ಅಭಿಮತ
ಕೆ.ಜಯಪ್ರಕಾಶ್ ರಾವ್
ಪ್ರಸಕ್ತ ಕಲುಷಿತ ಸಾಮಾಜಿಕ ವಾತಾವರಣದಲ್ಲಿ ನಾವು ಹಿಂದೆಂದೂ ಕಂಡಿರದ ವ್ಯಕ್ತಿ ನಿಂದನೆ, ಆರೋಪಗಳು, ಚಾರಿತ್ರ್ಯ ಹನನ ಹಾಗೂ ನಮ್ಮ ನಾಯಕರುಗಳ ಕುಸಿದು ಬಿದ್ದ ನೈತಿಕ ಜೀವನ ಹಾಗೂ ಭ್ರಷ್ಟಾಚಾರ ಮತ್ತು ದೇಶದ ಲೂಟಿ-ಇವುಗಳನ್ನು ಕಂಡು
ಭ್ರಮ ನಿರಶನರಾಗಿರುವುದು ಸತ್ಯದ ವಿಚಾರ.
ನಾಯಕರುಗಳು ಸತತವಾಗಿ ಬಹಳ ದಶಕಗಳಿಂದ ಮತದಾರರನ್ನು ಮೋಸಗೊಳಿಸುತ್ತಾ ಬಂದಿದ್ದಾರೆ. ಇದೀಗ ಮತ್ತೊಮ್ಮೆ ವಿವಿಧ ವೇಷಧಾರಿಗಳಾಗಿ ಜನರಲ್ಲಿ ಮತ ಯಾಚಿಸಿ ಆಯ್ಕೆ ಆಗಲಿದ್ದಾರೆ. ಯಾರೂ ತಮ್ಮ ಉತ್ತರಾದಾಯಿತ್ವದ ಅಗತ್ಯ, ಸರಳತೆ-ಪಾರದರ್ಶ ಕತೆಯನ್ನು ಪಾಲಿಸುವ ಬಗ್ಗೆ ಮಾತಾನಾಡುತ್ತಿಲ್ಲ.
ಎಲ್ಲಾ ಪಕ್ಷಗಳ ಪ್ರಣಾಳಿಕೆಗಳು ಜನರ ಹಿತಾಸಕ್ತಿ ಹಾಗೂ ಕ್ಷೇಮ ವಿಚಾರವನ್ನು ಎತ್ತಿ ಹಿಡಿದಿವೆ. ಆದರೆ ಪರಿಶುದ್ಧ ವ್ಯಕ್ತಿತ್ವ ಹೊಂದಿರದ ಸ್ವಾರ್ಥಮಯ ನಾಯಕರುಗಳಿಂದಾಗಿ ತೆರಿಗೆದಾರರು ಪಾವತಿಸಿದ ರಾಷ್ಟ್ರೀಯ ಧನ ಪೋಲಾಗಿ ಹಲವು ಯೋಜನೆಗಳು ಜನ ಸಾಮಾನ್ಯರನ್ನು ತಲುಪುತ್ತಿಲ್ಲ. ಈ ದೃಷ್ಟಿಯಿಂದ ಮತದಾರರು ಜನಹಿತಕಾರಿ ಷರತ್ತು ಗಳನ್ನು ವಿಧಿಸಬೇಕು. ತಮ್ಮ ಹಕ್ಕೊತ್ತಾಯವಾಗಿ ಅಧಿಕಾರ ಹೊಂದಲಿರುವ ಜನಪ್ರತಿನಿಧಿಗಳನ್ನು ಕೇಳುವ ಅಗತ್ಯವಿದೆ.
