Sunday, 15th December 2024

ಸರಹದ್ದಿನ ಊರಲ್ಲಿ ಕೊನೆಯಿಲ್ಲದ ಪಯಣ

ಅಲೆಮಾರಿಯ ಡೈರಿ

mehandale100@gmail.com

ಈ ರಸ್ತೆಗಿಳಿದರೆ ಬೇರೆಡೆಗೆ ಹೋಗಲೇ ಒಲ್ಲದ ಪ್ರವಾಸಿಗರು ಅದರ ಪಕ್ಕದ ಇರುವ ಇನ್ನೊಂದು ಸ್ಥಳ ಸ್ಥಳೀಯ ದೇವಿಯ ದೇವಸ್ಥಾನ, ಕಾಷ್ಟ ಕಲಾಕೃತಿಯ ಐನೂರು ವರ್ಷ ಹಳೆಯ ಇತಿಹಾಸ ಮತ್ತು ಆಗಿನ ಶೈಲಿಯ ಆವರಣ ಒಂದು ಬ್ರೇಕ್‌ಗೆ ಒತ್ತಾಯಿಸುವುದರಲ್ಲಿ ಅನುಮಾನವಿಲ್ಲ.

ನೀವು ಸಾಹಸಿಗರಾ..ಬನ್ನಿ, ಸುಮ್ಮನೆ ಕೂತೆದ್ದು ಚೆಂದವಾಗಿ ಆರಾಮವಾಗಿ ದಿನಗಳೆಯ ಬೇಕಾ ಬನ್ನಿ, ಹಿಮದ ಹೊದಿಕೆಯನ್ನು ಸವರಿ ಕೈ ಜೋಮು ಹಿಡಿಸಿಕೊಳ್ಳಬೇಕಾ ಬನ್ನಿ, ಸುಮ್ಮನೆ ಪೆಯಿಂಗ್ ಗೆಸ್ಟ್ ಆಗಿ ಇದ್ದು ಬೀಡಬೇಕಾ ಬನ್ನಿ, ಬೆಟ್ಟ ಹತ್ತಬೇಕಾ ಬನ್ನಿ,
ಚಾರಣ ಮಾಡಿ ಅಲ್ಲಿಯೇ ಟೆಂಟು ಹಾಕಿಕೊಂಡು ಮೇಲ್ಮುಖವಾಗಿ ಬಿದ್ದುಕೊಳ್ಳು ವವರಾ? ಬನ್ನಿ, ನದಿಯಲ್ಲಿ ಮೈ ಹಿಮಗಟ್ಟಿ ದ್ದರೂ ಪರವಾಗಿಲ್ಲ ಈಸಬೇಕಾ.. ಬನ್ನಿ, ತೀರ ಭಾರತದ ಸರಹದ್ದು ತಲುಪಬೇಕಾ.. ಅದಕ್ಕೂ ಸೈ ಬನ್ನಿ, ಕೊನೆಗೆ ಹಿಂದೊಮ್ಮೆ ಹೆದ್ದಾರಿಯಾಗಿದ್ದ ಭಾರತ ಟಿಬೇಟ್ ಸೇರಿಸಿಕೊಂಡು ಚೈನಾ ದಾಟುತ್ತಿದ್ದ ಗ್ರಾಂಡ್ ಟ್ರಂಕ್ ರೋಡ್‌ನ ಮೇಲೆ ನೀವೂ ಕಾಲಾಡಿಸಿ, ಒಹೋ ಇ ಎಲ್ಲ ನಮ್ಮ ಹಳೆ ತಲೆಮಾರು ರೇಷ್ಮೆ ಮತ್ತು ಮಸಾಲೆ ಹೊತ್ತು ಸಾಗಿದ್ದೆ.. ಎಂದು ರೋಮಾಂಚನಗೊಳ್ಳಬೇಕೆ..? ಬನ್ನಿ.. ಏನೂ ಬೇಡಾ ಭಾರತದ ತುತ್ತ ತುದಿಯ ಸರಹದ್ದು ಎಲ್ಲಿದೆ ಅಲ್ಲಿಗೆ ಹೋಗಿ ಒಮ್ಮೆ ಬಾರ್ಡರ್ ಸವರಿ ಬರೋಣ ಅನ್ಸುತ್ತಾ? ಬನ್ನಿ ಸುಮ್ಮನೆ ಹಿಮಾಲಯದ ಈ ತುದಿಯ ನೆತ್ತಿಗೆ ಹತ್ತಿ, ಒಂದಿಷ್ಟು ಕಷ್ಟಪಟ್ಟು ಚಾರಣ ಮಾಡಿ ಮೇಲೇರಿಬಿಡಿ.

