Monday, 16th September 2024

ಸಿಲ್ಕ್ಯಾರಾದ ಬೆನ್ನಲ್ಲೇ ನೆನಪಾದ ಚಿಲಿಯ ಕಲಿಗಳ ಸಾಹಸ

ಸುಪ್ತ ಸಾಗರ

rkbhadti@gmail.com

ಆತ ಕೆನಡಾ ಮೂಲದವನು. ಅತಿ ಸೂಕ್ಷ್ಮ ರಂಧ್ರಗಳನ್ನು ನೆಲದಾಳದೊಳದವರೆಗೂ ಕೊರೆಯುವಲ್ಲಿ ನಿಸ್ಸೀಮ. ಕಾರ್ಯದಕ್ಷತೆಗೆ ಅವನಿಗೆ ಅವನೇ ಸಾಟಿ. ಹೆಸರು ಗ್ಲೆನ್ ಫ್ಲಾಲನ್; ಕೊರೆಯುವ ನೈಪುಣ್ಯದಿಂದ ಡ್ರಿಲ್ಲರ್ ಫಾಲನ್ ಎಂದೇ ಹೆಸರಾಗಿದ್ದ. ಆತ ನಿದ್ದೆ ಬಿಟ್ಟು ಅದೆಷ್ಟೋ ರಾತ್ರಿಗಳಾಗಿದ್ದವು. ಹೇಗಾದರೂ ಮಾಡಿ ಮರುಭೂಮಿಯ ೨೩೦೦ ಅಡಿ ಆಳದ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ರಕ್ಷಿಸಲು ಪಣತೊಟ್ಟು ಹಗಲಿರುಳು ಬೆವರಿಳಿಸುತ್ತಿದ್ದ.

ಅದೆಲ್ಲಿದ್ದನೋ ಟಿವಿ ಚಾನೆಲ್‌ವೊಂದರ ಕ್ಯಾಮೆರಾಮನ್ ಒಬ್ಬ ‘ಎಕ್ಸ್‌ಕ್ಲೂಸಿವ್ ಸ್ಟೋರಿ’ಯ ಬೆನ್ನು ಹತ್ತಿ ಅಲ್ಲಿ ರಂಧ್ರಕೊರೆಯುತ್ತಿದ್ದ ಯಂತ್ರದ ಬಳಿ ಮೆಲ್ಲಗೆ
ನುಸುಳಲು ಯತ್ನಿಸಿದ. ಏನೋ ಮಾಡುತ್ತಿದ್ದ ಫಾಲನ್ ಕಣ್ಣಿಗೆ ಅಚಾನಕ್ ಆಗಿ ಆ ಕ್ಯಾಮೆರಾಮನ್ ಬಿದ್ದುಬಿಡಬೇಕೆ? ಅಷ್ಟೇ, ಕೆಂಡಾಮಂಡಲನಾಗಿ, ಧಾವಿಸಿ ಬಂದು ಆತನ ಕೆನ್ನೆಗೆ ಫಟೀರನೆ ಬಾರಿಸಿ, ಆತನನ್ನು ಅಲ್ಲಿಂದ ಅಕ್ಷರಶಃ ಒದ್ದು ಓಡಿಸಿದ. ನಾಳೆ ಟೀವಿಗಳಲ್ಲಿ ತನ್ನ ಬಗ್ಗೆ ನೆಗೆಟಿವ್ ಸ್ಟೋರಿ ಬಂದೀತೆಂಬ ಯಾವ ಭಯವೂ ಆತನಿಗಿರಲಿಲ್ಲ. ಅಷ್ಟಕ್ಕೂ ಮಾಧ್ಯಮಗಳೆಂದರೆ ಆತನಿಗೆ ಅಲರ್ಜಿ. ತನ್ನ ಕೆಲಸವೊಂದನ್ನು ಬಿಟ್ಟು ಬೇರಾವುದೂ ಆ ಶ್ರಮಜೀವಿಗೆ ಮುಖ್ಯವೇ ಅಲ್ಲ.

ಪಕ್ಕದ ಬೊಲಿವಿಯಾ, ಬ್ರಝಿಲ, ಅರ್ಜೆಂಟೈನಾ ಹೀಗೆ ಲ್ಯಾಟಿನ್ ಅಮೆರಿಕದ ಎಲ್ಲ ಇಪ್ಪತ್ತು ದೇಶಗಳ ಸುದ್ದಿ ಮಾಧ್ಯಮಗಳ ಪ್ರತಿನಿಧಿಗಳು ಇತ್ತ ಹೊರಟರು. ಲಂಡನ್ನಿಂದ ಬಿಬಿಸಿ, ರಾಯ್ಟರ್, ಅಮೆರಿಕದಿಂದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಪ್ಯಾರಿಸ್‌ನಿಂದ ಎಎಫ್ ಪಿ ಈ ಎಲ್ಲ ವಾರ್ತಾ ಮಾಧ್ಯಮಗಳ ಸಂತೆಯೇ ಗಣಿ ಬಳಿಯಲ್ಲಿ ನೆರೆದಿತ್ತು. ಕೆಲವರು ಮುಷ್ಟಿ ಗಾತ್ರದ ರಂಧ್ರದ ಬಳಿ ಹೋಗಿ ತಗ್ಗಿ ಬಗ್ಗಿ ನೋಡಲು ಬಯಸಿದ್ದರು. ಪ್ರಾಯಶಃ ರಂಧ್ರದ ಒಳಕ್ಕೇ
ಮೈಕ್ ತೂರಿಸಿ ಕೆಳಗಿದ್ದವರ ಸೌಂಡ್ ಬೈಟ್ ಪಡೆಯಲೂ ಕಾತರರಾಗಿದ್ದರೇನೊ! ಆದರೆ ಎಂಜಿನಿಯರ್ ಆಂಡ್ರೆ ಸುಗಾರೆ ಆ ರಂಧ್ರದ ಬಳಿ ಯಾರೂ ಸಾಗದಂತೆ ಭದ್ರತಾ ಕೋಟೆಯನ್ನು ನಿರ್ಮಿಸಿದ್ದ.
***

