ಕದನ ಕುತೂಹಲ
ರಮಾನಂದ ಶರ್ಮಾ
ಚುನಾವಣಾ ರಾಜಕೀಯವೇ ಹಾಗೆ. ಯಾವುದೋ ಅಡೆತಡೆಯಿಂದ ರಸ್ತೆ ಸುಗಮವಾಯಿತು ಎಂದುಕೊಳ್ಳುವಷ್ಟರಲ್ಲಿ, ಇನ್ನೊಂದು ಬೆಳವಣಿಗೆ ಅದನ್ನು ಹತ್ತಿಕ್ಕುತ್ತದೆ. ತನ್ಮೂಲಕ ರಾಜಕೀಯ ಪಕ್ಷಗಳನ್ನು ಕೊನೆಯ ಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಒಬ್ಬರು ಜಾರಿ, ಈ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರುತ್ತಿದ್ದಂತೆ, ಆ ಪಕ್ಷದಿಂದ ಒಂದಿಬ್ಬರು ಕಳಚಿಕೊಳ್ಳುತ್ತಾರೆ…
ರಾಜಕೀಯವೆಂಬುದು ಒಂದು ವಿಚಿತ್ರ ಕ್ಷೇತ್ರ; ಮುಂಬೈನ ದಲಾಲ್ ಸ್ಟ್ರೀಟ್ ನಂತೆ ಇಲ್ಲಿ ಯಾವುದನ್ನೂ ದೃಢವಾಗಿ ಹೇಳಲಾಗದು. ದಲಾಲ್ ಸ್ಟ್ರೀಟ್ ನಲ್ಲಿ ಕಾಣಬರುವ ಸೆನ್ಸೆಕ್ಸ್‌ನ ಏರಿಳಿತದಂತೆ ರಾಜಕೀಯ ಪಕ್ಷಗಳ ದೆಸೆಯು ಕೂಡ ಏರಿಳಿಯುತ್ತಿರುತ್ತದೆ. ಸಾಲದೆಂಬಂತೆ, ಊಸರವಳ್ಳಿಯಂತೆ ತನ್ನ ಬಣ್ಣವನ್ನೂ ಬದಲಿಸುತ್ತಿರುತ್ತದೆ. ನಿನ್ನೆ ನವೋತ್ಸಾಹದಲ್ಲಿದ್ದರೆ ಇಂದು ಗರಬಡಿದಂತೆ ಕಾಣುತ್ತದೆ. ಅನಿಶ್ಚಿತತೆಯ ತೂಗುಗತ್ತಿ ತಲೆಮೇಲೆ ಸದಾ ತೂಗಾಡುತ್ತಿರುತ್ತದೆ.
ಆಶಯಗಳು ಕೂಡ ಹಾವು-ಏಣಿ ಆಟದಲ್ಲಿರುವಂತೆ ದಿಢೀರನೆ ಮೇಲೇರಿ ಹಾಗೆಯೇ ಸರಕ್ಕನೆ ಕೆಳಗಿಳಿಯುತ್ತವೆ. ಇದು ರಾಜ್ಯ ರಾಜಕಾರಣದ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳ ಪಡಿಪಾಟಲು. ೨೦೨೩ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್‌ನ ಭರವಸೆ ಮುಗಿಲು ಮುಟ್ಟಿತ್ತು, ಲೋಕಸಭಾ ಚುನಾವಣೆಯಲ್ಲೂ ‘ಗ್ಯಾರಂಟಿ’ಯಾಗಿ ಅದು ಮರುಕಳಿಸುತ್ತದೆ ಎಂಬ ಮಹದಾಸೆಯಲ್ಲಿತ್ತು. ವಿಧಾನಸಭಾ ಚುನಾವಣೆ ನಂತರದ ಕೆಲ ತಿಂಗಳಲ್ಲಿ ನಡೆದ ಒಂದಷ್ಟು ಸಮೀಕ್ಷಾ ವರದಿಗಳು ಇದೇ ಧಾಟಿಯಲ್ಲಿದ್ದವು. ಆದರೆ ಇತ್ತೀಚಿನ ಕೆಲ ಸಮೀಕ್ಷೆಗಳು ಕಾಂಗ್ರೆಸ್ ಪಾಲಿಗೆ ಅಪಸ್ವರ ನುಡಿಯಲಾರಂಭಿಸಿವೆ.
