Tuesday, 17th September 2024

ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಎಡವುತ್ತಿದ್ದಾರೆಯೇ ?

ಅಭಿಮತ

ಗಣಪತಿ ಭಟ್, ವಾರಣಾಸಿ

ಮಕ್ಕಳು ಮೊಬೈಲ್‌ಗಳಿಗೆ, ಗೇಮ್‌ಗಳಿಗೆ ಅಡಿಕ್ಟ್ ಆಗಿರುವುದು ಇಂದಿನ ಕಾಲದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಮಕ್ಕಳನ್ನು ಈ ಚಟದಿಂದ ಹೊರಗೆ ಹೇಗೆ ತರುವುದು ಎನ್ನುವುದು ಹೆತ್ತವರಿಗೆ ದೊಡ್ಡ ಸವಾಲಾಗಿದೆ. ಕ್ರೌರ್ಯದಿಂದ ಕೂಡಿರುವ ವಿಡಿಯೋ ಗೇಮ್‌ಗಳು ಮಕ್ಕಳ ಮಾನಸಿಕತೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ವೀಡಿಯೋ ಗೇಮ್‌ಗಳಿಗೆ ಬಲಿಬಿದ್ದ ಮಕ್ಕಳು, ವರ್ತನೆಯ ಸಮಸ್ಯೆಯನ್ನು ಎದುರಿಸುತ್ತಿದ್ದು ವಿಪರೀತ ಸಿಟ್ಟು ಹಾಗೂ ಅಸಹನೆಯ ವರ್ತನೆಯನ್ನು ತೋರುತ್ತಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಅನಾಥನಂತೆ ಸತ್ತುಹೋದ ಶ್ರೀಮಂತ ಅಪ್ಪನ ವಿಚಾರವನ್ನು ಪ್ರಕಟಿಸಿದ್ದವು. ಬ್ಯಾಂಕ್ ಮ್ಯಾನೇಜರನಾಗಿ ನಿವೃತ್ತಿ ಹೊಂದಿದ ವೃದ್ಧ ಹಾಗೂ ಅಸ್ವಸ್ಥ ವ್ಯಕ್ತಿಯೊಬ್ಬ ತನಗೆ ಇಬ್ಬರು ಮಕ್ಕಳಿದ್ದರೂ ಅವರಾರೂ ನೋಡಿಕೊಳ್ಳದಿದ್ದ ಕಾರಣ ಆರೈಕೆ ಮಾಡುವ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಲಾಡ್ಜ್ ಒಂದರಲ್ಲಿ ವಾಸಿಸುತ್ತಿದ್ದರು. ಆರೈಕೆ ಮಾಡುವ ಸಂಸ್ಥೆಯ ಒಪ್ಪಂದದ ಅವಧಿಯು ಮುಗಿದ ಕಾರಣ ವ್ಯಕ್ತಿಯನ್ನು ತೊರೆದು ಹೋಯಿತು.

ವ್ಯಕ್ತಿಯನ್ನು ನೋಡಿಕೊಳ್ಳುವವರು ಇಲ್ಲದಾದಾಗ ಲಾಡ್ಜಿನ ಮಾಲಿಕನು ಪೋಲೀಸರ ಮೊರೆ ಹೋಗಬೇಕಾಯಿತು. ಪೋಲಿಸರು ಆ ವ್ಯಕ್ತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ವಿದೇಶಗಳಲ್ಲಿರುವ ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರಾರೂ ಸ್ಪಂದಿಸಲೇ ಇಲ್ಲ. ಕೊನೆಗೆ ವ್ಯಕ್ತಿ ಮರಣಿಸಿದಾಗ ಪೊಲೀಸರು ವಿದೇಶ ದಲ್ಲಿದ್ದ ಮಕ್ಕಳಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಾಡಲು ಕೇಳಿಕೊಂಡಾಗ ‘ತಮಗೂ ಮರಣಿಸಿದ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿ ಫೋನ್ ಕಟ್ ಮಾಡಿದರು. ಈ ಮಕ್ಕಳನ್ನು ಬೆಳೆಯಿಸಲು, ಓದಿಸಲು, ವಿದೇಶಗಳಿಗೆ ಕಳುಹಿಸಲು ಆ ಅಪ್ಪ ಎಷ್ಟು ಕಷ್ಟ ಪಟ್ಟಿದ್ದಿರಬೇಡ! ಆದರೂ ಮಕ್ಕಳಿಗೆ ವೃದ್ಧ ತಂದೆ ಬೇಡವಾದ.