ಇದು ನಡೆದದ್ದು ಚಿಲಿ ಎಂಬ ಪುಟ್ಟ ದೇಶದಲ್ಲಿ; ೨೦೧೦ ರಲ್ಲಿ. ಕಳೆದ ಮಂಗಳವಾರವಷ್ಟೇ ಸುದೀರ್ಘ ೧೬ ದಿನಗಳ ಸುರಂಗವಾಸದ ಬಳಿಕ ನಮ್ಮ ಉತ್ತರಾ ಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾದಲ್ಲಿ ಸುರಕ್ಷಿತ ಹೊರಬಂದ ೪೧ ಕಾರ್ಮಿಕರ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ ಪತ್ರಕರ್ತರ ವಿರುದ್ಧ ದೂರು ದಾಖಲಾಗಿರುವ ಸುದ್ದಿಯೊಂದನ್ನು ಓದುತ್ತಿದ್ದೆ. ಈ ಹಿನ್ನೆಲೆಯಲ್ಲಿ ಈ ಘಟನೆ ನೆನಪಿಗೆ ಬಂತು. ಅತಿರಂಜಿತ ವರದಿಗಳನ್ನೇ ಬಂಡವಾಳ ಮಾಡಿಕೊಂಡಿರುವ ನಮ್ಮ ಟಿವಿ ಮಾಧ್ಯಮದ ಮನಃಸ್ಥಿತಿಗೆ ಚಿಲಿಯೂ ಒಂದೇ, ಸಿಲ್ಕ್ಯಾರಾವೂ ಒಂದೇ.

ಎಲ್ಲೆಡೆಯ ಮಾಧ್ಯಮದ ಮಂದಿಯ ವರ್ತನೆಗಳೂ ಹೀಗೇ ಇರುತ್ತ ವೆಂದಾಯಿತು. ಬಿಡಿ, ಅದು ದೊಡ್ಡದಲ್ಲ; ಅಂಥ ಮನಃ ಸ್ಥಿತಿಗಳು ಬದಲಾಗುವುದೂ ಇಲ್ಲ. ಏನೇ ಆಗಿದ್ದರೂ ನಾವು ಮನುಷ್ಯರು ಎಂಬ ಆಂತರಿಕ ಪ್ರಜ್ಞೆ ಜಾಗೃತಗೊಂಡರೆ ಇಂಥ ಅಪಸವ್ಯಗಳಿಗೆ ಆಸ್ಪದವಿರುವುದಿಲ್ಲ. ಮತ್ತೆ ಚಿಲಿಯ ವಿಚಾರಕ್ಕೆ ಬಂದರೆ, ಪಕ್ಕಾ ಚಿಲ್ಲಿ (ಮೆಣಿಸಿನಕಾಯಿ)ಯಂತಿರುವ ಮರುಭೂಮಿಯಿಂದಾವೃತ್ತ ಪುಟ್ಟ ದೇಶ ಚಿಲಿಯ ಚಿನ್ನ ಮತ್ತು ತಾಮ್ರದ ಅದಿರನ್ನು ತೆಗೆಯುವ ಸ್ಯಾನ್ ಯೋಸೆ ಗಣಿಯದು. ಅದರ ೨೩೦೦ (ಸುಮಾರು ೭೦೦ ಮೀಟರ್) ಆಳದ ಗಣಿಯಲ್ಲಿ ಅಕಸ್ಮಾತ್ ಉಂಟಾದ ಭೂಕುಸಿತದಿಂದ ಅವಘಡದಿಂದಾಗಿ ೩೩ ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅದು ೨೦೧೦ರ ಅಕ್ಟೋಬರ್ ತಿಂಗಳು; ಮೇಲೆ ಹಗಲೆಲ್ಲ ಕೆಕ್ಕರಿಸುವ ಬಿಸಿಲು; ರಾತ್ರಿ ಮೈಕೊರೆಯುವ ಚಳಿ.

ಆದರೆ ಭೂಮಿಯೊಳಗೆ ಇದು ತಿರುಗುಮುರುಗು. ಸೂರ್ಯ ಮುಳುಗುತ್ತಿದ್ದಂತೆಯೇ ಒಳಗಿದ್ದವರು ಬೆಂದು ಹೋಗುವಷ್ಟು ಬಿಸಿಯನ್ನು ಹೀರಿಕೊಂಡಿರುತ್ತಿತ್ತು ಭೂಮಿ. ಇಂಥ ಸ್ಥಿತಿಯಲ್ಲಿ ಸಿಲುಕಿಕೊಂಡ ಜನರನ್ನು ಮೇಲೆತ್ತುವುದು ಸುಲಭವಿರಲಿಲ್ಲ. ಕನಿಷ್ಠ, ಏನೋ ಒಂದು ಉಪಾಯ ಮಾಡಿ ಅವರನ್ನು ಹೊರತರೋಣ
ವೆಂದರೂ ಅದೆಷ್ಟು ದಿನ ಹಿಡಿದೀತೆಂಬುದಕ್ಕೆ ಯಾರಲ್ಲೂ ನಿಖರ ಉತ್ತರವಿಲ್ಲ. ಅಷ್ಟಕ್ಕೂ ಅಲ್ಲಿದ್ದವರು ಬದುಕಿದ್ದಾರೋ, ಸತ್ತಿದ್ದಾರೋ ಎಂಬುದೂ ತಿಳಿದಿಲ್ಲ.

