ತುಂಟರಗಾಳಿ
ಸಿನಿಗನ್ನಡ
ಬಾಲಿವುಡ್ ನಟ ಶಾಹಿದ್ ಕಪೂರ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ಜೋಹರ್, ಬಾಲಿವುಡ್‌ನ ನಂಬರ್ ಒನ್ ಹೀರೋ ಯಾರು ಅಂತ ಕೇಳಿದ ಪ್ರಶ್ನೆಗೆ, ಸದ್ಯಕ್ಕಂತೂ ರಾಕಿ ಭಾಯ್ ಅಂದ್ರೆ ಯಶ್ ಅಂತ ಉತ್ತರ ಹೇಳಿದ್ರು. ಇತ್ತೀಚಿಗೆ ಈ ವಿಡಿಯೋ ವೈರಲ್ ಆಗಿತ್ತು. ಆದರೆ ಶಾಹಿದ್ ಕಪೂರ್ ಹಾಗೆ ಹೇಳೋಕೆ ಕಾರಣ ಏನು ಅಂತ ಎಲ್ಲರಿಗೂ ಗೊತ್ತು.
ಅದು ಸೌತ್ ಇಂಡಿಯನ್ ಸಿನಿಮಾಗಳು ಬಾಲಿವುಡ್‌ನಲ್ಲಿ ಸೃಷ್ಠಿ ಮಾಡಿರೋ ಹವಾ. ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ, ನಾನ್ ಬಂದ್ ಮೇಲೆ ನಂದೇ ಹವಾ ಅಂತ ಯಶ್ ಡೈಲಾಗ್ ಹೊಡೆದಿದ್ದಕ್ಕೂ ಸಾರ್ಥಕ ಆಯ್ತು. ಈಗ ಬಾಲಿವುಡ್ ಮಂದಿ ಕೂಡಾ ಅಲ್ಲೂ ಯಶ್ ಹವಾ ಇದೆ ಅಂತ ಒಪ್ಪಿಕೊಂಡಿದ್ಧಾರೆ. ಇದರಿಂದ ಸೌತ್ ಇಂಡಿಯನ್ ಸಿನಿಮಾಗಳು ಬಾಲಿವುಡ್ ಅನ್ನು ಡಿಸ್ಟರ್ಬ್ ಮಾಡಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಬರೀ ಡಿಸ್ಟರ್ಬ್ ಮಾಡುವುದಷ್ಟೇ ಅಲ್ಲ ಇಪೈರ್ ಕೂಡಾ ಮಾಡುತ್ತವೆ ಅನ್ನೋದೂ ಸತ್ಯ.
ಮೊದಲಿಂದನೂ ಸೌತ್ ಇಂಡಿಯಾದ ಅನೇಕ ಸಿನಿಮಾಗಳನ್ನು ಹಿಂದಿಗೆ ರಿಮೇಕ್ ಮಾಡಿಕೊಂಡು ಅಲ್ಲಿನ ಜನ ಯಶಸ್ಸು ಕಂಡಿzರೆ. ಆದ್ರೆ ಈಗ ಅಚ್ಚರಿ ಎಂಬಂತೆ ತಮಿಳಿನ ವಿಕ್ರಂ ವೇದಾ ಚಿತ್ರ ಹಿಂದಿಗೆ ರಿಮೇಕ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ ಪಾತ್ರವನ್ನು ಅಲ್ಲಿ ಹೃತಿಕ್ ರೋಷನ್ ಮಾಡಿದ್ಧಾರೆ. ಇಲ್ಲಿ ಮಾಧವನ್ ಮಾಡಿದ ಪಾತ್ರ ಅಲ್ಲಿ ಸೈಫ್ ಅಲಿ ಖಾನ್ ಪಾಲಾಗಿದೆ. ಕೆಲವರು ಹೃತಿಕ್ ಈ ಪಾತ್ರಕ್ಕೆ ಸೂಟ್ ಆಗಲ್ಲ ಅಂದ್ರೆ, ಇನ್ನು ಕೆಲವರು ಮಾಧವನ್ ಹಿಂದಿಯಲ್ಲೂ ಪರಿಚಿತ ಇರೋ ಮುಖ. ಸೈಫ್ ಯಾಕೆ ಬೇಕಿತ್ತು ಅಂತ ಕೇಳ್ತಾ ಇದ್ಧಾರೆ.
