Thursday, 12th December 2024

ಸಂತ ಆಂಥೋಣಿಯವರ ಬೆಂಕಿ

ಹಿಂದಿರುಗಿ ನೋಡಿದಾಗ

೧೫ ಆಗಸ್ಟ್, ೧೯೫೧.

ಫ್ರಾನ್ಸ್‌ನ ಪಾಂಟ್ ಸೈಂಟ್ ಎಸ್ಪ್ರಿಟ್ ಎಂಬ ಊರು. ೪೦೦೦ ಜನರು ವಾಸಿಸುತ್ತಿದ್ದರು. ಒಂದು ದಿನ ಆ ಊರಿನ ಪ್ರತಿ ಇಪ್ಪತ್ತು ಜನರಲ್ಲಿ ಒಬ್ಬನು ವಿಚಿತ್ರ ರೋಗಲಕ್ಷಣಗಳನ್ನು ತೋರಲಾರಂಭಿಸಿದ. ಅವರೆಲ್ಲರೂ ಭ್ರಮಾಧೀನರಾಗಿದ್ದರು. ಮಲಗಿದ್ದ ಕಡೆಯಲ್ಲಿಯೇ ಉಗ್ರ ಸ್ವರೂಪದ ನೋವನ್ನು ತಡೆಯಲಾರದೇ ಹಾಸಿಗೆಯಲ್ಲಿ ಹೊರಳಾಡಲಾ ರಂಭಿಸಿದರು. ವಾಂತಿಯನ್ನು ಮಾಡಿಕೊಂಡರು. ಹಲವರು ಹಾಸಿಗೆಯನ್ನು ಬಿಟ್ಟೆದ್ದು, ಇದ್ದ ಸ್ಥಿತಿಯಲ್ಲಿ ಹಾಗೆಯೇ ಊರಿನ ರಸ್ತೆ ರಸ್ತೆಗಳನ್ನು  ಓಡಲಾ ರಂಭಿಸಿದರು.

ಹುಚ್ಚರಂತೆ ವರ್ತಿಸಲಾರಂಭಿಸಿದರು. ಅವರ ಕೈಕಾಲುಗಳು ವಿಪರೀತ ನಡಗುತ್ತಿದ್ದವು. ಈ ವಿಚಿತ್ರ ಹುಚ್ಚನ್ನು ತಜ್ಞವೈದ್ಯರು ತಕ್ಷಣವೇ ಪತ್ತೆ ಹಚ್ಚಿದರು. ಅದು ಸಂತ ಆಂಥೋನಿ ಯವರ ಬೆಂಕಿ (ಸೈಂಟ್ ಆಂಥೊಣೀಸ್ ಫಾರ್)ಯಾಗಿತ್ತು! ಇದು ಒಂದು ನಾಮದಾನ (ಎಪೋನಿಮ್). ಅಂದರೆ, ಒಂದು ವಸ್ತುವನ್ನು ಕಂಡುಹಿಡಿದ, ಒಂದು ಪ್ರದೇಶವನ್ನು ಕಂಡುಹಿಡಿದ, ಒಂದು ವಿಚಾರಕ್ಕೆ ಹೆಸರಾದ ವ್ಯಕ್ತಿ/ ಪ್ರದೇಶಗಳ ಹೆಸರು. ಇದೊಂದು ವೈರಸ್ ಕಾಯಿಲೆ. ಮೂಲತಃ ಮಂಗಗಳಿಗೆ ಬರುವಂತಹದ್ದು. ಮಂಗನಿಂದ ಮನುಷ್ಯನಿಗೆ ಹರಡಿ ಅವನ ಸಾವಿಗೆ ಕಾರಣವಾಗಬಲ್ಲ ಕಾಯಿಲೆ.