ತಕ್ಷಣ ಕಾರ್ಯಪ್ರವೃತ್ತವಾದ ಅಲ್ಲಿನ ಸರಕಾರ, ಅಂತಾರಾಷ್ಟ್ರೀಯ ಡ್ರಿಲ್ಲರ್ ಫಾಲನ್‌ನನ್ನು ಕರೆಸಿ, ಕಾರ್ಯಾಚರಣೆಗೆ ಇಳಿದೇಬಿಟ್ಟಿತು. ಅಂತೂ ಹದಿನೇಳು ದಿನ ಶ್ರಮಿಸಿ ೩ ಅಂಗುಲ ಬೋರ್ ರಂಧ್ರ ಕೊರೆದು ನೋಡಿದರೆ ಅವರೆಲ್ಲ ಬದುಕಿದ್ದಾರೆ! ಇನ್ನೂ ದೊಡ್ಡ ರಂಧ್ರ ಕೊರೆದು ಅವರನ್ನು ಮೇಲಕ್ಕೆತ್ತಲು ಏನಿಲ್ಲವೆಂದರೂ ನಾಲ್ಕೈದು ತಿಂಗಳಾದರೂ ಬೇಕು. ಅದುವರೆಗೆ ಅವರನ್ನು ಬದುಕಿಸಿ, ಆರೋಗ್ಯವಾಗಿಟ್ಟು ಕೊಳ್ಳುವುದು ಹೇಗೆ? ಒಂದು ಹಿಡಿಯಷ್ಟೇ ಇರುವ ಕೊಳವೆಯ ಮೂಲಕವೇ ಎಲ್ಲ ೩೩ ಮಂದಿಗೆ ಆಹಾರ-ಔಷಧ ರವಾನಿಸಬೇಕು; ಅವರನ್ನು ಮೇಲಕ್ಕೆತ್ತಲು ರಾಕೆಟ್ ಮಾದರಿಯ ಲಿಫ್ಟ್ ನಿರ್ಮಿಸಬೇಕು.

೮.೧ಸೆಂಟಿಮೀಟರ್ ಅಗಲದ ಕೊಳವೆಯಲ್ಲಿ ಎಲ್ಲರಿಗೆ ಎರಡು ತಿಂಗಳಿಗೆ ಬೇಕಾಗುವಷ್ಟು ಎಲ್ಲ ಸಾಮಗ್ರಿಗಳನ್ನು ಕಳಿಸಲಾಯಿತು. ಐದು ನೂರಕ್ಕೂ ಹೆಚ್ಚು ಮಂದಿ ತಂತ್ರಜ್ಞರು ಹಗಲಿರುಳೂ ಶ್ರಮಿಸಿದರು. ಕಾರ್ಯಪಡೆಗಳು ಅಂತರ್ಜಾಲದ ಮುಖಾಂತರ ವಿಶ್ವದ ಹಲವಾರು ಪರಿಣತ ತಂತ್ರಜ್ಞರ ಸಹಾಯ, ಸಲಹೆ ಪಡೆದುಕೊಂಡಿತು. ಕಾರ್ಯಪಡೆಯ ಬಳಿ ಭೂ ವಿಜ್ಞಾನಿಗಳ, ಡ್ರಿಲ್ಲರುಗಳ, ಮನೋವಿಜ್ಞಾನಿಗಳ, ವೈದ್ಯರ, ಸಬ್ಮರಿನ್ ತಂತ್ರಜ್ಞರ ಹೀಗೆ ಅನೇಕ ತಜ್ಞರಿದ್ದರು.

ಮೂರು ಬೃಹತ್ ಬೈರಿಗೆಗಳ ಸಹಯೋಗದಲ್ಲಿ ಮೂರು ಗೇಣು ಅಗಲದ, ಪಾತಾಳಕ್ಕೆ ಕೊರೆದ ಕಿಂಡಿಯಲ್ಲಿ ಎಂಟಡಿ ಎತ್ತರದ ಸಿಲಿಂಡರಿನಾಕೃತಿಯ ಪಂಜರ ‘ಫೀನಿಕ್ಸ್’ ನ ಮುಖಾಂತರ ಗಂಟೆಗೊಬ್ಬರಂತೆ ೩೩ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು. ಕೊನೆಗೂ ಪುಟ್ಟ ದೇಶ ಆಗಸ್ಟ್ ೫ರಿಂದ ಅಕ್ಟೋಬರ್ ೧೩ರವರೆಗೆ ನಡೆಸಿದ ಅರವತ್ತೊಂಬತ್ತು ದಿನಗಳ ಕಾರ್ಯಚರಣೆಯಲ್ಲಿ ಎಲ್ಲರನ್ನೂ ಸುರಕ್ಷಿತ ಮೇಲೆತ್ತಿ ದೊಡ್ಡ ಸಾಹಸ ಮಾಡಿದ್ದಾಗ ವಿಶ್ವಾದ್ಯಂತದ ೩ ಸಾವಿರಕ್ಕೂ ಹೆಚ್ಚು ಮಾಧ್ಯಮದ ಮಂದಿ ಅದನ್ನು ನೇರ ಪ್ರಸಾರ ಮಾಡುತ್ತಿದ್ದರು. ಇದಕ್ಕಾಗಿ ಸುಮಾರು ನೂರು ಕೋಟಿಗೂ ಹೆಚ್ಚು ಹಣವನ್ನು ಹಿಂದೆ ಮುಂದೆ ನೋಡದೇ ಖರ್ಚು ಮಾಡಿತ್ತು ಆ ಪುಟ್ಟ ದೇಶ.

