Saturday, 27th July 2024

ಪ್ರಾಚೀನ ಚೀನೀ ಸಾಂಪ್ರದಾಯಿಕ ಸೂಜಿ ಚಿಕಿತ್ಸೆ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಸೂಜಿಚಿಕಿತ್ಸೆ ಅಥವಾ ಆಕ್ಯುಪಂಕ್ಚರ್ ಪ್ರಾಚೀನ ಚೀನಾದಲ್ಲಿ ಹುಟ್ಟಿದ ಒಂದು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ. ನಮ್ಮ ಶರೀರದ ನಿರ್ದಿಷ್ಟ ಭಾಗಗಳಲ್ಲಿ ಸೂಜಿಯನ್ನು ಚುಚ್ಚುವುದರ ಮೂಲಕ ನೋವನ್ನು ತಡೆಗಟ್ಟುವುದು ಈ ಚಿಕಿತ್ಸೆಯ ಮೂಲ ಉದ್ದೇಶ. ಹಲವು ರೀತಿಯ ಕಾಯಿಲೆಗಳನ್ನೂ ಗುಣಪಡಿಸಬಹುದು ಎನ್ನುವ ನಂಬಿಕೆಯಿದೆ.

ಒತ್ತಡ (ಸ್ಟ್ರೆಸ್) ನಿಯಂತ್ರಣಕ್ಕೆ ಹಾಗೂ ಸಮಗ್ರ ಆರೋಗ್ಯ ಸುಧಾರಣೆಗೆ ಆಕ್ಯು ಪಂಕ್ಚರ್ ಉಪಯುಕ್ತ ಎನ್ನುವ ಎನ್ನಲಾಗಿದೆ. ಆಕ್ಯು ಪಂಕ್ಚರ್ ಕೆಲವು ಪರಿಕಲ್ಪನೆಗಳನ್ನು ಆಧರಿಸಿದೆ. ಮನುಷ್ಯ ಬ್ರಹ್ಮಾಂಡದ ಸ್ಥೂಲ ರೂಪ. ಇದರಲ್ಲಿ ‘ಷೀ’ ಎನ್ನುವ ಜೈವಿಕ ಶಕ್ತಿಯಿದೆ. ಈ ಜೈವಿಕ ಶಕ್ತಿಯು ವಿಶ್ವವ್ಯಾಪಿ. ಷೀ ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಹಾಗೂ ನಾಶ ಮಾಡಲೂ ಸಾಧ್ಯವಿಲ್ಲ. ಆದರೆ, ಇದು ತನ್ನ ಸ್ವರೂಪವನ್ನು ಮಾತ್ರ ಬದಲಿಸಬಲ್ಲುದು.

ಷೀ ಜಾಗತಿಕ ಶಕ್ತಿಯು ಎರಡು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಯಿನ್ ಮತ್ತು ಯಾಂಗ್. ಯಾಂಗ್ ಎನ್ನುವುದು ಪುರುಷ ತತ್ತ್ವ. ಇದು ಉಜ್ವಲವಾದದ್ದು. ಹಾಗಾಗಿ ಇದು ಸದಾ ಸಕ್ರಿಯ ಹಾಗೂ ಜಂಗಮ. ಇದು ಸ್ವರ್ಗವನ್ನು ಪ್ರತಿನಿಧಿಸುತ್ತದೆ. ಯಿನ್ ಎನ್ನುವುದು ಸೀ ತತ್ತ್ವ. ಇದು ಕಪ್ಪು ಬಣ್ಣದ್ದು. ಸದಾ ಜಡತೆಯು ಮೈವೆತ್ತಿರುವ ಕಾರಣ ಸ್ಥಾವರ ರೂಪದಲ್ಲಿಯೇ ಇರುತ್ತದೆ. ಇದು ಭೂಮಿಯನ್ನು ಪ್ರತಿನಿಧಿಸುತ್ತದೆ. ಈ ಎರಡೂ ಶಕ್ತಿಗಳು ನಮ್ಮ ಶರೀರದಲ್ಲಿರುವ 12 ವಾಹಿನಿಗಳಲ್ಲಿ ಹರಿಯುತ್ತದೆ.