ಯಾವುದೇ ಕಾರಣಕ್ಕೂ ರಾಜ್ಯ ಸುತ್ತಲು ಬೊಕ್ಕಸ ಖಾಲಿ ಮಾಡುವ ಹೆಲಿಕಾಪ್ಟರ್ ಪ್ರವಾಸವನ್ನು ಕಡ್ಡಾಯವಾಗಿ ಮುಂಬರುವ ಮುಖ್ಯಮಂತ್ರಿ ನಿಲ್ಲಿಸತಕ್ಕದ್ದು. ಇಂಥ ಹಾರಾಟವನ್ನು ಕೇವಲ ನೈಸರ್ಗಿಕ ಪ್ರಕೋಪಗಳು ಹಾಗೂ ಇನ್ನಿತರ ಗಂಡಾಂತರ ಸನ್ನಿವೇಶಗಳಿಗೆ ಮಾತ್ರ ಸೀಮಿತಗೊಳಿಸತಕ್ಕದ್ದು. ಆರ್ಥಿಕ ಶಿಸ್ತು, ನಿಯಮಾವಳಿಗಳನ್ನು ಗಾಳಿಗೆ ತೂರಿ ಯಾವುದೇ ರೀತಿಯ ಸಾಲ ಮನ್ನಾ ಇತ್ಯಾದಿ ವ್ಯಕ್ತಿ ಪ್ರತಿಷ್ಠೆಯ ಕಾರು ಬಾರುಗಳನ್ನು ನಿಲ್ಲಿಸತಕ್ಕದ್ದು. ರಾಜ್ಯದ ಜ್ವಲಂತ ಸಮಸ್ಯೆಗಳಾದ ಕಾವೇರಿ ನೀರು ಯೋಜನೆ, ಮಹಾದಾಯಿ ಯೋಜನೆ, ಅಂತರ ರಾಜ್ಯ ನೀರು ಹಂಚಿಕೆ ಹಾಗೂ ಇನ್ನಿತರ ವಿಚಾರಗಳಿಗೆ ಓರ್ವ ಜನ ಸಾಮಾನ್ಯರ ಪ್ರತಿನಿಧಿಯಾಗಿ ಪಕ್ಷಾತೀತ ಮತ್ತು ನ್ಯಾಯ ಸಮಂಜಸ ನಿರ್ಧಾರಗಳಿಂದ ಪ್ರಾಮಾಣಿಕತೆ ಜೊತೆಗೆ ರಾಜ್ಯದ ನಿಷ್ಠೆಯನ್ನು ಮುಖ್ಯ ಮಂತ್ರಿ ಎತ್ತಿಹಿಡಿಯಬೇಕು.
ಮಂತ್ರಿಮಹೋದಯ ಹಾಗೂ ಇನ್ನಿತರ ನಿಗಮ ಹಾಗೂ ಮಂಡಳಿ ಅಥವಾ ಅಽಕಾರ ಹೊಂದುವ ಪ್ರತಿನಿಧಿಗಳಿಗೂ ನೀತಿ ಸಂಹಿತೆಗಳನ್ನು ಮತದಾರ ಈಗಲೇ ವಿಧಿಸುವ ಅಗತ್ಯವಿದೆ. ಈ ಹಿಂದಿನ ಮಂತ್ರಿಗಳು ಹಾಗೂ ಅಧ್ಯಕ್ಷರುಗಳು ಬಳಸಿದ ಚಲಾವಣೆ ಯಲ್ಲಿರುವ ಕಾರುಗಳನ್ನು ಬಳಸುವುದು ಮತ್ತು ಹೊಸ ವಾಹನಗಳ ಖರೀದಿಗಳಿಗೆ ನಿಷೇಧ ಹೇರುವುದು. ಅಧಿಕೃತ ಕಾರುಗಳಲ್ಲದೆ ತಮ್ಮ ಇಲಾಖೆಗೆ ಸೇರಿದ ಯಾವುದೇ ಕಾರುಗಳನ್ನು ತಮ್ಮ ಪಿಎ ಹಾಗೂ ಸಹಾಯಕರು ಮತ್ತು ಕುಟುಂಬದ ಸದಸ್ಯರುಗಳ ಬಳಕೆ ಗಾಗಿ ಏರವಲು ಪಡೆಯಲೇಬಾರದು.
