ಶಿಶಿರಕಾಲ
ಶಿಶೆರ್ ಹೆಗಡೆ, ನ್ಯೂಜೆರ್ಸಿ
ಕೆಲಸವೊಂದು ಸರಿಯಾಗಿ, ಅಂದುಕೊಂಡಂತೆ ನಡೆಯದಿದ್ದಾಗ ಆ ಕೆಲಸವನ್ನು ಆರಂಭಿಸಿದ ಮುಹೂರ್ತವೇ ಸರಿ ಇರಲಿಲ್ಲ ಎಂದು ಆಗೀಗ ಹೇಳಿಕೊಳ್ಳುತ್ತಿರುತ್ತೇವೆ. ಕಾರಣ ಸಿಗದಿದ್ದಾಗ ಅಥವಾ ನಾವು ಎಲ್ಲಿ ತಪ್ಪಿದ್ದೇವೆ ಎಂದು ವಿಚಾರಮಾಡಲು ಮನಸ್ಸೇ ಇಲ್ಲದಿರುವಾಗ ಈ ಮುಹೂರ್ತದ ಮಾತು ನಮಗೆ ಪುಕ್ಸಟ್ಟೆ ಸಮಾಧಾನವನ್ನು ತಂದು ಕೊಡುತ್ತದೆ.
ಸರ್ವ ಪ್ರಯತ್ನ ಮಾಡಿಯೂ ಕೆಲವೊಂದು ಕೆಲಸ ಸರಿಯಾಗಿ ಅಂದುಕೊಂಡಂತೆ ಪೂರ್ಣವಾಗುವುದಿಲ್ಲ. ಆಗೆಲ್ಲ ಈ ಶುರು ಮಾಡಿದ ಮುಹೂರ್ತ ಸರಿಯಿರಲಿಲ್ಲ, ಕಾಲ ಸರಿಯಿರಲಿಲ್ಲ, ವಿಧಿ ಹಾಗಿತ್ತು, ನಾವು ಪಡೆದು ಬಂದದ್ದೇ ಇಷ್ಟು ಎಂಬಿತ್ಯಾದಿ ಮಾತುಗಳಿಂದ ಪ್ರಮಾದ ತನ್ನಿಂದಾದದ್ದಲ್ಲ ಎನ್ನುವ ಭಾವವನ್ನು ನಮ್ಮಲ್ಲಿ ಹುಟ್ಟಿಸಿಕೊಳ್ಳುವ ಅವಶ್ಯಕತೆ ಖಂಡಿತವಾಗಿ ಇರುತ್ತದೆ. ನಮ್ಮಲ್ಲಿ ಹುಟ್ಟುವ ಭಾವಗಳೆಲ್ಲ ನಮ್ಮ ಅವಶ್ಯಕತೆಯಿಂದ ಜನ್ಮತಳೆದವೇ.
ಅಂತೆಯೇ ಪ್ರಮಾದವನ್ನು ಹೊರಿಸುವ ಭಾವ ಕೂಡ ಸೋಲಿನ ಅವಶ್ಯಕತೆಯೇ. ಬಲಿಪಶುವನ್ನೇ ದೂಷಿಸುವುದು ಮನುಷ್ಯ ಸಾಮಾನ್ಯ ಗುಣ. ಆದರೆ ನಾವೇ ಬಲಿಪಶುವಾದಾಗ ನಮ್ಮನ್ನೇ ನಾವು ಬೈದುಕೊಳ್ಳುವುದಕ್ಕೆ ಆಗದಾಗ ಈ ರೀತಿಯ ಅನ್ಯ – ಬಾಹ್ಯ ಅಸದೃಶ ಕಾರಣಗಳು ಸಹಾಯಕ್ಕೆ ಬರುತ್ತವೆ. ಹಾಗಂತ ನಮ್ಮ ಎಲ್ಲ ಸೋಲಿಗೂ ಬೇರೊಬ್ಬರು ಅಥವಾ ನಾವೇ ಕಾರಣವಾಗಿರ ಬೇಕೆಂದಿಲ್ಲ. ಕಾರಣವೇ ಸಿಗದ ಸೋಲುಗಳು ಆಗೀಗ ಎದುರಿಗೆ ಬರುತ್ತಿರುತ್ತವೆ.
ಆಗೆಲ್ಲ ಹೀಗೆ ಅಮೂರ್ತಕ್ಕೆ ಜರೆಯುವುದು ಪರೋಕ್ಷವಾಗಿ ಇನ್ನೊಮ್ಮೆ ಪ್ರಯತ್ನಿಸುವುದಕ್ಕೆ ಪ್ರೇರಣೆ ನೀಡಬಹುದು. ಮೊನ್ನೆ ಸ್ನೇಹಿತನೊಬ್ಬನ ಜತೆ ಲೋಕಾರೂಢಿಯಾಗಿ ಹರಟುತ್ತಿದ್ದೆ. ಸ್ನೇಹಿತ ಈ 2020 ವರ್ಷಕ್ಕೆ ಪ್ರವೇಶಿಸಿದ ಮುಹೂರ್ತವೇ ಸರಿ ಯಿಲ್ಲ ಎನ್ನುವ ವಾದವನ್ನು ಬೇರೆ ಬೇರೆ ವಿವರಣೆಗಳ ಜತೆ ಮಂಡಿಸುತ್ತ ಹೋದ. ಯಾವ ವಾದವನ್ನೂ ಪ್ರಶ್ನಿಸುವ ಮನಸ್ಸಾಗ ಲಿಲ್ಲ. ಸಾಂಕ್ರಾಮಿಕದ ಸ್ಥಿತಿ ಹುಟ್ಟಿದ್ದಕ್ಕೆ ಬಲಿಪಶುವಾದದ್ದು ನಾವೆಲ್ಲ. ಅದಕ್ಕೆ ಮನಸ್ಸಿನ ಸಮಾಧಾನಕ್ಕೆ ಚೀನಾವನ್ನು ಬೈಯ್ಯ ಬಹುದು.