ಇಂಥದೊಂದು ವೈಜ್ಞಾನಿಕ, ಮಾನವೀಯ ಸಾಹಸಗಾಥೆಯನ್ನು ಜಗತ್ತಿಗೇ ಮೊದಲ ಬಾರಿಗೆ; ಅದೂ ಕನ್ನಡದಲ್ಲಿ ಕಟ್ಟಿಕೊಟ್ಟವರು ಸರೋಜಾ ಪ್ರಕಾಶ್ ಎಂಬ ಅಚ್ಚ ಕನ್ನಡತಿ; ‘ಚಿಲಿಯ ಕಲಿಗಳು’ ಎಂಬ ಕಿರುಹೊತ್ತಗೆಯ ಮೂಲಕ. ಮೂಲತಃ ಭೌತವಿಜ್ಞಾನದ ಉಪನ್ಯಾಸಕಿಯಾಗಿದ್ದ ಸರೋಜಾ, ಜಗದಿತಿಹಾಸದಲ್ಲಿ ದಾಖಲಾದ ಈ ನೈಜ ಸಾಹಸ ವನ್ನು ಅತ್ಯಂತ ಥ್ರಿಲ್ಲರ್ ಕಾದಂಬರಿಯ ರೀತಿಯಲ್ಲಿಲ್ಲರಿಗೂ ಅರ್ಥವಾಗುವಂತೆ ನಿರೂಪಿಸಿದ್ದಾರೆ. ನಮ್ಮ ಸಿಲ್ಕ್ಯಾರಾದಲ್ಲಿನ
ಸೂಕ್ಷ್ಮ ಸುರಂಗ ತಜ್ಞ ಕ್ರಿಸ್ ಕೂಪರ್ ನೇತೃತ್ವದ ಕಾರ್ಯ ಪಡೆಯ ಸಾಧನೆ ಚಿಲಿಯದ್ದರಂತೆ ಮಹಾ ಸಾಹಸವಲ್ಲದಿದ್ದರೂ, ಸಣ್ಣದೇನಲ್ಲ. ಸುರಂಗದೊಳಗೆ ಸಿಲುಕಿದ್ದ ಎಲ್ಲರೂ ಮೊದಲು ಸುರಕ್ಷಿತ ಹೊರಬರಲಿ ಎಂದು ಕಾಯುತ್ತಿದ್ದವನಿಗೆ, ಅವರು ಹೊರಬರುತ್ತಿದ್ದಂತೆಯೇ ನಿಮ್ಮೊಂದಿಗೆ ‘ಚಿಲಿಯ ಕಲಿಗಳ’ ಕೆಲವಷ್ಟನ್ನು ಹಂಚಿಕೊಳ್ಳಬೇಕಿನಿಸಿತು. ಆ ಸಾಹಸದ ಒಂದು ಝಲಕ್ ನೋಡಿ ಹೀಗಿದೆ…
***

ಹದಿನೇಳು ದಿನಗಳ ನಂತರವೂ ಗಣಿಯಾಳದಲ್ಲಿ ಕಾರ್ಮಿಕರು ಬದುಕಿರುವ ಸುದ್ದಿ ಕ್ಷಣದಲ್ಲಿ ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಮೂಲಕ ಬಂದು ಅಲೆಅಲೆಯಾಗಿ ಚಲಿಸಿತು. ಇಡೀ ಚಿಲಿ ದೇಶ ಈಗ ಹಬ್ಬದ ಕಳೆಯನ್ನು ಹೊತ್ತು ಶಂಗಾರ ಗೊಂಡಿತು. ಸಂಗೀತ, ಹಾಡು, ನೃತ್ಯಗಳು ಜನರ ಸಂತೋಷ ವನ್ನು ಪ್ರತಿಬಿಂಬಿಸಿದವು. ಎಲ್ಲೂ ಚಿಲಿಯ ವರ್ಣರಂಜಿತ ಧ್ವಜಗಳು ಹಾರಾಡತೊಡಗಿದವು. ಗಣಿ ಸಮೀಪದ ಕೊಪಿ ಯಾಪೋ ನಗರದಲ್ಲಂತೂ ವಾಹನಗಳು ಕಿವಿ ತೂತಾಗುವಂತೆ
ಹಾರ್ನ್ ಬಾರಿಸತೊಡಗಿದವು.

ರಾಷ್ಟ್ರಪತಿ ಪಿನೆರಾ ಸ್ಯಾನ್ಯೋಸೆ ಗಣಿ ಪ್ರದೇಶಕ್ಕೆ ವಿಮಾನದಲ್ಲಿ ಬಂದಿಳಿದರು. ಜತೆಯಲ್ಲಿ ಗಣಿ ಸಚಿವ ಲಾರೆನ್ಸ್ ಗೋಲ್ಬೋರ್ನ್ ಕೂಡ. ರಾಷ್ಟಪತಿ ಬಂದರೆಂಬ ಸುದ್ಧಿ ಕೇಳಿ ಎಲ್ಲ ಕ್ಯಾಮೆರಾಗಳೂ ಮಾಧ್ಯಮ ಕೇಂದ್ರಕ್ಕೆ ದೌಡಾಯಸಿದವು. ಅದುವರೆಗೆ ಸುರಕ್ಷಿತವಾಗಿ ಬಚ್ಚಿಟ್ಟಿದ್ದ ಕೆಂಪಕ್ಷರದ ಚೀಟಿ ಆಂಡ್ರೂ ಸುಗಾರೆಯ ಕೈ ದಾಟಿ ಈಗ ಪಿನೆರಾ ಕೈಗೆ ಬಂತು. ಆಳದಿಂದ ಬಂದ ಆ ಪುಟ್ಟ ಸಂದೇಶವನ್ನು ರಾಷ್ಟ್ರಪತಿ ಎತ್ತಿ ಹಿಡಿದು ಕ್ಯಾಮೆರಾಗಳಿಗೆ ಪ್ರದರ್ಶಿಸಿದರು. ‘ನಾವು ೩೩
ಜನರೂ ಸುರಕ್ಷಿತವಾಗಿದ್ದೇವೆ’ ಎಂಬರ್ಥದ ಬರಹದ ‘ಲೋಸ್ ೩೩೨ (ಈ ೩೩)’ ಎಂಬ ಪುಟ್ಟ ಪದ ಇಡೀ ಅಮೆರಿಕಾ ಖಂಡದ ಸಹಸ್ರಾರು ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ತಲೆಬರಹವಾಗಿ ರಾರಾಜಿಸಿತು.

ಅದೇ ವೇಳೆಗೆ ಡ್ರಿಲ್ಲಿಂಗ್ ಯಂತ್ರದ ತಾಂತ್ರಿಕ ಸಿಬ್ಬಂದಿ ಭಾರೀ ಗಾತ್ರದ ತಂತಿ ಸುರುಳಿಯನ್ನು ಹೊತ್ತು ತಂದಿದ್ದರು. ತಂತಿಯ ತುದಿಯಲ್ಲಿ ಒಂದು ಪುಟ್ಟ ಫಾನ್ ಉಪಕರಣ ವೊಂದನ್ನು ಕಟ್ಟಿ ಮೆಲ್ಲಗೆ ರಂಧ್ರದ ಮೂಲಕ ಇಳಿ ಬಿಟ್ಟರು. ‘ಸಹಾಯ ಬರಲಿದೆ, ಗಣಿ ಸಚಿವರು ತುಸು ಹೊತ್ತಿನ ಮಾತಾಡಲಿದ್ದಾರೆ. ನಿಮ್ಮಲ್ಲಿ ಯಾರಾದರೊಬ್ಬರು ರಂಧ್ರದ ಬಳಿ ನಿಂತಿರಿ’ ಎಂಬ ಪುಟ್ಟ ಸಂದೇಶದ ಚೀಟಿಯೊಂದನ್ನು -ನ್ ಜತೆ ಕಟ್ಟಿದ್ದರು. ಅದು ಆ ಮುಷ್ಟಿಯಗಲದ ರಂಧ್ರದಲ್ಲಿ ಮೆಲ್ಲಮೆಲ್ಲನೆ ಇಳಿಯುತ್ತ ೬೮೦ ಮೀಟರ್ ಆಳದಲ್ಲಿದ್ದ ವರನ್ನು ತಲುಪಿತು. ರೆಕಾರ್ಡಿಂಗ್ ವ್ಯವಸ್ಥೆಯನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಿದ್ದಾಯಿತು.