ಇಂತಹ ಕಾಯಿಲೆ ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಕರ್ನಾಟಕದ, ಸಾಗರ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿ ಕಂಡುಬಂದಿತು. ಹಾಗಾಗಿ ಈ ಕಾಯಿಲೆಯನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆದರು. ಇದೊಂದು ನಾಮದಾನಕ್ಕೆ ಉದಾಹರಣೆ. ಇದರ ಹಾಗೆಯೇ ಸೈಂಟ್ ಆಂಥೋನೀಸ್ ಫಾರ್ ಸಹ ಒಂದು ನಾಮದಾನವಾಗಿದೆ. ಸೈಂಟ್ ಆಂಥೋನೀಸ್ ಫಾರ್ ಮಧ್ಯಯುಗದ
ಯೂರೋಪಿನಲ್ಲಿ ಕಂಡುಬಂದಿತ್ತು. ಶ್ರೀಸಾಮಾನ್ಯರ ಜೀವನವನ್ನೇ ಕಲ್ಲೋಲ ಮಾಡಿತ್ತು. ಈ ಪಿಡುಗಿಗೆ ತುತ್ತಾದವರಲ್ಲಿ ೨ ರೀತಿಯ ರೋಗಲಕ್ಷಣಗಳು ಕಂಡುಬರುತ್ತಿದ್ದವು.

ಮೊದಲನೆಯದು ಹಠಾತ್ತನೇ ಕಂಡುಬರುವ ಅತ್ಯಂತ ತೀವ್ರಸ್ವರೂಪದ ಮಿದುಳು ಮತ್ತು ನರಮಂಡಲದ ರೋಗ. ಮೊದಲು ವಿಪರೀತ ತಲೆನೋವು ಬರುತ್ತಿತ್ತು. ನಂತರ ಮೈತುಂಬಾ ನವೆ. ಶರೀರದ ಸ್ನಾಯುಗಳು ಸೆಟೆತುಕೊಂಡು, ಸೆಳವು ಕಾಣಿಸಿ ಕೊಳ್ಳುತ್ತಿತ್ತು. ವಾಂತಿ-ಭೇದಿಗಳಾಗುತ್ತಿದ್ದವು. ನಂತರ ಹುಚ್ಚು ಹಿಡಿದವರಂತೆ ವರ್ತಿಸುತ್ತಿದ್ದರು. ಎರಡನೆಯ ನಮೂನೆಯಲ್ಲಿ ರೋಗಲಕ್ಷಣಗಳು ಸಾವಕಾಶವಾಗಿ ಕಾಣಿಸಿಕೊಳ್ಳುತ್ತಿದ್ದವು. ಕೈಕಾಲುಗಳಲ್ಲಿದ್ದ ರಕ್ತನಾಳಗಳ ವ್ಯಾಸವು ಸಂಕುಚಿಸುತ್ತಿದ್ದವು. ಆಗ ಕೈ ಮತ್ತು ಕಾಲಿನ ಬೆರಳುಗಳಿಗೆ ರಕ್ತಪೂರೈಕೆಯು ಕ್ರಮವಾಗಿ ಕಡಿಮೆಯಾಗುತ್ತಿತ್ತು.

ನಾಡಿಯು ಕ್ಷೀಣಿಸಿ, ಸ್ಪರ್ಶ ಸಂವೇದನೆಯು ದುರ್ಬಲವಾಗುತ್ತಿತ್ತು. ಚರ್ಮವು ಸುಲಿದು, ಕೊನೆಗೆ ಕೈ ಅಥವಾ ಕಾಲಿನಲ್ಲಿದ್ದ ಬೆರಳುಗಳು ಒಣಗಿ, ತಮಗೆ ತಾವೇ ಉದುರಿ ಹೋಗುತ್ತಿದ್ದವು. ಇದನ್ನು ಒಣ ಅಂಗಕ್ಷಯ ಅಥವ ಡ್ರೈ ಗ್ಯಾಂಗ್ರೀನ್ ಎನ್ನುತ್ತಿದ್ದರು. ಈ ರೋಗಲಕ್ಷಣಗಳು ತೀವ್ರವಾಗಿ, ಕೊನೆಗೆ ಸಾವು ಸಂಭವಿಸುತ್ತಿತ್ತು. ಮಾನವನ ಇತಿಹಾಸದಲ್ಲಿ ಸೈಂಟ್ ಆಂಥೋನೀಸ್ ಫಾರ್
ಎಂಬ ಹೆಸರಿನಲ್ಲಿ ಸರಿಸುಮಾರು ಏಕರೂಪದ ರೋಗಲಕ್ಷಣಗಳಿದ್ದ ಮೂರು ಭಿನ್ನ ಭಿನ್ನ ರೋಗಗಳನ್ನು ಗುರುತಿಸಿದರು.

