Sunday, 15th December 2024

ಅದೆಂಥ ಹುಚ್ಚು…ಅದೆಂಥ ಬದ್ಧತೆ…?

ವಿದೇಶವಾಸಿ

dhyapaa@gmail.com

ಕೆಲವರಿಗೆ ಇದು ಹುಚ್ಚುತನ ಎಂದೆನಿಸಬಹುದು. ಆದರೆ ಆ ಪ್ರಕಾರದ ಹುಚ್ಚು ಇದ್ದಲ್ಲಿ ಮಾತ್ರ ಇದು ಸಾಧ್ಯ. ಹುಚ್ಚೇ ಇಲ್ಲದ ಮನುಷ್ಯರು ಯಾರಾದರೂ ಇದ್ದಾರೆಯೇ? ನನಗಂತೂ ಸಿಕ್ಕಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಹುಚ್ಚು ಇರುತ್ತದೆ. ಯಾವ ಪ್ರಮಾಣದಲ್ಲಿ ಇರುತ್ತದೆ ಎನ್ನುವುದು ಮಾತ್ರ ತಿಳಿಯುವುದಿಲ್ಲ
ಅಷ್ಟೇ. ಹುಚ್ಚಿನಲ್ಲೂ ಸಾಕಷ್ಟು ವಿಧಗಳಿವೆ.

ಯಾವ ಹುಚ್ಚೇ ಇರಲಿ, ಇತರರಿಗೆ ತೊಂದರೆಯಾಗದಂತೆ ತಮ್ಮಲ್ಲಿರುವ ಹುಚ್ಚಿಗೆ ನೀರೆರೆದು ಬೆಳೆಸಿಕೊಂಡರೆ ಒಳ್ಳೆಯದೇ. ಅದು ನಾಲ್ಕಾರು ಜನಕ್ಕೆ, ಸಮಾಜಕ್ಕೂ ಒಳ್ಳೆಯದು. ನಿಮಗೆ ನಂಬಿಕೆ ಬರುತ್ತಿಲ್ಲವಾದರೆ ಒಮ್ಮೆ ವಿಯೆಟ್ನಾಮ್‌ಗೆ ಹೋಗಿ ನೋಡಬೇಕು. ವಿಯೆಟ್ನಾಮ್ ದೇಶದ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಮೊದಲ ಭೇಟಿಯಲ್ಲಿಯೇ ಹೃದಯಸ್ಥವಾಗುವ ದೇಶಗಳ ಪೈಕಿ ಇದೂ ಒಂದು. ಸುಮಾರು ೨ ದಶಕಗಳ ಕಾಲ ಕಂಡು ಕೇಳರಿಯದ ಯುದ್ಧದಿಂದ ತನ್ನದೇ ದೇಶದ ೩೫ ಲಕ್ಷ ಪ್ರಜೆಗಳನ್ನು ಕಳೆದುಕೊಂಡು ಬಸವಳಿದು, ಬಲ ಕಳೆದು, ಬರಡಾಗಿದ್ದ ದೇಶ ಅದು. ಅಮೆರಿಕದ ರಣ ಕ್ರೌರ್ಯವನ್ನು ನೋಡಬೇಕೆಂದರೆ ನೀವು ಈ ದೇಶಕ್ಕೆ ಭೇಟಿ ಕೊಡಬೇಕು.

