ದಾಸ್ ಕ್ಯಾಪಿಟಲ್
ಟಿ.ದೇವಿದಾಸ್ ಬರಹಗಾರ, ಶಿಕ್ಷಕ
ಜೀವನ ಸಂಜೆಯ ನಿರ್ಲಿಪ್ತತೆಯಲ್ಲೂ, ವೈರಾಗ್ಯದಲ್ಲೂ, ಅಸಹಿಷ್ಣುತೆಯಲ್ಲೂ ಬದುಕಿನ ಬಗ್ಗೆ ತಾದಾತ್ಮ್ಯ, ಒಂಥರಾ ಪ್ರೀತಿ, ತುಡಿತ, ಆಕರ್ಷಣೆಯ ಅನುಭೂತಿ ಹುಟ್ಟುವುದು ಅಥವಾ ಮರುಜನ್ಮ ತಾಳುವುದು ಬಾಲ್ಯದ ಸಿಹಿಕಹಿ ಮೆಲುಕಿನಿಂದಲೇ. ನನ್ನ
ಐಶ್ವರ್ಯವನ್ನು ತೆಗೆದುಕೊಳ್ಳಿ, ಖ್ಯಾತಿಯನ್ನು ತೆಗೆದುಕೊಳ್ಳಿ, ಬೇಕೆಂದರೆ ನನ್ನ ಯವ್ವನವನ್ನೂ ಕಸಿದುಕೊಳ್ಳಿ, ಆದರೆ ದಯ ವಿಟ್ಟು ಶ್ರಾವಣದ ಆ ಮಳೆ ನೀರು ಆ ಕಾಗದದ ದೋಣಿಗಳ ನನ್ನ ಬಾಲ್ಯವನ್ನು ನನಗೆ ಮರಳಿ ಕೊಡಿ ಎಂಬ ಅರ್ಥದ ಹಾಡೊಂದನ್ನು ಜಗಜಿತ್ ಸಿಂಗರ ಮಧುರ ಕಂಠದಲ್ಲಿ ಕೇಳಿದ್ದು ಕೇಳಿಸಿಕೊಂಡವರಲ್ಲಿ ಹಸಿರಾಗಿಯೇ ಇರುತ್ತದೆ!
ಬಾಲ್ಯವೇ ಹಾಗೆ; ಅಸಂಖ್ಯ ಭಾವಗಳ ಸಮ್ಮಿಲನ, ನವರಸಗಳ ಪಾಕ. ಬಾಲ್ಯದಲ್ಲಿ ಪ್ರತಿಕ್ಷಣವೂ ಹೊಸತು, ರಮ್ಯ, ರಂಜನೀಯ, ವಿಸ್ಮಯ, ತನ್ಮಯತೆ, ಅದ್ಭುತ, ಮೋಜು, ಮಸ್ತಿ, ವಿನೋದ, ಹರಟೆ, ಜಗಳ, ಮುನಿಸು, ತಮಾಷೆ, ಕುಚೇಷ್ಟೆೆ, ಆಟ, ಗುದ್ದಾಟ, ಸುಸ್ತು, ಖುಷಿ, ಓದು-ಪಾಠ, ಚಿಂತೆಯಿಲ್ಲದ ಕೇವಲ ನಾಳೆ, ನಾಡಿದ್ದರ ಭರವಸೆ – ಇತ್ಯಾದಿ. ಬಾಲ್ಯದಲ್ಲಿ ಕ್ಷಣಕ್ಷಣಕ್ಕೂ ಬದಲಾಗುವ ಮನಸ್ಸು ಮರ್ಕಟನಂತೆ ಹಾರುತ್ತಿರುತ್ತದೆ.
ಆದರೆ ಎಲ್ಲರೊಂದಿಗೆ ಕೂಡಿ ಆಡುತ್ತದೆ; ಆಡುತ್ತಲೇ ಮತ್ತೆ ಮುನಿಸುಗೊಳ್ಳುತ್ತದೆ. ಹಿಡಿಮುಷ್ಟಿಯಷ್ಟು ಬೈಗುಳ, ಸಣ್ಣ
ಗುದ್ದುಮುರಿಕೆ, ನಾಕು ಪೆಟ್ಟು ಹಿರಿಯರಿಂದ ಬಿದ್ದಾಕ್ಷಣಕ್ಕೆ ಬುದ್ಧಿ ಮತ್ತೆ ಸರಿದಾರಿಗೆ ಬರುವಷ್ಟರಲ್ಲೇ ಒಂದಿಷ್ಟು ಕುಚೇಷ್ಟೆೆ, ಅಣಕುತನ. ರೊಚ್ಚಿಗೇಳಿಸಿದರೂ ಒಂದು ಪ್ರಮಾಣದ ಅಪಹಾಸ್ಯ. ಅರೆಹೊತ್ತಿನಲ್ಲಿ ಇವೆಲ್ಲದರ ಮರೆವು! ಎಂಥಾ ಅದ್ಭುತ ನೋಡಿ!
