Thursday, 12th December 2024

ಬಾಲ್ಯವೆಂಬುದು ಬಾಲವಿಲ್ಲದ ಕೋತಿಯಂತಿಹುದು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನಾನು ಗಮನಿಸಿದಂತೆ ನಾನು ಕಷ್ಟಪಟ್ಟು ಅಲ್ಲಲ್ಲಿ ಹುಡುಕಾಡಿ, ಓದಿ ಸಂಗ್ರಹಿಸಿ ಬರೆದ ಲೇಖನಗಳಿಗಿಂತ ನನ್ನ ಬಾಲ್ಯದ ಹಳೆಯ ದಿನಗಳು, ನಾ ಬೆಳೆದ ವಾತಾವರಣ, ಸುತ್ತಮುತ್ತಲಿನವರ, ಹೆತ್ತವರ ಗುಣ, ಸ್ವಭಾವಗಳ ಬಗ್ಗೆ ಬರೆದ ಲೇಖನಗಳನ್ನು ಓದುಗರು ಮೆಚ್ಚುತ್ತಿದ್ದಾರೆ.

ಇಂಥವುಗಳನ್ನೇ ಬರೆಯಿರಿ ಎನ್ನುತ್ತಾರೆ. ನಾವು ಹೀಗೇ ಇದ್ದೆವು ಎಂದು ಮೆಲುಕು ಹಾಕುತ್ತಾರೆ, ಓದುತ್ತಾ, ಓದುತ್ತಾ ನಾವು ಕಳೆದು
ಹೋದೆವು ಎನ್ನುತ್ತಾರೆ. -ನು ಮಾಡುವ ಕೆಲವರು ತಮ್ಮದನ್ನು ಹೇಳುತ್ತಾ, ಗದ್ಗದಿತರಾಗುತ್ತಾರೆ. ಇನ್ನು ಕೆಲವರಿದ್ದಾರೆ. ಅವರಿಗೆ
ಗಟ್ಟಿ ಗಟ್ಟಿ ಮೊಸರೇ ಬೇಕು, ನಿಮ್ಮ ಲೇಖನಗಳಲ್ಲಿ ಸಂಶೋಧನೆಯಿಲ್ಲ, ಹೊಸ ಆವಿಷ್ಕಾರಗಳಿಲ್ಲ, ಒಂದಾದರೂ ಕಠಿಣ,
ಡಿಕ್ಷನರಿ ಹುಡುಕಿ ನೋಡುವಂಥ ಶಬ್ದಗಳಿಲ್ಲ, ಜೀವನಾನುಭವ ಒಂದೇ ನಿಮಗಿರುವುದು, ಬದುಕಿಗೆ ಅದೊಂದೆ ಸಾಕೆ? ಎಂಬರ್ಥದ ಮಾತುಗಳನ್ನು ಆಡಿತೋರಿಸುತ್ತಾರೆ.

ಅಂಥವರ ವಿಳಾಸ ಪಡೆದು ಅವರಿಗೆ ಶ್ರೀ ತ್ರಿವಿಕ್ರಮ ಪಂಡಿತಾಚಾರ್ ಬರೆದ ‘ವಾಯು ಸ್ತುತಿ’ಯನ್ನು ಕಳಿಸಲು ಯೋಚಿಸುತ್ತಿದ್ದೇನೆ. ಇಂದ್ರಚಾಪದ ಪರಮೇಶ್ವರ ಭಟ್ಟರು ಬರೆದಿರುವುದೇ ನನಗೆ ಮಾರ್ಗಸೂಚಿ. ‘ಸಾವಿರಗಟ್ಟಲೇ ಶಾಬ್ದಿಕರಿರುವರು, ತಾರ್ಕಿಕರಿರು ವರು ಬಹಳ/ ಜಗದೊಳು ಚಾರುಸರಸಾಲಾಪ ಚತುರರು, ಕವಿವರವಿರುವುದು ವಿರಳ’ ಎಂದು ನುಡಿದಿದ್ದಾರೆ. ಸಾಹಿತ್ಯ, ಬರವಣಿಗೆ ಎಂಬುದು ಹೃದಯಕ್ಕೆ, ಭಾವನೆಗಳಿಗೆ, ಮನಸ್ಸಿಗೆ ಮುದ ನೀಡುವಂತಿರಬೇಕು, ಮೆದುಳಿಗೆ ಕೆಲಸ ಕೊಟ್ಟರೆ ಹೇಗೆ? ಅಂಥವರು ಪದಬಂಧ, ಕ್ವಿಜ್, ಥಟ್ ಅಂತ ಹೇಳಿ ಇತ್ಯಾದಿ ಬಿಡಿಸುವ, ಕೇಳುವ, ಕೆಲಸ ಮಾಡಬೇಕಷ್ಟೆ.