ಅರ್ಧ ಗಂಟೆಯಲ್ಲಿ ಪಾತಾಳದಲ್ಲಿ ಫೋನ್ ರಿಂಗಾಯಿತು. ಕಾರ್ಮಿಕ ತಂಡದ ಮುಖ್ಯಸ್ಥ ಲೂಯಿಸ್ ಊರ್ಝುವಾ ಫೋನ್ ಎತ್ತಿಕೊಂಡ. ‘ಹೇಗಿದ್ದೀರಾ ಎಲ್ಲ?’ ಸಚಿವರ ಪ್ರಶ್ನೆಗೆ ಕೆಳಿಗಿನಿಂದ ತುಸು ಕ್ಷೀಣವಾದ ಆದರೆ ಸ್ಪಷ್ಟ ಉತ್ತರ ಬಂತು. ‘ನಾವೆಲ್ಲ ಕ್ಷೇಮವಾಗಿದ್ದೇವೆ. ರಕ್ಷಣೆ ಬರುವುದನ್ನೇ ಕಾಯ್ತಾ ಇದ್ದೇವೆ’ ಉರ್ಝುವಾ ಧ್ವನಿ. ಗೋಲ್ ಬೋರ್ನ್ ಮುಂದಿನ ಮಾತು ಹೇಳುವ ಮೊದಲೇ ಕೆಳಗಿನಿಂದ ಮಾತು ಕೇಳಿಸಿತು: ‘ಸರ್, ಒಂದು ಕ್ಷಣ ನಿಲ್ಲಿ. ನಾವೆಲ್ಲ ಇಲ್ಲಿ ಒಟ್ಟಾಗಿ ನಿಂತಿದ್ದೇವೆ’.
ತುಸು ಅವಾಕ್ಕಾದ ಗಣಿಸಚಿವರು ಫೋನನ್ನು ಆಚೆ ಕಿವಿಯಿಂದ ಈಚೆ ಕಿವಿಯತ್ತ ತರುತ್ತಲೇ ಕೆಳಗಿನಿಂದ ತೀರ ಪರಿಚಿತ ವೃಂದಗಾನ ಕೇಳಿಬಂತು – ‘ಪ್ಯೂರೊಚಿಲೀ ಎಸ್ತೂಸಿಲೋ ಅಜುವಾಲ್ಡೊ. . .’ ಗೋಲ್ ಬೋರ್ನ್ ಹಠಾತ್ತನೆ ಸೆಟೆದು ನಿಂತರು.

ಸಚಿವರ ಸುತ್ತ ನಿಂತವರಿಗೆ ತುಸು ಗಾಬರಿ. ಏನಾಗಿರಬಹುದು? ಎರಡು ನಿಮಿಷ ಮೌನವಾಗಿ ಸೆಟೆದೇ ನಿಂತಿದ್ದ ಸಚಿವರು, ‘ಓ ಎಲ್ ಸಿಲೋ. ಓ ಎಲ್ ಸಿಲೊ . ಕೊಂತ್ರಾಲಾ ಒಪ್ರೆಸೆನ್ .’ ಎಂದು ರಾಗವಾಗಿ ಹೇಳಿದಾಗ ಎಲ್ಲರಿಗೂ ಅರ್ಥವಾಯಿತು. ಪಾತಾಳದಲ್ಲಿದ್ದ ಎಲ್ಲ ೩೩ ಜನರೂ ಒಟ್ಟಾಗಿ ಚಿಲಿಯ ರಾಷ್ಟಗೀತೆಯನ್ನು ಹಾಡುತ್ತಿದ್ದರು! ನೆರೆದಿದ್ದವರ ಕಣ್ಣು ಮಂಜಾಗಿತ್ತು. ಅಥಂ ಜೀವೋತ್ಕೃಮಣ ಸ್ಥಿತಿಯಲ್ಲೂ ರಾಷ್ಟ್ರಭಕ್ತಿ ಮೆರದಾಡಿತ್ತು.
***