ಸೀದಾ ಚಿತ್ಕುಲ್‌ನ ನೆತ್ತಿ ಸವರುತ್ತೀರಿ. ಆಗ ಮೇಲೆ ಹೇಳಿದ ಎಲ್ಲ ಭಾವಕ್ಕೂ ಪಕ್ಕಾಗುತ್ತಾ, ಏನೆ ಮಾಡಬಹುದು ಎಂದು ಏಣಿಸುತ್ತಾ ಕೂತುಕೊಳ್ಳಿ. ಆದರೆ ತಲುಪುವುದು ಕೂಡ ಅಷ್ಟು ಸುಲಭವಿಲ್ಲ. ಕೈಗೊಂದು ಕಾಲಿ ಗೊಂದು ಓಲಾ, ಊಬರ್ ಮೊದಲೇ ಇಲ್ಲ. ಅನಾಮತ್ತು ಸಾಲುಸಾಲು ಪಯಣ ಬೇಡುವ ಸಹವಾಸ ಇದರದ್ದು. ಕಾರಣ ಹತ್ತಿರ ಹತ್ತಿರ ಎಂದರೆ ವಿಮಾನ, ಬಸ್ಸು ಇತ್ಯಾದಿ ಹಿಡಿದು ಮೊದಲು ಚಂಡಿಗಢ್ ತಲುಪಬೇಕು.

ಅಲ್ಲಿಂದ ಶಿಮ್ಲಾಕ್ಕೆ ಎಂದಿನಂತೆ ನಿಮ್ಮ ಆಯ್ಕೆಯ ಪಯಣ. ಅಲ್ಲಿಂದ ಸ್ಥಳೀಯ ವಾಹನ ಅಥವಾ ಖಾಸಗಿ ವಾಹನ ಮಾಡಿ ಕೊಂಡು ನರಕುಂದಾಕ್ಕೆ ತಲುಪಿಕೊಂಡರೆ ಒಂದು ಹಂತ ಪೂರೈಸಿದಂತಾಗುತ್ತದೆ. ನರಕುಂದಾದಿಂದ ಸಟ್ಲಜ್ ನದಿಯ ತೆಕ್ಕೆಯ ಮೇಲೆ ಪಯಣಿಸುತ್ತ, ಆಚೆಗಿನ ಕರ್ಚಮ್ ಎಂಬ ಹಳ್ಳಿಯೂ ಅಲ್ಲದ ಊರೂ ಅಲ್ಲದ ಇತ್ಲಾಗೆ ಪಟ್ಟಣವೂ ಆಗದ ತ್ರಿಶಂಕು ಸ್ಥಳವನ್ನು ಸೇರಿಕೊಂಡರೆ ಆವತ್ತಿಗೆ ಎರಡನೆ ದಿನದ ಅರ್ಧ ಭಾಗವೂ ಮುಗಿದಿರುತ್ತದೆ ಪಯಣದಲ್ಲಿ.