‘ಸಾಹಿತ್ಯ ಒಂದೆಯೇ ನನ್ನ ಸಂಜೀವಿನಿ, ಅದೇ ನನ್ನ ತಾರಕ ಶಕ್ತಿ/ ಮಿತ್ರಸಲ್ಲಾಪವೆ, ಚಿತ್ತಕಾಹ್ಲಾದಿನಿ ಅದರಿಂದಲೇ ನನ್ನ ಮುಕ್ತಿ/
ಎಂದು ನಂಬಿ, ಬದುಕಿದವನು, ಬದುಕುತ್ತಿರುವವನು, ಮುಂದೆಯೂ ಬದುಕುವವನು ನಾನು. 1975ರಲ್ಲಿ ಎಂಟನೆಯ ಕ್ಲಾಸಿಗೆ ಹೈಸ್ಕೂಲಿಗೆ ಹಚ್ಚಲು ಮತ್ತೆ ನನ್ನ ಹುಟ್ಟೂರಾದ ಗಂಗಾವತಿಗೆ ಮೂರು ವರ್ಷದ ಯಲಬುರ್ಗಿ ವಾಸದ ವಿರಹದಲ್ಲಿ ಬೆಂದು
ಬಂದೆ. ಆಗ ನನಗೆ ಜತೆಯಾದ ಗೆಳೆಯರೆ, ಶರದ್ ದಂಡಿನ್.

ದ್ವಾರಕಾನಾಥ, ರಾಘವೇಂದ್ರ ಹಬ್ಬು, ಪಂಪಾಪತಿ ಎಲಿಗಾರ್, ಬಸಾಪಟ್ಟಣದ ದೇವಪ್ಪ, ಆನೆಗುಂದಿಯ ಫಕೀರಪ್ಪ ಇತ್ಯಾದಿ
ಗೆಳೆಯರು. ಜೂನಿಯರ್ ಕಾಲೇಜ್ ಎಂದೇ ಹೆಸರಾದ ಸರಕಾರಿ ಶಾಲೆಯದು. ಎಂಟನೇ ತರಗತಿಗೆ ಒಳಹೊಕ್ಕರೆ ಐದು ವರ್ಷ ಪಿ.ಯು.ಸಿ ಸೆಕೆಂಡ್ ಇಯರ್‌ವರೆಗೂ ನಿಶ್ಚಿಂತೆ, ಈ ಕಾರಣಕ್ಕೆ ನಾನು ಈ ಹೈಸ್ಕೂಲ್ ಸೇರಿದೆ. ಏಕೆಂದರೆ, ಶಾಲಾ ಮಾಸ್ತರ್ ಆಗಿದ್ದ
ನಮ್ಮ ತಂದೆಗೆ ಎರಡು – ಮೂರು ವರ್ಷಕ್ಕೊಮ್ಮೆ ಟ್ರಾನ್ಸ್ ಫರ್ ಯೋಗ, ಗಂಗಾವತಿಯೆಂದರೆ ಅಂದಿಗೂ, ಇಂದಿಗೂ ಅಂಕುಶ
ವಿಟ್ಟೊಡಂ ನೆನೆಯುವದೆನ್ನ ಮನಂ ಗಂಗಾವತಿ ನಗರಮ್‌ಮ್ ಎಂಬ ಅತೀಶಯ ಪ್ರೀತಿ ಈ ಊರ ಮೇಲೆ.