ಯಾವುದೂ ನೆನಪಾಗಿ ದೀರ್ಘಕಾಲ ಉಳಿಯದ, ಕಾಡದ ಬಾಲ್ಯ ಬುದ್ಧಿ ಬಲಿತು ದೊಡ್ಡವರಾಗುತ್ತಲೇ ಎಲ್ಲವನ್ನೂ ಮೊಗೆ ಮೊಗೆದು ನೆನಪಿಸಿಕೊಡುತ್ತದೆ: ಸಾವಿರ ಸಾವಿರ ನೆನಪುಗಳ ಕಂತೆಯಾಗಿ! ಅದಕ್ಕೇ ಅಂದಿದ್ದು, ಬಾಲ್ಯವೇ ಜೀವನದ ಅದ್ಭುತ ರಮ್ಯಕಾಲ! ಬಾಲ್ಯವೆಂದರೆ ಹೆಚ್ಚು ನೆನಪಾಗುವುದು ಬಾಲ್ಯದ ಆಟಗಳಿಂದಲೇ! ಯಾಕೆಂದರೆ ಬಾಲ್ಯವೆಂದರೆ ಆಟಗಳು. ಮತ್ತು ಬಾಲ್ಯದ ಆಟಗಳೇ ಹಾಗೆ. ಹಾಸಿಗೆಯಿಂದ ಏಳುಏಳುತ್ತಲೇ ಆಟ ರಂಪಾಟ ಆರಂಭವಾಗಿ ಕಣ್ಣುಮುಚ್ಚಿ ನಿದ್ದೆ ಹೋಗುವವರೆಗೂ ನಿಂತಲ್ಲಿ ನಿಲ್ಲದೆ ಕೂತಲ್ಲಿ ಕೂರದೆ ಏನಾದರೊಂದು ಕಿತಾಪತಿ ಮಾಡುತ್ತಲೇ ಬೈಯ್ಯಿಸಿಕೊಳ್ಳುವುದು, ಎಡವಿ ಬೀಳುವುದು, ಬಿದ್ದು ಪೆಟ್ಟಾಗುವುದು, ಅಥವಾ ಪೆಟ್ಟು ಮಾಡಿಕೊಳ್ಳುವುದು.
ಪ್ರತಿಕ್ಷಣವೂ ಹೊಸದೇ! ಪೆಟ್ಟು ಬೀಳುವುದೆಂದು ಗೊತ್ತಿದ್ದರೂ ಪೆಟ್ಟು ಮಾಡಿಕೊಳ್ಳುವುದೆಂದರೆ ಅದೊಂಥರ ಮಜಾ ಬಾಲ್ಯ ದಲ್ಲಿ. ಯಾಕೆಂದರೆ, ಕುಂಟುತ್ತಾ ತೆವಳುತ್ತಾ ನಡೆಯುವಾಗ ಎಲ್ಲರ ಕರುಣೆ, ಅನುಕಂಪ ದೊರೆಯುವುದು ಆಗ ಮಾತ್ರ! ಯಾಕೆಂದರೆ ಮೂವತ್ತು ನಲವತ್ತು ವರ್ಷಗಳ ಹಿಂದೆ ಶುದ್ಧ ಹಳ್ಳಿಯೊಂದರಲ್ಲಿ ಕೂಡು ಕುಟುಂಬದ ಮನೆತನದಲ್ಲಿ ಬೆಳೆದ ನನ್ನಂಥವರಿಗೆ ಬಾಲ್ಯದ ಆಟಗಳೆಂದರೆ ಇಂದಿನ ಆಟಗಳಂತಲ್ಲ. ಅಂದಿನ ಆಟಗಳೇ ತುಂಬಾ ರಮ್ಯ ಮತ್ತು ರೋಚಕ. ಕ್ರಿಯೇಟಿವ್ ಆಗಿರುವಂಥದ್ದು.
ಹಸಿಯ ಮಣ್ಣಿನಲ್ಲಿ ಮನೆ ಕಟ್ಟುವುದು, ಅಡುಗೆ ಮಾಡುವುದು, ಮರಕೋತಿಯಾಟ, ಗೋಲಿಯಾಟ, ಲಗೋರಿ, ಕಬಡ್ದಿ, ಹಾವು
ಏಣಿಯಾಟ, ಚೆನ್ನಮಣೆ, ಕಳ್ಳ ಪೊಲೀಸ್ ಆಟ, ಚಿನ್ನಿದಾಂಡು, ಕಣ್ಣಮುಚ್ಚಾಲೆ, ಸಮುದ್ರದ ಮರಳಲ್ಲಿ ಸುರಂಗ ತೋಡುವ, ಮರಳಮೂರ್ತಿ ಮಾಡುವ, ಮರಳಲ್ಲಿ ಹೆಸರು ಬರೆದು ಅಲೆಯ ನೀರಿನ ತೊಯ್ದಾಟದಲ್ಲಿ ಆಟ ಆಡುವ, ಮಳೆಗಾಲದಲ್ಲಿ ಕಲ್ಲು ಗಳ ಎಡೆಯಲ್ಲಿ ಸಣ್ಣ ಸಣ್ಣ ಏಡಿಗಳನ್ನು ಹಿಡಿಯುವ, ಯಕ್ಷಗಾನದ ಪಾತ್ರಗಳ ಅನುಕರಣೆ ಮಾಡುವ, ಕಲ್ಲಿನಿಂದ ತೆಂಗಿನ ಕಾಯಿಗೆ ಗುರಿಯಿಡುವ, ಹೇಡ್ಗಾಯಿ, ಕ್ಯಾನು ಕಟ್ಕೊಂಡು ಊರಕೆರೆಯಲ್ಲಿ ಗುಂಪಲ್ಲಿ ಈಜುವ, ಅಜ್ಜಿಮನೆಗೆ ಹೋಗುವ, ಕೆಸರು ಗದ್ದೆಯಲ್ಲಿ ಓಡುವ, ಗಾಳ ಹಾಕಿ ಮೀನು ಹಿಡಿಯುವ, ಪ್ಲಾಸ್ಟಿಕ್ ವಾಲಿಬಾಲ್, ಸೈಕಲ್ ರೇಸ್, ಅಂತ್ಯಾಕ್ಷರಿ, ಮದುವೆಯಾಟ, ಟೈಯರ್ ಉರುಳಿಸು ವುದು,…ಹೀಗೆ ಒಂದೇ ಎರಡೇ…!!!
