Sunday, 15th December 2024

ಪ್ರತಿ ರಾಜ್ಯದಲ್ಲೂ ಮುಖ್ಯಮಂತ್ರಿ ಸ್ಥಾನಕ್ಕೊಬ್ಬ ಯೋಗಿ ಸಿಕ್ಕಿದರೆ…

ತಿಳಿರು ತೋರಣ

srivathsajoshi@yahoo.com

‘ಜನಸಂಖ್ಯೆ ಮತ್ತು ಸಾಂದ್ರತೆಯ ದೃಷ್ಟಿಯಿಂದ ಉ.ಪ್ರ ಭಾರತದ ಅತಿದೊಡ್ಡ ರಾಜ್ಯ. ಇದುವರೆಗಿನ ಸರಕಾರಗಳು ಇದನ್ನು ಎಷ್ಟು ಸಾಧ್ಯವೋ ಅಷ್ಟು ಲಗಾಡಿಯೆಬ್ಬಿಸಿ ರೋಗಗ್ರಸ್ತ ರಾಜ್ಯವೆಂಬ ಹಣೆಪಟ್ಟಿಗೆ ಕಾರಣವಾದುವು. ಆದರೆ ಯಾವಾಗ ಉ.ಪ್ರ ಜನತೆ ದೇಶದಲ್ಲಿ ಪರಿವರ್ತನೆಗೆ ತನ್ನ ಯೋಗದಾನ ಕೊಟ್ಟಿತೋ, ಪ್ರಧಾನಿ ಮೋದಿಯವರಲ್ಲಿ ವಿಶ್ವಾಸವಿಟ್ಟು ರಾಜ್ಯದಲ್ಲೂ ಭಾಜಪ ಸರಕಾರದ ರಚನೆಗೆ ಆಶೀರ್ವಾದ ನೀಡಿತೋ, ಆಗಿನಿಂದ ಇಲ್ಲಿ ಪರಿವರ್ತನೆಯ ಗಾಳಿ ಬೀಸತೊಡಗಿತು.

ಅಭಿವೃದ್ಧಿ ಎಂದರೇನು? ಅದು ಹೇಗಿರುತ್ತದೆ ಮತ್ತು ಹೇಗೆ ಇರಬೇಕು? ಜಾತಿ-ಮತ-ಬಡವ-ಬಲ್ಲಿದ ಭೇದವಿಲ್ಲದೆ ಜನಪರ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಹೇಗೆ? ಧಾರ್ಮಿಕ-ಸಾಂಸ್ಕೃತಿಕ ಪ್ರe ಉಜ್ಜ್ವಲವಿರುತ್ತಲೇ ಅಭಿವೃದ್ಧಿಯತ್ತಲೂ ನಿಗಾ ಇಡುವುದು ಹೇಗೆ? ಟಿವಿ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ ಎಳೆಎಳೆಯಾಗಿ ವಿವರಿಸುತ್ತಿದ್ದರು. ಸಮಚಿತ್ತ ದಿಂದ ಉತ್ತರಿಸುತ್ತಿದ್ದರು. ನಾನು ಮಂತ್ರಮುಗ್ಧನಾಗಿ ವೀಕ್ಷಿಸುತ್ತಿದ್ದೆ.

‘ಇಡೀ ಪ್ರಪಂಚ ಈಗ ಒಂಥರ ಸಂಕಟದ, ಸವಾಲಿನ ಪರಿಸ್ಥಿತಿಯನ್ನೆದುರಿಸುತ್ತಿದೆ. ಆರ್ಥಿಕ ಕ್ಷೇತ್ರದಲ್ಲಿ ಪಶ್ಚಿಮದ ಬಲಾಢ್ಯ ರಾಷ್ಟ್ರಗಳೇ ತತ್ತರಿಸಿವೆ. ಹೀಗಿದ್ದರೂ ಭಾರತ ಮಾತ್ರ ಸುದೃಢವಾಗಿ ಕಾಣುತ್ತಿದೆ. ಸಮೀಕ್ಷೆಗಳ ಪ್ರಕಾರ ಸದ್ಯಕ್ಕೆ ಭಾರತವೇ ‘ಗ್ರೋಥ್ ಎಂಜಿನ್’ ಪಾತ್ರ ನಿಭಾಯಿಸುತ್ತಿದೆ. ಇದೇ ಸ್ಥಿತಿ ಮುಂದುವರಿಯುವಂತೆ ತೋರುತ್ತಿದೆ. ಹಾಗೆಯೇ, ಭಾರತಕ್ಕಷ್ಟೇ ಸೀಮಿತವಾಗಿ ನೋಡಿದರೆ ಎಲ್ಲ ರಾಜ್ಯಗಳ ಪೈಕಿ ಉತ್ತರಪ್ರದೇಶ ಗ್ರೋಥ್ ಎಂಜಿನ್ ಆಗಿ ಕಾಣುತ್ತಿದೆ. ಆಶ್ಚರ್ಯವೆಂದರೆ ಒಂದು ಕಾಲದಲ್ಲಿ ಉ.ಪ್ರ ಅತ್ಯಂತ ರೋಗಗ್ರಸ್ತ ರಾಜ್ಯವೆನಿಸಿತ್ತು.

ಅದು ಪ್ರಗತಿಯ ದಿಸೆಯತ್ತ ತಿರುಗಿ ಬೇರೆ ವಿಕಸಿತ ರಾಜ್ಯಗಳಿಗೆ ಸಾಟಿಯಾದೀತೆಂದು ಊಹಿಸಲಿಕ್ಕೂ ಸಾಧ್ಯವಿರಲಿಲ್ಲ. ೨೦೧೫ರ ಅಕ್ಟೋಬರ್‌ನಲ್ಲಿ ಆಂಗ್ಲ ದೈನಿಕವೊಂದು ‘ದ ಡಾರ್ಕ್ ಏಂಡ್ ಡೆಸ್ಪರೇಟ್ ಸ್ಟೇಟ್ ಆಫ್ ಉತ್ತರಪ್ರದೇಶ್’ ಎಂಬೊಂದು ಲೀಡ್‌ಸ್ಟೋರಿಯಲ್ಲಿ ಘೋರ ಚಿತ್ರಣ ತೆರೆದಿಟ್ಟಿತ್ತು. ಅಂಥದ್ರಲ್ಲಿ, ಈಗ ಉ.ಪ್ರ ಬೇರೆಲ್ಲ ರಾಜ್ಯಗಳನ್ನೂ ಹಿಂದಿಕ್ಕಿ ಅಭಿವೃದ್ಧಿಯ ದಾಪುಗಾಲಿಡುತ್ತಿದೆ!