‘ಚಿಲಿಯ ಕಲಿಗಳು’ ಪುಸ್ತಕದ ಪ್ರತಿ ಪುಟಗಳೂ ಇಂಥ ರೋಚಕ ಘಟನೆಗಳ ಸರಣಿಯಿಂದಲೇ ತುಂಬಿವೆ. ಹಾಗೆಯೇ ಬರಹ ಮುಂದುವರಿಯುತ್ತದೆ. ‘ನಮ್ಮನ್ನು ಪಾರು ಮಾಡಿ, ಬದುಕಿಸಿ’ ಎಂಬ ಆರ್ತನಾದವನ್ನು ನಿರೀಕ್ಷಿಸಿದವರಿಗೆ ಎಂಥ ರಾಷ್ಟ್ರಾಭಿಮಾನದ ಸಂದೇಶ! ಗಣಿಯಲ್ಲಿ ಸಿಕ್ಕಿಬಿದ್ದವರೆಲ್ಲ ಆ ಕ್ಷಣದಲ್ಲಿ ಹೀರೋ ಗಳಾದರು. ಎಷ್ಟೇ ವೆಚ್ಚ ಬರಲಿ, ಎಷ್ಟೇ ಕಷ್ಟ ಬರಲಿ, ಎಂಥದೇ ಸವಾಲ ನ್ನಾದರೂ ಎದುರಿಸಿ ನಿಮ್ಮನ್ನು ಮೇಲಕ್ಕೆ ತಂದೇ ತರುತ್ತೇವೆ ಎಂದು ಚಿಲಿಯ ಪ್ರತಿ
ಪ್ರಜೆಯೂ ಪಣತೊಡುವ ಮಟ್ಟಿಗೆ ಆ ಗೀತೆ ಸಂಚಲನ ಮೂಡಿಸಿತು. ರಾಷ್ಟ್ರಪತಿ ಸೆಬಾಸ್ಟಿಯನ್ ಪಿನೆರಾ ತಮ್ಮ ಸಚಿವ ಸಂಪುಟದ ತುರ್ತುಸಭೆ ನಡೆಸಲು ನಿರ್ಧರಿಸಿದರು.
***
ಇತ್ತ ಗಣಿಯ ಬಳಿ ಹದಿನೇಳು ದಿನಗಳಿಂದ ಬೀಡುಬಿಟ್ಟಿದ್ದ ಬಂಧುಗಳ ಆಶಾ ಶಿಬಿರ’ಗಳಲ್ಲಿ ಗಲಾಟೆಯೋ ಗಲಾಟೆ. ಕಾರ್ಮಿಕರು ಬದುಕಿದ್ದಾರೆಂದು ಗೊತ್ತಾದ ಕೂಡಲೇ ಅವರಿಗೆ ಜ್ಯೂಸ್ ಕಳಿಸಿ, ಊಟ ಕಳಿಸಿ, ಬಟ್ಟೆ ಕಳಿಸಿ’ ಎಂದು ಬಂಧು ಗಳು ಹುಯಿಲಿಡತೊಡಗಿದ್ದರು. ಕಳಿಸುವುದಕ್ಕೆ ಇರುವ ಒಂದೇ ಮಾರ್ಗವೆಂದರೆ ಬರೀ ಮುಷ್ಟಿಯಗಲದ ಕೊಳವೆ.

ಅದರಲ್ಲಿ ಅರ್ಧ ಮೈಲು ಆಳದವರೆಗೆ ೩೩ ಜನರಿಗೆ ಊಟ, ತಿಂಡಿಯನ್ನು ದಿನಕ್ಕೆ ಮೂರು ಬಾರಿ ಕಳಿಸುವುದೆಂದರೆ ಸುಲಭದ ಮಾತಲ್ಲ. ಆಗ ಆಹಾರದ ರೂಪ, ಪ್ರಮಾಣ, ಗುಣಮಟ್ಟ ಪ್ರತಿಯೊಂದೂ ಪ್ರಮುಖವಾಗುತ್ತವೆ. ವೈದ್ಯರೂ ಆದ ಆರೋಗ್ಯ ಮಂತ್ರಿ ಮನಾಲಿಚ್ ಅವರು ನೇಮಿಸಿದ ವೈದ್ಯರ ತಂಡ ಸಭೆ ಸೇರಿತು. ಕೆಳಕ್ಕೆ ಕಳಿಸಬೇಕಾದ ಆಹಾರ ಪದಾರ್ಥಗಳ ಪಟ್ಟಿಯನ್ನು ತಯಾರುಮಾಡಿತು. ಆಹಾರವನ್ನು ಕೆಳಕ್ಕೆ ಕಳಿಸಲೆಂದು ಮುಷ್ಟಿಯಗಲದ ಐದು ಅಡಿ ಉದ್ದದ ಗಟ್ಟಿ ಪ್ಲಾಸ್ಟಿಕ್ ಕೊಳವೆಗಳನ್ನು ತಯಾರು ಮಾಡಿಕೊಡಲು ಕಾರ್ಖಾನೆಯೊಂದು ಮುಂದೆ ಬಂದಿತು.

ಅರ್ಧ ದಿನದಲ್ಲಿ ಅಚ್ಚ ನೀಲಿ ಬಣ್ಣದ ಐವತ್ತು ಕೊಳವೆಗಳು ಸ್ಯಾನ್ಯೋಸೆ ಗಣಿಪ್ರದೇಶಕ್ಕೆ ಹಾಜರಾದವು. ಈ ಪ್ಲಾಸ್ಟಿಕ್ ಕೊಳವೆಗಳನ್ನು ‘ಪಲೋಮಾ’ ಎಂದು ಕರೆದರು. ಪಲೋಮಾ ಅಂದರೆ ಚಿಲಿಯನ್ನರ ಭಾಷೆಯಲ್ಲಿ ‘ಸಂದೇಶ ಹೊತ್ತು ಸಾಗುವ ಪಾರಿವಾಳ’. ಊಹಿಸಿ. ಒಂದು ಮೋಸಂಬಿಯನ್ನು ತೂರಿಸಬಹುದಾ
ದಷ್ಟು ಗಾತ್ರದ ಕೊಳವೆಯ ಮೂಲಕ ಅಲ್ಲಿನ ಎಲ್ಲರ ಎಲ್ಲ ಅಗತ್ಯಗಳನ್ನು ಒದಗಿಸಬೇಕು. ಊಟ, ಕಾಫಿ, ಜೂಸು, ಬಟ್ಟೆಬರೆ, ಔಷಧ, ಪ್ರಸಾಧನ, ಮನರಂಜನಾ ಸಾಮಗ್ರಿ…. ಅದೇನು ಮಹಾ! ಅಂಚೆ ಡಬ್ಬಿಯೊಳಗೆ (ಪಲೋಮಾ ದೊಳಗೆ) ಬುತ್ತಿ ಗಂಟನ್ನು ಸುತ್ತಿಟ್ಟು ರಂಧ್ರದಲ್ಲಿ ಇಳಿಬಿಟ್ಟರೆ ಅದು ಸರ್ರೆಂದು ಕೆಳಕ್ಕೆ ಹೋಗುತ್ತದಲ್ಲ? ಇಲ್ಲ, ಅಷ್ಟು ಸರಳವಿಲ್ಲ ಇದು.

