Thursday, 21st November 2024

ರಕ್ತಪರಿಚಲನೆಯ ತಿಳಿವಿದ್ದ ಚೀನೀಯರು

ಹಿಂತಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ವಿಲಿಯಂ ಹಾರ್ವೆ ರಕ್ತ ಪರಿಚಲನೆಯನ್ನು ಕಂಡು ಹಿಡಿಯುವುದಕ್ಕೆ ಮೊದಲೇ ಚೀನೀಯರಿಗೆ ರಕ್ತಪರಿಚಲನೆಯ ಬಗ್ಗೆ ಸ್ಥೂಲ
ಪರಿಕಲ್ಪನೆಯು ಇತ್ತು ಎನ್ನಬಹುದು. ಆದರೆ ರೋಗವಿಜ್ಞಾನದಲ್ಲಿ (ಪೆಥಾಲಜಿ) ರೋಗ ಗಳ ವರ್ಗೀಕರಣವು ಯಿನ್-ಯಾಂಗ್

ಜಗತ್ತಿನ ಎಲ್ಲ ಪ್ರಧಾನ ಸಂಸ್ಕೃತಿಗಳಂತೆ, ಪ್ರಾಚೀನ ಚೀನೀ ಸಂಸ್ಕೃತಿಯೂ ತನ್ನದೇ ಆದ ಚಿಕಿತ್ಸಾ ವಿಧಾವನ್ನು ಬೆಳೆಸಿ ಕೊಂಡಿತ್ತು. ಚೀನೀ ವೈದ್ಯಕೀಯವು ಸಂಪೂರ್ಣ ಸ್ವತಂತ್ರ ವಾದದ್ದು. ಜಗತ್ತಿನ ಇತರ ಸಂಸ್ಕೃತಿಗಳ ವೈದ್ಯಕೀಯ ಅರಿವಿನ ಪ್ರಭಾವ ಚೀನೀ ವೈದ್ಯ ಕೀಯದ ಮೇಲೆ ಆಗಿದೆ ಎನ್ನಲು ಯಾವುದೇ ಆಧಾರ ಇಲ್ಲ.

ಚೀನೀ ಸಾಂಪ್ರದಾಯಿಕ ನಂಬಿಕೆಯಂತೆ ಹ್ವಾಂಗ್‌ಡಿ ಎಂಬ ಅರಸ ಕ್ರಿ.ಪೂ.2697ರಲ್ಲಿ ರಾಜ್ಯಭಾರ ಮಾಡುತ್ತಿದ್ದ. ಹ್ವಾಂಗ್‌ಡಿ ಎಂದರೆ ಹಳದಿ ಚಕ್ರವರ್ತಿ ಎಂದರ್ಥ. ಈತನು ಹ್ವಾಂಗ್‌ಡಿ ನೀಜಿಂಗ್ ಎಂಬ ಚಿಕಿತ್ಸಾ ಗ್ರಂಥವನ್ನು ರಚಿಸಿದನೆಂಬುದು ಪಾರಂಪರಿಕ ನಂಬಿಕೆ. ಇದನ್ನು ಹಳದಿ ಚಕ್ರವರ್ತಿಯ ಆಂತರಿಕ ಶ್ರೇಷ್ಠ ಕೃತಿ ಎಂದು ಸ್ಥೂಲವಾಗಿ ಅನುವಾದಿಸಬಹುದು. ಈಗ ನಮಗೆ ದೊರೆತಿರುವ ಪ್ರತಿ, ಬಹುಶಃ ಕ್ರಿ.ಪೂ.300ರಲ್ಲಿ ರಚನೆಯಾಗಿದ್ದಿರಬಹುದು.