ಮೊನ್ನೆ ನಡೆದ ಗ್ಲೋಬಲ್ ಇನ್ವೆಸ್ಟರ್ಸ್ ಸಮ್ಮಿಟ್‌ನಲ್ಲಿ ಉತ್ತರಪ್ರದೇಶವೊಂದಕ್ಕೇ ಬರೋಬ್ಬರಿ ೩೩ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಸಿಕ್ಕಿದೆ! ಕೇವಲ ಆರೇ ವರ್ಷಗಳಲ್ಲಿ ಇಂಥದೊಂದು ಮಹತ್ತರ ಬದಲಾವಣೆ ಹೇಗೆ ಸಾಧ್ಯವಾಯಿತು? ಈ ಯಶೋಗಾಥೆಯ ನಾಯಕ, ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದಲೇ ತಿಳಿದುಕೊಳ್ಳೋಣ’ – ಸಂದರ್ಶನಕಾರನ ಪೀಠಿಕೆ.

ಆಮೇಲಿನ ಸಂವಾದದ, ಮುಖ್ಯವಾಗಿ ಯೋಗೀಜಿ ಮಾತಿನ ಮುಖ್ಯಾಂಶಗಳು ಇಲ್ಲಿವೆ: ‘ಜನಸಂಖ್ಯೆ ಮತ್ತು ಸಾಂದ್ರತೆಯ ದೃಷ್ಟಿಯಿಂದ ಉ.ಪ್ರ
ಭಾರತದ ಅತಿದೊಡ್ಡ ರಾಜ್ಯ. ಇದುವರೆಗಿನ ಸರಕಾರಗಳು ಇದನ್ನು ಎಷ್ಟು ಸಾಧ್ಯವೋ ಅಷ್ಟು ಲಗಾಡಿಯೆಬ್ಬಿಸಿ ರೋಗಗ್ರಸ್ತ ರಾಜ್ಯವೆಂಬ ಹಣೆಪಟ್ಟಿಗೆ ಕಾರಣವಾದುವು. ಆದರೆ ಯಾವಾಗ  ಉ.ಪ್ರ ಜನತೆ ದೇಶದಲ್ಲಿ ಪರಿವರ್ತನೆಗೆ ತನ್ನ ಯೋಗದಾನ ಕೊಟ್ಟಿತೋ, ಪ್ರಧಾನಿ ಮೋದಿಯವರಲ್ಲಿ ವಿಶ್ವಾಸವಿಟ್ಟು ರಾಜ್ಯದಲ್ಲೂ ಭಾಜಪ ಸರಕಾರದ ರಚನೆಗೆ ಆಶೀರ್ವಾದ ನೀಡಿತೋ, ಆಗಿನಿಂದ ಇಲ್ಲಿ ಪರಿವರ್ತನೆಯ ಗಾಳಿ ಬೀಸತೊಡಗಿತು. ಆರು ವರ್ಷಗಳ ಹಿಂದಿನವರೆಗೂ ಈ ರಾಜ್ಯದ ಬಗ್ಗೆ ಪ್ರಪಂಚದ ದೃಷ್ಟಿಕೋನ ಬೇರೆಯದೇ ಇತ್ತು. ಈಗ ಅದೆಲ್ಲ ಬದಲಾಗಿದೆ.

ಕಾನೂನುವ್ಯವಸ್ಥೆ ಮತ್ತು ಸುರಕ್ಷತೆ ದೃಷ್ಟಿಯಿಂದ ನಮ್ಮದು ಬೇರೆಲ್ಲ ರಾಜ್ಯಗಳಿಗಿಂತ ಉತ್ತಮಸ್ಥಾನದಲ್ಲಿದೆ. ಜನನಿಬಿಡ ರಾಜ್ಯವೆಂದಮೇಲೆ ಇಲ್ಲಿ ಯುವಶಕ್ತಿಯೂ ವಿಪುಲವಾಗಿ ಇದೆ. ಹಿಂದಿನ ಸರಕಾರಗಳ ಬೇಜವಾಬ್ದಾರಿ ಮತ್ತು ವಿಕಾಸವಿರೋಧಿ ಧೋರಣೆಗಳಿಂದಾಗಿ ಸಣ್ಣ ಮತ್ತು ಅತಿಸಣ್ಣ
ಕೈಗಾರಿಕೆಗಳ ಸೆಕ್ಟರ್ ಸತ್ತೇಹೋಗಿತ್ತೆನ್ನಬಹುದು. ಅದೇ ಉತ್ತರ ಪ್ರದೇಶದಲ್ಲೀಗ ‘ವನ್ ಡಿಸ್ಟ್ರಿಕ್ಟ್ ವನ್ ಪ್ರಾಡಕ್ಟ್’ನಂಥ ಯೋಜನೆಗಳಿಂದ, ಸಾಂಪ್ರದಾಯಿಕ ಉದ್ಯಮಗಳಿಗೂ ಸಿಗುತ್ತಿರುವ ಪ್ರೋತ್ಸಾಹದಿಂದ ಹೊಸ ಕ್ರಾಂತಿಯೇ ಆಗಿದೆ. ನಮ್ಮಲ್ಲಿರುವ ಅತ್ಯುತ್ತಮ ಕೃಷಿಭೂಮಿಯ ಸದುಪಯೋಗವಾಗಿ ಕೃಷ್ಯುತ್ಪತ್ತಿ ಪ್ರಮಾಣ ದ್ವಿಗುಣವಾಗಿದೆ.

