Friday, 13th December 2024

ಜೀವನದಲ್ಲಿ ಆಯ್ಕೆಗಳು ಬಹಳ ಮುಖ್ಯ

ಅಭಿವ್ಯಕ್ತಿ

ಡಾ.ಕೆ.ಪಿ.ಪುತ್ತುರಾಯ

ಕೆಲವಾರು ವಿಚಾರಗಳನ್ನು ಹೊರತುಡಿಸಿ, ನಮ್ಮ ಆಹಾರ – ಅಭ್ಯಾಸ, ಆಚಾರ – ವಿಚಾರ, ವೃತ್ತಿ- ಪ್ರವೃತ್ತಿ, ಶಿಕ್ಷಣ – ಸಾಂಸಾರಿಕ ಜೀವನಗಳೇ ಮೊದಲಾಗಿ, ಅನೇಕ ವಿಚಾರಗಳು, ನಮ್ಮ ಆಯ್ಕೆಯ ಪರಿಣಾಮವಾಗಿಯೇ ರೂಪುಗೊಂಡಿರುತ್ತವೆ. ಒಂದಂತು
ನಿಜ; ಭಗವಂತ ನಮಗೆ ಹಣೆಯನ್ನಷ್ಟೇ ಕೊಟ್ಟ; ಹಣೆಬರಹ ಬರೆದ, ಹೊಣೆಯನ್ನಲ್ಲ! ನಮ್ಮ ನಮ್ಮ ಹಣೆಬರಹವನ್ನು
ಬರೆದುಕೊಳ್ಳಬೇಕಾದವರು ನಾವೇ, ನಮ್ಮ ವೈಫಲ್ಯಗಳಿಗೆ ನನ್ನ ಹಣೆಬರಹ ಚೆನ್ನಾಗಿಲ್ಲ ಎಂದು ಹೇಳುತ್ತಾ ಜಾರಿಕೊಳ್ಳೋದು ತರವೂ ಅಲ್ಲ; ವೈಜ್ಞಾನಿಕವೂ ಅಲ್ಲ.

ದೇವರು ನಮಗೆ ಜೀವನವನ್ನಷ್ಟೆ ಕೊಟ್ಟ, ಜೀವಿಸುವ ಬಗೆಯನ್ನು ನಮಗೆ ಬಿಟ್ಟು ಬಿಟ್ಟ. ಜೀವನದಲ್ಲಿ ಹಲವಾರು ಆಯ್ಕೆಗಳು ಎದುರಾಗುತ್ತಿರುತ್ತವೆ. ಆಗ, ಆಯ್ಕೆಯ ಪ್ರಕ್ರಿಯೆ ಜಟಿಲವೆನಿಸಿದರೂ ಸರಿಯಾದುದನ್ನೇ ಆರಿಸಿ ಕೊಳ್ಳುವ ಅವಕಾಶ ಮತ್ತು ಜವಬ್ದಾರಿ ನಮ್ಮ ಕೈಯಲ್ಲಿದೆ. ಆಯ್ಕೆ ಸರಿಯಾಗಿದ್ದರೆ ಅದರ ಫಲಾನುಭವಿ ಗಳು ನಾವೇ. ಆದರೆ ತಪ್ಪು ಆಯ್ಕೆಯಾದರೂ ಅನುಭವಿಸಬೇಕಾದವರು ನಾವೇ. ಆದುದರಿಂದ ಆಯ್ಕೆಯ ವೇಳೆ ವಿವೇಕರಲಿ; ವಿವೇಚನೆ ಇರಲಿ, ವ್ಯವಧಾನವಿರಲಿ; ಸಾವಧಾನವಿರಲಿ!

