Sunday, 24th November 2024

ಕರಾವಳಿ ಬಿಜೆಪಿಯಲ್ಲಿ ಬಿ ಅಂದ್ರೆ ಬೆಳ್ಳಾರೆ ?

ಅಶ್ವತ್ಥಕಟ್ಟೆ

ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿರುವ ವರದಿಗಳೇ ಇದ್ದರೂ, ಈ ರೀತಿಯ ಅನಿರೀಕ್ಷಿತ ಹೊಡೆತಗಳನ್ನು ತಡೆಯುವ ನಿಟ್ಟಿನಲ್ಲಿ ಯಾವ ರೀತಿಯ ತಡೆಗೋಡೆ ಕಟ್ಟಬೇಕು ಎನ್ನುವ ಸವಾಲು ಕಾಂಗ್ರೆಸ್ ನಾಯಕ ಮುಂದಿದೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮೂರು ಪಕ್ಷಗಳಿಂದಲೂ ‘ಲಾಭ-ನಷ್ಟ’ದ ಚರ್ಚೆಗಳು ಭರ್ಜರಿಯಾಗಿ ಆರಂಭವಾಗಿದೆ. ಕಾಂಗ್ರೆಸ್‌ನವರು ಘೋಷಿಸುವ ಒಂದು ‘ಆಫರ್’ನಿಂದ ಕೆಲ ಮತದಾರರು ಅತ್ತ ವಾಲುತ್ತಿದ್ದಾರೆ ಎನ್ನುತ್ತಿದ್ದಂತೆ, ಅದಕ್ಕೆ ಪ್ರತ್ಯಾಸದ ರೀತಿಯಲ್ಲಿ ಬಿಜೆಪಿಯವರು ಒಂದು ಆಫರ್ ನೀಡುತ್ತಿದ್ದಾರೆ. ಈ ಇಬ್ಬರಿಗೂ ತಾವೇನು ಕಡಿಮೆಯಿಲ್ಲ ಎನ್ನುವಂತೆ ಪ್ರಾದೇಶಿಕ ಅಸ್ಮಿತೆ, ‘ದೇವೇಗೌಡ’ ರನ್ನು ಮುಂದಿಟ್ಟುಕೊಂಡು ಒಂದು ಬಾರಿ ಸ್ವಾತಂತ್ರ್ಯವಾಗಿ ಅಧಿಕಾರ ನಡೆಸಲು ಅವಕಾಶ ನೀಡಿ ಎನ್ನುವ ಮಾತುಗಳನ್ನು ಜೆಡಿಎಸ್ ಆಡುತ್ತಿದೆ. ಹಾಗೇ ನೋಡಿದರೆ, ಚುನಾವಣೆಯ ಕೊನೆಯ ಕ್ಷಣದವರೆಗೆ ಈ ರೀತಿಯ ಘೋಷಣೆ, ಆರೋಪ, ಪ್ರತ್ಯಾರೋಪಗಳು ನಡೆಯುವುದು ಸರ್ವೇ ಸಾಮಾನ್ಯ.

ಪ್ರತಿ ಬಾರಿಯೂ ಒಂದೊಂದು ಬಾಂಬ್ ಸಿಡಿಸಿದಾಗಲೂ, ಕೆಲ ಮತಗಳು ಆಚೀಚೆ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಬಾರಿಯ ಚುನಾವಣೆಯನ್ನು ಗಮನಿಸಿದಾಗ, ‘ಲಾಭ-ನಷ್ಟ’ದ ಸಮಾನ ಪಾಲನ್ನು ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪಡೆಯುವುದೇ ಎನ್ನುವ ಅನುಮಾನಗಳು
ಶುರುವಾಗಿದೆ. ಚುನಾವಣಾ ಸಮಯದಲ್ಲಿ ಮೂರು ಪಕ್ಷಗಳಿಗೂ ಲಾಭ-ನಷ್ಟವಾಗುವುದು ಸಾಮಾನ್ಯವಾದರೂ, ಈ ಬಾರಿ ಮಾತ್ರ ಕಾಂಗ್ರೆಸ್‌ಗೆ ‘ಸಿಹಿ-ಕಹಿ’ ಎರಡೂ ಒಂದೇ ಬಾರಿಗೆ ಆಗುವುದು ಗೋಚರಿಸುತ್ತದೆ.

ಹೌದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ಪ್ರಯೋಗಿಸಿರುವ ‘ಬ್ರಾಹ್ಮಣ ಅಸ್ತ್ರ’ದಿಂದ ಜೆಡಿಎಸ್‌ಗಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ಲಾಭವಾಗಿತ್ತು. ಈ ಲಾಭದ ಖುಷಿಯಲ್ಲಿರುವಾಗಲೇ, ಪಿಎಫ್ಐನ ಮುಖವಾಣಿಯಾಗಿರುವ ಎಸ್‌ಡಿಪಿಐನವರು, ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿಯನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದ್ದು, ‘ಬ್ರಾಹ್ಮಣ ಸಿಎಂ’ ವಿಚಾರದಿಂದ
ಲಾಭದಷ್ಟೇ ನಷ್ಟವನ್ನು ಎಸ್‌ಡಿಪಿಐನ ನಡೆಯಿಂದಾಗಿದೆ ಎಂದರೆ ಸುಳ್ಳಲ್ಲ.

ಕುಮಾರಸ್ವಾಮಿ ಅವರ ಹೇಳಿಕೆಯಿಂದ ಆದ ಲಾಭದ ಬಗ್ಗೆ ಹೇಳುವ ಮೊದಲು, ಎಸ್‌ಡಿಪಿಐ ನಡೆಯಿಂದ ಆಗುವ ನಷ್ಟದ ಬಗ್ಗೆ ನೋಡಬೇಕಿದೆ. ಹಾಗೇ ನೋಡಿದರೆ, ಕರಾವಳಿಯಲ್ಲಿಯೇ ಬಿಜೆಪಿಯ ಸಂಘಟನೆಯನ್ನೇ ಬುಡಮೇಲು ಮಾಡಿದ್ದು ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ. ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ ಎನ್ನುವ ಸಂದೇಶ ಈ ಘಟನೆಯಿಂದ ಕಾರ್ಯಕರ್ತರ ಮನಸಿನಲ್ಲಿ ಉಳಿದಿತ್ತು. ಇದರಿಂದಾಗಿ, ಕರಾವಳಿಯಲ್ಲಿ ಬಿಜೆಪಿಯ ಕಲೆ ಅಭ್ಯರ್ಥಿಗಳು ಸೋಲುವ ಆತಂಕವನ್ನು ನಿರ್ಮಾಣವಾಗಿತ್ತು. ಆದರೆ ಇದೀಗ ಎಸ್ ಡಿಪಿಐನವರು ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಶಫೀ ಬೆಳ್ಳಾರೆಗೆ ಟಿಕೆಟ್ ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

ಒಂದು ವೇಳೆ ಎಸ್‌ಡಿಪಿಐ ಶಫೀಗೆ ಟಿಕೆಟ್ ನೀಡಿದ್ದೇ ಆದರೆ, ಅದರ ನೇರ ಹೊಡೆತ ಕಾಂಗ್ರೆಸ್ ಬೀಳುವುದರಲ್ಲಿ ಎರಡನೇ ಮಾತಿಲ್ಲ. ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹಿಂದೂ ಮತಗಳಿಗಿಂತ ಮುಸ್ಲಿಂ ಮತಗಳೇ ನಿರ್ಣಾಯಕ ಹಾಗೂ ಮುಸ್ಲಿಂ ಮತಗಳನ್ನೇ ನೆಚ್ಚಿಕೊಂಡು ಚುನಾವಣೆಗೆ ಕಾಂಗ್ರೆಸ್ ಹೋಗುತ್ತದೆ. ಒಂದು ವೇಳೆ ಎಸ್‌ಡಿಪಿಐ ಶಫೀಗೆ ಟಿಕೆಟ್ ನೀಡಿದರೆ, ಸಹಜವಾಗಿಯೇ ಮುಸ್ಲಿಂ ಮತಗಳೆಲ್ಲ ಎಸ್‌ಡಿಪಿಐ ಕಡೆಗೆ ತಿರುಗುತ್ತದೆ. ಇದಿಷ್ಟೇ ಅಲ್ಲದೇ, ಹಿಂದೂ ಯುವಕನ ಕೊಲೆ ಆರೋಪಿಯನ್ನು ಸೋಲಿಸಬೇಕು ಎನ್ನುವ ಕಾರಣಕ್ಕಾದರೂ, ಹಿಂದೂ ಮತಗಳೆಲ್ಲ ಒಂದಾಗಿ ಬಿಜೆಪಿಯತ್ತ ವಾಲುತ್ತದೆ. ಇದರಿಂದಾಗಿ, ಸಹಜವಾಗಿಯೇ ಬಿಜೆಪಿ ಸಂಘಟನೆ ಬಲಿಷ್ಠವಾಗುತ್ತದೆ.