ಈ ಕರ್ಚಮ್ ಡ್ಯಾಮ್ ಮತ್ತು ಸಾಂಗ್ಲಾ ತಿರುವಿಗೆ ಕಾಲುದಾರಿಯಲ್ಲಿ ಡ್ಯಾಮ್ ಮೇಲೆ ಹತ್ತಿಳಿದು ಎರಡುಮೂರು ಕಿ.ಮೀ.
ಕ್ರಮಿಸಿದರೆ ಚಿತ್ಕುಲ್‌ನತ್ತ ಈಗ ಮುಖ ಮಾಡಬಹುದು. ಆದರೂ ಮತ್ತೆ ಎರಡೂವರೆ ತಾಸಿನ ಪಯಣ ಬೇಡುವ ಘಟಿಯಾ ಜೀಪಿನಲ್ಲಿ ಏರಿಳಿಯುತ್ತಾ ಮೂವತ್ತು ಚಿಲ್ರೆ ಕಿ. ಮೀ. ಕ್ರಮಿಸಿದರೆ ಕರೆಕ್ಟಾಗಿ ಚಿತ್ಕುಲ್‌ನ ಪಾದಕ್ಕಿಳಿದಿರುತ್ತೀರಿ. ಇಲ್ಲಿ ತಾಸಿಗೆ ಹನ್ನೆರಡರಿಂದ ಹದಿನೈದು ಕಿ.ಮೀ. ಮಾತ್ರ ಕ್ರಮಿಸಬಹುದು. ಆಗೀಗ ಒಂದೊಂದು ಅಲ್ಲಲ್ಲಿಯವರೆಗೆ ಬಸ್ ಸೌಲಭ್ಯಗಳೂ ಇವೆ.

ಆದರೆ ಅದರದ್ದೇ ಆದ ಸಮಯ ಮತ್ತು ದಾರಿ ಮೇಲೆ ಡಿಪೆಂಡ್ . ಸಾಂಗ್ಲಾ ಅಥವಾ ರಿಕಾಂಗ್ ಪಿಂಗ್‌ವರೆಗೆ ಬಸ್ ಹಿಡಿದರೂ ಆದೀತು. ಅದೇ ಟ್ಯಾಕ್ಸಿಗಳು ಕನಿಷ್ಠ ಹದಿನೈದು ಸಾವಿರ ಕೇಳುತ್ತವೆ ಚಿತ್ಕುಲ್‌ನ ಪಾದಕ್ಕೆ ನಿಮ್ಮನ್ನು ತಲುಪಿಸಲು. ಹಾಗಾಗಿ ರೈಲ್ಲದರೂ, ವಿಮಾನ ಅಥವಾ ಬಸ್ ಎಲ್ಲಿಂದಾದರೂ ಚಂಡಿಗಢ ಅಥವಾ ಶಿಮ್ಲಾ ತಲುಪಿದರೆ ನಾನು ಮೇಲ್ಕಾಣಿಸಿದ ದಾರಿಯೇ ಇದ್ದುದರಲ್ಲಿ ಸೋವಿ. ಒಮ್ಮೆ ಚಿತ್ಕುಲ್ ತಲುಪಿದ ಮೇಲೆ ನಿಮ್ಮೆಲ್ಲ ಆಯಾಸ ಮತ್ತು ದಾರಿಯ ಸಂಕಟಗಳನ್ನು ಸ್ಥಳೀಯರು ಕಳೆದು ಬಿಡುತ್ತಾರೆ.