ಹಾಗೆಂದು, ಎಲ್ಲಾ ವಿಷಯಗಳಲ್ಲಿ ಆಯ್ಕೆಗಳಿಗೆ ಅವಕಾಶವಿರುವುದಿಲ್ಲ. ಆಗ ಬೇರೆ ವಿಧಿ ಇಲ್ಲದೆ ಕೈಗೆ ಬಂದಿದ್ದನ್ನೇ ಸ್ವೀಕರಿಸ ಬೇಕಾಗುತ್ತದೆ. ಉದಾಹರಣೆಗೆ, ನಾವು ಜನಿಸುವ ದೇಶ, ಮನೆ – ಮತ – ಜಾತಿ – ಕುಲ ಯಾವುದು ನಮ್ಮ ಆಯ್ಕೆ ಅಲ್ಲ. ನಮ್ಮ ಹೆತ್ತವರು ಪೌರತ್ವನ್ನು ಪಡೆದಿರುವ ದೇಶದಲ್ಲಿ ಜನಿಸುತ್ತೇವೆ; ಮತ್ತೆ ಅದೇ ದೇಶದವರಾಗಿ ಗುರುತಿಸಲ್ಪಡುತ್ತೇವೆ. ಅಂತೆಯೇ ನಮ್ಮ ಹೆತ್ತವರು ಸೇರಿದ ಜಾತಿ ಮತಕ್ಕೆ ಸೇರಿದವರೆಂದು ಕರೆಯಲ್ಪಡುತ್ತೇವೆ. ನಮ್ಮ ಹೆತ್ತವರಿಗೆ – ಅವರ ಹೆತ್ತವರಿಗೆ ಆದ ಕತೆನೂ ಇದೇನೆ. ಅಂದ ಮೇಲೆ, ತಾನು ಸೇರಿರುವ ಜಾತಿ – ಮತ – ಧರ್ಮಗಳ ವಿಚಾರದಲ್ಲಿ, ವ್ಯಕ್ತಿಯ ಪಾತ್ರ ಇಲ್ಲ. ಇದು ಅವನ ಆಯ್ಕೆಯೂ ಅಲ್ಲದ, ಅಽನದಲ್ಲೂ ಇಲ್ಲದ ವಿಚಾರ.

ಮುಂದೆ ಇವನ್ನೆಲ್ಲ ತಿರಸ್ಕರಿಸುವ ಇಲ್ಲವೇ ಬದಲಾಯಿಸುವ ಸ್ವಾತಂತ್ರ್ಯ ಇದೆಯಾದರೂ, ಹೆಚ್ಚಿನವರು ತಾವು ಜನ್ಮತಃ ಸೇರಿದ ಜಾತಿ ಮತಗಳಿಗೆ ಅಂಟಿಕೊಂಡಿರುತ್ತಾರೆ ಮಾತ್ರವಲ್ಲ, ಕ್ರಮೇಣ ಜಾತೀಯ ಭಾವನೆಯನ್ನೂ, ಮತಾಂಧತೆಯನ್ನೂ ಬೆಳೆಸಿ ಕೊಂಡಿರುತ್ತಾರೆ. ಅದೇನೇ ಇರಲಿ, ನಮ್ಮ ಆಯ್ಕೆ ಅಲ್ಲದ ಕಾರಣ, ಜಾತಿ – ಮತಾಧಾರಿತ ಎಲ್ಲಾ ಲೆಕ್ಕಾಚಾರಗಳು ಅಸಮಂಜಸ – ಅವೈಜ್ಞಾನಿಕ ಹಾಗೂ ಅಪಾಯಕಾರಿ. ಆದರೆ, ನಮಗೆ ಎಷ್ಟು ಮಕ್ಕಳಿರಬೇಕು ಮತ್ತು ಅವು ಯಾವಾಗ ಹುಟ್ಟಬೇಕೆಂಬುದು ನಮ್ಮ ಆಯ್ಕೆ.

ಮನೆ ತುಂಬಾ ಮಕ್ಕಳು ಮಾಡಿ ಎಲ್ಲಾ ದೇವರು ಕೊಟ್ಟಿದು ಎಂದು ನಿರಪರಾಧಿ ದೇವರ ಮೇಲೆ ಆಪಾದನೆ ಹೊರಿಸಿದರೆ ಹೇಗೆ? ಅಂತೆಯೇ ಯಾವ ಮನೆಯಲ್ಲಿ ಹುಟ್ಟಬೇಕೆಂಬುದು ಕೂಡಾ ನಮ್ಮ ಆಯ್ಕೆ ಅಲ್ಲದ ವಿಚಾರ. ಆಗರ್ಭ ಶ್ರೀಮಂತರ ಮನೆಯ ಮಕ್ಕಳಾಗಿ ಹುಟ್ಟಿದವರನ್ನು “Born with silver spoon” ಅಂತೀವಿ. ಆದರೆ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಬೇಕೆ, ಇಲ್ಲಾ ಪ್ಲಾಸ್ಟಿಕ್ ಚಮಚ ಇಟ್ಟುಕೊಂಡು ಹುಟ್ಟಬೇಕೇ ಅನ್ನೋದು ನಮ್ಮ ಕೈಯಲ್ಲಿ ಇಲ್ಲವಲ್ಲ!