ಪ್ರಾಚೀನ ಚೀನೀ ವೈದ್ಯಕೀಯವೆಲ್ಲ ಈ ನೀಜಿಂಗ್ ಕೃತಿಯನ್ನು ಆಧರಿಸಿದೆ. ನೀಜಿಂಗ್ ತಲಾ 81 ಅಧ್ಯಾಯಗಳಿರುವ ಎರಡು ಪುಸ್ತಕಗಳ ಸಮುಚ್ಚಯ. ಮೊದಲನೆ ಯದು ಸೂ ವೆನ್. ಇದು ಆರೋಗ್ಯಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನು  ಎತ್ತಿಕೊಂಡು ಅವುಗಳಿಗೆ ಸೂಕ್ತ ಉತ್ತರ ನೀಡುತ್ತದೆ. ಎರಡನೆಯದು ಲಿಂಗ್ ಶು. ಇದು ಸೂಜಿಚಿಕಿತ್ಸೆಯನ್ನು (ಆಕ್ಯುಪಂಕ್ಚರ್) ಒಳಗೊಂಡಿದೆ. ನೀಜಿಂಗ್ ಪ್ರಶ್ನೋತ್ತರಗಳ ರೂಪದಲ್ಲಿದೆ. ಚಕ್ರವರ್ತಿ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಆರು ಮಂತ್ರಿಗಳು/ವೈದ್ಯರು
ಉತ್ತರ ಕೊಡುತ್ತ ಹೋಗುತ್ತಾರೆ. ವಾಸ್ತವದಲ್ಲಿ ನೀಜಿಂಗ್ ನನ್ನು ಹಲವು ವೈದ್ಯರು ಹಲವು ಕಾಲಘಟ್ಟದಲ್ಲಿ ಬರೆದಿರಬಹುದು. ಮುಂದಿನ ಜನಾಂಗಕ್ಕೆ ತಮ್ಮ ಗುರುತು ತಿಳಿಯದಂತಿರಲು ಲೇಖಕರು ಪ್ರಶ್ನೋತ್ತರ ಮಾದರಿ ಅನು ಸರಿಸಿರಬಹುದು.

ಯೂರೋಪಿನ ವೈದ್ಯಕೀಯದ ಮೇಲೆ ಹಿಪ್ರೋ ಕ್ರೇಟ್ಸ್ ಬರಹಗಳು ಯಾವ ರೀತಿಯ ಪ್ರಭಾವ ಬೀರಿವೆಯೋ, ಅಂತಹುದೇ ಪ್ರಭಾವವನ್ನು ನೀಜಿಂಗ್ ಕೃತಿಯು ಚೀನೀ ಪ್ರಾಚೀನ ವೈದ್ಯಕೀಯದ ಮೇಲೆ ಬೀರಿದೆ. ಆಧುನಿಕ ವೈದ್ಯಕೀಯವನ್ನು ಕಲಿತ ಚೀನೀ ವೈದ್ಯರು ನೀಜಿಂಗ್ ಕೃತಿಯ ಮೊದಲ ಭಾಗವಾದ ಸೂ ವೆನ್‌ನಲ್ಲಿರುವ ಸೈದ್ಧಾಂತಿಕ ವಿವರಗಳನ್ನು ಇಂದಿಗೂ ಮಾನ್ಯ ಮಾಡುವು ದುಂಟು.

ಸೂ ವೆನ್ ಭಾಗವು ಮನುಷ್ಯನ ಶರೀರ ರಚನೆ, ಕಾರ್ಯ, ಆರೋಗ್ಯ, ಅನಾರೋಗ್ಯ, ಚಿಕಿತ್ಸೆ ಇತ್ಯಾದಿಗಳನ್ನು ಕುರಿತು ಮೂಲ ಭೂತ ಸಿದ್ಧಾಂತಗಳನ್ನು ಮಂಡಿಸುತ್ತದೆ. ಬ್ರಹ್ಮಾಂಡವು ಸಮಷ್ಟಿ ಅಥವ ಸ್ಥೂಲರೂಪವಾದರೆ, ಮನುಷ್ಯನು ಅದರ ವ್ಯಷ್ಟಿ ಇಲ್ಲವೇ ಸೂಕ್ಷ್ಮ ರೂಪ. ಯಿನ್ ಮತ್ತು ಯಾಂಗ್ ಎಂಬ ದ್ವಿತ್ವ ಬ್ರಹ್ಮಾಂಡ ಸಿದ್ಧಾಂತವು (ಡ್ಯುವಲಿಸ್ಟಿಕ್ ಕಾಸ್ಮಿಕ್ ಥಿಯರಿ) ಚೀನೀ ವೈದ್ಯಕೀಯದ ತಿರುಳು. ಯಿನ್ ಮತ್ತು ಯಾಂಗ್ ಜಗತ್ತಿನ ಆಗುಹೋಗುಗಳಲ್ಲಿ ನಿರ್ಧರಿಸುವ ಪ್ರಾಕೃತಿಕ ಶಕ್ತಿಗಳು. ಯಾಂಗ್ ಎನ್ನುವುದು ಪುರುಷ ತತ್ತ್ವ. ಇದು ಉಜ್ವಲವಾದದ್ದು. ಹಾಗಾಗಿ ಇದು ಸದಾ ಸಕ್ರಿಯ ಹಾಗೂ ಜಂಗಮ. ಇದು ಸ್ವರ್ಗವನ್ನು ಪ್ರತಿನಿಧಿಸುತ್ತದೆ.

