Thursday, 12th December 2024

M J akbar column: ಚೀನಾದ ಬೆದರಿಕೆಗೆ ತೈವಾನ್‌ ಏಕೆ ಕೊಂಚವೂ ಹೆದರಿಲ್ಲ ?

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ತೈವಾನ್‌ನವರು ಸೆಮಿಕಂಡಕ್ಟರ್ ಪೂರೈಕೆ ನಿಲ್ಲಿಸಿದರೆ, ಅಮೆರಿಕದ ಸೂಪರ್ ಪವರ್ ತಂತ್ರಜ್ಞಾನ ದೈತ್ಯ ಕಂಪನಿಗಳೆಲ್ಲ ಬಾಗಿಲು ಮುಚ್ಚಬೇಕಾಗುತ್ತದೆ. ಆಪಲ್, ನಿವಿಡಿಯಾ ಹಾಗೂ ಕ್ವಾಲ್ಕಮ್‌ ನಂಥ ಕಂಪನಿಗಳು ದಿವಾಳಿಯಾಗುತ್ತವೆ. ಇವುಗಳ ಬೆನ್ನಿಗೇ ಇನ್ನೂ ಸಾಕಷ್ಟು ಕಂಪನಿಗಳು ಬಂದ್ ಆಗುತ್ತವೆ. ಇದು ದೊಡ್ಡದೊಂದು ಅನಾಹುತದ ಆರಂಭ ಮಾತ್ರ. ಹೀಗಾಗಿಯೇ ತೈವಾನ್ ತನ್ನ ಅಬಾಕಸ್‌ನಲ್ಲಿ ಒಳ್ಳೆಯ ದಿನಗಳನ್ನು ಲೆಕ್ಕ ಹಾಕುತ್ತಿದೆಯೇ ಹೊರತು, ಕೆಟ್ಟ ದಿನಗಳನ್ನಲ್ಲ.

ಈಗ ಎಲ್ಲವೂ ಅರ್ಥವಾಗುತ್ತಿದೆ. ಏಕೆ ಕೆಲ ಸಂಸ್ಕೃತಿಗಳಲ್ಲಿ ಪೂರ್ವಜರನ್ನು ಪೂಜಿಸುವ ಪದ್ಧತಿಯಿದೆ, ಏಕೆ ಕೆಲ ಸಮುದಾಯಗಳಲ್ಲಿ ಹಿರಿಯರ ‘ಶ್ರಾದ್ಧ’ ಮಾಡುತ್ತಾರೆ, ಏಕೆ ಮೃತರಿಗೆ ತರ್ಪಣ ಬಿಟ್ಟು ಭೂರಿ ಭೋಜನದ ನೈವೇದ್ಯ ಮಾಡುತ್ತಾರೆ ಎಂಬುದು ನನಗೀಗ ಮೊದಲಿಗಿಂತ ಚೆನ್ನಾಗಿ ಅರ್ಥವಾಗುತ್ತಿದೆ. ನಾವು ತೈಪೇಯಿಗೆ ಹೋಗಿ ಇಳಿದಿದ್ದು ಸರಿಯಾಗಿ ‘ದೆವ್ವಗಳ ಮಾಸ’ದ ಮಧ್ಯದಲ್ಲಿ. ಅಲ್ಲಿ ಇದನ್ನು ‘ಘೋಸ್ಟ್ ಮಂತ್’ ಎನ್ನುತ್ತಾರೆ. ನಮ್ಮಲ್ಲಿ ಮಹಾಲಯದ ತಿಂಗಳು ಇದೆಯಲ್ಲ ಹಾಗೆ ತೈವಾನ್‌ನಲ್ಲಿ ಪೂರ್ವಜರನ್ನು ನೆನೆಯುವ ತಿಂಗಳು ಇದು ಎಂದು ಹೋಲಿಸಬಹುದು.

ಈ ತಿಂಗಳಿನಲ್ಲಿ ಮನುಷ್ಯನ ಮರಣೋತ್ತರ ಬದುಕಿಗೆ ಸ್ವರ್ಗದ ಬಾಗಿಲುಗಳು ತೆರೆದುಕೊಂಡಿರುತ್ತವೆ ಎಂಬ ನಂಬಿಕೆ ಚೀನಿಯರಲ್ಲಿದೆ. ವಾಸ್ತವವಾಗಿ ‘ಮರಣೋತ್ತರ ಬದುಕು’ ಎಂಬುದು ಚೀನಿ ಪರಿಭಾಷೆಯಲ್ಲಿ ಸ್ವರ್ಗ ಅಥವಾ ನರಕ ಎಂಬ ನಂಬಿಕೆಯಷ್ಟು ನಿಖರವಾಗಿಲ್ಲ. ಅವರ ನಂಬಿಕೆಯ ಸ್ವರ್ಗದ ಬಾಗಿಲುಗಳು ಎರಡೂ ಕಡೆ ತೆರೆದುಕೊಂಡಿರುತ್ತವೆಯಂತೆ. ಅಂದರೆ ಹೀಗೆ ಒಳಗೆ ಹೋಗಿ ಹಾಗೆ ಹೊರಗೂ ಬರಬಹುದು,
ಅಥವಾ ಅಲ್ಲೇ ಇರಬಹುದು. ಅದು ದ್ವಿಮುಖ ರಸ್ತೆ. ಆಗಮನದ ಬಳಿಕ ನಿರ್ಗಮನವೂ ಇರುತ್ತದೆಯಲ್ಲವೇ? ಈ ತಿಂಗಳಿನಲ್ಲಿ ಹಳೆಯ ನೆನಪು ಹೊತ್ತು ಭೂಮಂಡಲದ ಪ್ರವಾಸಕ್ಕೆ ಬರುವ ದೆವ್ವಗಳು ಸಹಜವಾಗಿಯೇ ಬಲಶಾಲಿಯಾಗಿರುತ್ತವೆ.

