ಶಶಾಂಕಣ
shashikara.halady@gmail.com
ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನವರು ಸ್ವಂತ ಊರುಗಳಿಗೆ ಹೋಗಿ, ನಾಲ್ಕಾರು ದಿನ ಅಲ್ಲಿನ ಸೆಕೆ ತಾಳಲಾರದೇ, ಬೇಗನೇ ಓಡಿಬರುತ್ತಿದ್ದುದು ಸಾಮಾನ್ಯ ಎನಿಸಿತ್ತು. ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲೇ ಇದ್ದವರು, ಕರ್ನಾಟಕದ ಹೆಚ್ಚಿನ ಪಟ್ಟಣಗಳ ಸೆಕೆಯನ್ನು ತಡೆದುಕೊಳ್ಳಲಾರರಾಗಿದ್ದರು.
ಈ ವರ್ಷ, ಬೇಸಗೆಯ ದಿನಗಳು ತಂದಿರುವ ಬೇಗೆಗೆ ಕೊನೆಯೇ ಇಲ್ಲವೇನೋ ಎಂಬ ಭಾವವು ಬೆಂಗಳೂ ರಿನ ನಿವಾಸಿಗಳಲ್ಲಿ ಮೂಡಿದರೆ ಅಚ್ಚರಿಯಿಲ್ಲ! ಕಳೆದ ಸುಮಾರು ೧೪೦ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬಂದಿಲ್ಲವಂತೆ ಮತ್ತು ಇಷ್ಟೊಂದು ದೀರ್ಘಕಾಲ ಈ ತಂಪು ಪ್ರದೇಶದಲ್ಲಿ ಮಳೆ ಬಾರದೇ ಇರುವುದು ಸಹ ಒಂದು ದಾಖಲೆ ಎಂದಿದ್ದಾರೆ. ಸಮುದ್ರ ಮಟ್ಟದಿಂದ
೩೦೦೦ ಅಡಿಗಿಂತಲೂ ಎತ್ತರವಿರುವ ಬೆಂಗಳೂರು ಮೊದಲಿನಿಂದಲೂ ತಂಪು ಪ್ರದೇಶವೆಂದೇ ಪ್ರಸಿದ್ಧ; ಈ ವರ್ಷ ಮಾತ್ರ, ಬೆಂಗಳೂರಿನ ನಿವಾಸಿಗಳು ಹಲವು ವಾರಗಳ ಕಾಲ ಬಿಸಿಲ ಬೇಗೆಗೆ ಪರಿತಪಿಸುವಂತಾಗಿದೆ.
ಅತ್ತ ಕುಡಿಯುವ ನೀರಿನ ಅಭಾವವೂ ಎದುರಾಗಿದ್ದು, ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನೀರಿನ ಅಭಾವವನ್ನು ನೆನಪಿಸುತ್ತಿದೆ. ‘ಕಾವೇರಿ ನೀರನ್ನು ಕುಡಿಯುತ್ತಿದ್ದೇವೆ’ ಎಂದು ಅರೆಹಮ್ಮು ಮತ್ತು ಅರೆಗರ್ವದಿಂದ ಹೇಳುತ್ತಿದ್ದ ಬೆಂಗಳೂರಿನ ನಿವಾಸಿಯು ಇಂದು ಪೆಚ್ಚುಮೋರೆ ಹಾಕಿಕೊಂಡು, ಸೆಕೆಯಲ್ಲಿ ಬಳಲುವಂತಾಗಿದ್ದು ಮಾತ್ರ ವಿಪರ್ಯಾಸ. ಎ.ಸಿ. ಅಗತ್ಯವಿಲ್ಲದ ಊರು ಎಂದು
ಮೊನ್ನೆ ಮೊನ್ನೆಯ ತನಕ ಹೆಸರು ಪಡೆದಿದ್ದ ಬೆಂಗಳೂರಿನಲ್ಲಿ, ಈ ವರ್ಷವಂತೂ ಹಲವು ನಿವಾಸಿಗಳು ಎ.ಸಿ.ಯತ್ತ ಮುಖ ಮಾಡಿದರು; ಈ ವಿದ್ಯಮಾನವು ಕಳೆದ ಕೇವಲ ನಾಲ್ಕಾರು ವರ್ಷಗಳಿಂದ ಆರಂಭವಾಗಿದ್ದಂತೂ ಸತ್ಯಸ್ಯ ಸತ್ಯ.