ಇವೆಲ್ಲಾ ಅದೃಷ್ಟವಶಾತ್ By chance ನಡೆಯುವ ಘಟನೆ. ಆದರೆ, ಪ್ರಯತ್ನ ಪಟ್ಟು ಶ್ರೀಮಂತರ ಮನೆಯ ಅಳಿಯ ಇಲ್ಲವೇ ಸೊಸೆಯಾಗೋದು, Bychoice ಮೂಲಕ ನಡೆಯುವ ನಮ್ಮ ಆಯ್ಕೆ. ಅಂತೆಯೇ ಅನುವಂಶಿಕವಾಗಿ ಪ್ರಾಪ್ತವಾಗುವ ನಮ್ಮ ಎತ್ತರ, ತೂಕ, ಮೈಬಣ್ಣ, ಬುದ್ಧಿಮಟ್ಟ (IQ) ಹಾಗೂ ಕೆಲವು ಕಾಯಿಲೆಗಳು ಕೂಡ ನಮ್ಮ ಆಯ್ಕೆ ಅಲ್ಲದ ವಿಚಾರಗಳು.

“Our birth is incidental” ಎಂಬಂತೆ ಆಕಸ್ಮಿಕವಾಗಿ ನಡೆಯುವ ನಮ್ಮ ಜನನ, ನಮ್ಮ ಆಯ್ಕೆ ಅಲ್ಲವಾದರೂ, ಜನಿಸಿದ ಮೇಲೆ, ಬದುಕಿನುದ್ದಕ್ಕೂ ನಾವು ಮಾಡಿಕೊಳ್ಳಲೇ ಬೇಕಾದ ಆಯ್ಕೆಗಳೇ ನಮ್ಮ ಜೀವನವನ್ನು ರೂಪಿಸುತ್ತವೆ. ಉದಾಹರಣೆಗೆ ನಮ್ಮ ಬಾಳ ಸಂಗಾತಿಯ ಆಯ್ಕೆ ನಮಗೆ ಬಿಟ್ಟ ವಿಚಾರ. ಇದರಲ್ಲಿ ಹುಡುಗಾಟಿಕೆ ಮಾಡಿದರೆ, ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗು ತ್ತದೆ. ನಮಗೆ ಸರಿ ತೂಗುವವರನ್ನೇ, ಸರಿಹೋಗುವವರನ್ನೇ ಆರಿಸಿಕೊಳ್ಳೋದು ಸೂಕ್ತ. ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೆ, ಅವರಿಗೆ ಆಯ್ಕೆಯ ಅವಕಾಶಗಳು ಕಡಿಮೆ. ಅವರು ತಿನ್ನಬೇಕಾದ ತಿಂಡಿ ತೀರ್ಥಗಳಿಂದ ಹಿಡಿದು ಧರಿಸಬೇಕಾದ ಉಡುಪು,
ಓದಬೇಕಾದ ಶಾಲೆ – ಎಲ್ಲವನ್ನು ಹೆತ್ತವರೇ ನಿರ್ಧರಿಸುತ್ತಾರೆ.

ಆದರೆ, ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಯಾವ ವಿಷಯದಲ್ಲಿ ಪದವೀಧರರಾಗಬೇಕೆಂಬ ಗುರುತರವಾದ ವಿಷಯ, ಅವರ ಆಯ್ಕೆಗೆ ಬಿಟ್ಟ ವಿಚಾರವಾಗಬೇಕು. ಈ ವಿಚಾರದಲ್ಲಿ ಯಾವುದೇ ರೀತಿಯ ಒತ್ತಡ ಒತ್ತಾಯಗಳು ಸಲ್ಲ. ಸಮಾಜದಲ್ಲಿ ಒಣ ಪ್ರತಿಷ್ಠೆಗೆ ಒಳಗಾಗಿಯೋ, ತಮ್ಮ ಕನಸುಗಳನ್ನು ನನಸು ಮಾಡಲೆಂದೋ ಇಲ್ಲವೇ ಯಾವುದೋ ಒಂದು ಲಾಭದ – ಲೋಭದ, ಅಥವಾ ಸುಲಭವಾಗಿ ದೊರಕಬಲ್ಲ ಉದ್ಯೋಗದ ದೃಷ್ಟಿಯಿಂದಲೋ, ಕೆಲ ಹೆತ್ತವರು, ತಮ್ಮ ಮಕ್ಕಳನ್ನು ಅವರ ಆಸಕ್ತಿ – ಅಭಿರುಚಿಗಳಿಗೆ ವಿರುದ್ಧವಾದ ಕೋರ್ಸುಗಳಿಗೆ ಸೇರಿಸೋದುಂಟು. ಇದು ಎಂದಿಗೂ ವ್ಯಕ್ತಿಗೂ, ಮನೆಯವರಿಗೂ, ಅಪೇಕ್ಷಿತ ಫಲಿತಾಂಶವನ್ನು ನೀಡದು. ಇನ್ನು ಪ್ರಬುದ್ಧತೆಯನ್ನು ಪಡೆಯದ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದಾದರೂ, ಅಂತಿಮ ಆಯ್ಕೆಯನ್ನು ಅವರಿಗೇ ಬಿಡಬೇಕು.

