Sunday, 15th December 2024

ಫೆಬ್ರವರಿ ಆಕಾಶ ವೀಕ್ಷಣೆ ಹೇಗಿರುತ್ತದೆ ?

ಪ್ರಚಲಿತ

ಎಲ್‌.ಪಿ.ಕುಲಕರ್ಣಿ

ಫೆಬ್ರವರಿ, ಮಾರ್ಚ್, ಏಪ್ರಿಲ್ ಈ ಮೂರು ತಿಂಗಳು ಆಕಾಶ ವೀಕ್ಷಣೆ ಬಹಳ ಕುತೂಹಲಕಾರಿ ಯಾಗಿರುತ್ತದೆ. ಸ್ವಚ್ಛಂದ ಆ ರಾತ್ರಿ ಕಪ್ಪು ಆಕಾಶದಲ್ಲಿ ಗ್ರಹ, ಕ್ಷುದ್ರಗ್ರಹ, ನಕ್ಷತ್ರ ಮುಂತಾದ ಆಕಾಶ ಕಾಯಗಳನ್ನು ನೋಡುವುದೇ ಒಂದು ರೋಮಾಂಚನ. ಆ ಸ್ವಚ್ಛಂದ ಕಪ್ಪು ಆಕಾಶದಲ್ಲಿ ಒಟ್ಟು ೮೮ ನಕ್ಷತ್ರ ಪುಂಜಗಳನ್ನು ಇದುವರೆಗು ಗುರುತಿಸಲಾಗಿದೆ. ಸಂಜೆ ಏಳು ಗಂಟೆಯ ನಂತರ ಕಪ್ಪು ರಾಶಿಯ ಆಕಾಶವನ್ನು ತಲೆ ಎತ್ತಿ ನೋಡಿದಾಗ ನಮ್ಮ ನೆತ್ತಿಯ ಮೇಲೆ ಫಳಫಳಾ ಅಂತಾ ಹೊಳೆಯುತ್ತಾ ಗೋಚರಿಸುವುದೇ ರೋಹಿಣಿ ನಕ್ಷತ್ರ. ವೃಷಭ ರಾಶಿಯಲ್ಲಿರುವ ಈ ನಕ್ಷತ್ರವು ೬೬ ಜೋತಿರ್ವರ್ಷದಷ್ಟು ದೂರದಲ್ಲಿದೆ. ಸೂರ್ಯನಿಗಿಂತಲೂ ೧ ಲಕ್ಷ ಪಟ್ಟು ದೊಡ್ಡದಾಗಿರುವ ಈ ರೋಹಿಣಿ ನಕ್ಷತ್ರವನ್ನು ನೋಡುವುದೇ ಒಂದು ಸೊಗಸು.

ಈಗಿನ ಬಹಪಾಲು ಜನರಿಗೆ ಆಕಾಶ ವೀಕ್ಷಣೆ ಕುತೂಹಲಕಾರಿ ಎನಿಸುತ್ತಿಲ್ಲ. ಏಕೆಂದರೆ ಕೈಯಲ್ಲಿ ಮೊಬೈಲ್ ಇದೆಯ, ಹೀಗಾಗಿ ಅವರು ತಮ್ಮ ಚೆಂಡನ್ನು (ತಲೆ) ಬಾಗಿಸಿ ಪದೇ ಪದೆ ಅದರಲ್ಲಿ ಫೇಸ್ಬುಕ್‌, ವಾಟ್ಸಪ್,ಇನ್ಸ್ಟಾಗ್ರಾಮ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಏನೆ ಹೊಸ ಪೋಸ್ಟ್‌ಗಳು
ಬಂದಿವೆ, ಕಾಮೆಂಟ್‌ಗಳೆಷ್ಟು, ಲೈಕ್‌ಗಳೆಷ್ಟು ಇವುಗಳನ್ನು ನೋಡುವುದರ ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಕಳೆಯುತ್ತಿರುತ್ತಾರೆ. ಇಪ್ಪತ್ನಾಲ್ಕು
ಗಂಟೆಗಳನ್ನು ಮೊಬೈಲ್ ನೋಡುವುದರ ಕಳೆಯುತ್ತಾರೆಂದರೆ ಗಾಬರಿಯಾಗಬೇಡಿ. ನಿದ್ರೆಗೆ ಸಮಯವನ್ನೇ ಕೊಡುತ್ತಿಲ್ಲವೆ ಎಂದು ಯೋಚಿಸಬೇಡಿ.