ಅವುಗಳಿಗೆ ಯಾವಾಗಲೂ ಹಸಿವು. ಚೀನಿಯರ ನಂಬಿಕೆಯ ಮರಣೋತ್ತರ ಬದುಕಿನಲ್ಲಿ ಏನೇ ಭಕ್ಷ್ಯ ಭೋಜ್ಯಗಳ ಸೌಕರ್ಯಗಳಿದ್ದರೂ ಖಂಡಿತ ಅನ್ನ ಮತ್ತು ನೂಡಲ್ಸ್ ಮಾತ್ರ ಇರಲಿಕ್ಕಿಲ್ಲ. ಹೀಗಾಗಿ ಬದುಕಿರುವವರು ತಮ್ಮ ಪೂರ್ವಜರನ್ನು ಒಳ್ಳೊಳ್ಳೆಯ ಅಡುಗೆ ಹಾಗೂ ಪೇಪರ್ ಹಣದ ಮೂಲಕ ಬರಮಾಡಿಕೊಳ್ಳುತ್ತಾರೆ. ಈ ಚಾಂದ್ರಮಾನ ತಿಂಗಳು ಬಂತೆಂದರೆ ಅಲ್ಲಿನ ಅಂಗಡಿಗಳಲ್ಲಿ ನಮನಮೂನೆಯ ಗಂಧದ ಕಡ್ಡಿಗಳು,
ಅಲಂಕಾರಿಕ ದೀಪಗಳು ಹಾಗೂ ದೆವ್ವಗಳ ಪ್ರತಿಕೃತಿಗಳೇ ತುಂಬಿಕೊಂಡಿರುತ್ತವೆ. ರಾತ್ರಿಯಾಗುತ್ತಿದ್ದಂತೆ ಜನರು ಕುಟುಂಬ ಸಮೇತರಾಗಿ ನದಿಗಳಲ್ಲಿ ದೀಪಗಳನ್ನು ತೇಲಿಬಿಟ್ಟು, ಪೇಪರ್ ಹಣವನ್ನು ಸುಟ್ಟು, ಹಬ್ಬದ ಆಚರಣೆ ಮಾಡುತ್ತಾರೆ.

ಈ ಪೇಪರ್ ಹಣವೆಂಬುದು ಕಾಲಾಭಾಸವೋ ಅಥವಾ ವಿರೋಧಾಭಾಸವೋ? ಇಷ್ಟಕ್ಕೂ ಈ ಕಾಲದಲ್ಲಿ ಕಾಲ್ಪನಿಕ ಪೇಪರ್ ಹಣಕ್ಕಿಂತ ನೈಜವಾದ ಹಣವಾದರೂ ಎಲ್ಲಿದೆ? ಪ್ಲಾಸ್ಟಿಕ್ ಕಾರ್ಡ್ ಇದೆ ಅಂತೀರಾ! ಆದರೆ ತೈಪೇಯಿಯಲ್ಲಿ ಯಾರೂ ತಮ್ಮ ಪೂರ್ವಜರಿಗೆ ಕ್ರೆಡಿಟ್ ಕಾರ್ಡ್ ಕೊಟ್ಟು ಪೂಜೆ ಮಾಡುತ್ತಿರಲಿಲ್ಲ. ಹೋಗಲಿ ಬಿಡಿ, ಆಕಾಶದಲ್ಲಿ ಸ್ವರ್ಗದ ಬಾಗಿಲುಗಳು ತೆರೆದುಕೊಳ್ಳುವುದಕ್ಕೆ ಕಾಯುತ್ತಾ ನಿಂತಿರುವಾಗ ಯಾರೂ ಹುಡುಗಾಟ ಮಾಡಬಾರದು. ನನ್ನ ಪ್ರಕಾರ ಚಾಂದ್ರಮಾನ ಪದ್ಧತಿಯಲ್ಲಿ ಕಾಲವನ್ನು ಅಳೆಯುವವರು ಸೌರಮಾನ ಪದ್ಧತಿಯಲ್ಲಿ ಕಾಲ ಅಳೆಯುವವರಿಗಿಂತ ಹೆಚ್ಚು ಕಲ್ಪನಾಶೀಲರು. ಚಂದ್ರ ಅಸ್ಥಿರ. ಅವನು ಬೆಳೆಯುತ್ತಾನೆ, ಕರಗುತ್ತಾನೆ. ಅವನ ಸೌಂದರ್ಯ ಹೆಚ್ಚುತ್ತದೆ, ಕಡಿಮೆಯಾಗುತ್ತದೆ. ಅವನು ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಾಗಿ ಮನುಷ್ಯನ ಭಾವನೆಗಳ ಜತೆ ಆಟವಾಡುತ್ತಾನೆ. ಹುಣ್ಣಿಮೆ, ಅಮಾವಾಸ್ಯೆಗಳು ಹೇಗೆ ಮನುಷ್ಯರನ್ನು ಮಾನಸಿ ಕವಾಗಿ ಕೆಣಕುತ್ತವೆಯೆಂಬುದು ನಮಗೆ ಗೊತ್ತು. ದೆವ್ವಗಳಿಗೆಲ್ಲ ಚಂದ್ರನೇ ಬಾಸ್.