ಹೈಸ್ಕೂಲ್ ಸಹಪಾಟಿಗಳಲ್ಲಿ ನನ್ನ ಸ್ನೇಹಿತ ಕಿಶೋರ್ (ಹೆಸರು ಬದಲಿಸಿದ್ದೇನೆ) ತುಂಬಾ ಚಾಲಾಕಿ, ಎಂಟನೇ ಕ್ಲಾಸಿಗೆ ಇವನೊಂದಿಗೆ ಹೈಸ್ಕೂಲ್ ಸೇರಿದ್ದರೆ, ಇವನು ಬೊಂಬಾಯಿಯಲ್ಲಿ ಮೂರು ವರ್ಷವಿದ್ದು ಬಂದು ನಮ್ಮೊಂದಿಗೆ ಸೇರಿದ್ದ, ಹಿಂದಿ ಮಾತು, ಬೆಲ್ ಬಾಟಮ್ ಪ್ಯಾಂಟು, ಜೇಬಲ್ಲಿ ಕರ್ಚೀಫ್, ಬಾಚಣಿಗೆ, ನಾನು ಬೊಂಬಾಯಿಯಲ್ಲಿ ರಿಶಿಕ್‌ಕಪೂರ್, ಡಿಂಪಲ್ ಕಪಾಡಿಯಾ, ಪರ್ವೀನ್ ಬಾಬಿ, ಸಂಜೀವಕುಮಾರ್, ನೀತುಸಿಂಗ್‌ರನ್ನು ಚೌಪಾಟಿ ಬೀಚಿನಲ್ಲಿ ಸಾಕಷ್ಟು ಸಲ ನೋಡಿದ್ದೇನೆ, ಸಿನಿಮಾ ಶೂಟಿಂಗ್ ನೋಡಿದ್ದೇನೆ ಎಂದೆಲ್ಲಾ ಹೇಳಿದಾಗ ನಾವೆಲ್ಲ ಬೆಕ್ಕಸಬೆರಗಾಗುತ್ತಿದ್ದೆವು.

ನಾವಿನ್ನೂ ಆಗ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಗಳನ್ನೇ ನೋಡಿದ್ದಿಲ್ಲ. ರೈಲಿನಲ್ಲಿ ಕೂಡಾ ಕೂತಿರಲಿಲ್ಲ. ಒಬ್ಬರೇ ಸಿನಿಮಾಗೆ
ಹೋಗಿರಲಿಲ್ಲ. ಶಾಲೆ, ಹೋಮ್‌ವರ್ಕ್, ಊರಿನ ಜಾತ್ರೆ, ಉತ್ಸವಗಳು, ಗುರುವಾರ ರಾಯರ ಮಠದ ಪಲ್ಲಕ್ಕಿ ಉತ್ಸವ, ಶನಿವಾರ ಹುಚ್ಚ ಹನುಮಪ್ಪನ ಗುಡಿಗೆ ಹೋಗುವುದು, ಮಾವಂದಿರ, ಕಕ್ಕಂದಿರ ಜತೆ ಸಿನಿಮಾ, ಎಂಟಾಣೆಗೆ ತಾಸಿನಂತೆ ಬಾಡಿಗೆ ಸೈಕಲ್ಲು ತುಳಿಯುವುದು ಬಿಟ್ಟರೆ, ಬೇರೆ ಪ್ರಪಂಚವಿರದ ನಮಗೆ, ಕಿಶೋರ ಮೋಟರ್ ಸೈಕಲ್ (ಆಗ ಪಟಪಟಿ ಎನ್ನುತ್ತಿದ್ದೆವು) ಹೊಡೆಯಲು ಬರುತ್ತದೆಂದಾಗ ದಂಗಾಗಿದ್ದೆವು.