ಔದ್ಯೋಗಿಕ ವಿಕಾಸದ ಮಾತೇ ಇಲ್ಲದಿದ್ದ ಉತ್ತರಪ್ರದೇಶದಲ್ಲಿ ಇದೀಗ ರೂ. ೩೩ ಲಕ್ಷ ಕೋಟಿಗಿಂತಲೂ ಹೆಚ್ಚು ಹೂಡಿಕೆ ಆಗಿದೆ. ಪ್ರಶಾಸನ ಬದಲಾಗಿದೆ, ಜನರ ಭಾವನೆಯೂ ಬದಲಾಗಿದೆ. ಈಗಿಲ್ಲಿ ಕುಟುಂಬರಾಜಕೀಯ, ಜಾತಿವಾದ, ಭ್ರಷ್ಟಾಚಾರಗಳಿಗೆ ಜಾಗವಿಲ್ಲ ಎಂದು ಜನರಿಗೆ ಗೊತ್ತಾಗತೊಡಗಿದೆ. ಈಬಾರಿಯ ಗ್ಲೋಬಲ್ ಇನ್ವೆಸ್ಟರ್ಸ್ ಸಮ್ಮಿಟ್‌ನಲ್ಲಿ ಹೆಚ್ಚೆಂದರೆ ೧೦ ಲಕ್ಷ ಕೋಟಿ ರೂ. ಹೂಡಿಕೆ ಬರಬಹುದು ಎಂದು ನಿರೀಕ್ಷೆಯಿದ್ದದ್ದು; ಮೂರು ಪಟ್ಟು ಬಂತಲ್ಲ ಇದಕ್ಕಿಂತ ದೊಡ್ಡ ಪುರಾವೆ ಇನ್ನೇನು ಬೇಕು!

ಹೂಡಿಕೆದಾರರಿಗೆ ಅಂದಾಜಿರುತ್ತದೆ ಎಲ್ಲಿ ಅವರ ಇನ್ವೆಸ್ಟ್‌ಮೆಂಟ್ ಸುರಕ್ಷಿತವಾಗಿರುತ್ತದೆ, ಕಾರ್ಮಿಕರು ಸುರಕ್ಷಿತರಾಗಿರುತ್ತಾರೆ, ವ್ಯಾಪಾರಕ್ಕೆ ಅನುಕೂಲಕರ ಪರಿಸ್ಥಿತಿ ಇರುತ್ತದೆಂದು. ಅವೆಲ್ಲ ಇಲ್ಲಿ ಸಿಗುತ್ತವೆಂಬ ಭರವಸೆ ಅವರಿಗಾಗಿದೆ. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಸರಕಾರ ಇರುವುದು, ವಿಕಾಸದ ಗತಿಗೆ ಅನುಕೂಲವಾಗಿರುವುದು, ಅವರ ವಿಶ್ವಾಸಕ್ಕೆ ‘ಡಬ್ಬಲ್ ಎಂಜಿನ್  ’ನಂತೆ ಪುಷ್ಟಿ ನೀಡಿದೆ. ಕಾನೂನು ವ್ಯವಸ್ಥೆ ಹೇಗಿದೆ, ಭೂಸ್ವಾಧೀನತೆ ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಸರಕಾರದ ಪಾಲಿಸಿಗಳು ಹೇಗಿವೆ, ಮಾನವ ಸಂಪನ್ಮೂಲ ಎಷ್ಟಿದೆ, ನೌಕರಶಾಹಿ/ಕೆಂಪುಪಟ್ಟಿ/ ಲಂಚ ನಿಯಂತ್ರಣ ಹೇಗಿದೆ ಮುಂತಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುತ್ತಾರೆ.

ಎಲ್ಲದರಲ್ಲೂ ಈಗ ಉತ್ತರಪ್ರದೇಶ ಡಿಸ್ಟಿಂಕ್ಷನ್ ಕ್ಲಾಸಲ್ಲಿ ತೇರ್ಗಡೆ ಆಗಿರುವುದರಿಂದಲೇ ಹೂಡಿಕೆಗೆ ಮುಂದೆ ಬಂದಿದ್ದಾರೆ. ಇಂಥದೊಂದು ವಿಶ್ವಸನೀಯತೆ ಸ್ಥಾಪಿಸುವುದರಲ್ಲಿ ಮುತುವರ್ಜಿ ವಹಿಸಿದ್ದೇವೆ. ನಮ್ಮ ಶಾಸಕರು, ಸಂಸದರು, ಮಂತ್ರಿಗಳು ಇದಕ್ಕೋಸ್ಕರವೇ (ಮೋಜು-ಮಸ್ತಿಗಲ್ಲ!) ದೇಶ-ವಿದೇಶಗಳ ಪ್ರವಾಸ ಮಾಡಿ ಅಧ್ಯಯನ ನಡೆಸಿ ಒಳ್ಳೆಯ ಅಂಶಗಳನ್ನು ಕಲಿತುಬಂದಿದ್ದಾರೆ. ಇದರೊಂದಿಗೆ ಯುವಶಕ್ತಿಯನ್ನೂ ನಾವು ವಿಕಾಸದಲ್ಲಿ ತೊಡಗಿಸಿಕೊಂಡಿದ್ದೇವೆ.

ನಿವೃತ್ತ ಅಧಿಕಾರಿಗಳನ್ನು, ಶಿಕ್ಷಣತಜ್ಞರನ್ನು ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಶಿಕ್ಷಣ ಮತ್ತು ಔದ್ಯೋಗೀಕರಣ ಸಮನ್ವಯ ಸಾಧಿಸುವುದು ಹೇಗೆಂದು ಅರಿತುಕೊಂಡಿದ್ದೇವೆ. ಅಂದಮಾತ್ರಕ್ಕೇ ಎಲ್ಲವೂ ದಿನಬೆಳಗಾಗುವುದರೊಳಗೆ ಬದಲಾಗುವುದಿಲ್ಲವೆಂದು ಗೊತ್ತು. ಬಂಡವಾಳ ಹೂಡಿಕೆಯ ಪ್ರತಿಫಲ ವಾದರೂ ಅಷ್ಟೇ. ಹಂತಹಂತವಾಗಿ ಸಿಗತೊಡಗುತ್ತದೆ. ಆರಂಭದಲ್ಲಿ ಸುಮಾರು ೧ ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
ಶಿಕ್ಷಣಸಂಸ್ಥೆಗಳನ್ನು ಉದ್ಯಮಗಳೊಂದಿಗೆ ಜೋಡಿಸುವುದು, ‘ಸಿಎಂ ಇಂಟರ್ನ್‌ಶಿಪ್ ಯೋಜನೆ’ಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮ/ ಆಡಳಿತದ ಅನುಭವ ಒದಗಿಸುವುದು ಮುಂತಾದ ತಯಾರಿಗಳನ್ನು ಮಾಡುತ್ತಿದ್ದೇವೆ. ೨೦೧೮ರಲ್ಲಿ ಹೂಡಿಕೆದಾರರ ಸಮಾವೇಶ ನಡೆದಿದ್ದಾಗ ೪ ಲಕ್ಷ ಕೋಟಿ ರೂ. ಹೂಡಿಕೆ ಬಂದಿತ್ತು. ಆಗಿನ್ನೂ ಉತ್ತರ ಪ್ರದೇಶದ ‘ಇಮೇಜ್’ ಕೆಟ್ಟದಾಗಿಯೇ ಇತ್ತು.