ನಮ್ಮ ಶರೀರದ ನಾಡಿಗಳನ್ನು ಹಾಗೂ ರಕ್ತಪ್ರವಾಹವನ್ನು ನಿಯಂತ್ರಿಸುತ್ತದೆ. ಈ ಎರಡೂ ಶಕ್ತಿಗಳ ನಡುವೆ ಸಮತೋಲನವಿದ್ದಾಗ, ಆರೋಗ್ಯವು ಲಭಿಸುತ್ತದೆ. ಸಮತೋಲನವಿಲ್ಲದಾಗ ಅನಾರೋಗ್ಯವುಂಟಾಗುತ್ತದೆ. ಶರೀರದಲ್ಲಿ ಸಮತೋಲನವನ್ನು ಸಾಧಿಸಲು ಸೂಜಿಚಿಕಿತ್ಸೆಯು ನೆರವಾಗುತ್ತವೆ. ಅದಕ್ಕಾಗಿ ಮನುಷ್ಯನ ಶರೀರದಲ್ಲಿ ಹರಿಯುವ 12 ವಾಹಿನಿಗಳ ಆಯಕಟ್ಟಿನ ಸ್ಥಳಗಳಲ್ಲಿರುವ 365 ಬಿಂದುಗಳಲ್ಲಿ ಸೂಜಿಯನ್ನು ಚುಚ್ಚಿ ‘ಯಿನ್-ಯಾಂಗ್ ’ಗಳ ಸಮತೋಲನ ಸ್ಥಾಪಿಸಲು ಸಾಧ್ಯವಿದೆ.

ಇದು ಸೂಜಿಚಿಕಿತ್ಸೆಯ ಹಿಂದೆ ಇರುವ ಪ್ರಮುಖ ಪರಿಕಲ್ಪನೆಗಳು. ಪ್ರಾಚೀನ ಚೀನೀ ವೈದ್ಯಕೀಯದ ಪರಿಕಲ್ಪನೆಗಳನ್ನು ಆಧುನಿಕ ವಿಜ್ಞಾ ನದ ಪರಿಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಷೀ, ಯಿನ್, ಯಾಂಗ್, 12 ವಾಹಿನಿಗಳು, 365 ಬಿಂದುಗಳು ಶರೀರದಲ್ಲಿ ಇವೆ ಎನ್ನುವು ದಕ್ಕೆ ಯಾವುದೆ ಪುರಾವೆಯು ದೊರೆತಿಲ್ಲ. ಆಧುನಿಕ ವಿಜ್ಞಾನವು ಬಯಸುವ ವಸ್ತು ನಿಷ್ಠ ಪುರಾವೆಗಳನ್ನು ಸೂಜಿಚಿಕಿತ್ಸೆಯ ತಜ್ಞರು ಒದಗಿ ಸಿಲ್ಲ.

ಕಾಕ್ರೇನ್ ವಿಮರ್ಶೆಯು (ಇದು 53 ಕ್ಷೇತ್ರಗಳಲ್ಲಿ ಪರಿಣತರಿರುವ 30000 ತಜ್ಞರ ಒಂದು ಸಂಸ್ಥೆ. ಈ ಸಂಸ್ಥೆಯ ಶಿಫಾರಸುಗಳೆಲ್ಲ ವೈಜ್ಞಾ ನಿಕ ಪುರಾವೆಗಳನ್ನು ಆಧರಿಸಿದೆ) ಸೂಜಿಚಿಕಿತ್ಸೆಯು ಪರಿಣಾಮಕಾರಿಯಲ್ಲ ಎನ್ನುತ್ತದೆ. ಸೂಜಿಚಿಕಿತ್ಸೆಯ ಪರಿಕಲ್ಪನೆಗಳನ್ನು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ನಿರೂಪಿಸಲು ಸಾಧ್ಯವಿಲ್ಲದ ಕಾರಣ, ಇದು ಒಂದು ಅವೈಜ್ಞಾನಿಕ ಚಿಕಿತ್ಸೆ ಎಂದು ಪರಿಗಣಿತ ವಾಗಿದೆ. ಈ ಹಿನ್ನೆಲೆ ಯಲ್ಲಿ ಆಕ್ಯುಪಂಕ್ಚರ್ ಚಿಕಿತ್ಸೆಯನ್ನು ಹುಸಿ ವೈದ್ಯಕೀಯಗಳ (ಸ್ಯೂಡೋ ಮೆಡಿಸಿನ್) ಪಟ್ಟಿಯಲ್ಲಿ ಸೇರಿಸಲಾಗಿದೆ.