ಆದರೆ ಅದೂ ಸಮಾಧಾನ ಕೊಡದಾದಾಗ, ಯಾರೂ ಕಾರಣರಲ್ಲ ಎನ್ನುವ ವಿಚಾರವಾಗಿ ಅಂದು ಅವ್ಯಕ್ತಕ್ಕೆ ಪ್ರಮಾದವನ್ನು ಹೊರಿಸುವ ಪ್ರಯತ್ನದಂತೆ ಸ್ನೇಹಿತನ ವಾದ ನನಗೆ ಕಾಣಿಸಿತು. ಅಲ್ಲದೇ ಈ ವರ್ಷವನ್ನು ಪ್ರವೇಶಿಸಿದ ಮುಹೂರ್ತ ಎನ್ನುವ ವಾದವೇ ನನಗೆ ಸ್ವಲ್ಪ ವಿಚಿತ್ರ ವೆನ್ನಿಸಿತ್ತು. ಸೆಕೆಂಡ್‌ನಿಂದ ಹಿಡಿದು ವರ್ಷ, ದಶಕ, ಶತಮಾನ ಇವೆಲ್ಲ ನಾವು ಮನುಷ್ಯರು ಸಮಯವನ್ನು ಲೆಕ್ಕಕ್ಕಿಡಲು ಬಳಸುವಂಥದ್ದು.
ಇದು ಮಾಪಕವೆಂದಾದಾಗ ವರ್ಷವೊಂದಕ್ಕೆ ಪ್ರವೇಶಿಸುವುದು ಮುಂದೆ ಹಿಂದೆ ಮಾಡುವಂತೆಯೇನೂ ಇಲ್ಲ. ಮುಹೂರ್ತ ನೋಡಿ ವರ್ಷವೊಂದನ್ನು ಶುರುಮಾಡಲು ಸಾಧ್ಯವೇ? ಅದು ಆ ಸಮಯಕ್ಕೆ ಘಟಿಸಲೇಬೇಕು. ಒಂದಂತೂ ನಿಜ – ಈಗ ಬದುಕಿರುವವರಿಗೆಲ್ಲ ಈ 2020 ಒಂದಿಂದು ರೀತಿಯಲ್ಲಿ, ಸಾಂಕ್ರಾಮಿಕದಿಂದಾಗಿ ಬಾಧಿಸಿದೆ. ಹಲವರ ವ್ಯಾಪಾರ, ವ್ಯವಹಾರ, ಉದ್ಯೋಗ ಇವೆಲ್ಲವಕ್ಕೆ ನೇರ ಅಥವಾ ಪರೋಕ್ಷವಾಗಿ ಹೊಡೆತ ಬಿದ್ದಿದೆ.
ಇನ್ನು ಕೆಲವರಿಗೆ ಈ ವರ್ಷವೊಂದು ಒಂದಿಷ್ಟು ರಿಲಾಕ್ಸಿಂಗ್ ಸಮಯವನ್ನು ಒದಗಿಸಿಕೊಟ್ಟಿದೆ. ಬಹಳಷ್ಟು ಮಂದಿ ಕೆಲಸ
ಮಾಡುವ ರೀತಿಯೇ ಖಾಯಂ ಆಗಿ ಬದಲಾಗಿ ಹೋಗಿದೆ. ಅದೆಷ್ಟೋ ಹೊಸತಕ್ಕೆ ಒಗ್ಗಿಕೊಂಡಾಗಿದೆ. ಕೋವಿಡ್-19 ಹಿಂದಿನ ವರ್ಷದ ಕೊನೆಯ ದಿನವಲ್ಲದೇ ಇನ್ನೊಂದು ದಿನ ತಡವಾಗಿ ಗುರುತಿಸಲ್ಪಟ್ಟಿದ್ದರೆ ಕೋವಿಡ್ -20 ಎಂದೇ ಕುಖ್ಯಾತಿ ಯಾಗು ತ್ತಿತ್ತೇನೋ. ಹಿಂದಿನ ವರ್ಷ ಹುಟ್ಟಿದರೂ ಬಾಽಸಿದ್ದು ಈ ವರ್ಷ. ಜಗತ್ತನ್ನು ಯಾರೊಬ್ಬರೂ ಅಂದಾಜಿಸಲಾರದಷ್ಟು ಬದಲಿಸಿದ ವರ್ಷವೊಂದರ ಕೊನೆಯಲ್ಲಿ ಈಗ ಬಂದು ನಿಂತಿದ್ದೇವೆ.
ಇನ್ನೊಂದು ವಾರಕ್ಕೆ ಹೊಸ ವರ್ಷ. ಅಂತೂ ಇಂತೂ 2020 ಮುಗಿಯುವ ಸಮಯ ಬಂದಿದೆ. ಇಪ್ಪತ್ತೊಂದನೇ ಶತಮಾನದ ಇಪ್ಪತ್ತೊಂದನೇ ವರ್ಷಕ್ಕೆ ಇನ್ನೇನು ಕಾಲಿಡಲಿದ್ದೇವೆ. ಇಡೀ ಜಗತ್ತು ಈ ಹೊಸ ವರ್ಷ ಒಳ್ಳೆಯದನ್ನು ತರಬಹುದು ಎನ್ನುವ ಮ್ಯಾಜಿಕ್ ಒಂದರ ನಿರೀಕ್ಷೆಯಲ್ಲಿ ಒಂದಿಷ್ಟು ಉತ್ಸುಕತೆಯಲ್ಲಿದೆ. ದಾಳದ(ಡೈಸ್) ಎಲ್ಲ ಬಿಂದುಗಳನ್ನು ಒಟ್ಟು ಸೇರಿಸಿ ಲೆಕ್ಕ
ಹಾಕಿದರೆ ಅದರ ಒಟ್ಟು 21. ಹಲವು ಧರ್ಮಗಳಲ್ಲಿ 21 ಸಂಖ್ಯೆಗೆ ಅದರದೇ ಆದ ಪ್ರಾಮುಖ್ಯತೆಯಿದೆ.
