Wednesday, 23rd October 2024

ಮುಖ್ಯಮಂತ್ರಿ ಹುದ್ದೆ ಯಾವತ್ತೂ ಖಾಲಿ ಬಿದ್ದಿರಲಿಲ್ಲ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳ ನಡುವೆಯೇ ಕ್ಲೀಷೆಯ ಮಾತೊಂದು ಸುಳಿದಾಡತೊಡಗಿದೆ.

ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂಬುದು ಈ ಮಾತು. ಇದನ್ನು ಬಳಸುವವರಿಗೆ ಇತಿಹಾಸದ ಅರಿವು ಕಡಿಮೆ ಎಂಬುದರಲ್ಲಿ ಅನುಮಾನವೇ ಬೇಕಿಲ್ಲ. ಅಂದ ಹಾಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಯಾವತ್ತು ಕೆಳಗಿಳಿಸ ಲಾಗುತ್ತದೆ ಅಂತ ಹೇಳುವುದು ಹೇಗೆ ಕಷ್ಟವೋ? ಅವರು ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಖಚಿತವಾಗಿ ಹೇಳುವುದೂ ಅಷ್ಟೇ ಕಷ್ಟ.

ಆದರೆ ನೆನಪಿನಲ್ಲಿಡಬೇಕಾದ ಒಂದು ಅಂಶವೆಂದರೆ, ನಾಯಕತ್ವ ಬದಲಾವಣೆಯ ಬಗ್ಗೆ ವರಿಷ್ಠರ ಸಿಗ್ನಲ್ ಇಲ್ಲದೆ ಸ್ಥಳೀಯ ನಾಯಕರ‍್ಯಾರೂ ಧ್ವನಿ ಎತ್ತುವುದಿಲ್ಲ. ಈ ಸರಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಹಲವರು ಧ್ವನಿ ಎತ್ತಿದ್ದಾರೆ. ಅದು ಬಸವನಗೌಡ ಪಾಟೀಲ್ ಯತ್ನಾಳ್ ಅವರಿರಬಹುದು, ಈಶ್ವರಪ್ಪ, ಸಿ.ಟಿ. ರವಿ ಇರಬಹುದು, ಮತ್ತೀಗ ಸಿ.ಪಿ.ಯೋಗೀಶ್ವರ್ ಇರಬಹುದು.

ಇವರೆಲ್ಲ ಕಾಲಕಾಲಕ್ಕೆ ಧ್ವನಿ ಎತ್ತಿರುವುದರ ಹಿಂದೆ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಗಳಾದವರು ಇದ್ದಾರೆ. ಹೀಗಾಗಿ ಈಗ ಎದ್ದಿರುವ ನಾಯಕತ್ವ ಬದಲಾವಣೆಯ ಮಾತು ಕಾವು ಕಳೆದುಕೊಳ್ಳುವುದಿಲ್ಲ. ಇದರ ನಡುವೆ ಹಲ ನಾಯಕರು ಕ್ಲೀಷೆಯೆದ್ದು
ಹೋಗಿರುವ ಒಂದು ಮಾತನ್ನು ಹೇಳುತ್ತಿದ್ದಾರೆ. ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ಈ ಮಾತು ಇತ್ತೀಚಿನ ವರ್ಷಗಳಲ್ಲಿ ಪದೇ
ಪದೇ ಕೇಳುತ್ತಾ ಅರ್ಥ ಕಳೆದುಕೊಂಡಿದೆ. ಯಾಕೆಂದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು ಯಾವತ್ತೂ ಖಾಲಿ ಇರಲಿಲ್ಲ.