ಅಮೆರಿಕದಲ್ಲಿರುವ ಮಕ್ಕಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಊರಿನಲ್ಲಿರುವ ಅಪ್ಪ ಅಮ್ಮಂದಿರನ್ನು ಅಮೆರಿಕಕ್ಕೆ ಕರೆಸಿಕೊಂಡಾಗ, ಆ ಅಪ್ಪ ಅಮ್ಮಂದಿರು
ಅಲ್ಲಿ ಕಷ್ಟಪಡುವ ಹಲವು ಘಟನೆಗಳನ್ನು ನನ್ನ ಅಣ್ಣ ವಿವರಿಸಿದ್ದ. ಭಾರತದಿಂದ ಅಮೆರಿಕಕ್ಕೆ ಹೋಗುವ ಕೆಲವು ಮಂದಿಗೆ ಹಣ ಮಾಡುವುದೊಂದೇ ಗುರಿ.
ಗಂಡಹೆಂಡತಿಯರಿಬ್ಬರೂ ದುಡಿಯುತ್ತಾರೆ. ಸಾಲದ್ದಕ್ಕೆ ಕೆಲವರು ಮೂನ್ ಲೈಟಿಂಗ್(ಏಕಕಾಲದಲ್ಲಿ ಎರಡು ಕಂಪೆನಿಗಳಲ್ಲಿ ದುಡಿಯುವುದು) ಕೂಡ ಮಾಡುತ್ತಾರೆ. ಅಂತವರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಮಯವೆಲ್ಲಿ ಸಿಗುತ್ತದೆ? ಹೀಗಾಗಿ ಮಕ್ಕಳನ್ನು ನೋಡಿಕೊಳ್ಳಲು ಊರಿನಲ್ಲಿರುವ ಅಪ್ಪ ಅಮ್ಮಂದಿರನ್ನು
ತಾವಿರುವ ದೇಶಕ್ಕೆ ಕರೆಸಿಕೊಳ್ಳುತ್ತಾರೆ.

ಅಪ್ಪ ಅಮ್ಮಂದಿರ ಬಳಿ ಮಾತನಾಡಲೂ ಈ ಮಕ್ಕಳಿಗೆ ಬಿಡುವು ಇರುವುದಿಲ್ಲ. ಪರಿಚಯ ಇರದ ಊರಿನಲ್ಲಿ, ಇಂಗ್ಲಿಷ್ ಭಾಷೆ ಬಾರದ ವೃದ್ಧ ಅಪ್ಪ ಅಮ್ಮಂದಿರು ಯಾರೊಬ್ಬರ ಬಳಿಯೂ ತಮ್ಮ ಕಷ್ಟಸುಖವನ್ನು ಹೇಳಲಾಗದೇ ಅನಾಥ ಪ್ರeಯನ್ನುಬೆಳೆಸಿಕೊಳ್ಳುತ್ತಾರೆ. ಒಬ್ಬಾಕೆ ಮಗಳು ತನ್ನ ತಾಯಿಯನ್ನು ಆಕೆಯ ವೀಸಾ ಅವಧಿ ಮುಗಿದಮೇಲೂ ಉಳಿಸಿಕೊಂಡು ಈಗ ಆ ತಾಯಿಗೆ ಭಾರತಕ್ಕೆ ಮರಳಲೂ ಆಗದ, ಅಮೆರಿಕದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೂ ಆಗದ
ಪರಿಸ್ಥಿತಿಯನ್ನು ತಂದೊಡ್ಡಿದ್ದಾಳೆ.