ಆದರೂ ಸರಕಾರದ ಪ್ರೋತ್ಸಾಹದಿಂದ ಆ ಹೂಡಿಕೆಗಳೆಲ್ಲ ಫಲಕಾರಿಯಾಗಿವೆ. ಅಂದರೆ, ರಾಜ್ಯವು ಸರಿಯಾದ ದಿಸೆಯಲ್ಲೇ ಸಾಗುತ್ತಿದೆ ಅಂತಾಯ್ತಲ್ಲ!
ರಾಜ್ಯದ ಮುಖ್ಯಮಂತ್ರಿ ಪೂಜೆ ಮಾಡುತ್ತಿರುವ, ಗಂಗಾರತಿ ಬೆಳಗುತ್ತಿರುವ, ಗೋಶಾಲೆಯಲ್ಲಿರುವ ಚಿತ್ರಗಳೇ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ, ಆತ ಕೆಲಸ ಮಾಡುವುದು ಎಲ್ಲೂ ಕಂಡುಬರುವುದಿಲ್ಲ ಎಂದಿರಾ? ೬ ವರ್ಷಗಳಲ್ಲಿ ರಾಜ್ಯದ ಜಿಡಿಪಿ ದ್ವಿಗುಣ; ಪ್ರತಿ ವ್ಯಕ್ತಿಯ ಆದಾಯ ದ್ವಿಗುಣ; ಉತ್ತಮವಾದ ಗ್ರೋಥ್ ರೇಟ್; ೫ ಲಕ್ಷಕ್ಕೂ ಹೆಚ್ಚು ಉದ್ಯೋಗಸೃಷ್ಟಿ; ೬೪೦೦೦ ಎಕರೆಗಳಷ್ಟು ಜಮೀನನ್ನು ಮಾಫಿಯಾಗಳಿಂದ ಬಿಡಿಸಿ ಸರಕಾರದ ‘ಲ್ಯಾಂಡ್‌ಬ್ಯಾಂಕ್’ ನಿರ್ಮಾಣ.

ಹೊಸದಾಗಿ ಸರ್ಕಾರಿ ಉದ್ಯೋಗಗಳಷ್ಟೇ ಅಲ್ಲ, ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ ಸ್ಥಾಪನೆಯಿಂದ  ೧ ಕೋಟಿಯಷ್ಟು ಜನರು ಸ್ವ-ಉದ್ಯೋಗಿ ಗಳಾಗಿದ್ದಾರೆ. ಪ್ರಧಾನಮಂತ್ರಿ ಮುದ್ರಾಯೋಜನೆ, ಪಿಎಂ ಸ್ಟಾರ್ಟಪ್ ಸ್ಕೀಮ್‌ನಂಥವೂ ಅಳವಡಿಕೆಯಾಗಿವೆ. ೬೦ ಲಕ್ಷಕ್ಕೂ ಹೆಚ್ಚು ಉದ್ಯಮಿಗಳ ಲೇವಾ ದೇವಿಯು ಬ್ಯಾಂಕ್‌ಗಳ ಮೂಲಕವೇ ಆಗುತ್ತಿದೆ. ೨೦೧೬-೧೭ರಲ್ಲಿ ೨೦% ಇದ್ದ ನಿರುದ್ಯೋಗ ಪ್ರಮಾಣ ಈಗ ೩.೫ ಪ್ರತಿಶತಕ್ಕಿಳಿದಿದೆ. ತಾತ್ಪರ್ಯ ಇಷ್ಟೇ: ಉತ್ತಮ ಆಡಳಿತದ ಪ್ರತಿಫಲವು ಪ್ರಜೆಗಳೆಲ್ಲರಿಗೆ ಸಿಗತೊಡಗಿದೆ. ಉತ್ತರಪ್ರದೇಶವೆಂದರೆ ಬರೀ ದಂಗೆಗಳು, ಸುರಕ್ಷತೆಯಿಲ್ಲ, ನೌಕರಶಾಹಿಯು ವಿಕಾಸಕ್ಕೆ ಅಡ್ಡಗಾಲಾಗಿದೆ ಅಂತೆಲ್ಲ ಇದ್ದ ಭಾವನೆ ಅಳಿದು ಭರವಸೆಯ ಕಿರಣ ಮೂಡಿದೆ.

ಇದು ಮುಖ್ಯಮಂತ್ರಿಯೊಬ್ಬನ ಸಾಧನೆಯಲ್ಲ. ಮುಖ್ಯಮಂತ್ರಿಯು ಆಫೀಸಿನಲ್ಲಿ ಲ್ಯಾಪ್ ಟಾಪ್ ಮೇಲೆ ಡ್ಯಾಶ್‌ಬೋರ್ಡ್ ಗಳಿಂದ ಎಲ್ಲವನ್ನೂ
ಮಾನಿಟರ್ ಮಾಡುವುದು ಹೌದು; ಆದರೆ ಮಂತ್ರಿಗಳು, ಅಧಿಕಾರಿಗಳು, ನೌಕರರು, ಮತ್ತು ತಂತ್ರಜ್ಞಾನ ಸೇರಿ ಆದ ಸಮರ್ಥ ಆಡಳಿತಯಂತ್ರ ವೊಂದಿದೆ. ಅದು ದಕ್ಷತೆಯಿಂದ ಕೆಲಸ ಮಾಡುತ್ತದೆ. ಫಲಿತಾಂಶ ಒಳ್ಳೆಯದಾಗೇಆಗುತ್ತದೆ. ಇನ್ನು, ಮೂಲ ಸೌಕರ್ಯ ಮತ್ತು ಕನೆಕ್ಟಿವಿಟಿ ವಿಚಾರ.
ಉತ್ತರಪ್ರದೇಶವು ನೇಪಾಳ ರಾಷ್ಟ್ರ ಮತ್ತು ಬಿಹಾರ, ಝಾರ್ಖಂಡ್, ಛತ್ತೀಸ್‌ಘಡ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣಾ, ಉತ್ತರಾಖಂಡ, ಹಾಗೂ ದಿಲ್ಲಿ ಈ ಎಲ್ಲ ರಾಜ್ಯಗಳೊಂದಿಗೆ ಗಡಿರೇಖೆ ಹಂಚಿಕೊಳ್ಳುತ್ತದೆ.

