Sunday, 8th September 2024

ಸರ್ವಾಧಿಕಾರಿ ಜಿನ್‌ ಪಿಂಗ್‌ಗೆ ಕೊನೆಯಿಲ್ಲವೇ ?

ಸಂಗತ

ವಿಜಯ್‌ ದರಡಾ

ಚೀನಾದ ಕಮ್ಯುನಿಸ್ಟ್ ಪಾರ್ಟಿಯನ್ನು ಆ ದೇಶದ ಸರ್ವೋಚ್ಚ ನಾಯಕ ಷಿ ಜಿನ್ ಪಿಂಗ್ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ವಿಶ್ವದ ಆರ್ಥಿಕ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಬಹುವೇಗದಲ್ಲಿ ಮುನ್ನೆಲೆಗೂ ಬಂದಿದ್ದಾರೆ. ವಿಪರ್ಯಾಸವೆಂದರೆ ಅದೇ ಪಕ್ಷ 1962ರಲ್ಲಿ ಜಿನ್ ಪಿಂಗ್ ತಂದೆ ಜೋಂಗ್ಯೂನ್‌ ರನ್ನು ಬಂಧನದಲ್ಲಿರಿಸಿತ್ತು.

ಆತ ಕೂಡ ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಅತ್ಯಂತ ಪ್ರಭಾವಿ ನಾಯಕರಾಗಿದ್ದವರು. ಆದರೆ ಅವರ ನಿಷ್ಠೆಯ ವಿಚಾರದಲ್ಲಿ ಮಾವೋಗೆ ಆತಂಕ ವಿತ್ತು. ಹಾಗಾಗಿ ಜಿನ್‌ಪಿಂಗ್ ತಂದೆಗೆ ಹಿಂಸೆ ಕೊಟ್ಟು ಜೈಲಿಗಟ್ಟಲಾಗಿತ್ತು. ಜಿನ್‌ಪಿಂಗ್ ಓದುತ್ತಿದ್ದ ಶಾಲೆಯಲ್ಲಿ ರಾಜಕಾರಣಿಗಳ ಮಕ್ಕಳು ಓದು ತ್ತಿದ್ದರು, ಆಗಲೂ ಸಂಘರ್ಷವೊಂದರ ಹಿನ್ನೆಲೆಯಲ್ಲಿ ಜಿನ್‌ಪಿಂಗ್‌ರನ್ನು ಶಾಲೆಯಿಂದ ಹೊರಹಾಕ ಲಾಗಿತ್ತು. ಯುವಾವಸ್ಥೆಯಲ್ಲಿದ್ದ ಜಿನ್‌ಪಿಂಗ್ ಕಮ್ಯುನಿಸ್ಟ್ ಪಕ್ಷಕ್ಕೆ ಸದಸ್ಯರನ್ನು ಸೇರ್ಪಡೆಗೊಳಿಸು ವಲ್ಲಿಯೂ ಹರಸಾಹಸ ಪಡಬೇಕಾಯ್ತು.

ಆದರೆ, ಈಗ ಅವರೇ ಚೈನಾದ ಅನಭಿಷಿಕ್ತ ದೊರೆ. ಚತುರ ಸರ್ವಾಧಿಕಾರಿ. ಇಂತಹದೊಂದು ಚಮತ್ಕಾರ ನಡೆಯಬಹುದೆಂದು ಪ್ರಾಯಶಃ ಮಾವೋ ಕನಸಿನಲ್ಲೂ ಭಾವಿಸಿರಲಿಕ್ಕಿಲ್ಲ. ಚೀನಾದಲ್ಲಿ ಮಾವೋ ಕಮ್ಯುನಿಸಂಗೆ ಕೊನೆ ಹಾಡುವುದಕ್ಕೆ ಈ ಸರ್ವಾಧಿಕಾರಿ ಈಗ ಮುಂದಾಗಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ ತನ್ನ ಪ್ರತಿದ್ವಂದಿಗಳೊಂದಿಗೆ ಸದಾಕಾಲ ದಮನಕಾರಿ ಪ್ರವೃತ್ತಿ ಯನ್ನೇ ತೋರುತ್ತ ಬಂದಿದೆ. ಯಾವೊಬ್ಬ ವ್ಯಕ್ತಿಯೂ ಇಲ್ಲಿ ಸರ್ವಾಧಿಕಾರಿಯಾಗಕೂಡದು ಎಂಬ ಪ್ರಬಲ ಆಕಾಂಕ್ಷೆ ಅಲ್ಲಿತ್ತು. ಹಾಗಾಗಿಯೇ 1990ರಲ್ಲಿ ಹೊಸತೊಂದು ನಿಯಮವನ್ನು ಜಾರಿಗೆ ತಂದು, ಯಾವ ವ್ಯಕ್ತಿಯೂ ಎರಡು ಅವಧಿಗಿಂತ ಹೆಚ್ಚಿನ ಕಾಲ ಚೀನಾದ ಅಧ್ಯಕ್ಷನಾಗಿರಕೂಡದು ಎಂಬ ಕಟ್ಟುಪಾಡನ್ನು ಹೇರಲಾಗಿತ್ತು.