ಎಲ್ಲಾ ಯಶಸ್ವಿ ನಗರಗಳಂತೆ ತೈಪೇಯಿಗೂ ಎರಡು ಮುಖಗಳಿವೆ. ಹಗಲಿನಲ್ಲಿ ಅಲ್ಲಿನ ಆರ್ಥಿಕತೆ ಎದ್ದೆದ್ದು ಕುಣಿಯುತ್ತದೆ. ಇಂದು ತೈವಾನ್‌ನ ತಲಾದಾಯ ಜಪಾನ್‌ಗಿಂತ ಹೆಚ್ಚು. ಅಲ್ಲಿನ ಜನರು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕಳೆದ ನಾಲ್ಕು ದಶಕಗಳಲ್ಲಿ ತೈವಾನ್‌ನ ತಲಾದಾಯ ಜಪಾನ್‌ಗಿಂತ ಎಂಟು ಪಟ್ಟು ಹೆಚ್ಚಾಗಿದೆ. ಹಗಲು ಬರೀ ಹಣದ ವ್ಯವಹಾರದಲ್ಲಿ ಮುಳುಗಿರುವ ಜನರು ಸಂಜೆಯಾಗುತ್ತಿದ್ದಂತೆ ಆರಾಮದ ಮೂಡ್‌ಗೆ ಹೋಗಿಬಿಡುತ್ತಾರೆ. ತೈವಾನಿಗರಿಗೆ ಸಂಜೆಗಳನ್ನು ಹಾಯಾಗಿ ಕಳೆಯುವುದೆಂದರೆ ಇಷ್ಟ. ಇಲ್ಲಿ ‘ಲೀಷರ್’ ಅಂದರೆ ಪೂರ್ವದ ದೇಶಗಳಲ್ಲಿರುವ ಪ್ರಶಾಂತ ಸಂಜೆಯೇ ಹೊರತು ಪಶ್ಚಿಮದ
ಅಬ್ಬರದ ಹುಚ್ಚಾಟಗಳಲ್ಲ. ಕತ್ತಲಾಗುತ್ತಿದ್ದಂತೆ ತೈಪೇಯಿಯ ಅಂಗಡಿ ಮುಂಗಟ್ಟುಗಳು ರಸ್ತೆಗೂ ಬಂದು ಕುಳಿತುಬಿಡುತ್ತವೆ. ದೊಡ್ಡ ದೊಡ್ಡ ಬೀದಿಗಳು ಪಾರ್ಕುಗಳಾಗುತ್ತವೆ. ಎಲ್ಲಿ ನೋಡಿದರಲ್ಲಿ ಫುಡ್ ಸ್ಟಾಲ್‌ಗಳು ತಲೆಯೆತ್ತುತ್ತವೆ.

ಹಗಲಿನ ಗಿಜಿಗಿಜಿ ಸದ್ದು ಹಾಗೂ ಕಾರುಗಳ ಅರಚಾಟವನ್ನು ಸಂಗೀತದ ಸಲಕರಣೆಗಳು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತವೆ. ಜನರ ಮುಖದಲ್ಲಿ ಟೆನ್ಷನ್ ಬದಲು ಹಿತವಾದ ಮುಗುಳ್ನಗೆ ಪ್ರತಿಷ್ಠಾಪನೆಯಾಗುತ್ತದೆ.
ತೈವಾನ್ ಹೈಟೆಕ್ ನಾಡು ಕೂಡ ಹೌದು. ಹೀಗಾಗಿ ಎಲ್ಲೋ ದೂರ ದಲ್ಲಿ ಕುಳಿತು ದೊಡ್ಡಣ್ಣನೊಬ್ಬ ಇವರೆಲ್ಲರ ಫೋಟೋ ತೆಗೆದು ಜೋಳಿಗೆ ತುಂಬಿಸಿಕೊಳ್ಳುತ್ತಿರಬಹುದು. ಆದರೆ ಅದಕ್ಕೆಲ್ಲ ಯಾರು ತಲೆಕೆಡಿಸಿ ಕೊಳ್ಳುತ್ತಾರೆ. ನಮ್ಮ ಸಾಧನೆಯಲ್ಲಿ ನಮಗೆ ತೃಪ್ತಿಯಿದ್ದರೆ, ಆ ಸಾಧನೆಯನ್ನು ನಾವು ಸ್ವಾತಂತ್ರ್ಯ ಕಳೆದುಕೊಳ್ಳದೆಯೇ ಮಾಡಿದ್ದರೆ, ಎಲ್ಲೋ ಯಾರೋ ನಮ್ಮ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ನಮಗೆ ಭಯ ಹುಟ್ಟಿಸು ವುದಿಲ್ಲ. ಬದಲಿಗೆ ಅದೂ ಒಂದು ಭದ್ರತೆಯ ಭಾವನೆಯನ್ನೇ ಉಂಟುಮಾಡುತ್ತದೆ.