ಏಕೆಂದರೆ ರಾತ್ರಿ ಆರೇಳು ಗಂಟೆ ಮಲಗಿದರೂ ಕೂಡ ಫೇಸ್ಬುಕ್, ವಾಟ್ಸಪ್‌ಗಳಲ್ಲಿ ಅಪ್ಲೋಡ್ ಆಗುವ ಹೊಸ ಹೊಸ ಪೋಸ್ಟ್‌ಗಳ ಕನಸನ್ನೇ ಕಾಣುತ್ತಿರುತ್ತಾರೆ. ಅಷ್ಟೊಂದು ಜನ ಈಗ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟಾಗಿಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಮಕ್ಕಳಂತೂ ಈಗ ಆನ್ ಲೈನ್ ಕ್ಲಾಸ್ ನೆವದಲ್ಲಿ ಇಲ್ಲಸಲ್ಲದ ಜಾಲತಾಣಗಳಿಗೆ ಭೇಟಿಕೊಡುತ್ತ ಹಾದಿತಪ್ಪುತ್ತಿದ್ದಾರೆ. ನಾವು ಚಿಕ್ಕವರಾಗಿದ್ದಾಗ ಮನೆಗೆ ಮಾವ, ಚಿಕ್ಕಪ್ಪ, ಅಜ್ಜ ಯಾರಾದರೂ ಊರಿನಿಂದ ಬಂದರೆ ಖುಷಿಯಿಂದ ಅವರ ಬಳಿ ಹೋಗುತ್ತಿದ್ದೆವು.

ಆದರೆ, ಈಗಿನ ಮಕ್ಕಳಿಗೆ ಬಂಧು ಆಪ್ತೇಷ್ಟರ ಬಗ್ಗೆ ಎಳ್ಳಷ್ಟು ಕುತೂಹಲ, ಆತ್ಮೀಯ ಭಾವ ಇಲ್ಲದಂತಾಗಿದೆ. ಏಕೆಂದರೆ, ಈಗಿನ ಮಕ್ಕಳು ದಿನದ
ಬಹುಪಾಲು ಆನ್‌ಲೈನ್ ಕ್ಲಾಸ್, ಆನ್ ಲೈನ್ ಗೇಮ್ ಗಳ ಮುಳುಗಿಬಿಟ್ಟಿರುತ್ತಾರೆ. ಮುಖವೆತ್ತಿ ಮಾತನಾಡುವುದು ಒತ್ತಟ್ಟಿಗಿರಲಿ, ಮುಖವೆತ್ತಿ
ಮುಂದಿರುವವರನ್ನು ನೋಡುವಷ್ಟು ಸಹ ಅವರಲ್ಲಿ ವ್ಯವಧಾನ ಉಳಿದಿಲ್ಲ. ಮೊಬೈಲ್ ನೋಡುವುದನ್ನು ಬಿಟ್ಟು ಮುಂದಿರುವವರ ಜತೆ ಮಾತನಾಡಲೂ ಹೋಗದ ಈಗಿನ ಮಕ್ಕಳು ರಾತ್ರಿ ತಲೆ ಎತ್ತಿ ಆ ಸ್ವಚ್ಛಂದ ಆಕಾಶ ನೋಡಿಯಾರೆ. ಖಂಡಿತಾ ಇಲ್ಲ ಎನಿಸುತ್ತೆ.