ಆದರೆ ಜಿನ್‌ಪಿಂಗ್ ಜಾಣ್ಮೆಯಿಂದ ಪಕ್ಷದೊಳಗಡೆ ತನ್ನ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. ೨೦೧೨ರಲ್ಲಿ ಪ್ರತಿಸ್ಪರ್ಧಿಗಳನ್ನೂ ಬುಟ್ಟಿಗೆ ಹಾಕಿಕೊಂಡು ಅಧ್ಯಕ್ಷಸ್ಥಾನವನ್ನೇರಿದರು. ಜತೆಜತೆಗೆ ತನ್ನ ಎದುರಾಳಿಗಳ ದಮನ ಮಾಡಲೆಂದೇ ಹೊಸ ಕಾನೂನೊಂದನ್ನು ಜಾರಿಗೆ ತಂದು ಯಾರೂ ತನ್ನ ವಿರುದ್ಧ ಧ್ವನಿಯೆತ್ತದಂತೆ ನೋಡಿಕೊಂಡರು. ಅವರೆಷ್ಟು ಪ್ರಭಾವಶಾಲಿಯಾಗಿ ಬೆಳೆದರೆಂದರೆ ಚೀನಾದಲ್ಲಿ ಕಮ್ಯುನಿಸ್ಟ್ ಪಾರ್ಟಿಗೇ ಎರಡನೇ ಸ್ಥಾನ ದಕ್ಕುವಂತಾಯಿತು. ಎಲ್ಲ ಪಾಲಿಟ್ ಬ್ಯೂರೋ ಸದಸ್ಯರು ಈತನ ಇಶಾರೆಗೆ ತಕ್ಕಂತೆ ಕುಣಿಯುವ ಪರಿಸ್ಥಿತಿ ಸದ್ಯ ಅಲ್ಲಿದೆ.

1989ರಲ್ಲಿ ಸಾವಿರಾರು ಚೀನೀ ಯುವಕರು ತಮಗೆ ಪ್ರಜಾಪ್ರಭುತ್ವ ಬೇಕು ಎಂಬ ಬೇಡಿಕೆಯೊಂದಿಗೆ ಧರಣಿ ಮಾಡಿದಾಗ ಟಿನಾಮನ್ ವೃತ್ತದಲ್ಲಿ ಗುಂಡಿನ ಮಳೆಗರೆದು ಅವರನ್ನು ಹತ್ತಿಕ್ಕಲಾಗಿತ್ತು. ಆಗ ಜಿನ್‌ಪಿಂಗ್ -ಜಿಯಾನ್ ಪ್ರಾಂತದಲ್ಲಿ ಪಕ್ಷದ ನಾಯಕನಾಗಿದ್ದರು ಮತ್ತು ಈ ಬಂಡಾಯ ಹತ್ತಿಕ್ಕುವಲ್ಲಿ ಕಾರಣಕರ್ತರಾಗಿದ್ದರು. ತಮ್ಮ ಇವರಲ್ಲಿದ್ದ ಕ್ರೌರ್ಯದ ಮನೋಭಾವವೇ ಅವರನ್ನು ಬಹುಬೇಗ ಪಕ್ಷದ ಉನ್ನತ ಶ್ರೇಣಿಗೊಯ್ಯುವಲ್ಲಿ ಸಹಾಯಕವಾಯಿತು ಎಂಬ ಮಾತೂ ಇದೆ. ಟಿನಾಮನ್ ಚೌಕದ ಕೌರ್ಯ ನಡೆದ ನಂತರದಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್ ಜತೆಗೆ ಒಮ್ಮೆ ನಾನೂ ಅಲ್ಲಿಗೆ ಹೋಗಿದ್ದೆ. ಆಗ ಅಲ್ಲಿ ಜನರೊಂದಿಗೆ ಕ್ರೌರ್ಯದ ಬಗ್ಗೆ ವಿಚಾರಿಸಿದಾಗ ಅಲ್ಲಿ ಏನೇನೂ ನಡೆದಿಲ್ಲ ಇದೆಲ್ಲವೂ ಅಮೆರಿಕದ ಹುನ್ನಾರ ಎಂದು ಹೇಳಿದ್ದು ನನಗಿನ್ನೂ ನೆನಪಿದೆ.