ಆದರೆ ಇಲ್ಲಿ ಕೇಳಬೇಕಾದ ಮುಖ್ಯ ಪ್ರಶ್ನೆ ಅಂದ್ರೆ ಬಾಲಿವುಡ್‌ನವರಿಗೆ 2017ರ ವಿಕ್ರಂ ವೇದ ಸಿನಿಮಾವನ್ನು ರಿಮೇಕ್
ಮಾಡೋಕೆ ಇಷ್ಟು ವರ್ಷ ಬೇಕಾಯ್ತಾ ಅನ್ನೋದು. ಹಾಗಾಗಿ, ಬಾಲಿವುಡ್‌ನವರು ರಿಮೇಕ್ ಮಾಡೋದ್ರಲ್ಲೂ ಇಷ್ಟು ಸ್ಲೋ ಇzರೆ ಅಂದ್ರೆ ಈಗ ಅವರ ಉದ್ಯಮ ಹಳ್ಳ ಹಿಡಿತಿರೋದ್ರಲ್ಲಿ ಯಾವ ಆಶ್ಚರ್ಯವೂ ಇಲ್ಲ ಬಿಡಿ ಎನ್ನುತ್ತಿದೆ ದಕ್ಷಿಣ ಭಾರತದ
ಚಿತ್ರರಂಗ.
ಲೂಸ್ ಟಾಕ್
ಖೇಮು-ಸೋಮು (ಕಾಲ್ಪನಿಕ ಸಂದರ್ಶನ)
ಸೋಮು- ಏನ್ ಖೇಮು, ಮತ್ತೆ ಯಾವುದೋ ಸ್ವಾಮೀಜಿ ಕರ್ಮಕಾಂಡ ಬಯಲಾಗಿದೆಯಂತೆ?
-ಖೇಮು- ಅಯ್ಯೋ ಅದು ಕರ್ಮ ಕಾಂಡ ಅಲ್ಲ ಕಣ್ಲಾ, ಕಾಮಕಾಂಡ. ಇತ್ತೀಚೆಗೆ ತುಂಬಾ ಸಾಮಾನ್ಯ ಆಗಿರೋ ಕಾಮನ್ ಕಾಂಡ.
ಸೋಮು- ಅದ್ಸರಿ, ಯಾವ ಮಠದ ಸ್ವಾಮೀಜಿ ಅಂತೆ ಈ ಕೆಲಸ ಮಾಡಿರೋದು?
-ಯಾವುದೋ ಒಂದು ಮಠ ಬಿಡ್ಲಾ. ಆದ್ರೆ, ನನಗಂತೂ ಸ್ವಾಮೀಜಿಗಳ ಬಗ್ಗೆ ‘ತಿರುಗಾ ಮುರುಗಾ’ ಇದೇ ಸುದ್ದಿ ಕೇಳಿ ಸಾಕಾಗಿದೆ.
ಸೋಮು- ಅದೂ ನಿಜ. ಆದ್ರೂ ಈ ಸ್ವಾಮೀಜಿಗಳು ಅಂದುಕೊಂಡವರಿಗೆ ನಾನು ನನ್ನದು ಅನ್ನೋದೆಲ್ಲ ಇರಲ್ಲ ಅಂತಾರಲ್ಲ, ಮತ್ಯಾಕೆ ಹಿಂಗೆ ಮಾಡ್ತಾರೆ?
-ಖೇಮು-ಲೋ, ನಾನು ಅನ್ನೋದು ಅಷ್ಟು ಸುಲಭವಾಗಿ ಹೋಗಲ್ಲ ಕಣೋ, ಅಲ್ಲದೆ ಈ ಸ್ವಾ‘ಮಿ’ಗಳ ಹೆಸರ Iಉ ಇರುತ್ತೆ. ಮರಿಬೇಡ.