ಮೆಟ್ರೊ ಮತ್ತು ರಸ್ತೆ ವಿಸ್ತರಣೆಗಾಗಿ ಹಿಂದೆ ಮುಂದೆ ನೋಡದೇ ಮರಗಳನ್ನು ಕಡಿದಿದ್ದು, ಹೊಸ ಹೊಸ ಸಿಮೆಂಟ್ ರಸ್ತೆಗಳು
(ವೈಟ್ ಟಾಪಿಂಗ್ ಎಂಬ ವಿಚಿತ್ರ ಹೆಸರು!), ಕೆರೆಗಳನ್ನು ಮತ್ತು ರಾಜಕಾಲುವೆಗಳನ್ನು ಮುಚ್ಚಿಸಿದ್ದು, ಸಿಮೆಂಟ್ ಕಟ್ಟಡಗಳ ಮೆರವಣಿಗೆ, ಮಳೆ ನೀರಿನ ಕೊಯ್ಲನ್ನು ನಿರ್ಲಕ್ಷಿಸಿದ್ದು- ಇಂಥ ಹಲವು ಕಾರಣಗಳಿಂದಾಗಿ, ಬೆಂಗಳೂರಿನ ತಾಪಮಾನವು ಇಂದು
೩೭ ಡಿಗ್ರಿ ಸೆಲ್ಷಿಯಸ್ ತಲುಪಿದೆ ಮತ್ತು ಇದೇ ರೀತಿ ಹಲವು ವಾರಗಳ ಕಾಲ ಮುಂದುವರಿದಿದೆ.
ಬೆಂಗಳೂರಿನ ತಾಪಮಾನವು ಈ ರೀತಿ ಅಸಹನೀಯವಾಗಲು, ಬಹುಪಾಲು ಕೊಡುಗೆ ಮನುಷ್ಯನದ್ದು ಮತ್ತು ಮನುಷ್ಯ ಕೈಗೊಂಡ ಮತಿಹೀನ ಕಾಮಗಾರಿಗಳದ್ದು ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ತಂಪು ನಗರವೆಂದೇ ಹೆಸರಾಗಿದ್ದ ಬೆಂಗಳೂರನ್ನು ಅದೇ ರೀತಿ ಇಟ್ಟುಕೊಳ್ಳಲು ಯಾವುದೇ ಕ್ರಮ ಕೈಗೊಳ್ಳದೇ, ನಿರಂತರವಾಗಿ ಇಲ್ಲಿನ ಪರಿಸರವನ್ನು, ಜಲಮೂಲ ಗಳನ್ನು ಹಾಳುಗೆಡಹಿದ್ದು, ಸಿಮೆಂಟ್ ಬಳಕೆಯ ಮೇಲೆ ನಿಯಂತ್ರಣ ಹೇರದೇ ಇದ್ದುದು ಎಲ್ಲವೂ ಈಗಿನ ಸ್ಥಿತಿಗೆ ಕಾರಣವಾಗಿ ರುವುದು ಸ್ಪಷ್ಟ.