ಮೊದಲನೆಯದು ಅರ್ಗಾಟಿಸಂ. ಇದು ಕ್ಲಾವಿಸೆಪ್ಸ್ ಪರ್ಪ್ಯೂರ ಎಂಬ ಶಿಲೀಂಧ್ರದ ಸೋಂಕಿಗೆ ಒಳಗಾದ ಸಿರಿಧಾನ್ಯಗಳನ್ನು ತಿನ್ನುವುದರಿಂದ ಬರುವ ವಿಶಿಷ್ಠ ರೋಗ ವಿಷಲಕ್ಷಣಗಳು. ಎರಡನೆಯದು ಬ್ಯಾಕ್ಟೀರಿಯಗಳ ಸೋಂಕಿನಿಂದ ತಲೆದೋರುವ ಎರಿಸಿಪಿಲಸ್ ಹಾಗೂ ಮೂರನೆಯದು ಸೀತಾಳೆ ಸಿಡುಬನ್ನು ಉಂಟುಮಾಡುವ ವೈರಸ್ಸಿನಿಂದ ತಲೆದೋರುವ ಸರ್ಪಸುತ್ತು ಅಥವ ಹರ್ಪೆಸ್ ಜ಼ೋಸ್ಟರ್. ಈ ೩ ಲಕ್ಷಣಗಳಲ್ಲಿ ಅತ್ಯಂತ ಪ್ರಮುಖವಾಗಿ ಕಂಡು ಬರುವ ಲಕ್ಷಣವೆಂದರೆ ಅಸಾಧ್ಯ ಉರಿ. ಬೆಂಕಿ ಹೆಚ್ಚಿಬಿಟ್ಟಾದ ಉಗ್ರ ಸ್ವರೂಪದ ಉರಿ. ಈ ೩ ರೋಗಗಳಲ್ಲಿ ಉರಿಯೇ ಪ್ರಮುಖ ಲಕ್ಷಣವಾಗಿತ್ತು. ಆದರೆ ಈ ೩ ರೋಗಗಳು
ಬರಲು ಕಾರಣಗಳು ಭಿನ್ನವಾಗಿದ್ದವು. ಈ ಮಾಹಿತಿಯು ಅಂದಿನ ಜನಸಾಮಾನ್ಯರಿಗಾಗಲಿ, ವೈದ್ಯರಿಗಾಗಲಿ ಏನೂ ಗೊತ್ತಿರಲಿಲ್ಲ.

ಹಾಗಾಗಿ ಇತಿಹಾಸದ ಬೇರೆ ಬೇರೆ ಕಾಲಗಳಲ್ಲಿ ಈ ೩ ರೋಗಗಳ ಏಕಸ್ವರೂಪದ ಲಕ್ಷಣಗಳನ್ನು ಒಂದೇ ರೋಗವೆಂದು ಭಾವಿಸಿ, ಅವುಗಳಿಗೆ ಒಂದೇ ನಾಮದಾನವನ್ನು ಮಾಡಿದ ಕಾರಣ, ವಿಪರೀತ ಗೊಂದಲಗಳಿಗೆ ಎಡೆಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ನಾವು ಈ ಮೂರೂ ರೋಗಗಳ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಗೆಯೇ ಈ ಮೂರೂ ರೋಗಗಳಿಗೆ ಸೈಂಟ್
ಆಂಥೋನೀಸ್ ಫಾರ್ ಎಂಬ ಹೆಸರು ಏಕೆ ತಪ್ಪಾಗಿ ಬಂದಿತು ಎನ್ನುವುದನ್ನೂ ಗಮನಿಸಬೇಕಾಗುತ್ತದೆ.