ತಮ್ಮ ಅತಿಥ್ಯದ ಮೂಲಕ ಮತ್ತು ಚಿತ್ಕುಲ್‌ನ ನಯನ ಮನೋಹರ ದೃಶ್ಯ ನಿಂತಲ್ಲಿ ಕೂತಲ್ಲಿ ಸೆಲಿ ಮಾಡುವ ಭರದಲ್ಲಿ ಸಮಯ
ಜಾರಿದ್ದೂ ಗೊತ್ತಾಗುವುದಿಲ್ಲ. ಅಂದ ಹಾಗೆ ಪರ್ವತದ ಕಡಿದಾದ ಅಂಚೊಂದರ ಕೊನೆಯಲ್ಲಿ ಬಿದ್ದು ಹೋಗುವಂತೆ ಅತು ನಿಂತಿರುವ ಈ ಚಿತ್ಕುಲ್‌ನ ಬೆನ್ನಿಗೆ ಕಿನ್ನರ್ ಕೈಲಾಸದ ಪರದೆ ಇದೆ. ಪಂಚ ಕೈಲಾಸ ಚಾರಣಗಳಲ್ಲಿ ಇದೂ ಒಂದು ಪ್ರಮುಖ ಚಾರಣದ ದಾರಿಯಾಗಿರುವುದರಿಂದ ಕಿನ್ನೂರ್ ವ್ಯಾಲಿ ಮತ್ತು ಚಿತ್ಕುಲ್ ಆತುಕೊಂಡಿವೆ. ಕಿನ್ನೂರ್ ವ್ಯಾಲಿ ಹಿಮಾಚಲದ ಕೆಲವೇ ಕೆಲವು ಅಪರಿಮಿತ ಸೌಂದರ್ಯದ ಕಣಿವೆಗಳಲ್ಲಿ ಒಂದು. ಹಾಗಾಗಿ ಅತ್ತಲಿಂದ ಲಖಾಂಗ್ ಪಾಸ್ ದಾಟುವಾಗಲೇ ಕಿನ್ನೂರ್ ತನ್ನ ಅದ್ಭುತತೆಯನ್ನು ಎತ್ತಿ ತೋರಿಸುತ್ತದೆ.

ಇದಕ್ಕೆಲ್ಲ ಕಾರಣ ಬಾಸ್ಪಾ ಎಂಬ ನದಿ. ಟಿಬೆಟ್ ಬಾರ್ಡರ್‌ನ ಎದೆಯ ಮೇಲೆ ರಭಸಕ್ಕೆ ಈಡಾಗುವ ಈ ನದಿಯ ಮೊದಲ ಊರು ಮತ್ತು ಭಾರತದ ಕೊನೆಯ ಊರು ಎರಡೂ ಚಿತ್ಕುಲ್ ಮಾತ್ರವೆ. ಹಾಗಾಗಿ ಬಾಸ್ಪಾ ನದಿಯ ದಂಡೆಗುಂಟ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದವರೆಗೆ ಬಣ್ಣಬಣ್ಣದ ಗಾಳಿಪಟದಂತೆ ಟೆಂಟುಗಳ ಜಾತ್ರೆ ನೋಡಲು ರಮಣೀಯ. ಸ್ವರ್ಗ ಮತ್ತು ಭೂಮಿಯ
ಮಧ್ಯದ ಭಾಗವೇ ಕಿನ್ನೂರ್ ಅನ್ನು ಗುರುತಿಸುವ ಮಟ್ಟಿಗೆ ಸೌಂದರ್ಯಕ್ಕೆ ಹೆಸರಾಗಿರುವ ಕಣಿವೆಯ ಭುಜದ ಮೇಲಿರುವ ಚಿತ್ಕುಲ್ ಎಲ್ಲ ದಿಕ್ಕಿನಲ್ಲೂ ಚಾರಣ ಹೊರಡಲು ಸಿದ್ಧವಿರುವ ತುದಿಗಳನ್ನೇ ಹೊಂದಿದೆ.

ವಿಭಿನ್ನ ಭೇಟಿಯ ಅವಕಾಶ ಮತ್ತು ಅನುಭವ ನಿಮ್ಮದಾಗ ಬೇಕೆಂದರೆ ನಾಲ್ಕೇ ಕಿ.ಮೀ. ದೂರ ಇರುವ ಐಟಿಬಿಪಿ ಚೆಕ್ ಪೋಸ್ಟ್‌ಗೆ ಭೇಟಿ ಕೊಡಬಹುದು. ಇದು ಇಂಡೊ ಟಿಬೇಟಿಯನ್ ಬಾರ್ಡರ್ ಪೋಲಿಸ್ ಇರುವ ಒಂದು ಔಟ್‌ಪೋಸ್ಟ್ ಮಾತ್ರ. ಆದರೆ ದಾರಿ ಮತ್ತು ಚಿತ್ರಣ ಅದ್ಭುತ. ಜತೆಗೆ ಮಾಡರೇಟ್ ಟ್ರೆಕ್‌ಗೆ ಹೇಳಿ ಮಾಡಿಸಿದಂತಿದ್ದು ಆಫ್ ಬೀಟ್ ಟ್ರಾವಲರ್‌ಗಳ ಸಂತೆಯೇ ಇಲ್ಲಿ ಗಿಜಿಗುಡುತ್ತಿರುತ್ತದೆ.

