Thursday, 12th December 2024

ಕರಾವಳಿಯ ಪ್ರಗತಿಗೆ ಸರಕಾರದ ನಿರಾಸಕ್ತಿ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ರಾಜ್ಯದ ಈ ವರ್ಷದ ಆಯವ್ಯಯದಲ್ಲಿ ಕರಾವಳಿ ಭಾಗವನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ. ರಾಜ್ಯದ ಪ್ರಗತಿಗೆ ಪೂರಕವಾದ ಬಜೆಟ್ ಎಂದು ಹೇಳುತ್ತಾ ಮಾಡಿದ ಎರಡೂ ಮುಕ್ಕಾಲು ಗಂಟೆಗಳಷ್ಟು ಸುದೀರ್ಘ ಭಾಷಣದಲ್ಲಿ ಕರಾವಳಿ ಭಾಗಕ್ಕೆ ಸಂಬಂಧಿಸಿ ಯಾವುದೇ ಮಹತ್ವದ ಯೋಜನೆಗಳಿರಲಿಲ್ಲ.

ವಿಶ್ವ ಮೀನುಗಾರಿಕಾ ದಿನವನ್ನು ಮೊನ್ನೆಯಷ್ಟೇ ಎಲ್ಲೆಡೆ ಆಚರಿಸಲಾಗಿದೆ. ಮೀನುಗಾರಿಕೆಯ ಪ್ರಗತಿ, ಮೀನುಗಾರರ ರಕ್ಷಣೆ, ಬಂದರುಗಳ ಅಭಿವೃದ್ಧಿ ಮೊದಲಾದ ಸಂಗತಿಗಳ ಕುರಿತು ಮಾತು, ಚರ್ಚೆ ನಡೆದಿವೆ, ಭರವಸೆಗಳು ಹೊಮ್ಮಿವೆ. ರಾಜ್ಯ ಸರಕಾರವೂ ಮೀನುಗಾರಿಕಾ ದಿನವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭರ್ಜರಿಯಾಗಿ ಆಚರಿಸಿದ್ದು, ಮೀನುಗಾರರ ಕುರಿತು ಅತೀವ ಕಾಳಜಿ ವ್ಯಕ್ತಪಡಿಸಿದೆ.

ಮೀನುಗಾರ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಬದ್ಧ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆದರೆ ಸರಕಾರದ ವಾಸ್ತವ ನಡೆಯನ್ನು ಗಮನಿಸಿದರೆ ಇವೆಲ್ಲವೂ ಕೇವಲ ಒಂದು ದಿನದ ಆಚರಣೆಗೆ ಸೀಮಿತ ಎಂಬುದು ಸ್ಪಷ್ಟವಾಗುತ್ತದೆ. ಬಜೆಟ್‌ನಲ್ಲಿ ಸರಕಾರ ಮೀಸಲಿಟ್ಟ
ಅತ್ಯಲ್ಪ ಹಣವೇ ಮೀನುಗಾರ ಸಮುದಾಯದಲ್ಲಿ ನಿರಾಸೆ ಮೂಡಿಸಿದ್ದು, ಸರಕಾರದ ಘೋಷಣೆಗಳು ಕೇವಲ ಮೂಗಿಗೆ ತುಪ್ಪ ಸವರುವ ಪ್ರಯತ್ನ ಎಂಬುದು ಕರಾವಳಿಗರಿಗೆ ಮನದಟ್ಟಾಗುತ್ತಿದೆ.