ಎಸ್‌ಡಿಪಿಐ ಸ್ಪರ್ಧಿಸಿದ ಮಾತ್ರಕ್ಕೆ ಆ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದಲ್ಲ. ಆದರೆ ಕಾಂಗ್ರೆಸ್‌ಗೆ ಬರಬೇಕಾಗಿದ್ದ ಐದತ್ತು ಸಾವಿರ ಮತಗಳನ್ನು ಕಸಿಯುತ್ತಾರೆ. ಚುನಾವಣಾ ಫಲಿತಾಂಶದಲ್ಲಿ ಈ ಐದತ್ತು ಸಾವಿರ ಮತಗಳು ನಿರ್ಣಾಯಕ ಪಾತ್ರವಹಿಸುವುದರಿಂದ, ಕಾಂಗ್ರೆಸ್ ಹಿನ್ನಡೆಯಾಗಲಿದೆ
ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. ಈ ರೀತಿ ಪ್ರತಿ ಕ್ಷೇತ್ರದಲ್ಲಿ ಐದತ್ತು ಸಾವಿರ ಮತಗಳು ‘ಡಿವಿಯೇಟ್’ ಆದರೂ ಬಿಜೆಪಿಗೆ ಅದೊಂದು ಭರ್ಜರಿ ಯಶಸ್ಸಾಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಮತಗಳ ಸಂಖ್ಯೆ ಕರಾವಳಿ ಭಾಗದ ಎಂಟು ಹತ್ತು ಕ್ಷೇತ್ರದಲ್ಲಿ ಹಾಗೂ ಬೆಂಗಳೂರಿನ ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರದಲ್ಲಿ 10 ರಿಂದ 15 ಸಾವಿರ ದಾಟಿದರೂ ಅಚ್ಚರಿಯಿಲ್ಲ. ಒಂದು ವೇಳೆ ಇದು ಸಾಧ್ಯವಾದರೆ, ಕರಾವಳಿಯಲ್ಲಿ ಪಾರುಪತ್ಯ ಮೆರೆಯಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆ ಯಾಗುತ್ತದೆ.