ಹಿಂದೂ ಧರ್ಮದ – ಧಾರ್ಮಿಕ ಮಂಡಲಗಳಲ್ಲಿ ಒಂದರ ಕೆಳಗೆ ಎರಡು, ಎರಡರ ಕೆಳಗೆ ಮೂರು ಹೀಗೆ ಬಿಂದುಗಳನ್ನು ಜೋಡಿಸಿ ಸಮಕೋನವನ್ನು ಮಾಡಲು ಆರು ಸಾಲು – 21 ಬಿಂದುಗಳು ಬೇಕಾಗುತ್ತವೆ. ಅದೇ ಪ್ರಕ್ರಿಯೆಯನ್ನು ಹಿಮ್ಮುಖವಾಗಿ ಮಾಡಿದಾಗ ಸರಿಯಾದ ಗಣಪತಿ ಮಂಡಲ ಸಾಧ್ಯವಾಗುತ್ತದೆ. ಸಂಖ್ಯಾಶಾಸದಲ್ಲಿ 21ಕ್ಕೆ ಒಂದು ವಿಶೇಷ ಸ್ಥಾನ. ಅಮೆರಿಕಾ ಮತ್ತು ಹಲವು ದೇಶಗಳಲ್ಲಿ ವ್ಯಕ್ತಿಯನ್ ವಯಸ್ಕ ಎಂದು ಪರಿಗಣಿಸುವುದು 21 ವರ್ಷವಾದಾಗ.
ಭಾರತದಲ್ಲಿ ಗಂಡು ಮದುವೆಯಾಗಬೇಕಾದರೆ 21 ಆಗಿರಬೇಕು. ಹೀಗೆ ಈ ಸಂಖ್ಯೆಯೊಂದರ ಸುತ್ತ ಹಲವು ನಂಬಿಕೆಗಳಿವೆ. ಸದ್ಯದ ಇದರ ಸುತ್ತ ಭವಿಷ್ಯವನ್ನು ಹೆಣೆಯುವ ಹಲವು ವಿಚಾರ ಲಹರಿಗಳ ಹರಿವು ನಮ್ಮನ್ನು ತಲುಪಲಿವೆ. ಯಾವುದನ್ನು ಯಾವ ಕಾರಣಕ್ಕೆ ನಂಬಬೇಕೋ ಬಿಡಬೇಕೋ – ಅವರವರಿಗೆ ಬಿಟ್ಟದ್ದು. ಒಟ್ಟಾರೆ ಒಂದೊಳ್ಳೆ ವರ್ಷ ನಮಗೆಲ್ಲರಿಗೂ ಬೇಕು ಅಷ್ಟೇ. ನಮ್ಮ ನಮ್ಮ ಧರ್ಮಕ್ಕನುಗುಣವಾಗಿ ಸಂವತ್ಸರವೊಂದು ಶುರುವಾಗುವ ದಿನ ಬೇರೆ ಬೇರೆ ಇದ್ದರೂ ನಾವು ಇಂದು ಪಾಲಿಸುತ್ತಿರುವುದು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು.
ಇದು ಇಂದಿನ ಜಗತ್ತಿನ ಪಂಚಾಗ. ಹೊಸ ವರ್ಷ ಒಂದಿಷ್ಟು ಹೊಸ ಒಳ್ಳೆಯದನ್ನು ತರಬೇಕು, ಅದು ಈ ಕ್ಷಣದ ಆಸೆ. ಹೊಸವರ್ಷ ಎಂದಾಕ್ಷಣ ಗೋಡೆಯ ಮೇಲಿರುವ ಹಳೆ ಕ್ಯಾಲೆಂಡರ್ ಒಂದು ಕೆಳಗಿಳಿದು ಹೊಸ ಬಣ್ಣದ ಕ್ಯಾಲೆಂಡರ್ ಒಂದು ಆ ಜಾಗವನ್ನು ತುಂಬಿಕೊಳ್ಳುತ್ತದೆ. ಈ ಇಡೀ ಪ್ರಕ್ರಿಯೆಯನ್ನು ಎರಡು ರೀತಿಯಲ್ಲಿ ನೋಡುವವರಿದ್ದಾರೆ.
ಅಯ್ಯೋ – ಹೊಸ ವರ್ಷ ಬರುತ್ತೆ ಹೋಗುತ್ತೆ, ನಮ್ಮ ಜೀವನ ಇಷ್ಟೇ – ಹೀಗೆ ಇರೋದು ಎನ್ನುವವರದು ಒಂದು ವರ್ಗ. ಹೊಸ ವರ್ಷ ಎಂದರೆ ಹೊಸ ಸಾಧ್ಯತೆಗಳು, ಹಿಂದೆ ಕೈಗೆತ್ತಿಕೊಳ್ಳಲಾಗದ ಅಥವಾ ಅರ್ಧಕ್ಕೆ ಬಿಟ್ಟ ಕೆಲಸವನ್ನು ಮತ್ತೆ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಒಂದು ಕಾರಣ ವಾಗಿಸಿಕೊಳ್ಳಬೇಕು ಎಂದು ಹೊರಡುವವರದು ಇನ್ನೊಂದು ವರ್ಗ. ಬದುಕಿನಲ್ಲಿ ಉತ್ಸಾಹ ಬತ್ತಿ ಹೋಗದಂತೆ ಆಗೀಗ ಒಂದಿಷ್ಟು ಹೊಸ ಸಂಕಲ್ಪಗಳು ಕೈಗೆತ್ತಿಕೊಳ್ಳುತ್ತಿರಲೇ ಬೇಕು.