ವಿಧಾನಸಭೆ ಚುನಾವಣೆಗಳು ನಡೆಯುವ ಕಾಲದಲ್ಲಿ ಮುಂದೆ ಯಾರು? ಎನ್ನುವ ಪ್ರಶ್ನೆ ಇರುತ್ತದೆಯೇ ಹೊರತು ಅದು ಖಾಲಿ ಬಿದ್ದ ಉದಾಹರಣೆಯೇ ಇಲ್ಲ. ಸ್ವಾತಂತ್ರ್ಯ ಬಂದ ನಂತರ ಇಲ್ಲಿ ಜವಾಬ್ದಾರಿ ಸರಕಾರ ರಚನೆ ಆಯಿತಲ್ಲ? ಆ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆ.ಸಿ. ರೆಡ್ಡಿ ಅವರಿಗೆ 1952ರಲ್ಲಿ ನಡೆಯುವ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಪುನಃ
ಮುಖ್ಯಮಂತ್ರಿಯಾಗುವ ಕನಸಿತ್ತು. ಇವತ್ತು ವಿಧಾನಸೌಧ ಇರುವ ಜಾಗದಲ್ಲಿ ಶಾಸನಸಭೆಯ ಕಟ್ಟಡವನ್ನು ಕಟ್ಟುವ
ಮಹತ್ವಾಕಾಂಕ್ಷೆ ಅವರಿಗಿತ್ತು. ಇದಕ್ಕೆ ಪೂರಕವಾಗಿ ಅಡಿಗಲ್ಲು ಹಾಕಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವರು ಚಾಲನೆಯನ್ನೂ
ನೀಡಿದ್ದರು.

ಆದರೆ ಕೆ.ಸಿ.ರೆಡ್ಡಿಯವರ ಕಾರ್ಯವೈಖರಿಯ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಜವಾಹರಲಾಲ್ ನೆಹರೂ ಅವರು ರೆಡ್ಡಿ ಯವರನ್ನು ರಾಷ್ಟ್ರ ರಾಜಕಾರಣಕ್ಕೆ ಎಳೆದು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು. ಈ ಬೆಳವಣಿಗೆಯ ನಡುವೆ ಕೆಂಗಲ್ ಹನುಮಂತಯ್ಯ ಅವರು ಮೊದಲ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದರು. ಅಷ್ಟೇ ಅಲ್ಲ, ಶಾಸನಸಭೆಯ ಕಟ್ಟಡ ವನ್ನು ತಮ್ಮ ದೃಷ್ಟಿಕೋನದಿಂದ ರೂಪಿಸಿದರು.

ಅದೇ ಇಂದಿನ ವಿಧಾನಸೌಧ. ಹೀಗೆ ಮುಖ್ಯಮಂತ್ರಿಯಾದ ಕೆಂಗಲ್ ಹನುಮಂತಯ್ಯ ಅವರ ವಿರುದ್ಧ ಸ್ವಪಕ್ಷೀಯರು ಬಂಡಾಯ
ಸಾರಿದರು. ಖುದ್ದು ನೆಹರೂ ಅವರ ಕುಮ್ಮಕ್ಕು ಈ ಬಂಡಾಯದ ಹಿಂದಿತ್ತು ಅನ್ನುವುದು ರಹಸ್ಯವಲ್ಲ. ಇದರ ಪರಿಣಾಮವಾಗಿ ಕೆಂಗಲ್ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು ಕಡಿದಾಳ್ ಮಂಜಪ್ಪ ಅವರು ಬಂದು ಕೂರುವಂತಾಯಿತು.

1956ರಲ್ಲಿ ಮುಖ್ಯಮಂತ್ರಿಯಾದ ನಿಜಲಿಂಗಪ್ಪ ಅವರ ವಿರುದ್ಧ ಎರಡೇ ವರ್ಷದಲ್ಲಿ ಬಂಡಾಯ ಶುರುವಾಗಿ, ಅವರ ಜಾಗಕ್ಕೆ ಬಿ.ಡಿ.ಜತ್ತಿ ಬಂದು ಕುಳಿತರು. 1962ರ ಚುನಾವಣೆಯ ನಂತರ ನಿಜಲಿಂಗಪ್ಪ ಮತ್ತೆ ಮುಖ್ಯಮಂತ್ರಿಯಾಗುವ ಲಕ್ಷಣಗಳು ಕಂಡಾಗ ಜತ್ತಿ ಗ್ಯಾಂಗು ನಿಜಲಿಂಗಪ್ಪ ಅವರ ಕಾಲೆಳೆದು ಹೊಸದುರ್ಗ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಅವರು ಸೋಲುವಂತೆ ಮಾಡಿತು. ಆದರೆ ಇದನ್ನರ್ಥ ಮಾಡಿಕೊಂಡ ನಿಜಲಿಂಗಪ್ಪ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ತಮಗಿದ್ದ ಬಲ ಬಳಸಿ ಜತ್ತಿ ಅವರ ಸೋಲಿಗೆ, ಎಸ್. ಆರ್.ಕಂಠಿ ಅವರ ಗೆಲುವಿಗೆ ಕಾರಣ ರಾದರು. ಕಂಠಿ ಅವರು ಮುಖ್ಯಮಂತ್ರಿಯಾಗಿದ್ದು ಹೀಗೆ.