ಆಕ್ಯುಪಂಕ್ಚರ್ ಪ್ರಧಾನವಾಗಿ ನಾನಾ ವಿಧದ ನೋವುಗಳನ್ನು ನಿಗ್ರಹಿಸುವ ಚಿಕಿತ್ಸೆ. ಆದರೂ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೀಡುವ ಕೀಮೋ ಥೆರಪಿಯಿಂದ ತಲೆದೋರುವ ವಾಕರಿಕೆ ಮತ್ತು ವಾಂತಿ, ಹಲ್ಲು ನೋವು, ತಲೆನೋವು, ಅರೆತಲೆನೋವು (ಮೈಗ್ರೇನ್ ಹೆಡ್ ಏಕ್) ಪ್ರಸವವೇದನೆ, ಕುತ್ತಿಗೆ ನೋವು, ಸೊಂಟನೋವು, ಕೀಲುನೋವು, ಋತುವೇದನೆ, ಅಲರ್ಜಿ ಇತ್ಯಾದಿ ಹಲವು ಅನಾರೋಗ್ಯಗಳಲ್ಲಿ ಉಪಯುಕ್ತ ಎನ್ನುವ ನಂಬಿಕೆಯಿದೆ.

ಸೂಜಿಚಿಕಿತ್ಸೆಯ ಮೂಲವು ಕ್ರಿ.ಪೂ.1ನೆಯ ಶತಮಾನದ ಚೀನಾ ದೇಶದಲ್ಲಿ ರಚನೆಯಾಗಿರಬಹುದಾದ ಹ್ವಾಂಗ್‌ಡಿ ನೀಜಿಂಗ್ ಎಂಬ ಕೃತಿಯಲ್ಲಿದೆ. ಆದರೆ ಇಂದು ಈ ಮೂಲ ಚಿಕಿತ್ಸಾ ಸ್ವರೂಪವನ್ನು ಆಧರಿಸಿ ಚಿಕಿತ್ಸೆಯನ್ನು ನೀಡುವವರು ಅಪರೂಪ. ಸೂಜಿಚಿಕಿತ್ಸೆಯು ಚೀನಾ ದೇಶದಿಂದ ಜಪಾನ್, ಕೊರಿಯ ದೇಶಗಳಿಗೆ ಹರಡಿತು. ಹಾಗೆಯೇ ಬ್ರಿಟೀಷರ ಮೂಲಕ ಬ್ರಿಟನ್ ಮತ್ತು ಅಮೆರಿಕದಲ್ಲಿ ಜನಪ್ರಿಯ ವಾಯಿತು. ಹಾಗಾಗಿ ಈ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಸೂಜಿ ಚಿಕಿತ್ಸೆಯ ಸ್ವರೂಪ ಭಿನ್ನ ಭಿನ್ನವಾಗಿವೆ. ಆದರೂ ಈ ಎಲ್ಲ ದೇಶಗಳು ಚಿಕಿತ್ಸೆಯಲ್ಲಿರುವ ಕೆಲವು ಸಾಮಾನ್ಯ ವಿಧಿಗಳನ್ನು ಪರಿಶೀಲಿಸಬಹುದು.

ಸೂಜಿಚಿಕಿತ್ಸೆಯ ಸ್ವರೂಪವು ತಜ್ಞನ ವೈಯುಕ್ತಿಕ ಅನುಭವ ಹಾಗೂ ಅಂತಃಪ್ರಜ್ಞೆಯನ್ನು (ಇಂಟ್ಯೂಶನ್) ಹಾಗೂ ಆಧರಿಸಿರುತ್ತದೆ. ಹಾಗಾಗಿ ಇಬ್ಬರು ತಜ್ಞರ ಚಿಕಿತ್ಸಾ ಸ್ವರೂಪವು ಭಿನ್ನವಾಗಿರುತ್ತದೆ. ಹಾಗಾಗಿ ಸೂಜಿಚಿಕಿತ್ಸೆಯನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಸೂಜಿಚಿಕಿತ್ಸೆಯ ತಜ್ಞರು ಮೊದಲು ರೋಗಿಯ ರೋಗ ವಿವರ, ದೈನಂದಿನ ವರ್ತನೆ, ಜೀವನಶೈಲಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವರು. ಆ ಪ್ರಶ್ನೆಗಳಲ್ಲಿ ಚಳಿಜ್ವರ, ಬೆವರು, ಹಸಿವು, ಬಾಯಾರಿಕೆ, ರುಚಿ, ಮಲಮೂತ್ರ ವಿಸರ್ಜನೆ, ನಿದ್ರೆ, ನೋವಿನ ಸ್ವರೂಪ, ಋತುಚರ್ಯೆ ಮತ್ತು ಬಿಳಿಸೆರಗಿಗೆ (ಲ್ಯುಕೋರಿಯ) ಸಂಬಂಧಿತ ಪ್ರಶ್ನೆಗಳಿರುತ್ತವೆ.