ಏಕೆಂದರೆ, ಸಂಜೆಯಾದರೆ ಸಾಕು ಮನೆಯಲ್ಲಿರುವ ಹಿರಿಯರೆ ಟಿ.ವಿ ಯಲ್ಲಿ ಬರುವ ಧಾರಾವಾಹಿ, ಸಿನಿಮಾಗಳ ಮುಳುಗಿರುತ್ತಾರೆ. ಕೆಲವು ಹಿರಿಯರು ಮನೆಯ ಒಂದು ಮೂಲೆಯಲ್ಲಿ ಮೊಬೈಲ್ ಹಿಡಿದುಕೊಂಡು ಚಾಟ್ ಮಾಡುತ್ತ ಕುಳಿತರೆ ಮುಗಿದೇ ಹೋಯಿತು. ಸುತ್ತಲು ಏನಾಗುತ್ತಿದೆ ಎಂಬ ಪರಿವೇ ಇರುವುದಿಲ್ಲ. ಹೀಗಿರುವಾಗ ಮಕ್ಕಳು ಇಂತಹ ಹಿರಿಯರನ್ನೇ ಅನುಕರಿಸುತ್ತಾ ನಿಸರ್ಗ ಸೌಂದರ್ಯವನ್ನು ಸವಿಯುವುದನ್ನೇ ಮರೆತು ಬಿಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮೊಬೈಲ್ ಘೀಳಿಗೆ ಬಿದ್ದು, ಮಕ್ಕಳು ಮಾನಸಿಕ ರೋಗಿಗಳಾಗುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ನಾವಿಂದು ಮಕ್ಕಳನ್ನು ಈ ಗೆಜೆಟ್ ಸಾಧನಗಳಿಂದ ದೂರ ವಿರಿಸಬೇಕಾಗಿದೆ.

ಮನೆಯ ಮೇಲ್ಛಾವಣಿಗೋ, ಹೊಲ -ಗದ್ದೆಗಳ ಕಡೆಗೋ ಕರೆದುಕೊಂಡು ಹೋಗಿ ಕಪ್ಪಾದ ಆ ರಾತ್ರಿಯ ಸ್ವಚ್ಛಂದ ಆಕಾಶದಲ್ಲಿನ ನಕ್ಷತ್ರಗಳನ್ನು
ತೋರಿಸಿ, ಅವರಲ್ಲಿ ಕುತೂಹಲ ಮೂಡಿಸಬೇಕಾಗಿದೆ. ಇಂತಹ ಆಕಾಶ ವೀಕ್ಷಣೆ ವಿವರಣೆಯನ್ನು ಬಹಳ ಸರಳವಾಗಿ ಮನಮುಟ್ಟುವ ಹಾಗೆ ವಿವರಿಸುವಲ್ಲಿ ಉಡುಪಿಯ ನಿವೃತ್ತ ಭೌತಶಾಸ್ತ್ರ ಉಪನ್ಯಾಸಕರು ಹಾಗೂ ಪ್ರಾಚಾರ್ಯರೂ ಆಗಿದ್ದ ಡಾ.ಎ.ಪಿ.ಭಟ್ ಅವರು ಸಿದ್ಧಹಸ್ತರು. ಫೆಬ್ರವರಿ, ಮಾರ್ಚ್, ಏಪ್ರಿಲ್ ಈ ಮೂರು ತಿಂಗಳು ಆಕಾಶ ವೀಕ್ಷಣೆ ಬಹಳ ಕುತೂಹಲಕಾರಿಯಾಗಿರುತ್ತದೆ. ಸ್ವಚ್ಛಂದ ಆ ರಾತ್ರಿ ಕಪ್ಪು ಆಕಾಶದಲ್ಲಿ ಗ್ರಹ, ಕ್ಷುದ್ರಗ್ರಹ, ನಕ್ಷತ್ರ ಮುಂತಾದ ಆಕಾಶ ಕಾಯಗಳನ್ನು ನೋಡುವುದೇ ಒಂದು ರೋಮಾಂಚನ.