ಹಾಗೆ ನೋಡಿದರೆ, ಕಳೆದ ದಶಕದ ತನಕ ಬೆಂಗಳೂರಿನ ನಿವಾಸಿಗಳಿಗೆ ‘ನಿಜವಾದ ಬೇಸಗೆಯ ಬೇಗೆ’ ಎಂಬುದರ ಅರಿವೇ ಇರಲಿಲ್ಲ ಎನ್ನಬಹುದು. ಪ್ರವಾಸಕ್ಕೋ, ಇತರ ಉದ್ದೇಶಕ್ಕೋ ಉಡುಪಿ, ಬಿಜಾಪುರ, ಬಳ್ಳಾರಿಗೆ ಹೋಗಿ ಬಂದ ಬೆಂಗಳೂರಿಗರು, ಅಲ್ಲಿನ ಬಿಸಿಲನ್ನು, ತಾಪವನ್ನು ಹೇಳಿಕೊಳ್ಳುತ್ತಾ, ಅಲ್ಲಿನ ಜನರ ಸ್ಥಿತಿಯನ್ನು ಕಂಡು ಸಣ್ಣಗೆ ಪರಿತಪಿಸುತ್ತಿದ್ದರು; ಶಿವಾಯ್, ಬೆಂಗಳೂರಿನಲ್ಲೂ ೩೭ ಡಿಗ್ರಿ ಸೆಲ್ಷಿಯಸ್ ತಾಪಮಾನವು ವಾರಗಟ್ಟಲೆ ಬರುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ.
೨೦೨೩-೨೪ ವರ್ಷವು, ಬೆಂಗಳೂರಿನ ನಿವಾಸಿಗಳ ಆ ಒಂದು ಗರ್ವವನ್ನು, ಹೆಮ್ಮೆಯಯನ್ನು, ಕಲ್ಪನೆಯನ್ನು ಪೂರ್ತಿ ಸುಳ್ಳು ಮಾಡಿತು.
ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನವರು ತಮ್ಮ ಸ್ವಂತ ಹಳ್ಳಿಗಳಿಗೋ, ಊರುಗಳಿಗೋ ಹೋಗಿ, ನಾಲ್ಕಾರು ದಿನ ಅಲ್ಲಿನ ಸೆಕೆಯನ್ನು ತಾಳಲಾರದೇ, ಬೇಗನೇ ಓಡಿಬರುತ್ತಿದ್ದುದು ಸಾಮಾನ್ಯ ಎನಿಸಿತ್ತು. ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲೇ
ಇದ್ದವರು, ಕರ್ನಾಟಕದ ಹೆಚ್ಚಿನ ಪಟ್ಟಣಗಳ ಸೆಕೆ ಯನ್ನು ತಡೆದುಕೊಳ್ಳಲಾರರಾಗಿದ್ದರು; ಅಂಥ ಸೆಕೆ ಏನಿದ್ದರೂ ಹಳ್ಳಿಯ ಜನರಿಗೆ ಮಾತ್ರ, ಅದು ಅವರ ಕರ್ಮ ಎಂದು ಕೆಲವೊಮ್ಮೆ ಉದಾಸೀನವನ್ನೂ ತೊರುತ್ತಿದ್ದುದುಂಟು.
ನಮ್ಮ ಹಳ್ಳಿಮನೆಗೆ, ಪ್ರತಿ ವರ್ಷ ಬೆಂಗಳೂರಿನ ಒಬ್ಬರು ಬಂಧು ಬರುತ್ತಿದ್ದರು- ಆರೆಂಟು ದಿನ ಇದ್ದು, ನಾಲ್ಕಾರು ಬಂಧುಗಳ ಮನೆಗಳಿಗೆ ಭೇಟಿ ಕೊಟ್ಟು, ಆತಿಥ್ಯ ಸ್ವೀಕರಿಸಿ, ವಾಪಸಾ ಗುವಾಗ ‘ನಿಮ್ಮ ಊರು ಎಂತಾ ಮಾರಾಯ, ಅತ್ತ ಮಳೆ ಬರುತ್ತಿರು ವಾಗಲೂ ಇತ್ತ ಸೆಕೆ ಆಗುತ್ತದೆ’ ಎಂದು ವ್ಯಂಗ್ಯವಾಡಿ ವಾಪಸಾಗುತ್ತಿದ್ದರು. ಅವರು ಅಂದು ಹೇಳುತ್ತಿದ್ದುದರಲ್ಲಿ ನಿಜಾಂಶವೂ ಇತ್ತು; ನಾವೆಲ್ಲಾದರೂ ಒಮ್ಮೊಮ್ಮೆ ಅವರ ಬೆಂಗಳೂರಿನ ಮನೆಗೆ ಭೇಟಿ ಕೊಟ್ಟಾಗ, ಬೆಳಗ್ಗೆ ಚಳಿಯಾಗುವುದು ಸಾಮಾನ್ಯ ಎನಿಸಿತ್ತು.