ಸೋಮು- ಆಸೆಗಳನ್ನ ನಿಯಂತ್ರಣ ಮಾಡಿಕೊಳ್ಳೋಕೆ ಆಗಲ್ಲ ಅನ್ನೋ ಇಂಥ ಸ್ವಾಮೀಜಿಗಳಿಗೆ ಬೇರೆಯರೇ ಉಪದೇಶ ಮಾಡೋ ಹಾಗಾಗಿದೆ ಅಲ್ವಾ ?
-ಖೇಮು- ಹೌದು ಕಣ್ಲಾ, ಸುಮ್ನೆ ಸಾಮಾನ್ಯ ಜನರ ಹಾಗೆ ಬದುಕಿ, ಕಾಯಕವೇ ಕೈಕೆಲಸ, ಸಾರಿ, ಕೈಲಾಸ ಅಂತ ಸುಮ್ನೆ ಇರಬೇಕು. ಈ ಆಶ್ರಮದಲ್ಲಿ ಶ್ರಮ ಹಾಕೋ ಕೆಲಸ ಯಾಕೆ ಮಾಡ್ಬೇಕು ಅಂತ.
ಸೋಮು- ದೇಹದ ಆಸೆ ಕಂಟ್ರೋಲ್ ಮಾಡ್ಕೊಳ್ಳೋಕಾಗ್ದೆ ಎಲ್ಲಾ ಕಡೆ ಈಗ ಟ್ರೋಲ್ ಆಗ್ತಾ ಇದ್ಧಾರಲ್ಲ, ನಂಗಂತೂ ನಂಬೋಕೇ ಆಗಲ್ಲ
-ಖೇಮು- ನಂಬೋದು ಕಷ್ಟನೇ. ಆದ್ರೆ, ಕಾವಿ ಹಾಕಿದ ಮಾತ್ರಕ್ಕೆ ದೇಹದಲ್ಲಿ ಕಾವಿರಲ್ಲ ಅಂತ ಹೆಂಗಪ್ಪಾ ಹೇಳೋಕಾಗುತ್ತೆ?
ನೆಟ್ ಪಿಕ್ಸ್
ಕ್ರಿಶ್ಚಿಯನ್ನರೇ ಹೆಚ್ಚಾಗಿರುವ ಊರೊಂದರಲ್ಲಿ ಖೇಮು ಚರ್ಚ್ ಒಂದರಲ್ಲಿ ಫಾದರ್ ಆಗಿದ್ದ. ಆ ಏರಿಯಾದ ಬಹುತೇಕ ಎಲ್ಲ ಜನರ ಪರಿಚಯ ಅವನಿಗಿತ್ತು. ಆದರೆ, ಕೆಲವೊಂದು ದಿನಗಳಿಂದ ಚರ್ಚಿನ ಮುಂದೆ ಇರುವ ‘ಕ್ರಾಸ್’ ರೋಡ್‌ನಲ್ಲಿ ಇಬ್ಬರು
ಭಿಕ್ಷುಕರು ಕೂರುತ್ತಾ ಇದ್ದಿದ್ದು ಖೇಮು ಗಮನಕ್ಕೆ ಬಂತು. ಆದರೆ ಅವರನ್ನು ಗಮನಿಸಿದರೂ ಗಮನಿಸದ ಹಾಗೆ ಹೋಗುತ್ತಿದ್ದ ಖೇಮು. ಆ ಇಬ್ಬರಲ್ಲೂ ಒಂದು ವಿಶೇಷ ಇತ್ತು. ಒಬ್ಬ ತನ್ನ ಕೊರಳಿಗೆ ಓಂ ಅನ್ನೋ ಪದಕ ಇರೋ ಸರವನ್ನು ನೇತು ಹಾಕಿಕೊಂಡು, ಹಿಂದೂ ದೇವರ ಫೋಟೋ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ. ಇನ್ನೊಬ್ಬ ಶಿಲುಬೆಯನ್ನು ಕೊರಳಿಗೆ
ಹಾಕಿಕೊಂಡು ಯೇಸು ಹೆಸರಲ್ಲಿ ಭಿಕ್ಷೆ ಬೇಡುತ್ತಿದ್ದ.