ಆಂಥೋನಿ ದಿ ಗ್ರೇಟ್ ಅಥವಾ ಸಂತ ಆಂಥೋನಿಯು ಈಜಿಪ್ಟಿನಲ್ಲಿ ಹುಟ್ಟಿದರು. ಇದ್ದಕ್ಕಿದ್ದ ಹಾಗೆ ವೈರಾಗ್ಯವು ಬಂದಿತು. ಕೂಡಲೇ ತಮ್ಮದು ಎಂದೆನಿಸಿಕೊಂಡ ಎಲ್ಲ ವಸ್ತುಗಳನ್ನು ಬಡಬಗ್ಗರಿಗೆ ದಾನ ಮಾಡಿದರು. ನೇರವಾಗಿ ಮರುಭೂಮಿಯತ್ತ ನಡೆದರು. ಸಾತ್ವಿಕ ಜೀವನವನ್ನು ಆರಂಭಿಸಿದರು. ಧ್ಯಾನವನ್ನು ಮಾಡಿದರು. ದೀರ್ಘಕಾಲ ಉಪವಾಸವನ್ನು ಮಾಡಿದರು. ಕ್ರೈಸ್ತ ಸನ್ಯಾಸಿಯಾದರು.

ಕ್ರೈಸ್ತಧರ್ಮದಲ್ಲಿ ಸನ್ಯಾಸತ್ವದ ಪರಿಕಲ್ಪನೆಯನ್ನು ಜಾರಿಗೆ ತಂದವರಲ್ಲಿ ಇವರೂ ಪ್ರಮುಖರಾದರು. ಇವರು ಮರು ಭೂಮಿ ಯಲ್ಲಿ ವಾಸಿಸುತ್ತಿದ್ದಾಗ ಅನೇಕ ಪವಾಡಗಳನ್ನು ಮಾಡಿದರು. ಭೂತೋಚ್ಛಾಟನೆಯನ್ನೂ ಮಾಡಿದರು. ಅನೇಕ ಜನರ ರೋಗ ರುಜಿನಗಳನ್ನು ಗುಣಪಡಿಸಿದರು. ಹಾಗಾಗಿ ಸಂತ ಆಂಥೋನಿಯವರು ಎಂದರೆ ಎಲ್ಲ ನೋವುಗಳನ್ನು ಪರಿಹರಿಸುವವರು ಎನ್ನುವ ಪರಿಕಲ್ಪನೆಯು ಪ್ರಸಿದ್ಧಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಅವರು ಪರಮ ಪವಿತ್ರವಾದ ಚಿಕಿತ್ಸಾ ವೈದ್ಯಕೀಯಕ್ಕೆ ಮತ್ತೊಂದು ಹೆಸರಾದರು. ಇವರು ೧೦೫ ವರ್ಷಗಳ ಕಾಲ ಬದುಕಿದ್ದರು.