೨೦೧೭ರವರೆಗೂ ಜನಮಾನಸದಲ್ಲಿ ಹೇಗಿತ್ತು ಗೊತ್ತೇ? ಎಲ್ಲಿಂದ ರಸ್ತೆಯಲ್ಲಿ ಹೊಂಡಗಳು ಆರಂಭವಾದುವೋ, ಸಂಜೆಯಾಗುತ್ತಿದ್ದಂತೆ ವಿದ್ಯುದ್ದೀಪಗಳಿಲ್ಲದೆ ಕತ್ತಲೆ ಕವಿಯಿತೋ, ಉತ್ತರಪ್ರದೇಶಕ್ಕೆ ಕಾಲಿಟ್ಟೆವು ಎಂದು ಜನ ಆಡಿಕೊಳ್ಳುತ್ತಿದ್ದರು. ಆದರೆ ಈವತ್ತು ನೋಡಿ. ಅಂತಾರಾಜ್ಯ ಸಂಪರ್ಕರಸ್ತೆಗಳೆಲ್ಲ ಚತುಷ್ಪಥ ಹೆದ್ದಾರಿಗಳು. ೭೫ ಜಿಲ್ಲೆಗಳ ೩೫೦ ತಹಶೀಲುಗಳ ಎಲ್ಲ ೯೮,೦೦೦ ಗ್ರಾಮಪಂಚಾಯತು ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ. ಹಿಂದೆಲ್ಲ ಇಲ್ಲಿ ಹೂಡಿಕೆಯೆಂದರೆ ಬರೀ ಗಾಝಿಯಾಬಾದ್, ನೊಯ್ಡಾ ಮುಂತಾದ ಪ್ರದೇಶಗಳಲ್ಲಿ ಮಾತ್ರ ಆಗುತ್ತಿತ್ತು. ಆದರೆ
ಇದೀಗ ಬಂದಿರುವ ಹೂಡಿಕೆಯಲ್ಲಿ ಮೂರನೇ ಒಂದಂಶ ರಾಜ್ಯದ ಪೂರ್ವಭಾಗದಲ್ಲಿ ವಿನಿಯೋಗವಾಗಲಿದೆ.

ಉದ್ಯಮಿಗಳ ದುಃಸ್ವಪ್ನವಾಗಿದ್ದ ಬುಂದೇಲ್‌ಖಂಡ ಪ್ರದೇಶಕ್ಕೆ ಈಗ ೫ ಲಕ್ಷ ಕೋಟಿ ರೂ. ಹೂಡಿಕೆ ಬಂದಿದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ,
ಬುಂದೇಲ್‌ಖಂಡ ಎಕ್ಸ್‌ಪ್ರೆಸ್‌ವೇ, ಪಶ್ಚಿಮ-ಮಧ್ಯ-ಪೂರ್ವ ಭಾಗಗಳ ಜೋಡಣೆಗೆ ಗಂಗಾ ಎಕ್ಸ್ ಪ್ರೆಸ್‌ವೇ ಈಗಾಗಲೇ ಕಾರ್ಯನಿರತವಾಗಿವೆ. ಗೋರಖಪುರ್ ಎಕ್ಸ್‌ಪ್ರೆಸ್‌ವೇ, ಬಲಿಯಾಗಂಜ್ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಸಾಗಿದೆ. ದಿಲ್ಲಿಯಿಂದ ಮೇರಠ್‌ಗೆ ದ್ವಾದಶಪಥ ರಸ್ತೆಯಾಗಿದೆ. ವಾಯುಯಾನ ಸೌಕರ್ಯವೂ ವಿಕಸನಗೊಂಡಿದೆ. ೧೯೪೭ರಿಂದ ೨೦೧೭ರವರೆಗೂ ನಮ್ಮಲ್ಲಿದ್ದದ್ದು ಎರಡೇಎರಡು ಪೂರ್ಣಪ್ರಮಾಣದ
ವಿಮಾನ ನಿಲ್ದಾಣಗಳು: ಲಕ್ನೋ ಮತ್ತು ವಾರಾಣಸಿ. ಈ ವರ್ಷದ ಕೊನೆಗೆ, ಹತ್ತು ಪೂರ್ಣಪ್ರಮಾಣದ, ಅದರಲ್ಲಿ ಐದು ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿರುವ ಏಕೈಕ ರಾಜ್ಯ ಉತ್ತರಪ್ರದೇಶ ಆಗಲಿದೆ!

೧೬೦೦೦ ಕಿ.ಮೀ ರೈಲ್ವೇ ನೆಟ್‌ವರ್ಕ್ ನಮ್ಮ ರಾಜ್ಯವನ್ನು ಈಗಾಗಲೇ ಉನ್ನತ ಸ್ಥಾನದಲ್ಲಿರಿಸಿದೆ. ದೇಶದ ಮೊತ್ತಮೊದಲ ವಾಟರ್‌ವೇ, ವಾರಾಣಸಿ ಯಿಂದ ಬಂಗಾಳಕೊಲ್ಲಿಯ ಹಲ್ದಿಯಾ ಬಂದರಿಗೆ ಆರಂಭವಾಗಿದೆ. ಉತ್ತರಪ್ರದೇಶವನ್ನು ಒಂದು ರಫ್ತು ಕೇಂದ್ರವಾಗಿಸುವುದಕ್ಕೆ, ಮಲ್ಟಿಮೋಡಲ್
ಟ್ರಾನ್ಸ್‌ಪೋರ್ಟ್ ಹಬ್ ಮಾಡುವುದಕ್ಕೆ ಇನ್ನೇನು ಬೇಕು! ಇಷ್ಟಾಗಿಯೂ ವಿಪಕ್ಷಗಳು ಇಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುತ್ತವೆ. ರಾಜ್ಯಪಾಲೆಯ ವಂದನಾಸ್ವೀಕಾರ ಭಾಷಣಕ್ಕೆ ಭಂಗ ತಂದು ಗುಲ್ಲೆಬ್ಬಿಸುತ್ತವೆ.