ಕೆಲವರಿಗೆ ಸಂಕಲ್ಪವೊಂದು ಮಾಡಲು ಮುಹೂರ್ತವೊಂದರ ಅವಶ್ಯಕತೆ ಇರುವುದಿಲ್ಲ. ಇನ್ನು ಕೆಲವರಿಗೆ ಏನೋ ಒಂದು
ಕಾರಣ ಬೇಕಾಗಿರುತ್ತದೆ. ಅಂಥವರಿಗೆಲ್ಲ ಹೊಸ ವರ್ಷ ಒಂದು ಕಾರಣ – ನಿಮಿತ್ತದಂತೆ ಕಾಣಿಸುತ್ತದೆ. ನ್ಯೂ ಇಯರ್ ರೆಸೊಲ್ಯೂ ಶನ್ ಇಲ್ಲದೇ ಬಹಳಷ್ಟು ಮಂದಿ ವರ್ಷವನ್ನು ಆರಂಭಿಸುವುದೇ ಇಲ್ಲ. ಹೀಗೆ ಆರಂಭವಾದ ವರ್ಷದ ಹೊಸತರಲ್ಲಿ ಇರುವ ಉಮೇದು ತಿಂಗಳು, ಕೆಲವೊಮ್ಮೆ ವಾರ ಕಳೆಯುವುದರೊಳಗೆ ಮಾಯವಾಗಿ ಸಹಜಕ್ಕೆ ಮರಳಿಯಾಗಿರುತ್ತದೆ.
ಸುಮಾರು ಮೂವರಲ್ಲಿ ಒಬ್ಬರು ಹೊಸ ವರ್ಷದ ಸಂಕಲ್ಪವನ್ನು ಎರಡು ವಾರದ ಕೈ ಬಿಡುತ್ತಾರೆ. ಇನ್ನು ಹಲವರು ಫೆಬ್ರವರಿಯ ವರೆಗೆ ಹಾಗೂ ಹೀಗೂ ಮುಂದುವರಿಸಿಕೊಂಡು ಹೋಗಿ ಆಮೇಲೆ ಕೈ ಚೆಲ್ಲುತ್ತಾರೆ. ಕೆಲವೇ ಕೆಲವರು ಹೀಗೆ ಕೈಗೆತ್ತಿಕೊಂಡ
ಸಂಕಲ್ಪ ವನ್ನು ಛಲ ಹೊತ್ತವರಂತೆ ಮುಂದುವರಿಸಿಕೊಂಡು ಹೋಗುತ್ತಾರೆ. ಉಳಿದ ಅರ್ಧಕ್ಕೆ ಕೈಬಿಟ್ಟವರೆಲ್ಲ ಮತ್ತೆ ಇನ್ನೊಂದು ವರ್ಷದ ಆರಂಭಕ್ಕೆ ಮಾಡೋಣ ಎಂದು ಮುಂದೂಡಲು ಶುರುಮಾಡುತ್ತಾರೆ. ಹೀಗೆ ಹೊಸ ವರ್ಷದ ಹೊಸ್ತಿಲಲ್ಲಿ ಹೊತ್ತ ಸಂಕಲ್ಪವನ್ನು ಮುಂದುವರಿಸಿಕೊಂಡು ಹೋಗದವರ ಸಂಖ್ಯೆಯೇ ಜಾಸ್ತಿ.
ಈಗೀಗಲಂತೂ ಹೊಸ ವರ್ಷದಿಂದ ಹೀಗೋಂದನ್ನು ಮಾಡಲು ಉದ್ದೇಶಿಸಿದ್ದೇನೆ ಎಂದರೆ ಇದೇ ಕಾರಣಕ್ಕೆ ನಿಮ್ಮನ್ನು ನೋಡಿ ನಗುವವರೇ ಜಾಸ್ತಿ. ಇಷ್ಟು ವರ್ಷ ಮಾಡಲಾಗದ್ದದ್ದನ್ನು ಈ ಹೊಸ ವರ್ಷಕ್ಕೇನು ಮಾಡುತ್ತೀಯ ಎಂದು ಪ್ರಶ್ನಿಸಿದವರು ತೀರಾ
ಸಾಮಾನ್ಯ. ಹಾಗಾಗಿ ಈ ಅಂಜಿಕೆಯಿಂದಾಗಿಯೇ ಒಂದಿಷ್ಟು ಮಂದಿಯಂತೂ ಹೊಸ ವರ್ಷದ ಸಂಕಲ್ಪವನ್ನು ಯಾರೆದುರಿಗೂ ಹೇಳಿಕೊಳ್ಳುವುದಿಲ್ಲ. ಆಗ ಅಂಥವರು ಸಂಕಲ್ಪ ಮುರಿದದ್ದು ಬಾಕಿಯವರಿಗೆ ಗೊತ್ತಾಗುವುದೇ ಇಲ್ಲ.
ಯಾಕೆ ಹೀಗೊಂದು ವರ್ತುಲದಲ್ಲಿ ಬಹುತೇಕರು ಸುತ್ತುತ್ತಾರೆ? ಯಾಕೆ ಈ ಹೊಸ ವರ್ಷದ ಸಂಕಲ್ಪಗಳು ಅರ್ಧಕ್ಕೇ ನಿಂತು ಬಿಡುತ್ತವೆ? ಮೇಲ್ನೋಟಕ್ಕೆ ಪ್ರಯತ್ನ ಸಾಕಾಗುವುದಿಲ್ಲ, ದೃಢ ಸಂಕಲ್ಪವಿಲ್ಲ ಎಂಬಿತ್ಯಾದಿ ಉತ್ತರಗಳು ಕಾಣಿಸಬಹುದು. ಆದರೆ ಗಟ್ಟಿ ಮನಸ್ಸಿರು ವವರಿಗಷ್ಟೇ ಅಂದುಕೊಂಡದ್ದು ಮಾಡುವ ಹಕ್ಕು ಇದೆಯೇ? ಗಟ್ಟಿ ಮನಸ್ಸೊಂದೇ ಎಲ್ಲ ಸಾಧನೆಗೆ ಕಾರಣವೇ? ವರ್ಷದ ಆದಿಯಲ್ಲಿ ಇದ್ದ ಪ್ರೇರಣೆ ಆಮೇಲೆ ಕಳೆದು ಹೋಗುವುದು ಯಾವಾಗ ಮತ್ತು ಹೇಗೆ? ಪ್ರೇರಣೆ ಬಹಳ ಕಾಲ ಏಕೆ ಬಾಳಿಕೆ
ಬರುವುದಿಲ್ಲ? ಬದುಕೊಂದು ಹೋರಾಟ ಎನ್ನುವ ಮಾತು ಮೇಲಿಂದ ಮೇಲೆ ಕೇಳುತ್ತಲಿರುತ್ತೇವೆ.