೧೦೯೫ರಲ್ಲಿ ವಿಯನ್ನಾದಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮದೇ ಆದ ಸಮುದಾಯವನ್ನು ಕಟ್ಟಿಕೊಂಡರು. ಇವರ ಸೇವೆ ನಿಜಕ್ಕೂ ಅನುಪಮವಾಗಿತ್ತು. ಕೊನೆಗೆ ಪೋಪ್ ಬಾನಿ-ಶಿಯಸ್ ೮, ೧೨೯೭ರಲ್ಲಿ ವಿಯನ್ನಾ ಸಂತ ಆಂಥೋನಿಯವರ ಮಠಾಧೀಶರ ಚಿಕಿತ್ಸಾಪಾದ್ರಿಗಳನ್ನು ಅಧಿಕೃತವಾಗಿ ಗುರುತಿಸಿದರು. ಇಂದಿನ ಹಾಸ್ಪಿಟಲ್‌ನ ಮೂಲವನ್ನು ಈ ಹಿನ್ನೆಲೆಯಲ್ಲಿ ಗುರುತಿಸ ಬಹುದು. ಚಿಕಿತ್ಸಾಪಾದ್ರಿಗಳು ನಡೆಸುವ ಆಸ್ಪತ್ರೆಗಳು ಅತ್ಯಲ್ಪಕಾಲದಲ್ಲಿ ಜನಪ್ರಿಯವಾದವು. ಅದರಲ್ಲೂ ಪುಣ್ಯಕ್ಷೇತ್ರ ಗಳ ಹಾದಿಯಲ್ಲಿ ಆಸ್ಪತ್ರೆಗಳು ನಿರ್ಮಾಣವಾಗಿ, ಯಾತ್ರಿಕರಿಗೆ ಅನುಕೂಲತೆಯನ್ನು ಉಂಟುಮಾಡಿದವು.

ಮಧ್ಯ ಯೂರೋಪ್, ಕೊಳಕಿನ ತವರೂರಾಗಿತ್ತು. ಹಾಗಾಗಿ ಅಂದಿನ ಜನರು ನಾನಾ ವಿಧದ ಚರ್ಮರೋಗಗಳಿಂದ ನರಳುವುದು ಸರ್ವೇ ಸಾಮಾನ್ಯವಾಗಿದ್ದವು. ಇವರ ಅನಾರೋಗ್ಯಕ್ಕೆ ವೈಯುಕ್ತಿಕ ಸ್ವಚ್ಛತೆಯ ಕೊರತೆಯೇ ಪ್ರಮುಖ ಕಾರಣವಾಗಿತ್ತು. ಇವರು ಬಟ್ಟೆಗಳನ್ನು ನಿತ್ಯ ಬದಲಾಯಿಸುತ್ತಿರಲಿಲ್ಲ. ಹಾಕಿದ ಬಟ್ಟೆಯಲ್ಲಿಯೇ ತಿಂಗಳುಗಟ್ಟಲೆ ಇರುತ್ತಿದ್ದರು. ದಿನನಿತ್ಯ ಸ್ನಾನವನ್ನು ಮಾಡುವುದನ್ನು ಬಿಡಿ, ದಿನಕ್ಕೆರಡು ಸಲ ಕೈಗಳನ್ನೂ ತೊಳೆಯುತ್ತಿರಲಿಲ್ಲ.

ಅವರು ವಾಸಿಸುವ ಸ್ಥಳಗಳಲ್ಲಿಯೂ ಗಾಳಿ, ಬೆಳಕು ಹಾಗೂ ಸ್ವಚ್ಛತೆಯ ಕೊರತೆ ಧಾರಾಳವಾಗಿತ್ತು. ಮನೆಗಳಲ್ಲಿ ಹಾಗೂ ಬೀದಿಗ ಳಲ್ಲಿ ಜನಸಂದಣಿಯು ವಿಪರೀತವಾಗಿದ್ದ ಕಾರಣ, ಸೋಂಕು, ರೋಗಗಳು ಸುಲಭವಾಗಿ ಹರಡುತ್ತಿದ್ದವು. ಇಂತಹ ಪರಿಸರ ಹಾಗೂ ಜೀವನಶೈಲಿಯ ಹಿನ್ನೆಲೆಯಲ್ಲಿ ನಾನಾ ರೀತಿಯ ಚರ್ಮ ಕಾಯಿಲೆಗಳು ಕಂಡು ಬಂದುದರಲ್ಲಿ ಯಾವುದೇ  ಆಶ್ಚರ್ಯ ವಿಲ್ಲ.