ಆ ಸ್ವಚ್ಛಂದ ಕಪ್ಪು ಆಕಾಶದಲ್ಲಿ ಒಟ್ಟು ೮೮ ನಕ್ಷತ್ರ ಪುಂಜಗಳನ್ನು ಇದುವರೆಗು ಗುರುತಿಸಲಾಗಿದೆ. ಸಂಜೆ ಏಳು ಗಂಟೆಯ ನಂತರ ಕಪ್ಪು ರಾಶಿಯ ಆಕಾಶವನ್ನು ತಲೆ ಎತ್ತಿ ನೋಡಿದಾಗ ನಮ್ಮ ನೆತ್ತಿಯ ಮೇಲೆ ಫಳಫಳಾ ಅಂತಾ ಹೊಳೆಯುತ್ತಾ ಗೋಚರಿಸುವುದೇ ರೋಹಿಣಿ ನಕ್ಷತ್ರ. ವೃಷಭ ರಾಶಿಯಲ್ಲಿರುವ ಈ ನಕ್ಷತ್ರವು ೬೬ ಜೋತಿರ್ವರ್ಷದಷ್ಟು ದೂರದಲ್ಲಿದೆ.

ಸೂರ್ಯನಿಗಿಂತಲೂ ಲಕ್ಷ ಪಟ್ಟು ದೊಡ್ಡದಾಗಿರುವ ಈ ರೋಹಿಣಿ ನಕ್ಷತ್ರವನ್ನು ನೋಡುವುದೇ ಒಂದು ಸೊಗಸು. ಅಲ್ಲಿಂದ ಪಶ್ಚಿಮಕ್ಕೆ ನೋಡಿದರೆ ಮೇಷರಾಶಿ ಮತ್ತು ಅದರ ಹಿಂದೆಯೇ ಮೀನರಾಶಿ ಕಾಣುತ್ತದೆ. ರೋಹಿಣಿ ನಕ್ಷತ್ರದ ಉತ್ತರಕ್ಕೆ ಪಾರ್ಥ ನಕ್ಷತ್ರವಿರುವ ಗುಂಪಿದೆ. ಇದರಲ್ಲಿ ಚಂಚಲ ನಕ್ಷತ್ರ (ಅಲ್ಗಾಲ್) ವಿದೆ. ಇದರ ಇಂಟೆನ್ಸಿಟಿ ವೇರಿಯೇಷನ್ ನೋಡಲು ೧೦೦ ಗಂಟೆಗಳು ಬೇಕು. ಕಾರಣ ಅದು ಮಂದವಾಗಿ
ಮಿನುಗುತ್ತಿರುವಂತೆ ಗೋಚರಿಸುತ್ತದೆ. ಹೀಗಾಗಿ ಇದನ್ನು ಚಂಚಲ ನಕ್ಷತ್ರವೆಂದು ಕರೆಯಲಾಗುತ್ತದೆ.

ಅದರ ಉತ್ತರಕ್ಕೆ ಧ್ರುವ ನಕ್ಷತ್ರ (ಪೋಲ್ ಸ್ಟಾರ್) ಇದೆ. ಪಾರ್ಥ ನಕ್ಷತ್ರದ ಸುತ್ತಲೂ ನಕ್ಷತ್ರಗಳ ಒಂದು ಪೆಂಟಾಗಾನ್ ರೀತಿಯ ಗುಂಪಿದೆ. ಅ ಹತ್ತಿರದಲ್ಲಿ ೪೨ ಜೋರ್ತಿವರ್ಷದಷ್ಟು ದೂರದಲ್ಲಿ ‘ಕ್ಯಾಪೆ’ ಎಂಬ ನಕ್ಷತ್ರ ಸಿಗುತ್ತದೆ. ಇಲ್ಲಿಂದ ನೇರವಾಗಿ ಈಶಾನ್ಯಕ್ಕೆ ಬಂದರೆ ಅಲ್ಲಿ ಮಿಥುನ ರಾಶಿ ಕಾಣುತ್ತದೆ. ಇಲ್ಲಿ ಸದ್ಯ ಎರಡು ನಕ್ಷತ್ರಗಳು ಫಳಫಳಾಂತ ಹೊಳೆಯುತ್ತಿವೆ.