ಮನಸಿಗೆ ಬಂದಂತೆ ಆಟಗಳನ್ನು ಆಡುವುದರಿಂದ ಬಾಲ್ಯದ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಕಸರತ್ತಿಗೆ, ಈ ಆಟಗಳೇ ಪ್ರೇರಣೆ ಯಾಗಿತ್ತು! ದುರಂತವೆಂದರೆ ಭಾವುಕತೆ ಹಾಗೂ ಮಾನವೀಯತೆ ಮತ್ತು ಮನುಷ್ಯ ಸಂವೇದನೆಯನ್ನು ಬೆಳೆಸುವ ಈ ಎಲ್ಲ ಆಟ ಗಳು ಈಗ ಮಾಯವಾಗಿ ಕ್ರಿಕೆಟ್ ಒಂದೇ ಜಗತ್ತಿನೆಲ್ಲೆಡೆಯಲ್ಲಿ ಮೆರೆಯುತ್ತಿದೆ. ದುರಂತವಲ್ಲದೇ ಇನ್ನೇನು? ಯಾರ ಬಾಲ್ಯ ಪರಿಸರದ ತಾದಾತ್ಮ್ಯದೊಂದಿಗೆ ಬೆಳೆಯುತ್ತದೋ ಅವನು ದೊಡ್ದವನಾಗುತ್ತ ಹೋದ ಹಾಗೆ ಸಂವೇದನಶೀಲನಾಗುತ್ತಾನೆ.
ಹೆಚ್ಚು ಜೀವಪರ ನಿಲುವಿನ ದಯೆಯನ್ನು ಹೊಂದುತ್ತಾನೆ. ಭಾಷೆ, ಸಂಸ್ಕೃತಿ, ನೆಲ – ನೀರು, ಉಡುಗೆ, ನಡೆ – ನುಡಿಯಲ್ಲಿ ಬದ್ಧತೆ ಯನ್ನು ಹೊಂದಿರುತ್ತಾನೆ. ಹೊಲ, ಗದ್ದೆ, ನದಿ – ಕೆರೆ, ಹಕ್ಕಿಗಳು, ಸಾಕುಪ್ರಾಣಿಗಳು, ವಿವಿಧ ಜಾತಿಯ ಮರಗಳನ್ನು ಜೀವಂತವಾಗಿ ನೋಡುವ ಕಾಲಮಾನದಲ್ಲಿ ಬೆಳೆದವರಿಗೆ ಅವುಗಳ ನಂಟನ್ನು ಕಳಚಿಕೊಳ್ಳುವುದು ಸಾಧ್ಯವೇ ಇಲ್ಲ.
ಇಂದಿನ ಮಕ್ಕಳಿಗೆ ಅಂಥ ಭಾಗ್ಯ ನಮಗೆ ದೊರೆತಷ್ಟೂ ಸಿಗುವುದಿಲ್ಲವೆಂಬುದು ಖೇದದ ವಿಚಾರ. ಕೆಲವೇ ವರ್ಷಗಳ ಹಿಂದೆ ಜನಿಸಿದವರ ಬಾಲ್ಯವನ್ನು ಶ್ರೀಮಂತಗೊಳಿಸಲು ಶಾಲೆಗಳೂ ಪ್ರಮುಖ ಪಾತ್ರವನ್ನು ವಹಿಸಿದೆ. ಯುನಿಫಾರ್ಮ್, ಪೆನ್ನು, ಪೆನ್ಸಿಲ್, ರಬ್ಬರ್ ಪಡೆಯಲು ಹೆತ್ತವರಲ್ಲಿ ದುಂಬಾಲು ಬೀಳುವುದು ಇದೆಯಲ್ಲ, ಅದು ಹಣದ ಮಹತ್ವವನ್ನು ತಿಳಿಸುತ್ತಿತ್ತು. ಅಪ್ಪ ಅಮ್ಮ
ಮನೆಯ ಪರಿಸ್ಥಿತಿ ಅರ್ಥವಾದದ್ದು ಹೀಗೆಯೇ! ಬಾಲ್ಯ ಭವಿಷ್ಯದ ಬದುಕಿಗೆ ಬೇಕಾದ ಎಲ್ಲ ಬಗೆಯ ಸಿದ್ಧತೆಗಳನ್ನು ಒದಗಿಸುತ್ತದೆ.