ಮಧ್ಯಯುಗದ ಯೂರೋಪಿಯನ್ ವೈದ್ಯರಿಗೆ ಚರ್ಮ ಕಾಯಿಲೆಗಳ ಬಗ್ಗೆ ಅಂತಹ ಪರಿಚಯವು ಇರಲಿಲ್ಲ. ಬೆಂಕಿ ಯಂತೆ ಉರಿಯುವ ಚರ್ಮ ಕಾಯಿಲೆಗಳನ್ನು ನಿಗ್ರಹಿಸಲು ಯಾವುದೇ ಪ್ರಮಾಣ ಬದ್ಧವಾದ ಚಿಕಿತ್ಸೆಯೂ ಇರಲಿಲ್ಲ. ಹಾಗಾಗಿ ಜನಸಾ ಮಾನ್ಯರು ತಮ್ಮ ಉರಿಯನ್ನು ಕಡಿಮೆ ಮಾಡುವಂತೆ ದೈವದ ಮೊರೆ ಹೋಗುತ್ತಿದ್ದರು. ಕ್ಯಾಥೋಲಿಕ್ ಧರ್ಮವು ಪ್ರಧಾನ ವಾಗಿದ್ದ ದೇಶಗಳಲ್ಲಿ, ಶ್ರೀಸಾಮಾನ್ಯರು ಗುಣಪಡಿಸುವಂತೆ ಸಂತ ಆಂಥೋಣಿಯವರಲ್ಲಿ ಪ್ರಾರ್ಥಿಸುತ್ತಿದ್ದರು. ಅವರ ಹೆಸರಿನಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಿದ್ದ ಚಿಕಿತ್ಸಾಪಾದ್ರಿಗಳು, ಉರಿಯುವ ಚರ್ಮದ ಮೇಲೆ ಹಂದಿಯ ಕೊಬ್ಬನ್ನು ಸವರಿದರು.

ಆಗ ಹಂದಿಯ ಕೊಬ್ಬು ಚರ್ಮದ ಉರಿಯೂತವನ್ನು ಕಡಿಮೆ ಮಾಡಿತು. ಉರಿಯೂತ ಕಡಿಮೆಯಾಗುತ್ತಿದ್ದ ಹಾಗೆ, ಉರಿಯೂ
ಕಡಿಮೆಯಾಯಿತು. ರೋಗಿಗಳು ನೆಮ್ಮದಿ ಯಿಂದ ನಿಟ್ಟುಸಿರು ಬಿಟ್ಟರು. ಬೆಂಕಿಯಂತಹ ಚರ್ಮದ ಉರಿ ಶಾಂತವಾದುದನ್ನು ನೋಡಿ, ಇದು ಸಂತ ಆಂಥೋನಿ ಯವರ ಪವಾಡವೇ ಎಂದು ಭಾವಿಸಿದರು.

ಮುಂದೆ ಜನರು ತಂಡೋಪತಂಡವಾಗಿ ಚಿಕಿತ್ಸಾಪಾದ್ರಿಗಳ ಬಳಿ ಬರಲಾರಂಭಿಸಿದರು. ಅವರ ಬಳಿ ಅಪಾರ ಪ್ರಮಾಣದ ಹಣವು ಹರಿದು ಬಂದಿತು. ಅವರ ಸಾಮಾಜಿಕ ಸ್ಥಾನಮಾನ ಗಳು ಸುಧಾರಿಸಿದರು. ಅವರು ಸಮಾಜದ ಗಣ್ಯ ವ್ಯಕ್ತಿಗಳಾದರು. ಅವರ ಜನಪ್ರಿಯತೆಯು ಚರ್ಚಿನ ಜನಪ್ರಿಯತೆಯನ್ನು ಹಿಂದಿಕ್ಕಲಾರಂಭಿಸಿತು. ಇದರಿಂದ ಕುಪಿತಗೊಂಡ ಪೋಪ್ ಪಿಯಸ್-೬, ೧೭೭೬ರ ಹೊತ್ತಿಗೆ ಚಿಕಿತ್ಸಾಪಾದ್ರಿ ಗಳನ್ನು ತುಳಿಯಲಾರಂಭಿಸಿದ.