ನಂತರ ನೋವು ಇರುವ ಭಾಗವನ್ನು ನಿಕಟವಾಗಿ ಪರೀಕ್ಷಿಸುವರು. ನಂತರ ರೋಗಿಯ ನಾಲಿಗೆಯ ಆಕಾರ, ಬಣ್ಣ, ಲೇಪನ ಮುಂತಾದ ಲಕ್ಷಣಗಳನ್ನು ಗಮನಿಸುವರು. ಮುಖದ ಲಕ್ಷಣಗಳಿಗೂ ಆದ್ಯತೆಯನ್ನು ನೀಡುವುದುಂಟು. ಅತ್ಯಂತ ಮುಖ್ಯವಾದ ಪರೀಕ್ಷಾ ಘಟ್ಟವೆಂದರೆ ನಾಡಿ ಪರೀಕ್ಷೆ. ಮಣಿಕಟ್ಟಿನ ನಾಡಿಯನ್ನು ಪರೀಕ್ಷಿಸುವುದರ ಜತೆಯಲ್ಲಿ ಶರೀರದ ಇತರ ಭಾಗಗಳಲ್ಲಿಯೂ ನಾಡಿಯನ್ನು ಪರೀಕ್ಷಿಸ ಬಹುದು. ಈ ಎಲ್ಲ ಶಾರೀರಿಕ ಪರೀಕ್ಷೆಗಳನ್ನು ನಡೆಸಲು ಸುಮಾರು ಒಂದು ಗಂಟೆಯನ್ನು ತೆಗೆದುಕೊಳ್ಳುವುದುಂಟು.

ರೋಗಿಯ ಶಾರೀರಿಕ ಪರೀಕ್ಷೆಯನ್ನು ನಡೆಸಿದ ಮೇಲೆ, ಸೂಜಿತಜ್ಞರು ರೋಗಿಯ ಚಿಕಿತ್ಸಾ ಸ್ವರೂಪವನ್ನು ನಿರ್ಧರಿಸುವರು. ರೋಗಿಯು ಕೇವಲ ಒಂದು ಕಡೆ ಮಾತ್ರ ನೋವಿದೆ ಎಂದರೆ, ಒಂದು ವಾರದ ಅವಧಿಯಲ್ಲಿ ಒಂದು ಅಥವ ಎರಡು ಸಲ ಸೂಜಿಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಸೂಚಿಸಬಹುದು. ಪ್ರತಿ ಚಿಕಿತ್ಸೆಯ ಅವಧಿಯು ಸುಮಾರು ಅರ್ಧ ಗಂಟೆಗಳ ಅವಧಿಯದ್ದಾಗಿರುತ್ತದೆ. ನೋವಿನ ಜತೆಯಲ್ಲಿ ಇನ್ನೂ ಹಲವು ಸಮಸ್ಯೆಗಳಿದ್ದರೆ, ಚಿಕಿತ್ಸಾ ಅವಧಿಯು ಒಂದು ತಿಂಗಳಿನವರೆಗೆ ಮುಂದುವರಿಹುದು.

ಈ ಅವಧಿಯಲ್ಲಿ 6-8 ಸಲ ಚಿಕಿತ್ಸೆಗಾಗಿ ಬರಬೇಕಾಗಬಹುದು. ಈ ಸಂಖ್ಯೆಯು ರೋಗ ಸಂಕೀರ್ಣತೆಯನ್ನು ಅವಲಂಬಿಸಿರುತ್ತದೆ.
ಸೂಜಿಚಿಕಿತ್ಸೆಯನ್ನು ತೆಗೆದುಕೊಳ್ಳುವ ವ್ಯಕ್ತಿಯು ಪ್ರಶಾಂತ ಪರಿಸರದಲ್ಲಿ ಮಲಗಬೇಕಾಗುತ್ತದೆ. ಚಿಕಿತ್ಸೆಯ ಅವಧಿಯಲ್ಲಿ ರೋಗಿಯು ಅಲುಗದೇ ಇರುವುದು ಮುಖ್ಯ. ಸೂಜಿಯನ್ನು ಚುಚ್ಚಬೇಕಾದ ಪ್ರದೇಶವನ್ನು ಸ್ವಚ್ಛಗೊಳಿಸುವರು. ನಂತರ ಅಲ್ಲಿ 5 ರಿಂದ 20 ಸೂಜಿ ಗಳನ್ನು ಬೇರೆ ಬೇರೆ ಬಿಂದುಗಳಲ್ಲಿ ಚುಚ್ಚುವರು.