ಅಂಥ ಬಾಲ್ಯ ಇಂದಿನ ಮಕ್ಕಳಿಗೆ ಸಿಗುತ್ತಿಲ್ಲ. ಒಂದು ಸುಂದರ ಬಾಲ್ಯವನ್ನು ಮಕ್ಕಳು ಅನುಭವಿಸಲು ಪೋಷಕರು, ಸಮಾಜ,
ಶಾಲೆಗಳು ಒದಗಿಸುವಲ್ಲಿ ವರ್ತಮಾನ ಜೀವನದಲ್ಲಿ ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಜೀವನಶೈಲಿಗಳು ಬದಲಾದಂತೆ ಮತ್ತು ವಯಸ್ಕರ ನಿರೀಕ್ಷೆಗಳು ಮಾರ್ಪಾಡುಗೊಂಡಂತೆ ಬಾಲ್ಯದ ಪರಿಕಲ್ಪನೆಯು ವಿಕಸನ
ಗೊಂಡಂತೆ ಮತ್ತು ಬದಲಾದಂತೆ ಕಾಣುತ್ತದೆ. ಮಕ್ಕಳಿಗೆ ಯಾವುದೇ ಚಿಂತೆಗಳಿರಬಾರದು ಮತ್ತು ಅವರು ಕೆಲಸ ಮಾಡುವ
ಅಗತ್ಯವಿರಬಾರದು ಎಂದು ಕೆಲವರು ನಂಬುತ್ತಾರೆ; ಜೀವನವು ಸಂತೋಷದಾಯಕ ಮತ್ತು ಕಷ್ಟರಹಿತವಾಗಿರಬೇಕು. ಸಾಮಾನ್ಯ
ವಾಗಿ ಬಾಲ್ಯವು ಸಂತೋಷ, ಆಶ್ಚರ್ಯ, ತಲ್ಲಣ ಮತ್ತು ಚೇತರಿಸಿಕೊಳ್ಳುವಿಕೆಯ ಮಿಶ್ರಣವಾಗಿರುತ್ತದೆ. ಅದು ಸಾಮಾನ್ಯ
ವಾಗಿ ಹೆತ್ತವರನ್ನು ಹೊರತುಪಡಿಸಿ, ಆಡುವ, ಕಲಿಯುವ, ಜನರೊಂದಿಗೆ ಬೆರೆಯುವ, ಅನ್ವೇಷಿಸುವ, ಮತ್ತು ಸಾಕಷ್ಟು
ವಯಸ್ಕರ ಮಧ್ಯಸ್ಥಿಕೆ ಇಲ್ಲದ ಪ್ರಪಂಚದಲ್ಲಿ ಚಿಂತಿಸುವ ಕಾಲವಾಗಿರುತ್ತದೆ. ಅದು ವಯಸ್ಕ ಜವಾಬ್ದಾರಿಗಳನ್ನು ನಿಭಾಯಿಸುವ ಅಗತ್ಯವಿಲ್ಲದೇ ಜವಾಬ್ದಾರಿಗಳ ಬಗ್ಗೆ ಕಲಿಯುವ ಕಾಲವಾಗಿರುತ್ತದೆ.
ಮಕ್ಕಳನ್ನು ಅವರಿರುವಂತೆಯೇ ಬೆಳಸಬೇಕು. ಅಂದರೆ ಸರಿಯಾಗಿ ಬೆಳೆಸುವುದಲ್ಲ, ಸಹಜವಾಗಿ ಬೆಳೆಸುವುದಲ್ಲ. ಎಲ್ಲದರ ಅನುಭವವನ್ನು ಅವರಾಗಿಯೇ ಅವರು ಅರ್ಥಮಾಡಿಕೊಳ್ಳುವಂತೆ ಬೆಳೆಸುವುದು. ಬಾಲ್ಯದ ನಡವಳಿಕೆಗಳೇ ಭವಿಷ್ಯದ ವ್ಯಕ್ತಿತ್ವವನ್ನು ರೂಪಿಸುತ್ತದೆ. ದೊಡ್ಡವರಾದ ಮೇಲೂ ಬಾಲ್ಯದ ಅನುಭೂತಿಗೆ ಮನಸು ಮತ್ತೆ ಮತ್ತೆ ಹಂಬಲಿಸುತ್ತಿರುತ್ತದೆ. ಇದು ಮನುಷ್ಯ ಮಾತ್ರದ ಪಾಡು ಅನಿಸುತ್ತದೆ! ಬಾಲ್ಯದ ಆಕೃತಿಗಳನ್ನು ಬಯಸಿದಾಗಲೆಲ್ಲಾ ಮನೋಭಿತ್ತಿಯಲ್ಲಿ ಸಾಕ್ಷಾತ್ಕರಿಸಿ ಕೊಳ್ಳಲು ಸಾಧ್ಯವಾಗುವುದು ಮಾನವನಿಗೆ ಮಾತ್ರ ಸಾಧ್ಯ. ಬದುಕಿನ ಕುರಿತಾದ ಒಲವಿನ ಗಾಢ ಶಕ್ತಿಯನ್ನು ಮತ್ತೆ ಮತ್ತೆ ಸಂಚಯಿಸಿಕೊಳ್ಳುವ ಹಾಗೆ ಮಾಡುವ ಸಾಮರ್ಥ್ಯ ಇಂಥ ಬಾಲ್ಯಕ್ಕಿದೆ. ಮನುಷ್ಯ ಯಾವಾಗ ಬೇಕಾದರೂ ಮಗುವಾಗಬಲ್ಲ; ಮಗುವಾಗಿ ಮುಗ್ಧತೆಯನ್ನೂ ಪಡೆಯಬಲ್ಲ.