ಇವರನ್ನು ಮತ್ತೊಂದು ಸಂಘಟನೆ, ಆರ್ಡರ್ ಆಫ್ ನೈಟ್ಸ್ ಆಫ್ ಮಾಲ್ಟ್ ಜತೆಯಲ್ಲಿ ಸೇರಿಸಿದ. ಈ ಎರಡನೆಯ ಸಂಘಟನೆಯೂ ಸಹ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದರಿಂದ ಎರಡೂ ಸಂಘಟನೆಗಳ ವಿಲೀನವನ್ನು ಜನಸಾಮಾನ್ಯರು ಸಹಜವಾಗಿ ಸ್ವೀಕರಿಸಿ ದರು. ಸಂತ ಆಂಥೋಣಿಯವರ ಹೆಸರು ಇರುವ ಅತ್ಯಂತ ಪ್ರಮುಖ ರೋಗವೆಂದರೆ ಅರ್ಗಾಟ್ ವಿಷ ಅಥವ ಅರ್ಗಟ್ ವಿಷ ವೇರಿಕೆ (ಅರ್ಗಟೋಟಾಕ್ಸಿಕೋಸಿಸ್). ಈ ವಿಷಕ್ಕೆ ಕಾರಣ ಕ್ಲಾವಿಸೆಪ್ಸ್ ಪರ್ಪ್ಯೂರ ಎಂಬ ಶಿಲೀಂಧ್ರವು ಉತ್ಪಾದಿಸುತ್ತಿದ್ದ ಅರ್ಗಟ್ ಆಲ್ಕಲಾಯ್ಡುಗಳು. ಕ್ಲಾವ ಎನ್ನುವುದು ಲ್ಯಾಟಿನ್ ಭಾಷೆಯ ಪದ. ಇದಕ್ಕೆ ಗದೆಯಂತಹ ಎಂಬ ಅರ್ಥವಿದೆ.

ಸೆಪ್ಸ್ ಎಂದರೆ ತಲೆ ಅಥವ ಶೀರ್ಷ. ಪರ್ಪ್ಯೂರ ಎಂದರೆ ನೇರಳೆ ಅಥವ ಊದಾ ಬಣ್ಣ. ಹಾಗಾಗಿ ಇದನ್ನು ನೇರಳೆ ಬಣ್ಣದ ಗದಾ ಶೀರ್ಷ ಶಿಲೀಂಧ್ರ ಎಂದು ವರ್ಣಿಸಬಹುದು. ಸಂತ ಆಂಥೋನಿಯವರ ಸಮಕಾಲೀನ ಐತಿಹಾಸಿಕ ದಾಖಲೆಗಳಲ್ಲಿ ಎಲ್ಲಿಯೂ ಅರ್ಗಟ್ ವಿಷವನ್ನು ಹೋಲುವಂತಹ ಕಾಯಿಲೆಯ ವಿವರಣೆಯು ದೊರೆತಿಲ್ಲ. ಕ್ರಿ.ಪೂ.೧ ನೆಯ ಶತಮಾನದಲ್ಲಿ ಬದುಕಿದ್ದ ಗ್ರೀಸ್ ದೇಶದ ಲ್ಯೂಕ್ರಿಶಿಯಸ್, ಇಗ್ನಿಸ್ ಸೇಕರ್ ಎಂಬ ರೋಗಲಕ್ಷಣವನ್ನು ವರ್ಣಿಸಿರುವುದುಂಟು.

ಈತನ ವರ್ಣನೆಯೂ ವಿವಿಧ ಬ್ಯಾಕ್ಟೀರಿಯಾಗಳ ಸೋಂಕಿನಿಂದ ತಲೆದೋರುವ ಎರಿಸಿಪೆಲಸ್ ಎಂಬ ಕಾಯಿಲೆಯನ್ನು ಸೂಚಿಸುತ್ತದೆ. ಬಹುಶಃ ಅದು ಅರ್ಗಟ್ ವಿಷವಾಗಿರಲಾರದು. ಹಾಗಾಗಿ ಸಂತ ಆಂಥೋಣೀಯವರಿಗೂ ಈ ಶಿಲೀಂಧ್ರ ರೋಗಕ್ಕೂ ನೇರ ಸಂಬಂಧವಿಲ್ಲ ಎನ್ನಬಹುದು. ಆದರೆ ಅರ್ಗಟ್ ವಿಷವೇರಿಕೆಯ ಕಾಯಿಲೆಗೆ ಸಂತ ಆಂಥೋಣಿಯವರ ಹೆಸರು ಅಂಟಿ ಕೊಳ್ಳಲು ಕಾರಣ ಚಿಕಿತ್ಸಾಪಾದ್ರಿಗಳು. ಅವರು ತಮ್ಮ ಹಂದಿಕೊಬ್ಬಿನ ಚಿಕಿತ್ಸೆಯಿಂದ ಚರ್ಮ ಉರಿಯನ್ನು ಶಮನ ಗೊಳಿಸಿದ ಕಾರಣ, ಅವರು ಏನು ಹೇಳಿದರೂ ಅದನ್ನು ಜನಸಾಮಾನ್ಯರು ಒಪ್ಪುತ್ತಿದ್ದರು.

ಹಾಗಾಗಿ ಎಲ್ಲವೂ ಸಂತ ಆಂಥೋನಿಯವರ ಮಹಿಮೆ ಎಂದು ಸಾರಿದರು. ಅಂದಿನ ದಿನಗಳಲ್ಲಿ ಈ ಅರ್ಗಟ್ ವಿಷವು, ಕರೋನಾ ಸೋಂಕಿನಂತೆ ತೀವ್ರ ಸ್ವರೂಪದಲ್ಲಿ ಹರಡಿ, ಅನೇಕ ಯೂರೋಪಿಯನ್ನರ ಸಾವಿಗೆ ಕಾರಣ ವಾಗಿತ್ತು. ಜನಸಾಮಾನ್ಯರಿಗಾಗಲಿ, ಚಿಕಿತ್ಸಾ ಪಾದ್ರಿಗಳಿಗಾಗಲಿ ಅರ್ಗಟ್ ವಿಷ ಎಂದರೇನು, ಅದು ಹೇಗೆ ಬರುತ್ತದೆ, ಅದನ್ನು ನಿಗ್ರಹಿಸುವ ವಿಧಾನ ಇತ್ಯಾದಿಗಳ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಚಿಕಿತ್ಸಾಪಾದ್ರಿಗಳು ತಮ್ಮ ಹಂದಿ ಕೊಬ್ಬಿನ ಚಿಕಿತ್ಸೆಯಿಂದ ಶ್ರೀಸಾಮಾನ್ಯನ ಉರಿಗೆ ಶಮನವನ್ನು ತಕ್ಷಣ
ಕಡಿಮೆ ಮಾಡುತ್ತಿದ್ದ ಕಾರಣ, ಅವರು ರೋಗಿಗಳ ಪಾಲಿಗೆ ದೈವಸ್ವರೂಪಿಗಳೇ ಆಗಿದ್ದರು. ಹೀಗೆ ಅರ್ಗಟ್ ವಿಷವೇರಿಕೆಯ ರೋಗಲಕ್ಷಣವು ಸಂತ ಆಂಥೋಣಿಯವರ ಬೆಂಕಿ ಎಂದು ಹೆಸರಾಯಿತು.

 
Read E-Paper click here