ಇಂಟರ್‌ವೆಲ್ ಟೈಮ್‌ನಲ್ಲಿ ನಮಗೆಲ್ಲ ಅವನೇ ಶಾಲೆಯ ಬಳಿಯ ಪೇರಲಹಣ್ಣು ಹೆಚ್ಚಿಸಿ, ಉಪ್ಪು, ಖಾರ ಹಾಕಿಸಿಕೊಡುತ್ತಿದ್ದ. ಅದಕ್ಕೆಲ್ಲ ಅವನು ಜೇಬಿನಿಂದ ಐದು, ಹತ್ತು ರುಪಾಯಿ ನೋಟು ತೆಗೆಯುತ್ತಿದ್ದರೆ, ನಾವೆಲ್ಲ ದಂಗಾಗಿ ನೋಡುತ್ತಿದ್ದೆವು.
ಬಾಂಬೆದಾಗ ರೊಕ್ಕ ಇರ್ಲಿಲ್ಲ ಅಂದ್ರ ಹುಡುಗರನ್ನ ಕಳುವು ಮಾಡಿಕೊಂಡು ಹೋಗಿ ಭಿಕ್ಷಾ ಬೇಡಲು ಕಲಿಸ್ತಾರ, ಪಿಕ್‌ಪಾಕೇಟ್
ಮಾಡಲು ಕಲಿಸ್ತಾರ ಎನ್ನುತ್ತಿದ್ದ. ಮುಂದೆ ನಾನು ಬಾಂಬೆ ಸೆಟ್ಲ್ ಆಗ್ತೀನಿ, ಸ್ಮಗ್ಲಿಂಗ್ ಮಾಡ್ತಿನಿ ಎನ್ನುತ್ತಿದ್ದ, ಸ್ಮಗ್ಲಿಂಗ್ ಎಂದರೆ ತಿಳಿಯದ ನಾವೆಲ್ಲ ಸಂಜೆ ಮನೆಗೆ ಬಂದ ಮೇಲೆ ಡಿಕ್ಷನರಿ ತೆಗೆದು ಸ್ಮಗ್ಲಿಂಗ್ ಸ್ಪೆಲ್ಲಿಂಗ್ ಹುಡುಕಿ, ಅದರ ಅರ್ಥ ನೋಡುತ್ತಿದ್ದೆವು. ಕಳ್ಳಸಾಗಾಣಿಕೆ ಅಂತ ಓದಿ, ಅಂಜುತ್ತಿದ್ದೆವು.

ಯಪ್ಪಾ ಅವನು ಬಾಂಬೆದಾಗ ಕಳ್ಳತನ ಕಲಿತು ಬಂದಾನಲೆ, ಅವನ ಸಹವಾಸ ಬೇಡ ಅಂತ ತೀರ್ಮಾನಿಸುತ್ತಿದ್ದೆವು. ಆದರೆ ಅವನು ಶಾಲೆ ಮುಂದೆ ಇರುವ ಎಲ್ಲ ಅಂಗಡಿಗಳಿಂದಲೂ ಶೇಂಗಾ, ಪೇರಲಹಣ್ಣು, ಸೋಡಾ ಶರಬತ್, ಒಮ್ಮೊಮ್ಮೆ ಹೋಟಲ್‌ಗೆ ಕರೆದೋಯ್ದು ಮಸಾಲೆ ದೋಸೆ, ಭಾನುವಾರಗಳಲ್ಲಿ ಮ್ಯಾಟ್ನಿ ಶೋ ಸಿನಿಮಾಗಳನ್ನು ತೋರಿಸುತ್ತಾ ಹಣವನ್ನು ಖರ್ಚು ಮಾಡುತ್ತಿದ್ದ ರೀತಿಗೆ ಮರುಳಾಗಿ ಅವನು ಹೇಳಿದಂತೆಯೇ ಕೇಳುತ್ತಿದ್ದೆವು.

ಒಂದು ಶನಿವಾರವಂತೂ ಶಾಲೆಗೆ ವೈಟ್ ಬೆಲ್‌ಬಾಟಮ್ ಪ್ಯಾಂಟು, ವೈಟ್ ಶರ್ಟ್, ಇನ್‌ಶರ್ಟ್ ಮಾಡಿ, ಕಣ್ಣಿಗೆ ಕಪ್ಪು ಕನ್ನಡಕ
ಹಾಕಿಕೊಂಡು ಪಟಪಟಿ ಗಾಡಿ ಮೇಲೆ ಬಂದಿಳಿದಾಗ, ಕೂತಂತೆಯೇ ಗಾಡಿಗೆ ಸ್ಟೆ ಲ್ ಆಗಿ, ಸ್ಟ್ಯಾಂಡ್ ಹಾಕಿ ಕೆಳಗಿಳಿದ ರೀತಿಗೆ ಆತನನ್ನು ಎಂಟನೆಯ ಕ್ಲಾಸ್ ಅಂತ ಯಾರೆನ್ನಬೇಕು? ಕುತ್ತಿಗೆಯ ಕಾಲರ್‌ಗೆ ಕರ್ಚೀ- ಸುತ್ತಿಕೊಂಡಿದ್ದ, ಕುತ್ತಿಗೆ ಮುಂಭಾಗದಲ್ಲಿ ಕರ್ಚೀಫ್ ಗಂಟು ಹಾಕಿದ್ದ, ಅದು ಚಿಕ್ಕ ಕರ್ಚೀ- ಆಗಿರದೇ ಮಸೀದಿ, ದರ್ಗಾಗಳ ಮುಂದಿರುವ ದೊಡ್ಡ ಚೆಕ್ಸ್ ಕರ್ಚೀಫ್ ಆಗಿತ್ತು. ಆತ ಬಂದಾಗ ನಾವೆಲ್ಲ ಪ್ರಾರ್ಥನೆಗೆ ನಿಂತಿದ್ದೆವು.