ಆಗ ಮಾತ್ರ ಅವರು ತಾವಾರಿಸಿದ ವಿಷಯಗಳನ್ನು ಪ್ರೀತಿಯಿಂದ ಕಲಿತು ಉತ್ತಮ ಫಲಿತಾಂಶದೊಂದಿಗೆ ಹೊರಬಂದಾರು. ಮದುವೆ ಮಾಡಿಕೊಳ್ಳಬೇಕೆಂದಿರುವ ಮಕ್ಕಳು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗಲೂ, ಇದೇ ನಿಯಮವನ್ನು ಅನುಸರಿಸಬೇಕು. ಕಾರಣ ಮುಂದಕ್ಕೆ ಜತೆ ಜತೆಯೂ ಜೀವನ ಮಾಡಬೇಕಾದವರು ಅವರು, ನಾವಲ್ಲ!.

ಇದೇ ರೀತಿ, ನಮ್ಮ ಆಹಾರ – ವ್ಯವಹಾರಗಳಿಂದ ಹಿಡಿದು, ಅಭ್ಯಾಸ – ಹವ್ಯಾಸಗಳವರೆಗೆ, ನಾವು ಧರಿಸುವ ಬಟ್ಟೆ ಬರೆಗಳಿಂದ ಹಿಡಿದು, ನಾವು ವಾಸ ಮಾಡಲು ಬಯಸುವ ಊರು, ಮಾಡಲಿಚ್ಛಿಸುವ ಉದ್ಯೋಗ ಮತ್ತು ನಮ್ಮ ಆತ್ಮೀಯ ಗೆಳೆಯರವರೆಗೆ ಎಲ್ಲವೂ ನಮ್ಮ ಆಯ್ಕೆಯೇ ಆಗಿರುತ್ತದೆ. ಉತ್ತಮ ಆಹಾರ – ಅಭ್ಯಾಸಗಳು, ಆಯ್ಕೆ ನಮ್ಮದಾದರೆ, ಆರೋಗ್ಯ ನಮ್ಮದೇ. ದುಶ್ಚಟ
ದುರಾಭ್ಯಾಸಗಳನ್ನು ಆಯ್ಕೆ ಮಾಡಿದರೆ, ಅನಾರೋಗ್ಯವನ್ನು ಆಯ್ಕೆ ಮಾಡಿದಂತೆ, ಎಂದು ಬೇರೆ ಹೇಳಬೇಕಾಗಿಲ್ಲ. ಶುಭ್ರ
ಹಾಗೂ ಸಭ್ಯ ಬಟ್ಟೆ ಬರೆಗಳ ಆಯ್ಕೆ ನಮಗೆ ಗೌರವವನ್ನು ತಂದುಕೊಡುತ್ತದೆ.

ಅಂತೆಯೇ ನೆಮ್ಮದಿಯನ್ನು ನೀಡಬಲ್ಲ ಪುಟ್ಟ ಮನೆ, ಸರಳ ಜೀವನ, ಪ್ರೀತಿಸುವ ಬಾಳ ಸಂಗಾತಿ ನಮ್ಮ ಆಯ್ಕೆ ಆಗಿರಲಿ. ಮನೆ ದೊಡ್ಡದಾಗಿದೆ ಎಂಬ ಮಾತ್ರಕ್ಕೆ, ಶಾಂತಿ ನೆಮ್ಮದಿಗಳೂ ದೊಡ್ಡದಾಗಿರಬೇಕೆಂಬ ನಿಯಮವಿಲ್ಲ. ಇದನ್ನೇ ತಮಾಷೆಯಾಗಿ ಕವಿ ದುಂಡೀರಾಜ್ ಬರೆದರು. ಆರಿಸಬಹುದು ಹತ್ತುಮಹಡಿಗಳ ಕಟ್ಟಡ; ಆದರೆ, ಹೊತ್ತಿ ಉರಿದರೆ ಆರಿಸೋದು ಬಲು ಕಷ್ಟ!.
ಅಂತೆಯೇ ಮನೆಯಲ್ಲಿ ಅಡುಗೆ ಅತಿಥಿ ಸತ್ಕಾರಗಳಿಂದ ಹಿಡಿದು, ಅವರು ಉಡಬೇಕಾದ ಸೀರೆಯ ಆಯ್ಕೆಯನ್ನು ಹೆಂಗಸರಿಗೇ ಬಿಟ್ಟು ಬಿಡಬೇಕು. ಕಾರಣ, ಹೆಂಡತಿ ಮನಸಾರೆ ಒಪ್ಪುವ ಸೀರೆಯನ್ನು ತರುವ ಕೆಲಸ ಗಂಡನಿಗಾಗದು.