ಇದರ ಜತೆಗೆ ಹಿಂದೆಯೆ ರಾಣಿಕಂದ್ ಟಾಪ್, ಕಠಿಣ ಚಾರಣ ಮಾರ್ಗವಿದ್ದು ಹದಿನೈದು ಕಿ.ಮಿ. ದೂರದ ಟಾಪ್ ಹಿಮಾವೃತ ಯಾವಾಗಲೂ. ಕಿನ್ನರ್ ಕೈಲಾಸ ಯಾತ್ರಿ ಮತ್ತು ಪ್ರವಾಸಿಗರು ಈ ಟಾಪ್ ನೆನಪಿಟ್ಟುಕೊಂಡು ಮತ್ತೆ ದೌಡಾಯಿಸುವುದು ಇದರ ವಿಶೇಷ. ಇದೇ ಚಾರಣ ಇನ್ನೊಂದು ಮಗ್ಗುಲಿನಿಂದ ಕೆಳಗಿಳಿದರೆ ನೇರ ಲಖಾಂಗ್‌ಪಾಸ್‌ನ ನೆತ್ತಿಯ ಮೇಲೆ ವಿಹರಿಸಬಹುದು.

ವಿಶೇಷ ಎಂದರೆ ಇಲ್ಲಿ ಎಲ್ಲಿ ಹೋದರೂ ಬಂದರೂ ಕೂತರೂ ನಿಂತರೂ ನಿಲ್ಲದಿದ್ದರೂ ಮಲಗಿದ್ದರೂ ಕಣ್ಣು ಮಾತ್ರ ತೆರೆದಿದ್ದರೆ ಸಾಕು. ಬಾಕಿ ಎಲ್ಲ ನಯನ ಮನೋಹರವೇ. ಹಾಗಾಗಿ ಕೆಲವೇ ಕೆಲವು ಹೆಸರು ಮಾರ್ಕ್ ಮಾಡಿದ ಹಾಗೆ ದಾರಿಗಳನ್ನು ಮತ್ತು ಚಾರಣ ಪಥಗಳನ್ನು ಹೇಳುತ್ತಾರೇಯೇ ವಿನಃ ಮೂಲತಃ ಇದ್ದಬದ್ದ ಅಕ್ಕಪಕ್ಕದ ದಾರಿಗಳಲ್ಲ ಹೀಗೆ ಹತ್ತಿಳಿಯುವ ದಂಡುಗಳು ಕಾಣಸಿಗುತ್ತಲೇ ಇರುತ್ತವೆ.

ಅದರಲ್ಲೂ ತೀರ ಅಬ್ಬರದಲ್ಲಿ ಹರಿಯದೆ ಯಾವಾಗ ಬೇಕಿದ್ದರೂ ಒಡಲಿಗೆ ಇಳಿಯಿರಿ ಎಂಬಂತೆ ಸುಬಗನ ತರಹದ ಪೋಸು ಕೊಡುವ ಬಸ್ಪಾ ನದಿ ಅತಿ ದೊಡ್ಡ ಆಕರ್ಷಣೆ. ಪ್ರವಾಸಿಗ ಅಥವಾ ಚಾರಣ ತಂಡಗಳು ಏನಿಲ್ಲವೆಂದರೆ ಅರ್ಧ ಮುಕ್ಕಾಲು ದಿನ ಇ ಕಳೆದುಬಿಡುತ್ತಾರೆ. ಯಾವ ಕಡೆಯಿಂದ ನದಿಯ ಯಾವುದೇ ಮೂಲೆಗೆ ಹೋಗಿ ನಿಲ್ಲಿ ಬಾಸ್ಪಾ ನೀಡುವ ಪೋಸುಗಳೇ ಬೇರೆ. ಪ್ರತಿ ಬಾರಿಯೂ ಸೂರ್ಯನ ಬೆಳಕು ಏರಿದಂತೆಲ್ಲ ಕ್ಯಾಮೆರಾಗೆ ಲಭ್ಯವಾಗುವ ಗೋಲ್ಡನ್ ಲೈಟ್ ಪದೇಪದೇ ಚಿತ್ರಗಳನ್ನು ತೆಗೆಯಲು
ಪ್ರೇರೇಪಿಸುತ್ತದೆ.