ಮೀನುಗಾರಿಕೆಯು ಕರಾವಳಿಯ ಜನರ ಕುಲಕಸುಬು. ಮೀನುಗಾರಿಕೆಯಿಂದಲೇ ಸಾಕಷ್ಟು ಕುಟುಂಬಗಳು ಜೀವನ ಸಾಗಿಸುತ್ತಿವೆ. ಸರಕಾರಕ್ಕೆ ಬರುವ ಒಟ್ಟು ಆದಾಯಗಳ ಪೈಕಿ ಬಹುಪಾಲನ್ನು ಮೀನುಗಾರಿಕೆ ನೀಡುತ್ತಿದೆ. ದೋಣಿಗಳ ಮೂಲಕ ತಿಂಗಳುಗಳ ಕಾಲ ಸಮುದ್ರದಲ್ಲಿ ಮೀನು ಹಿಡಿಯಲು ತೊಡಗುವ ಮೀನುಗಾರ ತನ್ನ ಜೀವದ ಹಂಗು ತೊರೆದು ದುಡಿಯುತ್ತಾನೆ. ಕೆಲವೊಮ್ಮೆ ಸಾಕಷ್ಟು ಮೀನುಗಾರರು ಸಂಕಷ್ಟಕ್ಕೆ ಸಿಲುಕಿ ಜೀವ ಕಳೆದು ಕೊಂಡರೆ, ಇನ್ನು ಕೆಲವರು ಬದುಕಿದ್ದಾರಾ ಇಲ್ಲವಾ ಎನ್ನುವ ಗೊಂದಲ ಮೂಡಿಸುವ ಹಾಗೆ ಮರೆಯಾಗುತ್ತಾರೆ. ಇಷ್ಟಾದರೂ ಮಧ್ಯವರ್ತಿಗಳಿಗೆ ಪಾಲು ನೀಡಿ ಕೊನೆಗೆ ಮೀನುಗಾರರಿಗೆ ಉಳಿಯುವುದು ಅಲ್ಪ ಸ್ವಲ್ಪ ಮಾತ್ರ.

ಕಡಲಿಗೆ ಮೀನು ಹಿಡಿಯಲು ಹೋಗುವ ಅಸಂಖ್ಯ ಮಂದಿಗೆ ಇಂದಿಗೂ ಸರಿಯಾದ ರಕ್ಷಣೆ ಸಿಗುತ್ತಿಲ್ಲ. ಸರಕಾರ ಅವರ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಕಡಲ ಮೀನುಗಾರಿಕೆಯಲ್ಲಿ ೪,೬೪೬ ಯಾಂತ್ರೀಕೃತ, ೧೦,೯೬೧ ಮೋಟರೀಕೃತ ಮತ್ತು ೮,೬೫೭ ಸಾಂಪ್ರದಾಯಿಕ ದೋಣಿಗಳು ವ್ಯಸ್ತವಾಗಿವೆ. ಯಾಂತ್ರೀಕೃತ
ಮೀನುಗಾರಿಕೆಯಿಂದ ರಾಜ್ಯದ ಕಡಲ ಮೀನು ಉತ್ಪಾದನೆಯಲ್ಲಿ ಶೇ.೮೫ಕ್ಕಿಂತ ಹೆಚ್ಚಿನ ಪ್ರಮಾಣದ ಮೀನು ಸಂಗ್ರಹವಾಗುತ್ತಿದೆ. ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಂಪ್ರದಾಯಿಕ ನಾಡದೋಣಿಗಳಿದ್ದು ಔಟ್‌ಬೋರ್ಡ್ ಎಂಜಿನ್ ಅಳವಡಿಸಿಕೊಂಡು ಸಮುದ್ರ ತೀರದಲ್ಲಿ ಕಡಿಮೆ ಅವಧಿಯಲ್ಲಿ
ಮೀನುಗಾರಿಕೆ ಮಾಡಲು ಇವು ಸಹಕಾರಿಯಾಗಿವೆ.