ಆತನೂ ಕೊನೆಯಲ್ಲಿ ನಿಂತ, ಪ್ರಾರ್ಥನೆ ಮುಗಿದ ಮೇಲೆ ಎಲ್ಲರೂ ನಿಂತ ಸಾಲಿನಿಂದ ಬಲಕ್ಕೆ ತಿರುಗಿ ಜೈಹಿಂದ್ ಎಂದು ಘೋಷಿಸಿ, ನಮ್ಮ ನಮ್ಮ ಕ್ಲಾಸಿಗೆ ಹೋಗಬೇಕು. ಎಲ್ಲರೂ ನಾವು ಜೈಹಿಂದ್ ಎಂದರೆ, ಕಿಶೋರ ಜೈ ಜಗತ್ ಎಂದು ಕೂಗಿ ಎಡಕ್ಕೆ ತಿರುಗುತ್ತಿದ್ದ. ಹೀಗೆ ತನ್ನ ವಿಲಕ್ಷಣತೆಗಳಿಂದ ಎಂಟನೆಯ ಕ್ಲಾಸಿಗೆ ಕಿಶೋರ ಇಡೀ ಹೈಸ್ಕೂಲ್, ಕಾಲೇಜಿನಲ್ಲಿ ಎದ್ದುಕಾಣುತ್ತಿದ್ದ. ಸದಾ ಬಾಯಲ್ಲಿ ಬಾಂಬೆ ಸುದ್ದಿ. ಅಲ್ಲಿನ ಬೀಚು, ಟ್ರಾಫಿಕ್, ಫಿಲಂ ಆಕ್ಟರ‍್ಸ್‌ಗಳ ಬಗ್ಗೆಯೇ ಮಾತು.

ಸ್ಮಗ್ಲಿಂಗ್ ಬಿಟ್ರೆ, ಬೇರೆ ಉದ್ಯೋಗವಿಲ್ಲ ಅನ್ನೋದು, ಶಾಲೆ ಮುಗಿದ ಮೇಲೂ ಸಂಜೆ ಪಾರ್ಕ್, ಗುಡ್ಡ, ದೇವಘಾಟ್, ವಾನಭದ್ರೇಶ್ವರ ಮುಂತಾದ ಸುತ್ತಲೂ ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗೋಣ ಎನ್ನುತ್ತಿದ್ದ. ಆ ಲೈಫ್ ಎಂಜಾಯ್ ಮಾಡಬೇಕೆಂಬುದಕ್ಕೆ ಅವನು ಬಾಂಬೆಯಿಂದ ಕಲಿತ ಬಂದಿದ್ದು ಎನಿಸುತ್ತಿತ್ತು. ಇದಲ್ಲದೆ ಅವನಿಗೆ ಬೆಟ್ ಕಟ್ಟುವ ಹುಚ್ಚು, ಯಾರು ಏನೇ ಮಾಡಂದ್ರು ಬೆಟ್ ಎಷ್ಟು? ಎಂದೇ ಕೇಳುತ್ತಿದ್ದ, ಉಠಬೈಸ್ ತೆಗೆಯೋದು, ನದಿಯಲ್ಲಿ ಈಜೋದು, ಕಣ್ಣಪಿಳುಕಿಸದೇ ಸೂರ್ಯನನ್ನು ನೋಡೋದು, ಗಿಡ ಏರೋದು, ಇಳಿಯೋದು, ಎಲ್ಲಕ್ಕೂ ಬೆಟ್ ಕಟ್ಟಿದರೇ ಸಾಕು, ಮಾಡಿಬಿಡುತ್ತಿದ್ದ.