ತೈವಾನ್ ವಿಷಯದಲ್ಲಿ ಇದು ವಾಸ್ತವ. ತೈವಾನ್‌ಗೆ ತಾನು ಇನ್ನೊಂದು ಚೀನಾ ಆಗುವ ಆಸೆ ಎಳ್ಳಷ್ಟೂ ಇಲ್ಲ. ತಾನು ತಾನಾಗಿಯೇ ಇರಬೇಕು ಎಂದು ಈ ದೇಶ ಬಯಸುತ್ತದೆ. ಜಗತ್ತಿನಲ್ಲಿ ಇಂದು ಕಾಗದದ ಮೇಲೆ ತೈವಾನ್‌ನ ಅಸ್ತಿತ್ವವನ್ನು ಗುರುತಿಸದೆ ಇರುವ ದೇಶಗಳ ಸಂಖ್ಯೆ ಹೆಚ್ಚುತ್ತಲೇ ಇರಬಹುದು. ಆದರೆ ತೈವಾನ್‌ಗೆ ಹಾರಿಹೋಗಿ ಇಳಿಯುವ ಅಂತಾರಾಷ್ಟ್ರೀಯ ವಿಮಾನಗಳೂ ಹೆಚ್ಚುತ್ತಿವೆ. ಅಷ್ಟೇಕೆ, ತೈವಾನ್ ನ ರಾಷ್ಟ್ರೀಯ ಬ್ಯಾಂಕ್ ಖಾತೆಯಲ್ಲಿರುವ ಹಣದ ಮೊತ್ತವೂ ಏರಿಕೆಯಾಗುತ್ತಿದೆ. ೨೦೨೪ರ ಎರಡನೇ ತ್ರೈಮಾಸಿಕವೊಂದರಲ್ಲೇ ತೈವಾನ್ ೨೧,೮೧೯ ಮಿಲಿಯನ್ ಡಾಲರ್ ವಿದೇಶಿ ವ್ಯಾಪಾರದ ಚಾಲ್ತಿ ಖಾತೆ ಮಿಗತೆ ಯನ್ನು ದಾಖಲಿಸಿದೆ. ಇದು ಅಮೆರಿಕನ್ ಡಾಲರ್‌ನಲ್ಲಿರುವ ಲೆಕ್ಕ. ೨೦೧೨ ಮತ್ತು ೨೦೨೨ರ ನಡುವಿನ ದಶಕದಲ್ಲಿ ತೈವಾನ್‌ನ ಚಾಲ್ತಿ ಖಾತೆ ಉಳಿತಾಯವು ಅಲ್ಲಿನ ಜಿಡಿಪಿಯ ಸರಾಸರಿ ಶೇ.೧೨.೭ರಷ್ಟಿತ್ತು. ಆಗ ಏಷ್ಯಾ ಪೆಸಿಫಿಕ್‌ನ ಚಾಲ್ತಿ ಖಾತೆ ಉಳಿತಾಯದ ಸರಾಸರಿ ಕೇವಲ ಶೇ.೧.೯ರಷ್ಟಿತ್ತು.

ಗಣಿತಕ್ಕಿಂತ ಕಡಿಮೆ ಅರ್ಥಶಾಸ್ತ್ರವನ್ನು ಬಲ್ಲವರಿಗೂ ತೈವಾನ್ ಆರ್ಥಿಕವಾಗಿ ಎಷ್ಟು ಸುಸ್ಥಿತಿಯಲ್ಲಿದೆ ಎಂಬುದು ತಿಳಿಯುತ್ತದೆ. ಸದಾ ಆಕ್ರಮಣಶೀಲ ಹಾಗೂ ಸಾಮ್ರಾಜ್ಯ ವಿಸ್ತರಣೆಯ ಮನಸ್ಥಿತಿಯಲ್ಲೇ ಇರುವ ಚೀನಾ ಇನ್ನು ಮೂರು ವರ್ಷಗಳಲ್ಲಿ ತೈವಾನನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಅದಕ್ಕಿನ್ನೂ ಒಂದು ಸಾವಿರ ದಿನಗಳಷ್ಟು ದೂರದ ಕಾಲಾವಕಾಶವಿದೆ. ಇದಕ್ಕೆ ತೈವಾನ್ ನೀಡಿದ ಪ್ರತಿಕ್ರಿಯೆಯೂ ದಿಟ್ಟವಾಗಿಯೇ ಇದೆ. ಏಕೆಂದರೆ ತೈವಾನಿಗರು ಭವಿಷ್ಯದ ಒಳ್ಳೆಯ ದಿನಗಳನ್ನು ಅಬಾಕಸ್ ಮೂಲಕ ಲೆಕ್ಕಹಾಕುತ್ತಿದ್ದಾರೆಯೇ ಹೊರತು ಅವಸಾನದ ದಿನಗಳನ್ನು ಅಪ್ಪಿತಪ್ಪಿಯೂ ಎದುರು ನೋಡುತ್ತಿಲ್ಲ. ಹಾಗಿದ್ದರೆ ಚೀನಾ ತಪ್ಪು ಲೆಕ್ಕಾಚಾರ ಹಾಕಿದೆಯೇ? ಅದರ ರಾಜಕೀಯ ಮಹತ್ವಾಕಾಂಕ್ಷೆ ತಪ್ಪು ಹಳಿಯಲ್ಲಿ ಓಡುತ್ತಿದೆಯೇ? ಟಿಬೆಟ್ ದೇಶವನ್ನು ನುಂಗಿಹಾಕಿದ ಚೀನಾಕ್ಕೆ ಇನ್ನೂ ಅದನ್ನು ಜೀರ್ಣಿಸಿಕೊಳ್ಳಲು ಆಗಿಲ್ಲ. ಸದ್ಯ ಜಗತ್ತಿನಲ್ಲಿ ಎಲ್ಲಾ ನೆರೆರಾಷ್ಟ್ರಗಳ ಜತೆಗೂ ಗಡಿ ಸಂಘರ್ಷ ಹೊಂದಿರುವ ಏಕೈಕ ದೇಶವೆಂದರೆ ಬಹುಶಃ ಚೀನಾ ಮಾತ್ರ. ಜಪಾನ್, ರಷ್ಯಾ, ವಿಯೆಟ್ನಾಂ, ಫಿಲಿಪ್ಪೀನ್ಸ್‌ನಿಂದ ಹಿಡಿದು ಹಿಮಾಲಯದ ಗಡಿಯಲ್ಲಿರುವ ಎಲ್ಲಾ ದೇಶಗಳ ಜತೆ ಚೀನಾ ಕಿತ್ತಾಡುತ್ತಿದೆ. ೧೯೪೮ರಲ್ಲಿ ಭಾರತ ದಿಂದ ವಶಪಡಿಸಿಕೊಂಡಿದ್ದ ಕಾಶ್ಮೀರದ ತುಣುಕನ್ನು ಪಾಕಿಸ್ತಾನವು ಚೀನಾಕ್ಕೆ ಧಾರೆಯೆರೆದು ಕೊಟ್ಟು ಬೀಜಿಂಗ್‌ನ ಮಾಲೀಕರು ಹೇಳಿದ್ದಕ್ಕೆ ತಲೆ ಅಲ್ಲಾಡಿಸಿಕೊಂಡು ಕುಳಿತಿದೆ. ಈಗ ಬೀಜಿಂಗ್‌ನ ಫೈಟರ್ ಜೆಟ್‌ಗಳು ತೈವಾನ್‌ನ ಸಮುದ್ರದ ಮೇಲೆ ಸದ್ದು ಮಾಡತೊಡಗಿವೆ. ಚೀನಾದ ಸಮರ ನೌಕೆಗಳು ತೈವಾನ್‌ನ ಸಮೀಪಕ್ಕೆ ತೆರಳಿ ಅಬ್ಬರದ ಅಲೆಗಳನ್ನು ಎಬ್ಬಿಸಿ ದಡಕ್ಕೆ ತಳ್ಳುತ್ತಿವೆ. ಆದರೆ ತೈವಾನ್‌ನಲ್ಲಿ ಮಾತ್ರ ಯಾರೂ ಹೆದರುತ್ತಿಲ್ಲ.

