ಇದು ಕರ್ನಾಟಕದ ವಿದ್ಯಮಾನದಲ್ಲಿ ಸ್ಪಷ್ಟವಾಗಿದೆ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಮುಖ್ಯಮಂತ್ರಿ
ಬದಲಾವಣೆ ವಿಚಾರ ವಿವಾದಕ್ಕೆ ಕಾರಣವಾದಾಗ ರಾಜ್ಯಕ್ಕೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯ ದರ್ಶಿಗಳಾದ ರಣದೀಪ್‌ಸಿಂಗ್ ಸುರ್ಜೇವಾಲ
ಮತ್ತು ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರನ್ನು ಕರೆಸಿ, ಇನ್ನುಮುಂದೆ ಯಾರೂ ಈ ವಿಚಾರದಲ್ಲಿ
ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ ಬಳಿಕ ಸಿದ್ದರಾಮಯ್ಯ ಅವರು ‘ನಾನೇ ಐದು ವರ್ಷ ಮುಖ್ಯಮಂತ್ರಿ. ಹೆಚ್ಚುವರಿ ಉಪಮುಖ್ಯ
ಮಂತ್ರಿ ಹುದ್ದೆ ಬಗ್ಗೆ ನನಗೆ ಗೊತ್ತಿಲ್ಲ, ಹೈಕಮಾಂಡ್ ನಿರ್ಧರಿಸುತ್ತದೆ’ ಎನ್ನುತ್ತಾರೆ ಎನ್ನುವುದಾದರೆ ಸುರ್ಜೇವಾಲ ಮತ್ತು ವೇಣುಗೋಪಾಲ್
ಅವರನ್ನು ರಾಜ್ಯಕ್ಕೆ ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ ಎಂಬುದು ಸ್ಪಷ್ಟ.

ಏಕೆಂದರೆ, ರಾಹುಲ್ ಕಡೆ ಯಿಂದ ಇಂತಹ ನಿರ್ದೇಶನ ಬಂದರೆ ಅದನ್ನು ಸಿದ್ದರಾಮಯ್ಯ ಉಲ್ಲಂಸುವ ಸಾಧ್ಯತೆ ಇಲ್ಲ. ಏಕೆಂದರೆ, ಮೊದಲಿನಿಂದಲೂ ಸಿದ್ದರಾಮಯ್ಯ ಅವರ ಬೆನ್ನಿಗೆ ರಾಹುಲ್ ನಿಂತಿದ್ದರು. ಹೀಗಾಗಿ ಅವರಿಗೆ ತಿರುಗಿ ಮಾತನಾಡುವ ಮನಃಸ್ಥಿತಿ ಸಿದ್ದರಾಮಯ್ಯ ಅವರದಲ್ಲ. ಹೀಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ರಾಜ್ಯಕ್ಕೆ ಕಳುಹಿಸಿ ನಿರ್ದೇಶನ ಕೊಡಿಸಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎನ್ನುವುದು ಸ್ಪಷ್ಟ. ಮೊದಲಿನಿಂದಲೂ ಸಿದ್ದರಾಮಯ್ಯ ಮತ್ತು ಖರ್ಗೆ ನಡುವೆ ಹೇಳಿಕೊಳ್ಳುವಂತಹ ಬಾಂಧವ್ಯ ಇಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಬಾಂಧವ್ಯ ಚೆನ್ನಾಗಿದೆ.

ಈ ಕಾರಣಕ್ಕಾಗಿಯೇ ಸುರ್ಜೇವಾಲ ಮತ್ತು ವೇಣುಗೋಪಾಲ್ ನಿರ್ದೇಶನದ ಹೊರತಾಗಿಯೂ ಸಿದ್ದರಾಮಯ್ಯ ಹೇಳಿಕೆ ಹೊರಬಂದಿರುವುದು. ರಾಹುಲ್ ಗಾಂಧಿ ಬೆನ್ನಿಗಿರುವಾಗ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರಸ್ತಾಪಿಸುವ ಪರಿಸ್ಥಿತಿಯಲ್ಲೂ ಹೈಕಮಾಂಡ್ ಇಲ್ಲ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ರಾಷ್ಟ್ರೀಯ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಯುವ ಅಗತ್ಯವಿದೆ.

ಕರ್ನಾಟಕದಲ್ಲಿ ರಚನೆಯಾಗಿರುವ ಪಕ್ಷದ ಸರಕಾರವನ್ನೇ ಮಾದರಿಯಾಗಿ ಮುಂದಿಟ್ಟುಕೊಂಡು ಹೋಗಲು ಪಕ್ಷ ನಿರ್ಧರಿಸಿದೆ. ಇಂತಹ ಸಂದರ್ಭದಲ್ಲಿ
ಎಡವಟ್ಟು ಮಾಡಿಕೊಂಡರೆ ರಾಷ್ಟ ಮಟ್ಟದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ
ಗೊತ್ತು. ಈ ಕಾರಣಕ್ಕಾಗಿಯೇ ಅವರು ಹೈಕಮಾಂಡ್ ಆದೇಶದ ಹೊರತಾಗಿಯೂ ಇದೇ ಮೊದಲ ಬಾರಿಗೆ ತಮ್ಮ ಮನಸ್ಸಿನ ಭಾವನೆ,
ಆಸೆಗಳನ್ನು ಬಹಿರಂಗಪಡಿಸಿದ್ದಾರೆ.

ಆದರೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿಕೆಶಿ ಮೌನಕ್ಕೆ ಶರಣಾಗಿದ್ದಾರೆ. ‘ಮಾತನಾಡುವವರು
ಮಾತನಾಡಲಿ, ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುವುದಷ್ಟೇ ನನಗೆ ಗೊತ್ತು. ಅದು ಬಿಟ್ಟು ಬೇರೆ ಗೊತ್ತಿಲ್ಲ’ ಎನ್ನುವ
ಮೂಲಕ ಈ ಬೆಳವಣಿಗೆಗಳು ತಮಗೆ ಅಸಮಾಧಾನ ತಂದಿದೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಹೈಕಮಾಂಡ್ ಏನು ಹೇಳುತ್ತದೆ? ಏನು ಮಾಡುತ್ತದೆ? ಎಂದು ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ. ಶಿವಕುಮಾರ್ ಅವರ ಈ ನಿರ್ಧಾರಕ್ಕೆ ಇನ್ನೂ ಒಂದು ಕಾರಣವಿದೆ.
ಸರಕಾರ ರಚನೆಯಾದಾಗ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡ್ ನಾಯಕರಿಬ್ಬರು, ಮುಖ್ಯಮಂತ್ರಿ ಹಾಗೂ ತಮಗೆ ಬಿಟ್ಟರೆ ಬೇರೆಯವರಿಗೆ
ಸ್ಪಷ್ಟತೆ ಇಲ್ಲ.

ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ಏನಾದರೂ ಅಪಾಯ ಎದುರಾದರೆ ಆ ಆರೋಪ ತನ್ನ ಮೇಲೆ ಬರುತ್ತದೆ. ಭವಿಷ್ಯದಲ್ಲಿ ಇದು ತನಗೇ ಸಮಸ್ಯೆಯಾಗಬಹುದು ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ತಮ್ಮ ಆಕ್ರೋಶವನ್ನು ಅದುಮಿಟ್ಟುಕೊಂಡು ಏನೂ ಪ್ರತಿಕ್ರಿಯಿಸದೆ ಸುಮ್ಮನಿದ್ದಾರೆ.
ಸದ್ಯದ ಮಟ್ಟಿಗೆ ಈ ಮೌನ ಕಾಂಗ್ರೆಸ್‌ಗೆ ಅನುಕೂಲ ಮಾಡುಕೊಡುತ್ತಿದೆಯಾದರೂ ಅದುಮಿಟ್ಟುಕೊಂಡಿರುವ ಆಕ್ರೋಶ ಯಾವ ರೀತಿ ಪಕ್ಷದ ಮೇಲೆ
ಪರಿಣಾಮ ಬೀರುತ್ತದೆ ಎಂಬ ಆತಂಕ ಇದ್ದೇ ಇದೆ. ಈ ಕಾರಣಗಳೇ ಕಾಂಗ್ರೆಸ್‌ನ ಆಂತರಿಕ ಬೇಗುದಿ ಎಂಬ ಕೆಂಡಕ್ಕೆ ಬೂದಿ ಮುಚ್ಚಿಸಿದೆ. ಆದರೆ, ಜೋರು ಗಾಳಿ ಬಂದರೆ ಮತ್ತೆ ಬೂದಿ ಹಾರಿ ಕೆಂಡ ಉರಿಯಾಗಿ ಮಾರ್ಪಾಟಾಗಬಹುದು.

ಲೋಕಸಭೆ ಚುನಾವಣೆವರೆಗೆ ಪರಿಸ್ಥಿತಿ ಇದೇ ರೀತಿ ಇದ್ದರೂ ನಂತರದಲ್ಲಿ ಗಾಳಿ ಬೀಸಬಹುದು. ಹಾಗೇನಾದರೂ ಆದರೆ ಸಮಸ್ಯೆ ಮತ್ತೆ ಬಿಗಡಾಯಿಸಬಹುದು. ಅದಕ್ಕೆ ಮುನ್ನ ಮಳೆ ಬಂದರೆ ಬೂದಿ ಮತ್ತು ಕೆಂಡ ಒದ್ದೆಯಾಗಿ ಸಮಸ್ಯೆ ಬಗೆಹರಿಯಬಹುದು. ಆದರೆ, ಮಳೆ ಬರುವ ಯಾವುದೇ ಲಕ್ಷಣ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಎಂಬ ಎರಡು ವಿಚಾರಗಳು ಕಾಂಗ್ರೆಸ್ ಸರಕಾರಕ್ಕೆ ಮಗ್ಗುಲ ಮುಳ್ಳಾಗಿಯೇ ಮುಂದುವರಿಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

ಲಾಸ್ಟ್ ಸಿಪ್: ರಾಜ್ಯ ರಾಜಕೀಯದಲ್ಲಿ ಅಕ್ಕಿ ಮೇಲೂ ಆಸೆ, ನೆಂಟರ ಮೇಲೂ ಪ್ರೀತಿ ಎಂಬುದಕ್ಕೆ ಉದಾಹರಣೆ ಕಾಂಗ್ರೆಸ್ ಹೈಕಮಾಂಡ್.