ನೋವು ಇರುವ ಸ್ಥಳದಲ್ಲಿಯೇ ಸೂಜಿಯನ್ನು ಚುಚ್ಚಬೇಕೆಂಬ ನಿಯಮವಿಲ್ಲ. ನೋವು ಒಂದು ಕಡೆಯಿದ್ದರೆ, ತಜ್ಞರು ಮತ್ತೆಲ್ಲೋ ಸೂಜಿ ಯನ್ನು ಚುಚ್ಚಬಹುದು. ಹೀಗೆ ಚುಚ್ಚಿದ ಸೂಜಿಗಳನ್ನು 10-20 ನಿಮಿಷಗಳವರೆಗೆ ಸ್ವಸ್ಥಾನದಲ್ಲಿ ಬಿಡುವರು. ನಂತರ ಸೂಜಿಗಳನ್ನು ತೆಗೆದು ಎಸೆಯುವರು. ಒಂದು ಸಲ ಬಳಸಿದ ಸೂಜಿಗಳನ್ನು ಕ್ರಿಮಿಶುದ್ಧಗೊಳಿಸಿ (ಸ್ಟೆರಿಲೈಜ್) ಮತ್ತೆ ಬಳಸುವುದುಂಟು. ಆದರೆ ವಿದೇಶ ಗಳಲ್ಲಿ ಒಮ್ಮೆ ಬಳಸಿ ಎಸೆಯುವ ಸೂಜಿಗಳನ್ನೇ (ಡಿಸ್ಪೋಸಬಲ್ ನೀಡ್ಲ್ಸ್) ಹೆಚ್ಚು ಬಳಸುವುದುಂಟು.

ಸಾಮಾನ್ಯವಾಗಿ ಸೂಜಿಗಳನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ (ಅನಾದಿ ಕಾಲದಲ್ಲಿ ಚಿನ್ನ, ಬೆಳ್ಳಿ, ತಾಮ್ರದಿಂದ ಮಾಡಿದ ಸೂಜಿಗಳನ್ನು ಬಳಸುತ್ತಿದ್ದರಂತೆ) ಮಾಡುವುದುಂಟು. ಇವು ಬಳುಕುವಷ್ಟು ತೆಳುವಾಗಿರುತ್ತವೆ. 13-130 ಎಂಎಂ ಉದ್ದ ಇರುತ್ತವೆ. 0.16 ಎಂಎಂ- 0.46 ಎಂಎಂ ದಪ್ಪ ಇರುತ್ತವೆ. ಚರ್ಮವು ಅತ್ಯಂತ ತೆಳುವಾಗಿರುವ ಮುಖ ಮತ್ತು ಕುತ್ತಿಗೆಯ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಸೂಜಿಗಳನ್ನು ಬಳಸುವರು.