ಈ ಪೈಕಿ ೮,೦೩೦ ದೋಣಿಗಳಿಗೆ ಸರಕಾರದ ವತಿಯಿಂದ ಪಡಿತರ ದರದಲ್ಲಿ ೩೦೦ ಲೀಟರ್ ಸೀಮೆಎಣ್ಣೆ ಪೂರೈಸಲಾಗುತ್ತಿದೆ. ೨೦೨೨-೨೩ರಲ್ಲಿ ಬಿಜೆಪಿ ಸರಕಾರದಿಂದ ೧,೮೪೨ ಲಕ್ಷ ರು.ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ೨.೭೨ ಲಕ್ಷ ಹೆಕ್ಟೇರ್ ವಿಸ್ತೀರ್ಣವುಳ್ಳ ೮೨ ಜಲಾಶಯಗಳಿದ್ದು ಸಹಸ್ರಾರು ಕುಟುಂಬಗಳು ಜೀವನೋಪಾಯಕ್ಕಾಗಿ ಇವನ್ನು ಅವಲಂಬಿಸಿವೆ. ಇಲ್ಲಿ ಶೀಘ್ರ ಬೆಳವಣಿಗೆ ಹೊಂದುವ ಗೆಂಡೆ ಮೀನುಗಳ ಕಾಟ್ಲಾ, ರೋಹು, ಮೃಗಾಲ್ ತಳಿಗಳನ್ನು ಉತ್ಪಾದಿಸುವ ಯೋಜನೆಗಾಗಿ ೨೦೨೩ರಲ್ಲಿ ೨೦೦ ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಆಯ್ದ ೩೮ ಜಲಾಶಯಗಳಲ್ಲಿ ೫೮೩.೫೬ ಲಕ್ಷ ಬಲಿತ ಮೀನುಗಳ ಮರಿಗಳ ದಾಸ್ತಾನಿಗೆ ೬೦ ಲಕ್ಷ ರು. ವೆಚ್ಚ ಮಾಡಲಾಗಿದೆ.

ಮೀನುಗಾರಿಕಾ ಸಲಕರಣೆ ಕಿಟ್‌ಗಳ ವಿತರಣೆ ಎಂಬ ಯೋಜನೆಯಡಿ ಮೀನುಗಾರರಿಗೆ ಬೇಕಾದ ಬಲೆ, ಲೈಫ್ ಜಾಕೆಟ್ ಮತ್ತು ಇತರ ಸಾಮಗ್ರಿಗಾಗಿ ಶೇ.೧೦೦ ರಷ್ಟು ಸಹಾಯಧನ ನೀಡಲಾಗುತ್ತಿದೆ. ಸಮುದ್ರದ ಮೀನುಗಾರರಿಗೆ ಎರಡೂವರೆ ಸಾವಿರ ಮೌಲ್ಯದ ಲೈಫ್ ಜಾಕೆಟ್, ಶಾಖನಿರೋಧಕ  ಬಾಕ್ಸ್‌ಗಳನ್ನು ಹಾಗೂ ಒಳನಾಡು ಮೀನುಗಾರರಿಗೆ ೧೦,೦೦೦ ರು. ಮೌಲ್ಯದ ಎರಡು ಹುಟ್ಟುಗಳೊಂದಿಗೆ ಹರಿಗೋಲನ್ನು, ಮೀನುಗಾರಿಕಾ ಬಲೆಯನ್ನು
ಉಚಿತವಾಗಿ ನೀಡಲಾಗಿದೆ. ೨೦೨೨-೨೩ನೇ ಸಾಲಿನಲ್ಲಿ ಈ ಯೋಜನೆ ಅಡಿ ೧,೨೫೦ ಫಲಾನುಭವಿಗಳಾಗಿದ್ದಾರೆ. ಮೀನು ಮರಿ ಉತ್ಪಾದನೆಗೆ ವೈಯಕ್ತಿಕ ವಾಗಿ ೫,೦೦೦ ರು. ಹಾಗೂ ಸಂಘ ಸಂಸ್ಥೆಗಳಿಗೆ ೨೦,೦೦೦ ರು. ಸಹಾಯಧನ ನೀಡಲಾಗುತ್ತಿದೆ.