ನಿಜಕ್ಕೂ ಹೆದರಬೇಕಾದ ಪರಿಸ್ಥಿತಿಯಿದ್ದರೂ ಅಲ್ಲಿನ ಸರಕಾರ ಆತಂಕದಲ್ಲಿ ಇಲ್ಲ. ಏಕೆ ತೈಪೇಯಿಗೆ ಇಷ್ಟೊಂದು ಆತ್ಮವಿಶ್ವಾಸ? ಏಕೆಂದರೆ, ತೈವಾನ್‌ನ ಸೆಮಿಕಂಡಕ್ಟರ್ ಉದ್ದಿಮೆಗಳು ಅಷ್ಟೊಂದು ಪ್ರಬಲವಾಗಿವೆ. ದೇಶದ ಜಿಡಿಪಿಯ ಕಾಲು ಭಾಗದಷ್ಟು ಮೌಲ್ಯದ ಸೆಮಿಕಂಡಕ್ಟರ್‌ಗಳನ್ನು ಅದು ವಿದೇಶಗಳಿಗೆ ರಫ್ತು ಮಾಡುತ್ತದೆ. ಇಂಟರ್ನೆಟ್ ಜಾಲಾಡಿದರೆ ನಿಮಗೆ ತೈವಾನ್‌ನ ಸೆಮಿಕಂಡಕ್ಟರ್ ಉದ್ದಿಮೆಯ ಅಗಾಧತೆ ಚೆನ್ನಾಗಿ ತಿಳಿಯುತ್ತದೆ. ತೈವಾನ್‌ನ ಸೆಮಿಕಂಡಕ್ಟರ್‌ಗಳ ಬಹುದೊಡ್ಡ ಆಮದುದಾರ ಅಮೆರಿಕ. ಹೀಗಾಗಿ ತೈವಾನ್‌ಗೆ ಅಮೆರಿಕ ಎಷ್ಟು ಅಗತ್ಯವಿದೆಯೋ ಅಮೆರಿಕಕ್ಕೆ ತೈವಾನ್ ಕೂಡ ಅಷ್ಟೇ ಅಗತ್ಯವಿದೆ. ಆಧುನಿಕ ಜಗತ್ತಿಗೆ ಸೆಮಿಕಂಡಕ್ಟರ್‌ಗಳೇ ಮಿದುಳು. ಇಂದು ನಮ್ಮ ಬದುಕಿನ ಪ್ರತಿಯೊಂದು ರಂಗವನ್ನೂ ಚಿಪ್‌ಗಳು ಆವರಿಸಿಕೊಂಡಿವೆ. ಅವು ನಮ್ಮ ಅಗತ್ಯಗಳನ್ನು, ನಮ್ಮ ಐಷಾರಾಮವನ್ನು, ನಮ್ಮ ಆದಾಯವನ್ನು, ನಮ್ಮ ಕೆಲಸದ ಪರಿಣಾಮವನ್ನು ಹೀಗೆ ಎಲ್ಲವನ್ನೂ ನಿರ್ಧರಿಸುತ್ತಿವೆ. ಅವು ೨೧ನೇ ಶತಮಾನದ ಹೃದಯ, ಮನಸ್ಸು ಮತ್ತು ದೇಹ ಎಲ್ಲವೂ ಆಗಿವೆ.