ಮಳೆಗಾಲದಲ್ಲೂ ಬೆವರು ಬರುವಂತೆ ಮಾಡುತ್ತಿದ್ದ ನಮ್ಮ ಹಳ್ಳಿಯ ಸೆಕೆಯನ್ನು ನಾವೆಲ್ಲಾ ಅಂದು ತಡೆದುಕೊಳ್ಳುತ್ತಿದ್ದು ದಾದರೂ ಹೇಗೆ? ಹಳ್ಳಿಯಲ್ಲಿದ್ದ ನಮಗೆ ಅದು ಅಭ್ಯಾಸವಾಗಿತ್ತಾ ಅಥವಾ ನಮ್ಮ ದೇಹ ಆ ಸೆಕೆಗೆ ಹೊಂದಿಕೊಂಡಿತ್ತಾ? ವಿದ್ಯುತ್
ಸಂಪರ್ಕ, -ನ್, ಫ್ರಿಜ್ ಮೊದಲಾದ ಸೌಕರ್ಯ ಗಳಿಲ್ಲದ ನಮ್ಮ ಹಳ್ಳಿ ಮನೆಯಲ್ಲಿದ್ದುಕೊಂಡು, ವಿದ್ಯಾಭ್ಯಾಸ ಪೂರೈಸಿದ ಅಂದಿನ ದಿನಗಳ ನೆನಪು ಇಂದು ಭಾರಿ ಮಜವನ್ನು ತರುತ್ತದೆ. ನಮ್ಮ ಮನೆಯಲ್ಲಿ ಫೋನು ಇರಲಿಲ್ಲ, ಆದರೂ ತೀರಾ ಸೆಕೆ
ಎನಿಸುತ್ತಿರಲಿಲ್ಲ.
ಸ್ಪಷ್ಟವಾಗಿ ನೆನಪಿರುವಂತೆ, ಮೇ ತಿಂಗಳ ಕೊನೆಯ ಒಂದೆರಡು ವಾರ ಅತಿಯಾದ ಸೆಕೆ ಎಂಬುದನ್ನು ಬಿಟ್ಟರೆ, ಬೇರೆಲ್ಲಾ ದಿನಗಳಲ್ಲೂ ಸೆಕೆಯನ್ನು ತಡೆದುಕೊಳ್ಳಲು ನಮಗೆ ಅಷ್ಟೊಂದು ಕಷ್ಟವಾಗುತ್ತಿರಲಿಲ್ಲ. ಬಹುಶಃ, ನಮ್ಮ ದೇಹಸ್ಥಿತಿಯು
ಅಲ್ಲಿನ ಸೆಕೆಗೆ, ಹ್ಯೂಮಿಡ್ ವಾತಾವರಣಕ್ಕೆ ಹೊಂದಿಕೊಂಡಿದ್ದರಿಂದ, ಸೆಕೆಯನ್ನು ಧೈರ್ಯವಾಗಿ ಎದುರಿಸುತ್ತಿದ್ದೆವು. ಹಾಗೆಂದು, ನಮ್ಮ ಹಳ್ಳಿಯಲ್ಲಿ ಬಿಸಿಲಿನ ತಾಪ ಕಡಿಮೆ ಎಂದುಕೊಳ್ಳಬೇಡಿ. ಮನೆಯ ಸುತ್ತಲೂ ಮರ, ಗಿಡ, ಹಕ್ಕಲು, ಹಾಡಿ ಇರುವುದರಿಂದ,
ಸಂಜೆಯ ಹೊತ್ತಿಗೆ ವಾತಾವರಣ ತಂಪಾಗುತ್ತಿತ್ತು ನಿಜ; ಆದರೆ, ನಡುಮಧ್ಯಾಹ್ನದ ಹೊತ್ತಿನ ಸೆಕೆಯನ್ನು ತಡೆಯುವಲ್ಲಿ ಬಹುಕಾಲ ಅಲ್ಲೇ ವಾಸವಾಗಿದ್ದ ನಮಗೂ ತುಸು ಕಷ್ಟವೇ ಆಗುತ್ತಿತ್ತು.