ಯಿನ್ ಎನ್ನುವುದು ಸೀ ತತ್ತ್ವ. ಇದು ಕಪ್ಪು ಬಣ್ಣದ್ದು. ಸದಾ ಜಡತೆಯು ಮೈವೆತ್ತಿರುವ ಕಾರಣ ಸ್ಥಾವರ ರೂಪದಲ್ಲಿಯೇ ಇರುತ್ತದೆ. ಇದು ಭೂಮಿಯನ್ನು ಪ್ರತಿನಿಧಿಸುತ್ತದೆ. ಈ ಎರಡೂ ಶಕ್ತಿಗಳ ನಡುವೆ ಸಮತೋಲನವಿದ್ದಾಗ, ಆರೋಗ್ಯವು ಲಭಿಸು ತ್ತದೆ. ಸಮತೋಲನವಿಲ್ಲದಾಗ ಅನಾರೋಗ್ಯವುಂಟಾಗುತ್ತದೆ. ಹಾಗಾಗಿ ಸಮತೋಲನವನ್ನು ಸ್ಥಾಪಿಸುವುದೇ ಚೀನೀ ಚಿಕಿತ್ಸೆಯ ಮೂಲ ಉದ್ದೇಶ. ವ್ಯಕ್ತಿಯ ಆರೋಗ್ಯ, ನಡತೆ, ಯಶಸ್ಸು, ವೈಯುಕ್ತಿಕ ಸಾಧನೆ, ರಾಜಕೀಯ/ಸಾರ್ವಜನಿಕ ಸಾಧನೆಗಳೆಲ್ಲ ಈ ಯಿನ್-ಯಾಂಗ್ ಗಳನ್ನು ಅವಲಂಭಿಸಿರುತ್ತದೆ. ಮನುಷ್ಯನ ದೇಹವು ಪಂಚಭೂತಗಳಿಂದ ನಿರ್ಮಾಣವಾಗಿದೆ.

ಅವು ಕಟ್ಟಿಗೆ, ಬೆಂಕಿ, ಭೂಮಿ, ಲೋಹ ಮತ್ತು ಜಲ. ಈ ಪಂಚಭೂತಗಳ ಜತೆಯಲ್ಲಿ ಪಂಚ ಗ್ರಹಗಳಿವೆ. ಪಂಚ ಋತುಗಳಿವೆ.
ಪಂಚವರ್ಣಗಳಿವೆ. ಪಂಚಸ್ಥಿತಿಗಳಿವೆ. ಇವುಗಳ ಜತೆಯಲ್ಲಿ ನಾವು ಸೇವಿಸುವ ಆಹಾರ, ಭಾವನೆಗಳು, ಪರಿಸರ (ಬಿಸಿಲು, ಚಳಿ, ಮಳೆ, ಗಾಳಿ, ಒದ್ದೆ, ಒಣ), ಜೀವನಶೈಲಿ ಮತ್ತು ವಯಸ್ಸು ನಮ್ಮ ಆರೋಗ್ಯ-ಅನಾರೋಗ್ಯಗಳನ್ನು ನಿರ್ಧರಿಸುತ್ತವೆ.