ನಿಜವಾದ ಅಭಿವೃದ್ಧಿ ಎಂದರೆ ಏನು ಅಂತ ಗೊತ್ತೇ ಇಲ್ಲದವರಿಂದ, ತಮ್ಮ ಆಡಳಿತ ಕಾಲದಲ್ಲಿ ಭ್ರಷ್ಟಾಚಾರ ಜಾತಿರಾಜಕೀಯದಲ್ಲೇ ಮುಳುಗಿದ್ದವ ರಿಂದ ಇನ್ನೇನು ತಾನೆ ನಿರೀಕ್ಷಿಸಬಹುದು? ಸಮಗ್ರ ಅಭಿವೃದ್ಧಿಯಿಂದಲೇ ನಾಗರಿಕ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯ. ಕುಟುಂಬರಾಜಕಾರಣ,
ಜಾತಿವಾದ, ವರ್ಗಸಂಘರ್ಷಗಳಿಂದ ಸಮಾಜವನ್ನು ಮುಕ್ತಗೊಳಿಸಿ, ದೇಶಾಭಿಮಾನ ಮೂಡಿಸುವುದಕ್ಕಾಗುವುದು ಸರ್ವಾಂಗೀಣ ಅಭಿವೃದ್ಧಿ ಯಿಂದಲೇ.

ಪ್ರಧಾನಿಯವರ ದೂರದೃಷ್ಟಿಯಂತೆ ನಮ್ಮ ರಾಜ್ಯವನ್ನು ೧ ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯನ್ನಾಗಿ ಮುನ್ನಡೆಸುವುದರಲ್ಲಿ ಸರಕಾರದ ಭೂಮಿಕೆ ಏನಿರಬೇಕೋ ಅದನ್ನೇ ಈ ಆರು ವರ್ಷಗಳಲ್ಲಿ ಮಾಡಿದ್ದೇವೆ, ಮತ್ತು ಮುಂದುವರಿಸುತ್ತೇವೆ. ನಿಜ, ಕಳೆದೆರಡು ವರ್ಷಗಳಲ್ಲಿ ಕೋವಿಡ್ ಮಹಾ ಮಾರಿಯು ಪ್ರಪಂಚವನ್ನೆಲ್ಲ ಅಡಿಮೇಲು ಮಾಡಿತು. ಆದರೆ ಮೋದೀಜಿ ಯವರ ನೇತೃತ್ವದಲ್ಲಿ ಭಾರತ ಎದ್ದುನಿಂತ ರೀತಿಯಿದೆಯಲ್ಲ, ವಿಶ್ವವೇ ಬೆರಗುಗಣ್ಣಿಂದ ನೋಡಿದೆ. ಉತ್ತರಪ್ರದೇಶಕ್ಕೆ ಕೊಟ್ಟಿರುವ ಗುರಿಯನ್ನು ಅಕ್ಷರಶಃ ಪಾಲಿಸಿದರೆ ಮುಂದಿನ ೪ ವರ್ಷಗಳಲ್ಲಿ ನಾವು ೧ ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗುವುದರಲ್ಲಿ ಅನುಮಾನವಿಲ್ಲ.

ಮಾತ್ರವಲ್ಲ, ಆಗ ನಮ್ಮಲ್ಲಿ ಪ್ರತಿ ವ್ಯಕ್ತಿಯ ಆದಾಯ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಇರುತ್ತದೆ! ೧೯೪೭ರಲ್ಲಿ ಇಲ್ಲಿ ವ್ಯಕ್ತಿಗತ ಆದಾಯ ರಾಷ್ಟ್ರೀಯ ಸರಾಸರಿಗೆ ಸಮವಾಗಿತ್ತು. ಆಮೇಲಿನ ಆಡಳಿತಗಾರರು ಅದನ್ನು ಯಾವ ಸ್ಥಿತಿಗೆ ತಂದು ಮುಟ್ಟಿಸಿದರೆಂದು ನಿಮಗೇ ಗೊತ್ತಿದೆ. ಈಗ ಮತ್ತೆ ಅದನ್ನು ಮೇಲಕ್ಕೆ ತರುತ್ತಿದ್ದೇವೆ. ಹಾಂ… ಇದನ್ನೆಲ್ಲ ಸಾಽಸಲಿಕ್ಕೆ ನಾವು ‘ಬುಲ್ಡೋಜರ್ ಬಾಬಾ’ ಎಂದೂ ಕರೆಸಿಕೊಳ್ಳಬೇಕಾಯ್ತು. ಇರಲಿ, ಅದಕ್ಕೇನಂತೆ!
ನೆನಪಿಟ್ಟುಕೊಳ್ಳಿ ಬುಲ್ಡೋಜರ್ ತಾಕತ್ತಿನಿಂದಲೇ ಈವತ್ತು ಇಷ್ಟೆಲ್ಲ ಹೂಡಿಕೆದಾರರಿಗೆ ನಂಬಿಕೆ ಹುಟ್ಟಿರುವುದು. ಜನಸಾಮಾನ್ಯರ ಹಿತದೃಷ್ಟಿಯಿಂದ ಮಾಡುವುದಾದರೆ ಬುಲ್ಡೋಜರ್ ಪ್ರಯೋಗವಾದರೂ ಸರಿ, ಮಾಡಿಯೇಮಾಡುತ್ತೇವೆ.