ಇಂದು ಮಕ್ಕಳು ಮೊಬೈಲ್ ಫೋನ್‌ನ್ನು ನೋಡಬೇಡ ಎಂದು ಹೆತ್ತವರು ಬುದ್ಧಿವಾದವನ್ನು ಹೇಳಿದ್ದಕ್ಕೇ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅತಿ ಪ್ರತಿಕ್ರಿಯೆಯನ್ನು ಬೆಳೆಸಿಕೊಳ್ಳುತ್ತಿzರೆ. ಪರೀಕ್ಷೆಯಲ್ಲಿ ೯೯% ಮಾರ್ಕುಗಳು ಬಂದಿದ್ದಾಗಲೂ ಸಂತೋಷ ಪಡದೆ, ಸಿಗದಿರುವ ಒಂದು ಶೇಕಡ ಮಾರ್ಕಿಗೋಸ್ಕರ ಕಣ್ಣೀರಿಡುವ, ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಯನ್ನು ನಾವು ಮಕ್ಕಳಲ್ಲಿ ಕಾಣುತ್ತಿದ್ದೇವೆ. ಅಧ್ಯಾಪಕರು ಅಥವಾ ಹೆತ್ತವರು ಹೇಳುವ ಬುದ್ಧಿಮಾತುಗಳಿಗೆ ಮಕ್ಕಳು ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಹದಿಹರೆಯದವರಲ್ಲಿನ ಆತ್ಮಹತ್ಯಾ ಪ್ರವೃತ್ತಿ ದಿನೇ ದಿನೆ
ಹೆಚ್ಚಾಗುತ್ತಿದೆ. ೨೦೧೭ನೇ ಇಸವಿಯಲ್ಲಿ ೯೯೦೫ ಹದಿಹರೆಯದ ಮಕ್ಕಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರೆ, ೨೦೨೧ರಲ್ಲಿ ಆತ್ಮಹತ್ಯೆ ಮಾಡಿಕೊಂಡ
ಮಕ್ಕಳ ಸಂಖ್ಯೆ ೧೩,೦೦೦ಕ್ಕೆ ಏರಿದೆ.

ಮಕ್ಕಳಲ್ಲಿ ಆಘಾತ, ನೋವು, ಸೋಲುಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವು ಕಡಿಮೆಯಾಗುತ್ತಿರುವುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಭಾರತದ ೧೫ ರಿಂದ ೨೪ ವಯಸ್ಸಿನ ಒಳಗಿನ ಯುವಜನತೆಯಲ್ಲಿ ಖಿನ್ನತೆಯು ಹೆಚ್ಚುತ್ತಿದೆ ಎಂದು ಯುನಿಸೆಫ್ ನ ಅಧ್ಯಯನವು ಹೇಳುತ್ತಿವೆ. ಪ್ರತಿ ಏಳು ಮಕ್ಕಳಲ್ಲಿ ಒಂದು ಮಗುವು ಒಂದಲ್ಲ ಒಂದು ರೀತಿಯ ಮಾನಸಿಕ ಸಮಸ್ಯೆ ಅಥವಾ ಖಿನ್ನತೆಗೆ ಒಳಗಾಗುತ್ತಿದೆ ಎಂದು ಈ ಅಧ್ಯಯನವು ಹೇಳಿದೆ. ಇಂತಹ ಬೆಳವಣಿಗೆಗಳು ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತೇಜನಾಕಾರಿಯಲ್ಲ.

ಮಕ್ಕಳಲ್ಲಿ ಕ್ರೌರ್ಯವೂ ಹೆಚ್ಚುತ್ತಿದೆ. ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಳ್ಳುವುದು ಮಾತ್ರವಲ್ಲ, ಚಾಕು ಮಚ್ಚುಗಳಿಂದ
ಇರಿದು ಕೊಲ್ಲುವ ದ್ವೇಷವನ್ನೂ ತೋರಿಸುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ, ಪ್ರೀತಿಸಿದವರು ತಮಗೆ ಸಿಗದೇ ಇರುವಾಗ ಪ್ರೀತಿಸಿ ದವರನ್ನು ಕೊಲ್ಲುವವರ, ಆಸಿಡ್ ಎರಚುವವರ ಸಂಖ್ಯೆ ಬಹಳ ಹೆಚ್ಚುತ್ತಿದೆ. ತಾನು ಪ್ರೀತಿಸಿದ ಹುಡುಗಿ ತನಗೆ ಒಲಿಯದಿದ್ದಾಗ ಆಕೆ ಸಾಯಲು ಮಾತ್ರ ಯೋಗ್ಯಳು ಎಂದು ನಿರ್ಧರಿಸುವ ಹುಡುಗರ ಪ್ರೀತಿಯ ಮಟ್ಟವಾದರೂ ಯಾವ ರೀತಿಯದ್ದು? ಆ ಹೆಣ್ಣು ಮಗಳಿಗೂ ತನ್ನದೇ ಆದ ಭವಿಷ್ಯವಿದೆ, ಅವರಿಗೂ ಪ್ರೀತಿಯಿಂದ ಸಾಕಿ ಸಲಹಿದ ಅಪ್ಪ ಅಮ್ಮ ಇರುತ್ತಾರೆ ಎಂಬುದು ಅರ್ಥವಾಗದ ಕ್ರೌರ್ಯ ಮನೋಭಾವ ಮಕ್ಕಳಲ್ಲಿ ಬೆಳೆಯುವುದಾದರೂ ಹೇಗೆ? ಮಕ್ಕಳಲ್ಲಿ ಹೆಚ್ಚುತ್ತಿರುವ ಹುಚ್ಚು ಸಾಹಸ ಪ್ರವೃತ್ತಿ ಇನ್ನೊಂದು ಸಮಸ್ಯೆ.

