ವಿಶ್ವ ವಿಹಾರ
ಮಾರುತೀಶ್ ಅಗ್ರಾರ
ಸರಕಾರ ನಡೆಸುವವರು ಜನರ ಕೆಂಗಣ್ಣಿಗೆ ಗುರಿಯಾದರೆ ಜನರ ಪ್ರತಿಕ್ರಿಯೆ ಯಾವ ರೀತಿ ರಗಡ್ ಆಗಿ ಇರುತ್ತದೆ ಎಂಬುದಕ್ಕೆ ಲಂಕನ್ನರು ತಮ್ಮ ಅಧ್ಯಕ್ಷರ ನಿವಾಸವನ್ನು ಕಬ್ಜಾ ಮಾಡಿಕೊಂಡ ಘಟನೆಯೇ ಸಾಕ್ಷಿ. ಜನರ ಸಹನೆಗೂ ಒಂದು ಮಿತಿ ಇರುತ್ತದೆ. ಅದು ಎಲ್ಲೆ ಮೀರಿದರೆ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಕಳೆದ ಮೂರು-ನಾಲ್ಕು ತಿಂಗಳು ಗಳಿಂದ ಲಂಕಾದಲ್ಲಿ ನಡೆಯುತ್ತಿರುವ ಘಟನಾವಳಿಗಳೇ ಉದಾಹರಣೆ.
ಸದಾ ಹೈ ಸೆಕ್ಯೂರಿಟಿಯಿಂದ ಕೂಡಿರುತ್ತಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ ನಿವಾಸ ಈಗ ಅಕ್ಷರಶಃ ನಮ್ಮ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಂತಾಗಿದೆ! ಪ್ರಧಾನಿ ರನಿಲ್ ವಿಕ್ರಮ ಸಿಂಘೆ ನಿವಾಸಕ್ಕೆ ಅಲ್ಲಿನ ಜನ ಬೆಂಕಿ ಇಟ್ಟಿದ್ದಾರೆ! ಲಂಕನ್ನರು ತಮ್ಮ ರಾಜಕಾರಣಿ ಗಳನ್ನು ಕಂಡ ಕಂಡಲ್ಲಿ ಥಳಿಸುತ್ತಿzರೆ! ದೇಶವನ್ನು ಈ ದುಃಸ್ಥಿತಿಗೆ ತಂದ ಜನಪ್ರತಿನಿಧಿಗಳ ಮೇಲೆ ಅಲ್ಲಿನ ಜನ ಅಕ್ಷರಶಃ ತಿರುಗಿ ಬಿದ್ದಿದ್ದಾರೆ. ಅದರಲ್ಲೂ ರಾಜಪಕ್ಸ ಕುಟುಂಬ ರಾಜಕಾರಣಕ್ಕೆ ಲಂಕಾ ಜನರು ಹೈರಾಣಾಗಿ ಹೋಗಿದ್ದಾರೆ.
ಲಂಕಾ ರಾಜಕಾರಣದಲ್ಲಿ ರಾಜಪಕ್ಸೆ ಕುಟುಂಬ ಯಾವ ರೀತಿ ತೊಡಗಿಕೊಂಡಿತ್ತೆಂದರೆ ಕುಟುಂಬದ ಸುಮಾರು ೪೦ಕ್ಕು ಹೆಚ್ಚು ಜನರು ಲಂಕಾ ಸರಕಾರದ ಭಾಗವಾಗಿದ್ದರು! ಇವರೆಲ್ಲರೂ ಸೇರಿ ಲಂಕಾವನ್ನ ಆರ್ಥಿಕ ದಿವಾಳಿಯ ಅಂಚಿಗೆ ಕೊಂಡೊಯ್ದಿದ್ದಾರೆ ಎನ್ನುವುದು ಲಂಕಾ ಮಂದಿಯ ಆರೋಪ. ಒಂದು ಲೆಕ್ಕದ ಪ್ರಕಾರ ರಾಜಪಕ್ಸ್ ಕುಟುಂಬದ ಮೇಲೆ ೫.೩ ಬಿಲಿಯನ್ ಡಾಲರ್‌ನಷ್ಟು ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಜತೆಗೆ ವಿಪರೀತ ವಿದೇಶಿ ಸಾಲದ ಸುಳಿಗೆ ಸಿಲುಕಿದ ಪರಿಣಾಮ ಲಂಕಾ ಇಂದು ದಿವಾಳಿ ಎದ್ದಿದೆ.
ಶ್ರೀಲಂಕಾದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ತರಕಾರಿ, ಹಾಲಿನಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆಯೂ ಐದಾರು ಪಟ್ಟು ಜಾಸ್ತಿಯಾಗಿದೆ. ಪೆಟ್ರೋಲ್ ಲೀಟರ್‌ಗೆ ಮುನ್ನೂರರ ಗಡಿ ದಾಟಿದೆ. ಹಾಗಾಗಿ ಪೆಟ್ರೋಲ್ ಬಂಕ್‌ಗಳಿಗೆ ಸೇನಾ ಭದ್ರತೆ ಒದಗಿಸಲಾಗಿದೆ. ಅನೇಕ ಬಂಕ್ ಗಳು ಇಂಧನ ಪೂರೈಸಲಾಗದೇ ಬಾಗಿಲು ಮುಚ್ಚಿವೆ. ಕಾಗದದ ಕೊರತೆಯಿಂದ ಪರೀಕ್ಷೆಗಳನ್ನು ಈಗಾಗಲೇ ಮುಂದೂಡ ಲಾಗಿದೆ ಹಾಗೂ ಪತ್ರಿಕಾ ಮುದ್ರಣವನ್ನು ಸಹ ಎರಡು ತಿಂಗಳ ಹಿಂದೆಯೇ ನಿಲ್ಲಿಸಲಾಗಿದೆ.
ವಿದ್ಯುತ್ ಸರಬರಾಜಿನಲ್ಲಿ ಏರುಪೇರು ಉಂಟಾಗುತ್ತಿದೆ. ಲಂಕಾದಲ್ಲಿ ಆರು ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಆಸ್ಪತ್ರೆಗಳು ಸಹ ನಾನಾ ಕಾರಣ ಗಳಿಂದ ಶಸಚಿಕಿತ್ಸೆಯಂಥ ವಿಭಾಗಗಳ ಕಾರ್ಯ ಚಟುವಟಿಕೆ ಗಳನ್ನು ನಿಲ್ಲಿಸಿ ತಿಂಗಳುಗಳೇ ಕಳೆದಿವೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದರಿತ ಮಹಿಂದಾ ರಾಜ ಪಕ್ಸ್ ಮೂರು ತಿಂಗಳ ಹಿಂದೆಯೇ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಗೀಚಿ ಹೊರ ಬಂದು ನಾಪತ್ತೆಯಾಗಿದ್ದಾರೆ.
ಅಷ್ಟಕ್ಕೂ ಶ್ರೀಲಂಕಾದ ಇವತ್ತಿನ ಈ ದುಃಸ್ಥಿತಿಗೆ ಕಾರಣವೇನು ಎಂದರೆ ಅದರ ಆರ್ಥಿಕ ತುರ್ತು ಬಿಕ್ಕಟ್ಟು. ಇದಕ್ಕೆ ಮೂಲ ಕಾರಣ ಶ್ರೀಲಂಕಾವು ಚೀನಾ, ಜಪಾನ್ ಸೇರಿದಂತೆ ಅನೇಕ ವಿದೇಶಿ ಮೂಲಗಳಿಂದ ದೊಡ್ಡ ಪ್ರಮಾಣದ ಹಣವನ್ನು ಸಾಲವಾಗಿ ಪಡೆದು ಈಗ ಬರಿಗೈ ಮಾಡಿಕೊಂಡು ಬೆತ್ತಲೆಯಾಗಿ ನಿಂತಿದೆ. ಒಂದು ಅಂದಾಜಿನ ಪ್ರಕಾರ ಲಂಕಾದ ಹಣ ದುಬ್ಬರ ಪ್ರಮಾಣ ಶೇ.೧೭.೫ಕ್ಕೆ ಏರಿಕೆಯಾಗಿದೆ ಎನ್ನುವ ಮಾಹಿತಿಗಳು ಕೇಳಿಬರುತ್ತಿವೆ. ಅಂದಹಾಗೆ ಲಂಕಾ ಮಾಡಿದ ಮತ್ತೊಂದು ಮಹಾ ತಪ್ಪು ಏನೆಂದರೆ ತಾನು ಸ್ವಾವಲಂಬಿಯಾಗದೆ ಪ್ರತಿಯೊಂದಕ್ಕೂ ಚೀನಾವನ್ನು ಅತಿಯಾಗಿ ಓಲೈಸಿದ್ದು.