ಇದಾದ ಕೆಲವೇ ಕಾಲದಲ್ಲಿ ನಿಜಲಿಂಗಪ್ಪ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಯ್ಕೆಯಾಗಿ
ಮುಖ್ಯಮಂತ್ರಿಯಾದರು. 1967ರ ಚುನಾವಣೆಯಲ್ಲೂ ಗೆದ್ದು ಅವರು ಸಿಎಂ ಆದರು. ಆದರೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಗಿ ನೇಮಕಗೊಂಡ ಕಾರಣಕ್ಕಾಗಿ ಇಲ್ಲಿ ತಮ್ಮ ಆಪ್ತರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲು ಮುಂದಾದರು (1968) ಈ ಸಂದರ್ಭದಲ್ಲಿ ಬಿ.ಡಿ.ಜತ್ತಿ ಹಾಗೂ ನಿಜಲಿಂಗಪ್ಪ ಬಣದ ವೀರೇಂದ್ರ ಪಾಟೀಲರ ನಡುವೆ ಪೈಪೋಟಿ ನಡೆಯಿತು.

ಗೆದ್ದ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಆದರೆ 1969ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆ ಆಯಿತು. ಪರಿಣಾಮವಾಗಿ ನಿಜಲಿಂಗಪ್ಪ – ಇಂದಿರಾಗಾಂಧಿ ಪರಸ್ಪರ ದೂರ ಸರಿದರು. ಇದಾದ ಕೆಲವೇ ಕಾಲದಲ್ಲಿ ಸಂಸತ್ ಚುನಾವಣೆ ನಡೆದಾಗ ಇಂದಿರಾ ನೇತೃತ್ವದ ಕಾಂಗ್ರೆಸ್ (ಆರ್)ವಿರುದ್ಧ ವೀರೇಂದ್ರ ಪಾಟೀಲರಿದ್ದ ಕಾಂಗ್ರೆಸ್ (ಓ) ಸೋಲನುಭವಿಸಿತು. ಅಷ್ಟೇ
ಅಲ್ಲ, ಕೆಲವೇ ಕಾಲದಲ್ಲಿ ಉರುಳಿ ಬಿದ್ದು ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲ್ಪಟ್ಟಿತು. ಮುಂದೆ ದೇವರಾಜ ಅರಸರ
ನೇತೃತ್ವದಲ್ಲಿ ಇಂದಿರಾ ಬಣ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಿತಲ್ಲ? ಆ ಸಂದರ್ಭದಲ್ಲಿ ಸಿದ್ಧವೀರಪ್ಪ ಅವರನ್ನು
ಮುಖ್ಯಮಂತ್ರಿ ಹುದ್ದೆಗೇರಿಸುವಂತೆ ಕೆ.ಹೆಚ್.ಪಾಟೀಲರ ನೇತೃತ್ವದ ಶಾಸಕರ ಗುಂಪೊಂದು ಇಂದಿರಾಗಾಂಧಿಯವರನ್ನು ಭೇಟಿ ಮಾಡಿ ಆಗ್ರಹಿಸಿತ್ತು. ಆದರೆ ಇಂದಿರಾ ಆಯ್ಕೆ ದೇವರಾಜ ಅರಸರಾಗಿದ್ದರು.

ಮುಂದೆ ಇಂದಿರಾ – ಅರಸು ಮಧ್ಯೆ ವಿಶ್ವಾಸ ಹಳಸಿದಾಗ ಸಿಎಂ ಹುದ್ದೆಗೆ ಕೇಳಿ ಬಂದ ಮೊದಲ ಹೆಸರು ಹೆಚ್.ಸಿ.ಶ್ರೀಕಂಠಯ್ಯ. ಆದರೆ ಸನ್ನಿವೇಶವನ್ನು ಬಹು ಚೆನ್ನಾಗಿ ಬಳಸಿಕೊಂಡ ಆರ್.ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾದರು. 1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರಕಾರ (ಜನತಾ ರಂಗ) ಬಂದಾಗ ಸಿಎಂ ಹುದ್ದೆಯ ರೇಸಿನಲ್ಲಿದ್ದವರು ಹೆಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ ಮತ್ತು ಸಾರೆಕೊಪ್ಪ ಬಂಗಾರಪ್ಪ. ಆದರೆ ಪಕ್ಷದ ರಾಷ್ಟ್ರೀಯ ನಾಯಕರ ಸಹಕಾರದೊಂದಿಗೆ ದೇವೇ ಗೌಡರ ಒಳನೆರವು ಪಡೆದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಯಲ್ಲಿ ಸೆಟ್ಲಾದರು.