ಇದಲ್ಲದೆ ಮೀನು ಮರಿ ಪಾಲನೆ ಕೈಗೊಳ್ಳಲು ಆಸಕ್ತರಿರುವ ಮೀನು ಕೃಷಿಕರು ಪ್ರತಿ ಹೆಕ್ಟೇರ್‌ಗೆ ೨೫,೦೦೦ ರು. ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಈಗಾಗಲೇ ೩೨೦ ಫಲಾನುಭವಿಗಳಿಗೆ ನೀಡಲಾಗಿದೆ. ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಬಹುಮುಖ್ಯ ಪಾತ್ರ ವಹಿಸುತ್ತಿದ್ದು ಹಿಂದಿನ ಬಿಜೆಪಿ ಸರಕಾರ ಮೀನುಗಾರರಿಗೆ ಉಪಯುಕ್ತವಾಗುವ ಇಂಥ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಬಿಜೆಪಿ ಸರಕಾರದ ಮಹತ್ತ್ವಾಕಾಂಕ್ಷೆಯಂತೆ ಸೀಗಡಿ ಮತ್ತು ಹಿನ್ನೀರು ಮೀನು ಕೃಷಿ ಯೋಜನೆಯಡಿ ಶೇ.೫೦ರಷ್ಟು ಸಹಾಯಧನ ನೀಡಲಾಗುತ್ತಿದೆ. ಕೆರೆ ಜಲಾಶಯಗಳ ಪಕ್ಕದಲ್ಲಿ ಮೀನು ಮರಿಗಳ ಪಾಲನೆ ಮಾಡಲು ಗರಿಷ್ಠ ೨.೫೦ ಲಕ್ಷ ರು. ನೀಡಲಾಗುತ್ತಿದ್ದು ೨೦೨೨ನೇ ಸಾಲಿನಲ್ಲಿ ೨೫ ಲಕ್ಷ ರು. ನೀಡಲಾಗಿದೆ.

೨೦೨೨-೨೩ನೇ ಸಾಲಿನಲ್ಲಿ ಘೋಷಣೆಯಾದ ಗ್ರಾಮ ಪಂಚಾಯತ್ ಕೆರೆಗಳಲ್ಲಿ ಮೀನು ಮರಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ೫,೯೨೭ ಗ್ರಾಮ ಪಂಚಾಯತಿ ಕೆರೆಗಳಿಗೆ ೪೨೬ ಲಕ್ಷ ರು. ಅನುದಾನ ನೀಡಲಾಗಿದೆ. ೨೦೨೩ರಲ್ಲಿ ಆಳ್ವೆಕೋಡಿ-ತೆಂಗಿನಗುಂಡಿ ಬ್ರೇಕ್ ವಾಟರ್ ನಿರ್ಮಾಣಕ್ಕೆ, ಹೆಜಮಾಡಿ ಮೀನುಗಾರಿಕಾ ಬಂದರಿನ ನಿರ್ಮಾಣ, ಮಂಗಳೂರಿನ ೩ನೇ ಹಂತದ ಮೀನುಗಾರಿಕಾ ಬಂದರಿನ ನಿರ್ಮಾಣಕ್ಕೆ ೭,೧೯೩ ಕೋಟಿ ಬಳಸಿಕೊಳ್ಳ ಲಾಗಿದೆ. ೫ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತಲು ೨,೦೦೦ ಲಕ್ಷ ರು.ಗಳನ್ನು ಮೀಸಲಿರಿಸಲಾಗಿದೆ.

ರಾಜ್ಯದ ವಿವಿಧ ಬಂದರುಗಳಲ್ಲಿ ಸಣ್ಣ ಕಾಮಗಾರಿಗಳಿಗಾಗಿ ೩,೫೦೦ ಲಕ್ಷ ರು.ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಪುನರ್ ನಿರ್ಮಾಣಕ್ಕೆ (ಡಯಾ-ಮ್ ಗೋಡೆ) ೨೫೨.೭೬ ಲಕ್ಷ ರು. ನೀಡಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಕೇರಳ ಮಾದರಿ ಬಂದರು ನಿರ್ಮಾಣಕ್ಕಾಗಿ ೧೦೧.೭೨ ಲಕ್ಷ ರು., ಮಂಜುಗಡ್ಡೆ ಘಟಕಗಳ ವಿದ್ಯುದೀಕರಣಕ್ಕೆ ೨೦೨೩ರಲ್ಲಿ ೪೦೦ ಲಕ್ಷ ರು. ಅನುದಾನ ನೀಡಲಾಗಿದೆ. ರಾಜ್ಯದ ೧೮೨ ಐಸ್ ಪ್ಲಾಂಟ್ ಹಾಗೂ ಕೋಲ್ಡ್ ಸ್ಟೋರೇಜ್‌ಗಳಿಗೆ ಸಹಾಯಧನ ವಿತರಿಸಲು ೪೦೦ ಲಕ್ಷ ರು. ನೀಡಲಾಗಿದೆ. ೨೦೧೯-೨೦ನೇ ಸಾಲಿನಲ್ಲಿ ಆಳ್ವೆಕೋಡಿ-ತೆಂಗಿನ ಗುಂಡಿ ಇಳಿದಾಣಗಳಿಗೆ ಕೇಂದ್ರದ ಅಲೆ ತಡೆಗೋಡೆ ಯೋಜನೆಯಡಿ ೮೬.೦೮ ಕೋಟಿ ರು. ಮಂಜೂರು ಮಾಡಲಾಗಿದೆ.

ಸದರಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ೫೦:೫೦ ಅನುಪಾತದಲ್ಲಿ ತಲಾ ೧೦ ಕೋಟಿ ರು. ಸಹಾಯ ಮಾಡಿವೆ. ೨೦೨೨-೨೩ರ ಹೆಜಮಾಡಿ ಕೋಡಿಯಲ್ಲಿ ನಿರ್ಮಾಣ ಕಾಮಗಾರಿ ವೆಚ್ಚ ೧೮೮.೭೩ ಕೋಟಿ ರು. ಇದ್ದು ಇದರಲ್ಲಿ ಕೇಂದ್ರದ ಪಾಲು ೬೯.೩೧ ಕೋಟಿ ಹಾಗೂ ರಾಜ್ಯದ ಪಾಲು ೧೧೯.೪೩ ಕೋಟಿಯಷ್ಟಿದೆ. ಕೇಂದ್ರವು ೧೩.೮೬ ಕೋಟಿ ಬಿಡುಗಡೆ ಮಾಡಿದ್ದು ರಾಜ್ಯವು ೩೨.೮೮ ಕೋಟಿ ಬಿಡುಗಡೆ ಮಾಡಿದೆ. ಇವೆಲ್ಲ ಬಿಜೆಪಿ ಸರಕಾರದ ಸಾಧನೆಗಳು. ಆದರೆ ಈ ಬಾರಿಯ ಕಾಂಗ್ರೆಸ್ ಸರಕಾರದ ಬಜೆಟ್‌ನಲ್ಲಿ ಮೀನುಗಾರರಿಗೆ ನಿರಾಸೆಯಾಗಿದೆ.

ರಾಜ್ಯದ ಈ ವರ್ಷದ ಆಯವ್ಯಯದಲ್ಲಿ ಕರಾವಳಿ ಭಾಗವನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ. ರಾಜ್ಯದ ಪ್ರಗತಿಗೆ ಪೂರಕವಾದ ಬಜೆಟ್ ಎಂದು ಹೇಳುತ್ತಾ ಮಾಡಿದ ಎರಡೂ ಮುಕ್ಕಾಲು ಗಂಟೆಗಳಷ್ಟು ಸುದೀರ್ಘ ಭಾಷಣದಲ್ಲಿ ಕರಾವಳಿ ಭಾಗಕ್ಕೆ ಸಂಬಂಧಿಸಿ ಯಾವುದೇ ಮಹತ್ವದ ಯೋಜನೆಗಳಿರಲಿಲ್ಲ.
ಸರಕಾರವು ಕರಾವಳಿ ಭಾಗಕ್ಕೆ ಅನುದಾನ ಹಂಚುವ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಡೀ ಆಯವ್ಯಯದ ಒಟ್ಟಾರೆ ಹಂಚಿಕೆಯಲ್ಲಿ ಪಶುಸಂಗೋಪನೆಯ ಜತೆಗೆ ಮೀನುಗಾರಿಕೆಗೆ ಸರಕಾರ ಮೀಸಲಿಟ್ಟದ್ದು ಶೇ.೧ರಷ್ಟು ಮೊತ್ತ ಮಾತ್ರ! ಹಿಂದಿನ ಸರಕಾರ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಸಹಯೋಗದಲ್ಲಿ ತಂದಿದ್ದ ಮತ್ಸ್ಯಸಿರಿ ಕಾರ್ಯಕ್ರಮ, ದೋಣಿಗಳ ವೇಗದ ಚಲನೆಗಾಗಿ ಹೂಳೆತ್ತುವುದು ಇತ್ಯಾದಿ ವಿಚಾರಗಳ ಬಗ್ಗೆ ವಿಶೇಷ ಗಮನ ಕೊಟ್ಟಿದ್ದು, ಈ ಬಾರಿ ಇವುಗಳ ಬಗ್ಗೆ ಗಮನ ಹರಿಸಿದಂತೆ ಕಾಣುತ್ತಿಲ್ಲ.