ಚರ್ಮವು ದಪ್ಪ ಇರುವ ಕಡೆ ಉದ್ದದ ಮತ್ತು ಬಲವಾದ ಸೂಜಿಗಳನ್ನು ಬಳಸುವುದುಂಟು. ಇವನ್ನು ಸುದೀರ್ಘಕಾಲ ಸಂರಕ್ಷಿಸಿಟ್ಟರೂ ತುಕ್ಕು ಹಿಡಿಯುವುದಿಲ್ಲ. ಸಾಮಾನ್ಯವಾಗಿ ಸೂಜಿಗಳು ಒಂದು ಪ್ಲಾಸ್ಟಿಕ್ ಆವರಣದಲ್ಲಿರುತ್ತವೆ. ಈ ಸೂಜಿಗಳನ್ನು ಶರೀರದ ಚರ್ಮವನ್ನು ಮಾತ್ರ ಪ್ರವೇಶಿಸುವಂತೆ ಚುಚ್ಚುವರು. ಚುಚ್ಚಿದಾಗ ಇರುವೆ ಕಚ್ಚಿದಾಗ ಆಗುವಷ್ಟು ನೋವಾಗಬಹುದು. ನೋವೇ ತಿಳಿಯದ ಹಾಗೆಯೇ ಸೂಜಿಗಳನ್ನು ಚುಚ್ಚಲೂ ಸಾಧ್ಯವಿದೆ. ಚುಚ್ಚಿದ ಸೂಜಿಯನ್ನು ವೃತ್ತಾಕಾರವಾಗಿ ಆಡಿಸಬಹುದು. ಸುರುಳಿ ಸುತ್ತಬಹುದು. ಮೇಲೆ ಕೆಳಗೆ ಆಡಿಸಬಹುದು.

ಇತ್ತೀಚಿನ ದಿನಗಳಲ್ಲಿ ಸೂಜಿಚಿಕಿತ್ಸೆಯಲ್ಲಿ ಹಲವು ವೈವಿಧ್ಯಗಳನ್ನು ಕಾಣಬಹುದು. ಉದಾಹರಣೆಗೆ ಚುಚ್ಚಿದ ಸೂಜಿಗಳ ಮೂಲಕ ಸೌಮ್ಯ ವಿದ್ಯುತ್ತನ್ನು ಹಾಯಿಸಬಹುದು (ಎಲೆಕ್ಟ್ರೋಆಕ್ಯುಪಂಕ್ಚರ್). ಕಾಯಿಸಿದ ಸೂಜಿಗಳನ್ನು ಚುಚ್ಚಬಹುದು (ಫೈರ್ ನೀಡ್ಲ್ ಆಕ್ಯುಪಂಕ್ಚರ್). ಸೂಜಿಗಳ ಬದಲು ಶಬ್ದದಲೆಗಳನ್ನು ಕೇಂದ್ರೀಕರಿಸಿ ಚರ್ಮದೊಳಗೆ ಹಾಯಿಸಬಹುದು (ಸೋನೂಪಂಕ್ಚರ್). ಬಿಂದು ಗಳಲ್ಲಿ ಹಲವು ಔಷಧಗಳನ್ನು ಚುಚ್ಚುಮದ್ದಿನ ರೂಪದಲ್ಲಿಯೂ ಕೊಡಬಹುದು. ದುರ್ಬಲ ಜೇನುವಿಷವನ್ನೂ ಈ ಬಿಂದುಗಳಲ್ಲಿ ಚುಚ್ಚುವುದುಂಟು.

ಕೆಲವು ಸಲ ಸೂಜಿಚಿಕಿತ್ಸೆಯ ಜತೆಯಲ್ಲಿ ಸುಡುಚಿಕಿತ್ಸೆ (ಮಾಕ್ಸಿಬಿಷನ್) ಜಲಚಿಕಿತ್ಸೆ (ಹೈಡ್ರೋ ಥೆರಪಿ) ಮತ್ತು ಅವಚರಣ (ಕಪ್ಪಿಂಗ್) ಮುಂತಾದ ಚಿಕಿತ್ಸೆಗಳನ್ನೂ ಕೊಡುವುದುಂಟು. ಸೂಜಿಚಿಕಿತ್ಸೆಯನ್ನು ಎಲ್ಲರೂ ಮಾಡಿಸಿಕೊಳ್ಳುವ ಹಾಗಿಲ್ಲ. ಕುಸುಮರೋಗದಂತಹ (ಹೀಮೋಫೀಲಿಯ) ರಕ್ತ ಹೆಪ್ಪುಗಟ್ಟುವ ಸಮಸ್ಯೆಗಳು ಇರುವವರು ಸೂಜಿಚಿಕಿತ್ಸೆಯನ್ನು ಮಾಡಿಸಿಕೊಳ್ಳದಿರುವುದು ಒಳ್ಳೆಯದು. ಹಾಗೆಯೇ ರಕ್ತವು ಹೆಪ್ಪುಗಟ್ಟದ ಹಾಗೆ ತಡೆಗಟ್ಟುವ ಆಸ್ಪಿರಿನ್, ಕ್ಲೋಪಿಡಾಗ್ರೆಲ್, ಹೆಪಾರಿನ್, ವಾರ್ಫರಿನ್ ಮುಂತಾದ ಔಷಧಗಳನ್ನು ಸೇವಿಸುತ್ತಿರುವವರೂ ಸಹ ಸೂಜಿಚಿಕಿತ್ಸೆಯನ್ನು ತೆಗೆದುಕೊಳ್ಳುವುದಕ್ಕೆ ಮೊದಲು ತಜ್ಞರೊಡನೆ ಚರ್ಚಿಸುವುದು ಒಳ್ಳೆಯದು.