ಲಿಂಗಾಯತ ಸಮುದಾಯದ ಬೊಮ್ಮಾಯಿ ಸಿಎಂ ಆದರೆ ಇಳಿಸುವುದು ಕಷ್ಟ,ಬಂಗಾರಪ್ಪ ಬೇರು ಬಿಟ್ಟರೂ ಕಷ್ಟ, ಆದರೆ ಹೆಗಡೆ ಬ್ರಾಹ್ಮಣ ಸಮುದಾಯದವರು. ಅವರು ಹೆಚ್ಚು ಕಾಲ ನೆಲೆಯೂರಲು ಸಾಧ್ಯವಿಲ್ಲ ಎಂಬುದು ದೇವೇಗೌಡರ ಲೆಕ್ಕಾಚಾರ ವಾಗಿತ್ತು. ಆದರೆ ಆ ಲೆಕ್ಕಾಚಾರವೇ ದೇವೇಗೌಡರ ವನವಾಸಕ್ಕೆ ಕಾರಣವಾಯಿತು. ಟೆಲಿಫೋನ್ ಟ್ಯಾಪಿಂಗ್ ಹಗರಣಕ್ಕೆ ಸಿಲುಕಿ ಹೆಗಡೆ ಸಿಎಂ ಹುದ್ದೆಯಿಂದ ಕೆಳಗಿಳಿದಾಗ ಪುನಃ ದೇವೇಗೌಡರು ಮೇಲೆದ್ದರು. ಸಿಎಂ ಹುದ್ದೆಗೆ ಬೊಮ್ಮಾಯಿ, ಬಿ.ರಾಚಯ್ಯ ಹಾಗೂ ತಮ್ಮ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಹೆಗಡೆ ಬೆಂಬಲಿಗ ಶಾಸಕರ ಮತಗಳು ಒಡೆದು ಹೋಗಿ ತಾವು ಗೆಲ್ಲುವುದು ಖಚಿತ ಎಂದು ಭಾವಿಸಿದರು.

ಆದರೆ ಹೆಗಡೆ ಬೆಂಬಲಿಗರು ರಾಚಯ್ಯ ಅವರ ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಿದರು. ಆ ಮೂಲಕ ಬೊಮ್ಮಾಯಿ ಸಿಎಂ ಗದ್ದುಗೆಯ ಮೇಲೆ ಸೆಟ್ಲಾಗುವಂತಾಯಿತು. ಮುಂದೆ ಬೊಮ್ಮಾಯಿ ಸರಕಾರ ಹೇಗೆ ವಜಾ ಆಯಿತು ಎಂಬುದು ಈಗ ಇತಿಹಾಸ. 1989ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಗೆ ವೀರೇಂದ್ರ ಪಾಟೀಲ್ ಸಹಜ ಆಯ್ಕೆ ಯಾಗಿದ್ದರಾದರೂ, ಬಂಗಾರಪ್ಪ ಕೂಡಾ ರೇಸಿನಲ್ಲಿ ಕಾಣಿಸಿಕೊಂಡಿದ್ದರು. ಮುಂದೆ 1990ರ ಹೊತ್ತಿಗೆ ವೀರೇಂದ್ರ ಪಾಟೀಲರ ಸರಕಾರ ಮಧ್ಯದ ದೊರೆಗಳನ್ನು ಬಡಿದು ಹಾಕಿತ್ತು ಮತ್ತು ವರಿಷ್ಠರ ಕೆಲ ಬೇಡಿಕೆಗಳಿಗೆ ಪಾಟೀಲರು ಕ್ಯಾರೇ ಎನ್ನುತ್ತಿರಲಿಲ್ಲ.