ವಿದೇಶಿ ಸಾಲದ ರೂಪದಲ್ಲಿ ಕೇವಲ ಚೀನಾ ಒಂದರಿಂದಲೇ ಸುಮಾರು ೫ ಶತಕೋಟಿಯಷ್ಟು ಸಾಲವನ್ನು ಲಂಕಾ ಪಡೆದಿದೆ. ಇದು ಲಂಕಾಗೆ ಬಿದ್ದ ಬಹುದೊಡ್ಡ ಹೊಡೆತ. ಲಂಕಾ ಮೊದ ಮೊದಲು ಭಾರತದ ಸ್ನೇಹ ಬೆಳೆಸಿ ಭಾರತಕ್ಕೆ ನಿಷ್ಠೆ ತೋರುತ್ತ, ಭಾರತದ ಸಹಭಾಗಿತ್ವದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ತನ್ನ ನೆಲದಲ್ಲಿ ಮಾಡಿತ್ತಾದರೂ ೨೦೧೦ರ ನಂತರ ತನ್ನ ದ್ವಿಪಕ್ಷೀಯ ನೀತಿಗಳಲ್ಲಿ ಬದಲಾವಣೆ ತಂದು ದಿನಕಳೆದಂತೆ ಭಾರತದಿಂದ ಅಂತರ ಕಾಯ್ದುಕೊಂಡಿತು.
ಆಗ ಹತ್ತಿರವಾಗಿದ್ದೇ ಚೀನಾ. ಚೀನಾ ಲಂಕಾಗೆ ಹತ್ತಿರವಾಗುತ್ತಿದ್ದಂತೆ ಕೊಲಂಬೋ ಬಂದರಿನಲ್ಲಿ ಭಾರತ ಮತ್ತು ಚೀನಾ ಸಹಯೋಗದಲ್ಲಿ ನಿರ್ಮಿಸಲು ಯೋಜಿಸಿದ್ದ ಮಹತ್ವಾಕಾಂಕ್ಷಿ ಯೋಜನೆ ‘ಇಸಿಟಿ(ಈಸ್ಟ್ ಕಂಟೇನರ್ ಟರ್ಮಿನಲ) ಪ್ರಾಜೆಕ್ಟ್ ನಿಂದ ಲಂಕಾ ಹಿಂದೆ ಸರಿದದ್ದಲ್ಲದೇ ಭಾರತ ಇಸಿಟಿ ಪ್ರಾಜೆಕ್ಟ್‌ಗೆ ಕೊಟ್ಟಿದ್ದ ೪೦೦ ಮಿಲಿಯನ್ ಡಾಲರ್ ಸಾಲವನ್ನು ಕೂಡ ಹಿಂದಿರುಗಿಸಿತು. ಇದರ ಹಿಂದೆ ಚೀನಾದ ಕೈವಾಡ ಇದ್ದದ್ದು ರಹಸ್ಯವೇನಲ್ಲ. ಜತೆಗೆ ಶ್ರೀಲಂಕಾ, ಭಾರತ ಮತ್ತು ಜಪಾನ್ ಜತೆಗೆ ಮಾಡಿಕೊಂಡ ಒಪ್ಪಂದಗಳಿಂದ ಹಿಂದೆ ಸರಿಯುವಂತೆಯೂ ಲಂಕಾ ಸರಕಾರದ ಮೇಲೆ ಒತ್ತಡ ಹೇರುತ್ತಾ ಬಂತು ಚೀನಾ.