ಯಾವುದೇ ಅಧಿಕೃತ ಕಚೇರಿ ಅಥವಾ ಮನೆಗಳು ಹಾಗೂ ಖಾಸಗಿ ವಾಸ್ತವ್ಯದ ನಿವೇಶನಗಳ ನವೀಕರಣಗೊಳಿಸುವುದು ಮತ್ತು ವಾಸ್ತು ಸಂಪ್ರದಾಯ ಪಾಲನೆಗಾಗಿ ರಿಪೇರಿ ನಡೆಸುವುದು ಇತ್ಯಾದಿ ದುಂದು ವೆಚ್ಚಗಳ ನಿಷೇಧ ಘೋಷಣೆ. ಕಚೇರಿ ಹಾಗೂ ಮನೆಯ ಸರಕಾರಿ ವ್ಯವಸ್ಥೆಯ ಟೆಲಿಫೋನ್, ಫ್ಯಾಕ್ಸ್ ಹಾಗೂ ಮೊಬೈಲ್ ಬಳಕೆ ವಿಚಾರದಲ್ಲಿ ಕಡ್ಡಾಯ ಮಿತವ್ಯಯ ಪರಿ
ಪಾಲನೆಗಾಗಿ ನಿಯಮಗಳನ್ನು ಅನುಷ್ಠಾನಕ್ಕೆ ತಂದು ಪಾಲಿಸುವ ನಿರ್ಧಾರ.
ಕಚೇರಿ ಹಾಗೂ ಅಧಿಕೃತ ನಿವಾಸಗಳಲ್ಲಿ ತೀರಾ ಕಡಿಮೆ ಸಂಖ್ಯೆಯ ಆಳುಕಾಳುಗಳ ಬಳಕೆ ಮಾಡುವುದರೊಂದಿಗೆ ಕನಿಷ್ಠ ಸಂಖ್ಯೆಯ ಭದ್ರತಾ ಸಿಬ್ಬಂದಿ ಹಾಗೂ ಪೋಲಿಸ್ ಪಡೆಯನ್ನು ತಮ್ಮ ಭದ್ರತೆಗಾಗಿ ಬಳಸುವುದು. ಇವೆಲ್ಲಾ ಪ್ರತಿಷ್ಠೆಯ ಸಂಕೇತ ವಾಗಿ ಅನವಶ್ಯಕವಾಗಿ ರಾಜ್ಯದ ನೌಕರರ ಸೇವೆಯ ದುರುಪಯೋಗಕ್ಕೆ ಅವಕಾಶ ನೀಡಬಾರದು. ರಾಜ್ಯದ ಉಭಯ ಸದನಗಳಲ್ಲಿ ಅಧಿಕೃತ ಕಲಾಪಗಳಲ್ಲಿ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗತಕ್ಕದ್ದು. ಈ ಅವಧಿಯಲ್ಲಿ ಕ್ಷೇತ್ರ ಪ್ರವಾಸ ಹಾಗೂ ಇನ್ನಿತರ ಪಕ್ಷದ ಮತ್ತು ವೈಯಕ್ತಿಕ ಕಾರಣಗಳಿಗೆ ಅವಕಾಶ ನೀಡದಿರುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಸದನದ ಹಾಜರಾತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಬಿಡುಗಡೆ ಮಾಡಿ ಪಾರದರ್ಶಕತೆಯನ್ನು ಆರಂಭಿಸಬೇಕು.
ಪ್ರತಿ ತಿಂಗಳು ಈ ಅಧಿಕಾರಶಾಹಿ ಪ್ರಭುಗಳು ಎಂದಿನ ಪ್ರದರ್ಶಿಸುವ ತವಕ ಹಾಗೂ ಉತ್ಸಾಹ ತಾವು ಪಡೆಯುವ ಪ್ರಯಾಣ ಹಾಗೂ ಇನ್ನಿತರ ಭತ್ಯೆ ಹಾಗೂ ಸೌಲಭ್ಯಗಳಿಗೆ ಮಾತ್ರ ಸೀಮಿತವಾಗದಿರಲಿ, ಆರ್ಥಿಕ ನೀತಿ ಸಂಹಿತೆ ಇಲ್ಲಿ ಕೂಡ ಜಾರಿಗೆ ಬರಬೇಕು. ಏಕೆಂದರೆ ಸಮಗ್ರ ಪ್ರತಿನಿಧಿಗಳ ವೆಚ್ಚದಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ವಿವಿಧ ಸಮ್ಮೇಳನ ಹಾಗೂ ಅಧಿವೇಶನ ಹೆಸರಲ್ಲಿ ವಿದೇಶದಲ್ಲಿ ನಡೆಯುವ ಎಲ್ಲಾ ಅದ್ದೂರಿಯ ವೆಚ್ಚಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ೫ ವರ್ಷ ನಿಷೇಧ.