ಪರಿಣಾಮ? ಪಾಟೀಲರ ಅನಾರೋಗ್ಯವನ್ನೇ ನೆಪ ಮಾಡಿಕೊಂಡ ಎಐಸಿಸಿ ಅಧ್ಯಕ್ಷ ರಾಜೀವ್ ಗಾಂಧಿ ಬೆಂಗಳೂರಿಗೆ ಬಂದವರು, ಏರ್ ಪೋರ್ಟಿನ ನಿಂತು ಶಾಸಕಾಂಗ ಪಕ್ಷ ತನ್ನ ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಘೋಷಿಸಿದರು. ಇದರ ಲಾಭ ಪಡೆದವರು ಬಂಗಾರಪ್ಪ. ಆದರೆ ಮುಂದೆ ಪ್ರಧಾನಿಯಾದ ಪಿ.ವಿ.ನರಸಿಂಹರಾಯರ ಅವಕೃಪೆಗೆ ಗುರಿಯಾದ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಈ ಸಂದರ್ಭದಲ್ಲಿ ಕೇರಳದ ನಾಯಕ ಕರುಣಾಕರನ್ ಮತ್ತು ತಮಿಳ್ನಾಡಿನ ಮರಗತಂ ಚಂದ್ರಶೇಖರ್ ಅವರು ಪಿವಿಎನ್ ಮೇಲೆ ಪ್ರಭಾವ ಬೀರಿದ ಪರಿಣಾಮವಾಗಿ ಎಂ.ವೀರಪ್ಪ ಮೊಯ್ಲಿ ಕರ್ನಾಟಕದ ಮುಖ್ಯಮಂತ್ರಿ ಯಾದರು.

1994ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪುನಃ ಮುಖ್ಯಮಂತ್ರಿಯಾಗುವ ವಿಶ್ವಾಸ ಮೊಯ್ಲಿ ಅವರಿಗಿತ್ತು. ಆದರೆ ಜನತಾ ದಳ ಗೆದ್ದು ಅಧಿಕಾರ ಹಿಡಿಯಿತು. ರಾಮಕೃಷ್ಣ ಹೆಗಡೆ ಅವರಿಗೇನೋ ಪುನಃ ಸಿಎಂ ಆಗುವ ಕನಸು ಮೊಳೆತಿತ್ತು. ಆದರೆ ದೇವೇ ಗೌಡರ ಗೆರಿ ಬಾರ್ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗೆ ಸಿಎಂ ಹುದ್ದೆಗೇರಿದ ದೇವೇಗೌಡರು 1996ರ ಸಂಸತ್ ಚುನಾವಣೆಯ ನಂತರ ಪ್ರಧಾನಿಯಾಗಿ ದಿಲ್ಲಿಗೆ ಹೋದರು. ಇಲ್ಲಿ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಜೆ.ಎಚ್. ಪಟೇಲರ ಮಧ್ಯೆ ಹೋರಾಟ ಶುರುವಾಯಿತು. ಈ ಸಂದರ್ಭದಲ್ಲಿ ಹಿರಿತನದ ಕಾರಣಕ್ಕಾಗಿ ಜೆ.ಹೆಚ್.ಪಟೇಲರಿಗೆ ಪಟ್ಟ ಕೊಡೋಣ ಎಂದು ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ದೇವೇಗೌಡರು ಹರಸಾಹಸ ಮಾಡಬೇಕಾಯಿತು.

1999ರಲ್ಲಿ ಜನತಾದಳ ವಿಭಜನೆಯಾದ ಲಾಭ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ
ಯಾದರು. 2004ರಲ್ಲಿ ಅತಂತ್ರ ಫಲಿತಾಂಶ ಬಂದು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂತು. ಈ ಸರಕಾರದ ನೇತೃತ್ವ ವಹಿಸಿದವರು ಧರ್ಮಸಿಂಗ್. ಇಪ್ಪತ್ತೇ ತಿಂಗಳಲ್ಲಿ ಅವರನ್ನು ಉರುಳಿಸಿ ಜೆಡಿಎಸ್ – ಬಿಜೆಪಿ ಮೈತ್ರಿಕೂಟ ಸರಕಾರದ ಚುಕ್ಕಾಣಿ ಹಿಡಿದವರು ಹೆಚ್.ಡಿ.ಕುಮಾರಸ್ವಾಮಿ. ಅವರು ಅಽಕಾರ ಹಸ್ತಾಂತರ ಮಾಡಲು ನಸನಸೆ ತೋರಿದ ಕಾರಣಕ್ಕಾಗಿ ಒಂದೇ ವಾರದಲ್ಲಿ ಯಡಿಯೂರಪ್ಪ ಸಿಎಂ ಹುzಗೆ ರಾಜೀನಾಮೆ ಸಲ್ಲಿಸಿದರು.