ಮೀನುಗಾರಿಕೆಯು ಅಭಿವೃದ್ಧಿಯಾಗಬೇಕೆಂದರೆ ಬಂದರುಗಳನ್ನು ಸುಸ್ಥಿತಿಯಲ್ಲಿಡುವುದು ಬಹಳ ಮುಖ್ಯ. ಕಡಲ್ಕೊರೆತವನ್ನು ತಡೆಯಲು ಅಗತ್ಯವಾದ ತಡೆಗೋಡೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಟ್ಟಿಲ್ಲ. ಮೀನುಗಾರರ ಜೀವವಿಮೆ, ಅವರ ಜೀವಸಂರಕ್ಷಣೆಗೆ ಬೇಕಾದ ಸಮುದ್ರ ಆಂಬುಲೆನ್ಸ್ ಸೇವೆ ಮುಂತಾದವುಗಳ ಕುರಿತು ಸರಕಾರ ನಿರ್ಲಕ್ಷ್ಯ ತೋರಿದ್ದು ಕರಾವಳಿಯ ಜನರಿಗೆ ನಿರಾಸೆ ಮೂಡಿಸಿದೆ. ಒಟ್ಟಾರೆ, ಮೀನುಗಾರಿಕೆ ಎಂಬುದು ರಾಜ್ಯದ ಮೂಲ ಆದಾಯದ ಒಂದು ಪ್ರಮುಖ ಭಾಗವಾಗಿದೆ. ವಿಶ್ವದ ಮೀನು ಉತ್ಪಾದನೆಯಲ್ಲಿ ಭಾರತ ೩ನೇ ಸ್ಥಾನದಲ್ಲಿದೆ. ಕರ್ನಾಟಕವು
ಭಾರತದಲ್ಲಿ ೯ನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಮೊದಲ ೩ ಸ್ಥಾನವನ್ನು ಅಲಂಕರಿಸಿವೆ. ಅಲ್ಲಿನ ಮಾದರಿಯನ್ನು ಪರಿಶೀಲಿಸಿ ನಮ್ಮಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. ಕಡಲ ಮಕ್ಕಳ ರಕ್ಷಣೆಯೊಂದಿಗೆ ಮೀನುಗಾರಿಕಾ ಉತ್ಪನ್ನಗಳನ್ನು ಹೆಚ್ಚಿಸಿ ರಾಜ್ಯದ ಆದಾಯ ವನ್ನು ದ್ವಿಗುಣಗೊಳಿಸುವಲ್ಲಿ ಸರಕಾರ ಹೆಚ್ಚಿನ ಚಿಂತನೆ ಮಾಡಬೇಕಾಗಿದೆ.

ಸರಕಾರವು ಕೇವಲ ಭಾಷಣ-ಭರವಸೆಗಳಿಗೆ ಸೀಮಿತವಾಗದೆ ಜನರ ಸಂಕಷ್ಟಗಳನ್ನು ಆಲಿಸಿ, ಎಲ್ಲ ಕ್ಷೇತ್ರಗಳ ಪ್ರಗತಿಗೆ ಸಮಾನ ಆದ್ಯತೆ ನೀಡಬೇಕಿದೆ. ಕಡಲ ಮಕ್ಕಳ ಸಂಕಷ್ಟಗಳಿಗೆ ಕಿವಿಯಾಗಬೇಕಿದೆ.