ಅಂದರೆ, ೭-೮ ತಿಂಗಳ ಹಿಂದೆ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೨೦ರ ಆಸುಪಾಸಿನಲ್ಲಿ ಸೀಟುಗಳನ್ನು ಅಂದಾಜಿಸಿದ್ದ ಸಮೀಕ್ಷೆಗಳು ಇತ್ತೀಚೆಗೆ ೪-೫ ಸೀಟುಗಳನ್ನು ಕಾಣಿಸಲಾರಂಭಿಸಿವೆ. ಹೊರಗೆ ತೋರಿಸಿಕೊಳ್ಳದಿದ್ದರೂ, ಇಂಥ ಸಮೀಕ್ಷೆಗಳಿಂದ ಆ ಪಕ್ಷದ ಧೃತಿಗೆಡುವುದು ಸತ್ಯ.
ಸಮೀಕ್ಷೆಗಳು ಸಂಪೂರ್ಣ ಸತ್ಯವಾಗುತ್ತವೆ ಎನ್ನಲಾಗದು; ಆದರೆ ಅವು ದಿಕ್ಸೂಚಿಯಾಗಿರುತ್ತವೆ ಎಂಬುದನ್ನು ತಳ್ಳಿಹಾಕಲಾಗದು. ಹಾಗೆಯೇ, ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆಶಾದಾಯಕ ಫಲಿತಾಂಶ ದಕ್ಕಲಿಲ್ಲ.
ಪಕ್ಷದ ರಾಜ್ಯ ಘಟಕದ ಸ್ಥಿತಿಗತಿಯನ್ನೇ ಅವಲೋಕಿಸುವುದಾದರೆ, ಇಲ್ಲಿ ಒಂದಷ್ಟು ಗೊಂದಲಗಳು ಮನೆಮಾಡಿವೆ. ಪಕ್ಷದ ಒಳಾವರಣದಲ್ಲಿರುವ ತುಮುಲ ಹೊರಗೆ ಕಾಣತ್ತಿಲ್ಲ; ಆದರೆ, ಮುಖ್ಯಮಂತ್ರಿಗಳ ಕಾಲಾವಽ ಬಗೆಗಿನ ಚರ್ಚೆ, ಬದಲಾವಣೆಯ ಬಗೆಗಿನ ಗುಸುಗುಸು, ಉಪಮುಖ್ಯಮಂತ್ರಿಗಳ ನೇಮಕಕ್ಕೆ ಒತ್ತಡ, ನಿಗಮ-ಮಂಡಳಿಗಳಿಗೆ ನೇಮಕಾತಿಯಲ್ಲಿ ವಿಳಂಬ, ಕೆಲವರ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಘಾಸಿ ಮಾಡಿರುವುದು ಸತ್ಯ. ವಸತಿ
ಶಾಲೆಗಳಲ್ಲಿದ್ದ ಘೋಷವಾಕ್ಯವನ್ನು ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸಲು ಯತ್ನಿಸಿ ಮುಜುಗರಕ್ಕೊಳಗಾಗಿದ್ದು ಇದಕ್ಕೆ ಮತ್ತೊಂದು ಸೇರ್ಪಡೆ. ಜನಸಾಮಾನ್ಯರು ಇದು ಸರಕಾರದ ಧೋರಣೆಯೋ ಅಥವಾ ಅಽಕಾರಿಗಳು ಮಾಡಿದ ತಪ್ಪೋ ಎಂದು ವಿಶ್ಲೇಷಿಸದೆ ಸರಕಾರದ ಮೇಲೆಯೇ ಗೂಬೆ ಕೂರಿಸುತ್ತಾರೆ. ಜತೆಗೆ, ಅಽಕಾರಿಶಾಹಿಯ ಮೇಲೆ ಸರಕಾರಕ್ಕೆ ಹಿಡಿತವಿಲ್ಲದಿರುವುದರ ಉದಾಹರಣೆಯಿದು ಎಂದು ಕೆಲವರು ಬೊಬ್ಬೆ ಹೊಡೆಯುತ್ತಾರೆ.
