ಅಭಿಮತ
ಡಾ.ಸಿದ್ದು ಯಾಪಲಪರವಿ
ಈಗ ಗದುಗಿನ ‘ಗಾಳಿ ಸುದ್ದಿ’ ವೈರಲ್ ಆಗಿದೆ. ಶುದ್ಧ ಗಾಳಿಗೆ ದೇಶದಲ್ಲಿ ಗದಗ ಎರಡನೇ ಸ್ಥಾನದಲ್ಲಿ ಇದೆ ಎಂಬ ಸುದ್ದಿ ಬರೀ ಗಾಳಿ ಸುದ್ದಿಯಲ್ಲ ಎಂಬುದೇ ಸಂತೋಷದ ಸಂಗತಿ. ‘ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು’ ಎಂಬುದು ಜನಪ್ರಿಯ ಗಾದೆ.
ಗಾಳಿ ಗುಂಡಿ ಬಸಪ್ಪನ ಮುಂದೆ ಬೀಸುವ ಗಾಳಿಯಲ್ಲಿ ವಿದ್ಯುತ್ ಇದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಮುಂದೆ ಪವನ ವಿದ್ಯುತ್ ಯೋಜನೆ ಯಶಸ್ವಿ ಆದಾಗ ಗಾಳಿಯಲಿ ವಿದ್ಯುತ್ ಇದೆ ಎಂದು ಖಾತ್ರಿಯಾಯಿತು. ಉತ್ತರ ಕರ್ನಾಟಕದ ಮೊಟ್ಟ ಮೊದಲ ಪವನ ವಿದ್ಯುತ್ ಯೋಜನೆ ಇದು. ಪವನ ಯೋಜನೆ ಜಾರಿಗೊಳಿಸಲು ಅಂದಿನ ಕಾಲದ ತಾಂತ್ರಿಕ ಪರಿಮಿತಿಯಲ್ಲಿ ಯೋಜನೆ ಯಶಸ್ವಿಯಾಗಲು, ಜೋರಾಗಿ ಬೀಸುವ ಗಾಳಿಯೇ ಕಾರಣ.
ಈಗ ಪವನ ಯೋಜನೆ ತಾಂತ್ರಿಕವಾಗಿ ಹೆಚ್ಚು ಸೌಲಭ್ಯ ಪಡೆದುಕೊಂಡಿದೆ. ಈ ಭಾಗದ ಜಮೀನುಗಳಲ್ಲಿ ಫ್ಯಾನುಗಳು ತಲೆ ಎತ್ತಿ ನಿಂತು, ರೈತರಿಗೆ ಜಮೀನಿನ ಮಹತ್ವ ತಿಳಿಸಿವೆ. ‘ಗದುಗಿನ ಗಾಳಿಯಲ್ಲಿ ವಿದ್ಯುತ್ ಇದೆ, ಮಣ್ಣಿನಲ್ಲಿ ಬಂಗಾರವಿದೆ’ ಎಂಬ ಮಾತು ಮತ್ತೆ ದೃಢವಾದದ್ದು ಬಲ್ದೋಟಾ ಕಂಪನಿಗೆ ಸರಕಾರ ಕಪ್ಪತಗುಡ್ಡ ಭೂಮಿಯನ್ನು ಕೊಡುವ ನಿರ್ಧಾರ ಪ್ರಕಟಿಸಿದಾಗ. ಬ್ರಿಟಿಷ್ ಕಾಲದಲ್ಲಿ ಇಲ್ಲಿ ಗೋಲ್ಡ ಮೈನಿಂಗ್ ಇತ್ತು ಎಂಬ ಮಾತಿದೆ. ಅದೇ ಕಾರಣದಿಂದ ಬಲ್ದೋಟಾ ಕಂಪನಿ, ಸರಕಾರದ ಮೇಲೆ ತನ್ನ ಪ್ರಭಾವ ಬೀರಿ ಭೂಮಿ ಕಬಳಿಸುವ ಹುನ್ನಾರ ಮಾಡಿತ್ತು.