ನಿಜ. ಎಲ್ಲರ ಬಾಲ್ಯವೂ ಒಂದೇ ತೆರನಾಗಿರುವುದಿಲ್ಲ. ಕೆಲವರ ಬಾಲ್ಯ ಕಹಿಯ ಅನುಭವಗಳಿಂದ ಕೂಡಿದ್ದರೆ, ಕೆಲವರದು
ಸಿಹಿಯಾದ ನೆನಪುಗಳನ್ನೇ ಮೊಗೆಮೊಗೆದು ಕೊಡುತ್ತದೆ. ಆದರೆ ಒಂದಂತೂ ಸತ್ಯ: ಎರಡೂ ಅನುಭವಗಳು ಬದುಕನ್ನು
ಕಟ್ಟಿಕೊಡುತ್ತವೆ. ಹರಿದ ಬಟ್ಟೆಗೆ ತುಂಡು ಬಟ್ಟೆಯನ್ನು ಕೈಯಿಂದಲೇ ಹೊದ್ದು ಸೇರಿಸಿ ಹೊಸದೆಂಬಂತೆ ಹಾಕಿಕೊಂಡು ಶಾಲೆಯ
ದಿನಗಳನ್ನು ಕಳೆದ ಆ ನೆನಪುಗಳನ್ನು ಹೇಗೆ ಮರೆಯಲು ಯಾರಿಂದ ಸಾಧ್ಯ ಹೇಳಿ? ಬಾಲ್ಯದಲ್ಲಿ ಹೊಸ ಬಟ್ಟೆಯೆಂದರೆ ಜೀವ.
ಪಂಚಪ್ರಾಣ.
ಎಲ್ಲಿ ಹಾಳಾಗಿ ಬಿಡುತ್ತದೋ ಎಂಬ ಜತನದಲ್ಲಿ ಹಾಕದೇ ಹಾಗೆ ಟ್ರಂಕಿನಲ್ಲಿಟ್ಟು ಸುಖಿಸುವ ಬಾಲ್ಯದ ಆ ಮನಸ್ಸು ಮತ್ತೆ ಮತ್ತೆ ಟ್ರಂಕನ್ನು ತೆಗೆದು ಕದ್ದು ನೋಡಿ ಅಮ್ಮನಿಂದ ಪೆಟ್ಟು ತಿನ್ನುವಂತೆ ಮಾಡುತ್ತಿರಲಿಲ್ಲವೇ? ಮನೆಯಲ್ಲಿ ಹಬ್ಬ ಹರಿದಿನಗಳ
ಸಂದರ್ಭಗಳಲ್ಲಿ ಅವುಗಳನ್ನು ಧರಿಸಿ ಎಲ್ಲರ ಮುಂದೆಯೇ ಓಡಾಡುವುದು. ಅಚಾನಕ್ ಕಾಲುಜಾರಿ ಬಿದ್ದು ಗಲೀಜು ಮಾಡ್ಕೊೊಂಡಾಗ ಅದನ್ನು ನೋಡಿ ಬೈಯುತ್ತಲೇ ಬಂದ ಅಮ್ಮ, ಎರಡು ಪೆಟ್ಟು ಬಾರಿಸಿ, ಆ ಬಟ್ಟೆೆ ತೆಗೆದು ಮೈಯ ತೊಳೆಸಿ, ಬಟ್ಟೆೆ ತೊಳೆದು ‘ಇನ್ನ್ಮುಂದೆ ಮುಟ್ಟಿದ್ರೆ ನೋಡು’ ಎಂದು ಗದರಿಸಿ ಟ್ರಂಕಿನಲ್ಲಿಟ್ಟಾಗ ಅತ್ತಿದ್ದು ಹೇಗೆ ಮರೆತೀತು!
ಬೆಳಗ್ಗೆ ತಂಗಳನ್ನು ಊಟ ಮಾಡಿ ಕಿಮೀಗಳಷ್ಟು ನಡೆದು ಹೋಗಿ ಶಾಲೆಯನ್ನು ಮುಗಿಸಿ ಮತ್ತೆ ಸಂಜೆ ಮನೆ ಸೇರುವಾಗ ದಾರಿ ಯುದ್ದಕ್ಕೂ ಕಂಡ ಅಂಗಡಿಯಲ್ಲಿ ನಾಕಾಣೆಗೆ ಹಿಡಿ ಬಟಾಣಿ, ಹತ್ತು ಪೈಸೆಗೆ ಒಂದು ಬಟಾರು, ಅಪರೂಪಕ್ಕೆ ಸಿಗುವ ಒಂದು
ರುಪಾಯಿಯಿಂದ ಕದ್ದು ಹೋಟೆಲಿಗೆ ಹೋಗಿ ಮಿಸಾಳಬಾಜಿ ತಿನ್ನುವ ಸಂಭ್ರಮಕ್ಕೆ ಎಲ್ಲೆಯಿದೆಯೇ!
ಮನೆಗೆ ಬಂದು ಊಟಮುಗಿಸಿ ನಿಟ್ಟುಸಿರು ಬಿಡುವಾಗ ಹೋಂವರ್ಕ್ ನೆನಪಾಗಿ ಭಯ ಕಾಡುತ್ತದೆ. ಹಸಿವು, ಅವಮಾನ, ನೋವು, ತಿರಸ್ಕಾರ, ಕಷ್ಟಗಳೇ ತುಂಬಿದ ಬಡತನದ ಮನೆಯಲ್ಲಿ ಬೆಳೆದ ಮಗುವೊಂದರ ಬಾಲ್ಯವಿದ್ದಂತೆ ಶ್ರೀಮಂತ ಮನೆತನದಲ್ಲಿ ಬೆಳೆದ ಮಗುವಿನ ಬಾಲ್ಯ ಇರಲು ಸಾಧ್ಯವಿಲ್ಲ. ಇಬ್ಬರದೂ ಬಾಲ್ಯವೇ ಆದರೂ ಅನುಭವಗಳು ಬೇರೆ ಬೇರೆ. ಆ ಅನುಭವಗಳು ಹುಟ್ಟಿ ಸುವ ವೈಚಾರಿಕತೆ, ಸಂಸ್ಕೃತಿ, ಸಂಸ್ಕಾರ ಮತ್ತು ಭಾವ ಶ್ರೀಮಂತಿಕೆಗಳು ಬೇರೆ ಬೇರೆಯೇ.