ಈಗ ಲಂಕಾ ಎ ಕೆಲಸಕ್ಕೂ ಚೀನಾವನ್ನೇ ನೆಚ್ಚಿಕೊಂಡಿದೆ. ಹಣಕಾಸು, ರಕ್ಷಣೆ, ವಿದೇಶಿ ಮಿನಿಮಯ, ಅಭಿವೃದ್ಧಿ, ರಾಜತಾಂತ್ರಿಕ ಸಹಾಯ ಈ ಎಲ್ಲಾ ಕೆಲಸಗಳಿಗೂ ಚೀನಾವನ್ನೇ ಅವಲಂಬಿಸಿದೆ. ಇಷ್ಟೊತ್ತಿಗಾಗಲೇ ಲಂಕಾ ಚೀನಾದ ಬಳಿ ಲಕ್ಷಾಂತರ ಡಾಲರ್‌ನಷ್ಟು ಸಾಲವನ್ನು ಪಡೆದು ಅದರ ಗುಲಾಮನಾಗಿತ್ತು. ಹಾಗಾಗಿ ಚೀನಾ ಏನು ಹೇಳುತ್ತದೋ ಅದನ್ನು ಕಣ್ಮುಚ್ಚಿಕೊಂಡು ಕೇಳುವ ಅನಿವಾರ್ಯ ಪರಿಸ್ಥಿತಿಗೆ
ಲಂಕಾ ತಲುಪಿತು. ಇದಾದ ಕೆಲ ವರ್ಷಗಳ ನಂತರ ಚೀನಾ ಸಾಲವನ್ನು ಮರುಪಾವತಿಸುವಂತೆ ಒತ್ತಡ ಹೇರಲು ಮುಂದಾಯಿತು. ಆದರೆ ಲಂಕಾಗೆ ಅದು ಸಾಧ್ಯವಿರಲಿಲ್ಲ. ಚೀನಾದ ಮರುಪಾವತಿ ಒತ್ತಡ ಜಾಸ್ತಿಯಾದಾಗ ಲಂಕಾ ೨೦೧೭ರಲ್ಲಿ ಹಂಬನ್ ತೋಟಾ ಎಂಬ ಬಂದರನ್ನೇ ೯೯ವರ್ಷಗಳ ಗುತ್ತಿಗೆಗೆ ಚೀನಾಕ್ಕೆ ನೀಡಿತು.
ಒಂದು ಕಡೆ ಚೀನಾ, ಲಂಕಾವನ್ನು ಕಬ್ಜಾ ಮಾಡಿಕೊಳ್ಳಲು ಸಂಚು ರೂಪಿಸುತ್ತಿದ್ದರೂ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಲಂಕಾ ವಿಫಲ ವಾಯಿತು. ಆದರೂ ಲಂಕಾ ಸರಕಾರ ಚೀನಾ ಮತ್ತು ತಮ್ಮ ಸ್ನೇಹ, ನಂಬಿಕೆಯ ಪ್ರತೀಕವಾಗಿ ಕಮ್ಯುನಿಸ್ಟ್ ಪಾರ್ಟಿಯ ನೂರನೇ ವರ್ಷಾಚರಣೆಯ ನಿಮಿತ್ತ ಕಳೆದ ವರ್ಷ ಸಾವಿರ ರೂಪಾಯಿಯ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡಿ ಸ್ವಾಮಿ ನಿಷ್ಠೆ ತೋರಿತ್ತು. ಈ ವೇಳೆಗೆ ಲಂಕಾದ ಮೇಲೆ ಚೀನಾ ಸಂಪೂರ್ಣ ಹಿಡಿತ ಸಾಧಿಸಿತ್ತು.