ಸರ್ವಸ್ವವನ್ನೇ ಕಳೆದು ಕೊಂಡರೂ ಪುನಃ ಬಲಯುತವಾಗಿ ಎದ್ದು ನಿಲ್ಲ ಬಹುದು ಎನ್ನುವ ನಿದರ್ಶನ ಕಾಣಬೇಕು ಎಂದು ಕೊಳ್ಳಿ, ಆಗಲೂ ನೀವು ಇದೇ ದೇಶಕ್ಕೆ ಭೇಟಿ ಕೊಡ ಬೇಕು. ಇದಕ್ಕೆ ಕಾರಣ ಅವರಲ್ಲಿರುವ ಹುಚ್ಚು ಮತ್ತು ಬದ್ಧತೆ. ಹುಚ್ಚು ಮತ್ತು ಬದ್ಧತೆ ಅಲ್ಲಿಯ ಜನರಲ್ಲಿ ರಕ್ತಗತವಾಗಿದೆ ಎಂದರೂ ತಪ್ಪಿಲ್ಲ. ಅದು ದೇಶಕಟ್ಟುವ ಕೆಲಸವಾಗಲಿ, ಮನೆ ಕಟ್ಟುವ ಕೆಲಸ ವಾಗಲಿ ಅಥವಾ ಕಲೆ ಕಟ್ಟುವ ಕೆಲಸವಾಗಲಿ, ಅವರು ನೂರಕ್ಕೆ ನೂರರಷ್ಟು ಕೊಡುತ್ತಾರೆ ಎನ್ನುವ ಅಭಿಪ್ರಾಯ ನನ್ನದು.

ಸಾಮಾನ್ಯವಾಗಿ ನಾನು ಯಾವುದೇ ದೇಶಕ್ಕೆ ಹೋದರೂ ಅಲ್ಲಿಯ ಕಲೆ ಮತ್ತು ಸಂಸ್ಕೃತಿಯ ಕುರಿತು ಸ್ಥಳೀಯರಲ್ಲಿ ವಿಚಾರಿಸುತ್ತೇನೆ. ಆದಷ್ಟು ಅಲ್ಲಿಯ ಪ್ರದರ್ಶನ ಗಳನ್ನು ವೀಕ್ಷಿಸಲು ಸಮಯ ಹೊಂದಿಸಿಕೊಳ್ಳುತ್ತೇನೆ. ಅಲ್ಲಿಯ ಆಹಾರ ಪದ್ಧತಿ, ಉಡುಗೆ ಇವೆಲ್ಲದರ ಕುರಿತು ಸಮಗ್ರವಲ್ಲದಿದ್ದರೂ, ಸಣ್ಣ ಪುಟ್ಟ ಮಾಹಿತಿಯ ನ್ನಾದರೂ ಸಂಗ್ರಹಿಸುತ್ತೇನೆ. ನನ್ನ ಪ್ರಕಾರ ಒಂದು ದೇಶವನ್ನು ನೋಡುವ ಸರಿಯಾದ ಕ್ರಮ ಅದು. ಅಮೆರಿಕ ಎಂದರೆ ಕೇವಲ ಸ್ಟ್ಯಾಚ್ಯೂ ಆಫ್  ಲಿಬರ್ಟಿ ಅಥವಾ ವೈಟ್‌ಹೌಸ್, ಇಂಗ್ಲೆಂಡ್ ಎಂದರೆ ಬಕಿಂಗ್‌ಹ್ಯಾಮ್ ಅರಮನೆ ಮಾತ್ರವಲ್ಲ. ಭಾರತ ಎಂದರೆ ಬರೀ ತಾಜ್ ಮಹಲೂ ಅಲ್ಲ. ನೀವು ಚೀನಾಕ್ಕೆ ಹೋಗಿ ಅಲ್ಲಿಯ ಮಹಾಗೋಡೆಯನ್ನು (ಗ್ರೇಟ್ ವಾಲ್ ಆಫ್ ಚೈನಾ) ನೋಡಿ, ಅಲ್ಲಿಯ ಆಹಾರವನ್ನು ಸೇವಿಸದೆ, ಸಮರ ಕಲೆಯನ್ನು ನೋಡದೇ, ಬುದ್ಧ ದೇವಾಲಯಗಳಿಗೆ ಭೇಟಿಕೊಡದೇ ಹಿಂತಿರುಗಿ ಬಂದರೆ, ಚೀನಾದ ಶೇ.೧ರಷ್ಟನ್ನೂ ನೋಡಿದಂತಾಗುವುದಿಲ್ಲ.