ಮೋಟಾರು ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸದೇ, ಅಜಾಗರೂಕತೆಯಿಂದ, ಅತೀ ವೇಗವಾಗಿ ಚಾಲನೆ ಮಾಡಿ, ವೀಲಿಂಗ್ ನಂತಹ ಕಸರತ್ತುಗಳನ್ನು ಮಾಡಿ ಅಪಘಾತಕ್ಕೊಳಗಾಗಿ ಸಾವಿಗೀಡಾಗುವವರಲ್ಲಿ ಹದಿಹರೆಯದ ಹುಡುಗರೇ ಹೆಚ್ಚು. ಭಾರತದಲ್ಲಿ ಪ್ರತಿ ಗಂಟೆಗೊಬ್ಬರಂತೆ ಹದಿಹರೆಯದ ಮಕ್ಕಳು ರಸ್ತೆ
ಅಪಘಾತಗಳಿಗೆ ಬಲಿಯಾಗುತ್ತಾರೆ ಎಂದು ವರದಿಯೊಂದು ಹೇಳುತ್ತದೆ. ಅಂದರೆ ವರ್ಷವೊಂದಕ್ಕೆ ೮೭೫೦ಕ್ಕೂ ಹೆಚ್ಚು ಯುವಕರು ಅಜಾಗರೂಕ ಚಾಲನೆಯ
ಮಕ್ಕಳಾಟಿಕೆಗೆ ಬಲಿಯಾಗುತ್ತಾರೆ ಎಂದಾಯಿತು!

ಇಂತಹ ಅಪಾಯಕಾರೀ ಜಾಲಿ ರೈಡ್‌ಗಳಿಗೆ ಸಿಲುಕಿ ಬಲಿಯಾಗುವ ಪಾದಚಾರಿಗಳು ಅಥವಾ ಇತರ ಅಮಾಯಕ ಜನರ ಸಂಖ್ಯೆ ಇನ್ನೆಷ್ಟೋ? ಮಾದಕ ವಸ್ತುಗಳ ವ್ಯಸನವು ನಮ್ಮ ದೇಶದ ಯುವ ಜನಾಂಗವನ್ನು ಬಹು ವೇಗವಾಗಿ ಆವರಿಸಿಕೊಳ್ಳುತ್ತಿರುವ ಸಮಸ್ಯೆಯಾಗಿದೆ. ದೇಶದಲ್ಲಿ ಹತ್ತರಿಂದ ಹದಿನೇಳು ವಯಸ್ಸಿ ನೊಳಗಿನ ಸುಮಾರು ೧.೫೮ ಕೋಟಿ ಮಕ್ಕಳು ಗಾಂಜಾ, ಚರಸ್, ಅಫೀಮು ಮೊದಲಾದ ಮಾದಕ ವಸ್ತುಗಳ ಚಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಭಾರತ ಸರಕಾರವು ೨೦೨೨ರಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಮಾದಕ ವಸ್ತುಗಳ ವ್ಯಸನಕ್ಕೆ ಸಿಲುಕಿರುವ ಮಕ್ಕಳು ಅಪರಾಧ ಲೋಕಕ್ಕೆ
ಬಹುಬೇಗ ಪ್ರವೇಶವನ್ನು ಪಡೆಯುತ್ತಾರೆ.