ದುರ್ದೈವವೆಂದರೆ ಅಭಿವೃದ್ಧಿ ನೆಪದೊಂದಿಗೆ ಲಕ್ಷಾಂತರ ಕೋಟಿಗಳನ್ನು ಚೀನಾದಿಂದ ಸಾಲವಾಗಿ ಪಡೆದ ಲಂಕಾ ಸರಕಾರ ಅದನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ನೋಡ ನೋಡುತ್ತಿದ್ದಂತೆ ವಿದೇಶಿ ಸಾಲದ ಹೊರೆ ಲಂಕಾವನ್ನು ಸುತ್ತುವರಿಯಿತು.
ದುರ್ದೈವವೆಂದರೆ ೨೦೧೯ರಲ್ಲಿ ಲಂಕಾದಲ್ಲಿ ನಡೆದ ಈಸ್ಟರ್ ಬಾಂಬ್ ದಾಳಿಯಲ್ಲಿ ೨೬೦ ಮಂದಿ ಮೃತಪಟ್ಟ ಬಳಿಕ ದ್ವೀಪರಾಷ್ಟ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿಯಿತು. ಈ ಮಧ್ಯೆ ಕರೋನಾ ಸಾಂಕ್ರಾಮಿಕದಿಂದಾಗಿ ಕಳೆದ ಎರಡು-ಮೂರು ವರ್ಷಗಳಿಂದ ಲಂಕಾದ ಆದಾಯ ಗಣನೀಯವಾಗಿ ಕುಸಿದಿದೆ. ಅದರ ಬಹುಪಾಲು ಆದಾಯ ಬರುವುದೇ ಪ್ರವಾಸೋದ್ಯಮದಿಂದ.
ಅದನ್ನು ಕೊರೊನಾ ಎಂಬ ಮಹಾಮಾರಿ ನುಂಗಿ ಬಿಟ್ಟಿತು. ಇನ್ನು ಕಳೆದ ಕೆಲ ವರ್ಷಗಳಿಂದ ಲಂಕಾದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯೂ ಇಳಿಕೆಯಾಗಿದೆ. ಕೃಷಿ ನೀತಿಯ ವಿಫಲತೆಗಳು, ದೂರದೃಷ್ಟಿ ಇರದ ಯೋಜನೆಗಳು, ಅಗತ್ಯ ಆಹಾರ ವಸ್ತುಗಳ ಉತ್ಪಾದನೆಯಲ್ಲಿ ಎಡವಿದ್ದು ಈ ಎಲ್ಲ ಕಾರಣಗಳಿಂದಾಗಿ ಲಂಕಾ ಇಂದು ಇಂತಹ ದುಸ್ಥಿತಿಗೆ ಬಂದು ನಿಂತಿದೆ. ಈಗಾಗಲೇ ಲಂಕಾ ವಿದೇಶಿ
ಸಾಲ ೫೧ ಶತಕೋಟಿ ಡಾಲರ್ ಅನ್ನು ಮರುಪಾವತಿಸುವುದಕ್ಕೆ ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಷೋಷಿಸಿದೆ.
ಇದರ ಬೆನ್ನ ಆ ದೇಶದ ಆರ್ಥಿಕತೆಯ ರೇಟಿಂಗ್ಸ್ ಕೂಡ ಇಳಿದಿದೆ. ಭಾರತ ಹೊರತು ಪಡಿಸಿ ಬೇರೆ ಯಾರೂ ಲಂಕಾ ಕಡೆಗೆ ನೋಡುತ್ತಿಲ್ಲ. ಅದರಲ್ಲೂ ಚೀನಾ, ಶ್ರೀಲಂಕಾ ದಿವಾಳಿಯಾಗುವುದನ್ನೇ ಆಸೆಗಣ್ಣುಗಳಿಂದ ನೋಡುತ್ತಿದೆ. ಚೀನಾಕ್ಕೆ ಲಂಕಾ ಬರೋಬ್ಬರಿ ೮ ಬಿಲಿಯನ್ ಡಾಲರ್ ಸಾಲ ಪಾವತಿಸಬೇಕಿದ್ದು ಮರುಪಾವತಿಯಲ್ಲಿ ಯಾವುದೇ ವಿನಾಯಿತಿ ನೀಡಲು ಚೀನಾ ನಿರಾಕರಿಸಿದೆ. ಆದರೆ, ಆರ್ಥಿಕ ಅಧಃಪತನದತ್ತ ಸಾಗುತ್ತಿರುವ ಲಂಕಾಗೆ ಭಾರತ ನೆರವಿನ ಅಭಯ ನೀಡಿದೆ. ಪ್ರಸಕ್ತ ವರ್ಷದಲ್ಲಿ ೩.೮ ಶತಕೋಟಿ ಡಾಲರ್ ನೆರವನ್ನು ಭಾರತ ನೀಡಿದೆ.