ವಿಯೆಟ್ನಾಮ್ ವಿಷಯದಲ್ಲೂ ಹಾಗೆಯೇ, ನೀವು ವಾರ್ ಮ್ಯೂಸಿಯಂಗೆ ಹೋಗಿ ಅಥವಾ ಇನ್ಯಾವುದ ಕ್ಕಾದರೂ ಹೋಗಿ, ಅಲ್ಲಿಯ ಒಪೆರಾದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನೋಡದಿದ್ದರೆ ವಿಯೆಟ್ನಾಮ್ ಪ್ರವಾಸ ಪೂರ್ಣವಾಗುವುದಿಲ್ಲ. ವಿಯೆಟ್ನಾಮ್‌ನ ಹು-ಚಿ-ಮಿನ್ ನಗರದಲ್ಲಿ ಒಂದು ಒಪೆರಾ ಹೌಸ್ ಇದೆ. ಇದನ್ನು ಸಾಯ್ ಗೋನ್ ಒಪೆರಾ ಹೌಸ್ ಅಥವಾ ಮುನ್ಸಿಪಲ್ ಥಿಯೇಟರ್ ಎಂದು ಕರೆಯುತ್ತಾರೆ. ೧೨೨ ವರ್ಷ ಹಳೆಯ ಈ ಕಟ್ಟಡದ ವಾಸ್ತುಶಿಲ್ಪಿ ಒಬ್ಬ ಫ್ರೆಂಚ್.
ಒಳಗೆ ೨ ಬಾಲ್ಕನಿಯೊಂದಿಗೆ ಸುಮಾರು ೪೭೦ ಜನ ಕುಳಿತುಕೊಳ್ಳಬಹುದಾದ, ಪ್ರತಿಧ್ವನಿರಹಿತ ಸಭಾಂಗಣ, ಜತೆಗೆ ಯಾವುದೇ ಮೂಲೆಯಲ್ಲಿ ಕುಳಿತರೂ ಸ್ಪಷ್ಟವಾಗಿ ಕಾಣುವ ರಂಗಸ್ಥಳ. ೧೯೦೦ ರಲ್ಲಿ ಫ್ರೆಂಚ್ ಕಲಾವಿದರು ಇಲ್ಲಿ ಮೊದಲ ಕಾರ್ಯ ಕ್ರಮ ನೀಡಿದ್ದರೂ, ವಿಯೆಟ್ನಾಮ್ ಕಲಾವಿದರಿಗೆ ತಮ್ಮ ಮೊದಲ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದ್ದು ಮಾತ್ರ ೧೮ ವರ್ಷಗಳ ನಂತರ. ಈಗ್ಗೆ ೧೦ ವರ್ಷದ ಹಿಂದೆ ಅಲ್ಲಿಯ ಸರಕಾರ ಆ ಕಟ್ಟಡವನ್ನು ರಾಷ್ಟ್ರೀಯ ಅವಶೇಷ ಎಂದು ಘೋಷಿಸಿದೆ.