ಹೆಂಡತಿಯನ್ನು ಅಚ್ಚರಿಗೊಳಿಸಿ, ದಿಢೀರ್ ಆಗಿ ಆಕೆಯ ಪ್ರೀತಿಯನ್ನು ಗಿಟ್ಟಿಸಿಕೊಳ್ಳಬೇಕೆಂಬ ದೃಷ್ಟಿಯಿಂದ, ಕೆಲ ಗಂಡಂದಿರು, ಆಕೆಗೆ ತಿಳಿಸದೇನೆ, ಹೊಸ ಸೀರೆಯನ್ನು ಖರೀದಿಸಿ ಉಡುಗೊರೆಯಾಗಿ ಕೊಡೋದುಂಟು. ಆಗ ಮೆಚ್ಚುಗೆಯ ಬದಲಾಗಿ ಅಯ್ಯೋ ಬೆಲೆ ಜಾಸ್ತಿ ಆಯಿತು ಈ ಬಣ್ಣದಲ್ಲಿ ಬೇರೆ ಬಾರ್ಡರ್ ಇರುವ ಸೀರೆ ಸಿಗಲಿಲ್ಲವಾ? ಇಲ್ಲವೇ ಈ ಬಾರ್ಡರ್‌ನಲ್ಲಿ ಬೇರೆ ಬಣ್ಣದ ಸೀರೆ
ಇಲ್ಲವಾಗಿತ್ತಾ? ಏನ್ರೀ ಇದು ವಯಸ್ಸಾದವರು ಉಡುವ ಸೀರೆಯ ಹಾಗಿದೆ ಎಂಬೆಲ್ಲಾ ಟೀಕೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಅದರ ಬದಲಿಗೆ ಅವರಿಗೇ ಒಂದಿಷ್ಟು ದುಡ್ಡುಕೊಟ್ಟು ಬಿಟ್ಟು ಈ ಹಣದೊಳಗೆ ನಿನಗೆ ಬೇಕಾದ ಸೀರೆಯನ್ನು ಆರಿಸಿಕೋ ಎಂದರೆ
ಜಾಣತನವಲ್ಲವೇ!

ಚುನಾವಣೆಯ ವೇಳೆ, ಉತ್ತಮ ಅಭ್ಯರ್ಥಿಯ ಆಯ್ಕೆ ಮತದಾರರ ಕರ್ತವ್ಯ ಹಾಗೂ ಜವಬ್ದಾರಿ. ಆದರೆ, ಅಭ್ಯರ್ಥಿಗಳೆಲ್ಲರೂ ಭ್ರಷ್ಟರೇ ಆಗಿರುವಾಗ ಆಯ್ಕೆ ಸುಲಭದ ವಿಚಾರವಲ್ಲ. ಇಂತಹ ಸಂದರ್ಭದಲ್ಲಿ ಯಾರನ್ನೂ ಆಯ್ಕೆ ಮಾಡದೆ ನೋಟಾ ಗುಂಡಿಯನ್ನು ಒತ್ತಬಹುದು, ಇಲ್ಲವೇ ಸ್ಪರ್ಧಿಸುವವರ ಪೈಕಿ, ಒಳ್ಳೆಯವರನ್ನು ಆರಿಸಬಹುದು. ಒಟ್ಟಿನಲ್ಲಿ, ಅಭ್ಯರ್ಥಿಯ ಚರಿತ್ರೆ – ಯೋಗ್ಯತೆ, ಸಾಧನೆ – ಸಿದ್ಧಾಂತ, ಆತನ ಪಕ್ಷ ಜಾತಿ, ಹಣ ಬಲಗಳಲ್ಲಿ! ಇಲ್ಲವಾದರೆ “People get the Govt what they
deserve”  ಎಂಬ ಮಾತಿನಂತೆ, ನಮ್ಮ ಆಯ್ಕೆಯ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ.