ಸೆಮಿಕಂಡಕ್ಟರ್ ಉದ್ದಿಮೆಯಲ್ಲಿ ತೈವಾನ್ ಯಾವ ಪರಿ ಬೆಳೆದು ನಿಂತಿದೆ ಮತ್ತು ಜಾಗತಿಕ ಚಿಪ್ ಲೋಕವನ್ನು ತೈವಾನ್ ಹೇಗೆ ಆಳುತ್ತಿದೆ ಅಂದರೆ, ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ನೋಡಿದರೆ ಎಂಥವ ರಿಗೂ ಅಚ್ಚರಿಯಾಗುತ್ತದೆ. ಜಗತ್ತಿನ ಶೇ.೯೦ರಷ್ಟು ಅತ್ಯಾಧುನಿಕ ಸೆಮಿಕಂಡಕ್ಟರ್‌ಗಳನ್ನು ಈ ಪುಟ್ಟ ದೇಶ ಉತ್ಪಾದಿಸುತ್ತಿದೆ. ಕ್ವಾಂಟಂ ಕಂಪ್ಯೂಟಿಂಗ್ ಅಥವಾ ಕೃತಕ ಬುದ್ಧಿಮತ್ತೆ (ಎಐ) ಅಥವಾ ನನಗೆ ಗೊತ್ತಿಲ್ಲದ ಈಗಿನ ಕಾಲದ ಇನ್ನೂ ಏನೇನೋ ತಾಂತ್ರಿಕ ಆವಿಷ್ಕಾರಗಳಿಗೆ ಅಗತ್ಯವಿರುವ ಸುಧಾರಿತ ಚಿಪ್‌ಗಳು ಇವು. ಇದಕ್ಕೆ ವ್ಯತಿರಿಕ್ತವಾಗಿ, ಚೀನಾ ತನಗೆ ಅಗತ್ಯವಿರುವ ಸೆಮಿಕಂಡಕ್ಟರ್‌ಗಳ ಪೈಕಿ ಶೇ.೧೬ರಷ್ಟನ್ನು ಮಾತ್ರ ತಾನೇ ಉತ್ಪಾದಿಸುತ್ತಿದೆ. ನಂತರ ಪ್ರತಿ ವರ್ಷ ೪೦೦ ಬಿಲಿಯನ್ ಡಾಲರ್ ಮೌಲ್ಯದ ಚಿಪ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಟಿಎಸ್‌ಎಂಸಿ ಎಂಬ ಒಂದು ತೈವಾನ್ ಕಂಪನಿಯು ಜಗತ್ತಿನ ಸೆಮಿಕಂಡಕ್ಟರ್ ಮಾರುಕಟ್ಟೆ ಯಲ್ಲಿ ಶೇ.೫೬.೭ರಷ್ಟು ಪಾಲು ಹೊಂದಿದೆ!

ಎರಡನೇ ಸ್ಥಾನದಲ್ಲಿರುವ ಸ್ಯಾಮ್ಸಂಗ್ ಕಂಪನಿ ಕೇವಲ ಶೇ.೮.೫ರಷ್ಟು ಪಾಲು ಹೊಂದಿದೆ. ಇದರ ಸಮೀಪಕ್ಕೆ ಸುಳಿಯುವ ಯೋಗ್ಯತೆಯಿರುವ ಒಂದೇ ಒಂದು ಅಮೆರಿಕನ್ ಕಂಪನಿಯೆಂದರೆ ಗ್ಲೋಬಲ್ ಫೌಂಡ್ರಿಸ್.
ಜಾಗತಿಕ ಸೆಮಿಕಂಡಕ್ಟರ್ ವ್ಯವಹಾರದಲ್ಲಿ ಅದರ ಪಾಲು ಶೇ.೬.೬ರಷ್ಟಿದೆ. ಯಾರು ಕೇಳಿಸಿಕೊಳ್ಳಲು ಸಿದ್ಧರಿದ್ದಾರೋ ಅವರೆಲ್ಲರಿಗೂ ತೈವಾನ್ ಇತ್ತೀಚಿನ ವರ್ಷಗಳಲ್ಲಿ ತಾನು ಚೀನಾಕ್ಕೆ ರಫ್ತು ಮಾಡುವ ಸೆಮಿ ಕಂಡಕ್ಟರ್‌ಗಳ ಪ್ರಮಾಣ ಇಳಿಕೆಯಾಗಿ, ಅಮೆರಿಕಕ್ಕೆ ರಫ್ತು ಮಾಡುವ ಪ್ರಮಾಣ ಜಾಸ್ತಿಯಾಗಿದೆ ಎಂದು ಖುಷಿಯಿಂದ ಹೇಳುತ್ತದೆ. ಹಾಗಿದ್ದರೆ ಬೀಜಿಂಗ್‌ನಲ್ಲಿ ಕುಳಿತ ಯಾರಾದರೂ ತಲೆಮಾಸಿದ ನಾಯಕ ತೈವಾನ್ ಮೇಲೆ ಯುದ್ಧ ನಡೆಸುವ ಆದೇಶಕ್ಕೆ ಸಹಿ ಹಾಕಿದರೆ ಏನಾಗುತ್ತದೆ ಎಂಬುದನ್ನು ಈಗ ನೋಡೋಣ. ಯುದ್ಧ ನಡೆಸುವ ಮೂಲಕ ತೈವಾನ್‌ನಲ್ಲಿರುವ ಎಲ್ಲಾ ಸೆಮಿಕಂಡಕ್ಟರ್ ಕಾರ್ಖಾನೆಗಳನ್ನು ಸುಸ್ಥಿತಿಯಲ್ಲೇ ತನ್ನ ವಶಕ್ಕೆ ಪಡೆದುಕೊಳ್ಳಲು ಚೀನಾ ಮುಂದಾಗುತ್ತದೆ.