ಇದು ಗಾಳಿಯಲ್ಲಿ ಸ್ವಪ್ನಸೌಧ ಕಟ್ಟುವ ಯೋಜನೆಯಲ್ಲ. ನೆಲದ ಮೇಲೆ ಭದ್ರವಾಗಿ ಕಾಲೂರಿ ಕೆಲಸ ಮಾಡುವುದೇ ನಮ್ಮ ಕ್ರಮ. ಅದರಿಂದಲೇ ಆತ್ಮ
ವಿಶ್ವಾಸ. ಓವರ್‌ಕಾನ್‌ಫಿಡೆನ್ಸ್ ಅಲ್ಲ. ನಾವು ಏನನ್ನು ಮಾಡಬಲ್ಲೆವೋ ಅದಷ್ಟನ್ನೇ ಮಾತನಾಡುತ್ತೇವೆ; ಏನು ಮಾತಾಡಿದ್ದೇವೆಯೋ ಅದನ್ನು ಮಾಡಿತೋರಿಸುತ್ತೇವೆ. ನಮ್ಮಲ್ಲಿ ಪ್ರತಿಭೆ ಮತ್ತು ತೇಜಸ್ಸುಳ್ಳ ಯುವಜನತೆಯಿದೆ. ಅವರ ಕೌಶಲಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ೨ ಕೋಟಿಯಷ್ಟು ಯುವಕ/ಯುವತಿಯರಿಗೆ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್‌ಗಳನ್ನು ಕೊಟ್ಟು ಅವರ ತಾಂತ್ರಿಕ ಕ್ಷಮತೆ,
ಸಾಮರ್ಥ್ಯ ಹೆಚ್ಚಿಸಿದ್ದೇವೆ. ಹೂಡಿಕೆಯಾಗಿರುವ ವಿವಿಧ ಸೆಕ್ಟರ್ ಗಳಲ್ಲಿ ಸುಮಾರು ೧ ಕೋಟಿ ಯುವಕರಿಗೆ ಉದ್ಯೋಗಾವಕಾಶಗಳಿವೆ.

ಸಾಂಪ್ರದಾಯಿಕ ಉದ್ಯಮಗಳನ್ನೂ ಸಬಲಗೊಳಿಸುತ್ತಿದ್ದೇವೆ. ಅಯೋಧ್ಯಾ, ಕಾಶಿ, ಪ್ರಯಾಗರಾಜ್ ಮುಂತಾದ ಧಾರ್ಮಿಕ ಕ್ಷೇತ್ರಗಳ ಚಹರೆಯನ್ನೇ ಬದಲಿಸಿದ್ದೇವೆ. ಅವುಗಳ ಸಾಂಸ್ಕೃತಿಕ ವೈಭವ ಹೇಗಿರಬೇಕಿತ್ತೋ ಆ ಮಟ್ಟಕ್ಕೆ ಮರಳಿದೆ. ಅಲ್ಲಿಯೂ ಯುವಜನತೆಗೆ ಲಕ್ಷಾಂತರ ಉದ್ಯೋಗಾವ ಕಾಶ. ಶ್ರೀರಾಮನಾಗಲೀ, ಮಂದಿರವೇ ಆಗಲಿ ನಮಗೆ ಸಂಸ್ಕೃತಿ- ಪರಂಪರೆ ಅಭಿಮಾನದ ಪ್ರತೀಕವೇ ಹೊರತು ವೋಟ್‌ಬ್ಯಾಂಕ್ ಅಲ್ಲ. ಅಯೋಧ್ಯೆಯಲ್ಲಿ ದೀಪೋತ್ಸವ, ಕಾಶಿಯಲ್ಲಿ ದೀಪಾವಳಿ, ಇನ್ನೊಂದೆಡೆ ಹೋಳಿಯ ರಂಗೋತ್ಸವ… ಸರಕಾರವೇ ಮುಂದೆ ನಿಂತು ಆಚರಿಸುತ್ತದೆ. ಇದು ನಮ್ಮ ಸಂಸ್ಕೃತಿ. ಪ್ರವಾಸೋದ್ಯಮಕ್ಕೆ ಪುಷ್ಟಿ.

ಅಯೋಧ್ಯೆಯಲ್ಲಿ ರಾಮಾಯಣ ಯುನಿವರ್ಸಿಟಿ ಸ್ಥಾಪನೆ ಯೋಜನೆಯೂ ಹಾಗೆಯೇ. ರಾಮಾಯಣವನ್ನು ನಾವು ಧಾರ್ಮಿಕ, ಆಧ್ಯಾತ್ಮಿಕ ದೃಷ್ಟಿ ಯಿಂದಷ್ಟೇ ನೋಡುತ್ತೇವೆ. ಅದರಲ್ಲಿರುವ ವೈಜ್ಞಾನಿಕ ವಿಚಾರಗಳನ್ನು, ಆ ಕಾಲದ ಸಾಮಾಜಿಕ ಜನಜೀವನ ಪದ್ಧತಿಯನ್ನು ನಾವು ಅರಿಯಬೇಡವೇ? ಅದರ ಬಗ್ಗೆ ಸಂಶೋಧನೆಯಾಗಬೇಡವೇ? ಪರಕೀಯರ ಆಕ್ರಮಣ ನಡೆದಾಗ ಜನರಲ್ಲಿ ಭಾರತೀಯ ಚೇತನವನ್ನು ಬಡಿದೆಬ್ಬಿಸಿದ್ದು ರಾಮಚರಿತ ಮಾನಸ. ಅಕ್ಬರನಲ್ಲ, ಶ್ರೀರಾಮಚಂದ್ರನೇ ನಮ್ಮ ರಾಜ ಎಂಬ ಘೋಷಣೆ ಆಗ ಹುಟ್ಟಿಕೊಂಡಿದ್ದು ಈಗಲೂ ರಾಮಲೀಲಾ ಪ್ರದರ್ಶನಗಳಲ್ಲಿ ಮಾರ್ದನಿಸುತ್ತದೆ.