ಪ್ರತಿನಿತ್ಯ ಕಾರ್ಯಕ್ರಮ ನೀಡುವ ವಿಶ್ವದ ಕೆಲವೇ ಒಪೆರಾ ಹೌಸ್‌ಗಳಲ್ಲಿ ಒಂದು ಎಂಬ ಕೀರ್ತಿ ಇದಕ್ಕಿದೆ. ನಾನು ವಿಯೆಟ್ನಾಮ್ ಪ್ರವಾಸಕ್ಕೆ ಹೋದಾಗ ಈ
ಒಪೆರಾ ಹೌಸ್‌ನಲ್ಲಿ ಒಂದು ಪ್ರದರ್ಶನ ನೋಡಿದ್ದೆ. ನಾನು ಕಂಡ ‘AO SHow’ ಸುಮಾರು ಒಂದೂ ಕಾಲು ಗಂಟೆಯ ಪ್ರದರ್ಶನ. ಹಳ್ಳಿಯ ಜನಜೀವನದಿಂದ ಆರಂಭವಾಗಿ ನಗರೀಕರಣಗೊಳ್ಳುವವರೆಗಿನ ಕಥೆ. ಕೋಳಿ ಕೂಗುವ ಧ್ವನಿಯೊಂದಿಗೆ ಆರಂಭವಾಗುವ ಈ ಪ್ರದರ್ಶನದಲ್ಲಿ ಹಳ್ಳಿಯ ಹಾಡುಗಳು, ಅಲ್ಲಿಯ ವಾದ್ಯ, ಅಲ್ಲಿಯ ನೃತ್ಯಗಳು ನಗರೀಕರಣ ಗೊಳ್ಳುವ ಹಂತಕ್ಕೆ ಬರುವಾಗ ಎಲ್ಲವೂ ಸಮಕಾಲೀನ ವಾಗಿ ಬದಲಾಗುತ್ತವೆ.

ಈ ಸಂದರ್ಭದಲ್ಲಿನ ಹಳ್ಳಿಯಲ್ಲಿ ನೆಲೆಸಿದವರ ಪಾಡು, ಗೊಂದಲಗಳನ್ನು ಬಿಂಬಿಸಲಾಗಿದೆ. ಅದರಲ್ಲಿ ಬರುವ ಹಾಸ್ಯ ಅರ್ಥವಾಗದಿದ್ದರೂ, ಹಾಸ್ಯಕ್ಕಾಗಿಯೇ ಕೆಲವು ಚಿಕ್ಕ-ಪುಟ್ಟ ಸಂಭಾಷಣೆಯನ್ನು ಸೇರಿಸಲಾಗಿದೆಯೆಂದು ಅಕ್ಕ- ಪಕ್ಕದವರು ನಕ್ಕಾಗ ಅರ್ಥವಾಗುತ್ತದೆ. ಪ್ರದರ್ಶನದುದ್ದಕ್ಕೂ ಬಿದಿರಿನ ಬುಟ್ಟಿಗಳು ಉರುಳಿ ಬರುತ್ತವೆ, ಬಿದಿರಿನ ದೋಣಿಗಳು ತೇಲಿಬರುತ್ತವೆ. ಇಲ್ಲಿ ಬರುವ ಸೇತುವೆ, ಜಾರುಬಂಡಿ, ಮನೆ, ಗುಡ್ಡ, ಬೆಂಕಿ ಎಲ್ಲವೂ ಬಿದಿರಿನದ್ದೇ. ಸಣ್ಣ ಬಿದಿರಿನ ಬುಟ್ಟಿ
ಯಿಂದ ಹಿಡಿದು ೧೫ ಅಡಿಯ ಬೊಡ್ಡೆಯೊಂದಿಗೆ ಕಲಾವಿದರು ನಿರರ್ಗಳವಾಗಿ ಆಡುವುದನ್ನು ನೋಡುವಾಗ ಎಂಥವರಿಗೂ ರೋಮಾಂಚನವಾಗುತ್ತದೆ. ವೇದಿಕೆ ಯಲ್ಲಿ ಕಲಾವಿದರು ೧೫ ಅಡಿಯ ೧೦-೧೨ ಬಿದಿರಿನ ಬೊಡ್ಡೆಯಿಂದ ಕಲಾಕೃತಿ ನಿರ್ಮಿಸುತ್ತಾರೆ.