ಬೆಳೆಯುತ್ತ ಅಭಿರುಚಿಗಳು ಬದಲಾಗುತ್ತವೆ. ದೃಷ್ಟಿಕೋನಗಳು ಪರಸ್ಪರ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಅವುಗಳು ಪಡೆಯುವ ವಿನ್ಯಾಸದಿಂದಾಗಿ ಸಮಾಜದಲ್ಲಿ ಅಸಮಾನತೆ ಹುಟ್ಟಿಕೊಳ್ಳುತ್ತದೆಂದು ಭಾವಿಸಿದವನು ನಾನು. ಇಬ್ಬರ ಬಾಲ್ಯದಲ್ಲೂ ಹಣ ಮತ್ತು ಜಾತಿಯ ಪ್ರಭಾವ ಪ್ರಧಾನವಾಗಿರುತ್ತದೆ. ಸಂಸ್ಕೃತಿ, ಸಂಸ್ಕಾರದ ಮೂಲವೂ ಬೇರೆಯಾದ್ದರಿಂದ ಅವುಗಳ ಅಭಿವ್ಯಕ್ತಿಯಲ್ಲಿ ವ್ಯತ್ಯಯಗಳು ಕಾಣುತ್ತವೆ.
ಬಡತನ ಕೆಲವೊಮ್ಮೆ ಬಾಲ್ಯದ ಆನಂದಗಳಿಗೆ ಮುಕ್ತತೆಯನ್ನು ಒದಗಿಸುತ್ತದೆ. ಅದೇ ಹೊತ್ತಿಗೆ ಬಂಧನವನ್ನೂ ಕಾಡುವಂತೆ
ಮಾಡುತ್ತದೆ. ಶ್ರೀಮಂತರ ಮಕ್ಕಳು ಹೊರಗಡೆ ಆಡುವ ಸ್ವಚ್ಛಂದ ಅನುಭವದಿಂದ ವಂಚಿತರಾದರೆ, ಬಡವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತ ಎಲ್ಲದಕ್ಕೂ ದೀನರಾಗಿ ಬದುಕುವ ದೈನ್ಯ ಸ್ಥಿತಿಯಲ್ಲಿ ಎಲ್ಲದರಿಂದಲೂ ವಂಚಿತರಾಗುತ್ತಾರೆ. ಇದು ಮಕ್ಕಳು ಸರಿಸಮಾನವಾಗಿ ಒಂದಾಗಿ ಬೆರೆಯುವುದಕ್ಕೆ ಅವಕಾಶವನ್ನು ನೀಡದೆ ತಾರತಮ್ಯವನ್ನು ಹುಟ್ಟಿಸುತ್ತದೆ. ಮೇಲು – ಕೀಳು ಎಂಬ ಪ್ರಜ್ಞೆ ಮಕ್ಕಳಲ್ಲಿ ಬೆಳೆಯುವುದು ಹೀಗೆಯೇ! ಇದು ಆರೋಗ್ಯವಂತ ಸ್ವಸ್ಥ ಸಮಾಜಕ್ಕೆ ಹಿತವನ್ನುಂಟು ಮಾಡಲಾರದು.
ಬಡವರ ಮಕ್ಕಳು ಸರಕಾರಿ ಶಾಲೆಗೆ, ಉಳ್ಳವರ ಮಕ್ಕಳು ಖಾಸಗಿ ಶಾಲೆಗೆ ಹೋಗುವ ಈ ತಾರತಮ್ಯವನ್ನು ನಿವಾರಿಸುವಲ್ಲಿ ದೊಡ್ಡ ವರ, ಸಮಾಜದ ಪಾತ್ರ ಬಹುದೊಡ್ಡದಿದೆ. ಇಂಥ ಅಸಮಾನತೆಯ, ತಾರತಮ್ಯದ ಭಾವವನ್ನು ಹೋಗಲಾಡಿಸುವ ಸಾಮಾನ್ಯ ಶಾಲೆಗಳ ಪರಿಕಲ್ಪನೆಯನ್ನು ಯು.ಆರ್. ಅನಂತಮೂರ್ತಿಯವರು ಹೇಳಿದ್ದರು.
ಅವಿಭಕ್ತ ಕುಟುಂಬಗಳು ಕಟ್ಟಿಕೊಡುವ ಜೀವನಾನುಭವಗಳನ್ನು ಮರೆಯುವುದುಂಟೆ? ಅದಕ್ಕೆ ಸರಿಸಮ ವಾದುದುಂಟೆ? ನಮ್ಮ
ಹಿರಿಯರನ್ನು ನೋಡಿ. ಖಿನ್ನತೆ ಯಾವತ್ತೂ ಅವರನ್ನು ಕಾಡಿದ್ದಿಲ್ಲ. ಮನೆಯ ಕೆಲಸವನ್ನು ಸಂಭಾಳಿಸುವುದರಲ್ಲೇ ದಿನವನ್ನು ಮುಗಿಸುವ ಅವರಿಗೆ ಕತ್ತಲು ಯಾವ ಭಯವನ್ನೂ ಉಂಟು ಮಾಡುವುದಿಲ್ಲ. ದಿನದಿನಕ್ಕೆ ಉಂಡುಟ್ಟು ತೀರಾ ಎಂಬಷ್ಟು ಭವಿಷ್ಯದ ಚಿಂತೆ ಮಾಡದ ಅವರನ್ನು ಯಾವುದೇ ದುರಾಸೆಗಳು ಪೀಡಿಸುವುದಿಲ್ಲ.