ನಮ್ಮ ಯುವಕರಿಗೆ ಈಹಿಂದೆಲ್ಲ ತಾನು ಉತ್ತರಪ್ರದೇಶದವನೆಂದು ಹೇಳಿಕೊಳ್ಳುವುದಕ್ಕೇ ಮುಜುಗರ ಆಗುತ್ತಿತ್ತು. ಈಗ ಆತ ಎದೆಯುಬ್ಬಿಸಿ ಹೇಳಬಲ್ಲ! ಮುಂದಿನ ಪೀಳಿಗೆಗೆ ಉಜ್ಜ್ವಲ ಭವಿಷ್ಯ ಸಿಗಬೇಕಂತಿದ್ದರೆ ಅವರನ್ನು ಸ್ವಾವಲಂಬನೆಯ ಪಥದಲ್ಲಿ ನಡೆಯಲಿಕ್ಕೆ ಪ್ರೇರಣೆ-ಪ್ರೋತ್ಸಾಹ ಕೊಡಬೇಕೇ ಹೊರತು ಉಚಿತ ಕೊಡುಗೆಗಳನ್ನಲ್ಲ. ರಾಷ್ಟ್ರದ ಹಿತ ಮುಖ್ಯ ಮಿಕ್ಕಿದ್ದೆಲ್ಲ ಗೌಣ ಎಂಬ ಆಲೋಚನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಕಳೆದ ಒಂಬತ್ತು ವರ್ಷಗಳಲ್ಲಿ ಮೋದೀಜಿ ಇದನ್ನೇ ತಾನೆ ಬಾರಿಬಾರಿ ಹೇಳಿರುವುದು ಮತ್ತು ಮಾಡಿತೋರಿಸಿರುವುದು? ಅಗ್ಗದ ಜನಪ್ರಿಯತೆಗೆ, ವೋಟ್ ಬ್ಯಾಂಕ್ ರಾಜಕಾರಣಕ್ಕೆ, ಸ್ವಾರ್ಥಸಾಧನೆಗೆ ರಾಜಕಾರಣಿಗಳು ಮಾಡುವ ಸರ್ಕಸ್‌ಗಳು ದೇಶದ ಪ್ರಗತಿಗೆ ಮಾರಕ.

ಹಾಗೆಯೇ ಈ ಬಿಬಿಸಿ ಡಾಕ್ಯುಮೆಂಟರಿ, ಹಿಂಡನ್‌ಬರ್ಗ್ ರಿಪೋರ್ಟ್, ಜಾರ್ಜ್ ಸೊರೋಸ್‌ನ ಟಿಪ್ಪಣಿಯೇ ಮೊದಲಾದ ಷಡ್ಯಂತ್ರಗಳಿಂದ
ಮೋದೀಜಿಯನ್ನು ಮತ್ತು ಭಾಜಪವನ್ನು ಹಣಿಯುವ ಜಾಗತಿಕ ಪ್ರಯತ್ನಗಳು ಬರೀ ಮೋದೀಜಿಯನ್ನು ಗುರಿಯಾಗಿಸಿಲ್ಲ, ಭಾರತವು ವಿಶ್ವದಲ್ಲೇ ಬಲಿಷ್ಠ ದೇಶವಾಗುತ್ತಿರುವುದಕ್ಕೆ ವಿದೇಶೀ ದುಷ್ಟಶಕ್ತಿಗಳು ಮತ್ತು ದೇಶದೊಳಗಿನ ದ್ರೋಹಿಗಳು ಇಡುತ್ತಿರುವ ಅಡ್ಡಗಾಲು. ಅವರ ಕೈಮೇಲಾದರೆ ಸೋಲು ಮೋದೀಜಿಯವರದ್ದಲ್ಲ, ಇಡೀ ಭಾರತದ್ದು. ಇದನ್ನು ರಾಷ್ಟ್ರಪ್ರೇಮವುಳ್ಳ ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಆ ಷಡ್ಯಂತ್ರಗಳನ್ನೆಲ್ಲ ಧಿಕ್ಕರಿಸ ಬೇಕು.’
* * *

ಮೊನ್ನೆ ಫೆಬ್ರವರಿ ೨೦ರಂದು ಡಿಡಿ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾದ ಈ ಸಂದರ್ಶನವನ್ನು ಬೆರಳೆಣಿಕೆಯಷ್ಟೇ ಜನರು ವೀಕ್ಷಿಸಿರಬಹುದು. ನನಗಿದು ಯುಟ್ಯೂಬ್‌ನಲ್ಲಿ ಸಿಕ್ಕಿತು. ಸಾಧ್ಯವಾದರೆ ನೀವೂ ಒಮ್ಮೆ ನೋಡಿ (qsಟ್ಠಠ್ಠಿ.ಚಿಛಿ/ಊP೦ಇ೭೯b೮). ಅಲ್ಲೂ ಇದುವರೆಗೆ ಜುಜುಬಿ ೬ಸಾವಿರ ಜನ ವೀಕ್ಷಿಸಿದ್ದಾರೆ. ಇಂಥ ರಚನಾತ್ಮಕ ಪ್ರೇರಣಾದಾಯಕ ಸರಕು ಯಾರಿಗೆ ಬೇಕೆಂದಾಗಬೇಕೇ! ನಾನು ರಾಜಕೀಯದ ವಿಚಾರಗಳನ್ನು ಅಂಕಣದಲ್ಲಿ ಬರೆಯುವವನಲ್ಲ. ಅದರಲ್ಲಿ ನನಗೆ ಆಸಕ್ತಿಯಾಗಲೀ ಪರಿಣತಿಯಾಗಲೀ ಇಲ್ಲ. ಆದರೆ ಯೋಗಿ ಆದಿತ್ಯನಾಥರನ್ನು ನಾನು ರಾಜಕಾರಣಿ ಯಂತೆ ನೋಡುವುದಿಲ್ಲ.

ಅವರೊಬ್ಬ ಯುಗಪ್ರವರ್ತಕನೇ ಸೈ. ಯೋಗಿಯ ಮಾತು ಕೇಳುವಾಗೆಲ್ಲ ನನಗನಿಸುವುದು- ಈಗ ಕರ್ನಾಟಕದಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದು ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಸಿಡಲು ಯತ್ನಿಸುತ್ತಿರುವ ಎಲ್ಲ ಮುಸುಡಿಗಳನ್ನು ನೋಡಿದರೆ ಎಂಥ ಹೇಸಿಗೆ. ಅವರ ಹೆಸರನ್ನೂ ಇಲ್ಲಿ
ಬರೆಯಲಿಕ್ಕೆ ಯೋಗ್ಯವಲ್ಲ. ನಮ್ಮ ಕರ್ನಾಟಕಕ್ಕೂ, ಅಷ್ಟೇಕೆ ಭಾರತದ ಪ್ರತಿ ರಾಜ್ಯಕ್ಕೂ ಮುಖ್ಯಮಂತ್ರಿ ಸ್ಥಾನದಲ್ಲೊಬ್ಬ ‘ಯೋಗಿ’ ವಿರಾಜಮಾನ ನಾದರೆ ಎಷ್ಟು ಒಳ್ಳೆಯದಿತ್ತು!