ಆದರೆ ಬದುಕು ಯಾವುದರ ಹೋರಾಟ? ಸಾಮಾನ್ಯವಾಗಿ ಹೋರಾಟವೆಂದರೆ ಒಬ್ಬ ಅಳಿಯಬೇಕು, ಇನ್ನೊಬ್ಬ ಉಳಿಯಬೇಕು. ಆದರೆ ಈ ಬದುಕಿನ ಹೋರಾಟ ಎನ್ನುವ ವಿಚಾರದಲ್ಲಿ ಅಳಿವು ಉಳಿವು ಯಾವುದು? ಸೂಕ್ಷ್ಮದಲ್ಲಿ ಗ್ರಹಿಸಿದರೆ ಇಲ್ಲಿ ನಿರಂತರ ಯುದ್ಧ ನಡೆಯುತ್ತಿರುವುದು ಆಂತರಿಕವಾಗಿ. ನಾವೇನು ಆಗಬೇಕು ಎನ್ನುವ ವಿಚಾರ ಮತ್ತು ನಮ್ಮ ಕ್ರಿಯೆ ಒಂದಕ್ಕೊಂದು
ತಾಳ ಮೇಳವಾಗದೇ ನಡೆಯುವ ಹೋರಾಟವದು. ಏನನ್ನೋ ಮಾಡಬೇಕು ಎಂದು ಹೊರಡುವುದು, ಅದಕ್ಕೆ ಅನುವಾಗುವ
ಕ್ರಿಯೆಯಲ್ಲಿ ಅಡ್ಡ ಬರುವ ತೊಡಕುಗಳ ವಿರುದ್ಧದ ಹೋರಾಟ.
ಈ ಹೋರಾಟದಲ್ಲಿ ಕೆಲವೊಮ್ಮೆ ಎಡವಿ ಅಂದುಕೊಂಡದ್ದು ಸಾಧಿಸಲಾಗದೇ ಇರಬಹುದು. ಆಗೆಲ್ಲ ಈ ಹೋರಾಟ ಮುಗಿದು ಬಿಡುವುದಿಲ್ಲ. ಅಂತೆಯೇ ಎಂದುಕೊಂಡದ್ದು ಸಾಧಿಸಿದಾಗಲೂ ಮುಗಿಯುವ ಹೋರಾಟ ಇದಲ್ಲ. ಇದೊಂದು ನಿರಂತರ
ಪ್ರಕ್ರಿಯೆ. ಹಾಗಾಗಿಯೇ ಅಲ್ಲಿ ನಿರಂತರ ಪ್ರೇರಣೆ ಅವಶ್ಯಕ ವಿರುತ್ತದೆ. ಆದರೆ ಪ್ರೇರಣೆ ಎನ್ನುವುದು ಸೀಮಿತ. ಅದು ಎಲ್ಲ ಸಮಯ ದಲ್ಲೂ, ನಿರಂತರವಾಗಿ ನಮಗೆ ಸಾತ್ ನೀಡುವುದಿಲ್ಲ. ಹಾಗಾಗಿಯೇ ಅದೆಷ್ಟೋ ಆರಂಭಿಸಿದ ಕೆಲಸ ಅರ್ಧಕ್ಕೆ ನಿಂತುಬಿಡುವುದು.
ಈ ಕಾರಣಕ್ಕೆ ಹೊಸ ವರ್ಷದ ಸಂಕಲ್ಪಗಳು ಅಪೂರ್ಣವಾಗುವುದು. ಹಾಗಾದರೆ ಹೊಸ ವರ್ಷದ ಸಂಕಲ್ಪವನ್ನು ಮಾಡಲೇ ಬಾರದೇ? ಖಂಡಿತವಾಗಿ ಮಾಡಬೇಕು. ಆದರೆ ಈ ವರ್ಷ ಅಂಥzಂದು ಸಂಕಲ್ಪ ಮಾಡುವ ಮೊದಲು ಒಂದಿಷ್ಟು ತಯಾರಿ ಮಾಡಿಕೊಳ್ಳಿ. ನಿಮ್ಮ ಸಂಕಲ್ಪ ಯಾವುದೇ ಇರಲಿ, ಅದನ್ನು ಮೊದಲು ಪಟ್ಟಿ ಮಾಡಿ. ಐದು ಸಂಕಲ್ಪಕ್ಕಿಂತ ಜಾಸ್ತಿ ಬೇಡ. ಆ ಎಲ್ಲ
ಸಂಕಲ್ಪ ನಿಮಗೇಕೆ ಅವಶ್ಯಕ ಎನ್ನುವ ಕಾರಣವನ್ನು ವರ್ಷ ಶುರುವಾಗುವುದಕ್ಕಿಂತ ಮೊದಲೇ ಬರೆದು ಇಡಿ. ಹಾಗೆ ಬರೆದ ನಂತರ ಮತ್ತೆ ಅದನ್ನು ಓದಲು ಹೋಗುವುದು ಬೇಡ.