ಪ್ರಯಾಣ ಮಾಡುವಾಗ, ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು GPS ನಂಥ ಮಾರ್ಗಸೂಚಿಗಳಿವೆ. ಆದರೆ ಬದುಕಿನ ಪಯಣದಲ್ಲಿ ಸರಿಯಾದುದನ್ನೇ ಆಯ್ಕೆ ಮಾಡಿಕೊಳ್ಳಲು ನೆರವಾಗುವ ಮಾರ್ಗಸೂಚಿಗಳಿಲ್ಲ. ಇಂತಹ ಸಂದರ್ಭಗಳಲ್ಲಿ, ಆಪ್ತರ – ಆತ್ಮೀಯರ ಸಲಹೆ – ಸೂಚನೆ ಹಾಗೂ ಅನುಭವಗಳ ಮಾರ್ಗದರ್ಶನವನ್ನು ಪಡೆಯಬಹುದಾದರೂ, ಅಂತಿಮವಾದ ಆಯ್ಕೆಯ ಜವಬ್ದಾರಿ ನಮ್ಮದೇ ಆಗಿದ್ದು, ಮುಂದಿನ ಎಲ್ಲಾ ಪರಿಣಾಮಗಳಿಗೆ ನಾವೇ ಹೊಣೆಗಾರರಾಗಿರುತ್ತೇವೆ. ನಮ್ಮ ಆಯ್ಕೆ ಸರಿ
ಇಲ್ಲವಾಗಿದ್ದಲ್ಲಿ ನಾವು ಮಾತ್ರವಲ್ಲ, ನಿಮ್ಮನ್ನು ನಂಬಿದವರೂ ಕಷ್ಟಪಡಬೇಕಾಗುತ್ತದೆ. ಹೀಗೆ ಕೆಲವೊಮ್ಮೆ ಇನ್ನಿತರರ ಆಯ್ಕೆಗೆ ನಾವು ಬೆಲೆ ತೆರಬೇಕಾಗುತ್ತದೆ. ಇದನ್ನೇ ಸುಮತೀಂದ್ರ ನಾಡಿಗ್‌ರವರು, ತಿಳಿಹಾಸ್ಯದೊಂದಿಗೆ ಹೀಗೆ ತಿಳಿ ಹೇಳಿದ್ದಾರೆ.ಯಾರೇನೋ ಆಗುವರು, ಅದು ಅವರವರ ಕರ್ಮ ಕುರಿಯ ನೋಡಿ ಆಗಿರುವುದು ಈಗ ಕೂರ್ಮ!

ಕರ್ಮ ಆಗೋದು, ಕುರಿಯ ಆಯ್ಕೆ ಅಲ್ಲ! ಅದು ಕುರಿಯನ್ನು ಖರೀದಿಸಿದವನ ಆಯ್ಕೆ ಆಗಿತ್ತು! ಕೆಲವೊಮ್ಮೆ ನಿಮ್ಮ ಆಯ್ಕೆಗಳ ಹಿಂದೆ ನಿರ್ದಿಷ್ಟ ಕಾರಣಗಳು ಇರೋದಿಲ್ಲ; ವೈಜ್ಞಾನಿಕವಾದ ಸಮರ್ಥನೆಯೂ ಇರೋದಿಲ್ಲ. ಯಾವುದೇ ಒಂದು ಸಂದರ್ಭಕ್ಕೆ ಸಿಲುಕಿ, ಆಯ್ಕೆ ಮಾಡಿಕೊಂಡಿರುತ್ತೇವೆ. ಹೀಗಾದಾಗ ನಮಗೆ ಖುಷಿ ಕೊಡುವ ಕೆಲಸವನ್ನೇ ಮಾಡಬೇಕು; ಇದು ಸಾಧ್ಯವಾಗ ದಿದ್ದಲ್ಲಿ, ನಾವು ಮಾಡುತ್ತಿರುವ ಕೆಲಸದಲ್ಲೇ ಖುಷಿಯನ್ನು ಕಂಡುಕೊಳ್ಳಬೇಕು ಎಂಬ ಧೋರಣೆ ಎಂದೆಂದಿಗೂ ಕ್ಷೇಮ.