ಆ ಬೊಡ್ಡೆಯ ಮೇಲೆ ನಡೆಯುತ್ತಾರೆ, ಕುಣಿಯುತ್ತಾರೆ, ಒಂದು ಮಟ್ಟದ ಸರ್ಕಸ್ಸನ್ನೇ ಮಾಡುತ್ತಾರೆ. ಆ ಪ್ರದರ್ಶನದ ಭಾಗವಾಗಿ, ಸುಮಾರು ೧೫ ಅಡಿ ಎತ್ತರದ ಬಾಲ್ಕನಿಯಲ್ಲಿರುವ ಪ್ರೇಕ್ಷಕರ ನಡುವಿಂದ ಒಬ್ಬ ಕಲಾವಿದ ಕೆಳಗೆ ಜಿಗಿಯುತ್ತಾನೆ. ಎಲ್ಲವೂ ಲವಲೇಶವೂ ಇಲ್ಲದಂತೆ ಅಚ್ಚುಕಟ್ಟಾಗಿ ನಡೆಯುತ್ತದೆ. ಪ್ರದರ್ಶನ ಎಷ್ಟು ಅದ್ಭುತವಾಗಿತ್ತೆಂದರೆ, ಆ ಪ್ರದರ್ಶನ ಮುಗಿಯುವುದಕ್ಕಿಂತ ಮುಂಚೆಯೇ ನಾನು ಮುಂದಿನ ಪ್ರದರ್ಶನಕ್ಕೂ ಟಿಕೆಟ್ ಬುಕ್ ಮಾಡಿಕೊಂಡೆ. ಎರಡನೆಯ ಪ್ರದರ್ಶನದ ಹೆಸರು ‘teh dar’ ಕೂಡ ಬಿದಿರಿನ ಸಲಕರಣೆಗಳೊಂದಿಗೆ ವಿಯೆಟ್ನಾಮ್‌ನ ದಕ್ಷಿಣ ಭಾಗದ ಗುಡ್ಡಗಾಡು ಜನರ ನಿತ್ಯಜೀವನದ ಪರಿಯನ್ನು ತೋರಿ ಸುವ, ಒಂದೂಕಾಲು ಗಂಟೆಯ ಪ್ರದರ್ಶನ.

ಇದರಲ್ಲಿ ಬಳಸಿದ ಸಂಗೀತ ನೂರಕ್ಕೆ ನೂರರಷ್ಟು ಜನಪದ. ಅದಕ್ಕೆ ಪೂರಕವಾಗಿ ನಗಾರಿ, ತಾಳ, ಕಹಳೆ, ಬಿದಿರನ್ನು ಬಳಸಿ ಸಿದ್ಧಪಡಿಸಿದ ವಾದ್ಯಗಳು. ಅದಕ್ಕೆ
ಒಪ್ಪುವ ಉಡುಗೆ ತೊಡುಗೆ. ಸಮಯೋಚಿತ ಧ್ವನಿ ಮತ್ತು ಬೆಳಕಿನ ಏರಿಳಿತ. ಅದರೊಂದಿಗೆ, ವಿಶಿಷ್ಟ ವಾದ ಗುಡ್ಡಗಾಡು ಜನಾಂಗದವರ ಹಾಡುಗಳು, ಕೇಕೆ ಸದ್ದು, ಇವೆಲ್ಲ ವರ್ಣನೆಗೆ ನಿಲುಕುವಂಥದ್ದಲ್ಲ. ತಲೆಯ ಒಳಗೆ ವಿಯೆಟ್ನಾಮೀಸ್ ಭಾಷೆಯ ಒಂದು ಅಕ್ಷರ ಇರದಿದ್ದರೂ, ಕಥೆಯ ಸಾರಾಂಶ, ನಾಯಕ ನಾಯಕಿಯರ ಸಲ್ಲಾಪ, ಆಗಾಗ ಬಂದು ಹೋಗುವ ಖಳನಾಯಕ, ಪ್ರಕೃತಿಯ ವೈಪರೀತ್ಯ ಎಲ್ಲವೂ ನನಗೆ ಅರ್ಥವಾಗಿತ್ತು.