2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಸಾರಥ್ಯ ವಹಿಸಿದ ಇದೇ ಯಡಿಯೂರಪ್ಪ ಅವರನ್ನು ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ ಬಲಿ ಪಡೆಯಿತು. ನಂತರ ಅವರ ಬೆಂಬಲದಿಂದ ಸಿಎಂ ಆದ ಡಿ.ವಿ.ಸದಾನಂದಗೌಡರು ಅವರನ್ನೇ ತಡವಲು ಹೋಗಿ ಉರುಳಿ ಬಿದ್ದರು. ಇದರ ಲಾಭ ಪಡೆದ ವರು ಜಗದೀಶ್ ಶೆಟ್ಟರ್. ಬಿಜೆಪಿಯ ಈ ಹಾವು – ಏಣಿ ಆಟ 2013ರಲ್ಲಿ ಕಾಂಗ್ರೆಸ್‌ಗೆ ವರದಾನವಾಯಿತು.

ಆದರೆ ವಿಧಾನಸಭಾ ಚುನಾವಣೆಯಲ್ಲಿ 1962ರ ಇತಿಹಾಸ ಮರುಕಳಿಸಿತು. ಆವತ್ತು ವಿರೋಧಿಗಳ ಹೊಡೆತಕ್ಕೆ ನಿಜಲಿಂಗಪ್ಪ
ಸೋತಿದ್ದರು. ಈ ಸಲ ಸಿಎಂ ಹುದ್ದೆಯ ರೇಸಿನಲ್ಲಿದ್ದ ಜಿ.ಪರಮೇಶ್ವರ್ ಸೋತರು. ಪರಿಣಾಮವಾಗಿ ಸಿದ್ದರಾಮಯ್ಯ ನಿರಾಯಾಸ ವಾಗಿ ಸಿಎಂ ಹುದ್ದೆಯ ಮೇಲೆ ಬಂದು ಕುಳಿತರು. 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರ. ಆದರೆ ಅದನ್ನುರುಳಿಸಿದ ಯಡಿಯೂರಪ್ಪ ಈಗ ಕರ್ನಾಟಕದ ಮುಖ್ಯಮಂತ್ರಿ. ಆದರೆ ಈಗ ಅವರ ಖುರ್ಚಿಯೂ ಅಲುಗಾಡುತ್ತಿದೆ.

ಹೀಗೆ ಅಲುಗಾಡುತ್ತಿರುವ ಖುರ್ಚಿ ಎಷ್ಟು ದಿನ ಭದ್ರವೋ ಗೊತ್ತಿಲ್ಲ. ಇಷ್ಟಾದರೂ ಬಿಜೆಪಿಯ ಕೆಲ ನಾಯಕರು ಯಡಿಯೂರಪ್ಪ ಅವರ ನಾಯಕತ್ವವನ್ನು ಸಮರ್ಥಿಸುವ ಭರದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ಕ್ಲೀಷೆಯ ಮಾತನಾಡುತ್ತಿದ್ದಾರೆ. ಇಂಥ ಮಾತನಾಡುವವರು ನೆನಪಿಡಬೇಕಾದ ಒಂದು ಸಂಗತಿ ಇದೆ. ಅದೆಂದರೆ, ಮುಖ್ಯಮಂತ್ರಿ ಹುದ್ದೆ ಎಂಬುದು ಯಾವತ್ತೂ ಖಾಲಿ
ಇರುವುದಿಲ್ಲ. ಒಂದೋ, ಅದನ್ನು ಬಡಿದು ಬಾಯಿಗೆ ಹಾಕಿಕೊಳ್ಳಬೇಕು, ಇಲ್ಲವೇ ಯಾರೋ ಬಡಿದು ಮತ್ತೊಬ್ಬರ ಬಾಯಿಗೆ ಹಾಕಬೇಕು. ಇದೇ ಇತಿಹಾಸ, ವರ್ತಮಾನ ಮತ್ತು ಭವಿಷ್ಯ.