ಚೀನೀ ಧಾರ್ಮಿಕ ನಂಬಿಕೆಗಳ ಅನ್ವಯ, ಮೃತ ಮಾನವ ಶರೀರವನ್ನು ಛೇದಿಸುವ ಹಾಗಿಲ್ಲ. ಹಾಗಾಗಿ ಪ್ರಾಚೀನ ಚೀನೀ ಅಂಗ ರಚನಾ ವಿಜ್ಞಾನವು (ಅನಾಟಮಿ) ಅವೈಜ್ಞಾನಿಕವಾಗಿತ್ತು. ಸತ್ಯದಿಂದ ದೂರವಾಗಿತ್ತು. ಚೀನೀ ಅಂಗರಚನೆಯ ಬಗ್ಗೆ ಬರೆದ ಪ್ರಮುಖ ವೈದ್ಯ ವಾಂಗ್ ಕಿಂಗ್ರೆನ್. ೧೭೯೮ರ ಆಸುಪಾಸಿನಲ್ಲಿ ಪ್ಲೇಗ್ ಮಹಾಮಾರಿ ಚೀನಾದ ಮೇಲೆರಗಿತು. ಪ್ಲೇಗ್ ಕಾರಣ ಸತ್ತ ಮಕ್ಕಳ ಶರೀರವನ್ನು ನಾಯಿಗಳು ಹರಿದು ತಿಂದಿದ್ದವು. ಆ ಮಕ್ಕಳ ಶರೀರವನ್ನು ಅಧ್ಯಯನ ಮಾಡಿ ಅಂಗರಚನ ಗ್ರಂಥವನ್ನು
ರಚಿಸಿದ್ದ. ಚೀನೀ ಅಂಗರಚನಾ ತಿಳಿವು ಕಾಲ್ಪನಿಕವಾಗಿತ್ತು.

ಮಾನವನ ಶರೀರದಲ್ಲಿ 12 ವಾಹಿನಿಗಳಿರುತ್ತವೆ. 3 ಜ್ವಲನ ತೆರಪುಗಳು (ಬರ್ನಿಂಗ್ ಸ್ಪೇಸಸ್) ಇರುತ್ತವೆ. ಶರೀರದಲ್ಲಿ ಐದು ಅಂಗಗಳು ಇರುತ್ತವೆ. ಹೃದಯ, ಶ್ವಾಸಕೋಶ, ಯಕೃತ್, ಗುಲ್ಮ ಮತ್ತು ಮೂತ್ರಪಿಂಡ. ಇವು ಶಕ್ತಿಸಂಚಯ ಅಂಗಗಳು. ಐದು ಒಳಾಂಗಗಳು (ವಿಸೆರ) ಇರುತ್ತವೆ. ಜಠರ, ಸಣ್ಣ ಕರುಳು, ದೊಡ್ಡ ಕರುಳು, ಮೂತ್ರಾಶಯ ಮತ್ತು ಪಿತ್ತಾಶಯ. ಇವು ಯಾವುದೇ ವಸ್ತುವನ್ನು ಸಂಗ್ರಹಿಸಿದೇ ಎಲ್ಲವನ್ನು ವಿಸರ್ಜಿಸುತ್ತವೆ. ಈ ಒಂದೊಂದು ಅಂಗಕ್ಕೂ ಒಂದೊಂದು ಗ್ರಹ, ಒಂದೊಂದು ಬಣ್ಣ, ಒಂದೊಂದು ವಾಸನೆ, ಒಂದೊಂದು ರುಚಿಗಳಿರುತ್ತವೆ.

ಇಡೀ ದೇಹವು 365 ಮೂಳೆಗಳು ಹಾಗೂ 365 ಕೀಲುಗಳಿಂದ ರಚನೆಯಾಗಿದೆ ಎಂದು ಅವರ ತಿಳಿವಳಿಕೆ. ಚೀನೀ ವೈದ್ಯಕೀಯದಲ್ಲಿ ಅದರದ್ದೇ ಆದ ಅಂಗಕ್ರಿಯಾ ವಿಜ್ಞಾನವೂ (ಫಿಸಿಯಾಲಜಿ) ಇದೆ. ರಕ್ತನಾಳಗಳಲ್ಲಿ ರಕ್ತ ಮತ್ತು ಗಾಳಿಯು ಹರಿಯುತ್ತದೆ. ಎಷ್ಟು ರಕ್ತ ಹರಿಯಬೇಕು, ಎಷ್ಟು ಗಾಳಿಯು ಅದರಲ್ಲಿ ಬೆರೆತಿರಬೇಕು ಎನ್ನುವುದನ್ನು ಯಿನ್-ಯಾಂಗ್‌ಗಳು ನಿರ್ಧರಿಸುತ್ತವೆ. ಈ ಎರಡು ಪ್ರಾಕೃತಿಕ ಶಕ್ತಿಗಳು ೧೨ ವಾಹಿನಿಗಳಲ್ಲಿ ಚಲಿಸುತ್ತ, ರಕ್ತಪ್ರವಾಹವನ್ನು ಹಾಗೂ ನಾಡಿಯನ್ನು ನಿಯಂತ್ರಿಸುತ್ತವೆ.