ಎರಡು ಅದ್ಭುತ ಕಾರ್ಯಕ್ರಮ ಕಂಡ ನಂತರ ಕಲಾವಿದರನ್ನು, ನಿರ್ದೇಶಕನನ್ನು ಭೇಟಿ ಮಾಡಲೇ ಬೇಕು ಎಂದೆನಿಸಿತು. ನನ್ನ ಅದೃಷ್ಟಕ್ಕೆ ಎರಡೂ ಪ್ರದರ್ಶನದ ನಿರ್ದೇಶಕ ‘ಟುವಾನ್ ಲೇ’ ಅಲ್ಲಿಯೇ ಇದ್ದ. ನಂತರದ ೨೦-೨೫ ನಿಮಿಷ ನಮ್ಮಿ ಬ್ಬರ ಪ್ರಶ್ನೋತ್ತರ ಕಾರ್ಯಕ್ರಮ. ಲೇ ಕಲಾವಿದರ ತಾಲೀಮಿನಿಂದ ಹಿಡಿದು ಸಂಬಳದವರೆಗೆ ಎಲ್ಲವನ್ನೂ ವಿವರಿಸಿದ್ದ. ಟುವಾನ್ ಲೇ ಸ್ವತಃ ಕಲಾವಿದನಾಗಿದ್ದವ. ತನ್ನ ೬ನೇ ವಯಸ್ಸಿನಲ್ಲೇ ಮೊದಲ ಪ್ರದರ್ಶನ ನೀಡಿ, ಪ್ರಾಯಪ್ರಬುದ್ಧನಾದ ಮೇಲೆ ೧೦ ವರ್ಷ ಯುರೋಪಿನ ಕೆಲವು ಭಾಗದಲ್ಲಿ ಜಿಗ್ಲಿಂಗ್ ಮಾಡಿ ಕೊಂಡಿದ್ದ. ಟೋಪಿ, ಚೆಂಡು ಇತ್ಯಾದಿಗಳ ಜಿಗ್ಲಿಂಗ್ ಮಾಡುತ್ತಿದ್ದ ಆತ ಒಳ್ಳೆಯ ನೃತ್ಯ ನಿರ್ದೇಶಕನೂ, ಹಲವು ವಾದ್ಯಗಳನ್ನು ನುಡಿಸಬಲ್ಲ ಸಂಗೀತಕಾರನೂ ಹೌದು.

ನಾನು ಕಂಡ ೨ ಪ್ರದರ್ಶನದ ಮೂಲಕ ತಾನೊಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನೂ ಆತ ಸಾಬೀತುಪಡಿಸಿದ್ದ. ಕಳೆದ ೧೦ ವರ್ಷದಿಂದ ವಿಯೆಟ್ನಾಮ್‌ನಲ್ಲಿ ತನ್ನ ಮಿತ್ರರೊಂದಿಗೆ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದು, ಇನ್ನೂ ೫ ಮಿತ್ರರೊಂದಿಗೆ ಲೂನ್ ಪ್ರೊಡಕ್ಷನ್ ಎಂಬ ಸಂಸ್ಥೆ ಕಟ್ಟಿಕೊಂಡು ನಿರಂತರ ಕಾರ್ಯ ಕ್ರಮ ನೀಡುತ್ತಿದ್ದಾನೆ ಟುವಾನ್ ಲೇ. ಲೂನ್ ಪ್ರೊಡಕ್ಷನ್‌ನಲ್ಲಿರುವ ಒಬ್ಬೊಬ್ಬರೂ ಒಂದೊಂದು ರತ್ನವೇ. ಪ್ರತಿನಿತ್ಯ ವಿಯೆಟ್ನಾಮ್‌ನ ಒಂದಲ್ಲ ಒಂದುಕಡೆ ಇವರ ತಂಡದ ಕಾರ್ಯಕ್ರಮ ಇದ್ದೇ ಇರುತ್ತದೆ. ವಿಯೆಟ್ನಾಮ್‌ನ ನಗರಗಳಲ್ಲ ಲ್ಲದೆ, ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್, ಯುರೋಪ್‌ನ ಕೆಲವು ರಾಷ್ಟ್ರಗಳೂ ಸೇರಿದಂತೆ ಒಟ್ಟೂ ೧೭ ದೇಶಗಳಲ್ಲಿ ಈ ಸಂಸ್ಥೆಯ ತಂಡ ಕಲಾಪ್ರೌಢಿಮೆ ಮೆರೆದು ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ.