ಅದು ನಿಮಗೆ ತಿಳಿದ ವಿಚಾರವೇ ಆದದ್ದರಿಂದ ಇನ್ನೊಮ್ಮೆ ಓದುವ ಅವಶ್ಯಕತೆಯಿರುವುದಿಲ್ಲ. ಹಾಗಾದರೆ ಏಕೆ ಬರೆಯಬೇಕು ಎಂದು ಕೇಳಬಹುದು. ಇಲ್ಲಿ ಬರೆಯುವುದು ಎನ್ನುವುದು ಒಂದು ಪ್ರಕ್ರಿಯೆ. ಆ ಕ್ರಿಯೆಯಲ್ಲಿ ಒಂದಿಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಹೀಗೆ ಬರೆಯು ವಾಗ ಅದೆಷ್ಟು ಮುಖ್ಯ ಎನ್ನುವುದು ಇನ್ನಷ್ಟು ಮನದಟ್ಟಾಗುತ್ತದೆ. ಅವಶ್ಯಕತೆಯ ಸುತ್ತ ಹೆಣೆದ ಸಂಕಲ್ಪಗಳು ಗಟ್ಟಿಯಾಗಿರುತ್ತವೆ ಮತ್ತು ಆ ಅವಶ್ಯಕತೆಯೇ ಪ್ರೇರಣೆ ಯಾಗುತ್ತದೆ. ನಂತರ ಈ ರೆಸೊಲ್ಯೂಷನ್‌ಗಳ ಸುತ್ತ ಉಪ ರೆಸೊಲ್ಯೂಷನ್ ಅನ್ನು ಪಟ್ಟಿ ಮಾಡಿಕೊಳ್ಳಿ.
ಉದಾಹರಣೆಗೆ ನಿಮ್ಮ ಅವಶ್ಯಕತೆ ಉತ್ತಮ ಅರೋಗ್ಯ ಎಂದಿಟ್ಟುಕೊಳ್ಳೋಣ. ಉತ್ತಮ ಆರೋಗ್ಯಕ್ಕೆ ಏನೇನು ಬೇಕು? ವ್ಯಾಯಾಮ. ವ್ಯಾಯಾಮ ಎಂದರೆ ಜಿಮ್‌ಗೆ ಹೋಗಿ ಮೊದಲನೆಯ ದಿನವೇ ರಿಜಿಸ್ಟರ್ ಮಾಡಬೇಕೆಂದೇನಿಲ್ಲ. ಅದರ ಉಪ ಸಂಕಲ್ಪ ಎಂದರೆ ಪ್ರತೀ ದಿನ ವಾಕಿಂಗ್‌ಗೆ ಹೋಗುವುದು, ಉತ್ತಮ ಆಹಾರ ಸೇವನೆ, ನಿದ್ರೆ, ವ್ಯಾಯಾಮ ಇವೆಲ್ಲ. ಈ ಎಲ್ಲ ಉಪ ಸಂಕಲ್ಪಗಳ ಪಟ್ಟಿ ತಯಾರಾದ ನಂತರ ಈಗಿರುವುದು ಮುಖ್ಯವಾದ ಹಂತ.
ಅದುವೇ ಚಿಕ್ಕ ಚಿಕ್ಕ ಪ್ರೇರಣೆಯನ್ನು ಗುರುತಿಸುವುದು. ಪ್ರತೀ ದಿನ ವಾಕಿಂಗ್ ಗೆ ಹೋಗಬೇಕು ಎನ್ನುವುದು ನಿಮ್ಮ ಉಪ ಸಂಕಲ್ಪವಾದಲ್ಲಿ ಬೆಳಗ್ಗಿನ ಅತ್ಯುತ್ತಮ ವಾತಾವರಣವನ್ನು ಅನುಭವಿಸುವುದು ನಿಮಗೆ ಸಿಗುವ ಬಹುಮಾನ, ಅದು ಅಲ್ಲಿನ ಚಿಕ್ಕ ಪ್ರೇರಣೆ. ಎಲ್ಲ ಉಪ ಕ್ರಿಯೆಯಲ್ಲೂ ಸಿಗುವ ಬಹುಮಾನವನ್ನು ಪಟ್ಟಿ ಮಾಡುತ್ತಾ ಹೋಗಿ. ಈ ಬಹುಮಾನದ ಪಟ್ಟಿಯನ್ನು ಆಗೀಗ ತಿರುವಿ ಹಾಕುತ್ತಿರಿ. ಉತ್ತಮ ಆರೋಗ್ಯವೆನ್ನುವುದು ಒಂದು ಕೊನೆಯಲ್ಲಿ ಸಿಗುವ ದೊಡ್ಡ ಬಹುಮಾನ. ಹಾಗಂತ ಅದನ್ನು ಪಡೆಯುವ ಎಲ್ಲ ಉಪ ಪ್ರಕ್ರಿಯೆಯಲ್ಲಿ ಸಿಗುವ ಚಿಕ್ಕ ಚಿಕ್ಕ ಬಹುಮಾನವನ್ನು ನೀವು ಗ್ರಹಿಸದಿದ್ದಲ್ಲಿ ಪ್ರೇರಣೆ ಕ್ರಮೇಣ ಬತ್ತಿ ಹೋಗುತ್ತದೆ.
ಇಲ್ಲಿ ಉತ್ತಮ ಅರೋಗ್ಯ ಎನ್ನುವುದು ಒಂದು ಉದಾಹರಣೆಯಷ್ಟೇ. ನಿಮ್ಮ ಪ್ರತಿಜ್ಞೆ ಏನೇ ಇರಬಹುದು. ಅದನ್ನು ನಿರ್ಧರಿಸು ವವರು ನೀವು ಮತ್ತು ನಿಮ್ಮ ಅವಶ್ಯಕತೆ. ಇನ್ನೊಬ್ಬರು ಮಾಡುತ್ತಿzರೆ. ಹಾಗಾಗಿ ನಾನೂ ಮಾಡಬೇಕು ಎನ್ನುವ ವಿಚಾರ ಕೇವಲ ಕ್ಷಣಿಕ ಪ್ರೇರಣೆ. ಅಂತಹ ಪ್ರೇರಣೆಯಿಂದ ಹಾದಿ ತಪ್ಪುವುದು ಬೇಡ. ಅಲ್ಲದೇ ನಿಮ್ಮ ಗರಿಷ್ಠ ಸಾಧ್ಯತೆಯನ್ನು ಗಣನೆಯಲ್ಲಿಟ್ಟು ಕೊಂಡೇ ಈ ಸಂಕಲ್ಪಗಳ ಪಟ್ಟಿ ತಯಾರಾಗಲಿ. ಬೆಟ್ಟ ಹತ್ತದೇ ಮೌಂಟ್ ಎವರೆಸ್ಟ್ ಹತ್ತಲು ಹೊರಡುವುದು ಬೇಡ.