ದೇಶದ ಯುವಜನತೆಯು ಕುಡಿತದ ಚಟಕ್ಕೆ ಸಿಲುಕುತ್ತಿರುವುದೂ ಒಂದು ಸಮಸ್ಯೆಯೇ ಆಗಿದೆ. ಆರಂಭದ ಹಂತದಲ್ಲಿ ಮಜಾ ಮಾಡಲೆಂದು ಕುಡಿಯುವ
ಯುವಕರು ಕ್ರಮೇಣ ಕುಡಿತದ ದಾಸರಾಗುತ್ತಾರೆ. ಕುಡಿತದ ಚಟವು ಆರಂಭವಾಗುವುದು ಹದಿಹರೆಯದ! ಕುಡಿತದಿಂದಾಗಿ ಜನರು ಆರ್ಥಿಕ, ಸಾಮಾಜಿಕ
ಹಾಗೂ ಸಾಂಸಾರಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಪಘಾತ, ಘರ್ಷಣೆ, ಹಿಂಸೆ, ದೊಂಬಿಗಳಿಗೆ ಕೂಡ ಕುಡಿತ ಕಾರಣವಾಗುತ್ತದೆ. ಹೊಂದಾಣಿಕೆಯ ಬದುಕನ್ನು ನಡೆಸುವುದು ಇಂದಿನ ಯುವಜನತೆಗೆ ಬಹಳ ಕಷ್ಟವಾಗುತ್ತಿದೆ.

ಮನುಷ್ಯ ಸಂಬಂಧದಿಂದ ಇವರು ದೂರಾಗುತ್ತಿದ್ದಾರೆ. ಮಕ್ಕಳಿಗೆ ಇಗೀಗ ತಮ್ಮ ಮನೆಗೆ ಯಾರಾದರೂ ಅತಿಥಿಗಳು ಬರುವುದು ಸಹ್ಯವಾಗುತ್ತಿಲ್ಲ. ಅತಿಥಿಗಳು
ಅಥವಾ ಬಂಧುಗಳ ತಮ್ಮ ಮನೆಗೆ ಬರುವುದರಿಂದಾಗಿ ತಮ್ಮ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಭಾವಿಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳು ತಮ್ಮ ಬಂಧುಗಳ ಮನೆಗೆ ಭೇಟಿ ನೀಡುವ ಬಾಂಧವ್ಯದ ಸಂಬಂಧವೂ ಕಡಿಮೆಯಾಗುತ್ತಿದೆ. ಹೊಂದಾಣಿಕೆಯ ಕೊರತೆಯ ಸಮಸ್ಯೆಯು ವೈವಾಹಿಕ ಜೀವನದಲ್ಲೂ ಕಾಣುತ್ತಿದ್ದೇವೆ. ಭಾರತವು ಜಾಗತಿಕವಾಗಿ ಕಡಿಮೆ ಡೈವೋರ್ಸ್ ರೇಟ್ ಅನ್ನು ಹೊಂದಿದ ದೇಶವಾದರೂ ಇತ್ತೀಚೆಗಿನ ದಿವಸಗಳಲ್ಲಿ ಯುವಜನತೆ ಯಲ್ಲಿ ವಿಚ್ಛೇದನ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವುದನ್ನು ನಾವು ಕಾಣಬಹುದು.

ಇದೀಗ ದೇಶದಲ್ಲಿ ೧.೧% ವಿವಾಹಿತರು ವಿವಾಹ ವಿಚ್ಛೇದನಕ್ಕೆ ಒಳಗಾಗುತ್ತಿದ್ದಾರೆ. ಮದುವೆಯಾದ ಒಂದು ವಾರದ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರು ವವರೂ ಇದ್ದಾರೆ. ಕೌಟುಂಬಿಕ ಹಿಂಸೆ ಹಾಗೂ ಕಲಹಗಳು ಹೆಚ್ಚಾಗಿರುವುದು, ಪರಸ್ಪರ ಅಪನಂಬಿಕೆ ಮೊದಲಾದವುಗಳು ಡೈವೋರ್ಸ್‌ಗಳಿಗೆ ಕಾರಣವಾಗುತ್ತಿವೆ. ನಮಗೆ ಬಹಳ ಸಿಲ್ಲಿ ಅನಿಸುವ ಕಾರಣಗಳಿಗೂ ದಂಪತಿಗಳು ವಿಚ್ಛೇದನಕ್ಕಾಗಿ ಅರ್ಜಿಸಲ್ಲಿಸುವುದನ್ನು ಕಾಣಬಹುದು. ಮಕ್ಕಳು ಮೊಬೈಲ್‌ಗಳಿಗೆ, ಗೇಮ್‌ಗಳಿಗೆ ಅಡಿಕ್ಟ್ ಆಗಿರುವುದು ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮಕ್ಕಳನ್ನು ಈ ಚಟದಿಂದ ಹೊರಗೆ ಹೇಗೆ ತರುವುದು ಎನ್ನುವುದು ಹೆತ್ತವರಿಗೆ ದೊಡ್ಡ
ಸವಾಲಾಗಿದೆ.