ಇದು ಥಿಯರಿಯಾಯಿತು. ಆದರೆ, ಪ್ರಾಯೋಗಿಕವಾಗಿ ಏನಾಗುತ್ತದೆ? ತಾನು ಕಷ್ಟಪಟ್ಟು ಕಟ್ಟಿದ ಚಿಪ್ ಘಟಕಗಳನ್ನು ಪುಕ್ಕಟೆಯಾಗಿ ಚೀನಾದ ಮಡಿಲಿಗೆ ಹಾಕಿ ಕೈಮುಗಿಯುವುದರ ಬದಲು ಅವುಗಳನ್ನು ತನ್ನ
ಕೈಯಾರೆ ನಾಶಪಡಿಸುವುದಕ್ಕೆ ತೈವಾನ್‌ಗೆ ಅಡ್ಡಿಯಾದರೂ ಏನಿದೆ! ಚೀನಾ ಯುದ್ಧ ಸಾರಿದಾಗ ಅಮೆರಿಕ ತನ್ನ ನೆರವಿಗೆ ಬರಲು ನಿರಾಕರಿಸಿದರೆ ತೈವಾನ್ ಹೀಗೆ ಮಾಡಬಹುದು. ಇಷ್ಟೇ ಅಲ್ಲ, ಇನ್ನಷ್ಟು ಸಾಧ್ಯತೆಗಳು ಗಾಬರಿ ಹುಟ್ಟಿಸುವಂತಿವೆ. ತೈವಾನ್ ನವರು ಸೆಮಿಕಂಡಕ್ಟರ್ ಪೂರೈಕೆಯನ್ನು ನಿಲ್ಲಿಸಿದರೆ ಅಮೆರಿಕದ ಸೂಪರ್ ಪವರ್ ತಂತ್ರಜ್ಞಾನ ದೈತ್ಯ ಕಂಪನಿಗಳೆಲ್ಲ ಸುದೀರ್ಘ ಕಾಲ ಬಾಗಿಲು ಮುಚ್ಚಬೇಕಾಗುತ್ತದೆ. ಆಪಲ್, ನಿವಿಡಿಯಾ ಹಾಗೂ ಕ್ವಾಲ್ಕಮ್‌ನಂಥ ಕಂಪನಿಗಳು ದಿವಾಳಿಯಾಗುತ್ತವೆ.

ಇವುಗಳ ನಾಯಕತ್ವದಲ್ಲಿ ಇನ್ನೂ ಸಾಕಷ್ಟು ಕಂಪನಿಗಳು ಬಂದ್ ಆಗುತ್ತವೆ. ಇದು ದೊಡ್ಡದೊಂದು ಅನಾಹುತದ ಆರಂಭ ಮಾತ್ರ. ನಂತರ ಅಮೆರಿಕದ ಉತ್ಪನ್ನಗಳು ಮಾರುಕಟ್ಟೆಯಿಂದ ಕಣ್ಮರೆಯಾಗುತ್ತವೆ. ಷೇರು ಮಾರುಕಟ್ಟೆ ನೆಲಕಚ್ಚುತ್ತದೆ. ಜನರು ನೌಕರಿ ಕಳೆದುಕೊಳ್ಳುತ್ತಾರೆ. ನಗರಗಳು ನಿಸ್ತೇಜವಾಗುತ್ತವೆ. ಆರ್ಥಿಕತೆ ಕುಸಿಯುತ್ತದೆ. ಇಂಥ ಬೆಳವಣಿಗೆ ಈ ಹಿಂದೆ ಆದ ಉದಾಹರಣೆಗಳಿವೆ. ಆಗ ಏನು ಮಾಡಬೇಕೆಂಬುದು ಗೊತ್ತಾಗದೆ ವಾಷಿಂಗ್ಟನ್ ಕೈಚೆಲ್ಲಿ ಕುಳಿತಿತ್ತು. ರಷ್ಯಾ ಇದನ್ನೆಲ್ಲ ಆರಾಮ ಕುರ್ಚಿಯಲ್ಲಿ ಕುಳಿತು ನೋಡುತ್ತಾ ಮಜಾ ತೆಗೆದುಕೊಳ್ಳುತ್ತಿದೆ. ಏಕೆಂದರೆ ರಷ್ಯಾ ತನಗೆ ಬೇಕಾದಷ್ಟು ಸೆಮಿಕಂಡಕ್ಟರ್ ಚಿಪ್‌ಗಳನ್ನು ತಾನೇ ತಯಾರಿಸಿಕೊಳ್ಳುತ್ತದೆ. ಉಕ್ರೇನ್ ಯುದ್ಧದ ಬಳಿಕ ಜಗತ್ತು ಹೇರಿದ ನಿರ್ಬಂಧ ಇದಕ್ಕೆ ಕಾರಣವಲ್ಲ. ಅದಕ್ಕೂ ಮೊದಲಿನಿಂದಲೇ ರಷ್ಯಾದಲ್ಲಿ ಸೆಮಿಕಂಡಕ್ಟರ್ ಉದ್ದಿಮೆಯಿದೆ.

ಬೀಜಿಂಗ್‌ನಲ್ಲಿರುವ ಯಾರಾದರೊಬ್ಬ ಬುದ್ಧಿವಂತನಿಗಾದರೂ ವಸ್ತುಸ್ಥಿತಿ ಏನೆಂಬುದು ಅರ್ಥವಾಗಬೇಕು. ಈಗಿನ ಜಗತ್ತಿನಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಅಂಶಗಳು ೨೦ನೇ ಶತಮಾನದ್ದಾಗಿದ್ದರೆ, ಸಂಘರ್ಷದ ಪರಿಣಾಮ ೨೧ನೇ ಶತಮಾನದ್ದಾಗಿರುತ್ತದೆ. ಹೀಗಾಗಿ ಈಗ ನಡೆಯುವ ಜಾಗತಿಕ ಸಂಘರ್ಷಗಳು ಸೈದ್ಧಾಂತಿಕವಾಗಿರಬೇಕು. ಸಾಧ್ಯವಾದರೆ ಅದು ಸ್ವಾತಂತ್ರ್ಯ ಮತ್ತು ಸರ್ವಾಧಿಕಾರದ ನಡುವೆ ಜನರ ಅಸ್ತಿತ್ವಕ್ಕೆ ಯಾವುದು ಒಳ್ಳೆಯದು ಎಂಬ ವಾದದಿಂದ ಆರಂಭವಾಗಬೇಕು. ತೈವಾನ್‌ನ ಉದ್ದೇಶ ಮತ್ತು ಚಿಂತನೆ ಬಹಳ ಪ್ರಾಕ್ಟಿಕಲ್ ಆಗಿದೆ. ನಿಮ್ಮಲ್ಲಿ ಹೋರಾಡಿ ಗೆಲ್ಲುವ ಶಕ್ತಿ ಇಲ್ಲ ಎಂದಾದರೆ, ಆ ಶಕ್ತಿ ಇರುವವರಿಗೆ ಅನಿವಾ ರ್ಯರಾಗಿ. ಬುದ್ಧಿವಂತಿಕೆ ಇದಲ್ಲವೇ?