ಕಾಂಗ್ರೆಸ್‌ನ ನಿಲುವು ಏನೇ ಇರಲಿ, ಸರಕಾರವು ಹೇಗೇ ಸಮರ್ಥಿಸಿಕೊಳ್ಳಲಿ, ಧಾರ್ಮಿಕ ದತ್ತಿ ನಿಧಿ ವಿಧೇಯಕವು ‘ಹಿಂದೂ ವಿರೋಽ’ ಎಂಬ ಬಣ್ಣವನ್ನು
ಪಡೆದುಕೊಂಡಿದ್ದು, ಇದನ್ನು ಬಿಜೆಪಿಯು ಚುನಾವಣೆ ಯಲ್ಲಿ ಮತಬ್ಯಾಂಕ್‌ನ ಬಲವರ್ಧನೆಯ ನಿಟ್ಟಿನಲ್ಲಿ ಬಳಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಯನ್ನು ಇಡೀ ದೇಶವೇ ಸಂಭ್ರಮಿಸುವಾಗ ಕಾಂಗ್ರೆಸ್ ಅಪಸ್ವರವೆತ್ತಿ ಗೊಂದಲ ಮೂಡಿಸಿದ್ದು ಜನರಿಗೆ ಇಷ್ಟವಾಗಲಿಲ್ಲ.
‘ಗ್ಯಾರಂಟಿ’ಗಳ ವಿಷಯದಲ್ಲಿ ಮೊದಲಿದ್ದ ಉತ್ಸಾಹ ಕಾಣುತ್ತಿಲ್ಲ; ಲೋಕಸಭಾ ಚುನಾವಣೆವರೆಗೆ ಅವು ಅಂತೂ ಇಂತೂ ನಡೆಯಬಹುದು ಎಂಬ ಊಹಾಪೋಹ ಕೇಳಿಬರುತ್ತಿದೆ. ಇದನ್ನು ವಿಪಕ್ಷಗಳು ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಅಭಿವೃದ್ಧಿಗೆ ಅನು ದಾನದ ಕೊರತೆಯಿರುವುದನ್ನು ವಿರೋಧಿಗಳು ಎತ್ತಿ ತೋರಿಸುತ್ತಿದ್ದಾರೆ. ‘ಬರಗಾಲ ದಲ್ಲಿ ಅಧಿಕಮಾಸ’ ಎನ್ನುವಂತೆ ಹಿಂಗಾರು- ಮುಂಗಾರುಗಳೆರಡೂ ಕೈಕೊಟ್ಟಿದ್ದು, ಪರಿಹಾರವನ್ನು ಕಟ್ಟಿಕೊಡುವುದು ಸವಾಲಾಗಿ ಪರಿಣಮಿಸಿದೆ. ಕೇಂದ್ರ ಸರಕಾರದಿಂದ ನಿರೀಕ್ಷಿತ ಸಹಾಯ ಬಂದಿಲ್ಲ, ಈ ನಿಟ್ಟಿನಲ್ಲಿ ವಿಪಕ್ಷಗಳೂ ನೆರವಾಗಿಲ್ಲ; ಅಂತಿಮವಾಗಿ ಇದು ಕಾಂಗ್ರೆಸ್‌ನ ಚುನಾವಣಾ ಭವಿಷ್ಯದ ಮೇಲೆ ಕರಿಛಾಯೆ ಬೀರುವ ಸಾಧ್ಯತೆಯಿದೆ.
ಇಷ್ಟು ಸಾಲದೆಂಬಂತೆ, ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ನಾಸಿರ್ ಹುಸೇನ್ ಆಯ್ಕೆಯಾದಾಗ ಮೊಳಗಿದೆ ಎನ್ನಲಾದ ‘ಪಾಕಿಸ್ತಾನ್
ಜಿಂದಾಬಾದ್’ ಘೋಷಣೆಯು ಮುಂದಿನ ಚುನಾವಣೆ ಯಲ್ಲಿ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ನಂತರ ಬಿಜೆಪಿಯಲ್ಲಿ ಮುಗಿಲುಮುಟ್ಟಿದ ಸಂಭ್ರಮವು, ೨೦೧೪ ಮತ್ತು ೨೦೧೯ರಲ್ಲಿ ಕಂಡುಬಂದಿದ್ದ ಮೋದಿ ಅಲೆಗಿಂತ ತೀವ್ರವಾಗಿತ್ತು. ‘ಮೋದಿಗೆ ೪೦೦ಕ್ಕಿಂತ ಹೆಚ್ಚು ಸೀಟು ಖಾತ್ರಿ, ಮೋದಿಯೇ ೩ನೇ ಬಾರಿಯೂ ಪ್ರಧಾನಿ’ ಎಂದೆಲ್ಲ ಅಭಿಮಾನಿಗಳು ಘೋಷಿಸ ತೊಡಗಿದ್ದರು. ಆ ಘಟ್ಟದಲ್ಲಿ ದೇಶದಲ್ಲಿದ್ದ ಮೂಡ್ ನೋಡಿದಾಗ ಇದರಲ್ಲಿ ಉತ್ಪ್ರೇಕ್ಷೆಯಿರಲಿಲ್ಲ.