ಸಾಲದ್ದಕ್ಕೆ ಇಲ್ಲಿ ಅತಿ ಉತ್ಕೃಷ್ಟ ಮಟ್ಟದ ಔಷಧಿಯ ಗುಣಗಳನ್ನು ಹೊಂದಿದ ಗಿಡ ಮೂಲಿಕೆಗಳೂ ಇವೆ. ವಾರ್ತಾ ಇಲಾಖೆಗೆ ‘ಅವಲೋಕನ’ ಸಾಕ್ಷ್ಯಚಿತ್ರ ನಿರ್ದೇಶಿಸಿ ಕೊಡುವಾಗ ಕಪ್ಪತಗುಡ್ಡವನ್ನು ಪರಿಚಯಿಸಲು ನಿರ್ಧರಿಸಿದ್ದೆ. ಆಗ ಕಪ್ಪತಗುಡ್ಡದ ಕುರಿತು ಅದ್ಭುತ ಮಾಹಿತಿ ಕೊಟ್ಟವರು ಲೇಖಕರಾದ ಬಸವರಾಜ ಗಣಪ್ಪನವರ. ಡಂಬಳ ಮೂಲದ ಕತೆಗಾರ ಗಣಪ್ಪನವರ ಅವರಿಗೆ ಕಪ್ಪತಗುಡ್ಡ ಒಂದು ವಿಸ್ಮಯ. ನಾವು ಕೆಲವು ಗೆಳೆಯರು 2002ರಲ್ಲಿ ಗದಗ ಡಿ.ಜಿ.ಎಂ.ಆಯುರ್ವೇದ ಕಾಲೇಜಿನ ಅರವತ್ತು ವಿದ್ಯಾರ್ಥಿಗಳನ್ನು ಕರೆದುಕೊಂಡು ಕಪ್ಪತಗುಡ್ಡದಲ್ಲಿ ಒಂದು ರಾತ್ರಿ ಕಳೆದದ್ದು ಅವಿಸ್ಮರಣೀಯ ಘಟನೆ.
ಅಂದಿನ ಅರಣ್ಯಾಧಿಕಾರಿ ವಿಜಯ್ ಮೋಹನ್ ರಾಜ್ ವಿಶೇಷ ಸಹಕಾರ ನೀಡಿ ಎ ವ್ಯವಸ್ಥೆ ಮಾಡಿದ್ದರು. ರಾತ್ರಿ ಪ್ರಾಣಿಗಳ
ತೊಂದರೆ ತಪ್ಪಿಸಲು ಜನರೇಟರ್ ಮತ್ತು ಟೆಂಟ್ ವ್ಯವಸ್ಥೆ ಕಲ್ಪಿಸಿದ್ದರು. ಎರಡು ದಿನ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ
ನೀಡಿ ಪರಿಸರ ಮತ್ತು ಅರಣ್ಯದ ಮಹತ್ವ ತಿಳಿಸಿ ಕೊಟ್ಟಿದ್ದರು. ಮುಂದೆ ಕಪ್ಪತಗುಡ್ಡ ನನ್ನ ಪಾಲಿನ ಸ್ವಿಜರ್ಲ್ಯಾಂಡ್ ಆಯಿತು.
ಯಾರಾದರೂ ದೂರದಿಂದ ಗೆಳೆಯರು ಬಂದಾಗ ಮತ್ತು ಸಂಕ್ರಮಣದ ಊಟಕ್ಕಾಗಿ ಕಪ್ಪತಗುಡ್ಡಕ್ಕೆ ಹೆಜ್ಜೆ ಹಾಕುತ್ತೇವೆ.
ಅರವತ್ತು ಮೈಲುಗಳಲ್ಲಿ ವ್ಯಾಪಿಸಿರುವ ಕಪ್ಪತಗುಡ್ಡ ನಮ್ಮ ಭಾಗದ ಸಹ್ಯಾದ್ರಿ ಪ್ರದೇಶ ಎಂದು ಗದುಗಿನ ತೋಂಟದಾರ್ಯ
ಮಠದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ಪದೇ ಪದೇ ಹೇಳುತ್ತಿದ್ದರು.