ಕಳೆದ ಒಂದು ದಶಕದಲ್ಲಿ ಸತತ ೩ ವರ್ಷ ಐರೋಪ್ಯ ದೇಶಗಳಲ್ಲಿ ಪ್ರದರ್ಶನ ನೀಡಿದ ಶ್ರೇಯ ಈ ತಂಡದ್ದು. ಪ್ರತಿ ತಂಡದಲ್ಲೂ ಸುಮಾರು ೨೦ರಷ್ಟು ನಟ-ನಟಿಯರು, ೮-೧೦ ಜನ ಸಂಗೀತಕಾರರು, ಐದಾರು ಜನ ಸಹಾಯಕರಿರುತ್ತಾರೆ. ‘ಲಾಂಗ್ ತೋಯ್’ ಎಂಬ ಒಂದು ಪ್ರದರ್ಶನದಲ್ಲಿ ೨೦ ಜನ ಸಂಗೀತ ಗಾರರು, ವಾದ್ಯ ದವರೂ ಇದ್ದಾರೆ. ಒಂದು ತಂಡದಲ್ಲಿ ಒಟ್ಟೂ ೩೫ ರಿಂದ ೪೦ ಕಲಾವಿದರಿರುತ್ತಾರೆ. ಸಂಸ್ಥೆಯಲ್ಲಿ ಸುಮಾರು ೨೦೦ ಜನ ಕಲಾವಿದರಿದ್ದಾರೆ. ಕಳೆದ ೧೦  ವರ್ಷಗಳಲ್ಲಿ ಲೂನ್ ಪ್ರೊಡಕ್ಷನ್ ತಂಡ ಪ್ರಸ್ತುತ ಪಡಿಸಿದ್ದು ಕೇವಲ ೫ ಕಥೆಗಳನ್ನು ಮಾತ್ರ. ಈ ಐದು ಕಾರ್ಯಕ್ರಮವನ್ನು ಸಂಸ್ಥೆಯ ಐದು ಬೇರೆ ಬೇರೆ ತಂಡದವರು ವಿಯೆಟ್ನಾಮ್‌ನ ಮೂರು ನಗರ ಗಳಲ್ಲಿ ಪ್ರದರ್ಶಿಸುತ್ತಾರೆ.

ಒಂದು ಪ್ರದರ್ಶನವನ್ನು ರಂಗದಲ್ಲಿ ಪ್ರಸ್ತುತಪಡಿಸುವುದಕ್ಕಿಂತ ಮುಂಚೆ ಇವರು ಅಭ್ಯಾಸ ನಡೆಸುವ ಅವಽ ಬರೋಬ್ಬರಿ ಎರಡು ವರ್ಷ! ನನಗೆ ಎಲ್ಲಕ್ಕಿಂತ ಆಶ್ಚರ್ಯ ಎನಿಸಿದ್ದು ಅದೇ! ಪ್ರದರ್ಶನದಲ್ಲಿ ಭಾಗವಹಿಸುವ ಕಲಾವಿದರೆಲ್ಲ ಕಸರತ್ತು, ಸಾಹಸ, ನೃತ್ಯ, ಅಭಿನಯಗಳಲ್ಲಿ ಪರಿಣತಿ ಹೊಂದಿದವರು. ಆದಾಗ್ಯೂ ಒಂದು ಪ್ರದಶನಕ್ಕೆ ಎರಡು ವರ್ಷದ ಸಿದ್ಧತೆ ಮಾಡಿಕೊಳ್ಳುತ್ತಾರೆ, ತಾಲೀಮು ಪಡೆಯುತ್ತಾರೆ ಎಂದರೆ ಅವರಲ್ಲಿ ಎಷ್ಟರ ಮಟ್ಟಿಗೆ ಬದ್ಧತೆ ಇರಬೇಕು, ಯಾವ
ಪ್ರಮಾಣದಲ್ಲಿ ಹುಚ್ಚು ಇರಬೇಕು, ಯಾವ ಪಾಟಿ ಕಿಚ್ಚು ಇರಬೇಕು ಊಹಿಸಿ. ಎರಡು ವರ್ಷದ ಕಠಿಣ ತಾಲೀಮಿನ ನಂತರ, ಆ ಕಾರ್ಯಕ್ರಮದ ಮೌಲ್ಯ ಹೇಗಿರ ಬಹುದು, ಎಷ್ಟಿರಬಹುದು ಎಂದು ಊಹಿಸುವುದು ಕಷ್ಟವಾಗಲಿಕ್ಕಿಲ್ಲ.