ಕಾರಣ, ಅಸಾಧ್ಯವೆಂದುಕೊಂಡಿದ್ದು ಸಾಧ್ಯವಾಗಿತ್ತು, ಕೋಟ್ಯಂತರ ಭಾರತೀಯರ ಕನಸು ನನಸಾಗಿತ್ತು. ‘ಇದು ಮೋದಿಯವರಿಂದಲೇ ಸಾಧ್ಯವಾಯಿತು’
ಎಂಬುದು ಬಹುತೇಕರ ಅಭಿಪ್ರಾಯವೂ ಆಗಿತ್ತು. ಆದರೆ, ಶಿಕ್ಷಕ ಮತದಾರರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿನ ಸೋಲು ಮತ್ತು ರಾಜ್ಯಸಭಾ ಚುನಾವಣೆಯಲ್ಲಿನ ಮೈತ್ರಿ ಅಭ್ಯರ್ಥಿಯ ಹಿನ್ನಡೆ ಬಿಜೆಪಿಯನ್ನು ಸ್ವಲ್ಪ ಧೃತಿಗೆಡಿಸಿದೆ. ಜತೆಗೆ, ತೆರಿಗೆ ಹಂಚಿಕೆ ವಿಷಯದಲ್ಲಿ ಕೇಂದ್ರ ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ದಕ್ಷಿಣ ರಾಜ್ಯಗಳು ಆರೋಪಿಸಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ತೆರಳಿ ಅಂಕಿ-ಅಂಶಗಳೊಂದಿಗೆ ಪ್ರತಿಭಟಿಸಿದ್ದು, ನಂತರ ಕೇರಳ ಮತ್ತು ತಮಿಳುನಾಡು ಅವರಿಗೆ ಕೈಜೋಡಿಸಿದ್ದು, ಕ್ರಮೇಣ ಡಬಲ್ ಎಂಜಿನ್ ಇಲ್ಲದ ಸರಕಾರಗಳೂ ಈ ಪ್ರತಿಭಟನೆಗೆ ಒತ್ತಾಸೆಯಾಗಿ ನಿಂತಿದ್ದು ಬಿಜೆಪಿಯು ತನ್ನ ಹೊಳಪನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುವಂತೆ ಮಾಡಿವೆ.
ಮುಂಬರುವ ಚುನಾವಣೆಯಲ್ಲಿ ವಿಪಕ್ಷಗಳು, ಮುಖ್ಯವಾಗಿ ಬಿಜೆಪಿಯೇತರ ರಾಜ್ಯಗಳು ಇದನ್ನು ಬ್ರಹ್ಮಾಸ್ತ್ರವಾಗಿ ಪ್ರಯೋಗಿಸುವ ಸಾಧ್ಯತೆಯಿದೆ. ಗ್ಯಾರಂಟಿಗಳು ತಮ್ಮ ಹಿಂದಿನ ಆಕರ್ಷಣೆಯನ್ನು ಕಳೆದುಕೊಂಡಿದ್ದು, ಕರ್ನಾಟಕದಲ್ಲಿ ಬೇರೆ ಅಸವನ್ನು ಹುಡುಕುವ ಅನಿವಾರ್ಯತೆಯಲ್ಲಿ ಸಿಲುಕಿದೆ ಕಾಂಗ್ರೆಸ್. ಬಹುಶಃ ಒಕ್ಕೂಟ ವ್ಯವಸ್ಥೆಯಲ್ಲಿ ಬಿಗಡಾಯಿಸುತ್ತಿರುವ ಕೇಂದ್ರ-ರಾಜ್ಯಗಳ ಸಂಬಂಧವನ್ನು ಮತ್ತು ತೆರಿಗೆ ಹಂಚಿಕೆಯಲ್ಲಿನ ತಾರತಮ್ಯವನ್ನು ಸಿದ್ದರಾಮಯ್ಯ ನವರು ಕೇಂದ್ರ ಹಾಗೂ ಬಿಜೆಪಿಯ ವಿರುದ್ಧದ ಚುನಾವಣಾ ಅಸವಾಗಿ ಬಳಸುವ ಸಾಧ್ಯತೆಯಿದೆ. ಈ ಅಸ್ತ್ರವು ಬಿಜೆಪಿಯ ನಾಗಾಲೋಟಕ್ಕೆ ಸ್ವಲ್ಪಮಟ್ಟಿಗೆ ತಡೆಯೊಡ್ಡಬಹುದು, ತೆರಿಗೆ ತಾರತಮ್ಯ ವಿಷಯವು ಸುಶಿಕ್ಷಿತ ಮತದಾರರನ್ನು ಸೆಳೆಯಬಹುದು ಎಂಬ ಮಾತು ಕೇಳಿಬರುತ್ತಿದೆ.