ನಿಮ್ಮ ಸಂಕಲ್ಪವನ್ನು ಆಪ್ತರಲ್ಲಿ, ಕುಟುಂಬದಲ್ಲಿ ಹಂಚಿಕೊಳ್ಳಿ. ಇಲ್ಲವೇ ನಿಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದು ಕೊಳ್ಳಿ. ಅದಕ್ಕೆ ಒಂದು ಚೂರೂ ಹಿಂಜರಿಯುವುದು ಬೇಡ. ಎಂತಹ ಅಂಜಿಕೆಯಿದ್ದರೂ, ಅರ್ಧದಲ್ಲಿಯೇ ಬಿಟ್ಟರೆ ಅವಮಾನ ವಾಗಬಹುದು ಎಂದು ಈಗ ಅನಿಸಿದರೂ ಈ ವರ್ಷ ಇದನ್ನು ಸಾಧಿಸಬೇಕೆಂದಿದ್ದೇನೆ ಎಂದು ನಿಮ್ಮವರಲ್ಲಿ ಹೇಳಿಕೊಳ್ಳಿ. ಹೇಳಿ ಕೊಳ್ಳುವುದಷ್ಟೇ ಅಲ್ಲ, ಆ ಹಾದಿಯಲ್ಲಿ ನಾನು ದಾರಿ ತಪ್ಪಿದರೆ ಎಚ್ಚರಿಸಿ ಎಂದು ಕೇಳಿಕೊಳ್ಳಿ.
ಈ ಸಂಕಲ್ಪದ ಪ್ರಗತಿಯನ್ನು ಆಗೀಗ ಅವರಲ್ಲಿ ಹಂಚಿಕೊಳ್ಳಿ. ಆ ಬಗ್ಗೆ ಗಾಂಭೀರ್ಯವಿರಲಿ. ಇದರಿಂದ ಎರಡು ಕೆಲಸವಾಗುತ್ತದೆ. ಮೊದಲನೆಯದಾಗಿ, ಇನ್ನೊಬ್ಬರಿಗೆ ಜವಾಬ್ದಾರಿ ವಹಿಸುವುದರಿಂದ ಅವರು ನಿಮ್ಮನ್ನು ಹಾದಿ ತಪ್ಪದಂತೆ ಎಚ್ಚರಿಸುತ್ತಿರುತ್ತಾರೆ. ಎರಡನೆಯದಾಗಿ ಇದು ಅವರಿಗೂ ಏನೋ ಒಂದನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ಈ ಇಡೀ ಕ್ರಿಯೆಯಲ್ಲಿ ಅಲ್ಲಲ್ಲಿ ಆಗಾಗ ಡೆಮೋಟಿವೇಟ್ ಮಾಡುವವರು ಸಿಗುತ್ತಾರೆ.
ಅಂತವರ ಮುಂದೆ ಹಲ್ಲು ಗಿಂಜಬೇಡಿ. ಅಂತವರಲ್ಲಿ ನಿಮ್ಮ ಸಂಕಲ್ಪದ ಬಗ್ಗೆ ನೀವೆಷ್ಟು ಗಂಭೀರವಾಗಿದ್ದೀರಿ ಎಂದು ವಿವರಿಸಿ. ಆಗ ಅವರು ಇನ್ನೊಮ್ಮೆ ಅಂತಹ ಕಾಲೆಳೆಯುವ ದುಸ್ಸಾಹಸದ ಕೆಲಸಕ್ಕೆ ಕೈ ಹಾಕುವುದಿಲ್ಲ. ಇದೆಲ್ಲದರ ಜತೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಹೀಗೆ ನಿಗದಿತ ಸಮಯಕ್ಕೆ ನಿಮ್ಮ ಏಳ್ಗೆಯನ್ನು ಲೆಕ್ಕ ಹಾಕಿಕೊಳ್ಳಿ, ಹೇಳಿಕೊಳ್ಳಿ. ಎಲ್ಲ ಸಲವೂ ಅಂದು ಕೊಂಡದ್ದು ಆಗಿ ಬಿಡುವುದಿಲ್ಲ. ಕೆಲವೊಮ್ಮೆ ಆಚೀಚೆ ಆಗುತ್ತಿರುತ್ತದೆ. ಆಗೆಲ್ಲ ಇನ್ನೊಂದು ಹೊಸ ವರ್ಷಕ್ಕೆ ಕಾಯುವುದು ಬೇಡ. ಅಂದಿನಿಂದಲೇ ಮತ್ತೆ ಕಾರ್ಯರೂಪಕ್ಕೆ ತನ್ನಿ.
ಇದೆಲ್ಲ ಮೊದಮೊದಲು ಸ್ವಲ್ಪ ಕಷ್ಟವಾಗುತ್ತದೆ. ಮನಶಾಸದ ಪ್ರಕಾರ ಒಂದು ಕ್ರಿಯೆ ಅಭ್ಯಾಸವಾಗಬೇಕೆಂದರೆ 21 ದಿನ ಬೇಕಾಗು ತ್ತದೆ. ಇದರರ್ಥ, ಮೊದಲ ಇಪ್ಪತ್ತೊಂದು ದಿನ ಸ್ವಲ್ಪ ಹೆಚ್ಚಿನ ಪ್ರಯತ್ನ ಬೇಕು. ಆಮೇಲೆ ಆ ಕ್ರಿಯೆ ನಡೆಯದಿದ್ದಲ್ಲಿ ಏನೋ ಒಂದು ಕಳೆದುಕೊಂಡ ಭಾವ ಹುಟ್ಟಲು ಶುರುವಾಗುತ್ತದೆ. ಅಲ್ಲಿಯವರೆಗೆ ಗಟ್ಟಿ ಮನಸ್ಸಿದ್ದರಾಯಿತು. ಆಗೀಗ ನಡು ನಡುವೆ ಎಡವುದು ಸಹಜ. ಹೀಗೆ ಎಡವಿದ್ದನ್ನು ಗ್ರಹಿಸುವುದೇ ಮುಖ್ಯವಾದ ಆಗುತ್ತದೆ.