ಕ್ರೌರ್ಯದಿಂದ ಕೂಡಿರುವ ವಿಡಿಯೋ ಗೇಮ್‌ಗಳು ಮಕ್ಕಳ ಮಾನಸಿಕತೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ವೀಡಿಯೋ ಗೇಮ್ ಗಳಿಗೆ ಬಲಿಬಿದ್ದ ಮಕ್ಕಳು, ವರ್ತನೆಯ ಸಮಸ್ಯೆಯನ್ನು ಎದುರಿಸುತ್ತಿದ್ದು ವಿಪರೀತ ಸಿಟ್ಟು ಹಾಗೂ ಅಸಹನೆಯ ವರ್ತನೆಯನ್ನು ತೋರುತ್ತಿzರೆ. ಇಂದಿನ ಬಹುತೇಕ ಮಕ್ಕಳಿಗೆ ಹಣದ ಬೆಲೆಯೇ ಗೊತ್ತಿಲ್ಲ. ಹೆತ್ತವರ ಪರಿಶ್ರಮದ ಬಗ್ಗೆ ಗೌರವ ಕಡಿಮೆ. ಅವರು ಕೇಳಿಕೇಳಿದ್ದನ್ನೆಲ್ಲ ಹೆತ್ತವರು ಕೊಡಿಸದಿದ್ದರೆ ವಿಪರೀತ ಸಿಟ್ಟನ್ನು ತೋರಿಸುವ ಮಕ್ಕಳೂ ಇದ್ದಾರೆ. ಹೆತ್ತವರು ದುಡಿದ ಹಣವಿದೆಯೆಂದು ಸರಿಯಾಗಿ ವಿದ್ಯಾಭ್ಯಾಸ ಮಾಡದೆ, ಉದ್ಯೋಗಕ್ಕೆ ಹೋಗದೆ ಹೆತ್ತವರನ್ನು ಚಿಂತೆಗೆ ದೂಡುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ.

ಹೆತ್ತವರು ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಹಣ ಸಂಪಾದಿಸುವ ಯಂತ್ರಗಳನ್ನಾಗಿಸುವ ಕಾರ್ಯದಲ್ಲಿ ತೊಡಗಿರುವುದು ಮಕ್ಕಳ ಇಂದಿನ ಸ್ಥಿತಿಗೆ ಕಾರಣವಾಗಿದೆ. ನಾವು ಯಶಸ್ವಿ ವ್ಯಕ್ತಿಗಳೆಂದು ಆರಾಧಿಸುವುದು ಉತ್ತಮವಾಗಿ ಹಣ ಸಂಪಾದನೆಯನ್ನು ಮಾಡಿದವರನ್ನು ಮಾತ್ರ. ಉತ್ತಮವಾಗಿ
ಸಂಪಾದನೆ ಮಾಡುವುದು ಯಶಸ್ವಿ ಜೀವನದ ಮೆಟ್ಟಿಲು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಇದರಿಂದಾಗಿ ಹಣವನ್ನು ಸಂಪಾದಿಸುವುದರ ಮುಂದೆ ಜೀವನ ಮೌಲ್ಯಗಳೆಲ್ಲ ಗೌಣ ಎನ್ನುವ ಭಾವನೆ ಜನರಲ್ಲಿ ಬೆಳೆಯುತ್ತಿದೆ.