ತಾವು ಲಭ್ಯ ಇರುವ ದಿನಾಂಕ ಹಾಗೂ ಸಮಯವನ್ನು ಜನತೆಗೆ ಖಚಿತವಾಗಿ ತಿಳಿಸುವ ಒಂದು ಉತ್ತಮ ವ್ಯವಸ್ಥೆಯ ನಿರ್ಮಾಣ. ಸಾರ್ವಜನಿಕರೊಂದಿಗೆ ಕಾಲಕ್ಷೇಪದ ವೇಳೆ ಪಕ್ಷಾತೀತವಾಗಿ ಎಲ್ಲರಿಗೂ ಲಭ್ಯವಿರುವ ಶಿಸ್ತು. ಎಷ್ಟೋ ಕಡೆ ಜನ ಪ್ರತಿನಿಧಿಗಳ ಸುತ್ತು ಅವರ ಪಕ್ಷದ ಪುಡಾರಿಗಳೇ ತುಂಬಿರುತ್ತಾರೆ. ಹೂ, ಹಾರ, ಗದೆ, ಖಡ್ಗ, ಪೇಟ ಹಾಗೂ ಸ್ಮರಣಿಕೆಗಳನ್ನು ಸ್ವೀಕರಿಸದಿರಲು
ನಿರ್ಧಾರ. ಸಾರ್ವಜನಿಕರ ದೊಡ್ಡ ಮೊತ್ತ ಇಂತಹ ಕಾಟಾಚಾರಗಳಿಗೆ ಖರ್ಚಾಗುತ್ತದೆ. ಈ ಹಣವನ್ನು ಕ್ಷೇತ್ರದ ಬೆಳವಣಿಗೆಯ ಕಾರ್ಯಗಳಿಗೆ ಬಳಸಬಹುದು.
ಪ್ರತಿವರ್ಷ ಸಾಧನಾ ಸಮಾವೇಶದ ನಾಟಕ ಬೇಡ. ೫ ವರ್ಷದ ಕೊನೆ ಹಂತ ತಲುಪುವರೆಗೆ ಸರಕಾರ ಅಥವಾ ಪಕ್ಷದ ವತಿಯಿಂದ ನಡೆಯುವ ದೊಡ್ಡ ಖರ್ಚಿನ ಸಾಧನಾ ಸಮಾವೇಶ ಅಥವಾ ಇಂತಹ ಡಂಬಾಚಾರ ಪ್ರದರ್ಶನಗಳಿಗೆ ಇತಿಶ್ರೀ ಹಾಡಲೇಬೇಕು. ಏಕೆಂದರೆ ಈ ದುಂದು ವೆಚ್ಚದಿಂದಾಗಿ ಪರರ ನಿಂದನೆ ಹಾಗೂ ವ್ಯರ್ಥ ಕಾಲಹರಣೆ ನಡೆಯುವುದು ಸಾಮಾನ್ಯ. ಸರಕಾರದ ಜಾಹಿರಾತು, ಫ್ಲೆಕ್ಸ್ ಬೋರ್ಡ್ ಪ್ರಚಾರ, ಟಿವಿ, ರೇಡಿಯೋ ಕಾರ್ಯಕ್ರಮಗಳಿಗೆ ೫ ವರ್ಷಗಳ ಕಾಲ ನಿಷೇಧ. ಏಕೆಂದರೆ ಇವುಗಳನ್ನು ಯಾರೂ ಗಮನಿಸುವುದಿಲ್ಲ.