ಗ್ರಹಿಸಿದಲ್ಲಿ, ಎಡವಿದ ಅನುಭವವಾದಲ್ಲಿ ಅದನ್ನು ಕಡೆಗಣಿಸದಿದ್ದಲ್ಲಿ ಸಹಜವಾಗಿ ಮೇಲೇಳುವ, ಪುನರಾರಂಭಿಸುವ ಸ್ವಭಾವ ಕ್ರಮೇಣ ಹುಟ್ಟುತ್ತದೆ. ಕೆಟ್ಟಚಟವೊಂದನ್ನು ತ್ಯಜಿಸುವುದು, ಒಳ್ಳೆಯ ಹವ್ಯಾಸವೊಂದನ್ನು ರೂಢಿಸಿಕೊಳ್ಳುವುದು, ಕಡಿಮೆ ಮೊಬೈಲ್ ಬಳಕೆ, ಸೋಷಿಯಲ್ ಮೀಡಿಯಾ, ಧಾರಾವಾಹಿ ಮೊದಲಾದವುಗಳಲ್ಲಿ ಸೀಮಿತ ಸಮಯ ವ್ಯಯಿಸುವುದು, ಪ್ರತಿ ದಿನ ಸಾಕಷ್ಟು ನಿದ್ರೆ, ವಾಕಿಂಗ್, ಜಿಮ, ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು, ಪುಸ್ತಕ ಓದುವುದು, ಹಣ ಉಳಿತಾಯ, ಕೋರ್ಸ್ ಒಂದನ್ನು ಮುಗಿಸುವುದು, ಹೊಸತೇನೋ ಒಂದನ್ನು ಕಲಿಯುವುದು – ಹೀಗೆ ನಿಮ್ಮ ಸಂಕಲ್ಪ ಏನೇ ಇರಬಹುದು.
ಅದೆಲ್ಲದಕ್ಕೂ ಒಂದಿಷ್ಟು ತಯಾರಿ ಮಾಡಿಕೊಳ್ಳುವುದು ಮತ್ತು ಸಂಕಲ್ಪಕ್ಕೆ ಹೊಣೆಕಾರಿಕೆ ಹೊರುವುದು ಮಾಡಿಕೊಂಡರೆ
ಯಾವುದೇ ಒಂದನ್ನು ಸಾಽಸುವುದು ಕಷ್ಟವಲ್ಲ. ಹೊಸ ವರ್ಷಕ್ಕೆ ಒಂದಿಷ್ಟು – ಅವಶ್ಯಕತೆಯ ಸುತ್ತ ಹುಟ್ಟಿದ ಸಂಕಲ್ಪಗಳಿರಲಿ.
ಅವು ನಿಮ್ಮದೇ ಸಂಕಲ್ಪವಾಗಿರಲಿ. ಅವು ಬೇರೆಯವರಿಗೆ ಎಷ್ಟೇ ಸಿಲ್ಲಿ ಅನ್ನಿಸಲಿ – ಹೇಳಿಕೊಳ್ಳಲು, ಹಂಚಿಕೊಳ್ಳಲು ಯಾವುದೇ
ಹಿಂಜರಿಕೆ ಬೇಡ. ಒಮ್ಮೆ ತಯಾರಿ ನಡೆಸಿ, ಸಂಕಲ್ಪಿಸಿದ ನಂತರ ಸಮಯವಿಲ್ಲ ಎನ್ನುವ ಸಬೂಬು, ಸಮರ್ಥನೆ ನಿಮಗೆ ನೀವು
ಕೊಟ್ಟುಕೊಳ್ಳುವುದು ವರ್ಜ್ಯ.
ಅಂತಿಮ ಫಲಿತಾಂಶಕ್ಕಿಂತ ಇಡೀ ಕ್ರಿಯೆಯನ್ನು ಆನಂದಿಸುವ ತಯಾರಿಯಾಗಲಿ. ಹೊಸವರ್ಷದ ಆರಂಭವೊಂದು ಹೊಸತಿಗೆ ನಿಮಿತ್ತವಾಗಲಿ. ತಿಂಗಳಿಗೆ ಎರಡು ಪುಸ್ತಕಗಳನ್ನುಓದುವುದು, ಕುಟುಂಬದೊಟ್ಟಿಗೆ ಪ್ರತಿ ದಿನ ಎರಡು ತಾಸು ಮೊಬೈಲ್ ಮುಟ್ಟದೇ ಕಳೆಯುವುದು, ವಾರಕ್ಕೊಮ್ಮೆ ಒಬ್ಬ ಹಳೆಯ ಸ್ನೇಹಿತನಿಗೆ ಕರೆ ಮಾಡಿ ಮಾತನಾಡಿಸುವುದು, ತಪ್ಪದೇ ವಾರಕ್ಕೊಂದು ಲೇಖನ ಬರೆಯುವುದು, ಪ್ರತಿ ದಿನ ಕನಿಷ್ಠ ಐದು ಮೈಲಿ ನಡೆಯುವುದು ; ಇವು ನನ್ನ ಹೊಸ ವರ್ಷದ ಸಂಕಲ್ಪಗಳು.
ನಿಮ್ಮ ನ್ಯೂ ಇಯರ್ ರೆಸೂಲ್ಯೂಷನ್ ಗಳೇನು? Wish you a happy new year !