ಆದರೆ, ನಮ್ಮ ಹಳ್ಳಿಯ ಕೃಷಿಕರು, ಗ್ರಾಮೀಣರು ಬಿಸಿಲಿಗೆ ಹೆದರುವವರಲ್ಲ. ಎಂಥದ್ದೇ ಬಿಸಿಲು ಇದ್ದರೂ, ಎಂದಿನಂತೆ, ಅಗತ್ಯ ಇರುವ ಕೆಲಸವನ್ನು ಕೈಬಿಡುವವರಲ್ಲ. ಬಿಸಿಲಿನಲ್ಲೇ ಓಡಾಡುತ್ತಾ, ನಡುನಡುವೆ ಅಗತ್ಯವಿದ್ದಾಗ ತುಸು ವಿಶ್ರಾಂತಿ ತೆಗೆದುಕೊಂಡು, ಬೆವರುತ್ತಲೇ ಕೆಲಸ ಮಾಡಿ ಮುಗಿಸುವವರು. ಪರೀಕ್ಷೆ ಸಮಯದಲ್ಲಿ ಬಿಸಿಲಿನಲ್ಲೇ ನಡೆದುಕೊಂಡು ಹೋಗಿ, ಪರೀಕ್ಷೆ ಬರೆದು ಪಾಸು ಮಾಡಿದ ಭೂಪರು ನಾವೆಲ್ಲಾ!
ಇಂಥ ಬಿರುಬೇಸಗೆಯಲ್ಲಿ ನಮ್ಮೂರಿನಲ್ಲಿ ಅಗತ್ಯ ವಾಗಿ ಮಾಡಬೇಕಿದ್ದ ಒಂದು ಕೆಲಸವೆಂದರೆ ‘ಧಾನ್ಯ ಕೀಳುವುದು’. ಮಕ್ಕಳನ್ನೂ ಸೇರಿಸಿಕೊಂಡು ಅದೊಂದು ಕೆಲಸ ಮಾಡುತ್ತಿದ್ದುದರಿಂದಲೇ ಇರಬಹುದು, ಅದರ ನೆನಪು ನನಗೆ ಬಹಳ ಚೆನ್ನಾಗಿದೆ. ಎಪ್ರಿಲ್ ಸಮಯದಲ್ಲಿ, ಮನೆ ಎದುರಿನ ಬಯಲಿನ ಗದ್ದೆಗಳಲ್ಲಿ ಹಾಕಿದ್ದ ಉದ್ದು, ಹೆಸರು, ಹುರುಳಿಗಳು ಕಾಯಿ ಬಿಟ್ಟು, ಕೆಂಪಗಾಗು ತ್ತಿದ್ದವು. ಒಂದೆರಡು ದಿನ ತಡೆದರೆ, ಹೆಸರು ಕೋಡು, ಉದ್ದಿನ ಕೋಡು, ಹುರುಳಿ ಕೋಡು ಬಿಸಿಲಿನ ತಾಪಕ್ಕೆ ಒಣಗಿ, ಸಿಡಿದು,
ಕಾಳು ಸಿಗದೇ ಇರುವ ಸಾಧ್ಯತೆ. ಆದ್ದರಿಂದ, ಗಿಡ ಹಣ್ಣಾದ ಕೂಡಲೇ, ಮನೆ ಮಂದಿಯೆಲ್ಲಾ ಸೇರಿ ಗದ್ದೆಯಲ್ಲಿ ಕುಳಿತು ‘ಧಾನ್ಯ ಕೀಳುವ’ ಕೆಲಸವನ್ನು ಮಾಡುತ್ತಿದ್ದೆವು. ಒಂದೊಂದೇ ಗಿಡವನ್ನು ಕೈಯಲ್ಲಿ ಕಿತ್ತು, ಅಲ್ಲೇ ರಾಶಿ ಮಾಡಿ, ಕಣ್ಣುಹೆಡಗೆಯಲ್ಲಿಟ್ಟು
ಮನೆಗೆ ತಂದು, ಅಂಗಳದಲ್ಲಿ ಒಣಗಿಸುತ್ತಿದ್ದೆವು.