ಹೆತ್ತವರು ತಮ್ಮ ಮಕ್ಕಳನ್ನು ಬಂಧುಗಳ ಮನೆಯ ಮದುವೆ ಮೊದಲಾದ ಶುಭ ಕಾರ್ಯಕ್ರಮಗಳಿಗೆ ಕಳುಹಿಸುವುದು ಕಡಿಮೆ ಆಗಿದೆ. ಹಾಗೆ ಕಳುಹಿಸಿದರೆ
ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎನ್ನುವುದು ಅವರ ನಂಬಿಕೆ. ಇದರ ಪರಿಣಾಮವಾಗಿ ಈ ಮಕ್ಕಳು ಸಂಬಂಧಗಳ ಬಗೆಗಿನ ಪ್ರೀತಿಯನ್ನು ಕಳೆದುಕೊಳ್ಳುವಂತಾಗುತ್ತಿದೆ. ಕಾಲೇಜುಗಳು ಹಾಗೂ ಹಾಸ್ಟೆಲುಗಳೂ ಹಾಗೆಯೇ ಇವೆ. ವಿದ್ಯಾರ್ಥಿಗಳ ಸಮೀಪದ ಬಂಧುಗಳು ಮರಣಿಸಿದಾಗಲೂ ಅವರನ್ನು ಮನೆಗೆ ಕಳುಹಿಸದ ಪ್ರತಿಷ್ಠಿತ ಕಾಲೇಜುಗಳು ನಮ್ಮ ಮುಂದೆ ಇವೆ. ಇಂತಹ ವಾತಾವರಣದಲ್ಲಿ ಮಕ್ಕಳು ಮಾನವೀಯ ಸಂಬಂಧಗಳ ಬಗೆಗೆ ನಕಾರಾತ್ಮಕ
ಧೋರಣೆಯನ್ನು ಬೆಳೆಸಿಕೊಳ್ಳದೆ ಬೇರೇನಾಗಲು ಸಾಧ್ಯ? ಹಣ ಸಂಪಾದನೆಯೊಂದೇ ಪರಮ ಧ್ಯೇಯವೆಂದು ಬೋಽಸಲ್ಪಟ್ಟ ಮಕ್ಕಳು ನಂತರ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳುತ್ತಿಲ್ಲ ಎಂದು ದೂರಿ ಫಲವಿಲ್ಲ.

ಬೇವನ್ನೇ ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಲು ಸಾಧ್ಯವಿದೆಯೇ? ಇಂದಿನ ವಿಭಕ್ತ ಕುಟುಂಬಗಳು ಒಂದು ಅಥವಾ ಎರಡೇ ಮಕ್ಕಳಿಗೆ ಸೀಮಿತವಾಗಿವೆ. ಹೀಗಾಗಿ ಮಕ್ಕಳನ್ನು ವಿಪರೀತವಾಗಿ ಮುದ್ದು ಮಾಡುವುದು ಸಾಮಾನ್ಯವಾಗಿದೆ. ಅತಿ ಪ್ರೀತಿಯ ಮಬ್ಬಿನಲ್ಲಿ ತಮ್ಮ ಮಕ್ಕಳು ತಪ್ಪು ದಾರಿಯನ್ನು ಹಿಡಿಯುವುದು ಹೆತ್ತವರಿಗೆ
ಅರ್ಥವಾಗುವುದಿಲ್ಲ. ಮಕ್ಕಳು ಹಟ ಹಿಡಿಯುತ್ತಾರೆಂದು ಅವರು ಕೇಳಿದ ಅತಿವೇಗದ ಬೈಕ್‌ಗಳನ್ನು ಕೊಡಿಸುತ್ತಾರೆ. ಅಪ್ರಾಪ್ತವಯಸ್ಕರಾಗಿದ್ದರೂ ಅವರಿಗೆ
ವಾಹನಚಾಲನೆ ಮಾಡಲು ಅನುಮತಿ ಕೊಡುತ್ತಾರೆ.