ಅವೇ ಲವ(ಕ್ಯಾಸ್ಟರ್) ಮತ್ತು ಕುಶ(ಪೊಲಕ್ಸ್) ನಕ್ಷತ್ರಗಳು. ಈ ಕ್ಯಾಸ್ಟರ್ ೫೧ ಜೋರ್ತಿವರ್ಷ ದೂರದಲ್ಲಿದ್ದರೆ ಪೊಲಕ್ಸ್ ೩೩ ಜೋರ್ತಿವರ್ಷದಷ್ಟು
ದೂರದಲ್ಲಿದೆ. ಪೂರ್ವದಿಂದ ಆಗ್ನೀಯ ಕಡೆಗೆ ತಿರುಗಿದರೆ ಮಹಾವ್ಯಾಧ ನಕ್ಷತ್ರಪುಂಜ (ಓರಿಯನ್ ಕಾಸ್ಟಲೇಷನ್ ) ಕಾಣುತ್ತದೆ. ಇಲ್ಲಿ ನಾಲ್ಕು ಪ್ರಮುಖ ನಕ್ಷತ್ರಗಳು ಗೋಚರಿಸುತ್ತವೆ. ಸುಮಾರು ೧೫೨ಜೋ. ವ ದೂರದಲ್ಲಿರುವ ಬೆಲಾಟ್ರಿಕ್ಸ್, ೬೦೦ಜೋ.ವ ದೂರದಲ್ಲಿ ಬೀಟಲ್ ಗೀಜ್, ೮೬೦ಜೋ.ವ ದೂರದ ರೀಗಲ್ ಮತ್ತು ೬೦೦ ಜೋ.ವ ದೂರದಲ್ಲಿ ಮೀಸ್ಸಾ ನಕ್ಷತ್ರಗಳು ಹೊಳೆಯುತ್ತಿರುತ್ತವೆ.

ಮಹಾವ್ಯಾಧನ ಅಂದರೆ ಬೇಟೆಗಾರನ ಹಾಗೆ ಕಾಣುವ ನಕ್ಷತ್ರಗಳ ಈ ಗುಂಪು ಕಾಣುತ್ತದೆ. ಬೇಟೆಗಾರನ ಜತೆಗೆ ಬೇಟೆ ನಾಯಿ ಇರಲೇಬೇಕಲ್ಲವೆ. ಆದ್ದರಿಂದ ಮಹಾ ವ್ಯಾಧನ ಕೆಳಗೆ ಮಹಾಶ್ವಾನ (ಕ್ಯಾನಿಸ್ ಮೇಜರ್) ಇದೆ. ಅ ಹತ್ತಿರದ ಸೂರ್ಯನಿಗೆ ಸಮೀಪವಿರುವ ನಕ್ಷತ್ರ ಲುಬ್ಧಕ (ಸೀರಿಯಸ್) ಇದೆ. ೮.೬ ಜೋ.ವ ದೂರದಲ್ಲಿರುವ ಈ ನಕ್ಷತ್ರ ಸೂರ್ಯನನ್ನು ಬಿಟ್ಟರೆ ನಮಗೆ ಹತ್ತಿರದ ನಕ್ಷತ್ರಗಳಲ್ಲಿ ಇದು ಮೊದಲು. ಆದರೆ ಸೂರ್ಯನಿಗಿಂತ ಹಲವು ಪಟ್ಟು ದೊಡ್ಡದಾಗಿದೆ ಈ ಲುಬ್ಧಕ.