ನೆರಳಿಲ್ಲದ ಗದ್ದೆಯಲ್ಲಿ ಕುಳಿತು, ಉದ್ದಿನ ಮತ್ತು ಹೆಸರು ಕಾಳಿನ ಗಿಡ ಕೀಳುವಾಗ, ಸಾಕಷ್ಟು ಸೆಕೆ, ಬಿಸಿಲಿನ ತಾಪ. ಬೇಗನೆ ಆರಂಭಿಸಿ, ಬೆಳಗಿನ ಹತ್ತು ಹನ್ನೊಂದು ಗಂಟೆಯ ಒಳಗೇ ಆ ಗಿಡಗಳನ್ನು ಕೀಳುವ ಕೆಲಸ ಮುಗಿಯುತ್ತಿದ್ದರೂ, ಮೈಎಲ್ಲಾ
ಬೆವರು ಮುದ್ದೆ. ಇದಕ್ಕೆ ಪರಿಹಾರವಾಗಿ, ನಮ್ಮೂರಿನಲ್ಲಿ ಸೇವಿಸುತ್ತಿದ್ದ ಪಾನೀಯಗಳಲ್ಲಿ ಒಂದೆಂದರೆ ‘ಹೆಸರು ನೀರು’. ಇದನ್ನು ತಯಾರಿಸುವುದು ತುಂಬಾ ಸುಲಭ; ನಾಲ್ಕಾರು ದಿನಗಳ ಮುಂಚೆ ಕಿತ್ತು, ‘ಕೊಣ್ಣೆ’ ಹಸನು ಮಾಡಿ ಸಂಗ್ರಹಿಸಿದ ಹೆಸರು ಕಾಳುಗಳನ್ನು (ಎರಡು ಮುಷ್ಟಿ) ಅರೆಯುವ ಕಲ್ಲಿಗೆ ಹಾಕಿ, ಚೆನ್ನಾಗಿ ಅರೆದು, ಅದಕ್ಕೊಂದಿಷ್ಟು ಮುದ್ದೆ ಬೆಲ್ಲ ಸೇರಿಸಿದರೆ ‘ಹೆಸರು
ನೀರು’ ಸಿದ್ಧ. ಒಂದೊಂದು ಲೋಟ ಕುಡಿದರೆ, ಬಿಸಿಲಿನ ಬೇಗೆಯನ್ನು ಬಹುಬೇಗನೆ ತಣಿಸಬಲ್ಲ ಪಕ್ಕಾ ನೈಸರ್ಗಿಕ ಪಾನೀಯ!
ದೇಹಕ್ಕೆ ತಂಪು ಎಂಬ ನಂಬಿಕೆ. ಹಸಿ ಹೆಸರುಕಾಳು ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಅನುಮಾನವಿಲ್ಲ. ಇದೇ ರೀತಿ
ರಾಗಿಯನ್ನು ಅರೆದು, ಬೆಲ್ಲ ಬೆರೆಸಿ, ‘ರಾಗಿ ಹಾಲು’ ಮಾಡಿ ಸೇವಿಸುವ ಪದ್ಧತಿ ಕೆಲವು ಕಡೆ ಇದೆ; ಆದರೆ, ನಮ್ಮ ಹಳ್ಳಿಯಲ್ಲಿ ಯಾರೂ ರಾಗಿ ಬೆಳೆಯುತ್ತಿರಲಿಲ್ಲವಾದ್ದರಿಂದ, ಹೆಸರು ನೀರಿನಷ್ಟು ಜನಪ್ರಿಯತೆ ರಾಗಿ ಹಾಲಿಗೆ ಇಲ್ಲ. ಮೊಸರನ್ನು ಚೆನ್ನಾಗಿ ಕಡೆದು, ಮಜ್ಜಿಗೆ ಮಾಡಿ, ಲೋಟಗಟ್ಟಲೆ ಕುಡಿದು, ಬಿಸಿಲಿನ ತಾಪವನ್ನು ಎದುರಿಸುತ್ತಿದ್ದುದು ಸಹ ಸಾಮಾನ್ಯ. ನೀರು ಮಜ್ಜಿಗೆಯು ಬಿಸಿಲು ಕಾಲವನ್ನು ಎದುರಿ ಸಲು ರಾಮಬಾಣವೇ ಸರಿ.