ಹಾಗಾಗಿ ಇದೆಲ್ಲ ಹುಚ್ಚಿದ್ದವರು ಏಪ್ರಿಲ್ ನಿಂದ ಜುಲೈವರೆಗೆ ಇದನ್ನು ಆಯ್ದುಕೊಳ್ಳುವುದೇ ಲೇಸು. ಸೆಪ್ಟೆಂಬರ್‌ನಿಂದ ಅಕ್ಟೋಬರ್ ಕೊನೆವರೆಗಿನ ಸೂಕ್ತ ಕಾಲಾವಧಿಯಲ್ಲಿ ಪ್ರವಾಸ ಸಹ್ಯವಾದರೂ ಹೆಚ್ಚಿನ ಕಾಲ ಮೋಡ ಮುಸುಕಿದ ವಾತಾ ವರಣವೇ ಇಲ್ಲಿರುತ್ತದೆ. ಇನ್ನು ಬರುವಾಗಲೇ ಅನುಭವಕ್ಕೆ ದಕ್ಕುವ ಸಾಂಗ್ಲಾ – ಚಿತ್ಕುಲ್ ರಸ್ತೆಯ ಹಸಿರು ಮತ್ತು ಮಂಜಿನ ಪರ್ವತಗಳ ವಿವರಣೆಗೆ ದಕ್ಕದ ಮಿಂಚು. ಕೇವಲ ಈ ಇಪ್ಪತ್ತು ಕಿ.ಮಿ. ರಸ್ತೆಯಲ್ಲಿ ಪೂರ್ತಿ ದಿನ ಕಳೆಯಬಹುದಾದ ಆಮೋದ
ಇಲ್ಲಿದೆ.

ಈ ರಸ್ತೆಗಿಳಿದರೆ ಬೇರೆಡೆಗೆ ಹೋಗಲೇ ಒಲ್ಲದ ಪ್ರವಾಸಿಗರು ಅದರ ಪಕ್ಕದ ಇರುವ ಇನ್ನೊಂದು ಸ್ಥಳ ಸ್ಥಳೀಯ ದೇವಿಯ ದೇವ ಸ್ಥಾನ, ಕಾಷ್ಟ ಕಲಾಕೃತಿಯ ಐನೂರು ವರ್ಷ ಹಳೆಯ ಇತಿಹಾಸ ಮತ್ತು ಆಗಿನ ಶೈಲಿಯ ಆವರಣ ಒಂದು ಬ್ರೇಕ್‌ಗೆ ಒತ್ತಾಯಿಸುವು ದರಲ್ಲಿ ಅನುಮಾನವಿಲ್ಲ. ಈ ಸಾಂಗ್ಲಾ ದಾರಿಯ ಕೆಳಗಿಳಿದರೆ ದಕ್ಕುವ ಉತ್ತರಾಖಂಡ ಕಡೆಯ ಬೋರಾಸ್ ಪಾಸ್, ಹೇರ್‌ಪಿನ್ ಬೆಂಡ್‌ಗಳ ರೋಚಕ ರಸ್ತೆ. ಇಲ್ಲಿ ವಾಹನ ಚಾಲನೆ ಮತ್ತು ಹತ್ತಿಳಿಯುವುದರ ಬಗ್ಗೆ ಐಟಿಬಿಪಿ ಮತ್ತು ಸ್ಥಳೀಯ ಪೋಲಿಸರು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ.