ಕಪ್ಪತಗುಡ್ಡಕ್ಕೆ ಆಗಾಗ ವಿಚಿತ್ರ ರೀತಿಯಲ್ಲಿ ಬೆಂಕಿ ಬಿದ್ದಾಗ ಶ್ರೀಗಳು ಖಂಡಿಸುತ್ತಿದ್ದರು. ಮುಖ್ಯವಾಗಿ ಈ ಭಾಗದ ಅರಣ್ಯ ಇಲಾಖೆಯ ಅಽಕಾರಿಗಳು ಅಪಾರ ಕಾಳಜಿ ಮತ್ತು ಪ್ರೀತಿಯಿಂದ ಕಪ್ಪತಗುಡ್ಡವನ್ನು ರಕ್ಷಣೆ ಮಾಡುತ್ತ ಬಂದಿದ್ದಾರೆ. ಇತ್ತೀಚೆಗೆ ಮಾಧ್ಯಮದ ಗೆಳೆಯರೊಂದಿಗೆ ನಾಟಿ ವೈದ್ಯರಾದ ಬಸವರಾಜ ಕೊಂಚಿಗೇರಿ ಅವರನ್ನು ಭೇಟಿಯಾಗಿದ್ದೆ. ಅವರು ಕಪ್ಪತಗುಡ್ಡದ ವನಸ್ಪತಿಗಳ ಮಹತ್ವ ಮತ್ತು ಅದರ ಬಳಕೆಯ ಕುರಿತು ವಿವರಿಸುತ್ತಿದ್ದರು. ಅವರ ಇಡೀ ಪರಿವಾರದವರು ಗಿಡ ಮೂಲಿಕೆಗಳ ಮೂಲಕ ಔಷಧವನ್ನು ತಯಾರಿಸಿ ಜನರ ಆರೋಗ್ಯ ರಕ್ಷಣೆ ಮಾಡುತ್ತಾರೆ.
ಕಪ್ಪತಗುಡ್ಡ ರಕ್ಷಣೆಯಿಂದಾಗಿ ಶಿರಹಟ್ಟಿ ಮತ್ತು ಮುಂಡರಗಿ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದೆ. ತನ್ಮೂಲಕ ನೀರಾವರಿ ಅಭಿವೃದ್ಧಿ ಆದ ಮೇಲೆ ಮುಂಡರಗಿ ಮತ್ತು ಶಿರಹಟ್ಟಿ ಭಾಗದ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಪೋಸ್ಕೋ ಕಂಪನಿಗೆ ರೈತರು ಭೂಮಿ ಮಾರಿಕೊಂಡಿದ್ದರೆ ಇಂದು ಹುಚ್ಚರಾಗುತ್ತಿದ್ದರು. ತೋಂಟದಾರ್ಯ ಸ್ವಾಮಿಗಳು ಹಟಕ್ಕೆ ಬಿದ್ದು ಪೋಸ್ಕೋ ಯೋಜನೆ ಯನ್ನು ರದ್ದು ಮಾಡಿದರು. ಆ ಸಂದರ್ಭದಲ್ಲಿ ಮುಂದೆ ಭೂಮಿಗೆ ಬರಬಹುದಾದ ಮಹತ್ವವನ್ನು ವಿವರಿಸಿದರು.
ನಂತರ 2017ರಲ್ಲಿ ಕಪ್ಪತಗುಡ್ಡ ಉಳಿಸಿ ಚಳುವಳಿ ಮೂಲಕ ಬಲ್ದೋಟಾ ಕಂಪನಿಯಿಂದ ಕಪ್ಪತಗುಡ್ಡ ರಕ್ಷಣೆ ಮಾಡಿದರು. ಪರಿಸರ ರಕ್ಷಣೆ ತಮ್ಮ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಕಾಲ. ಕಾಡು ನಾಶ ಮಾಡುವ ವಿಕೃತ ಆನಂದದ ದುರಾಸೆಯನ್ನು ಕೈ ಬಿಡಬೇಕು. ಕಾಡು ನಾಶ ಮಾಡಿ ಅಕ್ರಮವಾಗಿ ಗಳಿಸಿದ ಕೋಟ್ಯಂತರ ರುಪಾಯಿ ಹಣ, ಮುಂದೆ ನಮ್ಮ ಮಕ್ಕಳನ್ನು ಉಳಿಸಲು ನೆರವಾಗುವುದಿಲ್ಲ. ಶುದ್ಧ ಗಾಳಿ, ಸ್ವಚ್ಛ ನೀರು ದಟ್ಟವಾದ ಕಾಡು ಮಾತ್ರ ಮುಂದಿನ ಜನಾಂಗ ವನ್ನು ಕಾಪಾಡಲು ಸಾಧ್ಯ.