ಇಡೀ ಪ್ರದರ್ಶನದಲ್ಲಿ ಸಾಸಿವೆಯಷ್ಟು ಸಣ್ಣ ತಪ್ಪಾದರೂ ಕತೆ ಮುಗಿಯಿತು. ಕಲಾವಿದ ತನ್ನ ಜೀವವನ್ನೇ ಪಣಕ್ಕಿಟ್ಟು ಮಾಡುವ ಪ್ರದರ್ಶನ ಅದು ಎಂದರೆ ಯಾವ ಪ್ರಮಾಣದಲ್ಲಿ ಆತ ‘ರಿಸ್ಕ್’ ತೆಗೆದುಕೊಳ್ಳುತ್ತಾನೆ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಆ ಕಾರಣಕ್ಕಾಗಿಯೇ ಇದರಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರದರ್ಶನವಿರಲಿ,
ಇಲ್ಲದಿರಲಿ, ಸಂಬಳ ನೀಡುತ್ತಾರೆ. ಇವರಲ್ಲಿ ತಿಂಗಳಿಗೆ ಒಂದೂವರೆ ಸಾವಿರದಿಂದ ಹಿಡಿದು ನಾಲ್ಕು ಸಾವಿರ ಡಾಲರ್ ಸಂಬಳ ಪಡೆಯುವ ಕಲಾವಿದರಿದ್ದಾರೆ. ಈ ಕಲಾವಿದರ ಊಟೋಪಚಾರ, ವಸತಿಯ ಜತೆಗೆ ವಿಮೆಯ ಜವಾಬ್ದಾರಿಯನ್ನೂ ಸಂಸ್ಥೆ ಹೊತ್ತುಕೊಂಡಿದೆ.

ಲೇ ಈಗ ‘Lune centre for performing arts’ ಆರಂಭಿಸಿದ್ದಾನೆ. ಇದೂ ಕೂಡ ‘ಬಾಂಬೂ ಥಿಯೇಟರ್’ ಎಂದೇ ಪ್ರಸಿದ್ಧಿಯಾಗಿದೆಯಂತೆ. ಅದರ ವಿಶೇಷತೆಯೆಂದರೆ, ಅಲ್ಲಿ ನೆಲದಿಂದ ಹಿಡಿದು ಚಾವಣಿಯವರೆಗೆ ಎಲ್ಲವೂ ಮರ ಮತ್ತು ಬಿದಿರಿನಿಂದಲೇ ಮಾಡಲ್ಪಟ್ಟಿದ್ದು, ಮಹಾದ್ವಾರ, ತೂಗುದೀಪಗಳು ಪ್ರತಿ ಯೊಂದೂ ಬಿದಿರೋ ಬಿದಿರು. ಏನೇ ಆದರೂ ವಿಯೆಟ್ನಾಮ್‌ನ ಈ ಕಲಾವಿದರ ಹುಚ್ಚಿಗೆ, ಕಿಚ್ಚಿಗೆ, ಬದ್ಧತೆಗೆ ಒಂದು ನಮಸ್ಕಾರ ಹೇಳಲೇಬೇಕು.