ಹೃದಯ ಗತಿನಿಯಂತ್ರಕವನ್ನು (ಪೇಸ್ ಮೇಕರ್) ಹಾಕಿಕೊಂಡಿರುವವರು ಸಹ ಎಚ್ಚರಿಕೆಯಿಂದಿರಬೇಕು. ಎಲೆಕ್ಟ್ರೋ ಆಕ್ಯುಪಂಕ್ಚರಿ ನಲ್ಲಿ ಬಳಸುವ ವಿದ್ಯುತ್ ಗಂತಿನಿಯಂತ್ರಕದ ಮೇಲೆ ದುಷ್ಪರಿಣಾಮ ಬೀರಬಾರದು. ಗರ್ಭವತಿಯರು ಸಹ ಸೂಜಿಚಿಕಿತ್ಸೆಯನ್ನು ತೆಗೆದು ಕೊಳ್ಳುವುದಕ್ಕೆ ಮೊದಲು ತಜ್ಞರ ಬಳಿ ಚರ್ಚಿಸುವುದು ಅಗತ್ಯ. ಏಕೆಂದರೆ ಕೆಲವು ಸಲ ಸೂಜಿಚಿಕಿತ್ಸೆಯು ಅಕಾಲ ಪ್ರಸವಕ್ಕೆ ಕಾರಣ ವಾಗಬಹುದು ಎನ್ನಲಾಗಿದೆ.

ಆಕ್ಯುಪಂಕ್ಚರ್ ನಿಜಕ್ಕೂ ಉಪಶಮನವನ್ನು ನೀಡುತ್ತದೆಯೆ ಎನ್ನುವ ಪ್ರಶ್ನೆಗೆ ಇದಮಿತ್ಥಂ ಎನ್ನುವ ಉತ್ತರವಿಲ್ಲ. ಈ ಚಿಕಿತ್ಸೆಯನ್ನು ಮಾಡಿಸಿ ಕೊಂಡವರು, ಉಪಶಮಕ್ಕೆ ಸಂಬಂಧಿಸಿದಂತೆ ಒಂದೊಂದು ರೀತಿಯ ಉತ್ತರವನ್ನು ನೀಡುವುದುಂಟು. ಸೂಜಿ ಚಿಕಿತ್ಸೆಯು ಉತ್ತಮ ನೋವು ನಿವಾರಕ ಎಂದು ಪ್ರಸಿದ್ಧವಾಗಿದೆ. ನೋವು ಎನ್ನುವುದು ವೈಯುಕ್ತಿಕ ಅನುಭವ. ಇದನ್ನು ಅಳೆಯಲು ಸಾಧ್ಯವಿಲ್ಲ. ವ್ಯಕ್ತಿಯ ಹೇಳಿಕೆಯನ್ನಷ್ಟೇ ನಂಬಬೇಕಾಗುತ್ತದೆ.

ಹಾಗಾಗಿ ಚಿಕಿತ್ಸಾ ಪರಿಣಾಮವನ್ನು ಪ್ರಮಾಣಬದ್ಧವಾಗಿ ಅಳೆಯುವ ಸೂಕ್ತ ವಿಧಾನಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಆಕ್ಯುಪಂಕ್ಚರಿನ
ಬಗ್ಗೆ ಇಷ್ಟೆಲ್ಲ ಅನಿಶ್ಚತತೆಯಿದ್ದರು ಸಹ, 2023ರ ವೇಳೆಗೆ ಸೂಜಿಚಿಕಿತ್ಸೆಯು ಜಾಗತಿಕ ಉದ್ಯಮವು 55 ಬಿಲಿಯನ್ ಡಾಲರುಗಳ ವ್ಯವಹಾರವಾಗಲಿದೆ ಎಂದು ಭವಿಷ್ಯವನ್ನು ನುಡಿಯಲಾಗಿದೆ.

error: Content is protected !!