ಹ್ವಾಂಗ್‌ಡಿ ನೀಜಿಂಗ್ ನೀಡುವ ವಿವರಣೆಯ ಅನ್ವಯ, ಮನುಷ್ಯನ ಶರೀರದಲ್ಲಿ ರಕ್ತಪ್ರವಾಹವು ನಿರಂತರವಾಗಿ ಹರಿಯುತ್ತದೆ. ಅದಕ್ಕೆ ಆದಿಯೂ ಇಲ್ಲ, ಅಂತ್ಯವು ಇಲ್ಲ. ಅದು ವೃತ್ತಾಕಾರದಲ್ಲಿ ಚಲಿಸುತ್ತದೆ. ಅಂದರೆ ವಿಲಿಯಂ ಹಾರ್ವೆ ರಕ್ತ ಪರಿಚಲನೆ ಯನ್ನು ಕಂಡು ಹಿಡಿಯುವುದಕ್ಕೆ ಮೊದಲೇ ಚೀನೀಯರಿಗೆ ರಕ್ತಪರಿಚಲನೆಯ ಬಗ್ಗೆ ಸ್ಥೂಲ ಪರಿಕಲ್ಪನೆಯು ಇತ್ತು ಎನ್ನ ಬಹುದು. ಆದರೆ ರೋಗವಿಜ್ಞಾನದಲ್ಲಿ (ಪೆಥಾಲಜಿ) ರೋಗಗಳ ವರ್ಗೀಕರಣವು ಯಿನ್-ಯಾಂಗ್ ತತ್ತ್ವಗಳನ್ನು ಆಧರಿಸಿರುವ ಕಾರಣ, ಅವರ ರೋಗಗಳ ವರ್ಗೀಕರಣದಲ್ಲಿ ವೈಜ್ಞಾನಿಕ ಅಂಶಗಳಿಲ್ಲ ಎನ್ನಬಹುದು.

ಪ್ರಾಚೀನ ಚೀನೀಯರು ರೋಗನಿದಾನವನ್ನು (ಡಯಾಗ್ನೋಸಿಸ್) ಮಾಡುವ ಮೊದಲು ರೋಗಿಯ ರೋಗಚರಿತ್ರೆ ಹಾಗೂ ಶರೀರ ಪರೀಕ್ಷೆಗೆ ಆದ್ಯತೆ ನೀಡುತ್ತಿದ್ದರು. ರೋಗ ಲಕ್ಷಣಗಳ ಬಗ್ಗೆ ವಿಚಾರಿಸುತ್ತ ರೋಗಿಯ ಬಾಯಿ ರುಚಿ, ರೋಗಿಯ ವಾಸನೆಯ
ಗುಣ ಮಟ್ಟ, ರೋಗಿಗೆ ಬೀಳುವ ಕನಸುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ರೋಗಿಯ ಮುಖ ಬಣ್ಣ, ಸೋತಿರುವಿಕೆ, ಪೇಲವ ವಾಗಿರುವಿಕೆ ಇತ್ಯಾದಿಗಳ ಜತೆಯಲ್ಲಿ ನಾಲಗೆಯ ಗುಣಲಕ್ಷಣಗಳನ್ನು ಗಮನಿಸುತ್ತಿದ್ದರು. ರೋಗಿಯ ಧ್ವನಿಯ ಗುಣಮಟ್ಟ ದಲ್ಲಿರುವ ಆಗಿರುವ ಬದಲಾವಣೆಗಳನ್ನು ಪರಿಗಣಿಸುತ್ತಿದ್ದರು. ಈ ಎಲ್ಲ ಪರೀಕ್ಷೆಗಳಲ್ಲಿ ನಾಡಿ ಪರೀಕ್ಷೆಯು ಮುಖ್ಯವಾಗಿರುತ್ತಿತ್ತು. ವಾಂಗ್ ಷಿ (ಕ್ರಿ.ಪೂ. 265- 316) ಎನ್ನುವ ವೈದ್ಯನು ಶ್ರೇಷ್ಠ ನಾಡಿ ಗ್ರಂಥವನ್ನು (ಪಲ್ಸ್ ಕ್ಲಾಸಿಕ್) ರಚಿಸಿದ. ಈತನ ಗ್ರಂಥದ ಮೇಲೆ ಹಲವು ಭಾಷ್ಯಗಳು ರಚನೆಯಾಗಿವೆ. ಶರೀರದ ಹಲವು ಭಾಗಗಳಲ್ಲಿ ನಾಡಿಯನ್ನು ನೋಡುತ್ತಿದ್ದರು.