ಕೇಂದ್ರದ ಬಿಜೆಪಿ ಸರಕಾರ ಕರ್ನಾಟಕದತ್ತ ಮಲತಾಯಿ ಧೋರಣೆ ತೋರುತ್ತಿದೆ ಎನ್ನುವ ಭಾವನೆ ಬೆಳೆಯುತ್ತಿದೆ; ರಾಜಕೀಯದ ಅಂಕಲಿಪಿ ತಿಳಿಯ ದವರೂ ಈ ತಾರತಮ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ೧೦ ಕೆ.ಜಿ. ಅಕ್ಕಿ ಕೊಡುವ ಭರವಸೆ ನೀಡಿದ ನಂತರ, ಕೇಂದ್ರದ ಬಿಜೆಪಿ ಸರಕಾರ ರಾಜ್ಯಕ್ಕೆ ಅಕ್ಕಿ ಪೂರೈಕೆಯನ್ನು ನಿಲ್ಲಿಸಿತು; ಕೆ.ಜಿ.ಗೆ ೩೪ ರು. ಕೊಡುತ್ತೇನೆಂದರೂ ‘ಅಕ್ಕಿ ಇಲ್ಲ’ ಎಂದ ಕೇಂದ್ರ ಸರಕಾರ, ಈಗ ೨೯ ರು.ಗೆ ಕೆ.ಜಿ. ಅಕ್ಕಿಯನ್ನು ‘ಭಾರತ್ ಅಕ್ಕಿ’ ಹೆಸರಲ್ಲಿ ಕೊಡಲು ಸಾಧ್ಯವಾಗಿದ್ದು ಹೇಗೆ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಬಿಜೆಪಿಯನ್ನು ಎದುರಿಸಲು ಈ ಅಂಶವು ಸಿದ್ದರಾಮಯ್ಯರಿಗೆ ಒಂದು ಅಸ್ತ್ರದಂತೆ ಒದಗಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು. ಬಿಜೆಪಿ ಎಷ್ಟೇ ನಿಗಾ ವಹಿಸಿ ದರೂ, ಆಡಳಿತದಲ್ಲಿ ದಕ್ಷತೆ ತೋರಿದರೂ, ಎದ್ದು ಕಾಣುವ ಭ್ರಷ್ಟಾಚಾರ ಮತ್ತು ನ್ಯೂನತೆಗಳಿಂದ ದೂರವಿದ್ದರೂ, ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಎರಡು ತೀರ್ಪುಗಳು ಪಕ್ಷಕ್ಕೆ ಮರ್ಮಾಘಾತ ಉಂಟುಮಾಡಿವೆ. ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ನಡೆದುಕೊಂಡ ರೀತಿ ಹಾಗೂ ಬಿಜೆಪಿಗೆ ನೆರವಾದ ವೈಖರಿ ಪಕ್ಷಕ್ಕೆ ಭಾರಿ ಮುಜುಗರ ಉಂಟುಮಾಡಿದೆ.