ಹೀಗಾಗಿ ಈ ನಿಷೇಧ ಕಾರ್ಯದಿಂದ ಸರಕಾರಕ್ಕೆ ಕೋಟಿಗಟ್ಟಲೆ ಹಣ ಉಳಿಯುತ್ತದೆ. ದೇವಸ್ಥಾನ, ಮಸೀದಿ ಹಾಗೂ ಇಗರ್ಜಿ ಮತ್ತು ಇನ್ನಿತರ ಧಾರ್ಮಿಕ ಕ್ಷೇತ್ರಗಳಿಗೆ ಓರ್ವ ಜನಸಾಮಾನ್ಯರಂತೆ ಭೇಟಿ ನೀಡುವ ಒಳ್ಳೆ ಸಂಪ್ರದಾಯ ಪ್ರಾರಂಭಿಸುವುದು. ಕ್ಷೇತ್ರದ
ಸಮಗ್ರ ಸಮಸ್ಯೆ, ಬೇಡಿಕೆಗಳನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ ಕ್ಲಪ್ತ ಸಮಯದ ಚೌಕಟ್ಟಿನಲ್ಲಿ ಪರಿಹರಿಸುವ ಶಿಸ್ತುಬದ್ಧ
ಅಭಿಯಾನ ೫ ವರ್ಷವೂ ಚಾಲು ಮಾಡುವುದು. ಕೇಂದ್ರ ಸರಕಾರದೊಂದಿಗೆ ಮಧುರ ಬಾಂಧವ್ಯ ಹಾಗೂ ನೆರೆ ರಾಜ್ಯಗಳೊಂದಿಗೆ ಸಾಮರಸ್ಯ ಬೆಳೆಸುವುದು. ರಾಜ್ಯದ ಹಿತದೃಷ್ಟಿಯನ್ನು ಮುಂದಿಟ್ಟು, ಪಕ್ಷಾತೀತವಾಗಿ ಮುತ್ಸದ್ದಿತನದೊಂದಿಗೆ ಕಾವೇರಿ ನೀರು, ಕಳಸಾ ಬಂಡೂರಿ ಸೇರಿದಂತೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದುಕೊಂಡಿರುವ ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರ ಕಾರ್ಯವನ್ನು ಒಂದು ಸಮಯದ ಚೌಕಟ್ಟಿನೊಂದಿಗೆ ನಡೆಸುವುದು.
ಕಡ್ಡಾಯ ಕನ್ನಡ ಬಳಕೆ ಹಾಗೂ ಕನ್ನಡ ಭಾಷೆಯ ಸ್ಥಾನಮಾನ ಅನುಷ್ಠಾನ ಇತ್ಯಾದಿಗಳಿಗೆ ಗಮನ ಹರಿಸಿ. ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಕನ್ನಡ ಬೆಳೆಸುವ ಕೆಲಸಕ್ಕೆ ಆದ್ಯತೆ ನೀಡುವುದು. ಕ್ಷೇತ್ರದ ಸಾರ್ವಜನಿಕರಿಗೆ ಗರಿಷ್ಠ ಸಮಯ ನೀಡು ವುದು. ಸದನಗಳ ಅಧಿವೇಶನ ಹಾಗೂ ಇನ್ನಿತರ ಅಧಿಕೃತ ಕಾರ್ಯಗಳನ್ನು ಬಿಟ್ಟರೆ ಉಳಿದ ವೇಳೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗರಿಷ್ಠ ಅವಧಿಯಲ್ಲಿ ಉಳಿದು ಸಾರ್ವಜನಿಕರಿಗೆ ಲಭ್ಯವಿರುವುದು.
ಹೆಚ್ಚಿನ ಶಾಸಕರೆಲ್ಲಾ ಕೋಟ್ಯಧಿಪತಿಗಳು ಅಥವಾ ಲಕ್ಷಾಧೀಶರಾಗಿರುವ ಕಾರಣ ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ ಕೊಟ್ಟು ಸರಕಾರಿ ಗೃಹ, ವಾಹನ ಪಡೆಯುವ ಅಗತ್ಯವೇ ಇಲ್ಲ. ಸಾಧನಾ ಸಮಾವೇಶದ ಬದಲು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಮೀಕ್ಷಾ ಸಭೆ ನಡೆಸಲಿ. ಈ ಸಭೆಗೆ ಊರಿನ ಇನ್ನಿತರ ಪಕ್ಷದ ಮುಖಂಡವನ್ನು ಆಮಂತ್ರಿಸುವ ಧೈರ್ಯ ಇರಲಿ. ಅನಗತ್ಯವಾದ ಶಂಕು ಸ್ಥಾಪನೆ, ಉದ್ಘಾಟನೆ, ಚಾಲನೆ, ಉತ್ಸವ ಸಮಾರಂಭಗಳನ್ನು ನಿಲ್ಲಿಸಿ. ಸರಳ ಕಾರ್ಯಕ್ರಮಗಳ ಮೂಲಕ ಎಲ್ಲವೂ ಸಾಧ್ಯ ಎಂದು ತೋರಿಸಿಕೊಡಬೇಕು.