ಸೂಕ್ಷ್ಮವಾಗಿ ಗಮನಿಸಿದರೆ, ಕೆಲ ತಿಂಗಳ ಹಿಂದಷ್ಟೇ ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಗಿದ್ದೂ ಇದೇ. ಓವೈಸಿ ಪಕ್ಷ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರ ದಲ್ಲಿಯೂ ಮುಸ್ಲಿಂ ಮತಗಳನ್ನು ಕೊಂಚ ಪ್ರಮಾಣದಲ್ಲಿ ಕಾಂಗ್ರೆಸ್‌ನಿಂದ ಮತಗಳನ್ನು ಕಿತ್ತುಕೊಂಡಿತ್ತು. ಹಾಗೆಂದು ಎಲ್ಲಿಯೂ ಓವೈಸಿ ಪಕ್ಷದ ಅಭ್ಯರ್ಥಿಗಳು ಲೀಡಿಂಗ್‌ಗೆ ಬರಲಿಲ್ಲ. ಆದರೆ ಠೇವಣಿ ಕಳೆದುಕೊಳ್ಳುವಂತೆ ಮತಗಳನ್ನು ಕಳೆದುಕೊಂಡರೂ, ಕಾಂಗ್ರೆಸ್ ಅದು ಬಹುದೊಡ್ಡ ಹಿನ್ನಡೆ ಯನ್ನೇ ಉಂಟು ಮಾಡಿತ್ತು. ಗುಜರಾತ್‌ನಲ್ಲಿ ಓವೈಸಿಯ ಎಐಎಂಐಎಂ ಪಕ್ಷ ಮಾಡಿದ್ದ ಕೆಲಸವನ್ನೇ, ಕರಾವಳಿ ಭಾಗದಲ್ಲಿ ಎಸ್‌ಡಿಪಿಐ ಮಾಡುತ್ತದೆ ಎನ್ನುವುದು ಕಾಂಗ್ರೆಸ್‌ನ ಹೊಸ ಚಿಂತೆಗೆ ಕಾರಣವಾಗಿದೆ.

ಮೊದಲಿನಿಂದಲೂ ಎಸ್‌ಡಿಪಿಐ ಸ್ಪರ್ಧಿಸುತ್ತದೆ ಎನ್ನುವ ಬಗ್ಗೆ ಮಾಹಿತಿಯಿತ್ತು. ಆದರೆ ಹಿಂದೂ ಕೊಲೆ ಆರೋಪಿಯನ್ನೇ ನಿಲ್ಲಿಸಿರುವುದು ಇದೀಗ ಹೊಸ ಚಿಂತೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಇದೀಗ ಎಸ್‌ಡಿಪಿಐ ಅನ್ನು ‘ಬಿಜೆಪಿಯ ಬಿ ಟೀಂ’ ಎಂದು ಕಾಂಗ್ರೆಸ್ ಹೇಳುತ್ತಿದೆ. ಒಂದು ರೀತಿಯಲ್ಲಿ
ನೋಡಿದರೆ, ಇದನ್ನು ಸಂಪೂರ್ಣವಾಗಿ ತಳ್ಳಿಹಾಕುವಂತೆಯೂ ಇಲ್ಲ ಎನ್ನುವುದು ಬೇರೆ ಮಾತು! ಇದು ಕಾಂಗ್ರೆಸ್‌ನ ನಷ್ಟವಾದರೆ, ಲಾಭದ ಬಗ್ಗೆಯೂ
ಪ್ರಸ್ತಾಪಿಸಲೇಬೇಕು. ಕೆಲ ದಿನಗಳ ಹಿಂದೆ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹಾಕಿದ, ‘ಬಿಜೆಪಿಯ ಮುಂದಿನ ಸಿಎಂ ಬ್ರಾಹ್ಮಣರು’ ಎನ್ನುವ ಬಾಂಬ್‌ನ ಪರಿಣಾಮ ಕಾಂಗ್ರೆಸ್ ಲಾಭವನ್ನು ತಂದುಕೊಟ್ಟಿದೆ.

ಈ ಹೇಳಿಕೆಗೆ ಕಳೆದೊಂದು ವಾರದಿಂದ ಆರೋಪ-ಪ್ರತ್ಯಾರೋಪಾಸಗಳು ನಡೆಯುತ್ತಲೇ ಇದೆ. ಒಂದು ಹಂತಕ್ಕೆ ಕುಮಾರಸ್ವಾಮಿ ಅವರಿಗೆ ಡ್ಯಾಮೇಜ್ ಕೂಡ ಆಗಿದೆ. ಆದರೆ ಲಾಭವಾಗಿದ್ದು ಮಾತ್ರ ಕಾಂಗ್ರೆಸ್. ಏಕೆಂದರೆ, ಬ್ರಾಹ್ಮಣರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾವೇಕೆ ಬಿಜೆಪಿಗೆ ಬೆಂಬಲಿಸಬೇಕು ಎಂದು ಲಿಂಗಾಯತರು ಬಿಜೆಪಿಗೆ ಬೆಂಬಲಿಸದೇ ಇದ್ದರೆ, ಅವರಿಗೆ ಎರಡನೇ ಹಾಗೂ ಅಂತಿಮ ಆಯ್ಕೆ ಇರುವುದು ಕಾಂಗ್ರೆಸ್ ಅಲ್ಲದೇ ಮತ್ತೇನೂ ಅಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ತನ್ನದೇ ಆದ ಸಂಘಟನೆಯಿತ್ತು.