ಅಚ್ಚರಿ ಎಂದರೆ ಈ ನರಮೇಧದ ವಿಚಾರ ಚೀನಾ ಇತಿಹಾಸದ ಪುಟಗಳಲ್ಲಿ ದಾಖಲಾಗಲೇ ಇಲ್ಲ. ಇಂತಹ ಪ್ರಕರಣಗಳು ಜಿನ್‌ಪಿಂಗ್ ಆಡಳಿತ
ಕಾಲದಲ್ಲಿ ಹಲವಾರು ಬಾರಿ ನಡೆದದ್ದಿದೆ. ಪ್ರತಿಭಟನಕಾರರನ್ನು ರಾತ್ರೋರಾತ್ರಿ ದಮನ ಮಾಡಿದ್ದೂ ಇದೆ. ಈ ಸರ್ವಾಧಿಕಾರಿ ಲಕ್ಷಗಟ್ಟಲೇ ಮುಸ ಲ್ಮಾನರನ್ನು ಜೈಲಿನಲ್ಲಿಟ್ಟಿದ್ದಾನೆ. ಹಾಂಕಾಂಗ್‌ನ ಸ್ವಾಯುತ್ತೆ ಯನ್ನು ಕೊನೆಗೊಳಿಸಿದ್ದು ಮಾತ್ರವಲ್ಲದೇ 2019ರಲ್ಲಿ ಪ್ರಜಾ ಪ್ರಭುತ್ವದ ಹಕ್ಕುಗಳಿಗಾಗಿ ಅಲ್ಲಿ ನಡೆದ ಹೋರಾಟವನ್ನೂ ಕೂಡ ಕ್ರೂರವಾಗಿ ದಮನ ಮಾಡಲಾಯ್ತು.

2020ರಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ ಎಂಬ ಹೊಸ ಅಸವನ್ನು ಹೂಡುವ ಮೂಲಕ ಪ್ರಜಾಪ್ರಭುತ್ವದ ಪರ ಕೂಗೆಬ್ಬಿಸುವವರನ್ನು ಹತ್ತಿಕ್ಕುವ ಕೆಲಸ ಸಾಗುತ್ತಲೇ ಇದೆ. ಈಗ ಚೀನಾದ ಪಾರ್ಲಿಮೆಂಟ್ ಜಿನ್‌ಪಿಂಗ್‌ನ ಸಂಪೂರ್ಣ ಹತೋಟಿಯಲ್ಲಿದೆ ಮತ್ತು ಆತ ಮಾಡಿದ್ದೇ ಕಾನೂನು
ಎಂಬಂತಾಗಿದೆ. ಕಳೆದ ವಾರ ಜಿನ್‌ಪಿಂಗ್‌ಗೆ ಅತ್ಯಾಪ್ತನಾಗಿರುವ ಲೀ ಕ್ವಿಯಾಂಗ್‌ನನ್ನು ಆಯಕಟ್ಟಿನ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಚೀನಾದಲ್ಲಿ ಲಕ್ಷಾಂತರ ಜನರು ಕೋವಿಡ್ ನಿಂದ ಸತ್ತುಹೋಗಿದ್ದರೂ ತಮ್ಮ ದೇಶದಲ್ಲಿ ಕೋವಿಡ್ ಇಲ್ಲವೇ ಇಲ್ಲ ಘೋಷಿಸಿದ ಕುಖ್ಯಾತಿ ಇದೇ ಲೀ ಕ್ವಿಯಾಂಗ್‌ಗೆ
ಸಲ್ಲುತ್ತದೆ. ಅದೆಷ್ಟು ಕೋಟಿ ಜನ ಅಲ್ಲಿ ಸತ್ತರೋ ಲೆಕ್ಕವಿಟ್ಟವರಿಲ್ಲ.