ಒಂದೇ ದಿನದ ಬೇರೆ ಬೇರೆ ಕಾಲದಲ್ಲಿ ನಾಡಿ ಪರೀಕ್ಷಿಸಿ, ಹೋಲಿಸುತ್ತಿದ್ದರು. ನಾಡಿ ಪರೀಕ್ಷಿಸುವಾಗ, ರಕ್ತನಾಳದ ಮೇಲೆ ನಾನಾ ಪ್ರಮಾಣದ ಒತ್ತಡವನ್ನು ಹಾಕಿ, ಕಂಡುಬರಬಹುದಾದ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸುತ್ತಿದ್ದರು. ಈ ಸಮಗ್ರ ನಾಡಿ ಪರೀಕ್ಷೆಗೆ ಮೂರು ಗಂಟೆಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಆನಂತರವೇ ಚೀನೀ ವೈದ್ಯರು ರೋಗನಿದಾನವನ್ನು
ಮಾಡು ತ್ತಿದ್ದರು. ರೋಗಪ್ರಗತಿಯನ್ನು ಹಾಗೂ ರೋಗ ಮುನ್ನರಿವಿಗಾಗಿ (ಪ್ರೋಗ್ನೋಸಿಸ್) ಇದೇ ವಿಧಾನಗಳನ್ನು ಉಪಯೋಗಿಸು ತ್ತಿದ್ದರು. ವಿವಿಧ ಅಂಗಗಳ ಆರೋಗ್ಯ ಸ್ಥಿತಿ ಗತಿಗಳನ್ನು ಪರೀಕ್ಷಿಸಿ, ಯಾವಾಗ ಗುಣವಾಗಬಹುದು ಹಾಗೂ ರೋಗಿಗೆ ಸಾವು ಸಂಭವಿಸುವ ಸಾಧ್ಯತೆಯಿದ್ದರೆ, ಅದನ್ನು ಮುಂಚಿತವಾಗಿ ತಿಳಿಸುತ್ತಿದ್ದರು.