ಅದು ಕ್ರಿಶ್ಚಿಯನ್ನರು ಹೆಚ್ಚಿರುವ ಪ್ರದೇಶ ಆದ್ದರಿಂದ ಸಹಜವಾಗಿ ಎಲ್ಲರೂ ಶಿಲುಬೆ ಹಾಕಿಕೊಂಡವನಿಗೆ ಭಿಕ್ಷೆ ಹಾಕುತ್ತಿದ್ದರು.
ಅಲ್ಲದೆ ತಮ್ಮ ಧರ್ಮದ ಮೇಲಿನ ಪ್ರೀತಿ ತೋರಿಸಿಕೊಳ್ಳುವವರು ಹಿಂದೂ ಭಿಕ್ಷುಕನನ್ನು ನೋಡಿ ಬೇಕಂತಲೇ ಶಿಲುಬೆ ಹಾಕಿಕೊಂಡವನಿಗೆ ಹಣ ನೀಡುತ್ತಿದ್ದರು. ಇದನ್ನೆ ಗಮನಿಸಿದ ಖೇಮು ಒಂದು ದಿನ ಹಿಂದೂ ಭಿಕ್ಷುಕನ ಹತ್ತಿರ ಬಂದು, ಮಗೂ, ಇದು ಕ್ರಿಶ್ಚಿಯನ್ನರು ಹೆಚ್ಚಾಗಿರುವ ಊರು, ಇಲ್ಲಿ ನಿನಗೆ ಯಾರೂ ಹಣ ಕೊಡೋದಿಲ್ಲ. ಹಾಗೆ ನೋಡಿದರೆ ನಿನ್ನಿಂದ ನಿನ್ನ ಪಕ್ಕದಲ್ಲಿ ಶಿಲುಬೆ ಹಾಕಿಕೊಂಡವನಿಗೆ ಲಾಭ ಆಗ್ತಾ ಇದೆ. ಅವನ ಮೇಲೆ ಕರುಣೆ ಇಲ್ಲದಿದ್ದರೂ, ಅವನ ಪಕ್ಕದಲ್ಲಿ ನೀನು ಹಿಂದೂ ದೇವರ ಹೆಸರಲ್ಲಿ ಭಿಕ್ಷೆ ಬೇಡ್ತಾ ಇದ್ದೀಯ ಅನ್ನೋ ಕಾರಣಕ್ಕೆ ತಮ್ಮ ಧರ್ಮ ಪ್ರೇಮವನ್ನ ಸಾಬೀತು ಮಾಡೋಕೋಸ್ಕರ ಜನ ಅವನಿಗೆ ದುಡ್ಡು ಹಾಕ್ತಾ ಇದ್ಧಾರೆ. ನೀನು ಬೇರೆ ಎದ್ರೂ ಭಿಕ್ಷೆ ಬೇಡೋದು ಒಳ್ಳೇದು ಅನ್ನಿಸ್ತಿದೆ’ ಎಂದು ಹೇಳಿದ.
ಅದಕ್ಕೆ ‘ಸರಿ ಫಾದರ್’ ಅಂದ ಆ ಭಿಕ್ಷುಕ. ಖೇಮು ಆ ಕಡೆ ಹೋದ ಮೇಲೆ, ಈ ಭಿಕ್ಷುಕ ಪಕ್ಕಕ್ಕೆ ತಿರುಗಿ ‘ಜಿಗ್ನೇಶ್ ಭಾಯ್’
ಅಂದ. ಅದಕ್ಕೆ ಆ ಕಡೆ ಭಿಕ್ಷುಕ ಹೇಳು, ‘ಮನ್ ಸುಖ್ ಭಾಯ’ ಅಂದ. ಅದಕ್ಕೆ ಜಿಗ್ನೇಶ್ ನಗುತ್ತಾ ಹೇಳಿದ, ನೋಡಿದ್ಯಾ ಈ ಫಾದರ್, ನಮ್ಮಂಥ ಗುಜರಾತಿಗಳಿಗೇ ದುಡ್ಡು ಮಾಡೋದ್ ಹೇಗೆ ಅಂತ ಹೇಳಿ ಕೊಡ್ತಾ ಇದ್ಧಾನೆ’.