ಆ ಬೆಟ್‌ನಲ್ಲಿ ಗೆದ್ದ ಹಣದಲ್ಲಿ ನಮಗೆಲ್ಲ ಹೋಟೆಲ್, ಮ್ಯಾಟ್ನಿಶೋ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದ, ಹಿಂದಿ ಸಿನಿಮಾ
ಬಂದರಂತೂ ನಮಗೆ ಯಾರಿಗೂ ಹೇಳದೇ ಫಸ್ಟ್ ಡೇ, ಮಾರ್ನಿಂಗ್ ಶೋ ಒಬ್ಬನೇ ಹೋಗಿಬಂದು ಮತ್ತೆ ನಮ್ಮನ್ನೆಲ್ಲ ಒಮ್ಮೆ
ಕರೆದೊಯ್ಯುತ್ತಿದ್ದ. ಹಾಗೆ ಅವನ ಜತೆ ಹಿಂದಿ ತಿಳಿಯದಿದ್ದರೂ, ನೋಡಿದ ಕೆಲ ಸಿನಿಮಾಗಳೆಂದರೆ, ರಫ್ ಚಕ್ಕರ್, ಯಾದೋಂಕಿ ಬಾರಾತ್, ಅಮೀರ್ ಗರೀಬ್, ದಿವಾರ್ ಇತ್ಯಾದಿಗಳು ಇನ್ನೂ ನೆನಪಿವೆ. ಕನ್ನಡ ಚಿತ್ರವೆಂದರೆ, ಪುಟ್ಟಣ್ಣ ಕಣಗಾಲ್‌ರ ಕಥಾ ಸಂಗಮ ಮೂರು ಬೇರೆ ಬೇರೆ ಕತೆಯ ಒಂದೇ ಸಿನಿಮಾ ಹಂಗು, ಅತಿಥಿ, ಮುನಿತಾಯಿ ಇದಕ್ಕೆ ಫಿಫ್ಟಿ ಪಸೆಂಟ್ ತೆರಿಗೆ ವಿನಾಯಿತಿ ಇದ್ದು, ಒಂದು ರುಪಾಯಿಯ ಬೆಂಚ್ ಕ್ಲಾಸಿಗೆ ಕೇವಲ ಎಪ್ಪತ್ತು ಪೈಸೆ ಇತ್ತು.

ಕಿಶೋರನ ಹತ್ತಿರ ಒಂದು ರುಪಾಯಿ ಇದ್ದು, ನನಗೆ ಮೇಲಿನ ನಲವತ್ತು ಪೈಸೆ ಹಾಕಲು ಹೇಳಿದಕ್ಕೆ ನಾನು ಸಿನಿಮಾ ಒಲ್ಲೆ ಎಂದೆ, ಲೇ, ನೀನು ಕಥೆ, ಕಾದಂಬರಿ ಓದುತ್ತಿ, ಇಂಥಾ ಸಿನಿಮಾ ನೋಡಬೇಕು’ ಎಂದು ಹೇಳಿದರೂ ನಾನು ಅನಾಮತ್ತು ನಲವತ್ತು ಪೈಸೆ ಹಾಕಲು ಹಿಂಜರಿದೆ. ನನಗೆ ಆ ಸಿನಿಮಾ ತೋರಿಸಬೇಕೆಂಬುದೇ ಅವನ ಹಠವಾಗಿತ್ತು, ಯೋಚನೆಗೆ ಬಿದ್ದ. ಆಗ ಈಗಿನ ರಾಮಮಂದಿರ ಕಟ್ಟುವ ಕೆಲಸ ನಡೆದಿದ್ದು, ಗೋಪುರ ಕೆಲಸ ನಡೆದಿದ್ದು, ಕೆಳಗೆ ಉಸುಕು ಹಾಕಿದ್ದರು.