ಚೀನೀಯರ ಔಷಧ ವಿಜ್ಞಾನವು ಪ್ರಧಾನವಾಗಿ ಸಸ್ಯಜನ್ಯ, ಮಾನವಜನ್ಯ, ಪ್ರಾಣಿಜನ್ಯ ಹಾಗೂ ಖನಿಜಜನ್ಯ ವಸ್ತುಗಳನ್ನು ಚಿಕಿತ್ಸೆ ಯಲ್ಲಿ ಉಪಯೋಗಿಸುತ್ತಿತ್ತು. ಅವರಿಗೆ ಸುಮಾರು 1000 ಮೂಲಿಕೆಗಳ ಪರಿಚಯವಿತ್ತು. ಲಿ ಶಿಹ್ ಜ಼ೆನ್ (1518- 1593) ಬರೆದ ಬೆಂಕಾವೊ ಗ್ಯಾಂಗ್ಮು ಎಂಬುದು 52 ಸಂಪುಟಗ ಳ ಔಷಧ ವಿಜ್ಞಾನದ ಬೃಹತ್ ಗ್ರಂಥವಾಗಿತ್ತು. ಇದೊಂದು ಪ್ರಮಾಣ ಬದ್ಧ ಹಾಗೂ ಅಽಕೃತ ಗ್ರಂಥವಾದ ಕಾರಣ ಮತ್ತೆ ಮತ್ತೆ ಪುನರ್‌ಮುದ್ರಣವಾಗುತ್ತಿದೆ. ಸೂಕ್ತ ಔಷಧವನ್ನು ನೀಡುವ ಮೊದಲು ರೋಗಿಯ ಯಿನ್-ಯಾಂಗ್, ಪಂಚಭೂತಗಳು, ಪಂಚ ಗ್ರಹಗಳು, ಪಂಚವರ್ಣಗಳು ಇತ್ಯಾದಿಗಳ ಮೌಲ್ಯಮಾಪನವನ್ನು ಮಾಡುತ್ತಿದ್ದರು. ಹಾಗಾಗಿ ಇದೊಂದು ಸಂಕೀರ್ಣ ಚಿಕಿತ್ಸಾ ಪದ್ಧತಿಯೆನ್ನಬಹುದು.

ಸಾಂಪ್ರದಾಯಿಕ ಚೀನೀ ವೈದ್ಯಕೀಯದಿಂದ ಆಧುನಿಕ ವೈದ್ಯಕೀಯವು ಹಲವು ಮೂಲಿಕೆಗಳನ್ನು ಎರವು ಪಡೆದಿದೆ. ಅವುಗಳಲ್ಲಿ ರುಬಾರ್ಬ್ ಎನ್ನುವ ಭೇದಿಯ ಮೂಲಿಕೆ, ಹರಳೆಣ್ಣೆ, ರಂಗೋಲೆ, ವತ್ಸನಾಭಿ, ಗಾಂಜಾ ಮುಖ್ಯವಾದವು. ರಕ್ತಹೀನತೆಯನ್ನು ನಿವಾರಿಸಲು ಕಬ್ಬಿಣಂಶವನ್ನು ಬಳಸುತ್ತಿದ್ದರು. ಚಾಲಮೂಗ್ರ ಎಣ್ಣೆಯನ್ನು ಬಳಸಿ ಕುಷ್ಠವನ್ನು ನಿವಾರಿಸಲು ಕಲಿತರು. ಮಹುವಾಂಗ್ (ಎಫಿಡ್ರ) ಬಳಸಿ ಅಸ್ತಮವನ್ನು ನಿಯಂತ್ರಿಸಿದರು.

ಸರ್ಪಗಂಧಿಯನ್ನು ಬಳಸಿ ರಕ್ತದ ಏರೊತ್ತಡವನ್ನು ನಿಗ್ರಹಿಸಿದರು. ಪಾಶ್ಚಾತ್ಯ ಜಗತ್ತಿನಲ್ಲಿ ಜಿನ್ಸೆಂಗ್ ಎನ್ನುವ ಮೂಲಿಕೆಯು ಆಧುನಿಕ ಸಂಜೀವಿನಿಯಂಬಂತೆ ದೊಡ್ಡ ಮಟ್ಟದ ಪ್ರಚಾರಕ್ಕೆ ಒಳಗಾಯಿತು. ಆದರೆ ಅದು ಪ್ರಮಾಣ ಬದ್ಧ ಪರೀಕ್ಷೆಗಳಲ್ಲಿ ಸೋತಿತು. ಜಲಚಿಕಿತ್ಸೆ (ಹೈಡ್ರೋಥೆರಪಿ) ಸುಡುಚಿಕಿತ್ಸೆ (ಮೋಕ್ಸಿಬಿಷನ್) ಹಾಗೂ ಸೂಜಿಚಿಕಿತ್ಸೆ (ಆಕ್ಯುಪಂಕ್ಚರ್)ಗಳು ಚೀನೀ ಚಿಕಿತ್ಸಾ ವೈದ್ಯಕೀಯ ಇತರ ಮುಖ್ಯ ವಿಧಾನಗಳು. ಇವನ್ನು ಪ್ರತ್ಯೇಕವಾಗಿಯೇ ತಿಳಿಯುವುದೊಳಿತು.