ಪಲೋಮಾ ಕೆಳಕ್ಕೆ ಧಾವಿಸುತ್ತ ಅದೆಷ್ಟು ವೇಗವಾಗಿ ಅಲ್ಲಿಗೆ ಅಪ್ಪಳಿಸುತ್ತದೆ ಎಂದರೆ ಒಳಗಿನ ಸಾಮಗ್ರಿ ಪಲೋಮಾ ಜತೆಗೇ ಚಿಂದಿಯಾಗುತ್ತವೆ. ಮೇಲಾಗಿ ಒಮ್ಮೆ ಹೋದದ್ದು ವಾಪಸ್ ಬರಲಾರದು. ದಿನಕ್ಕೆ ಎಷ್ಟು ಪಲೋಮಾಗಳನ್ನು ಕಳಿಸುತ್ತೀರಿ? ಬರೀ ಊಟದ ಸಾಮಗ್ರಿಯನ್ನೇ ದಿನಕ್ಕೆ ಮೂರು ಬಾರಿ ಕಳಿಸುವುದಾದರೂ ೯೯ ಪಲೋಮಾಗಳು ಪ್ರತಿ ದಿನ ಬೇಕು. ಗಣಿಯಲ್ಲಿ ಅವುಗಳದ್ದೇ ದೊಡ್ಡ ತಿಪ್ಪೆಯಾಗುತ್ತದೆ. ‘ಇಲ್ಲ, ಪಲೋಮಾ ವನ್ನು ನಿಧಾನವಾಗಿ ಹಗ್ಗಗಳ ಮೂಲಕ ಕೆಳಗಿಳಿಸಬೇಕು. ಅದನ್ನು ಅಲ್ಲಿ ಖಾಲಿ ಮಾಡಿ ಅದೇ ಹಗ್ಗದ ಮೂಲಕ ಮೇಲಕ್ಕೆ ತರಬೇಕು’ ಎಂದಿತು ತಜ್ಞರ ತಂಡ.

ಸರಿ, ಒಂದೊಂದು ಪಲೋಮಾಕ್ಕೂ ಎರಡು ಹುಕ್ ಜೋಡಿಸಿ ಅದನ್ನು ಕೆಳಕ್ಕೆ ಸಾಗಿಸಲು ಕಿಲೊಮೀಟರ್ ಉದ್ದದ ಗಟ್ಟಿಯಾದ ಸಪೂರನೆಯ ಕೇಬಲ್‌ಗಳಿಗೆ ಆರ್ಡರ್ ಹೋಯಿತು. ಕೇಬಲ್ಲನ್ನು ಬಾವಿ ಹಗ್ಗ ಇಳಿಸುವಂತೆ ಕೈಯಿಂದ ಇಳಿಸಲು ಸಾಧ್ಯವಿಲ್ಲ. ಕೈ ಚರ್ಮ ಸುಲಿದು ಹೋದೀತು. ಕೇಬಲ್ಲಿನ ತುದಿಗೊಂದು ಹುಕ್, ಕೇಬಲ್ಲನ್ನು ಏರಿಳಿಸಲು ರಾಟೆ, ರಾಟೆಗೆ ಹಿಡಿಕೆ, ರಾಟೆಯ ಆಧಾರಕ್ಕೆ ಅಟ್ಟಣಿಗೆ….. ಅವೆಲ್ಲ ಬಂದಾಗ ಸಂಭ್ರಮವೋ ಸಂಭ್ರಮ.

‘ಆಶಾ ಶಿಬಿರ’ದ ಪ್ರತಿ ಟೆಂಟ್‌ನಲ್ಲಿ ವಿಶೇಷ ತಿಂಡಿ ತಯಾರಿಸುವುದೇನು, ಬಟ್ಟೆ ಹೊಲಿಯುವುದೇನು, ಪ್ರೀತಿಯ ಪೇಯವನ್ನು ತಯಾರಿಸಿ ಬಾಟಲಿಗೆ ತುಂಬುವು ದೇನು…. ಪಲೋಮಾ ಗಳಿಗೆ ಬೇಡಿಕೆಯೋ ಬೇಡಿಕೆ. ಮನೆಯವರೇ ತಯಾರಿಸಿದ ಮೊದಲ ಪೊಟ್ಟಣದ ಆಹಾರವನ್ನು ನೋಡಿ ವೈದ್ಯರು ‘ನೋ’ ಅನ್ನುವುದೆ? ಇಷ್ಟು ದಿನಗಳ ಉಪವಾಸದಿಂದ ಬಳಲಿದ ದೇಹಕ್ಕೆ ಒಮ್ಮೆಲೆ ಜಾಸ್ತಿ ಆಹಾರವನ್ನು ನೀಡುವ ಹಾಗಿಲ್ಲ. ಅವರಲ್ಲಿ ‘ರೀ-ಫೀಡಿಂಗ್ ಸಿಂಡ್ರೋಮ’ ಅಂದರೆ ಹೊಟ್ಟೆ
ಯೂತ, ಉಬ್ಬಸ ಉಂಟಾಗಬಹುದು.

ದೇಹಕ್ಕೆ ನಿಧಾನವಾಗಿ ಆಹಾರವನ್ನು ತುಂಬಬೇಕು. ಆದರೆ ಎಲ್ಲರಿಗೂ ಅವಸರ. ತನ್ನ ಗಂಡನಿಗೆ, ಅಣ್ಣನಿಗೆ, ಅಪ್ಪನಿಗೆ ಮೊದಲು ಕಳಿಸಬೇಕು. ‘ಮೊದಲು ನನ್ನ ಗಂಡನಿಗೆ ಆಕ್ಸಿಜನ್ ಕಳಿಸಿ, ಅವರಿಗೆ ಅಸ್ತಮಾ ಕಾಯಿಲೆ ಇದೆ’ ಎಂದಳು ಕಾರ್ಮಿಕ ಗೊಮೆಝ್‌ನ ಪತ್ನಿ ಲಿಲಿಯನ್. ಅಲ್ಲಿಗೆ ಹೊಸ ಬಗೆಯ ರಶ್ ಆರಂಭ. ಕೆಲವರು ಸ್ವಚ್ಛ ಬಟ್ಟೆಗಳನ್ನು ತಂದರು. ಇನ್ನು ಕೆಲವರು ಟೂತ್ ಪೇಸ್ಟ್, ಶೇವಿಂಗ್ ಸೆಟ, ಶಾಂಪೂ, ಒಂದು ಜತೆ ಚಪ್ಪಲಿ… ಆಶಾ ಶಿಬಿರದಲ್ಲಷ್ಟೇ ಅಲ್ಲ, ಕಾಪಿಯಾಪೋದ ಎಲ್ಲರ ತಲೆಯಲ್ಲೂ ಹೊಸ ಮಿಂಚು, ಹೊಸ ಹೊಸ ಸಾಮಗ್ರಿಗಳನ್ನು ಕೊಳವೆಯ ಮೂಲಕ ರವಾನಿಸುವ ಹೊಸ ಹೊಸ ಯೋಜನೆಗಳು!
***