ಎಪ್ರಿಲ್-ಮೇ ತಿಂಗಳುಗಳ ಬಿಸಿಲಿನ ತಾಪವನ್ನು ಎದುರಿಸಲು, ನಮ್ಮ ಹಳ್ಳಿಯಲ್ಲಿ ಬಳಕೆಯಲ್ಲಿದ್ದ ಇನ್ನೊಂದು ಪ್ರಬಲ ಅಸ್ತ್ರ ವೆಂದರೆ, ‘ಮುರಿನ ಹಣ್ಣಿನ ಪಾನಕ’. ಮನೆ ಹಿಂದಿನ ಹಾಡಿಯಲ್ಲಿರುವ ಮಧ್ಯಮ ಗಾತ್ರದ ಮುರಿನ ಮರದಲ್ಲಿ ಹೇರಳವಾಗಿ
ಬಿಡುವ ಕೆಂಪು ಕೆಂಪು ‘ಮುರಿನ ಹಣ್ಣ’ನ್ನು ತಂದು, ಅದರ ಕೆಂಪನೆಯ ತೊಗಡೆಯನ್ನು ಅರೆದು, ಬೆಲ್ಲ ಬೆರೆಸಿ ಕುಡಿದರೆ, ಎಂಥ ಸೆಕೆಯಾದರೂ ಮೈಬಿಟ್ಟು ಹೋಗಬೇಕು! ಬೇಸಗೆಯಲ್ಲಿ ಕೆಲವರನ್ನು ಕಾಡುವ ಉಷ್ಣ, ಹೀಟ್, ಪಿತ್ತ ಮೊದಲಾದ ಎಲ್ಲಾ ಸಮಸ್ಯೆ
ಗಳಿಗೂ ‘ಮುರಿನ ಹಣ್ಣಿನ ಪಾನಕ’ ಪರಿಹಾರ ನೀಡುತ್ತದೆ ಎಂಬುದು ನಮ್ಮ ಹಳ್ಳಿಗರ ನಂಬಿಕೆ. ಈ ಹಣ್ಣಿನ ತೊಗಟೆಯನ್ನು ಒಣಗಿಸಿಟ್ಟುಕೊಂಡು, ವರ್ಷ ಪೂರ್ತಿ ಅದರಿಂದ ತಿಳಿ ಸಾರು (ಹಸಿ) ತಯಾರಿಸಿ, ಊಟಕ್ಕೆ ಬಳಸಬಹುದು. ಮುರಿನ ಹಣ್ಣಿನ ತೊಗಟೆ ಮತ್ತು ಅದರ ಪಾನಕವು, ಈಚಿನ ದಶಕಗಳಲ್ಲಿ ‘ಕೋಕಂ ಜ್ಯೂಸ್’ ಎಂದು ಪಟ್ಟಣಗಳಲ್ಲಿ ಪ್ರಸಿದ್ಧಿ ಪಡೆದಿದೆ.