ಲೈನ್ ಮ್ಯಾನ್
ಕುರುಡನೊಬ್ಬ ಮೇಲೆ ಯಾರಾದ್ರೂ ಕೇಸು ಹಾಕಿದ್ರೆ, ವಿಚಾರಣೆ ಎಲ್ಲಿ ನಡೆಯುತ್ತೆ?
-‘ಐ’ ಕೋರ್ಟ್ ನಲ್ಲಿ
ತಂಡದ ಕ್ಯಾಪ್ಟನ್ ‘ಬುದ್ಧಿವಂತ’ ಆಗಿದ್ರೆ ಅವನನ್ನ ಏನಂತಾರೆ?
-‘ವೈಸ್’ ಕ್ಯಾಪ್ಟನ್
‘ತುಪ್ಪ’ ತಿಂದು ಕೊಬ್ಬು ಜಾಸ್ತಿ ಆದವರು ಏನ್ ಮಾಡ್ತಾರೆ?
-‘ಘೀ’ಳಿಡುತ್ತಾರೆ
ಸಂಜಯ್ ದತ್‌ಗೆ ಸೂಟ್ ಆಗೋ ಬೆ ರೋಲ್ ಯಾವುದು?
-ಪೆರೋಲ್
ಬಿಬಿಎಂಪಿ ಎಲೆಕ್ಷನ್‌ಗೆ ನಿಲ್ಲುವ ಘಟಾನುಘಟಿಗಳ ಹೆಂಡತಿಯರನ್ನು ಏನೆನ್ನಬಹುದು?
-ಬೀಬಿ ಎಂಪಿ
ಹೆಂಡತಿ ಬದಲು ಮಗಳು ನಿಂತರೆ
-‘ಬೇಬಿ’ ಎಂಪಿ
ಹನಿ ಟ್ರ್ಯಾಪ್ ಗೆ ಬಲಿ ಆದವರ ಮಾತು
-ಹನಿ ಹನಿ ‘ಕೂಡಿದ್ರೆ’ ‘ಹಳ್ಳ’
ಗಂಡು ಚಿರತೆ ಸೆರೆಗೆ ಹೆಣ್ಣು ಚಿರತೆಯ ಮೂತ್ರ ಸಿಂಪಡಿಸುವ ತಂತ್ರ
-ನಿಜವಾದ ಹನಿ ಟ್ರ್ಯಾಪ್ ಅಂದ್ರೆ ಇದೇ. ಮೂತ್ರದ ಹನಿ ಸಿಂಪಡಿಸಿದ್ಧಾರೆ.
ಕೈನ ಎಲ್ಲಾ ಬೆರಳಲ್ಲೂ ಉಂಗುರ ಹಾಕಿಕೊಂಡಿರುವವನು
-ಉಂಗ್ರ ನರಸಿಂಹ
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಕೊಟ್ಟ ಉತ್ತರದ ಪ್ರೇರಣೆ
ಅಪ್ಪ – ಯಾಕೋ, ೩ ಸಬ್ಜೆಕ್ಟ್ ನಲ್ಲಿ ಫೇಲ್ ಆಗಿದ್ದೀಯಾ?
ಮಗ – ನೀನ್ ಯಾವನಯ್ಯ ಕೇಳೋಕೆ.
ಅಪ್ಪ – ಅಯ್ಯೋ ಬಡ್ಡಿ ಮಗ್ನೇ, ೨೪ ಗಂಟೆ ಸೋಶಿಯಲ್ ಮೀಡಿಯಾದಲ್ ಇರ್ಬೇಡ ಅಂತ ಇದ್ಕೆ ಬಡ್ಕೊಂಡಿದ್ದು, ಈಗ ಫೇಲ್ ಆಗಿದ್ದಲ್ದೆ ಧೀಮಾಕ್ ಬೇರೆ, ಲೇ, ಇವಳೇ ಮುದ್ದೆ ಕೋಲು ಎಲ್ಲಿಟ್ಟಿದ್ದೀಯೇ…