ಮಹಾಶ್ವಾನ ಮತ್ತು ಆದ್ರಾ ನಕ್ಷತ್ರಗಳ ಪೂರ್ವಕ್ಕೆ ಲಘುಶ್ವಾನವಿದೆ. ಈ ಲಘುಶ್ವಾನ ಹಾಗೂ ಲುಬ್ಧಕ ನಕ್ಷತ್ರಗಳ ನಡುವೆ ಹಲವು ಮಬ್ಬಾಗಿ ಮಿನಿಗುವ ನಕ್ಷತ್ರಗಳು ಗೋಚರಿಸುತ್ತವೆ. ಕೆಲವು ಆಕಾಶಕಾಯಗಳು ಬರಿಗಣ್ಣಿಗೆ ಹಾಗೂ ಸಾಮಾನ್ಯ ಟೆಲೆಸ್ಕೋಪಿನಲ್ಲಿ ಸ್ಪಷ್ಟವಾಗಿ ಕಂಡರೆ, ಇನ್ನು ಕೆಲವು ಅಸ್ಟ್ರಾನೊಮಿಕಲ್ ಟೆಲಿಸ್ಕೋಪ್‌ನಲ್ಲಿ ಮಾತ್ರ ಸ್ಪಷ್ಟವಾಗಿ ಕಾಣುತ್ತವೆ.

ಬಹಳ ಪ್ರಕಾಶಮಾನವಾಗಿ ಕಾಣುವ ನಕ್ಷತ್ರಪುಂಜಗಳಾದ ವೃಷಭ, ಮಹಾವ್ಯಾಧ, ಮಿಥುನ, ಪರಾರ್ಥ (ಪರ್ಸಿಯುಸ್), ವಿಜಯಸಾರಥಿ (ಆರಿಗಾ), ಮಹಾಶ್ವಾನ (ಕ್ಯಾನಿಸ್ ಮೇಜರ್), ಲಘು ಶ್ವಾನ (ಕ್ಯಾನಿಸ್ ಮೈನರ್), ಕುಂತಿ (ಕೆಸಿಯೋಪಿಯಾ), ದ್ರೌಪದಿ (ಆಂಡ್ರೊಮೆಡಾ). ಇನ್ನು ಮಬ್ಬಾಗಿ ಕಾಣುವ ನಕ್ಷತ್ರ ಪುಂಜಗಳಾದ ಯುಧಿಷ್ಟಿರ (ಸಿಫಿಯಸ್), ಕಟಕ, ದೇವನೌಕೆ (ಕೆರೀನ್), ಕಪೋತ (ಫಿನಿಕ್ಸ್), ಶೃಗಾಲ (ಲಿಂಕ್ಸ್), ಚಕೋರ (ಕೋಲಂಬಾ), ನಕುಲ(ಪರಗಸಸ್), ತಿಮಿಂಗಲ (ಸೆಟಸ್), ಮೀನ, ಮೇಷ ಮುಂತಾದವು. ಇದುವರೆಗೂ ನಕ್ಷತ್ರಗಳ ಸಮೂಹ ಅಂದರೆ ನಕ್ಷತ್ರ ಪುಂಜಗಳ ಬಗ್ಗೆ ತಿಳಿದುಕೊಂಡೆವು.

ಇನ್ನು ಫಳಫಳ ಹೊಳೆಯುವ ನಕ್ಷತ್ರಗಳ ಬಗ್ಗೆ ನೋಡೋಣ. ಅವುಗಳಲ್ಲಿ ಲುಬ್ಧಕ (ಸೀರಿಯಸ್), ಅಗಸ್ತ್ಯಯ ಕೆನೋಪಸ್), ದಕ್ಷಿಣ ಮೀನ ಪುಂಜದ ಮೀನಾಕ್ಷಿ (-ಮಲ್ಹೌಟ್). ಫೆಬ್ರವರಿಯಲ್ಲಿ ಗೋಚರಿಸುವ ಈ ಎಲ್ಲ ನಕ್ಷತ್ರ ಪುಂಜಗಳು, ನಕ್ಷತ್ರಗಳ ಬಗ್ಗೆ ತಿಳಿದುಕೊಂಡ ನಂತರ, ಈ ತಿಂಗಳ ವಿಶೇಷ ಆಕಾಶ ವೀಕ್ಷಣಾ ಘಟನಾವಳಿಗಳ ಕಡೆ ಇಣುಕೋಣ. ಫೆಬ್ರವರಿ ರಂದು ಚಂದ್ರ ಭೂಮಿ ನಡುವೆ ಕನಿಷ್ಠ ಅಂತರವಿರಲಿದೆ. ನೇ ತಾರೀಖು ಚಾಂದ್ರ ಮಾಸದ ಕೊನೆಯ ಪಾದ. ರಂದು ಶುಕ್ರ- ಶನಿ ಗ್ರಹಗಳ ನಡುವೆ ಅರ್ಧ ಡಿಗ್ರಿ ಅಂತರ. ರಂದು ಬುಧ ಗ್ರಹದ ನೀಚ ಯತಿ. ರಂದು ಸರಾಸರಿ ಗಂಟೆಗೆ ಉಲ್ಕೆಗಳಂತೆ ಸುರಿಯುವ ಅಲಾ- ಸೆಂಟೌರಿಡ್ ಉಲ್ಕಾಪಾತ.