ಈ ಹಣ್ಣಿನ ಸಾರು ಮತ್ತು ಪಾನಕಕ್ಕೆ ಹಲವು ಔಷಧಿಯ ಗುಣಗಳಿವೆ ಎಂದು ಹೇಳುವುದುಂಟು; ಅದಕ್ಕಿಂತ ಮಿಗಿಲಾಗಿ, ಅದರ ರುಚಿ, ಪಾನಕಕ್ಕೆ ಅಗತ್ಯವಾಗಿ ಒದಗಿಸುವ ಬಣ್ಣ ಎಲ್ಲವೂ ಇರುವುದರಿಂದ ಕೋಕಂ ಜ್ಯೂಸ್ ಉತ್ತಮ ಪಾನೀಯ ಎಂಬುದಂತೂ ನಿಜ. ಬೆಂಗಳೂರಿನಲ್ಲಿ ಇಂದು ತಾಪದಿಂದ ಬಳಲುತ್ತಿರುವವರು, ಕೋಕಂ ಜ್ಯೂಸ್ ಸೇವಿಸಿ, ತಮ್ಮ ತಾಪವನ್ನು ತಣಿಸಿಕೊಳ್ಳ
ಬಹುದು. ಈ ಹಣ್ಣಿನ ತೊಗಟೆಯನ್ನು ಒಣಗಿಸಿಯೂ ಇಡಬಹುದಾದ್ದರಿಂದ, ವರ್ಷವಿಡೀ ಇದನ್ನು ಬಳಸಲು ಸಾಧ್ಯ.
ಆದರೆ, ಅದೇಕೋ, ಈಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಈ ಉತ್ತಮ ಪಾನೀಯದ ಜನಪ್ರಿಯತೆ ಕಡಿಮೆಯಾದಂತಿದೆ.
ಬೆಂಗಳೂರಿನ ನಿವಾಸಿಗಳನ್ನು ಈ ವರ್ಷದ ಬೇಸಗೆಯು ಇನ್ನೂ ಕೆಲವು ದಿನ ಕಾಡುವಂತಿದೆ; ಭೂಮಿ ತಂಪು ಮಾಡುವಷ್ಟು ಮಳೆ ಬೀಳಲು ಇನ್ನೂ ಕೆಲವು ವಾರಗಳು ಬೇಕು ಎಂದು ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ, ಉತ್ತಮ ಗುಣಮಟ್ಟದ ಮತ್ತು ನೈಸರ್ಗಿಕ ತಂಪು ಪಾನೀಯಗಳನ್ನು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಬೆಂಗಳೂರಿನ ಜನತೆಗೆ ಇದೆ.
ಹಣ್ಣಿನ ರಸವನ್ನು ಸೇವಿಸುವ ಭರದಲ್ಲಿ, ಹೆಚ್ಚು ಸಕ್ಕರೆ ಬೆರೆಸಿದ ಪಾನೀಯವನ್ನು ಕುಡಿಯಬೇಡಿ; ಬೇಸಗೆಯಲ್ಲಿ ಅತಿಯಾದ ಸಕ್ಕರೆ ಬೆರೆಸಿದ ಪಾನೀಯ (ಕಾರ್ಬೊನೇಟೆಡ್ ಡ್ರಿಂಕ್ಸ್) ಕುಡಿದರೆ, ಅದರಿಂದಾಗುವ ಲಾಭಕ್ಕಿಂತ, ದೀರ್ಘಕಾಲೀನ ನಷ್ಟವೇ ಅಽಕ
ಎನ್ನುತ್ತಾರೆ ಆಹಾರ ತಜ್ಞರು. ಸಹಜ ಮತ್ತು ನೈಸರ್ಗಿಕ ಎನಿಸಿದ ಕೋಕಂ ಪಾನಕ, ನೀರು ಮಜ್ಜಿಗೆ, ಹೆಸರುನೀರು, ರಾಗಿ ಹಾಲು, ಎಳನೀರು ಮೊದಲಾ ದವುಗಳನ್ನು ಸೇವಿಸಿ, ದೇಹದ ಆರೋಗ್ಯ ಕಾಪಾಡಿ ಕೊಳ್ಳಿ; ಸೆಕೆ, ತಾಪಮಾವನ್ನು ಇನ್ನೂ ಕೆಲವು ವಾರಗಳ
ಕಾಲ ಅನುಭವಿಸಲು ಸಿದ್ಧರಾಗಿ!