ಈ ಸರ್ವಾಧಿಕಾರಿ ಪ್ರವೃತ್ತಿಯ ಅಮಲು ಅದೆಷ್ಟಿದೆಯೆಂದರೆ, 2017ರಲ್ಲಿ ಜಿನ್‌ಪಿಂಗ್ ಧೋರಣೆಗಳ ಪುಸ್ತಕವೊಂದನ್ನು ಚೀನಾದ ಸಂವಿಧಾನ ಎಂದು ಪರಿಗಣಿಸಲಾಗಿದೆ. ಅದಕ್ಕೂ ಮುನ್ನ ಮಾವೋ ಮತ್ತು ಡೆಂಗ್ ಕ್ಸಿ ಪಿಂಗ್‌ನ ಧೋರಣೆಗಳನ್ನೇ ಅಲ್ಲಿ ಸಂವಿಧಾನವೆಂದು ಪರಿಗಣಿಸಲಾಗಿತ್ತು. ಇದೀಗ ಪರಿಸ್ಥಿತಿ ಹೇಗಿದೆಯೆಂದರೆ ಜಿನ್ ಪಿಂಗ್ ಬಾಯಿಯಿಂದ ಉದುರುವ ಮಾತುಗಳೇ ಅಲ್ಲಿನ ಕಾನೂನು. ಎಷ್ಟೋ ಉದ್ಯಮಪತಿಗಳು ಜೈಲಿನಲ್ಲಿದ್ದಾರೆ.

ಇನ್ನೊಂದಷ್ಟು ಮಂದಿ ದೇಶಬಿಟ್ಟು ಓಡಿ ಹೋಗಿದ್ದಾರೆ. ವಿಶ್ವಾದ್ಯಂತ ಚೀನಾಕ್ಕೆ ಔದ್ಯಮಿಕ ವಲಯದಲ್ಲಿ ಹೆಸರು ತಂದುಕೊಟ್ಟ ಉದ್ಯಮಿ ಜಾಕ್ ಮಾ ಎಲ್ಲಿzನೋ ಯಾರಿಗೂ ಗೊತ್ತಿಲ್ಲ. ಟೀಕೆಮಾಡುವವರನ್ನು ಬುಡದಿಂದಲೇ ಕಿತ್ತುಹಾಕುವ ಪ್ರವೃತಿ ಅಲ್ಲಿದೆ. ಉನ್ನತ ಮಾಧ್ಯಮ ಸಂಸ್ಥೆಗಳಾಗಿದ್ದ ಆಪಲ್ ಡೈಲಿ ಮತ್ತು ಸ್ಟಾಂಡ್ ನ್ಯೂಸ್‌ಗಳನ್ನು ಬರಖಾಸ್ತು ಮಾಡಲಾಗಿದೆ. ಈಗ ಅಲ್ಲಿನ ಸರಕಾರ ನಡೆಸುವ ಮಾಧ್ಯಮವೊಂದೇ ಉಳಿದುಕೊಂಡಿದೆ.
ಈ ವ್ಯಕ್ತಿ ಸರ್ವಾಧಿಕಾರಿ ಮಾತ್ರವಲ್ಲ, ಒಬ್ಬ ಅಪಾಯಕಾರಿ ವ್ಯಕ್ತಿಯೂ ಹೌದು. ಆತ ಯಾರ ಜೀವಕ್ಕೂ ಬೆಲೆಕೊಡುವವನಲ್ಲ. ಅಮೆರಿಕ ಹೇಳುವ ಪ್ರಕಾರ ಕೋವಿಡ್ ವೈರಸ್ ಹುಟ್ಟಿದ್ದು ಚೀನಾದಲ್ಲಿ, ಅವರಿಂದಾಗಿಯೇ ಇದು ವಿಶ್ವವ್ಯಾಪಿ ಹರಡಿದ್ದು.

ಆದರೂ ಅದನ್ನು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ. ಚೀನಾದಲ್ಲಿ ಜನರಿಗೆ ಧಾರ್ಮಿಕ ಹಕ್ಕು ಇದೆ. ಆ ಕಾರಣದಿಂದಲೇ ಅದೆಷ್ಟೋ ಮನೆಗಳಲ್ಲಿ ಗುಪ್ತವಾಗಿ ಮಸೀದಿ ಮತ್ತು ಬೌದ್ಧಮಂದಿರಗಳನ್ನು ನಡೆಸಲಾಗುತ್ತಿದೆ. ಒಂದೆಡೆ ತನ್ನದೇ ದೇಶದ ಜನರನ್ನು ತನ್ನ ಅಂಕುಶದೊಳಕ್ಕೆ ಹಿಡಿದಿಡುವ ಮನಃಸ್ಥಿತಿಯ ಜಿನ್‌ಪಿಂಗ್ ಇಡೀ ವಿಶ್ವವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಮಹದಾಸೆಯನ್ನೂ ಹೊಂದಿzರೆ. ಸರಿಸುಮಾರು ೧೦೦ ದೇಶಗಳು ಚೀನಾದ ಸಾಲದ ಸುಳಿಯ ವಿಷವರ್ತುಲಕ್ಕೆ ಸಿಕ್ಕು ನಲುಗುತ್ತಿವೆ.

ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ್ ಮಾಲ್ಡೀವ್ಸ್ ಆ ಪಟ್ಟಿಯಲ್ಲಿವೆ. ಅಮೆರಿಕ ಬಗ್ಗೆ ಕೂಡ ವಾಗ್ದಾಳಿ ಮಾಡುತ್ತ ಮುನ್ನಡೆದಿದೆ ಚೀನಾ. ಅಗತ್ಯ ಬಿದ್ದಲ್ಲಿ ಪೂರ್ಣಪ್ರಮಾಣದ ಯುದ್ಧಕ್ಕೂ ತಾನು ಸಿದ್ಧ ಎಂದು ಅಮೆರಿಕಕ್ಕೇ ಕಳೆದವಾರ ಚೀನಾ ಎಚ್ಚರಿಕೆ ಕೊಟ್ಟಿದೆ. ಅಮೆರಿಕದ ಭೂ ವ್ಯಾಪ್ತಿಯಲ್ಲಿ ಚೀನಾದ ಬಲೂನ್ ಹಾರಾಟ ನಡೆಸುತ್ತಿದ್ದುದರ ಕುರಿತು ಸುದ್ದಿಗಳನ್ನು ನೀವು ಓದಿರುತ್ತೀರಿ. ಇದೆಲ್ಲವೂ ಭಾರತಕ್ಕೆ ಅತ್ಯಂತ ಅಪಾಯಕಾರಿ. ಏಕೆಂದರೆ ಚೀನಾ ನಮ್ಮ ನೆರೆರಾಷ್ಟ.

ಅದು ಟಿಬೆಟನ್ನು ಕಬಳಿಸಿಕೊಂಡಿದೆ ನಮ್ಮ ನೆಲವನ್ನೂ ಕಸಿಯಲು ಕಾಯುತ್ತಿದೆ. ಹಲವು ರೀತಿಗಳಲ್ಲಿ ಚೀನಾ ತನ್ನ ಪ್ರಾಬಲ್ಯ ಮೆರೆಯುತ್ತಿದೆ ಮತ್ತು ಭಾರತಕ್ಕೆ ಅಪಾಯಕಾರಿ ಯಾಗಿದೆ. ತನ್ನಲ್ಲಿರುವ ಹಣದಬಲ, ಔದ್ಯಮಿಕ ಉತ್ಪನ್ನಗಳ ಪ್ರಾಬಲ್ಯಗಳಿಂದ ಅದು ಭಾರತವನ್ನು ಬಗ್ಗುಬಡಿಯಲು
ಕಾಯುತ್ತಿದೆ. ಇವತ್ತಿಗೂ ಶೇ.೬೦ಕ್ಕೂ ಹೆಚ್ಚಿನ ರಸಗೊಬ್ಬರಗಳು ಆಮದು ಆಗುತ್ತಿರುವುದು ಚೀನಾದಿಂದಲೇ. ಇಡೀ ವಿಶ್ವಕ್ಕೇ ಕಂಕಟನಾಗಿರುವ ಈ ಸರ್ವಾಧಿಕಾರಿ ಚೀನಾದಲ್ಲಿ ನಾಗರಿಕ ಸಮಾಜವನ್ನೇ ದಮನ ಮಾಡಿದ್ದಾನೆ. ಜನಜೀವನದ ಸೌಖ್ಯಕ್ಕೆ ಕಂಟಕಪ್ರಾಯನಾಗಿದ್ದಾನೆ.

ಬುದ್ಧಿ ಜೀವಿಗಳನ್ನು ಹೊಸಕಿ ಹಾಕಿದ್ದಾನೆ. ಚೀನಾ ಎಂದರೆ ಅದೊಂದು ಹೃದಯಹೀನ ದೇಶ ಎಂಬುದನ್ನು ಸಾಬೀತು ಮಾಡಿದ್ದಾನೆ. ತನ್ನ ಮನಸ್ಸಿಗೆ ತೋಚಿದ ಬಣ್ಣವನ್ನು ಇಡೀ ವಿಶ್ವನಕಾಶೆಗೆ ಬಳಿಯಬೇಕೆಂಬ ಹುಚ್ಚು ಆತನಲ್ಲಿದೆ. ಈ ಸರ್ವಾಧಿಕಾರಿಯ ಹುಚ್ಚಾಟಗಳನ್ನು ಹತ್ತಿಕ್ಕುವವರು
ಯಾರಾ ದರೂ ಇದ್ದಾರೆಯೇ?

error: Content is protected !!