ದೇಶಾದ್ಯಂತ ವಿಪಕ್ಷಗಳು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುವುದು ನಿಶ್ಚಿತ. ಜತೆಗೆ, ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಬಳಸಲಾಗಿದ್ದ ಭಾಷೆ ಬಿಜೆಪಿಯ ಜಂಘಾಬಲವನ್ನೇ ಉಡುಗಿಸಿದ್ದು, ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್‌ಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಈ ತೀರ್ಪು ಸುಶಿಕ್ಷಿತರನ್ನು ದೊಡ್ಡ ಮಟ್ಟದಲ್ಲಿ ಎಚ್ಚರಿಸಿದ್ದು, ಮತದಾನದ ದಿನದಂದು ಸ್ವಲ್ಪ ಮಟ್ಟಿಗೆ ಸಮೀಕರಣವನ್ನು ಬದಲಿಸುವ ಸಾಧ್ಯತೆ ಕಾಣುತ್ತದೆ. ‘ಬಹುಮತವಿದೆಯೆಂದು ಬೇಕಾಬಿಟ್ಟಿ ಕಾನೂನು ರಚಿಸಿದರೆ ಕೊನೆಗೆ ಇದೇ ಗತಿ’ ಎಂಬುದಾಗಿ ಬಿಜೆಪಿಯನ್ನು ಕಾಂಗ್ರೆಸ್ ಮನಸ್ವೀ
ಟೀಕಿಸಬಹುದು.
ಚುನಾವಣಾ ರಾಜಕೀಯವೇ ಹಾಗೆ. ಯಾವುದೋ ಅಡೆತಡೆಯಿಂದ ರಸ್ತೆ ಸುಗಮವಾಯಿತು ಎಂದುಕೊಳ್ಳುವಷ್ಟರಲ್ಲಿ, ಇನ್ನೊಂದು ಬೆಳವಣಿಗೆ ಅದನ್ನು ಹತ್ತಿಕ್ಕುತ್ತದೆ. ತನ್ಮೂಲಕ ರಾಜಕೀಯ ಪಕ್ಷಗಳನ್ನು ಕೊನೆಯ ಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಒಬ್ಬರು ಜಾರಿ, ಈ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರುತ್ತಿದ್ದಂತೆ, ಆ ಪಕ್ಷದಿಂದ ಒಂದಿಬ್ಬರು ಕಳಚಿಕೊಳ್ಳುತ್ತಾರೆ. ನಮ್ಮ ರಾಜಕೀಯ ಇತಿಹಾಸದ ಪುಟಗಳನ್ನೊಮ್ಮೆ ತಿರುವಿಹಾಕಿದರೆ ಇಂಥ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಯಾರೇನೇ ಹೇಳಿದರೂ, ಎರಡೂ ಪಕ್ಷಗಳ ಹಾದಿಯಲ್ಲಿ ಕಲ್ಲು-ಮುಳ್ಳುಗಳು ಗೋಚರಿಸುತ್ತಿದ್ದು, ಯಾರ ಹಾದಿ ಯಲ್ಲಿ ಹೆಚ್ಚು, ಯಾರದ್ದರಲ್ಲಿ ಕಮ್ಮಿ ಎಂಬುದು ಟಿಕೆಟ್ ಹಂಚಿಕೆಯ ನಂತರ ದೃಢವಾಗಿ ತಿಳಿಯುತ್ತದೆ.
ಅಂತಿಮವಾಗಿ, ಚುನಾವಣಾ ಫಲಿತಾಂಶವು ಇವುಗಳ ಸ್ವರೂಪವನ್ನು ಜಗತ್ತಿಗೆ ತೋರಿಸುತ್ತದೆ. ಹಾಗೆಯೇ, ಮೂರನೆಯ ಬಾರಿಗೆ ಗದ್ದುಗೆ ಏರುವ ಧಾವಂತದಲ್ಲಿರುವ ಬಿಜೆಪಿ ಯು, ಭಾರಿ ಪ್ರಮಾಣದಲ್ಲಿ ಅನ್ಯಪಕ್ಷಗಳ ಪುಢಾರಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದು, ಇದು ಕೊನೆಗೊಮ್ಮೆ ಪಕ್ಷದ ಬುಡಕ್ಕೆ ಕೊಡಲಿಯೇಟು ಕೊಡುವುದನ್ನು ತಳ್ಳಿಹಾಕಲಾಗದು.
(ಲೇಖಕರು ರಾಜಕೀಯ ಮತ್ತು ಆರ್ಥಿಕ
ವಿಶ್ಲೇಷಕರು)