ಗೆಳೆಯರೆಲ್ಲ ಆ ಉಸುಕಲ್ಲಿ ಕೂತು ಮಾತಾಡುತ್ತಿದ್ದೀವಿ. ನಾನು ಈ ಗುಡಿ ಮೇಲಿಂದ ಈ ಉಸುಕಿಗೆ ಹಾರುತ್ತೀನಿ, ಎಷ್ಟು ಕೊಡ್ತಿರಿ ಬೆಟ್, ಇಲ್ಲಾ ನೀವು ಯಾರಾದರೂ ಹಾರಿದರೆ ನಾ ಒಂದು ರುಪಾಯಿ ಕೊಡ್ತೀನಿ ಅಂದ. ಯಾರೂ ರೆಡಿ ಆಗಲಿಲ್ಲ. ಆದರೆ ರಾಘಣ್ಣ ಎಂಬ ಶೆಟ್ಟರ ಹುಡುಗ, ‘ನೀ ಹಾರಿ ತೋರಿಸಲೇ ನಾನು ಎಂಟಾಣೆ ಕೊಡ್ತೀನಿ ಎಂದ, ಸರಿ ಕಿಶೋರ ಸರಸರ ಮಾಳಿಗೆ ಏರಿ, ಶರ್ಟ್,
ಪ್ಯಾಂಟ್ ಬಿಚ್ಚಿ ನನ್ನ ಮೇಲೆ ಒಗೆದು, ಹನುಮಾನ್ ಚಡ್ಡಿ, ಸ್ಯಾಂಡೂ ಬನಿನ್ ಮೇಲೆ ಉಸುಕಿನಲ್ಲಿ ಹಾರಿಯೇ ಬಿಟ್ಟ.

ಸುಮಾರು 25 ಅಡಿ ಎತ್ತರ ಅದು. ಅವನಿಂದ ಎಂಟಾಣೆ ತೆಗೆದುಕೊಂಡು, ನನ್ನ ಬಳಿಯಿದ್ದ ಪ್ಯಾಂಟ್, ಶರ್ಟ್ ಪಡೆದು ಹಾಕಿ ಕೊಂಡು ನನ್ನನ್ನು ಕಥಾಸಂಗಮ ಚಿತ್ರಕ್ಕೆ ಕರೆದೋಯ್ದು ತೋರಿಸಿಯೇ ಬಿಟ್ಟ. ಬರುತ್ತಾ ನುಡಿದ ‘ಎಪ್ಪತ್ತು ಪೈಸೆಗೆ ಮೂರು ಸಿನಿಮಾ ತೋರಿಸೋದು ಕನ್ನಡದ ನಿರ್ದೇಶಕರು ಮಾತ್ರ’, ‘ಹಿಂದಿ ಸಿನಿಮಾಗಳು ಹೈ ಬಜೆಟ್ ನವು’ ಎಂದ.

ಕಿಶೋರನಿಗೆ ಧೈರ್ಯ, ಮಾತು, ಗತ್ತು, ವಯಸ್ಸಿಗೆ ಮೀರಿದ್ದು ಆಗಿತ್ತು. ಓದುವುದೆಂದರೆ ಅವನಿಗೆ ಅಲರ್ಜಿ, ಪರೀಕ್ಷೆ ಎಂದರೆ ಕುತ್ತು. ಯಾವ ವಿಷಯದ ಪುಸ್ತಕಗಳನ್ನೂ ಅವನು ಕೊಳ್ಳುತ್ತಿರಲಿಲ್ಲ. ಪುಸ್ತಕ ಕೊಳ್ಳಲು ತಂದೆಯಿಂದ ಹಣ ಪಡೆಯುತ್ತಿದ್ದ, ಆದರೆ ಆ ಹಣ ಸಿನಿಮಾ, ಹೋಟಲ್‌ಗೆ ಖರ್ಚು ಮಾಡಿಬಿಡುತ್ತಿದ್ದ. ಆಯಾ ಸಬ್ಜೆಕ್ಟ್ ಟೀಚರುಗಳು ಪುಸ್ತಕ ತೆಗೆದು ನೋಡ್ರಿ ಎಂದು ಹೇಳಿದರೆ, ಇವನು ಮೆಲ್ಲಗೆ ಬೆಂಚ್ ಮೇಲೆ ಸ್ವಯಂ ಪ್ರೇರಣೆಯಿಂದ ಎದ್ದು ನಿಂತುಬಿಡುತ್ತಿದ್ದ.