ಕೌಟುಂಬಿಕ ಪ್ರವಾಸ ಮುಗಿಸಿ ಸಿಂಗಾಪುರದಿಂದ ಭಾರತಕ್ಕೆ ವಾಪಸಾಗುವಾಗ ಪೂರ್ವಪಿತೃಗಳನ್ನು ಪೂಜಿಸುವ ವಿಷಯದಲ್ಲಿ ಇನ್ನೂ ಕೆಲ ಪಾಠಗಳನ್ನು ಕಲಿತಿದ್ದೇನೆ. ಪೂರ್ವ ದೇಶಗಳಲ್ಲಿ ಸಂಜೆಯ ಊಟವನ್ನು ಬಹಳ ಬೇಗ ಮಾಡುತ್ತಾರೆ. ಸಿಂಗಾಪುರದ ‘ಮರೀನಾ ಬೇ’ಯಲ್ಲಿ ಆವತ್ತು ನಾವು ಟೇಬಲ್ ಮುಂದೆ ಕುಳಿತಿದ್ದಾಗ ಸೂರ್ಯ ಇನ್ನೂ ಪೂರ್ತಿ ಕಣ್ಮರೆಯಾಗಿರಲಿಲ್ಲ. ದಿಗಂತದಲ್ಲಿ ಬೆಳಕಿತ್ತು. ಕ್ರಿಕೆಟ್ ಮ್ಯಾಚ್ ವೇಳೆ ದೊಡ್ಡದೊಂದು ಬಲೂನ್ ಹಾರಿಬಿಟ್ಟಿರುತ್ತಾರಲ್ಲವೇ, ಆ ರೀತಿಯ, ನೋಡುವುದಕ್ಕೆ ಡ್ರೋನ್‌ನಂತೆ ಕಾಣುತ್ತಿದ್ದ ವಸ್ತುವೊಂದು ನಮ್ಮ ಕಣ್ಮುಂದೆ ಎತ್ತರದ ಆಗಸದಲ್ಲಿ ಫಳಫಳ ಹೊಳೆಯುತ್ತಾ ಹಾರುತ್ತಿತ್ತು.

ಅದನ್ನು ನೋಡಿ ನನ್ನ ಒಂಭತ್ತು ವರ್ಷದ ಮೊಮ್ಮಗನ ಕಲ್ಪನೆಗಳಿಗೆ ರೆಕ್ಕೆಪುಕ್ಕ ಬಂತೆಂದು ಕಾಣಿಸುತ್ತದೆ. ಒಂದು ತರಲೆ ಪ್ರಶ್ನೆ ಕೇಳಿದ. ‘ತಾತ, ನೀವೊಂದು ಅಂತರಿಕ್ಷ ನೌಕೆಯಲ್ಲಿರುವ ಲೋಹದ ಬಾಕ್ಸ್ ನಲ್ಲಿ ಸೇಫ್ಟಿ ಬೆಲ್ಟ್ ಕಟ್ಟಿಕೊಳ್ಳದೆ ಕುಳಿತಿದ್ದೀರಿ ಎಂದುಕೊಳ್ಳಿ. ನಾನು ಮೂರು ಲಕ್ಷ ಡಾಲರ್ ಕೊಡುತ್ತೇನೆಂದು ಹೇಳಿದರೆ ಅಲ್ಲಿಂದ ಜಿಗಿಯುತ್ತೀರಾ?’. ನನ್ನೊಳಗಿನ ಸಾಕ್ರೆಟೀಸ್ ಜಾಗೃತನಾದ. ‘ನಾನು ಅಂತರಿಕ್ಷ ನೌಕೆಯಿಂದ ಜಿಗಿದರೆ ಸಾಯುತ್ತೇನೆ ಕಣೋ. ಸತ್ತ ತಾತ ಮೂರು ಲಕ್ಷ ಡಾಲರ್ ತೆಗೆದುಕೊಂಡು ಏನು ಮಾಡುತ್ತಾನೆ?’ ಎಂದು ಕೇಳಿದೆ. ಅವನು ಕ್ಷಣಮಾತ್ರವೂ ಯೋಚಿಸದೆ ಮರುಪ್ರಶ್ನೆ ಹಾಕಿದ- ‘ನನ್ನ ಹೆಸರಿಗೆ ವಿಲ್ ಮಾಡಿದ್ದೀರಾ?’. ಈ ಕತೆಯ ನೀತಿ: ಭವಿಷ್ಯದ ಜತೆಗೆ ವಾದ ಮಾಡಬೇಡಿ. ಅವರು ಹೇಳಿದ್ದನ್ನು ಒಪ್ಪಿಕೊಳ್ಳಿ. ಆಗ ನೀವು ಮಹಾಲಯದ ತಿಂಗಳಿನಲ್ಲಿ ಮರಳಿ ಭೂಮಿಗೆ ಬಂದಾಗ ನಿಮಗಾಗಿ ಗಂಧದ ಕಡ್ಡಿಗಳು ಉರಿಯುತ್ತಿರಬಹುದು.

(ಲೇಖಕರು ಹಿರಿಯ ಪತ್ರಕರ್ತರು)