ಮಾತ್ರವಲ್ಲ, ಸಾವಿರಾರು ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ರೈತರ ನೆರವಿಗಾಗಿ ಕಳುಹಿಸಿದೆ ಎನ್ನುವ ಮಾತುಗಳು ಕೇಳಿಬಂದಿದೆ. ವಿಪರ್ಯಾಸವೆಂದರೆ ಕಳೆದ ಎರಡು ತಿಂಗಳ ಹಿಂದೆ ಅಲ್ಲಿನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಪಲಿತಾ ಕೊಹೊನಾ ಬೀಜಿಂಗ್ ಗೆ ತೆರಳಿ, ‘ನಮಗೆ ಚೀನಾದ ಮೇಲೆ ವಿಪರೀತ ಭರವಸೆ ಹಾಗೂ ನಂಬಿಕೆ ಇದೆ. ಲಂಕಾದ ಇಂದಿನ ಸಂಕಷ್ಟಮಯ ಸಂದರ್ಭದಲ್ಲಿ ನೂರು ಕೋಟಿ ಡಾಲರ್ ಸಾಲವೂ ಸೇರಿದಂತೆ ದೊಡ್ಡ ಪ್ರಮಾಣದ ಸಾಲದ ನೆರವನ್ನು ಚೀನಾ ನೀಡುವ ವಿಶ್ವಾಸವಿದೆ’ ಎಂದಿದ್ದರು.
ಆದರೆ ಈ ಕುರಿತಂತೆ ಚೀನಾ ಇದುವರೆಗೂ ತುಟಿ ಬಿಚ್ಚಿಲ್ಲ. ಹೋಗಲಿ, ಲಂಕನ್ನರಿಗೆ ಭರವಸೆ ಹುಟ್ಟಿಸುವ ಒಂದು ಮಾತನ್ನು ಆಡಿಲ್ಲ. ಒಟ್ಟಿ ನಲ್ಲಿ ವಿದೇಶಿ ಸಾಲದ ಹೊರೆ, ಕಂಗೆಟ್ಟ ಪ್ರವಾಸೋದ್ಯಮ, ವಿದೇಶಿ ವಿನಿಮಯ ಸಂಗ್ರಹ ಕುಸಿತ, ಕೈಕೊಟ್ಟ ಕೃಷಿ ಪದ್ಧತಿ, ಆಹಾರ ಸಾಮಗ್ರಿ ಅಭಾವ, ಪೆಟ್ರೋಲಿಯಂ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಲಂಕಾ ಶತಮಾನದಷ್ಟು ಹಿಂದಕ್ಕೆ ಹೋಗಿದೆ. ಈ ಎಲ್ಲ ಕಾರಣಗಳಿಂದಾಗಿ ಕುಪಿತಗೊಂಡಿರುವ ಲಂಕನ್ನರು ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಪರಿಣಾಮ ಲಂಕಾ ಹೊತ್ತಿ ಉರಿಯುತ್ತಿದೆ. ಹೀಗಾಗಿ ಕಾದ ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಿದೆ. ಅದನ್ನು ದ್ವೀಪ ರಾಷ್ಟ್ರ ಹೇಗೆ ಎದುರಿಸಿ ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕು.