Sunday, 15th December 2024

ಕೆಚ್ಚು, ಕಿಚ್ಚುಗಳ ನಡುವೆ ಸ್ವಚ್ಛ ಬದುಕು

ಅಭಿವ್ಯಕ್ತಿ

ನಾಗಶ್ರೀ ತ್ಯಾಗರಾಜ್ ಎನ್.

ಕೆಚ್ಚು ಮತ್ತು ಕಿಚ್ಚು ಈ ಎರಡು ಪದಗಳಲ್ಲಿ, ವ್ಯಾಕರಣದ ಮುಖೇನ ಗಮನಿಸಿದರೆ ಅಲ್ಪ ಮಾತ್ರ ವ್ಯತ್ಯಾಸ. ಆದರೆ ಬದುಕಿಗೆ ಅದನ್ನು ಸಮೀಕರಣವಾಗಿಸಿದರೆ ಮಾತ್ರ ಎರಡರ ಮಧ್ಯೆ ದೊಡ್ಡ ಕಂದಕವೇ ಇದೆ ಎಂಬುದು ಗೋಚರವಾಗುತ್ತದೆ. ಕೆಚ್ಚು ಎಂಬುದು ನಮ್ಮೊಳಗಿನ ಛಲ. ಇದರಿಂದ ನಾವು ನಮ್ಮ ಅಭ್ಯುದಯಕ್ಕಾಗಿ ಹೇಗೆ ಶ್ರಮಿಸಬೇಕು. 

ಅಡೆತಡೆಯ ದಾಟದಿರೆ ನದಿ ಕಡಲ
ಸೇರುವುದೆ?
ನಡೆ ಕಲಿತು ಸಾಗದಿರೆ ಪಯಣ
ಮುಗಿಯುವುದೆ?
ಬಂಧನವ ಮೀರದಿರೆ ಜೀವ ಮೇಲೆರುವುದೆ?
ಜಯಕೆ ಸಾಧನ ಕೆಚ್ಚು ಮುದ್ದುರಾಮ. 

ಜೀವನವೆಂದರೆ ಏನು? ಪಂಚಭೂತಗಳಿಂದ ಆಕೃತಿಯೊಂದು ಏರ್ಪಟ್ಟು ಅದರೊಳಗೊಂದು ಪ್ರಾಣ ಎಂಬ ಅಮೂಲ್ಯ ರತ್ನವನ್ನಿಟ್ಟ ಭಗವಂತನು, ಜೀವದಾನ ಮಾಡಿದ. ಆದರೆ ಜೀವನವೆಂದರೆ ಏನೆಂಬುದನ್ನು ಅವರವರ ಮೂಸೆಗೆ ಬಿಟ್ಟುಬಿಟ್ಟ.

ಜಗದ ವಿಷಯ ವಸ್ತುಗಳೆಲ್ಲವನ್ನು ಪಡೆದು ಅದರೊಂದಿಗೆ ಲೋಲುಪತೆಯಲ್ಲಿ ತೇಲಾಡಿ ಎಲ್ಲವನ್ನೂ ಅನುಭವಿಸಿ ತೆರಳುವುದು ಈ ಜೀವನವು, ಎಂಬುದು ಕೆಲವರ ಅಭಿಪ್ರಾಯವಾದರೆ, ಎಲ್ಲವೂ ಇದ್ದು ಯಾವುದಕ್ಕೂ ಹಂಬಲಿ ಸದೇ ವೈರಾಗ್ಯವೇ ಜೀವನದ ಸಾಧನೆ ಎಂಬುದು ಮತ್ತು ಕೆಲವರ ಅಭಿಪ್ರಾಯ. ಕೆಲವರು ತಿನ್ನುವುದಕ್ಕೆಂದೇ ಬದುಕಿರುತ್ತಾರೆ, ಇನ್ನೂ ಕೆಲವರು ಬದುಕಬೇಕೆಂಬುದಕ್ಕೆ ಔಷಽಗಳೇ ತಿನಿಸಾಗಿರುತ್ತದೆ.

ಕೆಲವರಿಗೆ ಕಾಯಕದ ಮೂಲಕ ಆಸ್ತಿ ಸಂಪಾದಿಸುವುದೇ ಜೀವನವೆನಿಸಿದರೆ, ಮತ್ತೆ ಕೆಲವರಿಗೆ ಸೇವೆಯೇ ಪರಮಧರ್ಮವೆನಿಸಿರುತ್ತದೆ. ಕೆಲವರಿಗೆ ವ್ಯಂಗ್ಯ ಮಾಡುತ್ತಾ ನಗುವುದು ಜೀವನವಾದರೆ, ಮತ್ತು ಕೆಲವರಿಗೆ ತಾನೂ ನಗುತ್ತಾ, ಮತ್ತೊಬ್ಬರನ್ನೂ ನಗಿಸುವ ನಗೆಯೋಗಿಗಳಾಗಿರುತ್ತಾರೆ. ತ್ಯಾಗದ ಜೀವನ ಕೆಲವರ ದ್ದಾದರೆ, ಭೋಗದ ಜೀವನ ಹಲವರದ್ದಾಗಿರುತ್ತದೆ. ತನ್ನ ಸಾಧನೆಯ ಹಾದಿಯಲ್ಲಿ ಗುರಿ ಮುಟ್ಟುವ ಸಲುವಾಗಿ ಟ್ರ್ಯಾಕ್‌ನಲ್ಲಿ ವೇಗದಿಂದ ಓಡುತ್ತಿರುವ ಮಂದಿ ಕೆಲವರಾದರೆ, ಈ ಓಡುತ್ತಿರುವವರನ್ನು ಬೀಳಿಸುವುದು ಹೇಗೆಂಬ ಅಸೂಯೆಯ ಮನಸ್ಸು ಕೆಲವರದ್ದಾಗಿರುತ್ತದೆ.

ಕೆಚ್ಚಿನ ಬದುಕು ಕೆಲವರು ಬಯಸಿದರೆ, ಬಂದದ್ದು ಬರಲಿ ಎಂಬ ಅಲ್ಪತೃಪ್ತಿಯ ಬದುಕನ್ನೂ ಕೆಲವರು ಅಪ್ಪಿರುತ್ತಾರೆ. ಹೀಗೆ ಬದುಕೆಂಬುದು, ಜೀವನವೆಂಬುದು ಅವರವರ ಮೂಸೆಗೆ ನಿಲುಕಿದ್ದಾಗಿರುತ್ತದೆ. ಶಾಂತಿ-ಕ್ರಾಂತಿಗಳ ನಡುವೆ ಕಾಯಕ ಯೋಗಿಗೆ ದುಡಿಮೆಯೇ ವಿಶ್ರಾಂತಿಯಾದರೆ, ಸೋಮಾರಿಗೆ ಸುಮ್ಮನೆ
ಕುಳಿತಿರುವುದೂ ಕೂಡ ಕೆಲಸವಾಗಿ ಕಾಣುತ್ತಿರುತ್ತದೆ. ಹಾಗಾಗಿ ಎಲ್ಲ ಬಂಧನಗಳ ಮೀರದೇ ಅದು ಬೇಕು, ಇದು ಬೇಕು ಎಂಬ ಬೇಕುಗಳ ಪಟ್ಟಿಯಲ್ಲಿಯೇ
ಸಿಲುಕಿದರೆ, ಜೀವನವೆಂಬುದು ಚೌಕಟ್ಟಿನೊಳಗೇ ಸದಾ ಬಂಽಯಾಗಿರುತ್ತದೆಯೇ ಹೊರತು, ತಿಳಿಯಾಗಿ ಹಗುರಾಗಿ ಶಾಂತವಾಗಿ ಅದು ಮೇಲೇರಲು ಆಗುತ್ತ ದೆಯೇ? ಹಾಗಾಗಿ ಸಾಽಸುವ ಮನಸೊಂದು ಸದಾ ಹಸಿರಾಗಿರಲಿ ಎಂಬ ಮಾತನ್ನು ಈ ಮೇಲಿನ ಮುದ್ದುರಾಮನ ಪದ್ಯವು ತಿಳಿಸುತ್ತಿದೆ.

ನಡೆ ಕಲಿತು ಸಾಗದಿರೆ ಪಯಣ ಮುಗಿಯುವುದೇ? ಬದುಕಿನಲ್ಲಿ ನಾವು ನಡೆಯುವುದ ಕಲಿಯುವಷ್ಟು ಸುಲಭವಲ್ಲ, ಈ ನುಡಿಯುವುದನ್ನು ಕಲಿಯುವುದು. ಬಾಳಿನ ಸರ್ವ ಮಂತ್ರ-ತಂತ್ರಗಳು ಈ ನಡೆ-ನುಡಿಯೊಳಗೆಯೇ ಅಡಕವಾಗಿದೆ ಎಂಬುದು ಅಷ್ಟೇ ಸತ್ಯದ ಮಾತು. ತತ್ತ್ವಜ್ಞಾನಿಯೊಬ್ಬರು ಈ ಸಾಲಿಗೆ ಒಂದು ಉತ್ತಮ
ನಿದರ್ಶನವನ್ನು ನೀಡಿದ್ದಾರೆ. ಇದನ್ನು ಆಂಗ್ಲಭಾಷೆಯಲ್ಲಿ ಅಡ್ಜಸ್ಟ್ ಯುವರ್ ಪ್ಲ್ಯಾನ್ಸ್ ಆಂಡ್ ಅಡಾಪ್ಟ್ ಟು ಚಾಲೆಂಜಸ್ ಎಂಬುದಾಗಿ ಅಂದರೆ, ನಮ್ಮ ಯೋಜನೆಗಳಿಗೆ ಹೊಂದಿಸಿಕೊಂಡು, ಸ್ಪರ್ಧೆಗೆ ನಿನ್ನನ್ನು ನೀನು ಪರಿವರ್ತಿಸಿಕೋ ಎಂದು.

ಏನಿದರ ಅರ್ಥ? ಅದರ ಸೂಕ್ಷ್ಮತೆ ಇಲ್ಲಿದೆ ನೋಡಿ. ಜಗತ್ತಿನಲ್ಲಿರುವ ಸಾವಿರಾರು ಆಟಗಳ ಮಧ್ಯೆ ಚೆಸ್ ಅಥವಾ ಚದುರಂಗದಾಟವು ಬುದ್ಧಿವಂತಿಕೆಯ ಆಟವೆಂದೇ ಹೆಸರುವಾಸಿ. ಭಾರತದ ಮಹಾಕಾವ್ಯವಾಗಿರುವ ಮಹಾಭಾರತದಲ್ಲಿಯೂ ಕೂಡ ಚದುರಂಗ ಆಟವೇ ಪ್ರಮುಖ. ಈ ಆಟದಲ್ಲಿ ತನ್ನ ಸೈನ್ಯ ಎದುರಾಳಿಯ ಸೈನ್ಯದೊಂದಿಗೆ ಅಲ್ಲಿರುವ ೬೪ ಮನೆಗಳನ್ನು ಬಳಸಿಕೊಂಡು, ಒಂದು ಕ್ರಮದಲ್ಲಿ ಕಾದಾಡುತ್ತಾ ಯುದ್ಧ ಮಾಡಬೇಕು, ಅಂದರೆ ಆಡಬೇಕು. ಒಲಿಂಪಿಕ್ಸ್‌ನಲ್ಲಿ ಆಡುವ ಬೇರೆ ಆಟಗಳಂತೆ ಅಲ್ಲ ಈ ಚದುರಂಗ. ಓಟದ ಸ್ಪರ್ಧೆ, ಎತ್ತರ ಜಿಗಿತ, ಉದ್ದ ಜಿಗಿತ ಇಂತಹ ಎಲ್ಲ ಆಟಗಳಲ್ಲಿ ನಾವು ವೈಯುಕ್ತಿಕವಾಗಿ ಹೆಚ್ಚು ಸಾಧನೆ ಹಾಗೂ ತಯಾರಿ ಮಾಡಿಕೊಂಡು ಅದರಂತೆ ಸ್ಥಾನ ಗಳಿಸಬಹುದು. ಆದರೆ ಚದುರಂಗದಾಟದಲ್ಲಿ ನಾವು ಎಷ್ಟೇ ತಯಾರಿ ಹಾಗೂ ಪೂರ್ವಾಭ್ಯಾಸ
ಮಾಡಿಕೊಂಡರೂ ಆಟದ ಸಮಯದಲ್ಲಿನ ನಿರ್ಧಾರಗಳೇ ಅತಿ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತದೆ.

ಆಟದಲ್ಲಿ ನಾವೀಗ ಒಂದು ಪಾನ್ ಅನ್ನು ಮುಂದಿಟ್ಟಿದ್ದೇವೆ ಎಂದುಕೊಳ್ಳೋಣ. ಇದೀಗ ಮುಂದಿನ ಸರದಿ ಎದುರಾಳಿಯದ್ದು, ಆತ ಯಾವ ಪಾನ್ ಅನ್ನು ಮುಂದಿಡುವನು ಎಂಬುದರ ಮೇಲೆ ಮುಂದಿನ ಆಟದ ಬಗೆ ನಿರ್ಧಾರವಾಗುತ್ತದೆ. ನಮ್ಮ ನಡೆ ಎಷ್ಟೇ ಸುಲಭ ಮಾಡಿಕೊಂಡಿದ್ದರೂ, ಎದುರಾಳಿಯ ನಡೆ ಅದನ್ನು ಕಷ್ಟಗೊಳಿಸಬಹುದು. ಹಾಗಾಗಿ ನಮ್ಮ ಮುಂದಿನ ನಡೆಯೆಂಬುದು ಎದುರಾಳಿಯ ನಡೆಯಿಂದ ನಿರ್ಧಾರವಾಗುತ್ತದೆ. ಹಾಗಾಗಿ ಅಂತಹ ಎಲ್ಲ ಯೋಚನೆ ಮತ್ತು
ಯೋಜನೆಗಳಿಗೆ ಹೊಂದಿಕೊಂಡು, ಅರ್ಥೈಸಿಕೊಂಡು ಮುನ್ನುಗ್ಗುವ ಛಲವಿದ್ದರೆ, ಸಾಧನೆಯು ಕಣ್ಮುಂದೆ ನಿಚ್ಚಳವಾಗಿ ಗೋಚರಿಸುತ್ತದೆ.

ಕಲಿತ ನಡಿಗೆಯನ್ನು ಬಿಡದೆ ಸಾಗಿದರೆ ಪಯಣವೆಂಬುದು ಗುರಿಯಲ್ಲಿ ನಿಶ್ಚಲತೆ ಹೊಂದುತ್ತದೆ. ಅಡೆತಡೆಯ ದಾಟದಿರೆ ನದಿ ಕಡಲ ಸೇರುವುದೇ? ಮುದ್ದುರಾಮನ ಪದ್ಯದ ಈ ಮೊದಲ ಸಾಲು ಜೀವನದ ಅಗತ್ಯ ಸಾಲುಗಳು. ಗೋ ವಿಥ್ ದಿ – ಎಂಬ ಆಂಗ್ಲ ನುಡಿ ಜಾಡಿಗೆ ಸಾಮ್ಯವಾದ ವಾಕ್ಯ. ಇದಕ್ಕೆ ಪುಟ್ಟ ಉದಾಹರಣೆ ಯೊಂದನ್ನು ನಾವು ಗಮನಿಸಹೊರಟರೆ, ಸಿಕ್ಕ ವಸ್ತು ಮಾತ್ರ ದಿಟ್ಟವಾದುದು, ಹಿರಿದಾದುದು. ಒಂದು ನದಿ ಪಾತ್ರವನ್ನು ನಾವೀಗ ಗಮನಿಸೋಣ. ಅದರಲ್ಲೂ
ವಿಶೇಷವಾಗಿ ಗಂಗಾ ನದಿಯ ಹರಿಯುವಿಕೆಯ ಗಮನಿಸಿದರೆ ಸೂಕ್ಷ್ಮ ಅಂಶವೊಂದು ಮನಮುಟ್ಟುತ್ತದೆ.

ಗಂಗಾ ನದಿ ತಾನು ಹರಿಯುವಾಗ, ಅದು ಸುಲಲಿತವಾಗಿಯೇನು ಸಾಗುವುದಿಲ್ಲ. ಅದೆಷ್ಟು ಕಲ್ಲು-ಬಂಡೆಗಳು ಅಡ್ಡಲಾಗಿ ಸಿಕ್ಕುತ್ತದೆ. ಕಲ್ಲು ಸಣ್ಣ ಗಾತ್ರದಲ್ಲಿದ್ದರೆ, ಗಂಗಾನದಿಯು ಅದರ ಸುತ್ತ ಸತತವಾಗಿ ಹರಿದು ಅದನ್ನು ನುಣುಪಾಗಿಯೂ, ಸುಂದರವಾಗಿಯೂ ಮಾಡುತ್ತದೆ. ಅದೇ ಕಲ್ಲು, ಗಾತ್ರದಲ್ಲಿ ದೊಡ್ಡದಾಗಿ, ಬಂಡೆಯ ಆಕೃತಿಯಲ್ಲಿ ಅಡ್ಡಲಾಗಿ ನಿಲ್ಲುತ್ತೇನೆಂದು ಎದುರಾಗಿ ನಿಂತರೆ, ಗಂಗೆ ಒಮ್ಮೆ ನಿಂತು ನೋಡುತ್ತದೆ. ನಿಲ್ಲುವುದು ಕ್ಷಣ ಮಾತ್ರ, ಅದೂ ಕೂಡ ಗಮನಿಸಲು ಅಷ್ಟೇ. ನಂತರ ಮತ್ತೆ ಅವಿಚ್ಛಿನ್ನವಾಗಿ ಸಾಗಲಾರಂಭಿಸುತ್ತದೆ.

ಗಂಗೆಯ ಪಯಣ ನಿಲ್ಲುವುದೇ ಇಲ್ಲ. ಒಂದು ಅಡ್ಡ ಬಂದಿರುವ ಬಂಡೆಯ ಕೆಳಗೆ ಜಾಗವಿದ್ದರೆ ನುಸುಳಿ ಸಾಗುತ್ತದೆ. ಇಲ್ಲವೇ ಎಡ-ಬಲಗಳ ಪಕ್ಕದಲ್ಲಿ ಸ್ಥಳಾವ ಕಾಶವಾದರೆ ಅಲ್ಲಿಂದ ಸಾಗುತ್ತದೆ. ಎಲ್ಲೂ ಇಲ್ಲವಾದರೆ ಕೊನೆಗೆ ಬಂಡೆಯ ಮೇಲಿಂದ ಹತ್ತಿ ಧುಮುಕುತ್ತದೆ. ಹೀಗೆ ಬಂಡೆಯನ್ನೇ ನಾಲ್ಕೂ ಕಡೆಯಿಂದ ಆವರಿಸುತ್ತಾ, ತಾನು ತನ್ನ ಪಯಣದಲಿ ಬಿಡದೆ ಮುನ್ನುಗ್ಗಿ ತನ್ನ ಗುರಿಯಾದ ಕಡಲನ್ನು ಸೇರಿಬಿಡುತ್ತದೆ. ಅದರ ಮೂಲಕ ಸಂತೃಪ್ತಿಯನ್ನೂ ಸಮಾಧಾನವನ್ನೂ ಪಡೆಯುತ್ತದೆ. ಹಾಗಾಗಿ ಬಂದ ಅಡೆತಡೆಯ ದಾಟದಿದ್ದರೆ, ನದಿಯು ಕಡಲ ಸೇರಲು ಸಾಧ್ಯವೇ? ಹೆಜ್ಜೆ ಇಟ್ಟ ದಾರಿಯಲ್ಲಿ ಸಾಗುವುದೇ ನಮ್ಮ ಸಾಧನೆ.

ಏನೇ ಅಡ್ಡ ಬರಲಿ, ದಿಟ್ಟ ಹೆಜ್ಜೆ, ಽರ ಕ್ರಮವೊಂದು ಇರಲೇ ಬೇಕು. ಅದೇ ನಮ್ಮ ಸಾಧನೆಗೆ ಕೆಚ್ಚು ಅಥವಾ ಛಲ. ಕೆಚ್ಚು ಮತ್ತು ಕಿಚ್ಚು ಈ ಎರಡು ಪದಗಳಲ್ಲಿ, ವ್ಯಾಕರಣದ ಮುಖೇನ ಗಮನಿಸಿದರೆ ಅಲ್ಪ ಮಾತ್ರ ವ್ಯತ್ಯಾಸ. ಆದರೆ ಬದುಕಿಗೆ ಅದನ್ನು ಸಮೀಕರಣವಾಗಿಸಿದರೆ ಮಾತ್ರ ಎರಡರ ಮಧ್ಯೆ ದೊಡ್ಡ ಕಂದಕವೇ ಇದೆ ಎಂಬುದು ಗೋಚರವಾಗುತ್ತದೆ. ಕೆಚ್ಚು ಎಂಬುದು ನಮ್ಮೊಳಗಿನ ಛಲ. ಇದರಿಂದ ನಾವು ನಮ್ಮ ಅಭ್ಯುದಯಕ್ಕಾಗಿ ಹೇಗೆ ಶ್ರಮಿಸಬೇಕು. ಆ ಮೂಲಕ ಹೇಗೆ ಗುರಿ ಸಾಽಸಬೇಕು ಎಂಬ ಸಕಾರಾತ್ಮಕ ಅಂಶದಿಂದ ಅನಾವರಣಗೊಳ್ಳುತ್ತದೆ. ಆದರೆ ಕಿಚ್ಚು ಎಂಬುದು ತನ್ನ ಸಾಧನೆಗಿಂತ, ಪರರ ಮೇಲಿನ ದೋಷಾರೋ ಪಣೆಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಡುತ್ತದೆ.

ಪರರ ಮೇಲಿನ ದ್ವೇಷ ಅಸೂಯೆಗಳೇ ಕಿಚ್ಚು. ಕಿಚ್ಚು ಎಂಬುದು ತನ್ನ ಒಡಲ ಸುಡದೇ ಬೇರೆಯವರ ಸುಟ್ಟೀತೇ? ಎಂದು ವಚನಕಾರರೂ ಕೂಡ ನುಡಿದಿದ್ದಾರೆ. ಈ ಕಿಚ್ಚು ಎಂಬುದು ಹೇಗೆಂದರೆ, ತಾನು ವಿಷ ಕುಡಿದು ಪರರ ಸಾವನ್ನು ಬಯಸಿದಂತೆ. ಹಾಗಾಗಿ ಮುದ್ದುರಾಮ ಪದ್ಯದಲ್ಲಿ ಕವಿ ಕೆ.ಸಿ.ಶಿವಪ್ಪನವರೂ ಸಹ, ನಮ್ಮ ಜಯಕ್ಕೆ, ನಮ್ಮ ಗೆಲುವಿಗೆ, ನಮ್ಮ ಯಶಸ್ಸಿಗೆ ಸಾಧನ ಎಂಬುದು ಕೆಚ್ಚಾಗಲಿ, ಕಿಚ್ಚಾಗದಿರಲಿ ಎಂದು ತಿಳಿಸಿದ್ದಾರೆ. ಆ ಮೂಲಕ ಬದುಕಿನಲಿ ನಾವು ಕಚ್ಚಾಡದೇ,
ಸೌಹಾರ್ದತೆಯ ದೀಪ ಹಚ್ಚೋಣ. ಹೌದಲ್ಲವೇ?