ಆದರೆ ಕೋನರೆಡ್ಡಿ, ಬಸವರಾಜ ಹೊರಟ್ಟಿ ಅವರು ಜೆಡಿಎಸ್‌ನಿಂದ ಹೊರಬಂದ ಬಳಿಕ ಈ ಸಂಘಟನೆ ಉಳಿದಿಲ್ಲ. ಆದ್ದರಿಂದ ಲಿಂಗಾಯತರು ಬಿಜೆಪಿಯಿಂದ ಹೊರಬರಬೇಕು ಎಂದು ತೀರ್ಮಾನಿಸಿದ್ದೇ ಆದರೆ, ಅದರ ಲಾಭವನ್ನು ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಡೆದುಕೊಳ್ಳುತ್ತದೆ. ಮತದಾನ ದವರೆಗೂ ಇದು, ಇದಿದ್ದೇ ಆದರೆ ಖಚಿತವಾಗಿಯೂ ಕಾಂಗ್ರೆಸ್‌ಗೆ ಲಾಭವಾಗುತ್ತದೆ.

ಕಾಂಗ್ರೆಸ್‌ನಲ್ಲಿ ಈ ರೀತಿಯ ಲಾಭ-ನಷ್ಟದ ಪ್ರಶ್ನೆ ಯಿದ್ದರೆ, ಬಿಜೆಪಿ-ಜೆಡಿಎಸ್‌ಗೆ ಈ ರೀತಿಯ ಬಹುದೊಡ್ಡ ತಲೆಬಿಸಿಗಳಿಲ್ಲ. ಬಿಜೆಪಿಗೆ ರಾಜ್ಯಾದ್ಯಂತ ‘ಸಾಂಪ್ರದಾಯಿಕ’ ಮತಗಳಿದ್ದು, ಆ ಮತಗಳು ವಿವಾದಗಳೇನೇ ಇದ್ದರೂ ಅವರಿಗೆ ಬಂದೇ ಬರುತ್ತದೆ. ಅದೇ ರೀತಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡರಷ್ಟೇ ಸಾಕು. ಹಾಗೇ ನೋಡಿದರೆ, ಸ್ವತಂತ್ರವಾಗಿ ಅಧಿಕಾರದ ಗದ್ದುಗೆ ಏರುವ ಕನಸು
ಕಾಣುತ್ತಿರುವ ಬಿಜೆಪಿ, ಅದನ್ನು ಸಾಧಿಸಲು ಹೆಚ್ಚುವರಿಯಾಗಿ ಬೇಕಿರುವುದು ಕೇವಲ ಶೇ.೨ರಿಂದ ೪ರಷ್ಟು ಹೆಚ್ಚುವರಿ ಮತಗಳಷ್ಟೇ. ಆದರೆ, ಅವರಿಗೆ ಎಸ್‌ಡಿಪಿಐ, ಓವೈಸಿ ಅಂತಹ ಚಿಕ್ಕಪುಟ್ಟ ಪಕ್ಷಗಳ ತಲೆಬಿಸಿಯಿಲ್ಲ. ಅದೇ ಕಾಂಗ್ರೆಸ್ ವಿಷಯದಲ್ಲಿ ಈ ಎಲ್ಲ ‘ಅಡೆತಡೆ’ ಮೀರಿ ತಮ್ಮ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಉಳಿಸಿಕೊಳ್ಳುವ ಜತೆಜತೆಗೆ ಹೆಚ್ಚುವರಿವಾಗಿ ೩ರಿಂದ ೪ರಷ್ಟು ಮತಗಳನ್ನು ಪಡೆಯುವ ಅನಿವಾರ್ಯವಿದೆ.

ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿರುವ ವರದಿಗಳೇ ಇದ್ದರೂ, ಈ ರೀತಿಯ ಅನಿರೀಕ್ಷಿತ ಹೊಡೆತಗಳನ್ನು ತಡೆಯುವ ನಿಟ್ಟಿನಲ್ಲಿ ಯಾವ ರೀತಿಯ ತಡೆಗೋಡೆ ಕಟ್ಟಬೇಕು ಎನ್ನುವ ಸವಾಲು ಕಾಂಗ್ರೆಸ್ ನಾಯಕ ಮುಂದಿದೆ. ಇದರೊಂದಿಗೆ ಬಿಜೆಪಿಗೆ ಇರುವಂತೆ ಪಕ್ಷದ ವರಿಷ್ಠರ ‘ಸ್ಟಾರ್ ಹಾಗೂ ಮಾಸ್ ಅಪೀಲ್’ ಕಾಂಗ್ರೆಸ್‌ಗೆ ದೆಹಲಿ ಮಟ್ಟದ ನಾಯಕರಿಂದ ನಿರೀಕ್ಷೆ ಮಾಡುವುದು ಸದ್ಯದ ಮಟ್ಟಿದೆ ಸಾಧ್ಯವಿಲ್ಲ.
ಆದ್ದರಿಂದ ಒಂದೆಡೆ ಲಾಭದ ಖುಷಿಯಿದ್ದರೂ, ಅದನ್ನು ಅನುಭವಿಸುವ ಆಸ್ವಾಽಸುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿಲ್ಲ ಎಂದರೆ ತಪ್ಪಾಗುವುದಿಲ್ಲ.
ಕರ್ನಾಟಕ ಚುನಾವಣಾ ರಾಜಕೀಯದ ಬಗ್ಗೆ ಈ ಹಿಂದೆ ಒಮ್ಮೆ ಹೇಳುವಾಗಲೂ ಹೇಳಿದ ಮಾತನ್ನೇ ಈಗಲೂ ಹೇಳಬೇಕಾಗಿದೆ.

‘ಕರ್ನಾಟಕದಲ್ಲಿ ಚುನಾವಣೆ ನಡೆಯುವುದು ಶೇ.4ರಿಂದ 5ರಷ್ಟು ಹೆಚ್ಚುವರಿ ಮತ ಪಡೆಯುವುದಷ್ಟೇ ಪಕ್ಷಗಳ ಹೊಣೆ’. ಇನ್ನುಳಿದಂತೆ ಮೂರು ಪಕ್ಷಗಳಿಗೂ ತಮ್ಮದೇ ಆಗಿರುವ ಸಾಂಪ್ರದಾಯಿಕ ಮತಗಳು ಭದ್ರವಾಗಿದೆ. ಈ ಸತ್ಯವನ್ನು ಅರಿತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರುಗಳು ಪಕ್ಷಗಳು ‘ಹೊಯ್ದಾಟದಲ್ಲಿರುವ’ ಮತದಾರರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದೆ. ಆದರೆ ಈ ನಡುವೆ ಎಸ್‌ಡಿಪಿಐ, ಓವೈಸಿ
ಯಂತವರು ಸ್ಪರ್ಧಿಸುವುದರಿಂದ ಕಾಂಗ್ರೆಸ್‌ಗೆ ನಷ್ಟವಾದರೆ, ಬ್ರಾಹ್ಮಣ ಸಿಎಂ ಎನ್ನುವಂತ ಹೇಳಿಕೆಗಳಿಂದ ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಆದರೆ ಈ ಲಾಭ-ನಷ್ಟದ ಪ್ರಮಾಣ ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವ ಮೇಲೆ ಕಾಂಗ್ರೆಸ್ ಭವಿಷ್ಯ ನಿಂತಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.