ಬದುಕಿನ ಬಗೆಗೆ ಗಂಭೀರತೆಯನ್ನು ಹೊಂದಿರದ ಈ ಮಕ್ಕಳು ಯದ್ವಾ ತದ್ವಾ ವಾಹನ ಚಲಾಯಿಸಿ ಅಪಘಾತಕ್ಕೆ ತಾವೂ ಬಲಿಯಾಗುತ್ತಾರೆ, ಇತರರ ಜೀವವನ್ನೂ ತೆಗೆಯುತ್ತಾರೆ. ಹೆತ್ತವರು ತಮ್ಮ ಮಕ್ಕಳು ತಪ್ಪು ಬೇಡಿಕೆಗಳನ್ನು ಇಟ್ಟಾಗ ‘ಇಲ್ಲ’ ಎಂದು ಹೇಳುವ ಛಾತಿಯನ್ನು ಬೆಳೆಸಿಕೊಳ್ಳದೇ ಇದ್ದರೆ ಇಂತಹ ಅನಾಹುತಗಳು ಮುಂದುವರಿಯಲಿವೆ. ಹೆತ್ತವರ ಅತಿ ಕೊಂಡಾಟದ ವಾತಾವರಣದಲ್ಲಿ ಮಕ್ಕಳು ತಾವು ನಡೆದದ್ದೇ ಸರಿ ಎಂಬ ಭಾವನೆಯನ್ನು ಬೆಳೆಸಿಕೊಳ್ಳು ತ್ತಾರೆ ಹಾಗೂ ಹೊಂದಾಣಿಕೆಯ ಜೀವನ ಕೌಶಲವನ್ನು ಬೆಳೆಸಿಕೊಳ್ಳುವುದೇ ಇಲ್ಲ. ಹೆತ್ತವರು ತಮ್ಮ ಮಕ್ಕಳನ್ನು ಅತಿಯಾಗಿ ಸಮರ್ಥಿಸುವುದು ಇಂದಿನ ದಿನ ಗಳಲ್ಲಿ ಹೆಚ್ಚಾಗುತ್ತಿರುವ ವಿವಾಹ ವಿಚ್ಛೇದನಗಳಿಗೆ ಕಾರಣವಾಗಿದೆ.

ನಮ್ಮ ಕಾನೂನುಗಳೂ ಹಾಗೆಯೇ ಇವೆ. ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಬದುಕನ್ನು ನಡೆಸಲು ಈ ಕಾನೂನುಗಳು ಬಿಡುವುದಿಲ್ಲ. ಇತ್ತೀಚೆಗೆ ಶಾಲಾ ಶೌಚಾಲಯ ವನ್ನು ಶುಚಿಗೊಳಿಸಿದ್ದಾರೆಂಬ ಎಂಬ ಆರೋಪದಲ್ಲಿ ಸರಕಾರಿ ಶಾಲೆಯ ಅಧ್ಯಾಪಕರನ್ನು ಇಲಾಖೆಯು ಅಮಾನತುಗೊಳಿಸಿದ ಪ್ರಕರಣ ಕರ್ನಾಟಕದಲ್ಲಿ ನಡೆದಿದೆ. ವಯೋಸಹಜವಾಗಿ ತುಂಟಾಟ ಮಾಡುವ ಮಕ್ಕಳಿಗೆ ಸಣ್ಣಪುಟ್ಟ ಶಿಕ್ಷೆ ನೀಡಿದರೂ ಅಧ್ಯಾಪಕರ ಮೇಲೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಶಿಕ್ಷಕರು ಮಕ್ಕಳನ್ನು ಗದರಿಸುವುದೂ ಇಂದಿನ ಕಾಲದಲ್ಲಿ ಮಾನಸಿಕ ಹಿಂಸೆ ಎಂಬ ಅಪರಾಧವಾಗಿ ಪರಿಗಣಿಸಲ್ಪಡುತ್ತದೆ. ಹೀಗಾಗಿ ಮಕ್ಕಳು ತಾವು ಮಾಡಿದ್ದೇ ಸರಿ ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳುವಂತಾಗಿದೆ. ಮಕ್ಕಳು ತಾವು ಹೇಳಿದುದನ್ನು ಕೇಳುವುದಕ್ಕಿಂತಲೂ ಹೆಚ್ಚಾಗಿ ತಾವು ಮಾಡಿದುದನ್ನೇ ಅನುಸರಿಸು ತ್ತಾರೆ ಎಂಬುದನ್ನು ಹೆತ್ತವರು ಅರ್ಥ ಮಾಡಿಕೊಂಡರೆ ಒಳಿತು.

Leave a Reply

Your email address will not be published. Required fields are marked *