ಕಾರಣ ಟಾರ್ ಎನ್ನುವುದು ನಿಲ್ಲ ಒಲ್ಲದ ಉರುಟು ಜಾರು ಮಣ್ಣಿನ ಈ ದಾರಿ, ಅನಾಹುತಕಾರಿ ಎತ್ತರದಿಂದ ಕೆಳಗಿನ ಕಣಿವೆಗೆ ಸಂಪರ್ಕ ಕಲ್ಪಿಸುತ್ತದೆ. ತಪ್ಪಿ ಅಕ್ಕ ಪಕ್ಕದ ಕಣಿವೆಗೆ ಜಾರಿದರೆ ಆ ವಾಹನ ಮತ್ತು ಜನರನ್ನು ದೇವರೂ ಕಾಪಾಡಲಾರ. ಇ ಇರಿಸಿರುವ ತಡೆಗೋಡೆಗಳು ಏನಾದರೂ ಸಹಾಯವಾದಾವು ಎನ್ನಿಸುವುದೇ ಇಲ್ಲ. ನೆಪಕ್ಕೆ ಮಾತ್ರ ಇರಿಸಿದಂತಿವೆ. ಇದರ ಎತ್ತರವೇ ಹದಿನೇಳು ಸಾವಿರ ಅಡಿಗೂ ಮೇಲ್ಪಟ್ಟು. ಈ ಚಿತ್ಕುಲ್ ಇರುವುದೇ ಹನ್ನೊಂದು ಸಾವಿರ ಅಡಿ ಎತ್ತರದ ಮೇಲೆ. ಆ ಎತ್ತರ ಏರಿ ಕೆಳಗಿಳಿಯುವ ಮಧ್ಯದಲ್ಲಿ ಲೆಕ್ಕ ತಪ್ಪಿ ವಿಪರೀತ ಎನ್ನಿಸುವ ಮಟ್ಟಿಗಿನ ಪರ್ವತ ಕೊರೆದ ದಾರಿಯಲ್ಲಿ ಚಲಿಸುತ್ತಾ ಸಾಹಸ ಗೈಯ್ಯುವುದು ರಿಸ್ಕಿ ಅಲ್ಲದೆ ಬೇರೆನಲ್ಲ.

ಹಾಗಾಗಿ ಈ ದಾರಿಯನ್ನು ಚಾರಣದ ದಾರಿಯಾಗಿ ಗುರುತಿಸಲಾಗಿದ್ದು ನಡೆದು ಏರಿಳಿಯುವವರಿಗೆ ಇದು ಸಾಹಸಿ ಮತ್ತು ರೋಮಾಂಚನಕಾರಿ ಪಯಣ. ಇನ್ನುಳಿದಂತೆ ಚಿತ್ಕುಲ್ ಕನಿಷ್ಠ ಸಂಪರ್ಕ ಮತ್ತು ಸಂಪನ್ಮೂಲದ ಊರು. ಆದರೆ ಅಥಿತಿಗಳನ್ನು ಕಾಯ್ದುಕೊಳ್ಳುವಲ್ಲಿ ಇವೆಲ್ಲ ಗೌಣವಾಗುತ್ತವೆ. ನಂಬಲಿಕ್ಕಿಲ್ಲ. ಎಲ್ಲ ಸಿಗ್ನಲ್ ಬಂದು ಮಾಡಿ ಕೇವಲ ಓದುತ್ತ, ಗಿಟಾರ್ ನುಡಿಸಿ ಕೊಂಡು ನದಿ ದಂಡೆಯ ಮೇಲೆ ಕೂತೆದ್ದು ಬರುವವರ ಲೆಕ್ಕ ಉಳಿದೆಲ್ಲಕ್ಕಿಂತಲೂ ಹೆಚ್ಚಾಗಿದೆ. ಮತ್ಯಾಕೆ ತಡ- ಒಮ್ಮೆ ಚಿತ್ಕುಲ್ ಸರಹದ್ದಿನಲ್ಲಿ ಸಣ್ಣ ದನಿ ನಿಮ್ಮದೂ ಹೊರಡಲಿ. ಬದುಕಿನ ತುಂಬ ಚೆಂದದ ಅನುಭವಕ್ಕೆ ಪಕ್ಕಾಗದಿದ್ದರೆ ಕೇಳಿ.