ವಿಶೇಷವಾಗಿ ಗಮನ ಸೆಳೆವ ಹಲವಾರು ಘಟನೆಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ. ಪಾತಾಳದಡಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಕಾರ್ಮಿಕರು ಒಮ್ಮೆ ಕಳಿಸಿದ್ದ ಹಣ್ಣುಗಳನ್ನು ವಾಪಾಸು ಕಳಿಸಿ ಪ್ರತಿಭಟಿಸುತ್ತಾರೆ. ಆಗ ಎಡೆ ಆತಂಕ. ಕೂಡಲೇ ಮನೋವಿeನಿಗಳ ರಂಗಪ್ರವೇಶವಾಗುತ್ತದೆ. ನಾಸಾದ ತಜ್ಞರು, ಇದು ಆರೋಗ್ಯಪೂರ್ಣ ಮನಸ್ಥಿತಿಯ ಲಕ್ಷಣ. ಎ ಆದೇಶಗಳನ್ನು ಅಕ್ಷರಶಃ ಪಾಲಿಸುವುದೆಂದರೆ ತಮ್ಮತನವನ್ನು ಪೂರ್ಣ ಕಳೆದುಕೊಂಡ ಶರಣಾಗತಿ ಮನಸ್ಥಿತಿಯ ಲಕ್ಷಣ. ಆದ್ದರಿಂದ ಈ ಬಗ್ಗೆ ಚಿಂತೆ ಬೇಡ ಎಂದು ಸಲಹೆ ಕೊಡುತ್ತಾರೆ.
***

ನಿಜಕ್ಕೂ ‘ಚಿಲಿಯ ಕಲಿಗಳು’ ಎಂಬ ಶೀರ್ಷಿಕೆಗಿಂತ ಬೇರಿನ್ನೇನನ್ನು ಆ ಹೊತ್ತಗೆಗಿಟ್ಟಿದ್ದರೂ ಇಷ್ಟು ಅರ್ಥಗರ್ಭಿತ ವಾಗಿರುತ್ತಿರಲಿಲ್ಲ. ಪುಸ್ತಕ ಓದಿ ಮುಗಿಸುವ ಹೊತ್ತಿಗೆ ಸರೋಜಾ ಪ್ರಕಾಶ್ ನಿಜಕ್ಕೂ ಪಕ್ಕಾ ಲೈವ್ ಶೋ ನಡೆಸಿಕೊಟ್ಟ ಅನುಭವ ಮಾಡಿಸುತ್ತಾರೆ. ದಿನವಿಡೀ ಹೇಳಿದ್ದನ್ನೇ ಹೇಳಿ, ತೋರಿಸಿದ್ದನ್ನೇ ತೋರಿಸಿ ತಲೆ ಚಿಟ್ಟು ಹಿಡಿಸುವ ನಮ್ಮ ಟೀವಿ ಲೈವ್‌ಗಳ ಸ್ಥಾನದಲ್ಲಿ ಸರೋಜಾರನ್ನು ಕಲ್ಪಿಸಿಕೊಳ್ಳಲೂ ಆಗದು. ಅದೆಂಥಾ ಗಟ್ಟಿ ನಿರೂಪಣೆ! ಬಡಪಾಯಿ ಕಾರ್ಮಿಕರನ್ನು ರಕ್ಷಿಸಲೆಂದು ಜಗತ್ತಿನ ಇತಿಹಾಸದ ಮೊದಲ ಬಾರಿಗೆ ನಡೆದ ಅದ್ವಿತೀಯವಾದ ಯಶಸ್ವಿ ಕಾರ್ಯಾಚರಣೆಯ ಘನೆತೆಗೆ ಎಳ್ಳಷ್ಟೂ ಧಕ್ಕೆ ಬಾರದಂತೆ ಚಿತ್ರಿಸಿದ್ದಾರೆ ಲೇಖಕಿ. ಮತ್ತೊಮ್ಮೆ ನಿನ್ನೆ ಒಡೀ ರಾತ್ರಿ ಕುಳಿತು ಪುಸ್ತಕ ಓದಿ ಮುಗಿಸಿ ಇಂದು ನಿಮ್ಮನ್ನು ಪ್ರವೋಕ್ ಮಾಡಲೆಂದೇ ಇಲ್ಲಿ ‘ಉಪ್ಪಿನಕಾಯಿ ನೆಕ್ಕಿಸಿದಂತೆ’ ತುಸುವೇ
ಬರೆದು ರುಚಿ ಹಚ್ಚಿಸಿದ್ದೇನೆ. ಇನ್ನು ನೀವುಂಟು, ಲೇಖಕಿ ಯುಂಟು.

ಜೀವನದಲ್ಲೊಮ್ಮೆ ಓದಲೇಬೇಕಾದ, ಪುಸ್ತಕವನ್ನು ತೀರಾ ಇವತ್ತೇ ಓದಬೇಕೆನಿಸಿದರೆ ಪುಸ್ತಕ ಪ್ರಕಾಶಿಸಿದ ‘ಭೂಮಿ ಬುಕ್ಸ್’ನ ವಿಶಾಲಾಕ್ಷಿ ಅವರಿಗೆ ಒಂದು ಕರೆ ಮಾಡಿ; ಫೋನ್ ನಂಬರ್ ೯೪೪೯೧೭೭೬೨೮.

Leave a Reply

Your email address will not be published. Required fields are marked *