೧೦ರಂದು ಚಂದ್ರ ಮತ್ತು ಮಂಗಳ ಜೋಡಿ. ೧೧ರಂದು ಗುರು – ಶುಕ್ರ ನಡುವೆ ಪುಟ್ಟ ಗುಂಪು. ೧೩ರಂದು ಬುಧ – ಶುಕ್ರ ಜೋಡಿ. ೧೫ರಂದು ಬುಧ – ಗುರು – ಶನಿ ಪುಟ್ಟ ಗುಂಪು. ೧೮ರಂದು ಚಂದ್ರ – ಭೂಮಿ ನಡುವೆ ಗರಿಷ್ಠ ಅಂತರ. ೧೯ರಂದು ಮಂಗಳ – ಚಂದ್ರ ಜೋಡಿ. ೨೮ರಂದು ಕ್ಯಾಪ್ರಿಕಾನ್‌ನಲ್ಲಿ ಬುಧ ಗ್ರಹದ ತುತ್ತತುದಿ ಗೋಚರಿಸಲಿದೆ.

ಇಲ್ಲಿ ಗಮನಿಸಲಾಗಿ, ‘ಯತಿ’ ಎಂದರೆ ಎರಡು ಆಕಾಶ ಕಾಯಗಳು ಪರಸ್ಪರ ಸಮೀಪದಲ್ಲಿ ಗೋಚರಿಸುವ ವಿದ್ಯಮಾನ. ಸೂರ್ಯನೊಂದಿಗೆ ಬುಧ ಅಥವಾ ಶುಕ್ರ ಗ್ರಹಗಳ ಯತಿಯು ಸೂರ್ಯನ ಹಿಂದಿನಿಂದ ಸಂಭವಿಸಿದೆ ಉಚ್ಛಯತಿ. ಸೂರ್ಯಬ ಮುಂದೆ ಇದ್ದಾಗ ನೀಚ ಯತಿ ಎನ್ನಲಾಗುತ್ತದೆ. ಒಟ್ಟಿನಲ್ಲಿ ಫೆಬ್ರುವರಿ ತಿಂಗಳಲ್ಲಿ ಮೋಡವಿಲ್ಲದ ರಾತ್ರಿ ಆ ಕಪ್ಪು ಹಾಸಿನಲ್ಲಿ ಇಷ್ಟೆ ವಿದ್ಯಮಾನಗಳು ಜರುಗಲಿವೆ. ಕಾರಣ ನಾವು ಮೊಬೈಲಿನಲ್ಲಿ ಮುಳಿಗೇಳುವುದನ್ನು ಬಿಟ್ಟು ಈ ಫೆಬ್ರವರಿಯ ಪ್ರತಿ ರಾತ್ರಿ ಕತ್ತನ್ನು ಮೇಲಕ್ಕೆತ್ತಿ ಆಕಾಶ ವೀಕ್ಷಣೆಯನ್ನು ಮಾಡೋಣ. ರುದ್ರರಮಣೀಯ ಆ
ನಿಸರ್ಗದ ಸವಿಯನ್ನು ಸವಿಯೋಣ.