ಕಾಡುವುದಿಲ್ಲ. ಆಯುಷ್ಯ ತೀರುವವರೆಗೆ ಯಾವುದೇ ದೈಹಿಕ, ಮಾನಸಿಕ ಕಾಯಿಲೆಗಳು ಅವರನ್ನು ಅಷ್ಟಾಗಿ ಬಾಧಿಸಲಾರದು.
ಅನ್ಯಚಿಂತನೆಯಿಲ್ಲದ ಅವರ ಬದುಕು ಹಾಸಿ ಹೊದೆಯುವಷ್ಟು ಪ್ರೀತಿಯನ್ನು ಮನೆಯಿಂದ ಗಳಿಸುತ್ತಲೇ ಇರುತ್ತದೆ. ಹಣದಾಸೆ
ಅವರನ್ನು ದುಃಖಕ್ಕೆ ಈಡುಮಾಡಿಲ್ಲ. ಅಷ್ಟಕ್ಕೂ ಹಣದ ವ್ಯಾಮೋಹ ಅವರಿಗಿರುವುದಿಲ್ಲ. ವಿಷಯ ಸುಖಕ್ಕೆ ಅವರು ಹಾತೊರೆಯವುದಿಲ್ಲ.
ಬದುಕು ಬಂದ ಹಾಗೆ ಬದುಕಿದ ಅವರಿಗೆ ಬಡತನವೂ ಶ್ರೀಮಂತಿಕೆಯ ಅನುಭವ ನೀಡುತ್ತಿತ್ತು. ಅದು ಅವರಿಗೆ ಬಾಲ್ಯದ ಬಡತನ ಕಲಿಸಿದ ಪಾಠವಿರಬೇಕು. ಆದ್ದರಿಂದ ಅವರ ಬದುಕು ಅವರ ಪಾಲಿಗೆ ಮತ್ತು ಎಲ್ಲರ ಪಾಲಿಗೂ ಬೆಸ್ಟ್ ಟೀಚರ್ ಆಗಿಯೇ ಇರುತ್ತದೆ. ಬದುಕಿನ ತೀರಾ ನೋವಿನ ಕಷ್ಟದ ಸಂದರ್ಭಗಳನ್ನು ನೆನೆಯುತ್ತಲೇ ಬದುಕು ಸರಿಯಾದ ಹಳಿಗೆ ಬರುತ್ತಿತ್ತು. ಅಂಥ
ಬಾಲ್ಯದ ಬದುಕು ಹಣದ ವಾಂಛೆಯಿಂದ ಮುಕ್ತಗೊಳಿಸಿ ಜೀವನ ಮೌಲ್ಯಗಳನ್ನು, ಕೌಟುಂಬಿಕ ಸಂಬಂಧಗಳನ್ನು ಗಟ್ಟಿಯಾಗಿ
ಬೆಸೆಯುತ್ತದೆ. ನನ್ನ ಬಾಲ್ಯದ ಬಡತನ ಇಂಥ ಪ್ರೀತಿ ವಾತ್ಸಲ್ಯಗಳ, ಕಾಳಜಿ ಕುತೂಹಲಗಳಿಂದ ಇಡಿಯ ಅನುಭವವೇ ಶೂನ್ಯ ವಾಗದಂತೆ ಕಾಪಾಡಿದೆ. ಅವಮಾನವನ್ನು ಗೆಲ್ಲುವ ಸ್ವಾಭಿಮಾನದ ಪ್ರಜ್ಞೆಯನ್ನು ಬೆಳೆಸಿ ಅವೆಲ್ಲವೂ ದೃಢ ಆಕೃತಿಗಳಾಗಿ ನನ್ನನ್ನು ದಟ್ಟವಾಗಿಸಿ ಬಲಗೊಳಿಸಿದೆ.