ಪುಸ್ತಕ ಇಲ್ಲದವರು ಬೆಂಚ್ ಮೇಲೆ ಪಿರಿಯಡ್ ಮುಗಿಯೋವರೆಗೂ ನಿಲ್ಲಬೇಕೆಂಬುದು ಅಲಿಖಿತ ಕಾನೂನು ಆಗಿತ್ತು. ಇಂಥ
ಕಾನೂನುಗಳನ್ನು ಕಿಶೋರ ತಪ್ಪದೇ ಪಾಲಿಸುತ್ತಿದ್ದ. ಅವನ ಸಿಟ್ಟು ಹಾಗೇ ಇತ್ತು. ಮಾತುಗಳಿಗಂತೂ ಫಿಲ್ಟರ್ರೇ ಇರಲಿಲ್ಲ.
ನಮಗೆ ಇಂಗ್ಲೀಷ್‌ಗೆ ಮಾತ್ರ ಒಬ್ಬ ಮೇಡಂ ಬರುತ್ತಿದ್ದರು. ಇಡೀ ಆ ಗೌರ್ನಮೆಂಟ್ ಹೈಸ್ಕೂಲಿನ ಟೀಚರ್‌ಗಳಲ್ಲಿ ಇವರೊಬ್ಬರೆ ಹೆಣ್ಣು ಮಗಳು. ದಿನಾ ಬಳ್ಳಾರಿಯಿಂದ ಬರುತ್ತಿದ್ದರು. ದುಂಡುಮುಖ, ಕಪ್ಪಗಿದ್ದರೂ, ಕಳೆಯಾಗಿದ್ದರು, ಸ್ವಲ್ಪ ಕುಳ್ಳಗೆ, ದಪ್ಪಗಿದ್ದರು, ಮಧ್ಯೆ ಬೈತಲೆ ತೆಗೆದು ಎರಡು ಜಡೆ ಹಾಕುತ್ತಿದ್ದರು.

ಅವರಿಗೊಂದು ಅಭ್ಯಾಸವಿತ್ತು. ಸದಾ ಕೈಯಲ್ಲೊಂದು ಗುಲಾಬಿ ಹೂ, ಆಗಾಗ ಅದನ್ನು ಮೂಸುತ್ತಾ ಪಾಠ ಹೇಳುತ್ತಿದ್ದರು. ಡಿಕ್ಟೇಷನ್ ಕೊಡುತ್ತಿದ್ದರು. ಡಿಕ್ಟೇಷನ್ ಚೆಕ್ ಮಾಡುವಾಗ ನಾವೆಲ್ಲ ಟೇಬಲ್ ಸುತ್ತ ನಿಂತು ನೋಟುಬುಕ್ಕುಗಳಿಗೆ ಮೇಡಂನಿಂದ ರೈಟ್ ಮಾರ್ಕ್ ಹಾಕಿಸಿಕೊಳ್ಳುತ್ತಿದ್ದೆವು. ಕಿಶೋರನೂ ನೋಟ್‌ಬುಕ್‌ನೊಂದಿಗೆ ನಿಂತಿದ್ದವನು ಮೇಡಂ ಇಟ್ಟಿದ್ದ ಗುಲಾಬಿ ಹೂವನ್ನು ಮುಟ್ಟಿದ್ದಲ್ಲದೇ, ಅದನ್ನು ಅವನೂ ಮೂಸಿಬಿಟ್ಟ, ಮೇಡಂ ಸಿಟ್ಟಿಗೆದ್ದು ಅಲ್ಲಿಟ್ಟಿದ್ದ ಬೆತ್ತದಿಂದ ‘ಯೂ. ರಾಸ್ಕಲ್, ಅದನ್ಯಾಕೆ ಮೂಸಿದೆ, ಮ್ಯಾನರ‍್ಸ್ ಇಲ್ವಾ ನಿಂಗೆ’ ಎಂದು ಒಂದು ಛಡಿ ಏಟು ಕೊಟ್ಟರು.

ಕಿಶೋರ ತಕ್ಷಣ ‘ತಗೋಳ್ರಿ ನಿಮ್ಮ ಹೂ, ಕುಂಡ್ಯಾಗ ಇಟಗೊಳ್ರಿ’ ಎಂದು ಎಸೆದು ಕ್ಲಾಸಿನಿಂದ ಹೊರಗೆ ಓಡಿಬಿಟ್ಟ. ಅಂದೆಯೇ ಲಾಸ್ಟ್, ಅವನು ಮತ್ತೆ ಶಾಲೆಗೆ ಬರಲಿಲ್ಲ. ಮತ್ನೆ ಬಾಂಬೆಗೆ ಹೋದನೆಂದು ಆಮೇಲೆ ತಿಳಿಯಿತು.