ನನ್ನ ಬಾಲ್ಯ ನನಗೆ ಕಷ್ಟಗಳನ್ನು ಎದುರಿಸುವ, ಸ್ವನಿರ್ಧಾರಗಳನ್ನು ತೆಗೆದುಕೊಳ್ಳುವ, ಎಲ್ಲಾ ಬಗೆಯ ವಿಕಾರಗಳನ್ನು ಸಹಿಸುವ
ಸಹನೆಯನ್ನು, ಸಹನೆಯೇ ಎಲ್ಲಕ್ಕಿಿಂತ ಮಿಗಿಲಾದ ಪ್ರಾರ್ಥನೆ ಎಂಬುದನ್ನು ಕಲಿಸಿದೆ. ಇಲ್ಲದ್ದಕ್ಕೆೆ ಆಸೆಪಡದ ನೈತಿಕತೆಯನ್ನು
ಕಲಿಸಿದೆ. ವೈಮನಸ್ಸನ್ನು ಮರೆತುಬಿಡುವ ಹಾಗೆ, ದ್ವೇಷವನ್ನು ಬೆಳೆಸದ ಹಾಗೆ, ಅಂಥ ಸಂದರ್ಭ, ಸನ್ನಿವೇಶ, ವ್ಯಕ್ತಿಗಳನ್ನು
ಮರೆಯುವ ಹಾಗೆ, ಸ್ವಾಭಿಮಾನಕ್ಕಿಿಂತ ದೊಡ್ಡ ಸಾರ್ಥಕ್ಯ ಇಲ್ಲವೆಂಬುದನ್ನು, ವೈಷಮ್ಯವನ್ನು ಹುಟ್ಟಿಸಿಕೊಳ್ಳದ ಹಾಗೆ, ಆಗಲ್ಲ
ನೀಗಲ್ಲ ಸರಿಹೋಗಲ್ಲ ಅಂದಾಕ್ಷಣ ಎಲ್ಲವನ್ನೂ ಮರೆತು ಒಂದು ಬಗೆಯ distance ಅನ್ನು ಇಟ್ಟುಕೊಳ್ಳುವ ಸ್ವಭಾವವನ್ನು
ನನ್ನದಾಗುವಂತೆ ಮಾಡಿದ್ದು ನನ್ನ ಬಾಲ್ಯವೇ. ಬೀಗುವುದರ ಬದಲು ಬಾಗುವುದನ್ನು ಬಾಲ್ಯ ಕಲಿಸಿದೆ.
ಪರೀಕ್ಷೆಯಲ್ಲಿ ಫೇಲಾದರೆ ಆತ್ಮಹತ್ಯೆೆ ಮಾಡಿಕೊಳ್ಳುವ ಆಲೋಚನೆಯನ್ನು, ಹೇಡಿತನವನ್ನು ನನ್ನ ಬಾಲ್ಯ ನನಗೆ ಕಲಿಸಿಲ್ಲ. ಅನ್ಯರನ್ನು ವಂಚಿಸುವ, ಕಾಲೆಳೆಯುವ, ನೆಗೆಟಿವ್ ಅಪ್ರೋಚ್ ಮಾಡಿ ನಾನು ಉದ್ಧಾರವಾಗಬೇಕೆಂಬುದನ್ನು ನನ್ನ ಬಾಲ್ಯ ನನಗೆ ಕಲಿಸಿಲ್ಲ. ಚಮಚಾಗಿರಿಯ ದುರ್ಬುದ್ಧಿಯನ್ನು ಕಲಿಸಿಲ್ಲ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ನನ್ನ ಬಾಲ್ಯ ನನ್ನನ್ನು ದಾರಿ
ತಪ್ಪಿಸಲಿಲ್ಲ. ಎಲ್ಲರನ್ನೂ ಗೌರವಿಸುವುದನ್ನು, ಆದರಿಸುವುದನ್ನು ಕಲಿಸಿದೆ. ಯಾವ ಮನೆಯಲ್ಲಿ ರಾಮಾಯಣ, ಮಹಾಭಾರತ,
ಪುರಾಣ, ಇತಿಹಾಸಗಳ ಕಥೆಯನ್ನು ಹಿರಿಯರು ಹೇಳುತ್ತಾರೋ ಆ ಪರಿಸರದಲ್ಲಿ ಬೆಳೆದ ಮಕ್ಕಳು ಆ ಮನೆಯ ಮಕ್ಕಳಾಗಿ ಕೊನೆ ಯವರೆಗೂ ಉಳಿಯುತ್ತಾರೆ.
ಹೀಗೆ, ನನ್ನ ಬಾಲ್ಯ ಭಾವ ಶ್ರೀಮಂತಿಕೆಯನ್ನು ಹುಲುಸಾಗಿ ಕೊಟ್ಟು ಬೆಳೆಸಿದೆ. ಇವೆಲ್ಲವನ್ನೂ ನಾನು ಆತ್ಮಪೂರ್ವಕವಾಗಿ
ನೆನೆಯುತ್ತೇನೆ. ಬಾಲ್ಯ ಅಂದರೆ ಸಾವಿರ ಅಲೆಗಳ ನೆನಪುಗಳು. ಸಾವಿರ ಸಂಗತಿಗಳ ಓಘ. ಪ್ರತಿಯೊಬ್ಬರ ಬದುಕಿನ ರಮ್ಯತೆ
ಯನ್ನು ರಂಜನೀಯವಾಗಿಸೋ ತಾಕತ್ತಿರುವುದು ಬಾಲ್ಯಕ್ಕೆ ಮಾತ್ರ. ನನ್ನ ಬಾಲ್ಯವು ನನ್ನ ಅಪ್ಪನಿಗೆ ಅವರ ಪಿತೃತ್ವ ಭಾವ ವನ್ನೂ, ಅಮ್ಮನಿಗೆ ಮಾತೃತ್ವದ ಭಾವವನ್ನು ಢಾಳಾಗಿ ನೀಡಿದೆ. ಇದಕ್ಕಾಗಿ ನನ್ನ ಬಾಲ್ಯಕ್ಕೆ ಅದರೆಲ್ಲ ಇತಿಮಿತಿಗಳ, ಓರೆಕೋರೆ ಗಳ ಹೊರತಾಗಿಯೂ ನಾನು ಋಣಿಯಾಗಿರುತ್ತೇನೆ. ಈ ಪರಿಯಲ್ಲಿ ಋಣತ್ವದ ಭಾವವನ್ನು ಆಂತರ್ಯದಲ್ಲಿ ಉದ್ದೀಪನಗೊಳಿ ಸಿದ್ದೂ ಕೂಡ ನನ್ನ ಬಾಲ್ಯವೇ.